ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಯಾನಾದ ಭಾರತೀಯ ಸಮುದಾಯವನ್ನು ಮಾತನಾಡಿದರು


ಗಯಾನಾದ ಭಾರತೀಯ ಸಮುದಾಯದವರು  ಹಲವು ಕ್ಷೇತ್ರಗಳಲ್ಲಿ ಪ್ರಭಾವ ಬೀರಿದ್ದಾರೆ ಮತ್ತು ಗಯಾನಾದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ: ಪ್ರಧಾನಮಂತ್ರಿ

ನೀವು ಒಬ್ಬ ಭಾರತೀಯನನ್ನು ಭಾರತದಿಂದ ಹೊರಗೆ ಕರೆದೊಯ್ಯಬಹುದು, ಆದರೆ ನೀವು ಒಬ್ಬ ಭಾರತೀಯನಿಂದ ಭಾರತವನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲ: ಪ್ರಧಾನಮಂತ್ರಿ

ವಿಶೇಷವಾಗಿ ಮೂರು ವಿಷಯಗಳು, ಭಾರತ ಮತ್ತು ಗಯಾನಾವನ್ನು ಆಳವಾಗಿ ಸಂಪರ್ಕಿಸುತ್ತವೆ, ಸಂಸ್ಕೃತಿ, ಪಾಕಪದ್ಧತಿ ಮತ್ತು ಕ್ರಿಕೆಟ್:  ಪ್ರಧಾನಮಂತ್ರಿ

ಕಳೆದ ದಶಕದಲ್ಲಿ ಭಾರತದ ಪ್ರಯಾಣವು ಪ್ರಮಾಣ, ವೇಗ ಮತ್ತು ಸುಸ್ಥಿರತೆಯಿಂದ ಕೂಡಿದೆ: ಪ್ರಧಾನಮಂತ್ರಿ

ಭಾರತದ ಬೆಳವಣಿಗೆಯು ಸ್ಪೂರ್ತಿದಾಯಕವಾಗಿದೆ ಜೊತೆಗೆ ಎಲ್ಲರನ್ನೂ ಒಳಗೊಳ್ಳುವಂತಿದೆ: ಪ್ರಧಾನಮಂತ್ರಿ

ನಾನು ಯಾವಾಗಲೂ ನಮ್ಮ ಭಾರತೀಯ ಮೂಲದವರನ್ನು  ರಾಷ್ಟ್ರದೂತರು ಎಂದು ಕರೆಯುತ್ತೇನೆ, ಅವರು ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳ ರಾಯಭಾರಿಗಳು: ಪ್ರಧಾನಮಂತ್ರಿ

Posted On: 22 NOV 2024 5:12AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗಯಾನಾದ ಜಾರ್ಜ್ಟೌನ್ ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು. ಗಯಾನಾದ ಅಧ್ಯಕ್ಷ ಡಾ. ಇರ್ಫಾನ್ ಅಲಿ, ಪ್ರಧಾನಮಂತ್ರಿ ಮಾರ್ಕ್ ಫಿಲಿಪ್ಸ್, ಉಪಾಧ್ಯಕ್ಷ ಭರತ್ ಜಗದೇವ್, ಮಾಜಿ ಅಧ್ಯಕ್ಷ ಡೊನಾಲ್ಡ್ ರಾಮೋತಾರ್ ಇತರರು ಉಪಸ್ಥಿತರಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ ಅವರು, ಗಯಾನಾದ ರಾಷ್ಟ್ರಪತಿಗಳಿಗೆ ಧನ್ಯವಾದ ಅರ್ಪಿಸಿದರು ಮತ್ತು ತಮ್ಮ ಆಗಮನಕ್ಕೆ ದೊರೆತ ವಿಶೇಷ ಆತ್ಮೀಯ ಸ್ವಾಗತಕ್ಕಾಗಿ ಸಂತೋಷ ವ್ಯಕ್ತಪಡಿಸಿದರು. ಅಧ್ಯಕ್ಷರು ಮತ್ತು ಅವರ ಕುಟುಂಬದವರ ಆತ್ಮೀಯತೆ ಮತ್ತು ಆತಿಥ್ಯಕ್ಕೆ ಅವರು ಮತ್ತಷ್ಟು ಧನ್ಯವಾದಗಳನ್ನು ಅರ್ಪಿಸಿದರು. "ಆತಿಥ್ಯದ ಮನೋಭಾವ ನಮ್ಮ ಸಂಸ್ಕೃತಿಯ ಹೃದಯಭಾಗದಲ್ಲಿದೆ" ಎಂದು ಶ್ರೀ ಮೋದಿ ಹೇಳಿದರು. ಭಾರತ ಸರ್ಕಾರದ ಒಂದು ಮರ ಮಾತೆಯ ಹೆಸರಿನಲ್ಲಿ(ಏಕ್ ಪೆಡ್ ಮಾ ಕೆ ನಾಮ್) ಉಪಕ್ರಮದ ಭಾಗವಾಗಿ ಅಧ್ಯಕ್ಷರು ಮತ್ತು ಅವರ ಅಜ್ಜಿಯೊಂದಿಗೆ ತಾವು ಮರವನ್ನು ನೆಟ್ಟಿರುವುದಾಗಿ ಪ್ರಧಾನಮಂತ್ರಿ ಅವರು ಹೇಳಿದರು. ಇದು ತಾವು ಶಾಶ್ವತವಾಗಿ ನೆನಪಿಸಿಕೊಳ್ಳುವ ಭಾವನಾತ್ಮಕ ಕ್ಷಣ ಎಂದು ಅವರು ಹೇಳಿದರು.

ಗಯಾನಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ʻಆರ್ಡರ್ ಆಫ್ ಎಕ್ಸಲೆನ್ಸ್ʼ ಅನ್ನು ಸ್ವೀಕರಿಸಲು ತಮಗೆ ತುಂಬಾ ಗೌರವವಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ಕಾರ್ಯಕ್ಕಾಗಿ ಅವರು ಗಯಾನಾದ ಜನರಿಗೆ ಧನ್ಯವಾದ ಅರ್ಪಿಸಿದರು. 1.4 ಶತಕೋಟಿ ಭಾರತೀಯರು ಮತ್ತು 3 ಲಕ್ಷ ಬಲಿಷ್ಠ ಇಂಡೋ-ಗಯಾನೀಸ್ ಸಮುದಾಯ ಮತ್ತು ಗಯಾನಾದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳ ಗೌರವಾರ್ಥವಾಗಿ ಶ್ರೀ ಮೋದಿ ಈ ಪ್ರಶಸ್ತಿಯನ್ನು ಅರ್ಪಿಸಿದರು.

ಎರಡು ದಶಕಗಳ ಹಿಂದೆ ಕುತೂಹಲಕಾರಿ ಪ್ರಯಾಣಿಕನಾಗಿ ಗಯಾನಾಗೆ ಭೇಟಿ ನೀಡಿದ ಸುಂದರ ನೆನಪುಗಳನ್ನು ನೆನಪಿಸಿಕೊಂಡ ಶ್ರೀ ಮೋದಿ, ಈಗ ಭಾರತದ ಪ್ರಧಾನಮಂತ್ರಿಯಾಗಿ ಅನೇಕ ನದಿಗಳ ಭೂಮಿಗೆ ಮರಳಿದ್ದೇನೆ ಎಂದು ಸಂತೋಷ ವ್ಯಕ್ತಪಡಿಸಿದರು. ಅಂದಿನಿಂದ ಇಲ್ಲಿಯವರೆಗೆ ಹಲವಾರು ಬದಲಾವಣೆಗಳಾಗಿವೆ ಎಂದು ಗಮನಿಸಿದ ಅವರು, ಗಯಾನ ಜನರ ಪ್ರೀತಿ ಮತ್ತು ವಾತ್ಸಲ್ಯ ಹಾಗೆಯೇ ಉಳಿದಿದೆ ಎಂದು ಹೇಳಿದರು. “ನೀವು ಒಬ್ಬ ಭಾರತೀಯನನ್ನು ಭಾರತದಿಂದ ಹೊರಗೆ ಕರೆದೊಯ್ಯಬಹುದು, ಆದರೆ ನೀವು ಒಬ್ಬ ಭಾರತೀಯನಿಂದ ಭಾರತವನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲ" ಎಂದು ಶ್ರೀ ಮೋದಿ ಹೇಳಿದರು ಮತ್ತು  ಇದು ತಮ್ಮ ಪ್ರವಾಸದ ಅನುಭವವು ಅದನ್ನು ಪುನರುಚ್ಚರಿಸಿದೆ ಎಂದು ಹೇಳಿದರು.

ಭಾರತೀಯ ಆಗಮನ ಸ್ಮಾರಕಕ್ಕೆ ನೀಡಿದ ಭೇಟಿಯನ್ನು ನೆನಪಿಸಿಕೊಂಡ ಪ್ರಧಾನ ಪ್ರಧಾನಮಂತ್ರಿ ಅವರು, ಸುಮಾರು ಎರಡು ಶತಮಾನಗಳ ಹಿಂದೆ ಇಂಡೋ-ಗಯಾನ ಜನರ ಪೂರ್ವಜರ ದೀರ್ಘ ಮತ್ತು ಪ್ರಯಾಸಕರ ಪ್ರಯಾಣವನ್ನು ಇದು ಜೀವಂತಗೊಳಿಸಿದೆ ಎಂದು ಹೇಳಿದರು. ಜನರು ಭಾರತದ ವಿವಿಧ ಭಾಗಗಳಿಂದ ಬಂದಿದ್ದಾರೆ ಎಂದು ಗಮನಿಸಿದ ಶ್ರೀ ಮೋದಿ, ಅವರು ತಮ್ಮೊಂದಿಗೆ ಸಂಸ್ಕೃತಿಗಳು, ಭಾಷೆಗಳು ಮತ್ತು ಸಂಪ್ರದಾಯಗಳ ವೈವಿಧ್ಯತೆಯನ್ನು ತಂದರು ಮತ್ತು ಕಾಲಾನಂತರದಲ್ಲಿ ಗಯಾನವನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡರು ಎಂದು ಹೇಳಿದರು. ಈ ಭಾಷೆಗಳು, ಕಥೆಗಳು ಮತ್ತು ಸಂಪ್ರದಾಯಗಳು ಇಂದು ಗಯಾನ ಸಂಸ್ಕೃತಿಯ ಶ್ರೀಮಂತ ಭಾಗವಾಗಿದೆ ಎಂದು ಅವರು ಹೇಳಿದರು. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದ್ದಕ್ಕಾಗಿ ಇಂಡೋ-ಗಯಾನೀಸ್ ಸಮುದಾಯದ ಮನೋಭಾವವನ್ನು ಅವರು ಶ್ಲಾಘಿಸಿದರು. ಗಯಾನವನ್ನು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದನ್ನಾಗಿ ಮಾಡಲು ಅವರು ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದರು. ಶ್ರೀ ಚೆಡ್ಡಿ ಜಗನ್ ಅವರ ಪ್ರಯತ್ನಗಳನ್ನು ಶ್ಲಾಘಿಸಿದ ಶ್ರೀ ಮೋದಿ, ಶ್ರೀ ಜಗನ್ ಅವರು ಕಾರ್ಮಿಕ ಕುಟುಂಬದ ಸರಳ ಹಿನ್ನೆಲೆಯಿಂದ ಆರಂಭದಿಂದಲೇ ಜಾಗತಿಕ ಮಟ್ಟದ ನಾಯಕರಾಗಿ ಬೆಳೆದರು ಎಂದು ಹೇಳಿದರು. ಅಧ್ಯಕ್ಷ ಇರ್ಫಾನ್ ಅಲಿ, ಉಪಾಧ್ಯಕ್ಷ ಭರತ್ ಜಗದೇವ್, ಮಾಜಿ ಅಧ್ಯಕ್ಷ ಡೊನಾಲ್ಡ್ ರಾಮೋತಾರ್ ಎಲ್ಲರೂ ಇಂಡೋ-ಗಯಾನೀಸ್ ಸಮುದಾಯದ ರಾಯಭಾರಿಗಳಾಗಿದ್ದರು ಎಂದು ಅವರು ಹೇಳಿದರು. ಆರಂಭಿಕ ಇಂಡೋ-ಗಯಾನೀಸ್ ಬುದ್ಧಿಜೀವಿಗಳಲ್ಲಿ ಒಬ್ಬರಾದ ಜೋಸೆಫ್ ರೋಮನ್, ಆರಂಭಿಕ ಇಂಡೋ-ಗಯಾನೀಸ್ ಕವಿಗಳಲ್ಲಿ ಒಬ್ಬರಾದ ರಾಮ್ ಜರಿದಾರ್ ಲಲ್ಲಾ, ಹೆಸರಾಂತ ಮಹಿಳಾ ಕವಿ ಶಾನಾ ಯಾರ್ದನ್ ಮತ್ತು ಇತರರಂತಹ ಅನೇಕ ಇಂಡೋ-ಗಯಾನೀಸ್ ಜನರು ಕಲೆ, ಶೈಕ್ಷಣಿಕ, ಸಂಗೀತ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಆಳವಾದ ಪ್ರಭಾವ ಬೀರಿದ್ದಾರೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು.

