ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಇಂಡಿಯಾ ಮೊಬೈಲ್ ಕಾಂಗ್ರೆಸ್ 2025 ಉದ್ದೇಶಿಸಿ ಭಾಷಣ


ಇಂಡಿಯಾ ಮೊಬೈಲ್ ಕಾಂಗ್ರೆಸ್ ಮತ್ತು ಟೆಲಿಕಾಂ ವಲಯದಲ್ಲಿ ದೇಶದ ಯಶಸ್ಸು 'ಆತ್ಮನಿರ್ಭರ ಭಾರತ' ದೃಷ್ಟಿಕೋನದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಮಂತ್ರಿ

ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರಿಂದ 'ಐಎಂಸಿ 2025'ರಲ್ಲಿ 'ಅಂತಾರಾಷ್ಟ್ರೀಯ 6G ವಿಚಾರಸಂಕಿರಣ 2025' ಉದ್ಘಾಟನೆ

"ಭಾರತವು ಇನ್ನು ಮುಂದೆ ಕೇವಲ ತಂತ್ರಜ್ಞಾನದ ಗ್ರಾಹಕನಲ್ಲ. ನಾವು ತಂತ್ರಜ್ಞಾನದ ಭವಿಷ್ಯದ ಶಿಲ್ಪಿಗಳಾಗಲು ಶ್ರಮಿಸುತ್ತೇವೆ": ಕೇಂದ್ರ ಸಚಿವರಾದ ಸಿಂಧಿಯಾ

ತಂತ್ರಜ್ಞಾನ ಅಭಿವೃದ್ಧಿ ಕ್ಷೇತ್ರದಲ್ಲಿ ಜಂಟಿ ಭಾಗವಹಿಸುವಿಕೆಗಾಗಿ 'ಭಾರತ್ 6G ಅಲಯನ್ಸ್' ಸಂಸ್ಥೆಯಿಂದ ನ್ಯಾಸ್ಕಾಮ್ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿಯೊಂದಿಗೆ 2 ಒಪ್ಪಂದಗಳಿಗೆ ಸಹಿ

'ಭಾರತ್ 6G ಅಲಯನ್ಸ್' ಸಂಸ್ಥೆಯಿಂದ “ಭಾರತದಲ್ಲಿ 6G ಗಾಗಿ ಸ್ಪೆಕ್ಟ್ರಮ್ ಮಾರ್ಗಸೂಚಿ”, “ಮುಂದಿನ ಪೀಳಿಗೆಯ ಟೆಲಿಕಾಂಗೆ ಶಕ್ತಿ”, “5G ಗೆ AI ಮತ್ತು ನೆಟ್ ವರ್ಕ್ ವಿಕಸನ”, “ಆರ್ ಎಫ್ ಸೆನ್ಸಿಂಗ್ಗಾಗಿ 6G ಆರ್ಕಿಟೆಕ್ಚರ್, ಸೆಕ್ಯುರಿಟಿ ಮತ್ತು ಎಕ್ಸ್ಪೋಶರ್ ಫ್ರೇಮ್ ವರ್ಕ್” ಶೀರ್ಷಿಕೆಯ 4 ಶ್ವೇತಪತ್ರಗಳು ಬಿಡುಗಡೆ

'ಐಎಂಸಿ 2025' ಪ್ರದರ್ಶನ ಉದ್ಘಾಟನೆ - 400ಕ್ಕೂ ಹೆಚ್ಚು ಭಾಗವಹಿಸುವವರಿಂದ ಅತ್ಯಾಧುನಿಕ ಆವಿಷ್ಕಾರಗಳ ಪ್ರದರ್ಶನ

