ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಉತ್ತಮ ಗುಣಮಟ್ಟದ ಡಿಜಿಟಲ್ ಶಿಕ್ಷಣಕ್ಕೆ ಪ್ರವೇಶವನ್ನು ಎಲ್ಲರಿಗೂ ಮುಕ್ತವಾಗಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ NIELIT ಡಿಜಿಟಲ್ ವಿಶ್ವವಿದ್ಯಾಲಯ ವೇದಿಕೆಗೆ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಚಾಲನೆ ನೀಡಿದ್ದಾರೆ.


DNHDD ಕೇಂದ್ರಾಡಳಿತ ಪ್ರದೇಶದ ದಮನ್‌, ಮುಜಫರ್‌ ಪುರ (ಬಿಹಾರ), ಬಾಲಸೋರ್ (ಒಡಿಶಾ), ತಿರುಪತಿ (ಆಂಧ್ರಪ್ರದೇಶ) ಮತ್ತು ಲುಂಗ್ಲೈ (ಮಿಜೋರಾಂ) ನಲ್ಲಿ ಐದು ಹೊಸ NIELIT ಕೇಂದ್ರಗಳನ್ನು ವರ್ಚುವಲ್ ಆಗಿ ಉದ್ಘಾಟಿಸಲಾಯಿತು

NIELIT ಟಾಪ್ 500 ಕಂಪನಿಗಳೊಂದಿಗೆ ಮಾತುಕತೆ ನಡೆಸಬೇಕು ಮತ್ತು "ನೀವೇ ಏನು ಕಲಿಸಬೇಕೆಂಬುದು ನಿರ್ಧರಿಸಿ" ಎಂಬ ಧ್ಯೇಯವಾಕ್ಯವನ್ನು ಅನುಸರಿಸುವ ಮೂಲಕ ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕಬೇಕು, ಇದರಿಂದಾಗಿ NIELIT ಕೋರ್ಸ್‌ಗಳನ್ನು ಉದ್ಯಮದ ಅವಶ್ಯಕತೆಗಳೊಂದಿಗೆ ಜೋಡಿಸಬಹುದು: ಅಶ್ವಿನಿ ವೈಷ್ಣವ್

NIELIT ಮತ್ತು ಮೈಕ್ರೋಸಾಫ್ಟ್, Zscaler, CCRYN, ಡಿಕ್ಸನ್ ಟೆಕ್, ಫ್ಯೂಚರ್ ಕ್ರೈಮ್ ನಡುವಿನ ಒಡಂಬಡಿಕೆ ಪತ್ರಗಳಿಗೆ (MoUs) ಸಹಿ ಹಾಕಲಾಗಿದೆ

Posted On: 02 OCT 2025 8:37PM by PIB Bengaluru

ಕೇಂದ್ರ ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ನವದೆಹಲಿಯಲ್ಲಿ NIELIT ಡಿಜಿಟಲ್ ವಿಶ್ವವಿದ್ಯಾಲಯ (NDU) ವೇದಿಕೆಯನ್ನು ಉದ್ಘಾಟಿಸಿದರು. ಉತ್ತಮ ಗುಣಮಟ್ಟದ ಡಿಜಿಟಲ್ ಶಿಕ್ಷಣಕ್ಕೆ ಪ್ರವೇಶವನ್ನು ಎಲ್ಲರಿಗೂ ಸಮಾನವಾಗಿ ಕಲ್ಪಿಸುವ ನಿಟ್ಟಿನಲ್ಲಿ ಈ ವೇದಿಕೆಯನ್ನು ವಿನ್ಯಾಸಗೊಳಿಸಲಾಗಿದೆ.

ಈ ವೇದಿಕೆಯು ಕೃತಕ ಬುದ್ಧಿಮತ್ತೆ (AI), ಸೈಬರ್ ಭದ್ರತೆ, ದತ್ತಾಂಶ ವಿಜ್ಞಾನ (Data Science), ಸೆಮಿಕಂಡಕ್ಟರ್‌ ಗಳು ಮತ್ತು ಸಂಬಂಧಿತ ಪ್ರಮುಖ ತಂತ್ರಜ್ಞಾನಗಳಲ್ಲಿ ಉದ್ಯಮ-ಕೇಂದ್ರಿತ ಕಾರ್ಯಕ್ರಮಗಳನ್ನು ನೀಡಲಿದೆ. ಇದು ಭವಿಷ್ಯದ ಸಿದ್ಧ ಕೌಶಲ್ಯಗಳೊಂದಿಗೆ ಯುವಜನರನ್ನು ಭವಿಷ್ಯಕ್ಕೆ ಸಿದ್ಧಗೊಳಿಸಲು ಹೊಂದಿಕೊಳ್ಳುವ ಡಿಜಿಟಲ್ ಕಲಿಕಾ ವಿಧಾನಗಳು ಮತ್ತು ವರ್ಚುವಲ್ ಲ್ಯಾಬ್‌ಗಳನ್ನು ಒದಗಿಸುತ್ತದೆ.

ಈ ಸಂದರ್ಭದಲ್ಲಿ ಗೌರವಾನ್ವಿತ ಕೇಂದ್ರ ಸಚಿವರು, ಮುಜಫರ್‌ಪುರ (ಬಿಹಾರ), ಬಾಲಸೋರ್ (ಒಡಿಶಾ), ತಿರುಪತಿ (ಆಂಧ್ರಪ್ರದೇಶ), ದಮನ್ (ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು), ಮತ್ತು ಲುಂಗ್ಲೈ (ಮಿಜೋರಾಂ) ನಲ್ಲಿ ಐದು ಹೊಸ NIELIT ಕೇಂದ್ರಗಳನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ಈ ಹೊಸ ಕೇಂದ್ರಗಳ ಸೇರ್ಪಡೆಯೊಂದಿಗೆ, ಭಾರತದ ತಾಂತ್ರಿಕ ಭವಿಷ್ಯವನ್ನು ರೂಪಿಸುವಲ್ಲಿ NIELIT ನಿರ್ಣಾಯಕ ಪಾತ್ರ ವಹಿಸುತ್ತಿದೆ. ಉದ್ಘಾಟನಾ ಸಮಾರಂಭದ ಸಮಯದಲ್ಲಿ, NIELIT ಮತ್ತು ಮೈಕ್ರೋಸಾಫ್ಟ್, Zscaler, CCRYN, ಡಿಕ್ಸನ್ ಟೆಕ್ ಮತ್ತು ಫ್ಯೂಚರ್ ಕ್ರೈಮ್ ನಡುವೆ ಒಡಂಬಡಿಕೆ ಪತ್ರಗಳಿಗೆ (MoUs) ಸಹಿ ಹಾಕಲಾಯಿತು.

ಈ ಕಾರ್ಯಕ್ರಮದ ಸಂದರ್ಭದಲ್ಲಿ "ಮೂರು ವರ್ಷಗಳ ಹಿಂದೆ, ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು. ಮೇಜಿನ ಮೇಲೆ ಹಲವು ಆಯ್ಕೆಗಳಿದ್ದವು, ಆದರೆ ಉತ್ತಮ ಆಯ್ಕೆ NIELIT ಆಗಿತ್ತು. ನಾವು 500 ಉದ್ಯಮ ಪಾಲುದಾರರ ಪಟ್ಟಿಯನ್ನು ಸಿದ್ಧಪಡಿಸಬೇಕು – ಆದರೆ ಅವರು ಎಲೆಕ್ಟ್ರಾನಿಕ್ಸ್ ಅಥವಾ ಐಟಿಯಿಂದ ಮಾತ್ರ ಇರಬೇಕು  ಎಂಬುದ್ದೇನಿಲ್ಲ. ಈ ತಂತ್ರಜ್ಞಾನಗಳನ್ನು ಈಗ ಪ್ರತಿಯೊಂದು ವಲಯದಲ್ಲೂ ಬಳಸಲಾಗುತ್ತದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಬಳಕೆಯಲ್ಲಿರುವಲ್ಲೆಲ್ಲಾ, ಆ ನಿರ್ದಿಷ್ಟ ಬೇಡಿಕೆಗಳನ್ನು ಪೂರೈಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಮತ್ತು ಸಿದ್ಧಪಡಿಸುವುದು ನಮ್ಮ ಗುರಿಯಾಗಿರಬೇಕು. ಇಂದು, ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯ ಮಾತ್ರ ₹13 ಲಕ್ಷ ಕೋಟಿ ಮೌಲ್ಯದ ಉದ್ಯಮವಾಗಿ ಬೆಳೆದಿದೆ. NIELIT ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮೈಲಿಗಲ್ಲುಗಳನ್ನು ಸಾಧಿಸುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ." ಎಂದು ಶ್ರೀ ಅಶ್ವಿನಿ ವೈಷ್ಣವ್ ಅವರು ಹೇಳಿದರು.

ಈ ಒಪ್ಪಂದಗಳ ಮಹತ್ವವದ ಬಗ್ಗೆ ಒತ್ತಿ ಹೇಳಿದ ಕೇಂದ್ರ ಸಚಿವರು, ಈ ಒಪ್ಪಂದಗಳು ಉದ್ಯಮ-ಶೈಕ್ಷಣಿಕ ಸಹಯೋಗವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು . NIELIT ಟಾಪ್ 500 ಕಂಪನಿಗಳೊಂದಿಗೆ ಮಾತುಕತೆ ನಡೆಸಬೇಕು ಮತ್ತು "ನೀವೇ ಏನು ಕಲಿಸಬೇಕೆಂಬುದು ನಿರ್ಧರಿಸಿ" ಎಂಬ ಧ್ಯೇಯವಾಕ್ಯವನ್ನು ಅನುಸರಿಸುವ ಮೂಲಕ ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕಬೇಕು, ಇದರಿಂದ NIELIT ಕೋರ್ಸ್‌ಗಳನ್ನು ಉದ್ಯಮದ ಅವಶ್ಯಕತೆಗಳೊಂದಿಗೆ ಜೋಡಿಸಬಹುದು ಎಂದೂ ಅವರು ಒತ್ತಿ ಹೇಳಿದರು

ಗೌರವಾನ್ವಿತ ಪ್ರಧಾನಮಂತ್ರಿ ಅವರು ನಮ್ಮ ಮುಂದೆ ಒಂದು ದೊಡ್ಡ ಕನಸನ್ನು ನನಸಾಗಿಸುವ ಜವಾಬ್ದಾರಿಯನ್ನು ಇಟ್ಟಿದ್ದಾರೆ – ನಾವೋದ್ಯಮದೊಂದಿಗೆ ಸರಿತೂಗುವ ಡಿಜಿಟಲ್ ವಿಶ್ವವಿದ್ಯಾಲಯವನ್ನು ನಿರ್ಮಿಸುವುದು. ಸಾರಿಗೆ ವಲಯದಲ್ಲಿ, ಗತಿ ಶಕ್ತಿ ವಿಶ್ವವಿದ್ಯಾಲಯವು ಉದ್ಯಮದೊಂದಿಗೆ ನೇರವಾಗಿ ಸಂಪರ್ಕ ಹೊಂದಿದಂತೆಯೇ, NIELIT ಗಾಗಿಯೂ ಒಂದು ವೇದಿಕೆ ನಿರ್ಮಿಸುವ ಕನಸನ್ನು ನಾವು ಹೊಂದಿದ್ದೇವೆ: ಕೈಗಾರಿಕಾ ಅಗತ್ಯಗಳನ್ನು ಸುಧೀರ್ಘವಾಗಿ ಅರಿತ ಸಂಸ್ಥೆಯನ್ನಾಗಿ ಮಾಡುವುದು ಎಂದೂ ಅವರು ಹೇಳಿದರು.

