ಗೃಹ ವ್ಯವಹಾರಗಳ ಸಚಿವಾಲಯ
ಲಡಾಖ್ ಕುರಿತು ಪತ್ರಿಕಾ ಪ್ರಕಟಣೆ
Posted On:
24 SEP 2025 10:03PM by PIB Bengaluru
- ಲಡಾಖ್‌ಗೆ 6ನೇ ಶೆಡ್ಯೂಲ್ ಮತ್ತು ರಾಜ್ಯ ಸ್ಥಾನಮಾನದ ಬೇಡಿಕೆಯನ್ನು ಮುಂದಿಟ್ಟುಕೊಂಡು ಶ್ರೀ ಸೋನಮ್ ವಾಂಗ್ಚುಕ್ ಅವರು 10-09-2025 ರಂದು ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಭಾರತ ಸರ್ಕಾರವು ಅಪೆಕ್ಸ್ ಸಂಸ್ಥೆಯಾದ ಲೇಹ್ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ ಜೊತೆ ಅದೇ ವಿಷಯಗಳ ಬಗ್ಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಉನ್ನತಾಧಿಕಾರದ ಸಮಿತಿಯು ಔಪಚಾರಿಕ ಚಾನಲ್ ಮತ್ತು ಉಪ-ಸಮಿತಿಯ ಮೂಲಕ ಹಾಗು ನಾಯಕರೊಂದಿಗೆ ಬಹು ಅನೌಪಚಾರಿಕ ಸಭೆಗಳ ಮೂಲಕ ಗೆ ಸರಣಿ ಸಭೆಗಳನ್ನು ನಡೆಸಿದೆ.
- ಈ ಕಾರ್ಯವಿಧಾನದ ಮೂಲಕ ಕೈಗೊಂಡ ಸಂವಾದ ಪ್ರಕ್ರಿಯೆಯು ಲಡಾಖ್ ಪರಿಶಿಷ್ಟ ಬುಡಕಟ್ಟು ಜನಾಂಗದವರಿಗೆ ಮೀಸಲಾತಿಯನ್ನು 45% ರಿಂದ 84% ಕ್ಕೆ ಹೆಚ್ಚಿಸುವ ಮೂಲಕ, ಮಂಡಳಿಗಳಲ್ಲಿ 1/3 ಮಹಿಳಾ ಮೀಸಲಾತಿಯನ್ನು ಒದಗಿಸುವ ಮೂಲಕ ಮತ್ತು ಭೋತಿ ಹಾಗು ಪುರ್ಗಿಯನ್ನು ಅಧಿಕೃತ ಭಾಷೆಗಳಾಗಿ ಘೋಷಿಸುವ ಮೂಲಕ ಅಸಾಧಾರಣ ಫಲಿತಾಂಶಗಳನ್ನು ನೀಡಿದೆ. ಈ ಪ್ರಕ್ರಿಯೆಯೊಂದಿಗೆ 1800 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯೂ ಪ್ರಾರಂಭವಾಯಿತು.
- ಆದಾಗ್ಯೂ, ಕೆಲವು ರಾಜಕೀಯ ಪ್ರೇರಿತ ವ್ಯಕ್ತಿಗಳು ಎಚ್.ಪಿ.ಸಿ. ಅಡಿಯಲ್ಲಿ ಸಾಧಿಸಿದ ಪ್ರಗತಿಯಿಂದ ಅತೃಪ್ತರಾಗಿ ಸಂವಾದ ಪ್ರಕ್ರಿಯೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ.
- ಉನ್ನತಾಧಿಕಾರ ಸಮಿತಿಯ ಮುಂದಿನ ಸಭೆಯನ್ನು ಅಕ್ಟೋಬರ್ 6 ರಂದು ನಿಗದಿಪಡಿಸಲಾಗಿದೆ ಮತ್ತು ಸೆಪ್ಟೆಂಬರ್ 25 ಮತ್ತು 26 ರಂದು ಲಡಾಖ್ ನ ನಾಯಕರೊಂದಿಗೆ ಸಭೆಗಳನ್ನು ನಡೆಸಲು ಯೋಜಿಸಲಾಗಿದೆ.