ಭಾರತ-ಗಯಾನ ಸ್ನೇಹಕ್ಕೆ ನಮ್ಮಲ್ಲಿರುವ ಸಾಮಾನ ಹೋಲಿಕೆಗಳು ಬಲವಾದ ಅಡಿಪಾಯವನ್ನು ಒದಗಿಸಿವೆ ಎಂದು ಎತ್ತಿ ತೋರಿಸಿದ ಶ್ರೀ ಮೋದಿ, ಸಂಸ್ಕೃತಿ, ಪಾಕಪದ್ಧತಿ ಮತ್ತು ಕ್ರಿಕೆಟ್ ಭಾರತವನ್ನು ಗಯಾನದೊಂದಿಗೆ ಸಂಪರ್ಕಿಸುವ ಮೂರು ಪ್ರಮುಖ ವಿಷಯಗಳಾಗಿವೆ ಎಂದು ಹೇಳಿದರು. ಶ್ರೀ ರಾಮ ಲಲ್ಲಾ 500 ವರ್ಷಗಳ ನಂತರ ಅಯೋಧ್ಯೆಗೆ ಮರಳಿದ್ದರಿಂದ ಈ ವರ್ಷದ ದೀಪಾವಳಿ ವಿಶೇಷವಾಗಿದೆ ಎಂದು ಅವರು ಹೇಳಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಗಯಾನಾದಿಂದ ಪವಿತ್ರ ಜಲ ಮತ್ತು ಶಿಲೆಗಳನ್ನು ಕಳುಹಿಸಲಾಗಿತ್ತು ಎನ್ನುವುದನ್ನು ಭಾರತದ ಜನರು ಸ್ಮರಿಸುತ್ತಾರೆ ಎಂದು ಅವರು ಹೇಳಿದರು. ಸಾಗರಗಳಷ್ಟು ಅಂತರವಿದ್ದರೂ, ಭಾರತ ಮಾತೆಯೊಂದಿಗಿನ ಅವರ ಸಾಂಸ್ಕೃತಿಕ ಸಂಪರ್ಕವು ಪ್ರಬಲವಾಗಿದೆ ಎಂದು ಅವರು ಶ್ಲಾಘಿಸಿದರು ಮತ್ತು ಹಿಂದಿನ ದಿನ ಆರ್ಯ ಸಮಾಜ ಸ್ಮಾರಕ ಮತ್ತು ಸರಸ್ವತಿ ವಿದ್ಯಾ ನಿಕೇತನ ಶಾಲೆಗೆ ಭೇಟಿ ನೀಡಿದಾಗ ಅವರು ಇದನ್ನು ಅನುಭವಿಸಿದರು ಎಂದು ಹೇಳಿರು. ಭಾರತ ಮತ್ತು ಗಯಾನಾ ಎರಡೂ ನಮ್ಮ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುತ್ತವೆ ಮತ್ತು ವೈವಿಧ್ಯತೆಯನ್ನು ಕೇವಲ ಅವಕಾಶಕ್ಕಾಗಿ ಅಲ್ಲ ಆಚರಿಸಬೇಕಾದ ವಿಷಯವಾಗಿ ನೋಡುತ್ತವೆ ಎಂದು ಶ್ರೀ ಮೋದಿ ಹೇಳಿದರು. ಸಾಂಸ್ಕೃತಿಕ ವೈವಿಧ್ಯತೆಯು ಹೇಗೆ ತಮ್ಮ ಶಕ್ತಿ ಎಂದು ಎರಡೂ ದೇಶಗಳು ತೋರಿಸುತ್ತಿವೆ ಎಂದು ಅವರು ಹೇಳಿದರು.

ಪಾಕಪದ್ಧತಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂಡೋ-ಗಯಾನೀಸ್ ಸಮುದಾಯವು ಭಾರತೀಯ ಮತ್ತು ಗಯಾನೀಸ್ ಅಂಶಗಳನ್ನು ಸಂಯೋಜಿಸುವ ವಿಶಿಷ್ಟ ಆಹಾರ ಸಂಪ್ರದಾಯವನ್ನು ಹೊಂದಿದೆ ಎಂದು ಹೇಳಿದರು.

ನಮ್ಮ ದೇಶಗಳನ್ನು ಬಲವಾಗಿ ಬಂಧಿಸಿರುವ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಚರ್ಚಿಸಿದ ಶ್ರೀ ಮೋದಿ ಅವರು, ಕ್ರಿಕೆಟ್ ಕೇವಲ ಒಂದು ಆಟವಲ್ಲ, ಬದಲಾಗಿ ನಮ್ಮ ರಾಷ್ಟ್ರೀಯ ಗುರುತಿನಲ್ಲಿ ಆಳವಾಗಿ ಹುದುಗಿರುವ ಜೀವನ ವಿಧಾನವಾಗಿದೆ ಎಂದು ಹೇಳಿದರು. ಗಯಾನಾದ ಪ್ರಾವಿಡೆನ್ಸ್ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ನಮ್ಮ ಸ್ನೇಹದ ಸಂಕೇತವಾಗಿದೆ ಎಂದು ಅವರು ಹೇಳಿದರು. ಕನ್ಹೈ, ಕಾಲಿಚರಣ್ ಮತ್ತು ಚಂದ್ರಪಾಲ್ ಎಲ್ಲರೂ ಭಾರತದಲ್ಲಿ ಪ್ರಸಿದ್ಧ ಹೆಸರುಗಳಾಗಿದ್ದವು ಎಂದು ಹೇಳಿದ ಶ್ರೀ ಮೋದಿ, ಕ್ಲೈವ್ ಲಾಯ್ಡ್ ಮತ್ತು ಅವರ ತಂಡವು ತಲೆಮಾರುಗಳಿಂದ ನೆಚ್ಚಿನ ಆಟಗಾರರಾಗಿದ್ದಾರೆ ಎಂದು ಹೇಳಿದರು. ಗಯಾನಾದ ಯುವ ಆಟಗಾರರು ಭಾರತದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಈ ವರ್ಷದ ಆರಂಭದಲ್ಲಿ ಅಲ್ಲಿ ನಡೆದ ಟಿ20 ವಿಶ್ವಕಪ್ ಅನ್ನು ಅನೇಕ ಭಾರತೀಯರು ಆನಂದಿಸಿದ್ದಾರೆ ಎಂದು ಅವರು ಹೇಳಿದರು.