प्रविष्टि तिथि: 08 OCT 2025 3:08PM by PIB Bengaluru

ಪ್ರಧಾನಮಂತ್ರಿ ನರೇಂದ್ರ  ಮೋದಿಯವರು ಇಂದು ನವದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ಸಮಾವೇಶವಾದ 'ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2025'ರ 9ನೇ ಆವೃತ್ತಿಯನ್ನು ಉದ್ಘಾಟಿಸಿದರು. ತಮ್ಮ ಭಾಷಣದಲ್ಲಿ, ಅವರು ಭಾರತದ ತಾಂತ್ರಿಕ ಬೆಳವಣಿಗೆಯನ್ನು ಶ್ಲಾಘಿಸಿದರು. ಕ್ವಾಂಟಮ್ ಸಂವಹನ, 6G, ಮತ್ತು ಹಣಕಾಸು ವಂಚನೆ ತಡೆಗಟ್ಟುವಿಕೆಯಂತಹ ಕ್ಷೇತ್ರಗಳಲ್ಲಿ ಸ್ಟಾರ್ಟ್ಅಪ್ ಗಳು ಮಾಡಿದ ಪ್ರಮುಖ ಆವಿಷ್ಕಾರಗಳನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. 'ಟೆಲಿಕಾಂ ತಂತ್ರಜ್ಞಾನ ಅಭಿವೃದ್ಧಿ ನಿಧಿ'ಯಂತಹ ಉಪಕ್ರಮಗಳ ಮೂಲಕ ಸರ್ಕಾರದ ಬೆಂಬಲವು ಈ ಪ್ರಗತಿಗೆ ನಿರ್ಣಾಯಕವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. 2014 ರಿಂದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಆರು ಪಟ್ಟು ಮತ್ತು ಮೊಬೈಲ್ ತಯಾರಿಕೆಯಲ್ಲಿ 28 ಪಟ್ಟು ಹೆಚ್ಚಳದಂತಹ ಸಾಧನೆಗಳು 'ಆತ್ಮನಿರ್ಭರ ಭಾರತ' ದೃಷ್ಟಿಕೋನದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಭಾರತದ 'ಮೇಡ್-ಇನ್-ಇಂಡಿಯಾ 4G ಸ್ಟಾಕ್'ನ ಮಹತ್ವವನ್ನು ಅವರು ಒತ್ತಿ ಹೇಳಿದರು. ಇದು ರಾಷ್ಟ್ರದ ತಾಂತ್ರಿಕ ಸ್ವಾವಲಂಬನೆ ಮತ್ತು ರಫ್ತು ಸಿದ್ಧತೆಯನ್ನು ಸೂಚಿಸುತ್ತದೆ ಹಾಗೂ 'ಇಂಡಿಯಾ 6G ವಿಷನ್ 2030'ಗೆ ಕೊಡುಗೆ ನೀಡುತ್ತದೆ ಎಂದು ತಿಳಿಸಿದರು.

ಇತ್ತೀಚೆಗೆ ಜಾರಿಗೆ ತಂದ 'ದೂರಸಂಪರ್ಕ ಕಾಯ್ದೆ'ಯನ್ನೂ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ಇದು ತ್ವರಿತ ಅನುಮೋದನೆಗಳು ಮತ್ತು ನೆಟ್ವರ್ಕ್ ವಿಸ್ತರಣೆಗೆ ಅನುಕೂಲ ಮಾಡಿಕೊಡುತ್ತದೆ. ಸೈಬರ್ ವಂಚನೆ ವಿರುದ್ಧ ಕಠಿಣ ಕಾನೂನುಗಳು ಮತ್ತು ಸುಧಾರಿತ ಕುಂದುಕೊರತೆ ನಿವಾರಣಾ ವ್ಯವಸ್ಥೆಗಳೊಂದಿಗೆ ಸರ್ಕಾರವು ಸೈಬರ್ ಭದ್ರತೆಗೆ ನೀಡುತ್ತಿರುವ ಗಮನವನ್ನು ಅವರು ಒತ್ತಿ ಹೇಳಿದರು. ಇದು ಉದ್ಯಮ ಮತ್ತು ಗ್ರಾಹಕರಿಬ್ಬರಿಗೂ ಪ್ರಯೋಜನಕಾರಿಯಾಗಿದೆ. ಸ್ಟಾರ್ಟ್ಅಪ್ ಗಳು, ಶೈಕ್ಷಣಿಕ ವಲಯ ಮತ್ತು ನೀತಿ ನಿರೂಪಕರ ನಡುವೆ ಸಹಯೋಗದ ಪ್ರಯತ್ನಗಳ ಅಗತ್ಯವನ್ನು ಗುರುತಿಸಿದ ಶ್ರೀ ಮೋದಿಯವರು, ದೇಶದ ತಾಂತ್ರಿಕ ಪ್ರಗತಿಯನ್ನು ಇನ್ನಷ್ಟು ಹೆಚ್ಚಿಸಲು 'ಇಂಡಿಯಾ ಮೊಬೈಲ್ ಕಾಂಗ್ರೆಸ್'ನಂತಹ ವೇದಿಕೆಗಳು ಇಂತಹ ಸಂವಾದವನ್ನು ಪ್ರೋತ್ಸಾಹಿಸುತ್ತವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಂವಹನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಭಾರತವು ತಂತ್ರಜ್ಞಾನದ ಗ್ರಾಹಕನ ಸ್ಥಾನದಿಂದ ಜಾಗತಿಕ ಡಿಜಿಟಲ್ ನಾಯಕನಾಗಿ ಪರಿವರ್ತನೆಗೊಂಡಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ದೇಶದ 6G ಗುರಿಗಳನ್ನು ವಿವರಿಸಿದ ಅವರು, 2035ರ ವೇಳೆಗೆ ಇದು ಭಾರತದ ಜಿಡಿಪಿಗೆ $1.2 ಟ್ರಿಲಿಯನ್ ಕೊಡುಗೆ ನೀಡುವ ನಿರೀಕ್ಷೆಯಿದೆ ಎಂದು ಹೇಳಿದರು. ಜಾಗತಿಕ 6G ಪೇಟೆಂಟ್ಗಳಲ್ಲಿ 10% ಪಾಲನ್ನು ಹೊಂದುವ ಭಾರತದ ಗುರಿ ಮತ್ತು 2033ರ ವೇಳೆಗೆ ಮೂರು ಪಟ್ಟು ಬೆಳೆಯಲಿರುವ ಉಪಗ್ರಹ ಸಂವಹನ ಮಾರುಕಟ್ಟೆಯ ಬಗ್ಗೆಯೂ ಸಿಂಧಿಯಾ ತಿಳಿಸಿದರು. ಉತ್ಪಾದನೆ, ರಫ್ತು ಮತ್ತು ಉದ್ಯೋಗ ಸೃಷ್ಟಿಯಲ್ಲಿ ಗಣನೀಯ ಬೆಳವಣಿಗೆಯನ್ನು ತಂದಿರುವ 'ಉತ್ಪಾದನೆ ಆಧಾರಿತ ಪ್ರೋತ್ಸಾಹಧನ' (PLI) ಯೋಜನೆಯ ಯಶಸ್ಸನ್ನು ಅವರು ಶ್ಲಾಘಿಸಿದರು. ಹೆಚ್ಚುವರಿಯಾಗಿ, ಮೊಬೈಲ್ ಡೇಟಾ ದರಗಳಲ್ಲಿ 98% ಇಳಿಕೆ ಮತ್ತು ದೇಶದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಸಿಕ್ಕಿರುವ ಜಾಗತಿಕ ಮನ್ನಣೆಯು ಭಾರತದ ಡಿಜಿಟಲ್ ಕ್ರಾಂತಿಗೆ ಸಾಕ್ಷಿ ಎಂದು ಸಿಂಧಿಯಾ ಒತ್ತಿ ಹೇಳಿದರು. 'ಸ್ಟಾರ್ಟ್ಅಪ್ ವರ್ಲ್ಡ್ ಕಪ್ 2025' ಭಾರತದ ನಾವೀನ್ಯತೆಯ ಚೈತನ್ಯವನ್ನು ಪ್ರದರ್ಶಿಸುತ್ತಿದ್ದು, ದೇಶದ ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಅವರು ಶ್ಲಾಘಿಸಿದರು.

