ರೈಲ್ವೇ ಸಚಿವಾಲಯ
azadi ka amrit mahotsav

ಬ್ರಹ್ಮಪುರ (ಒಡಿಶಾ) ಮತ್ತು ಉದ್ನಾ (ಗುಜರಾತ್) ನಡುವಿನ ‘ಅಮೃತ್ ಭಾರತ್ ಎಕ್ಸ್ ಪ್ರೆಸ್’ಗೆ ಗೌರವಾನ್ವಿತ ಪ್ರಧಾನಮಂತ್ರಿಯವರು  ಚಾಲನೆ ನೀಡಿದರು


ಸೂರತ್ ನಲ್ಲಿ ಬುಲೆಟ್ ರೈಲು ನಿಲ್ದಾಣದ ಕಾಮಗಾರಿಯನ್ನು ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಪರಿಶೀಲಿಸಿದರು

Posted On: 27 SEP 2025 6:03PM by PIB Bengaluru

ಭಾರತದ ವಜ್ರ ಮತ್ತು ಜವಳಿ ಕೇಂದ್ರ ಎಂದು ಕರೆಯಲ್ಪಡುವ ಸೂರತ್, ಪ್ರಯಾಣಿಕ ಮತ್ತು ಸರಕು ಸಾಗಣೆಯಲ್ಲಿ ತ್ವರಿತ ಬೆಳವಣಿಗೆಯನ್ನು ಕಾಣುತ್ತಿದೆ. ಗುಜರಾತಿನ ಭವಿಷ್ಯದ ಬೇಡಿಕೆಗಳನ್ನು ಪೂರೈಸಲು, ಭಾರತೀಯ ರೈಲ್ವೆ ಸಮಗ್ರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳಲ್ಲಿ ಸೂರತ್ ಮತ್ತು ಉದ್ನಾದಲ್ಲಿನ ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು ಹೊಸ ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲುಗಳ ಪರಿಚಯ ಸೇರಿವೆ.

ಒಡಿಶಾ ಮತ್ತು ಗುಜರಾತ್ ನಡುವಿನ ಅಮೃತ್ ಭಾರತ್ ಎಕ್ಸ್ ಪ್ರೆಸ್

ಇಂದು, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಬ್ರಹ್ಮಪುರ (ಒಡಿಶಾ) ಮತ್ತು ಉದ್ನಾ (ಗುಜರಾತ್) ನಡುವಿನ ʻಅಮೃತ್ ಭಾರತ್ ಎಕ್ಸ್ ಪ್ರೆಸ್ʼಗೆ ಚಾಲನೆ ನೀಡಿದರು. ಇದು ಕೈಗೆಟುಕುವ ದರದ, ಸುರಕ್ಷಿತ ಮತ್ತು ದೀರ್ಘ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ ಹೊಸ ಪೀಳಿಗೆಯ ರೈಲು.

ಅಮೃತ್ ಭಾರತ್ ಎಕ್ಸ್ ಪ್ರೆಸ್ ನ ವೈಶಿಷ್ಟ್ಯಗಳು:

  • ಸುಧಾರಿತ ವಿನ್ಯಾಸದೊಂದಿಗೆ ಆಧುನಿಕ ಎರಗೊನೋಮಿಕ್ ಶೈಲಿಯ ಆಸನಗಳು 
  • ತಡೆರಹಿತ ಚಲನೆಗಾಗಿ ಸಂಪೂರ್ಣವಾಗಿ ಸಂಪರ್ಕ ಹೊಂದಿರುವ ಬೋಗಿಗಳು
  • ಹೆಚ್ಚಿನ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸುವ ಅವಳಿ-ಎಂಜಿನ್ ಸಂರಚನೆ

ವಂದೇ ಭಾರತ್ ಮಧ್ಯಮ ವರ್ಗದವರಿಗೆ ಪ್ರಯಾಣವನ್ನು ಮರು ವ್ಯಾಖ್ಯಾನಿಸಿದಂತೆಯೇ, ಅಮೃತ್ ಭಾರತ್ ಎಕ್ಸ್ಪ್ರೆಸ್ ಕೈಗೆಟುಕುವ ದರದಲ್ಲಿ ಇದೇ ರೀತಿಯ ಸೌಲಭ್ಯಗಳನ್ನು ಒದಗಿಸುತ್ತದೆ. ಇಂದು ಚಾಲನೆ ನೀಡಲಾದ ರೈಲು ಸೇವೆಯು ಪ್ರತಿ ಪ್ರಯಾಣಕ್ಕೆ ರೂ 495 (ಸಾಮಾನ್ಯ ವರ್ಗ) ಮತ್ತು ರೂ 795 (ಏಸಿ ಅಲ್ಲದ ಸ್ಲೀಪರ್ ವರ್ಗ) ದರದಲ್ಲಿ ಲಭ್ಯವಿರುತ್ತದೆ.