MeitY ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್ ಅವರು, NDU ವೇದಿಕೆಯ ಉದ್ಘಾಟನೆ ಬಹಳ ಮಹತ್ವವಾದ ಘಟನೆ ಎಂದು ಬಣ್ಣಿಸಿದರು, ಇದಕ್ಕೆ ವ್ಯಾಪಕ ಶ್ರೇಣಿಯ ಕೋರ್ಸ್‌ಗಳ ಲಭ್ಯತೆಯೂ ಕಾರಣಎಂದು ಅವರು ಹೇಳಿದರು. ಉತ್ತಮ ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳ ಕೊರತೆಯಿರುವ ಅತ್ಯಂತ ದೂರದ ಪ್ರದೇಶಗಳಲ್ಲಿಯೂ NIELIT ಕೇಂದ್ರಗಳನ್ನು ಹೊಂದಿದೆ ಮತ್ತು ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ದೂರದ ಪ್ರದೇಶಗಳಿಗೆ ತಾಂತ್ರಿಕ ಶಿಕ್ಷಣವನ್ನು ಒದಗಿಸುವಲ್ಲಿ NIELIT ಪ್ರಮುಖ ಪಾತ್ರ ವಹಿಸುತ್ತಿದೆ. NDU ವೇದಿಕೆಯ ಉದ್ಘಾಟನೆಯೊಂದಿಗೆ, ಕೌಶಲ್ಯ ಮತ್ತು ಉದ್ಯೋಗಾವಕಾಶದ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ NIELIT ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಎಲೆಕ್ಟ್ರಾನಿಕ್ಸ್‌ನಲ್ಲಿ NIELIT ನೀಡುವ ಕೋರ್ಸ್‌ಗಳು ವಿನ್ಯಾಸ ಮತ್ತು ಉತ್ಪಾದನೆ ಎರಡರಲ್ಲೂ ಸಮತೋಲಿತವಾಗಿವೆ ಮತ್ತು ಈ ಆವೇಗದೊಂದಿಗೆ, ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ NIELIT ಪ್ರಮುಖ ಪಾತ್ರ ವಹಿಸಬಹುದು ಎಂದು ಅವರು ಶ್ಲಾಘಿಸಿದರು.

ಡಿಜಿಟಲ್ ಪ್ರಗತಿಯಲ್ಲಿ ರಾಷ್ಟ್ರವ್ಯಾಪಿ ಏಕತೆ: NIELIT ಆಚರಣೆಯಲ್ಲಿ ಭಾಗಿಯಾದ ಸಂಸದರು ಮತ್ತು ಶಾಸಕರು, ಈಶಾನ್ಯ ಸಂಪರ್ಕವನ್ನು ಉಲ್ಲೇಖಿಸಿದರು

ಈ ಕಾರ್ಯಕ್ರಮದಲ್ಲಿ ದೇಶಾದ್ಯಂತದ ವಿವಿಧ NIELIT ಕೇಂದ್ರಗಳ ಗೌರವಾನ್ವಿತ ಸಂಸದರು ಮತ್ತು ಶಾಸಕರು ಭಾಗವಹಿಸಿದ್ದರು. ಮುಜಫರ್‌ಪುರದ ಗೌರವಾನ್ವಿತ ಶಾಸಕರಾದ ಶ್ರೀ ವಿಜೇಂದ್ರ ಚೌಧರಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಕೇದಾರ್ ಪ್ರಸಾದ್ ಗುಪ್ತಾ; ಬಾಲಸೋರ್‌ನ ಗೌರವಾನ್ವಿತ ಸಂಸದರಾದ ಶ್ರೀ ಪ್ರತಾಪ್ ಚಂದ್ರ ಸಾರಂಗಿ; ಲುಂಗ್ಲೈ ಪಶ್ಚಿಮದ ಗೌರವಾನ್ವಿತ ಶಾಸಕರಾದ ಶ್ರೀ ಟಿ. ಲಾಲ್‌ಹ್ಲಿಂಪುಯಿಯಾ; ದಮನ್‌ನ ಗೌರವಾನ್ವಿತ ಸಂಸದರಾದ ಶ್ರೀ ಉಮೇಶ್ ಭಾಯ್ ಪಟೇಲ್; ಮತ್ತು ತಿರುಪತಿಯ ಗೌರವಾನ್ವಿತ ಸಂಸದರಾದ ಶ್ರೀ ಮದ್ದಿಲ ಗುರುಮೂರ್ತಿ ಮುಂತಾದ ಗಣ್ಯರು ವರ್ಚುವಲಾಗಿ  ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈಶಾನ್ಯ ಪ್ರಾಂತ್ಯವಾದ ಮಿಜೋರಾಂನ ಲುಂಗ್ಲೈ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ ಕೇಂದ್ರ ಸಚಿವರು, ಕೆಲವು ತಿಂಗಳ ಹಿಂದೆ ರಾಜ್ಯಕ್ಕೆ ರೈಲ್ವೆ ಸಂಪರ್ಕವನ್ನು ಕಲ್ಪಿಸಿದ ನಂತರ, ಈಗ ಈ ಪ್ರದೇಶವು ಡಿಜಿಟಲ್ ಸಂಪರ್ಕ ಹೊಂದಿದೆ ಎಂದು ತಿಳಿಸಿದರು.

ಭಾರತದಾದ್ಯಂತದಿಂದ NIELIT ವಿದ್ಯಾರ್ಥಿಗಳು, ಪ್ರಖ್ಯಾತ ಶಿಕ್ಷಣ ತಜ್ಞರು ಮತ್ತು ತಾಂತ್ರಿಕ ತಜ್ಞರು ಸೇರಿದಂತೆ, 1500ಕ್ಕೂ ಹೆಚ್ಚು ಜನರು ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ವಿವಿಧ ವಿಭಾಗಗಳಲ್ಲಿ NIELIT ನ ಕೌಶಲ್ಯ ಮತ್ತು ಕಲಿಕಾ ಮಾದರಿಗಳ ಸಾಮರ್ಥ್ಯವನ್ನು ಪ್ರದರ್ಶಿಸುವ ವಿಶೇಷ ಮಳಿಗೆಗಳನ್ನು ಸಹ ಒಳಗೊಂಡಿತ್ತು.

ಸಮಿತಿಯ ಚರ್ಚೆ

ಈ ಉದ್ಘಾಟನಾ ಕಾರ್ಯಕ್ರಮದಲ್ಲಿ "ಶಿಕ್ಷಣದ ಡಿಜಿಟಲೀಕರಣದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ" ಎಂಬ ವಿಷಯದ ಕುರಿತು ಚರ್ಚಾಗೋಷ್ಠಿ ನಡೆಯಿತು. ಈ ಚರ್ಚಾಗೋಷ್ಠಿಯಲ್ಲಿ ಇಂಟೆಲ್‌ನ ಹಿರಿಯ ನಿರ್ದೇಶಕರಾದ ಶ್ರೀಮತಿ ಶ್ವೇತಾ ಖುರಾನಾ; ಇನ್ಫೋಸಿಸ್‌ನ ಜವಾಬ್ದಾರಿಯುತ AI ಮುಖ್ಯಸ್ಥರಾದ ಶ್ರೀ ಆಶಿಶ್ ತಿವಾರಿ; ಡಾ. ಡಿ. ವೈ. ಪಾಟೀಲ್ ಪ್ರತಿಷ್ಠಾನದ ಅಧ್ಯಕ್ಷ (ಆರ್ & ಡಿ, ಐಆರ್) ಪ್ರೊ. ಪ್ರಭಾತ್ ರಂಜನ್; ಮೈಕ್ರೋಸಾಫ್ಟ್ ಕಾರ್ಪೊರೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಶಿಕ್ಷಣ ಉದ್ಯಮ ನಿರ್ದೇಶಕಿ ಡಾ. ವಿನ್ನಿ ಜೌಹರಿ; ಭಾರತ ಮತ್ತು ಜಾಗತಿಕ CTO AA2IT ಯ ಸಹ-ಸಂಸ್ಥಾಪಕ ಮತ್ತು ಎಂಡಿ ಡಾ. ರಿಷಿ ಮೋಹನ್ ಭಟ್ನಾಗರ್; ಬಾರ್ಕೊ ಎಲೆಕ್ಟ್ರಾನಿಕ್ಸ್‌ನ ಉಪಾಧ್ಯಕ್ಷ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿ ಮುಖ್ಯಸ್ಥ ಶ್ರೀ ಆಶಿಶ್ ಗುಪ್ತಾ ಭಾಗವಹಿಸಿದ್ದರು. ಕೌಶಲ್ಯ ಉಪಕ್ರಮಗಳನ್ನು ಉದ್ಯಮ ಮತ್ತು ಮಾರುಕಟ್ಟೆ ಪ್ರವೃತ್ತಿಗಳೊಂದಿಗೆ ಜೋಡಿಸುವುದು, WBL ಅವಕಾಶಗಳನ್ನು ವಿಸ್ತರಿಸುವುದು ಮತ್ತು ಭಾರತೀಯ ಯುವಕರ ಉದ್ಯೋಗಾವಕಾಶಕ್ಕಾಗಿ ಮಾರ್ಗಗಳನ್ನು ಬಲಪಡಿಸುವ ಕುರಿತು ಸಮಿತಿಯು ಚರ್ಚಿಸಿತು.