ಗಯಾನಾ ಸಂಸತ್ತನ್ನು ಉದ್ದೇಶಿಸಿ ಮಾತನಾಡುವ ಗೌರವ ತಮಗೆ ಸಿಕ್ಕಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಪ್ರಜಾಪ್ರಭುತ್ವದ ತಾಯಿಯ ಕಡೆಯಿಂದ ಬಂದ ಅವರು, ಕೆರಿಬಿಯನ್ ಪ್ರದೇಶದ ಅತ್ಯಂತ ಚೈತನ್ಯಶೀಲ ಪ್ರಜಾಪ್ರಭುತ್ವಗಳಲ್ಲಿ ಆಧ್ಯಾತ್ಮಿಕ ಸಂಪರ್ಕವಿದೆ ಎಂದು ಹೇಳಿದರು. ವಸಾಹತುಶಾಹಿ ಆಳ್ವಿಕೆಯ ವಿರುದ್ಧದ ಭಾರತ ಮತ್ತು ಗಯಾನಾದ ಸಾಮಾನ್ಯ ಹೋರಾಟ, ಪ್ರಜಾಪ್ರಭುತ್ವ ಮೌಲ್ಯಗಳ ಮೇಲಿನ ಪ್ರೀತಿ ಮತ್ತು ವೈವಿಧ್ಯತೆಯ ಮೇಲಿನ ಗೌರವದಂತಹ   ನಮ್ಮನ್ನು ಒಟ್ಟಿಗೆ ಬಂಧಿಸುವ  ಇತಿಹಾಸವನ್ನು ಹೊಂದಿವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. "ನಾವು ರಚಿಸಲು ಬಯಸುವ ಒಂದೇ ರೀತಿಯ  ಭವಿಷ್ಯ ನಮಗಿದೆ" ಎಂದು ಶ್ರೀ ಮೋದಿ ಹೇಳಿದರು, ಬೆಳವಣಿಗೆ ಮತ್ತು ಅಭಿವೃದ್ಧಿಯ ಆಕಾಂಕ್ಷೆಗಳು, ಆರ್ಥಿಕತೆ ಮತ್ತು ಪರಿಸರಕ್ಕೆ ಬದ್ಧತೆ ಮತ್ತು ನ್ಯಾಯಯುತ ಮತ್ತು ಎಲ್ಲರನ್ನೊಳಗೊಂಡ  ವಿಶ್ವ ಕ್ರಮದಲ್ಲಿ ನಂಬಿಕೆಯನ್ನು ಒತ್ತಿ ಹೇಳಿದರು.

ಗಯಾನದ ಜನರನ್ನು ಭಾರತದ ಹಿತೈಷಿಗಳು ಎಂದು ಬಣ್ಣಿಸಿದ ಶ್ರೀ ಮೋದಿ, ಕಳೆದ ದಶಕದಲ್ಲಿ ಭಾರತದ ಪ್ರಯಾಣವು ವಿಶಾಲತೆ, ಚೈತನ್ಯ ಮತ್ತು ಸ್ಥಿರತೆಯಿಂದ ಕೂಡಿದೆ ಎಂದು ಹೇಳಿದರು. ಕೇವಲ 10 ವರ್ಷಗಳಲ್ಲಿ ಭಾರತ ಹತ್ತನೇ ಅತಿದೊಡ್ಡ ಆರ್ಥಿಕತೆಯಿಂದ ಐದನೇ ಅತಿದೊಡ್ಡ ಆರ್ಥಿಕತೆಗೆ ಬೆಳೆದಿದೆ ಮತ್ತು ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅವರು ಹೇಳಿದರು. ಯುವಕರನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಅವರು, ಅವರು ನಮ್ಮನ್ನು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ  ಪರಿಸರ ವ್ಯವಸ್ಥೆಯನ್ನಾಗಿ ಮಾಡಿದ್ದಾರೆ ಎಂದು ಹೇಳಿದರು. ಭಾರತವು ಇ-ಕಾಮರ್ಸ್, ಎಐ, ಫಿನ್ ಟೆಕ್, ಕೃಷಿ, ತಂತ್ರಜ್ಞಾನ ಮತ್ತು ಇನ್ನೂ ಹೆಚ್ಚಿನವುಗಳಿಗೆ ಜಾಗತಿಕ ಕೇಂದ್ರವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಮಂಗಳ ಮತ್ತು ಚಂದ್ರನತ್ತ ಭಾರತದ ಬಾಹ್ಯಾಕಾಶ ಕಾರ್ಯಾಚರಣೆಗಳ ಬಗ್ಗೆ   ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಹೆದ್ದಾರಿಗಳಿಂದ ಹಿಡಿದು ಐ-ವೇಗಳವರೆಗೆ, ವಾಯುಮಾರ್ಗಗಳಿಂದ ಹಿಡಿದು ರೈಲ್ವೆಗಳವರೆಗೆ, ನಾವು ಅತ್ಯಾಧುನಿಕ ಮೂಲಸೌಕರ್ಯವನ್ನು ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು.  ಭಾರತವು ಬಲಿಷ್ಠ ಸೇವಾ ವಲಯವನ್ನು ಹೊಂದಿದೆ ಎಂದು ಹೇಳಿದ ಶ್ರೀ ಮೋದಿ, ಭಾರತವು ಈಗ ಉತ್ಪಾದನಾ ವಲಯದಲ್ಲೂ ಬಲಗೊಳ್ಳುತ್ತಿದೆ ಮತ್ತು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು  ಹೇಳಿದರು.