ಅಂತಾರಾಷ್ಟ್ರೀಯ 6G ವಿಚಾರ ಸಂಕಿರಣ 2025

ನಂತರ, ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಟೆಲಿಕಾಂ ಕಾರ್ಯದರ್ಶಿ ಡಾ. ನೀರಜ್ ಮಿತ್ತಲ್ ಅವರು, ನವದೆಹಲಿಯ ಯಶೋಭೂಮಿಯಲ್ಲಿ ನಡೆಯುತ್ತಿರುವ 'ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2025'ರಲ್ಲಿ 'ಅಂತಾರಾಷ್ಟ್ರೀಯ 6G ವಿಚಾರಸಂಕಿರಣ 2025' ಅನ್ನು ಉದ್ಘಾಟಿಸಿದರು.

ಮುಂದಿನ ಪೀಳಿಗೆಯ 6G ತಂತ್ರಜ್ಞಾನಗಳು, ಸಂಶೋಧನಾ ಸಹಯೋಗಗಳು, ಗುಣಮಟ್ಟ ನಿರ್ಧಾರದ ಪ್ರಯತ್ನಗಳು ಮತ್ತು 6G ನಾವೀನ್ಯತಾ ಪರಿಸರ ವ್ಯವಸ್ಥೆಯಲ್ಲಿ ಭಾರತವು ಮುನ್ನಡೆಯಲು ಇರುವ ಮಾರ್ಗಗಳ ಬಗ್ಗೆ ಚರ್ಚಿಸಲು ಈ ವಿಚಾರಸಂಕಿರಣವು ಜಾಗತಿಕ ಚಿಂತಕರು, ನೀತಿ ನಿರೂಪಕರು, ಉದ್ಯಮ ತಜ್ಞರು ಮತ್ತು ಶೈಕ್ಷಣಿಕ ವಲಯದವರನ್ನು ಒಂದೆಡೆ ಸೇರಿಸಿತು.

ಈ ವಿಚಾರಸಂಕಿರಣದಲ್ಲಿ, 'ಭಾರತ್ 6G ಅಲಯನ್ಸ್' ಸಂಸ್ಥೆಯು ತಂತ್ರಜ್ಞಾನ ಅಭಿವೃದ್ಧಿ ಕ್ಷೇತ್ರದಲ್ಲಿ ಜಂಟಿ ಭಾಗವಹಿಸುವಿಕೆಯನ್ನು ಉತ್ತೇಜಿಸಲು ನ್ಯಾಸ್ಕಾಮ್ (NASSCOM) ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಯೊಂದಿಗೆ 2 ಒಪ್ಪಂದಗಳಿಗೆ (MoU) ಸಹಿ ಹಾಕಿತು. 'ಭಾರತ್ 6G ಅಲಯನ್ಸ್' ಸಂಸ್ಥೆಯು “ಭಾರತದಲ್ಲಿ 6G ಗಾಗಿ ಸ್ಪೆಕ್ಟ್ರಮ್ ಮಾರ್ಗಸೂಚಿ”, “ಮುಂದಿನ ಪೀಳಿಗೆಯ ಟೆಲಿಕಾಂಗೆ ಶಕ್ತಿ”, “5G ಗೆ AI ಮತ್ತು ನೆಟ್ವರ್ಕ್ ವಿಕಸನ”, ಮತ್ತು “ಆರ್ಎಫ್ ಸೆನ್ಸಿಂಗ್ ಗಾಗಿ 6G ಆರ್ಕಿಟೆಕ್ಚರ್, ಸೆಕ್ಯುರಿಟಿ ಮತ್ತು ಎಕ್ಸ್ಪೋಶರ್ ಫ್ರೇಮ್ ವರ್ಕ್” ಎಂಬ ಶೀರ್ಷಿಕೆಗಳಡಿ 4 ಶ್ವೇತಪತ್ರಗಳನ್ನು ಬಿಡುಗಡೆ ಮಾಡಿತು.

