ಪ್ರಧಾನ ಮಂತ್ರಿಯವರ ಕಛೇರಿ
ಯುನೈಟೆಡ್ ಕಿಂಗ್ ಡಮ್ ಪ್ರಧಾನಮಂತ್ರಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
प्रविष्टि तिथि:
09 OCT 2025 12:55PM by PIB Bengaluru
ಮಾನ್ಯ ಪ್ರಧಾನಮಂತ್ರಿ ಸ್ಟಾರ್ಮರ್ ಅವರೇ,
ಎರಡೂ ದೇಶಗಳ ಪ್ರತಿನಿಧಿಗಳೇ,
ಮಾಧ್ಯಮ ಮಿತ್ರರೇ,
ನಮಸ್ಕಾರ!
ಭಾರತಕ್ಕೆ ಮೊದಲ ಭೇಟಿ ನೀಡಿರುವ ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್ ಅವರನ್ನು ಇಂದು ಮುಂಬೈನಲ್ಲಿ ಸ್ವಾಗತಿಸಲು ನನಗೆ ಸಂತೋಷವಾಗಿದೆ..
ಸ್ನೇಹಿತರೇ,
ಪ್ರಧಾನಮಂತ್ರಿ ಸ್ಟಾರ್ಮರ್ ಅವರ ನಾಯಕತ್ವದಲ್ಲಿ, ಭಾರತ-ಯುಕೆ ಸಂಬಂಧಗಳು ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ. ಈ ವರ್ಷದ ಜುಲೈನಲ್ಲಿ ನಾನು ಯುಕೆಗೆ ಭೇಟಿ ನೀಡಿದ್ದಾಗ, ನಾವು ಐತಿಹಾಸಿಕ 'ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ'ವನ್ನು (CETA) ಅಂತಿಮಗೊಳಿಸಿದ್ದೇವೆ. ಈ ಒಪ್ಪಂದವು ಎರಡೂ ದೇಶಗಳ ನಡುವಿನ ಆಮದು ವೆಚ್ಚವನ್ನು ಕಡಿಮೆ ಮಾಡಲಿದೆ, ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ, ವ್ಯಾಪಾರವನ್ನು ಹೆಚ್ಚಿಸಲಿದೆ, ಮತ್ತು ನಮ್ಮ ಉದ್ಯಮಗಳು ಹಾಗೂ ಗ್ರಾಹಕರಿಬ್ಬರಿಗೂ ಪ್ರಯೋಜನವನ್ನು ನೀಡಲಿದೆ.
ಒಪ್ಪಂದದ ಕೆಲವೇ ತಿಂಗಳುಗಳ ನಂತರ, ಇದುವರೆಗಿನ ಅತಿದೊಡ್ಡ ವ್ಯಾಪಾರ ನಿಯೋಗದೊಂದಿಗೆ ನಿಮ್ಮ ಭಾರತ ಭೇಟಿಯು ಭಾರತ-ಯುಕೆ ಪಾಲುದಾರಿಕೆಯನ್ನು ಮುನ್ನಡೆಸುವ ಹೊಸ ಶಕ್ತಿ ಮತ್ತು ವಿಶಾಲ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.
ಸ್ನೇಹಿತರೇ,
ನಿನ್ನೆಯ ದಿನವು ಭಾರತ ಮತ್ತು ಯುಕೆ ನಡುವಿನ ಉದ್ಯಮ ನಾಯಕರ ಅತಿದೊಡ್ಡ ಶೃಂಗಸಭೆಗೆ ಸಾಕ್ಷಿಯಾಯಿತು. ಇಂದು, ನಾವು 'ಭಾರತ-ಯುಕೆ ಸಿಇಒ ಫೋರಂ' ಮತ್ತು 'ಗ್ಲೋಬಲ್ ಫಿನ್ಟೆಕ್ ಫೆಸ್ಟಿವಲ್' ಅನ್ನೂ ಸಹ ಉದ್ದೇಶಿಸಿ ಮಾತನಾಡಲಿದ್ದೇವೆ. ಇವುಗಳು ಮೌಲ್ಯಯುತ ಒಳನೋಟಗಳನ್ನು ನೀಡುವುದಲ್ಲದೆ, ಭಾರತ-ಯುಕೆ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಹೊಸ ಮಾರ್ಗಗಳನ್ನು ತೆರೆಯಲಿವೆ.