NIELIT ಡಿಜಿಟಲ್ ವಿಶ್ವವಿದ್ಯಾಲಯ ವೇದಿಕೆ

NIELIT ಡಿಜಿಟಲ್ ಯೂನಿವರ್ಸಿಟಿ ಪ್ಲಾಟ್‌ಫಾರ್ಮ್ (ndu.digital) ಅನ್ನು ವಿಶ್ವ ದರ್ಜೆಯ, ಎಲ್ಲರನ್ನೂ ಒಳಗೊಂಡ, ಕೈಗೆಟುಕುವ ಮತ್ತು ಉದ್ಯೋಗ-ಆಧಾರಿತ ಡಿಜಿಟಲ್ ಕಲಿಕಾ ಪರಿಸರ ವ್ಯವಸ್ಥೆಯನ್ನು ರಚಿಸುವ ದೃಷ್ಟಿಕೋನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಉತ್ತಮ ಗುಣಮಟ್ಟದ ಡಿಜಿಟಲ್ ಶಿಕ್ಷಣಕ್ಕೆ ಪ್ರವೇಶವನ್ನು ಪ್ರಜಾಪ್ರಭುತ್ವಗೊಳಿಸುವುದು, ಡಿಜಿಟಲ್ ಇಂಡಿಯಾ, NEP 2020 ಮತ್ತು ಸ್ಕಿಲ್ ಇಂಡಿಯಾದ ಗುರಿಗಳನ್ನು ಬೆಂಬಲಿಸುವುದು ಮತ್ತು ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್‌ಗಳು, ಸೈಬರ್ ಭದ್ರತೆ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕ ಕಾರ್ಯಪಡೆಯನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ. ಈ ವೇದಿಕೆಯು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ (ABC), ಉದ್ಯಮ-ಸಂಯೋಜಿತ ಕೋರ್ಸ್‌ಗಳು, ವರ್ಚುವಲ್ ಲ್ಯಾಬ್‌ಗಳು, ಬಹುಭಾಷಾ ಕಲಿಕೆ ಮತ್ತು ಪರಿಶೀಲಿಸಬಹುದಾದ ಡಿಜಿಟಲ್ ಪ್ರಮಾಣಪತ್ರಗಳ ಮೂಲಕ ಕ್ರೆಡಿಟ್ ವರ್ಗಾವಣೆಯೊಂದಿಗೆ NCVET-ಅನುಮೋದಿತ, NSQF-ಜೋಡಿಸಿದ ಕಾರ್ಯಕ್ರಮಗಳನ್ನು ನೀಡುತ್ತದೆ. ವೃತ್ತಿ ಮಾರ್ಗಗಳು, ಮಾರ್ಗದರ್ಶಕರು, ಸಂದರ್ಶನ ಸಿಮ್ಯುಲೇಟರ್‌ಗಳು ಮತ್ತು ಸಂವಾದಾತ್ಮಕ ಮಾಡ್ಯೂಲ್‌ಗಳಂತಹ ಕೃತಕ ಬುದ್ಧಿಮತ್ತೆ (AI) ಚಾಲಿತ ಪರಿಕರಗಳೊಂದಿಗೆ, ವೇದಿಕೆಯು 2030ರ ವೇಳೆಗೆ ಸುಮಾರು 40 ಲಕ್ಷ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಭಾರತದಾದ್ಯಂತ ಕಲಿಯಲು ಇಚ್ಛೆ ಇರುವ  ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಈ ವೇದಿಕೆ ಹೊಂದಿದೆ.