6G ತತ್ವಗಳನ್ನು ಅನುಮೋದಿಸುವ ಜಂಟಿ ಘೋಷಣೆಯೊಂದನ್ನು ಸಹ ಪ್ರದರ್ಶಿಸಲಾಯಿತು, ಇದನ್ನು ಅಕ್ಟೋಬರ್ 10, 2025 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು.

ತಮ್ಮ ಉದ್ಘಾಟನಾ ಭಾಷಣದಲ್ಲಿ, ಕೇಂದ್ರ ಸಂವಹನ ಸಚಿವರು ಅಂತಾರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವುದು, ಸ್ವದೇಶಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು (R&D) ಮುನ್ನಡೆಸುವುದು ಮತ್ತು ಜಾಗತಿಕ 6G ಭೂಮಿಕೆಯನ್ನು ರೂಪಿಸಲು ಭಾರತದ ಡಿಜಿಟಲ್ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು. ಭಾರತದಲ್ಲಿ 6G ಪರಿಸರ ವ್ಯವಸ್ಥೆಯ ಯಶಸ್ವಿ ಅನುಷ್ಠಾನಕ್ಕಾಗಿ ಅವರು ತಮ್ಮ 6G ಮಂತ್ರವನ್ನು ಪುನರುಚ್ಚರಿಸಿದರು. 

"ಭಾರತವು ಇನ್ನು ಮುಂದೆ ಕೇವಲ ತಂತ್ರಜ್ಞಾನದ ಗ್ರಾಹಕನಲ್ಲ. ನಾವು ತಂತ್ರಜ್ಞಾನದ ಭವಿಷ್ಯದ ಶಿಲ್ಪಿಗಳಾಗಲು ಶ್ರಮಿಸುತ್ತೇವೆ" ಎಂದು ಸಚಿವ ಸಿಂಧಿಯಾ ಹೇಳಿದರು. "ಭಾರತವು ಇಲ್ಲಿ ಅನುಸರಿಸಲು ಬಂದಿಲ್ಲ, ಬದಲಿಗೆ 6G ಕ್ರಾಂತಿಯ ಸಹ-ನಾಯಕನಾಗಲು ಬಂದಿದೆ," ಎಂದು ಅವರು ಹೇಳಿದರು. ಇತ್ತೀಚೆಗೆ 1 ಲಕ್ಷ ಟವರ್ ಗಳೊಂದಿಗೆ ಸ್ವದೇಶಿ 4G ನೆಟ್ವರ್ಕ್ ಅನ್ನು ಪ್ರಾರಂಭಿಸಿದಂತಹ ಸ್ವದೇಶಿ ಟೆಲಿಕಾಂ ಪರಿಸರ ವ್ಯವಸ್ಥೆಗಳಿಗೆ ಅವರು ಹೆಚ್ಚಿನ ಮಹತ್ವ ನೀಡಿದರು. ಇದು ಮುಂದಿನ ಪೀಳಿಗೆಯ ನೆಟ್ವರ್ಕ್ ಅನ್ನು ಬೆಂಬಲಿಸಬಲ್ಲ ಭವಿಷ್ಯ-ಸಿದ್ಧ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಭಾರತಕ್ಕೆ ಅನುವು ಮಾಡಿಕೊಡುತ್ತದೆ. 6G ತಂತ್ರಜ್ಞಾನಕ್ಕಾಗಿ ಸರ್ಕಾರಗಳು, ಶೈಕ್ಷಣಿಕ ವಲಯ ಮತ್ತು ಸಂಸ್ಥೆಗಳ ನಡುವೆ ಜಾಗತಿಕ ಸಹಯೋಗದ ಅಗತ್ಯವನ್ನು ಮತ್ತು ಅದನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡುವ ಬಗ್ಗೆಯೂ ಅವರು ಒತ್ತಿ ಹೇಳಿದರು.