- ಶ್ರೀ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬೇಡಿಕೆಗಳು ಎಚ್.ಪಿ.ಸಿ. ಯಲ್ಲಿ ಚರ್ಚೆಯ ಅವಿಭಾಜ್ಯ ಅಂಗವಾಗಿವೆ. ಅನೇಕ ನಾಯಕರು ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರೂ ಸಹ, ಅವರು ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದರು ಮತ್ತು ಅರಬ್ ಸ್ಪ್ರಿಂಗ್ ಶೈಲಿಯ ಪ್ರತಿಭಟನೆಯ ಪ್ರಚೋದನಕಾರಿ ಉಲ್ಲೇಖ ಹಾಗು ನೇಪಾಳದಲ್ಲಿ ಜೆನ್ ಝಡ್ ಪ್ರತಿಭಟನೆಗಳ ಉಲ್ಲೇಖಗಳ ಮೂಲಕ ಜನರನ್ನು ದಾರಿ ತಪ್ಪಿಸಿದರು.
- ಸೆಪ್ಟೆಂಬರ್ 24 ರಂದು, ಬೆಳಿಗ್ಗೆ 11.30 ರ ಸುಮಾರಿಗೆ, ಅವರ ಪ್ರಚೋದನಕಾರಿ ಭಾಷಣಗಳಿಂದ ಪ್ರಚೋದಿಸಲ್ಪಟ್ಟ ಗುಂಪೊಂದು ಉಪವಾಸ ಸತ್ಯಾಗ್ರಹದ ಸ್ಥಳದಿಂದ ಹೊರಬಂದು, ರಾಜಕೀಯ ಪಕ್ಷದ ಕಚೇರಿ ಮತ್ತು ಸಿ.ಇ.ಸಿ ಲೇಹ್ ನ ಸರ್ಕಾರಿ ಕಚೇರಿಯ ಮೇಲೆ ದಾಳಿ ಮಾಡಿತು. ಅವರು ಈ ಕಚೇರಿಗಳಿಗೂ ಬೆಂಕಿ ಹಚ್ಚಿದರು, ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ಮಾಡಿದರು ಮತ್ತು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದರು. ಅಶಿಸ್ತಿನ ಗುಂಪೊಂದು ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಿತು, ಇದರಲ್ಲಿ 30ಕ್ಕೂ ಹೆಚ್ಚು ಪೊಲೀಸ್/ಸಿ.ಆರ್.ಪಿ.ಎಫ್ ಸಿಬ್ಬಂದಿ ಗಾಯಗೊಂಡರು. ಗುಂಪು ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವುದನ್ನು ಮುಂದುವರೆಸಿತು ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮುಂದುವರೆಸಿತು. ಆತ್ಮರಕ್ಷಣೆಗಾಗಿ, ಪೊಲೀಸರು ಗುಂಡು ಹಾರಿಸಬೇಕಾಯಿತು, ದುರದೃಷ್ಟವಶಾತ್ ಕೆಲವು ಸಾವುನೋವುಗಳು ವರದಿಯಾಗಿವೆ.
- ಮುಂಜಾನೆ ನಡೆದ ದುರದೃಷ್ಟಕರ ಘಟನೆಗಳನ್ನು ಹೊರತುಪಡಿಸಿ, ಸಂಜೆ 4 ಗಂಟೆಯ ಹೊತ್ತಿಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
- ಶ್ರೀ ಸೋನಮ್ ವಾಂಗ್ಚುಕ್ ತಮ್ಮ ಪ್ರಚೋದನಕಾರಿ ಹೇಳಿಕೆಗಳ ಮೂಲಕ ಗುಂಪನ್ನು ಪ್ರಚೋದಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಹಿಂಸಾತ್ಮಕ ಬೆಳವಣಿಗೆಗಳ ನಡುವೆ, ಅವರು ತಮ್ಮ ಉಪವಾಸವನ್ನು ಹಿಂತೆಗೆದುಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸಲು ಗಂಭೀರ ಪ್ರಯತ್ನಗಳನ್ನು ಮಾಡದೆ ಆಂಬ್ಯುಲೆನ್ಸ್ ನಲ್ಲಿ ತಮ್ಮ ಗ್ರಾಮಕ್ಕೆ ತೆರಳಿದರು.
- ಸಾಕಷ್ಟು ಸಾಂವಿಧಾನಿಕ ರಕ್ಷಣೆಗಳನ್ನು ಒದಗಿಸುವ ಮೂಲಕ ಲಡಾಖ್ ಜನರ ಆಕಾಂಕ್ಷೆಗಳಿಗೆ ಸರ್ಕಾರ ಬದ್ಧವಾಗಿದೆ.
- ಜನರು ಹಳೆಯ ಮತ್ತು ಪ್ರಚೋದನಕಾರಿ ವೀಡಿಯೊಗಳನ್ನು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು ಎಂದು ಸಹ ವಿನಂತಿಸಲಾಗಿದೆ.
*****
(Release ID: 2170952)
Visitor Counter : 16