ಈ ರೈಲು 5 ರಾಜ್ಯಗಳ (ಗುಜರಾತ್, ಮಹಾರಾಷ್ಟ್ರ, ಛತ್ತೀಸ್‌ಗಢ, ಆಂಧ್ರಪ್ರದೇಶ ಮತ್ತು ಒಡಿಶಾ) 22 ಜಿಲ್ಲೆಗಳಲ್ಲಿ ಹರಡಿರುವ 1700 ಕಿ.ಮೀ.ಗಿಂತ ಹೆಚ್ಚು ದೂರವನ್ನು ಕ್ರಮಿಸುತ್ತದೆ.

ಈ ಹೊಸ ಸಂಪರ್ಕದ ಮೂಲಕ, ಯುವಕರು ಸೇರಿದಂತೆ ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಜವಳಿ, ವಜ್ರಗಳು ಮತ್ತು ಸಂಬಂಧಿತ ವಲಯಗಳಲ್ಲಿ ಹೆಚ್ಚಿನ ಮಾರ್ಗಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈ ರೈಲು ಮಾ ತಾರಾ ತಾರಿಣಿ ಶಕ್ತಿಪೀಠಕ್ಕೆ ಹೋಗುವ ಯಾತ್ರಾರ್ಥಿಗಳಿಗೂ ಪ್ರಯೋಜನವನ್ನು ನೀಡುತ್ತದೆ.

ಗುಜರಾತ್ ನಲ್ಲಿ ನಿಲ್ದಾಣ ಪುನರಾಭಿವೃದ್ಧಿ ಕಾರ್ಯ

ಭವಿಷ್ಯದ 50 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಗುಜರಾತ್ ನ ನಿಲ್ದಾಣಗಳನ್ನು ಮಾಸ್ಟರ್ ಡೆವಲಪ್ ಮೆಂಟ್ ಯೋಜನೆಯ ಭಾಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತೀಯ ರೈಲ್ವೆಯು ಉಧ್ನಾ, ಸೂರತ್, ಬಿಲಿಮೋರಾ, ಸಚಿನ್ ಮುಂತಾದ ರೈಲು ನಿಲ್ದಾಣಗಳ ಸಮಗ್ರ ಪುನರಾಭಿವೃದ್ಧಿಯನ್ನು ಕೈಗೊಳ್ಳುತ್ತಿದೆ.

ಕೇಂದ್ರ ಸಚಿವರು ಇಂದು ಉಧ್ನಾ ನಿಲ್ದಾಣದ ಪುನರಾಭಿವೃದ್ಧಿ ಕಾರ್ಯವನ್ನು ಪರಿಶೀಲಿಸಿದರು. ನಿಲ್ದಾಣವನ್ನು ಆಧುನಿಕ ಮಾರ್ಗಗಳಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು. ಪ್ಲಾಟ್ ಫಾರ್ಮ್ ಗಳು ಮತ್ತು ಪಿಟ್ ಲೈನ್ ಗಳ ಸಾಮರ್ಥ್ಯವನ್ನು ವಿಸ್ತರಿಸುವತ್ತ ವಿಶೇಷ ಒತ್ತು ನೀಡಲಾಗಿದೆ.

ಇದಕ್ಕೂ ಮೊದಲು, ಕೇಂದ್ರ ಸಚಿವರು ಸೂರತ್ ಹೈ ಸ್ಪೀಡ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ನಿರ್ಮಾಣ ಕಾರ್ಯಗಳನ್ನು ಪರಿಶೀಲಿಸಿದರು. ಸೂರತ್-ಬಿಲ್ಲಿಮೋರಾ ನಡುವಿನ ಕೆಲಸ ವೇಗವಾಗಿ ನಡೆಯುತ್ತಿದೆ. ನಿಲ್ದಾಣದ ಸಿವಿಲ್ ಕೆಲಸವು ಪೂರ್ಣಗೊಂಡಿದೆ ಮತ್ತು ಉಪಯುಕ್ತತೆ ಕೆಲಸಗಳು ನಡೆಯುತ್ತಿವೆ.

ಇಂದಿನ ಪರಿಶೀಲನೆಯ ಸಮಯದಲ್ಲಿ, ಈ ಯೋಜನೆಯಲ್ಲಿ ಆಧುನಿಕ ಮತ್ತು ನವೀನ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ಸಚಿವರು ನಮಗೆ ತಿಳಿಸಿದರು.

ಹಳಿಗಳ ಕೆಲಸವು ಗಮನಾರ್ಹ ವೇಗದಲ್ಲಿ ಪ್ರಗತಿಯಲ್ಲಿದೆ. ಸೂರತ್ ನಿಲ್ದಾಣದಲ್ಲಿ ಮೊದಲ  ಟರ್ನ್-ಔಟನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು. ಟರ್ನ್-ಔಟ್  ರೈಲ್ವೆ ಹಳಿಗಳ ನಿರ್ಣಾಯಕ ಜಂಕ್ಷನ್ ಆಗಿದೆ. ಈ ವೈಶಿಷ್ಟ್ಯವು ಹೈ-ಸ್ಪೀಡ್ ರೈಲುಗಳ  ಬೇಕಾದಂತೆ ತಿರುಗುವ ಮತ್ತು ಸುಗಮ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುತ್ತದೆ.

ಹಳಿಗಳು ರೋಲರ್ ಬೇರಿಂಗ್ಗಳನ್ನು ಸಹ ಒಳಗೊಂಡಿದ್ದು, ಬುಲೆಟ್ ರೈಲು ಅದರ ಮೇಲೆ ಹೆಚ್ಚಿನ ವೇಗದಲ್ಲಿ ಚಲಿಸುವಾಗ ಅವುಗಳ ಸುಗಮ ಮತ್ತು ಸುರಕ್ಷಿತ ಚಲನೆಗೆ ಅವಕಾಶ ಮಾಡಿಕೊಡುತ್ತದೆ . ಇದಲ್ಲದೆ, ಹಳಿಗಳ ಮೇಲಿನ ಸ್ಲೀಪರ್ ಗಳನ್ನು ಕಾಂಕ್ರೀಟ್ ಬದಲಿಗೆ ಸಂಯೋಜಿತ ವಸ್ತುಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದು ಹೆಚ್ಚಿನ ಬಾಳಿಕೆ, ಕಡಿಮೆ ನಿರ್ವಹಣೆ ಮತ್ತು ಹೆಚ್ಚಿನ ವೇಗದಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ.

ಪ್ರಯಾಣಿಕರ ಸೌಕರ್ಯವನ್ನು ಮತ್ತಷ್ಟು ಸುಧಾರಿಸಲು ಮತ್ತು ಪರಿಸರದಲ್ಲಿನ ಶಬ್ದವನ್ನು ಕಡಿಮೆ ಮಾಡಲು, ಡ್ಯಾಂಪರ್ಗಳ ರೂಪದಲ್ಲಿ  ಕಂಪನ ಹೀರಿಕೊಳ್ಳುವ ಕಾರ್ಯವಿಧಾನವನ್ನು ಪರಿಚಯಿಸಲಾಗಿದೆ. ಇವು ಶಬ್ದ ಮತ್ತು ರಭಸದ ಕಂಪನವನ್ನು ಹೀರಿಕೊಳ್ಳುತ್ತವೆ.

ಈ ಯೋಜನೆಯೊಂದಿಗೆ ನಾವು ಸೂರತ್ನಿಂದ ಮುಂಬೈಗೆ ಒಂದು ಗಂಟೆಯಲ್ಲಿ ತಲುಪಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ನಿಲ್ದಾಣದ ಪುನರಾಭಿವೃದ್ಧಿ ಮತ್ತು ಹಳಿ ಹಾಕುವಿಕೆಯು ಸ್ಥಿರವಾದ ವೇಗದಲ್ಲಿ ಪ್ರಗತಿಯಲ್ಲಿದೆ. ಹೈ-ಸ್ಪೀಡ್ ರೈಲು ಯೋಜನೆಯು ಅಂತಿಮವಾಗಿ ಸಂಪರ್ಕವನ್ನು ಪರಿವರ್ತಿಸುತ್ತದೆ ಮತ್ತು ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಅಹಮದಾಬಾದ್ ಮತ್ತು ಮುಂಬೈನ ಸಂಪೂರ್ಣ ಪ್ರದೇಶವು ಒಂದು ಆರ್ಥಿಕ ಕಾರಿಡಾರ್ ಆಗಲಿದೆ.

ಈ ಯೋಜನೆಯು ರೈಲ್ವೆ ತಂತ್ರಜ್ಞಾನ ಮತ್ತು ಪ್ರಯಾಣಿಕರ ಅನುಭವದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ.

 

*****
 


(Release ID: 2172471) Visitor Counter : 10
Read this release in: English , Urdu , Hindi , Gujarati