ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ದೇಶಾದ್ಯಂತ ನಾಗರಿಕ ವಲಯದಡಿ 5,862 ಕೋಟಿ ರೂಪಾಯಿಗೂ ಅಧಿಕ ಮೊತ್ತದ 57 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು (ಕೆ.ವಿ.ಎಸ್.) ತೆರೆಯಲು ಸಂಪುಟದ ಅನುಮೋದನೆ
Posted On:
01 OCT 2025 3:13PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಸಭೆಯು, ಕೇಂದ್ರ ಸರ್ಕಾರಿ ನೌಕರರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸಲು ದೇಶಾದ್ಯಂತ ನಾಗರಿಕ ವಲಯದ ಅಡಿಯಲ್ಲಿ 57 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು (ಕೆವಿ) ತೆರೆಯಲು ಅನುಮೋದನೆ ನೀಡಿದೆ.
2026-27ರಿಂದ ಒಂಬತ್ತು ವರ್ಷಗಳ ಅವಧಿಯಲ್ಲಿ 57 ಹೊಸ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಗೆ ಒಟ್ಟು ಅಂದಾಜು 5862.55 ಕೋಟಿ ರೂಪಾಯಿ (ಅಂದಾಜು) ನಿಧಿಯ ಅಗತ್ಯವಿದೆ. ಇದರಲ್ಲಿ ಬಂಡವಾಳ ವೆಚ್ಚದ ಅಂಶ 2585.52 ಕೋಟಿ ರೂಪಾಯಿ (ಅಂದಾಜು) ಮತ್ತು ಕಾರ್ಯಾಚರಣೆ ವೆಚ್ಚ 3277.03 ಕೋಟಿ ರೂಪಾಯಿ (ಅಂದಾಜು) ಸೇರಿದೆ. ನೂತನ ಶಿಕ್ಷಣ ನೀತಿ-2020ರ ಅನುಕರಣೀಯ ಶಾಲೆಗಳಾಗಿ, ಮೊದಲ ಬಾರಿಗೆ ಈ 57 ಕೆ.ವಿ.ಗಳನ್ನು ಮಂಜೂರು ಮಾಡಲಾಗಿದೆ. ಇವುಗಳಲ್ಲಿ 3 ವರ್ಷಗಳ -ಪೂರ್ವ-ಪ್ರಾಥಮಿಕ ಹಂತದ `ಬಾಲವಾಟಿಕಾ’ಗಳೂ ಸೇರಿವೆ.
ರಕ್ಷಣಾ ಮತ್ತು ಅರೆಸೈನಿಕ ಪಡೆಗಳು ಸೇರಿದಂತೆ ಕೇಂದ್ರ ಸರ್ಕಾರದ ವರ್ಗಾವಣೆ ಮಾಡಲಾಗದ ಮತ್ತು ವರ್ಗಾವಣೆ ಮಾಡಲಾಗುವಂತಹ ನೌಕರರ ಮಕ್ಕಳ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸಲು ದೇಶಾದ್ಯಂತ ಏಕರೂಪದ ಗುಣಮಟ್ಟದ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಕೇಂದ್ರೀಯ ವಿದ್ಯಾಲಯ ಯೋಜನೆಗೆ ಭಾರತ ಸರ್ಕಾರ 1962ರ ನವೆಂಬರ್‌ನಲ್ಲಿ ಅನುಮೋದನೆ ನೀಡಿತು. ಪರಿಣಾಮವಾಗಿ, "ಸೆಂಟ್ರಲ್ ಸ್ಕೂಲ್ಸ್ ಆರ್ಗನೈಸೇಶನ್" ಅನ್ನು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಒಂದು ಘಟಕವಾಗಿ ಪ್ರಾರಂಭಿಸಲಾಯಿತು.