"ಭಾರತದ ಬೆಳವಣಿಗೆಯು ಸ್ಪೂರ್ತಿದಾಯಕ ಮಾತ್ರವಲ್ಲದೆ ಎಲ್ಲರನ್ನೂ ಒಳಗೊಳ್ಳುವಂತಿದೆ" ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು ಮತ್ತು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಬಡವರಿಗೆ ಸಬಲೀಕರಣ ನೀಡುತ್ತಿದೆ ಮತ್ತು ಸರ್ಕಾರವು 500 ದಶಲಕ್ಷಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಿತು ಎಂದು ಹೇಳಿದರು. ಜನರಿಗೆ ಲಕ್ಷಾಂತರ ಬ್ಯಾಂಕ್ ಖಾತೆಗಳನ್ನು ಒದಗಿಸಲಾಯಿತು ಮತ್ತು ಈ ಬ್ಯಾಂಕ್ ಖಾತೆಗಳನ್ನು ಡಿಜಿಟಲ್ ಗುರುತು ಮತ್ತು ಮೊಬೈಲ್ ಗಳೊಂದಿಗೆ ಜೋಡಿಸಲಾಯಿತು. ಇದು ಜನರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ ಸಹಾಯ ಪಡೆಯಲು ಸಹಾಯ ಮಾಡಿತು ಎಂದು ಅವರು ಹೇಳಿದರು. ಆಯುಷ್ಮಾನ್ ಭಾರತ್ ವಿಶ್ವದ ಅತಿದೊಡ್ಡ ಉಚಿತ ಆರೋಗ್ಯ ವಿಮಾ ಯೋಜನೆಯಾಗಿದ್ದು, 500 ದಶಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಪ್ರಯೋಜನವನ್ನು ನೀಡಿದೆ ಎಂದು ಶ್ರೀ ಮೋದಿ ಹೇಳಿದರು. ಅಗತ್ಯವಿರುವವರಿಗೆ ಸರ್ಕಾರ 30 ದಶಲಕ್ಷಕ್ಕಿಂತಲೂ  ಹೆಚ್ಚು ಮನೆಗಳನ್ನು ನಿರ್ಮಿಸಿದೆ ಎಂದು ಅವರು ಹೇಳಿದರು. "ಕೇವಲ ಒಂದು ದಶಕದಲ್ಲಿ, ನಾವು 250 ದಶಲಕ್ಷ ಜನರನ್ನು ಬಡತನದಿಂದ ಹೊರತಂದಿದ್ದೇವೆ" ಎಂದು ಶ್ರೀ ಮೋದಿಯನ್ನು ಹೇಳಿದರು. ಬಡವರಲ್ಲಿಯೂ ಸಹ, ಈ ಉಪಕ್ರಮಗಳು ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿವೆ ಮತ್ತು ಲಕ್ಷಾಂತರ ಮಹಿಳೆಯರು ತಳಮಟ್ಟದ ಉದ್ಯಮಿಗಳಾಗುತ್ತಿದ್ದಾರೆ, ಉದ್ಯೋಗಗಳು ಮತ್ತು ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಈ ಅಗಾಧ ಬೆಳವಣಿಗೆಯ ನಡುವೆಯೇ, ಭಾರತವು ಸುಸ್ಥಿರತೆಯತ್ತಲೂ ಗಮನ ಹರಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಕಳೆದ ದಶಕದಲ್ಲಿ ಭಾರತವು ತನ್ನ ಸೌರಶಕ್ತಿ ಸಾಮರ್ಥ್ಯವನ್ನು 30 ಪಟ್ಟು ಹೆಚ್ಚಿಸಿದೆ ಮತ್ತು ಪೆಟ್ರೋಲ್ನಲ್ಲಿ ಶೇಕಡಾ 20 ರಷ್ಟು ಎಥೆನಾಲ್ ಅನ್ನು ಮಿಶ್ರಣ ಮಾಡುವ ಮೂಲಕ ಹಸಿರು ಆಂದೋಲನದತ್ತ ಸಾಗಿದೆ ಎಂದು ಅವರು ಹೇಳಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ, ಅಂತರರಾಷ್ಟ್ರೀಯ ಸೌರ ಒಕ್ಕೂಟ, ಜಾಗತಿಕ ಜೈವಿಕ ಇಂಧನ ಒಕ್ಕೂಟ ಮತ್ತು ವಿಪತ್ತು ನಿರ್ವಹಣೆ  ಮೂಲಸೌಕರ್ಯಕ್ಕಾಗಿ ಒಕ್ಕೂಟಗಳಂತಹ ಹವಾಮಾನ ಬದಲಾವಣೆಯನ್ನು ಎದುರಿಸಲು ಹಲವಾರು ಉಪಕ್ರಮಗಳಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು. ಭಾರತವು ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಒಕ್ಕೂಟವನ್ನು ಬೆಂಬಲಿಸಿದೆ ಮತ್ತು ಭವ್ಯ ಜಾಗ್ವಾರ್ ಗಳನೆಲೆಯಾದ ಗಯಾನಾ ಕೂಡ ಇದರಿಂದ ಪ್ರಯೋಜನ ಪಡೆಯುತ್ತದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು.

ಕಳೆದ ವರ್ಷ ʻಪ್ರವಾಸಿ ಭಾರತೀಯ ದಿವಸʼದ  ಮುಖ್ಯ ಅತಿಥಿಯಾಗಿ ಭಾರತ ಅಧ್ಯಕ್ಷ ಇರ್ಫಾನ್ ಅಲಿ ಅವರನ್ನು ಆತಿಥ್ಯ ವಹಿಸಿದ್ದನ್ನು ನೆನಪಿಸಿಕೊಂಡ ಶ್ರೀ ಮೋದಿ ಅವರು, ಭಾರತವು ಪ್ರಧಾನಮಂತ್ರಿ ಮಾರ್ಕ್ ಫಿಲಿಪ್ಸ್ ಮತ್ತು ಉಪಾಧ್ಯಕ್ಷ ಭರತ್ ಜಗದಿಯೊ ಅವರನ್ನು ಭಾರತದಲ್ಲಿ ಸ್ವಾಗತಿಸಿತು ಎಂದು ಹೇಳಿದರು. ಅನೇಕ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಅವರು ಒಟ್ಟಾಗಿ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು. ಇಂದು, ಎರಡೂ ದೇಶಗಳು ನಮ್ಮ ಸಹಯೋಗದ ವ್ಯಾಪ್ತಿಯನ್ನು ವಿಸ್ತರಿಸಲು ಒಪ್ಪಿಕೊಂಡಿವೆ - ಇಂಧನದಿಂದ ಉದ್ಯಮದವರೆಗೆ, ಆಯುರ್ವೇದದಿಂದ ಕೃಷಿಗೆ, ಮೂಲಸೌಕರ್ಯದಿಂದ ನಾವೀನ್ಯತೆಗೆ, ಆರೋಗ್ಯ ರಕ್ಷಣೆಯಿಂದ ಮಾನವ ಸಂಪನ್ಮೂಲಗಳಿಗೆ ಮತ್ತು ದತ್ತಾಂಶದಿಂದ ಅಭಿವೃದ್ಧಿಗೆ ಮತ್ತು ಪಾಲುದಾರಿಕೆಯು ವಿಶಾಲ ಪ್ರದೇಶಕ್ಕೆ ಗಮನಾರ್ಹ ಮೌಲ್ಯವನ್ನು ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು. ನಿನ್ನೆ ನಡೆದ ಎರಡನೇ ಭಾರತ-ಕಾರಿಕೊಮ್  ಶೃಂಗಸಭೆಯು ಅದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ವಿಶ್ವಸಂಸ್ಥೆಯ ಸದಸ್ಯರಾಗಿ, ಎರಡೂ ದೇಶಗಳು ಸುಧಾರಿತ ಬಹುಪಕ್ಷೀಯತೆಯನ್ನು ನಂಬುತ್ತವೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಾಗಿ, ಜಾಗತಿಕ ದಕ್ಷಿಣದ ಶಕ್ತಿಯನ್ನು ಅವರು ಅರಿತು ಕೊಂಡಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಅವರು ಕಾರ್ಯತಂತ್ರದ ಸ್ವಾಯತ್ತತೆ ಮತ್ತು ಸಮಗ್ರ ಅಭಿವೃದ್ಧಿಗಾಗಿ ಬೆಂಬಲವನ್ನು ಕೋರಿದ್ದಾರೆ ಎಂದು ಅವರು ಹೇಳಿದರು.  ಎರಡೂ ದೇಶಗಳು ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ನ್ಯಾಯಕ್ಕೆ ಆದ್ಯತೆ ನೀಡುತ್ತವೆ ಮತ್ತು ಜಾಗತಿಕ ಬಿಕ್ಕಟ್ಟುಗಳನ್ನು ಪರಿಹರಿಸಲು ಸಂವಾದ ಮತ್ತು ರಾಜತಾಂತ್ರಿಕತೆಗೆ ಕರೆ ನೀಡುತ್ತಲೇ ಇರುತ್ತವೆ ಎಂದು ಶ್ರೀ ಮೋದಿ ಹೇಳಿದರು.

ಭಾರತೀಯ ಸಮುದಾಯದವರನ್ನು  ರಾಷ್ಟ್ರದೂತರು ಎಂದು ಕರೆದ  ಶ್ರೀ ಮೋದಿ, ಅವರು ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳ ರಾಯಭಾರಿಗಳು ಎಂದು ಹೇಳಿದರು.   ಇಂಡೋ-ಗಯಾನೀಸ್ ಸಮುದಾಯವು ಗಯಾನವನ್ನು ತಮ್ಮ ತಾಯಿನಾಡು ಮತ್ತು ಭಾರತ ಮಾತೆಯನ್ನು ತಮ್ಮ ಪೂರ್ವಜರ ಭೂಮಿಯಾಗಿ ಹೊಂದಿದ್ದರಿಂದ ದುಪ್ಪಟ್ಟಾದ ಆಶೀರ್ವಾದವನ್ನು ಪಡೆದಿದೆ ಎಂದು ಹೇಳಿದರು. ಭಾರತವು ಇಂದು ಅವಕಾಶಗಳ ಭೂಮಿಯಾಗಿರುವುದರಿಂದ ಎರಡೂ ದೇಶಗಳನ್ನು ಸಂಪರ್ಕಿಸುವಲ್ಲಿ ಪ್ರತಿಯೊಬ್ಬರೂ ಪ್ರಮುಖ ಪಾತ್ರ ವಹಿಸಬಹುದು ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು.

ಪ್ರಾರಂಭಿಸಲಾದ ಭಾರತ್ ಕೋ ಜಾನಿಯೇ (ಭಾರತವನ್ನು ತಿಳಿದಿಕೊಳ್ಳಿರಿ) ರಸಪ್ರಶ್ನೆಯಲ್ಲಿ ಭಾಗವಹಿಸಲು  ಭಾರತೀಯ ಮೂಲದವರನ್ನು    ಕೋರಿದ ಪ್ರಧಾನಮಂತ್ರಿ ಅವರು, ಭಾರತ, ಅದರ ಮೌಲ್ಯಗಳು, ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಈ ರಸಪ್ರಶ್ನೆ ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.    ತಮ್ಮ ಸ್ನೇಹಿತರನ್ನು ಸಹ ಭಾಗವಹಿಸಲು ಆಹ್ವಾನಿಸುವಂತೆ ಅವರು ಒತ್ತಾಯಿಸಿದರು.

ಮುಂದಿನ ವರ್ಷ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಪ್ರಯಾಗರಾಜ್ ನಲ್ಲಿ ನಡೆಯಲಿರುವ ಮಹಾಕುಂಭದಲ್ಲಿ ಕುಟುಂಬಗಳು ಮತ್ತು ಸ್ನೇಹಿತರೊಂದಿಗೆ ಭಾಗವಹಿಸಲು ಶ್ರೀ ಮೋದಿ ಅವರು ಭಾರತೀಯ ಮೂಲದವರನ್ನು ಆಹ್ವಾನಿಸಿದರು. ಅವರು ಅಯೋಧ್ಯೆಯ ರಾಮ ದೇವಾಲಯಕ್ಕೆ ಭೇಟಿ ನೀಡಬಹುದು ಎಂದು ಅವರು ಹೇಳಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಜನವರಿಯಲ್ಲಿ ಭುವನೇಶ್ವರದಲ್ಲಿ ನಡೆಯಲಿರುವ ಪ್ರವಾಸಿ ಭಾರತೀಯ ದಿವಸದಲ್ಲಿ ಭಾಗವಹಿಸಲು ಮತ್ತು ಪುರಿಯಲ್ಲಿ ಮಹಾಪ್ರಭು ಜಗನ್ನಾಥನ ಆಶೀರ್ವಾದದಲ್ಲಿ ಪಾಲ್ಗೊಳ್ಳಲು ಭಾರತೀಯ ಸಮುದಾಯದವರನ್ನು ಆಹ್ವಾನಿಸಿದರು.

 

****


(Release ID: 2178759) Visitor Counter : 8