ಈ 'ಅಂತಾರಾಷ್ಟ್ರೀಯ 6G ವಿಚಾರಸಂಕಿರಣ'ವು 'ಇಂಡಿಯಾ ಮೊಬೈಲ್ ಕಾಂಗ್ರೆಸ್ 2025'ರ ಪ್ರಮುಖ ಆಕರ್ಷಣೆಯಾಗಿದೆ. ಇದು ಸುರಕ್ಷಿತ, ಎಲ್ಲರನ್ನೂ ಒಳಗೊಂಡ ಮತ್ತು ಭವಿಷ್ಯ-ಸಿದ್ಧ ಟೆಲಿಕಾಂ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಭಾರತದ ಬದ್ಧತೆಯನ್ನು ಪುನರ್ ದೃಢೀಕರಿಸುತ್ತದೆ. ಜೊತೆಗೆ, 6G ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅಳವಡಿಕೆಯಲ್ಲಿ ದೇಶವನ್ನು ಜಾಗತಿಕ ನಾಯಕನಾಗಿ ಸ್ಥಾಪಿಸುತ್ತದೆ.

IMC 2025 ಪ್ರದರ್ಶಕರ ಸಭಾಂಗಣ

 

ಇದಕ್ಕೂ ಮುನ್ನ, ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಸಂವಹನ ಖಾತೆ ರಾಜ್ಯ ಸಚಿವರಾದ ಡಾ. ಪೆಮ್ಮಸಾನಿ ಚಂದ್ರಶೇಖರ್ ಮತ್ತು ಟೆಲಿಕಾಂ ಕಾರ್ಯದರ್ಶಿ ಡಾ. ನೀರಜ್ ಮಿತ್ತಲ್ ಅವರೊಂದಿಗೆ 'ಐಎಂಸಿ 2025 ಪ್ರದರ್ಶನ ಸಭಾಂಗಣ'ವನ್ನು ಉದ್ಘಾಟಿಸಿದರು.. ಅವರು ವಿವಿಧ ಮಳಿಗೆಗಳಿಗೆ ಭೇಟಿ ನೀಡಿ, ಪ್ರದರ್ಶಕರು, ಸ್ಟಾರ್ಟ್ಅಪ್ ಗಳು ಮತ್ತು ಉದ್ಯಮದ ಮುಖಂಡರೊಂದಿಗೆ ಸಂವಾದ ನಡೆಸಿದರು. ಅಲ್ಲದೆ, ಡಿಜಿಟಲ್ ಸಂಪರ್ಕದ ಭವಿಷ್ಯವನ್ನು ರೂಪಿಸುತ್ತಿರುವ ಅತ್ಯಾಧುನಿಕ ಆವಿಷ್ಕಾರಗಳನ್ನು ವೀಕ್ಷಿಸಿದರು. ಪ್ರದರ್ಶನದಲ್ಲಿದ್ದ ವೈವಿಧ್ಯಮಯ ಸ್ವದೇಶಿ ಮತ್ತು ಜಾಗತಿಕ ತಂತ್ರಜ್ಞಾನಗಳನ್ನು ಅವರು ಶ್ಲಾಘಿಸಿದರು. ಭಾರತದ ಟೆಲಿಕಾಂ ಬೆಳವಣಿಗೆಯ ಕಥೆಯಲ್ಲಿ ಉದ್ಯಮದ ಸಹಯೋಗವು ವಹಿಸುವ ನಿರ್ಣಾಯಕ ಪಾತ್ರವನ್ನು ಅವರು ಒತ್ತಿ ಹೇಳಿದರು.

IMC 2025

ದೂರಸಂಪರ್ಕ ಇಲಾಖೆ (DoT) ಹಾಗೂ ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಸಹಯೋಗದಲ್ಲಿ, 'ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2025' ಸಮಾವೇಶವನ್ನು ಅಕ್ಟೋಬರ್ 8 ರಿಂದ 11 ರವರೆಗೆ ಆಯೋಜಿಸಲಾಗಿದೆ. "ಪರಿವರ್ತನೆಗಾಗಿ ನಾವೀನ್ಯತೆ" ಎಂಬ ಥೀಮ್‌ ನೊಂದಿಗೆ ನಡೆಯುವ ಈ ಮಹಾಸಮಾವೇಶವು, ಡಿಜಿಟಲ್ ಪರಿವರ್ತನೆ ಮತ್ತು ಸಾಮಾಜಿಕ ಪ್ರಗತಿಯನ್ನು ಸಾಧಿಸಲು ನಾವೀನ್ಯತೆಯನ್ನು ಬಳಸಿಕೊಳ್ಳುವ ಭಾರತದ ಅಚಲ ಬದ್ಧತೆಯನ್ನು ಸಾರಿ ಹೇಳುತ್ತದೆ.

'ಐಎಂಸಿ 2025' ಸಮಾವೇಶವು ದೂರಸಂಪರ್ಕ ಮತ್ತು ಇತರೆ ಉದಯೋನ್ಮುಖ ತಂತ್ರಜ್ಞಾನಗಳಲ್ಲಿನ ಅತ್ಯಾಧುನಿಕ ಬೆಳವಣಿಗೆಗಳನ್ನು ಜಗತ್ತಿಗೆ ಪರಿಚಯಿಸಲಿದೆ. ಇದು ಜಾಗತಿಕ ನಾಯಕರು, ನೀತಿ ನಿರೂಪಕರು, ಉದ್ಯಮ ಪರಿಣತರು ಹಾಗೂ ನಾವೀನ್ಯಕಾರರನ್ನು ಒಂದೇ ವೇದಿಕೆಯಡಿ ತರಲಿದೆ. ಈ ಕಾರ್ಯಕ್ರಮವು ಮುಖ್ಯವಾಗಿ ಆಪ್ಟಿಕಲ್ ಸಂವಹನ, ಟೆಲಿಕಾಂನಲ್ಲಿ ಸೆಮಿಕಂಡಕ್ಟರ್ಗಳ ಬಳಕೆ, ಕ್ವಾಂಟಮ್ ಸಂವಹನ, 6G ತಂತ್ರಜ್ಞಾನ, ಹಾಗೂ ಆನ್ ಲೈನ್ ವಂಚನೆಗಳನ್ನು ಪತ್ತೆಹಚ್ಚುವ ತಂತ್ರಜ್ಞಾನಗಳಂತಹ ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ. ಈ ವಿಷಯಗಳು, ಮುಂದಿನ ತಲೆಮಾರಿನ ಸಂಪರ್ಕ ವ್ಯವಸ್ಥೆ, ಡಿಜಿಟಲ್ ಸಾರ್ವಭೌಮತ್ವ, ಸೈಬರ್ ವಂಚನೆ ತಡೆ ಮತ್ತು ಜಾಗತಿಕ ತಂತ್ರಜ್ಞಾನ ನಾಯಕತ್ವದಲ್ಲಿ ಭಾರತದ ಕಾರ್ಯತಂತ್ರದ ಆದ್ಯತೆಗಳನ್ನು ಪ್ರತಿಬಿಂಬಿಸುತ್ತವೆ.

 

*****

Follow DoT Handles for more: -

X - https://x.com/DoT_India

Insta-  https://www.instagram.com/department_of_telecom?igsh=MXUxbHFjd3llZTU0YQ==

Fb - https://www.facebook.com/DoTIndia

Youtube: https://youtube.com/@departmentoftelecom?si=DALnhYkt89U5jAaa

 

*****


(रिलीज़ आईडी: 2176337) आगंतुक पटल : 38
इस विज्ञप्ति को इन भाषाओं में पढ़ें: English , Urdu , हिन्दी , Tamil , Malayalam