ಹೊಸ ಕೇಂದ್ರೀಯ ವಿದ್ಯಾಲಯಗಳ ಆರಂಭವು ನಿರಂತರ ಪ್ರಕ್ರಿಯೆಯಾಗಿದೆ. ಸಚಿವಾಲಯ ಮತ್ತು `ಕೆವಿಎಸ್’ ನಿಯಮಿತವಾಗಿ ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲು ಕೇಂದ್ರ ಸರ್ಕಾರದ ಸಚಿವಾಲಯಗಳು / ಇಲಾಖೆಗಳು, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ವಿವಿಧ ಪ್ರಾಯೋಜಕ ಪ್ರಾಧಿಕಾರಗಳಿಂದ ಪ್ರಸ್ತಾವನೆಗಳನ್ನು ಸ್ವೀಕರಿಸುತ್ತವೆ. ಈ ಪ್ರಸ್ತಾಪಗಳನ್ನು ಸಂಬಂಧಪಟ್ಟ ಪ್ರಾಯೋಜಕ ಪ್ರಾಧಿಕಾರವು ಅಂದರೆ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳು / ಸಚಿವಾಲಯಗಳು / ಕೇಂದ್ರ ಸರ್ಕಾರದ ಇಲಾಖೆಗಳು ಪ್ರಾಯೋಜಿಸುತ್ತದೆ. ಇಲ್ಲಿಯವರೆಗೆ, ಮಾಸ್ಕೋ, ಕಠ್ಮಂಡು ಮತ್ತು ಟೆಹ್ರಾನ್ ಸೇರಿದಂತೆ ವಿದೇಶಗಳಲ್ಲಿ 03 ಕೇಂದ್ರೀಯ ವಿದ್ಯಾಲಯಗಳನ್ನು ಒಳಗೊಂಡಂತೆ ಒಟ್ಟು 1288 ಕೆ.ವಿ.ಗಳು ಕಾರ್ಯನಿರ್ವಹಿಸುತ್ತಿವೆ. 30.06.2025 ರಂತೆ ಒಟ್ಟು ವಿದ್ಯಾರ್ಥಿಗಳ ದಾಖಲಾತಿ 13.62 ಲಕ್ಷ (ಅಂದಾಜು) ಆಗಿದೆ.
ಈ ಹಿಂದೆ 85 ಕೇಂದ್ರೀಯ ವಿದ್ಯಾಲಯಗಳ ಮಂಜೂರಾತಿಯೂ ಸೇರಿದಂತೆ, ಈ ಪ್ರಸ್ತಾಪವು ಭಾರತದಾದ್ಯಂತ ಕೇಂದ್ರೀಯ ವಿದ್ಯಾಲಯಗಳ ವಿಸ್ತರಣೆಯನ್ನು ಸಮತೋಲನಗೊಳಿಸುವ ಮೂಲಕ ಈ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿದ ಬೇಡಿಕೆಗೆ ಸ್ಪಂದಿಸುತ್ತದೆ. ಗೃಹ ವ್ಯವಹಾರಗಳ ಸಚಿವಾಲಯ ಪ್ರಸ್ತಾಪಿಸಿದ 7 ಕೆ.ವಿ.ಗಳಿಗೆ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಪ್ರಸ್ತಾವಿತ ಉಳಿದ 50ಕ್ಕೆ ಸಂಪುಟ ಸಮಿತಿಯು ಅನುಮೋದನೆ ನೀಡಿದೆ. ಕೇಂದ್ರೀಯ ವಿದ್ಯಾಲಯಗಳ 57 ಹೊಸ ಪ್ರಸ್ತಾಪಗಳು ಹಿಂದುಳಿದ ಮತ್ತು ವ್ಯೂಹಾತ್ಮಕವಾಗಿ ಪ್ರಮುಖ ಪ್ರದೇಶಗಳನ್ನು ತಲುಪುವ ಬಲವಾದ ಬದ್ಧತೆಯನ್ನು ಸೂಚಿಸುತ್ತದೆ. ಈ ಪ್ರಸ್ತಾಪವು ಪೂರ್ವದಲ್ಲಿ ಬೆಳವಣಿಗೆಯನ್ನು ನೆಲೆಗೊಳಿಸುವುದರ ಜೊತೆಗೆ ಉತ್ತರ, ದಕ್ಷಿಣ ಮತ್ತು ಪಶ್ಚಿಮದಾದ್ಯಂತ ಸಮತೋಲಿತ ಪ್ರಾತಿನಿಧ್ಯವನ್ನು ಖಾತ್ರಿಪಡಿಸುತ್ತದೆ. ಆ ಮೂಲಕ ಒಳಗೊಳ್ಳುವಿಕೆ ಮತ್ತು ರಾಷ್ಟ್ರೀಯ ಏಕೀಕರಣವನ್ನು ಬಲಪಡಿಸುವ ಕಾರ್ಯವಿಧಾನವನ್ನು ಪ್ರದರ್ಶಿಸುತ್ತದೆ. ಆದರೆ ಡಿಸೆಂಬರ್ 2024 ರಲ್ಲಿ ಮಂಜೂರಾದ 85 ಕೇಂದ್ರೀಯ ವಿದ್ಯಾಲಯಗಳನ್ನು ಮುಂದುವರಿಸಿ, ಈ ಪ್ರಸ್ತಾವನೆಯು 17 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಈ 57 ಕೇಂದ್ರೀಯ ವಿದ್ಯಾಲಯಗಳ ಪೈಕಿ 20 ಕೇಂದ್ರೀಯ ವಿದ್ಯಾಲಯಗಳನ್ನು ಪ್ರಸ್ತುತ ಯಾವುದೇ ಕೇಂದ್ರೀಯ ವಿದ್ಯಾಲಯಗಳಿಲ್ಲದ ಜಿಲ್ಲೆಗಳಲ್ಲಿ ತೆರೆಯಲು ಉದ್ದೇಶಿಸಲಾಗಿದೆ. ಇದಲ್ಲದೆ, ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ 14 ಕೆ.ವಿ.ಗಳು, ಎಡಪಂಥೀಯ ಉಗ್ರವಾದ ಜಿಲ್ಲೆಗಳಲ್ಲಿ 4 ಕೆ.ವಿ.ಗಳು ಮತ್ತು ಈಶಾನ್ಯ ಪ್ರದೇಶ/ಗುಡ್ಡಗಾಡು ಪ್ರದೇಶಗಳಲ್ಲಿ 5 ಕೆ.ವಿ.ಗಳನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಡಿಸೆಂಬರ್ 2024 ರಲ್ಲಿ ನೀಡಲಾದ 85 ಕೆ.ವಿ.ಗಳ ಮಂಜೂರಾತಿಯ ಮುಂದುವರಿಕೆಯಾಗಿ, ಮಾರ್ಚ್ 2019 ರಿಂದ ವ್ಯಾಪ್ತಿಗೆ ಒಳಪಡದ ರಾಜ್ಯಗಳಿಗೆ ಆದ್ಯತೆ ನೀಡುವ ಮೂಲಕ ಇನ್ನೂ 57 ಹೊಸ ಕೆ.ವಿ.ಗಳನ್ನು ಅನುಮೋದಿಸಲಾಗಿದೆ.
ಯೋಜನೆಯ ಆಡಳಿತಾತ್ಮಕ ವಿನ್ಯಾಸದ ಭಾಗವಾಗಿ ಸುಮಾರು 1,520 ವಿದ್ಯಾರ್ಥಿಗಳ ಸಾಮರ್ಥ್ಯದ ಒಂದು ಪೂರ್ಣ ಪ್ರಮಾಣದ ಕೆ.ವಿ.ಯನ್ನು ನಡೆಸಲು ಸಂಘಟನೆ ನಿಗದಿಪಡಿಸಿದ ಮಾನದಂಡಗಳಿಗೆ ಸಮನಾದ ಸಂಖ್ಯೆಯಲ್ಲಿ ಹುದ್ದೆಗಳನ್ನು ಸೃಷ್ಟಿಸುವ ಅಗತ್ಯವಿದೆ. ಹೀಗಾಗಿ 86,640 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಚಾಲ್ತಿಯಲ್ಲಿರುವ ಮಾನದಂಡಗಳ ಪ್ರಕಾರ, ಪೂರ್ಣ ಪ್ರಮಾಣದ ಕೆ.ವಿ. (ಬಾಲವಾಟಿಕಾದಿಂದ ಹನ್ನೆರಡನೇ ತರಗತಿಯವರೆಗೆ) 81 ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಮತ್ತು ಅದರಂತೆ, 57 ಹೊಸ ಕೆ.ವಿ.ಗಳ ಅನುಮೋದನೆಯೊಂದಿಗೆ, ಒಟ್ಟು 4617 ನೇರ ಶಾಶ್ವತ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು. ಎಲ್ಲಾ ಕೇಂದ್ರೀಯ ವಿದ್ಯಾಲಯಗಳಲ್ಲಿ ವಿವಿಧ ಸೌಲಭ್ಯಗಳ ವರ್ಧನೆಗೆ ಸಂಬಂಧಿಸಿದ ನಿರ್ಮಾಣ ಮತ್ತು ಸಂಬಂಧಿತ ಚಟುವಟಿಕೆಗಳು ಅನೇಕ ನುರಿತ ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ.
ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಅನುಸಾರವಾಗಿ, 913 ಕೆ.ವಿ.ಗಳನ್ನು `ಪಿಎಂ ಶ್ರೀ’ ಶಾಲೆಗಳಾಗಿ ನಿಯೋಜಿಸಲಾಗಿದೆ. ಇದು `ಎನ್ಇಪಿ-2020ರ ಅನುಷ್ಠಾನವನ್ನು ಸೂಚಿಸುತ್ತದೆ. ಗುಣಮಟ್ಟದ ಬೋಧನೆ, ನವೀನ ಶಿಕ್ಷಣ ಮತ್ತು ನವೀಕೃತ ಮೂಲಸೌಕರ್ಯಗಳಿಂದಾಗಿ ಕೆ.ವಿ.ಗಳು ಹೆಚ್ಚು ಬೇಡಿಕೆಯಿರುವ ಶಾಲೆಗಳಾಗಿವೆ. ಪ್ರತಿ ವರ್ಷ ಕೇಂದ್ರೀಯ ವಿದ್ಯಾಲಯಗಳಲ್ಲಿ ಬಾಲವಾಟಿಕಾ / ಒಂದನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ನಿರಂತರ ಹೆಚ್ಚಳ ಕಂಡುಬಂದಿದೆ ಮತ್ತು ಸಿಬಿಎಸ್ಇ ನಡೆಸುವ ಬೋರ್ಡ್ ಪರೀಕ್ಷೆಗಳಲ್ಲಿ ಕೆ.ವಿ.ಗಳ ವಿದ್ಯಾರ್ಥಿಗಳ ಸಾಧನೆಯು ಎಲ್ಲಾ ಶೈಕ್ಷಣಿಕ ವ್ಯವಸ್ಥೆಗಳಿಗಿಂತ ಸತತವಾಗಿ ಅತ್ಯುತ್ತಮವಾಗಿದೆ.
ಇದರೊಂದಿಗೆ, ಕೇಂದ್ರೀಯ ವಿದ್ಯಾಲಯಗಳನ್ನು ಮಾದರಿ ಶಾಲೆಗಳಾಗಿ ಪರಿಗಣಿಸುವ ಈ ಪ್ರಸ್ತಾಪವು ಭಾರತ ಸರ್ಕಾರದ ಹಿಂದಿನ ಮಂಜೂರಾತಿಗಳಲ್ಲಿ ಪ್ರಾತಿನಿಧ್ಯವಿಲ್ಲದ / ಕಡಿಮೆ ಪ್ರಾತಿನಿಧ್ಯವಿರುವ ರಾಜ್ಯಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸುತ್ತದೆ. ಜೊತೆಗೆ ಹೆಚ್ಚಿನ ಸಂಖ್ಯೆಯ ಕೇಂದ್ರ ಸರ್ಕಾರಿ ನೌಕರರನ್ನು ಹೊಂದಿರುವ ಹೆಚ್ಚಿನ ಬೇಡಿಕೆಯ ಪ್ರದೇಶಗಳಲ್ಲಿ, ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಹಾಗೂ ಭೌಗೋಳಿಕವಾಗಿ ಸವಾಲಿನ ಮತ್ತು ಸಾಮಾಜಿಕವಾಗಿ ನಿರ್ಣಾಯಕ ಪ್ರದೇಶಗಳಿಗೆ ಕೆವಿಎಸ್ ಜಾಲವನ್ನು ವಿಸ್ತರಿಸುತ್ತದೆ.
*****
(Release ID: 2173633)
Visitor Counter : 26
Read this release in:
Bengali-TR
,
Odia
,
English
,
Urdu
,
Hindi
,
Marathi
,
Assamese
,
Bengali
,
Punjabi
,
Gujarati
,
Tamil
,
Telugu
,
Malayalam