ಸ್ನೇಹಿತರೇ,
ಭಾರತ ಮತ್ತು ಯುಕೆ ನೈಸರ್ಗಿಕ ಪಾಲುದಾರ ರಾಷ್ಟ್ರಗಳು. ನಮ್ಮ ಸಂಬಂಧವು ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಕಾನೂನಿನ ಆಡಳಿತದಂತಹ ಹಂಚಿಕೆಯ ಮೌಲ್ಯಗಳ ಮೇಲೆ ನಿಂತಿದೆ. ಜಾಗತಿಕ ಅನಿಶ್ಚಿತತೆಯ ಇಂದಿನ ಕಾಲದಲ್ಲಿ, ನಮ್ಮ ಈ ಬೆಳೆಯುತ್ತಿರುವ ಪಾಲುದಾರಿಕೆಯು ಜಾಗತಿಕ ಸ್ಥಿರತೆ ಮತ್ತು ಆರ್ಥಿಕ ಪ್ರಗತಿಯ ಒಂದು ಪ್ರಮುಖ ಆಧಾರಸ್ತಂಭವಾಗಿ ನಿಂತಿದೆ.
ಇಂದಿನ ಸಭೆಯಲ್ಲಿ ನಾವು ಇಂಡೋ-ಪೆಸಿಫಿಕ್, ಪಶ್ಚಿಮ ಏಷ್ಯಾದಲ್ಲಿನ ಶಾಂತಿ ಮತ್ತು ಸ್ಥಿರತೆ ಹಾಗೂ ಉಕ್ರೇನ್ ನಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ನಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇವೆ. ಉಕ್ರೇನ್ ಸಂಘರ್ಷ ಮತ್ತು ಗಾಝಾ ವಿಷಯಗಳಲ್ಲಿ, ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಶಾಂತಿಯನ್ನು ಪುನಃಸ್ಥಾಪಿಸುವ ಎಲ್ಲಾ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಾಗರ ಭದ್ರತಾ ಸಹಕಾರವನ್ನು ಹೆಚ್ಚಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ.
ಸ್ನೇಹಿತರೇ,
ಭಾರತ ಮತ್ತು ಯುಕೆ ನಡುವಿನ ತಂತ್ರಜ್ಞಾನ ಪಾಲುದಾರಿಕೆಯಲ್ಲಿ ಅಪಾರ ಸಾಧ್ಯತೆಗಳಿವೆ. ಯುಕೆ ಯ ಕೈಗಾರಿಕಾ ಪರಿಣತಿ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯನ್ನು (R&D), ಭಾರತದ ಪ್ರತಿಭೆ ಮತ್ತು ವ್ಯಾಪ್ತಿಯೊಂದಿಗೆ ಜೋಡಿಸಲು ನಾವು ಕೆಲಸ ಮಾಡುತ್ತಿದ್ದೇವೆ.
ಕಳೆದ ವರ್ಷ, ನಾವು 'ಭಾರತ-ಯುಕೆ ತಂತ್ರಜ್ಞಾನ ಭದ್ರತಾ ಉಪಕ್ರಮ'ವನ್ನು ಪ್ರಾರಂಭಿಸಿದ್ದೇವೆ. ಈ ಉಪಕ್ರಮದ ಅಡಿಯಲ್ಲಿ, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಜಂಟಿ ಸಂಶೋಧನೆ ಮತ್ತು ನಾವೀನ್ಯತೆಗಾಗಿ ನಾವು ಒಂದು ಬಲವಾದ ವೇದಿಕೆಯನ್ನು ರಚಿಸಿದ್ದೇವೆ. ಎರಡೂ ದೇಶಗಳ ಯುವಜನರನ್ನು ನಾವೀನ್ಯತೆಯ ಸೇತುವೆಯ ಮೂಲಕ ಸಂಪರ್ಕಿಸಲು, ನಾವು 'ಸಂಪರ್ಕ ಮತ್ತು ನಾವೀನ್ಯತಾ ಕೇಂದ್ರ' ('Connectivity and Innovation Centre') ಮತ್ತು 'ಜಂಟಿ ಕೃತಕ ಬುದ್ಧಿಮತ್ತೆ ಸಂಶೋಧನಾ ಕೇಂದ್ರ' ('Joint AI Research Centre') ಸ್ಥಾಪಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ.
ನಿರ್ಣಾಯಕ ಖನಿಜಗಳ ಸಹಕಾರಕ್ಕಾಗಿ ನಾವು 'ಇಂಡಸ್ಟ್ರಿ ಗಿಲ್ಡ್' ಮತ್ತು 'ಸರಬರಾಜು ಸರಪಳಿ ವೀಕ್ಷಣಾಲಯ'ವನ್ನು ('Supply Chain Observatory') ಸ್ಥಾಪಿಸಲು ನಿರ್ಧರಿಸಿದ್ದೇವೆ. ಇದರ ಉಪಗ್ರಹ ಕ್ಯಾಂಪಸ್ ಐಎಸ್ಎಂ ಧನ್ ಬಾದ್ ನಲ್ಲಿ ಸ್ಥಾಪನೆಯಾಗಲಿದೆ.
ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ನಾವು ಹಂಚಿಕೆಯ ಬದ್ಧತೆಯನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ, ಭಾರತ-ಯುಕೆ ಆಫ್ ಶೋರ್ ವಿಂಡ್ ಟಾಸ್ಕ್ ಫೋರ್ಸ್ ರಚನೆಯನ್ನು ನಾವು ಸ್ವಾಗತಿಸುತ್ತೇವೆ.
ನಾವು ' ಹವಾಮಾನ ತಂತ್ರಜ್ಞಾನ ಸ್ಟಾರ್ಟ್ಅಪ್ ನಿಧಿ'ಯನ್ನು ಸ್ಥಾಪಿಸಿದ್ದೇವೆ. ಇದು ಹವಾಮಾನ, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಎರಡೂ ದೇಶಗಳ ನಾವೀನ್ಯಕಾರರು ಮತ್ತು ಉದ್ಯಮಿಗಳಿಗೆ ಬೆಂಬಲ ನೀಡಲಿದೆ.
ಸ್ನೇಹಿತರೇ,
ರಕ್ಷಣೆ ಮತ್ತು ಭದ್ರತೆಯಿಂದ ಹಿಡಿದು ಶಿಕ್ಷಣ ಮತ್ತು ನಾವೀನ್ಯತೆಯವರೆಗೆ, ಭಾರತ ಮತ್ತು ಯುಕೆ ತಮ್ಮ ಸಂಬಂಧದಲ್ಲಿ ಹೊಸ ಆಯಾಮಗಳನ್ನು ರೂಪಿಸುತ್ತಿವೆ.
ಇಂದು, ಪ್ರಧಾನಮಂತ್ರಿ ಸ್ಟಾರ್ಮರ್ ಅವರೊಂದಿಗೆ ಶಿಕ್ಷಣ ಕ್ಷೇತ್ರದಿಂದ ಇದುವರೆಗಿನ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ನಿಯೋಗವು ಆಗಮಿಸಿದೆ. ಹಲವಾರು ಯುಕೆ ವಿಶ್ವವಿದ್ಯಾಲಯಗಳು ಈಗ ಭಾರತದಲ್ಲಿ ತಮ್ಮ ಕ್ಯಾಂಪಸ್ ಗಳನ್ನು ಸ್ಥಾಪಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ. ಸೌತಾಂಪ್ಟನ್ ವಿಶ್ವವಿದ್ಯಾಲಯದ ಗುರುಗ್ರಾಮ ಕ್ಯಾಂಪಸ್ ಇತ್ತೀಚೆಗೆ ಉದ್ಘಾಟನೆಗೊಂಡಿದೆ, ಮತ್ತು ವಿದ್ಯಾರ್ಥಿಗಳ ಮೊದಲ ತಂಡ ಈಗಾಗಲೇ ಸೇರ್ಪಡೆಯಾಗಿದೆ. ಇದಲ್ಲದೆ, ಗಿಫ್ಟ್ ಸಿಟಿಯಲ್ಲಿ ಇತರ ಮೂರು ಯುಕೆ ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳ ನಿರ್ಮಾಣ ಕಾರ್ಯವು ಪ್ರಸ್ತುತ ಪ್ರಗತಿಯಲ್ಲಿದೆ.
ನಮ್ಮ ರಕ್ಷಣಾ ಸಹಕಾರವೂ ಮತ್ತಷ್ಟು ಗಟ್ಟಿಯಾಗಿದೆ. ನಾವು ರಕ್ಷಣಾ ಸಹ-ಉತ್ಪಾದನೆ ಮತ್ತು ಎರಡೂ ದೇಶಗಳ ರಕ್ಷಣಾ ಉದ್ಯಮಗಳನ್ನು ಜೋಡಿಸುವತ್ತ ಸಾಗುತ್ತಿದ್ದೇವೆ. ನಮ್ಮ ರಕ್ಷಣಾ ಸಹಯೋಗವನ್ನು ಒಂದು ಹೆಜ್ಜೆ ಮುಂದೆ ಕೊಂಡೊಯ್ಯುತ್ತಾ, ನಾವು ಮಿಲಿಟರಿ ತರಬೇತಿಯಲ್ಲಿ ಸಹಕಾರಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇದರ ಅಡಿಯಲ್ಲಿ, ಭಾರತೀಯ ವಾಯುಪಡೆಯ ಫ್ಲೈಯಿಂಗ್ ಇನ್ ಸ್ಟ್ರಕ್ಟರ್ ಗಳು ಯುಕೆ ಯ ರಾಯಲ್ ಏರ್ ಫೋರ್ಸ್ನಲ್ಲಿ ತರಬೇತುದಾರರಾಗಿ ಸೇವೆ ಸಲ್ಲಿಸಲಿದ್ದಾರೆ.