NIELIT ಬಗ್ಗೆ

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಧೀನದಲ್ಲಿರುವ ಸ್ವಾಯತ್ತ ವೈಜ್ಞಾನಿಕ ಸಂಸ್ಥೆಯಾದ ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (NIELIT), ಭಾರತದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಡಿಜಿಟಲ್ ಸಬಲೀಕರಣ ಕ್ಷೇತ್ರದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ತನ್ನ 56 NIELIT ಕೇಂದ್ರಗಳು, 750ಕ್ಕೂ ಅಧಿಕ ಮಾನ್ಯತೆ ಪಡೆದ ಸಂಸ್ಥೆಗಳು ಮತ್ತು 9,000ಕ್ಕೂ ಹೆಚ್ಚಿನ ಸೌಲಭ್ಯ ಕೇಂದ್ರಗಳ ಮೂಲಕ ದೇಶದಾದ್ಯಂತ ತನ್ನ ಬೃಹತ್ ಜಾಲವನ್ನು ಹೊಂದಿರುವ NIELIT, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಸಂವಹನ ತಂತ್ರಜ್ಞಾನ (E&ICT) ವಲಯದ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಕೌಶಲ್ಯಯುತರನ್ನಾಗಿಸಿ ಪ್ರಮಾಣೀಕರಿಸಿದೆ.

ಶಿಕ್ಷಣ ಸಚಿವಾಲಯವು NIELIT ಸಂಸ್ಥೆಗೆ ವಿಶಿಷ್ಟ ಶ್ರೇಣಿಯ ಅಡಿಯಲ್ಲಿ "ಪರಿಗಣಿತ ವಿಶ್ವವಿದ್ಯಾಲಯ" (Deemed to be University) ಎಂಬ ಗೌರವಸ್ಥಾನವನ್ನು ನೀಡಿದೆ. ಪಂಜಾಬ್‌ ನ ರೋಪರ್‌ ನಲ್ಲಿ ಮುಖ್ಯ ಕ್ಯಾಂಪಸ್ ಹಾಗೂ ಐಜ್ವಾಲ್, ಅಗರ್ತಲಾ, ಔರಂಗಾಬಾದ್, ಕ್ಯಾಲಿಕಟ್, ಗೋರಖ್‌ ಪುರ, ಇಂಫಾಲ್, ಇಟಾನಗರ್, ಅಜ್ಮೀರ್ (ಕೇಕ್ರಿ), ಕೊಹಿಮಾ, ಪಾಟ್ನಾ ಮತ್ತು ಶ್ರೀನಗರಗಳಲ್ಲಿ ಹನ್ನೊಂದು ಘಟಕ ಕ್ಯಾಂಪಸ್‌ ಗಳನ್ನು ಹೊಂದಿರುವ ಈ ಸಂಸ್ಥೆಯು, ಡಿಜಿಟಲ್ ತಂತ್ರಜ್ಞಾನಗಳನ್ನು ಸದುಪಯೋಗಪಡಿಸಿಕೊಂಡು E&ICT ಕ್ಷೇತ್ರದ ಉನ್ನತ ಶಿಕ್ಷಣದಲ್ಲಿ ಕ್ರಾಂತಿಯನ್ನುಂಟು ಮಾಡುವುದನ್ನು ತನ್ನ ಪರಮೋಚ್ಛ ಗುರಿಯಾಗಿಸಿಕೊಂಡಿದೆ.

****

 

 


(Release ID: 2174324) Visitor Counter : 5
Read this release in: Odia , English , Marathi , Gujarati