ಈ ಸಭೆಯು ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ನಡೆಯುತ್ತಿರುವಾಗಲೇ, ನಮ್ಮ ನೌಕಾ ಹಡಗುಗಳು 'ಕೊಂಕಣ 2025' ಜಂಟಿ ಸಮರಾಭ್ಯಾಸದಲ್ಲಿ ಭಾಗವಹಿಸುತ್ತಿರುವುದು ಒಂದು ವಿಶೇಷ ಕಾಕತಾಳೀಯ.
ಸ್ನೇಹಿತರೇ,
ಯುನೈಟೆಡ್ ಕಿಂಗ್ ಡಮ್ ನಲ್ಲಿ ವಾಸಿಸುತ್ತಿರುವ 18 ಲಕ್ಷ ಭಾರತೀಯರು ನಮ್ಮ ಪಾಲುದಾರಿಕೆಯ ಜೀವಂತ ಸೇತುವೆಯಾಗಿದ್ದಾರೆ. ಬ್ರಿಟಿಷ್ ಸಮಾಜ ಮತ್ತು ಆರ್ಥಿಕತೆಗೆ ತಮ್ಮ ಅಮೂಲ್ಯವಾದ ಕೊಡುಗೆಗಳ ಮೂಲಕ, ಅವರು ನಮ್ಮ ಎರಡೂ ರಾಷ್ಟ್ರಗಳ ನಡುವಿನ ಸ್ನೇಹ, ಸಹಕಾರ ಮತ್ತು ಪ್ರಗತಿಯ ಬಂಧಗಳನ್ನು ಬಲಪಡಿಸಿದ್ದಾರೆ.
ಸ್ನೇಹಿತರೇ,
ಭಾರತದ ಚೈತನ್ಯ ಮತ್ತು ಯುನೈಟೆಡ್ ಕಿಂಗ್ ಡಮ್ ನ ಪರಿಣತಿ ಒಟ್ಟಾಗಿ ಒಂದು ವಿಶಿಷ್ಟವಾದ ಸಮನ್ವಯವನ್ನು ಸೃಷ್ಟಿಸುತ್ತವೆ. ನಮ್ಮ ಪಾಲುದಾರಿಕೆಯು ವಿಶ್ವಾಸಾರ್ಹವಾಗಿದೆ, ಹಾಗೂ ಪ್ರತಿಭೆ ಮತ್ತು ತಂತ್ರಜ್ಞಾನದಿಂದ ಚಾಲಿತವಾಗಿದೆ. ಮತ್ತು ಇಂದು, ಪ್ರಧಾನಮಂತ್ರಿ ಸ್ಟಾರ್ಮರ್ ಮತ್ತು ನಾನು ಈ ವೇದಿಕೆಯಲ್ಲಿ ಒಟ್ಟಿಗೆ ನಿಂತಿರುವುದು, ನಮ್ಮ ಎರಡೂ ರಾಷ್ಟ್ರಗಳ ಜನರಿಗಾಗಿ ಉಜ್ವಲ ಭವಿಷ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೈಜೋಡಿಸಿ ಕೆಲಸ ಮಾಡುವ ನಮ್ಮ ಹಂಚಿಕೆಯ ಬದ್ಧತೆಯ ಸ್ಪಷ್ಟ ಪುನರುಚ್ಚಾರವಾಗಿದೆ.
ಮತ್ತೊಮ್ಮೆ, ಭಾರತಕ್ಕೆ ಭೇಟಿ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಸ್ಟಾರ್ಮರ್ ಮತ್ತು ಅವರ ನಿಯೋಗಕ್ಕೆ ನಾನು ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ತಮಗೆಲ್ಲರಿಗೂ ಧನ್ಯವಾದಗಳು.
ಸೂಚನೆ - ಇದು ಪ್ರಧಾನಮಂತ್ರಿ ಅವರ ಭಾಷಣದ ಭಾವಾನುದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿತ್ತು.
*****
(रिलीज़ आईडी: 2176793)
आगंतुक पटल : 21
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam