ಆಯುಷ್
ಆಯುಷ್ ಸಚಿವಾಲಯದಿಂದ "ಜನರು ಮತ್ತು ಗ್ರಹಕ್ಕಾಗಿ ಆಯುರ್ವೇದ" ಧ್ಯೇಯವಾಕ್ಯದೊಂದಿಗೆ ಗೋವಾದ ಎಐಐಎಯಲ್ಲಿ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ
ಆಯುರ್ವೇದ ಆಧಾರಿತ ಸ್ವಾಸ್ಥ್ಯ ಪ್ರವಾಸೋದ್ಯಮದ ಜಾಗತಿಕ ಕೇಂದ್ರವಾಗುವ ಸಾಮರ್ಥ್ಯವನ್ನು ಗೋವಾ ಹೊಂದಿದೆ: ಗೋವಾ ರಾಜ್ಯಪಾಲರಾದ ಶ್ರೀ ಅಶೋಕ್ ಗಜಪತಿ ರಾಜು
ಸ್ಥೂಲಕಾಯ ಮತ್ತು ಮಧುಮೇಹದಂತಹ ಆಧುನಿಕ ಜೀವನಶೈಲಿಯ ಅಸ್ವಸ್ಥತೆಗಳಿಗೆ ಆಯುರ್ವೇದವೇ ಮದ್ದು: ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್
ಆಯುರ್ವೇದ ದಿನವನ್ನು ಸೆಪ್ಟೆಂಬರ್ 23 ರಂದು ಆಚರಿಸುವುದು ಪ್ರಕೃತಿಯ ಸಮತೋಲನಕ್ಕೆ ಹೊಂದಿಕೆಯಾಗಿದ್ದು, ಮೂಲ ಆಯುರ್ವೇದ ತತ್ವಗಳ ಪ್ರತಿಬಿಂಬವಾಗಿದೆ: ಶ್ರೀ ಪ್ರತಾಪ್ ರಾವ್ ಜಾಧವ್
ಈಗಿನ ಆರೋಗ್ಯ ಮತ್ತು ಪರಿಸರದ ಬಿಕ್ಕಟ್ಟುಗಳಿಗೆ ಆಯುರ್ವೇದದಿಂದ ಕಾಲಾತೀತ ಪರಿಹಾರ: ಕೇಂದ್ರ ಆರೋಗ್ಯ ಮತ್ತು ಪರಿಸರ ಖಾತೆ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ನಾಯಕ್
ಆಯುರ್ವೇದ ಮತ್ತು ಸಂಬಂಧಿತ ವಿಜ್ಞಾನಗಳಿಗೆ ಕೊಡುಗೆ ನೀಡಿರುವ ಶ್ರೇಷ್ಠರಿಗೆ 2025ರ ರಾಷ್ಟ್ರೀಯ ಧನ್ವಂತರಿ ಆಯುರ್ವೇದ ಪ್ರಶಸ್ತಿ ಪ್ರದಾನ
Posted On:
23 SEP 2025 2:08PM by PIB Bengaluru
ಗೋವಾದ ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ (AIIA) 10ನೇ ರಾಷ್ಟ್ರೀಯ ಆಯುರ್ವೇದ ದಿನವನ್ನು ಆಯುಷ್ ಸಚಿವಾಲಯದ ವತಿಯಿಂದ ಇಂದು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗೋವಾ ರಾಜ್ಯಪಾಲರಾದ ಶ್ರೀ ಅಶೋಕ್ ಗಜಪತಿ ರಾಜು, ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವರಾದ (ಸ್ವತಂತ್ರ ಖಾತೆ) ಶ್ರೀ ಪ್ರತಾಪ್ ರಾವ್ ಜಾಧವ್, ಕೇಂದ್ರ ವಿದ್ಯುತ್ ಹಾಗೂ ನವ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುಸ್ಥಿರತೆ ಮತ್ತು ನೈಸರ್ಗಿಕ ಜೀವನದಲ್ಲಿ ಬೇರೂರಿರುವ ಆರೋಗ್ಯ ಮತ್ತು ಸೌಖ್ಯದ ಸಮಗ್ರ ವಿಧಾನವಾಗಿ ಆಯುರ್ವೇದವನ್ನು ಉತ್ತೇಜಿಸಲು ಸಚಿವಾಲಯದ ನಿರಂತರ ಪ್ರಯತ್ನಗಳ ಮಹತ್ವದ ಮೈಲಿಗಲ್ಲನ್ನು ಈ ಆಚರಣೆಗಳು ಗುರುತಿಸಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಗೋವಾ ರಾಜ್ಯಪಾಲರಾದ ಶ್ರೀ ಅಶೋಕ್ ಗಜಪತಿ ರಾಜು ಅವರು, ಒಂದು ದಶಕಕ್ಕೂ ಕಡಿಮೆ ಅವಧಿಯಲ್ಲಿ, ಆಯುರ್ವೇದ ದಿನವು ರಾಷ್ಟ್ರೀಯ ಆಚರಣೆಯಿಂದ ಜಾಗತಿಕ ಆರೋಗ್ಯ ಆಂದೋಲನವಾಗಿ ವಿಕಸನಗೊಂಡಿದೆ ಎಂದು ತಿಳಿಸುತ್ತಾ ಆಯುರ್ವೇದದ ಗಮನಾರ್ಹ ಜಾಗತಿಕ ಬೆಳವಣಿಗೆಯನ್ನು ವಿವರಿಸಿದರು. ಆಯುರ್ವೇದವನ್ನು ಪರ್ಯಾಯ ಚಿಕಿತ್ಸೆಯಾಗಿ ಮಾತ್ರವಲ್ಲದೇ, ಸಮಗ್ರ ಆರೋಗ್ಯ ವ್ಯವಸ್ಥೆಯಾಗಿ ಗುರುತಿಸುತ್ತಾ ಪ್ರಸ್ತುತ 150 ಕ್ಕೂ ಹೆಚ್ಚು ದೇಶಗಳು ಈಗ ಈ ದಿನವನ್ನು ಆಚರಿಸುತ್ತಿವೆ ಎಂದು ಅವರು ತಿಳಿಸಿದರು. "ಜನರು ಮತ್ತು ಗ್ರಹಕ್ಕಾಗಿ ಆಯುರ್ವೇದ" ಈ ವರ್ಷದ ಧ್ಯೇಯವಾಕ್ಯವಾಗಿದ್ದು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಕಾಲಿಕ ಮತ್ತು ಪ್ರಸ್ತುತವಾಗಿದೆ ಎಂದು ಶ್ರೀ ರಾಜು ಅವರು ಶ್ಲಾಘಿಸಿದ್ದಾರೆ. ಲಭ್ಯತೆ ವರ್ಧಿಸುವ ಮತ್ತು ಪುರಾವೆ ಆಧಾರಿತ ಅಭ್ಯಾಸಕ್ಕೆ ಪೂರಕವಾಗಿರುವ ನಮಸ್ತೆ ಪೋರ್ಟಲ್ ಮತ್ತು ಆಯುಷ್ HMIS ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಬಳಕೆಯ ಸಂದರ್ಭದಲ್ಲಿ ಸಮರ್ಪಕ ಆಯುರ್ವೇದ ಜ್ಞಾನವನ್ನು ಸಂರಕ್ಷಿಸಬೇಕಾದ ಮಹತ್ವದ ಬಗ್ಗೆ ಅವರು ಒತ್ತಿ ಹೇಳಿದರು.
ಆಯುರ್ವೇದ ಆಧಾರಿತ ಸ್ವಾಸ್ಥ್ಯ ಪ್ರವಾಸೋದ್ಯಮಕ್ಕೆ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುವ ಗೋವಾದ ಸಾಮರ್ಥ್ಯದ ಬಗ್ಗೆಯೂ ರಾಜ್ಯಪಾಲರು ಮಾತನಾಡಿದರು. ಸಮಗ್ರ ಕ್ಯಾನ್ಸರ್ ಆರೈಕೆಗಾಗಿ ಆಯುರ್ವೇದವನ್ನು ಆಧುನಿಕ ಆಂಕಾಲಾಜಿ (ಕ್ಯಾನ್ಸರ್ ಅಧ್ಯಯನ) ದೊಂದಿಗೆ ಸಂಯೋಜಿಸುವ ಗುರಿಯನ್ನು ಹೊಂದಿರುವ ಟಾಟಾ ಸ್ಮಾರಕ ಕೇಂದ್ರದ ಸಹಯೋಗದ ಉಪಕ್ರಮವಾಗಿ ಎಐಐಎ ಗೋವಾದಲ್ಲಿ ಇಂಟಿಗ್ರೇಟಿವ್ ಆಂಕೊಲಾಜಿ ಘಟಕ ಸ್ಥಾಪನೆಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯ ಔಷಧೀಯ ಸಸ್ಯಗಳ ಸಂರಕ್ಷಣೆ ಮತ್ತು ಪ್ರಚಾರದಿಂದಾಗಿ ಉದ್ಯೋಗ ಸೃಷ್ಟಿ ವರ್ಧಿಸಿ ಪ್ರಾದೇಶಿಕ ಆರ್ಥಿಕತೆ ಬಲಗೊಳ್ಳಲಿದೆ ಎಂದು ಒತ್ತಿ ಹೇಳಿದ ಶ್ರೀ ರಾಜು ಅವರು, ಸಾಂಪ್ರದಾಯಿಕ ಔಷಧವನ್ನು ಗೋವಾದ ಜೀವವೈವಿಧ್ಯತೆಯೊಂದಿಗೆ ಬೆಸೆಯುವ ಸಮಗ್ರ ವಿಧಾನದ ಅಳವಡಿಕೆಗೆ ಕರೆ ನೀಡಿದರು. ಆಯುರ್ವೇದ ಚಿಕಿತ್ಸೆಗಳ ವೈಜ್ಞಾನಿಕ ಮೌಲ್ಯೀಕರಣಕ್ಕಾಗಿ ಮನವಿ ಮಾಡಿರುವ ಅವರು, ಸಂಶೋಧನೆ ಮತ್ತು ಸಂಪ್ರದಾಯವನ್ನು ಆಧರಿಸಿದ ನೈತಿಕ ಉತ್ತೇಜನದ ಬಗ್ಗೆ ಒತ್ತಿ ಹೇಳಿದರು.
ಬೊಜ್ಜು, ಮಧುಮೇಹ ಮತ್ತು ಒತ್ತಡದಂತಹ ಹೆಚ್ಚುತ್ತಿರುವ ಜೀವನಶೈಲಿ ಸಂಬಂಧಿತ ಅಸ್ವಸ್ಥತೆಗಳನ್ನು ನಿಭಾಯಿಸುವಲ್ಲಿ ಆಯುರ್ವೇದದ ಸಮಕಾಲೀನ ಪ್ರಸ್ತುತತೆಯನ್ನು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಒತ್ತಿ ಹೇಳಿದರು. ಸಮಯಾಧಾರಿತ ಪರೀಕ್ಷಿತ ಪರಿಕಲ್ಪನೆಗಳಾದ ದಿನಚರ್ಯೆ (ದೈನಂದಿನ ದಿನಚರಿ) ಮತ್ತು ಋತುಚರ್ಯ (ಋತುಮಾನದ ಕಟ್ಟುಪಾಡು) ಗಳು ಆರೋಗ್ಯ ರಕ್ಷಣೆಗೆ ಸುಸ್ಥಿರ ಮಾದರಿಗಳನ್ನು ಒದಗಿಸುತ್ತವೆ ಎಂದು ಅವರು ಹೇಳಿದರು. ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯದ ಸಮಸ್ಯೆ ಹೆಚ್ಚಾಗುತ್ತಿರುವ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳವಳ ವ್ಯಕ್ತಪಡಿಸಿರುವುದನ್ನು ಡಾ. ಸಾವಂತ್ ಉಲ್ಲೇಖಿಸಿದರು ಮತ್ತು ದೀರ್ಘಾವಧಿಯ ಯೋಗಕ್ಷೇಮಕ್ಕಾಗಿ ಆಯುರ್ವೇದದ ದೇಹ ಶುದ್ಧಿ, ಸಮತೋಲಿತ ಆಹಾರ, ಗಿಡಮೂಲಿಕೆ ಔಷಧಿಗಳು ಮತ್ತು ಯೋಗದಂತಹ ಸರಳ ಆದಾಗ್ಯೂ ಶಕ್ತಿಶಾಲಿ ಸಾಧನಗಳ ಬಗ್ಗೆ ವಿವರಿಸಿದರು.
ಗೋವಾದ ಶ್ರೀಮಂತ ಜೀವವೈವಿಧ್ಯತೆಯನ್ನು, ವಿಶೇಷವಾಗಿ ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಅನೇಕ ಔಷಧೀಯ ಸಸ್ಯಗಳಿಗೆ ನೆಲೆಯಾಗಿರುವ ಪಶ್ಚಿಮ ಘಟ್ಟಗಳು ಮತ್ತು ಕರಾವಳಿ ಪರಿಸರ ವ್ಯವಸ್ಥೆಗಳ ಬಗ್ಗೆ ಮುಖ್ಯಮಂತ್ರಿ ವಿವರಿಸಿದರು. ಜಾಗತಿಕ ಆಯುರ್ವೇದ ಆರ್ಥಿಕತೆಯಲ್ಲಿ ಗೋವಾದ ಸ್ಥಾನವನ್ನು ಬಲಪಡಿಸಲು ಈ ಸಸ್ಯಗಳ ಸಂಶೋಧನೆ, ಸಂರಕ್ಷಣೆ ಮತ್ತು ವಾಣಿಜ್ಯ ಕೃಷಿಯನ್ನು ವರ್ಧಿಸಬೇಕೆಂದು ಅವರು ಕರೆ ನೀಡಿದರು. ಸಮಗ್ರ ಆಂಕೊಲಾಜಿ ಕೇಂದ್ರದ ಸ್ಥಾಪನೆಗೆ ಗೋವಾ ಸರ್ಕಾರ, ಟಾಟಾ ಸ್ಮಾರಕ ಕೇಂದ್ರ ಮತ್ತು ಎಐಐಎ ಗೋವಾ ನಡುವೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಡಾ. ಸಾವಂತ್ ಘೋಷಿಸಿದರು. ರೋಗಿಗಳ ಆರೋಗ್ಯ ಸುಧಾರಿಸಲು ಮತ್ತು ಸಮಗ್ರ ಚಿಕಿತ್ಸೆಯನ್ನು ಮುಂದುವರಿಸಲು ಸಾಂಪ್ರದಾಯಿಕ ಮತ್ತು ಆಧುನಿಕ ಔಷಧ ವಿಧಾನಗಳನ್ನು ಸಂಯೋಜಿಸುವತ್ತ ಈ ಸಹಯೋಗವು ಪ್ರಗತಿಪರ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು.
ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವರಾದ (ಸ್ವತಂತ್ರ ಖಾತೆ) ಶ್ರೀ ಪ್ರತಾಪ್ ರಾವ್ ಜಾಧವ್ ಅವರು ತಮ್ಮ ಮುಖ್ಯ ಭಾಷಣದಲ್ಲಿ, ಸಮಗ್ರ ಆರೋಗ್ಯ ರಕ್ಷಣಾ ವ್ಯವಸ್ಥೆಯಾಗಿ ಆಯುರ್ವೇವು ಜಾಗತಿಕ ಮನ್ನಣೆ ಪಡೆಯುತ್ತಿರುವ ಬಗ್ಗೆ ಮಾತನಾಡಿದರು. ಸೆಪ್ಟೆಂಬರ್ 23 ಅನ್ನು ಆಯುರ್ವೇದ ದಿನವಾಗಿ ನಿಗದಿಪಡಿಸುವ ನಿರ್ಧಾರವನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಅವರು, ಇದು ಆಯುರ್ವೇದ ತತ್ವಶಾಸ್ತ್ರದ ಪ್ರಮುಖ ಅಂಶವಾಗಿರುವ ಪ್ರಕೃತಿಯೊಂದಿಗೆ ಸಮತೋಲನದ ಸಂಕೇತವಾದ ಶರತ್ಕಾಲದ ವಿಷುವತ್ ಸಂಕ್ರಾಂತಿಯೊಂದಿಗೆ ಹೊಂದಿಕೆಯಾಗುತ್ತದೆ. ಈ ವರ್ಷದ ಧ್ಯೇಯ ವಾಕ್ಯವು ಆಯುರ್ವೇದವನ್ನು ಕೇವಲ ಆರೋಗ್ಯ ವಿಜ್ಞಾನವಾಗಿ ಮಾತ್ರವಲ್ಲದೆ ಗ್ರಹದ ಆರೋಗ್ಯ ಮತ್ತು ಸುಸ್ಥಿರತೆಯ ಚೌಕಟ್ಟಾಗಿರಿಸುವ ಸಚಿವಾಲಯದ ಬದ್ಧತೆಯನ್ನೂ ಸಹ ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ಕಳೆದ ವರ್ಷದ ಆಯುರ್ವೇದ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಪ್ರಾರಂಭಿಸಲಾದ “ದೇಶದ ಆರೋಗ್ಯ ಪರೀಕ್ಷಾ ಅಭಿಯಾನಕ್ಕೆ (ದೇಶ್ ಕಾ ಸ್ವಾಸ್ಥ್ಯ ಪರೀಕ್ಷಾ ಅಭಿಯಾನ್ ಗೆ)" ದೊರೆತ ಅದ್ಭುತ ಪ್ರತಿಕ್ರಿಯೆಯ ಬಗ್ಗೆ ಶ್ರೀ ಜಾಧವ್ ಅವರು ಗಮನ ಸೆಳೆದರು. ವಿದ್ಯಾರ್ಥಿಗಳು, ಶಿಕ್ಷಕರು, ವೈದ್ಯರು, ಸ್ವಯಂಸೇವಕರು ಸೇರಿದಂತೆ 1.8 ಲಕ್ಷಕ್ಕೂ ಹೆಚ್ಚು ಜನರ ಬೆಂಬಲದೊಂದಿಗೆ 1.29 ಕೋಟಿಗೂ ಹೆಚ್ಚು ನಾಗರಿಕರು ಆಯುರ್ವೇದ ಮಾನದಂಡಗಳನುಸಾರ ಆರೋಗ್ಯ ಮೌಲ್ಯಮಾಪನಗಳಲ್ಲಿ ಪಾಲ್ಗೊಂಡರು. ಈ ಅಭಿಯಾನವು ಐದು ಗಿನ್ನೆಸ್ ವಿಶ್ವ ದಾಖಲೆಗಳನ್ನು ಮಾಡಿದ್ದು, ದತ್ತಾಂಶ - ಚಾಲಿತ ಆಯುರ್ವೇದ ಸಂಶೋಧನೆಯ ಹೊಸ ಯುಗಕ್ಕೆ ನಾಂದಿ ಹಾಡಿದೆ. ಮುನ್ಸೂಚಕ, ತಡೆಗಟ್ಟಬಲ್ಲ ಮತ್ತು ವ್ಯಕ್ತಿಗತವಾದ ವೈದ್ಯಕೀಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳನ್ನು ಆಧುನಿಕ ಆರೋಗ್ಯ ರಕ್ಷಣಾ ವಿಧಾನಗಳೊಂದಿಗೆ ಸಂಯೋಜಿಸಲು ಇಂತಹ ಉಪಕ್ರಮಗಳು ಅಡಿಪಾಯ ಎಂದು ಶ್ರೀ ಜಾಧವ್ ಅವರು ಅಭಿಪ್ರಾಯಪಟ್ಟರು.
ಕೇಂದ್ರ ವಿದ್ಯುತ್ ಹಾಗೂ ನವ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರಾದ ಶ್ರೀ ಶ್ರೀಪಾದ ಯೆಸ್ಸೋ ನಾಯಕ್ ತಮ್ಮ ಭಾಷಣದಲ್ಲಿ, ಸಾಂಕ್ರಾಮಿಕವಲ್ಲದ ರೋಗಗಳು, ಮಾನಸಿಕ ಆರೋಗ್ಯ ಸಮಸ್ಯೆ ಮತ್ತು ಪರಿಸರ ನಾಶದಂತಹ ಹೆಚ್ಚುತ್ತಿರುವ ಜಾಗತಿಕ ಸವಾಲುಗಳ ಸಂದರ್ಭದಲ್ಲಿ ಆಯುರ್ವೇದದ ಪ್ರಸ್ತುತತೆ ವರ್ಧಿಸುತ್ತಿದೆ ಎಂದು ಒತ್ತಿ ಹೇಳಿದರು. ನೈಸರ್ಗಿಕ ಜೀವನ, ಸಸ್ಯ ಆಧಾರಿತ ಪರಿಹಾರಗಳು ಮತ್ತು ಕಾಯಿಲೆ ತಡೆಗಟ್ಟಬಲ್ಲ ಆರೈಕೆಗೆ ಆಯುರ್ವೇದ ಒತ್ತು ನೀಡಿದ್ದು, ವೈಯಕ್ತಿಕ ಆರೋಗ್ಯ ಮತ್ತು ಪರಿಸರ ಸುಸ್ಥಿರತೆ ಎರಡನ್ನೂ ಪರಿಹರಿಸಬಲ್ಲಂತಹ ಸಮರ್ಪಕ ಸ್ಥಾನದಲ್ಲಿದೆ ಎಂದು ಅವರು ಹೇಳಿದರು. ಜಾಗತಿಕ ಕಳವಳಗಳಿಗೆ ಆಯುರ್ವೇದದ ತತ್ವಗಳು ಪರಿಹಾರವಾಗಿದ್ದು ಅನಾರೋಗ್ಯ ತಡೆಗಟ್ಟಬಲ್ಲ ಮತ್ತು ಸುಸ್ಥಿರ ಆರೋಗ್ಯ ರಕ್ಷಣೆಗಾಗಿ ಸಮಯ-ಪರೀಕ್ಷಿತ ಚೌಕಟ್ಟನ್ನು ನೀಡಿವೆ ಎಂದು ಅವರು ಹೇಳಿದರು.
ಸಮಗ್ರ ಔಷಧ ಮತ್ತು ಸಾರ್ವಜನಿಕ ಸಂಪರ್ಕವನ್ನು ಉತ್ತೇಜಿಸುವಲ್ಲಿ ಗೋವಾ AIIA ದಂತಹ ಸಂಸ್ಥೆಗಳು ಹಾಗೂ ಗೋವಾದ ಕೊಡುಗೆಗಳನ್ನು ಶ್ರೀ ನಾಯಕ್ ಅವರು ಶ್ಲಾಘಿಸಿದರು. ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ಕೊಂಡಿಯಾಗಿ ಟಾಟಾ ಸ್ಮಾರಕ ಕೇಂದ್ರದ ಸಹಯೋಗದೊಂದಿಗೆ ಸಮಗ್ರ ಆಂಕೊಲಾಜಿ ಘಟಕ ಸ್ಥಾಪನೆಯನ್ನು ಅವರು ಸ್ವಾಗತಿಸಿದರು. ಜಾಗತಿಕ ವೇದಿಕೆಯಲ್ಲಿ ಆಯುಷ್ ವ್ಯವಸ್ಥೆಗಳನ್ನು ಉನ್ನತೀಕರಿಸುವಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯ ಉದ್ದೇಶಗಳನ್ನು ಈಡೇರಿಸಲು ಆಯುರ್ವೇದವನ್ನು ಪ್ರಾಥಮಿಕ ಆರೋಗ್ಯ ವ್ಯವಸ್ಥೆಗಳಲ್ಲಿ ಸಂಯೋಜಿಸುವ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಸಂಶೋಧಕರು, ಯುವಕರು ಮತ್ತು ವೈದ್ಯರು ಪುರಾವೆ ಆಧಾರಿತ, ನೈತಿಕ ವಿಧಾನವನ್ನು ಅನುಸರಿಸುವಂತೆ ಅವರು ಮನವಿ ಮಾಡಿದರು ಮತ್ತು ಸರ್ಕಾರಿ ನೇತೃತ್ವದ ಉಪಕ್ರಮಗಳನ್ನು ಬೆಂಬಲಿಸಲು ಸ್ವಚ್ಛತೆಯೇ ಸೇವೆ (ಸ್ವಚ್ಛತಾ ಹಿ ಸೇವಾ), ಆರೋಗ್ಯವಂತ ಸ್ತ್ರೀ ಸಶಕ್ತ ಪರಿವಾರ (ಸ್ವಸ್ಥ ನಾರಿ ಸಶಕ್ತ ಪರಿವಾರ್) ಮೊದಲಾದ ಅಭಿಯಾನಗಳಲ್ಲಿ ಪಾಲ್ಗೊಳ್ಳುವಂತೆ ಎಲ್ಲಾ ನಾಗರಿಕರನ್ನು ಆಹ್ವಾನಿಸಿದರು.
ರಾಷ್ಟ್ರವ್ಯಾಪಿ ದೇಶದ ಸ್ವಾಸ್ಥ್ಯ ಪರೀಕ್ಷಾ ಆರೋಗ್ಯ ಮೌಲ್ಯಮಾಪನ ಅಭಿಯಾನ ಮತ್ತು ಆಯುರ್ವೇದ ಪದಾರ್ಥಗಳಿಗಾಗಿ ಡಿಜಿಟಲೀಕೃತ ದ್ರವ್ಯ ಪೋರ್ಟಲ್ ಉದ್ಘಾಟನೆ ಸೇರಿದಂತೆ ಹಲವು ಹೊಸ ಉಪಕ್ರಮಗಳು ಈ ವರ್ಷದ ಆಯುರ್ವೇದ ದಿನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅನಾವರಣಗೊಂಡಿವೆ. ಈ ಉಪಕ್ರಮಗಳು ಆಯುರ್ವೇದ ಜ್ಞಾನ ಹಂಚುವಿಕೆಯನ್ನು ಹೆಚ್ಚಿಸುವ ಹಾಗೂ ಸಮುದಾಯ ಆರೋಗ್ಯ ಮೌಲ್ಯಮಾಪನಗಳನ್ನು ಸುಧಾರಿಸುವ ಮತ್ತು ಆಯುರ್ವೇದ ವಲಯದಲ್ಲಿ ನಾವಿನ್ಯತೆಯನ್ನು ಪೋಷಿಸುವ ಗುರಿಯನ್ನು ಹೊಂದಿವೆ.
ಎ ಐ ಐ ಎ ಗೋವಾದಲ್ಲಿ ಇಂಟಿಗ್ರೇಟಿವ್ ಆಂಕೊಲಾಜಿ ಯೂನಿಟ್ ಸೇರಿದಂತೆ ಹೊಸ ಸೌಲಭ್ಯಗಳ ಉದ್ಘಾಟನೆ ಜೊತೆಗೆ ವಿವಿಧ ತಿಳುವಳಿಕೆ ಒಪ್ಪಂದಗಳ (MoU) ಮೂಲಕ ಶೈಕ್ಷಣಿಕ, ಕೈಗಾರಿಕಾ ಮತ್ತು ಅಂತಾರಾಷ್ಟ್ರೀಯ ಸಹಯೋಗಗಳ ಹೊಸ ಸರಣಿಯನ್ನು ಸಹ ಈ ಕಾರ್ಯಕ್ರಮ ಒಳಗೊಂಡಿತ್ತು. ಶೈಕ್ಷಣಿಕ ವಿನಿಮಯಕ್ಕಾಗಿ ಒಡಂಬಡಿಕೆಗಳು, ಸಮಗ್ರ ಕ್ಯಾನ್ಸರ್ ಅಧ್ಯಯನ ಸಂಶೋಧನೆ ಮತ್ತು ಮುಖ್ಯವಾಹಿನಿಯ ಆರೋಗ್ಯ ರಕ್ಷಣೆಯಲ್ಲಿ ಆಯುರ್ವೇದದ ಏಕೀಕರಣವನ್ನು ಮುನ್ನಡೆಸಲು ಜಾಗತಿಕ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳೊಂದಿಗೆ ಪಾಲುದಾರಿಕೆಗಳು ಕಾರ್ಯಕ್ರಮದ ಪ್ರಮುಖ ಅಂಶಗಳಾಗಿವೆ.
ಈ ಧ್ಯೇಯಕ್ಕೆ ಅನುಗುಣವಾಗಿ, ಆಯುರ್ವೇದ ಆಹಾರ ಅಭ್ಯಾಸದ ಅಡಿಪಾಯವನ್ನು ರೂಪಿಸುವ ಮತ್ತು ಆರೋಗ್ಯವನ್ನು ಉತ್ತೇಜಕ ಅರಣ್ಯ ತರಕಾರಿಗಳ ವೈವಿಧ್ಯತೆಯನ್ನು ಆಚರಿಸುವ ರಾಣಾ-ಭಾಜಿ ಉತ್ಸವಕ್ಕೂ ಸಹ ಚಾಲನೆ ನೀಡಲಾಯಿತು. ಅಲ್ಲದೇ, ಆಯುರ್ವೇದ ಮತ್ತು ಸಂಬಂಧಿತ ವಿಜ್ಞಾನಗಳಿಗೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಪ್ರೊ. ಬಮ್ವಾರಿ ಲಾಲ್ ಗೌರ್, ವೈದ್ಯರಾದ ನೀಲಕಂಠನ್ ಮೂಸೆ ಇ.ಟಿ. ಮತ್ತು ವೈದ್ಯರಾದ ಭಾವನಾ ಪ್ರಶೇರ್ ಅವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಧನ್ವಂತರಿ ಆಯುರ್ವೇದ ಪ್ರಶಸ್ತಿ 2025 ಅನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಎನ್ಎಂಪಿಬಿಯ 25 ವರ್ಷಗಳ ಪಯಣ, ಕ್ರೀಡಾ ಔಷಧಿಯಾಗಿ ಆಯುರ್ವೇದ, ವಿಶ್ರಾಂತಿಯಿಂದ ಮಲಗಲು ಆಯುರ್ವೇದದ ಒಳನೋಟ ಮೊದಲಾದ ಪ್ರಕಟಣೆಗಳು, ಆಯುರ್ವೇದ ಸಂಶೋಧನೆ ಮತ್ತು ನಾವಿನ್ಯತೆಗಳಿಗೆ ಸಂಬಂಧಿಸಿದ ತಾಂತ್ರಿಕ ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಗೋವಾ ವಿಧಾನಸಭಾ ಸದಸ್ಯರಾದ ಶ್ರೀ ಪ್ರವೀಣ್ ಅರ್ಲೇಕರ್; ಆಯುಷ್ ಸಚಿವಾಲಯದ ಕಾರ್ಯದರ್ಶಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ವೈದ್ಯ ರಾಜೇಶ್ ಕೋಟೆಚಾ; ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆ (ಎಐಐಎ) ನಿರ್ದೇಶಕ ಪ್ರೊ. (ವೈದ್ಯ) ಪ್ರದೀಪ್ ಕುಮಾರ್ ಪ್ರಜಾಪತಿ; ಎಐಐಎ ಗೋವಾದ ಡೀನ್ ಪ್ರೊ. (ಡಾ.) ಸುಜಾತಾ ಕದಮ್ ಹಾಗೂ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ವೈದ್ಯ ದೇವೇಂದ್ರ ತ್ರಿಗುಣ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಯುರ್ವೇದ ಕ್ಷೇತ್ರದ ಗಣ್ಯರು, ಆಯುಷ್ ಸಚಿವಾಲಯ ಮತ್ತು AIIA ದ ಹಿರಿಯ ಅಧಿಕಾರಿಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರತಿನಿಧಿಗಳು ಸಹ ಉಪಸ್ಥಿತರಿದ್ದರು, ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಆಯುರ್ವೇದವನ್ನು ಮುನ್ನಡೆಸುವ ತಮ್ಮ ಬದ್ಧತೆಯನ್ನು ಸಾಮೂಹಿಕವಾಗಿ ಪುನರುಚ್ಚರಿಸಿದರು.
ಭಾರತ ಮತ್ತು ವಿಶ್ವಾದ್ಯಂತದ ಜನರ ಆರೋಗ್ಯ ರಕ್ಷಣೆಯಲ್ಲಿ ಆಯುರ್ವೇದದ ಪಾತ್ರವನ್ನು ಉನ್ನತೀಕರಿಸುವ ನಿರಂತರ ಪ್ರಯತ್ನದಲ್ಲಿ 10ನೇ ರಾಷ್ಟ್ರೀಯ ಆಯುರ್ವೇದ ದಿನದ ಉದ್ಘಾಟನೆಯು ಒಂದು ಮಹತ್ವದ ಮೈಲಿಗಲ್ಲಾಗಿದೆ. ಹೊಸ ಉಪಕ್ರಮಗಳು, ಸಂಶೋಧನೆ ಮತ್ತು ಸಾರ್ವಜನಿಕ ಭಾಗವಹಿಸುವಿಕೆಯ ಸಂಯೋಜನೆಯ ಮೂಲಕ ಆಯುರ್ವೇದವು ಭಾರತದ ಆರೋಗ್ಯ ರಕ್ಷಣೆಯ ಭವಿಷ್ಯದ ಪ್ರಮುಖ ಆಧಾರಸ್ತಂಭವಾಗಿ ಉಳಿಯುವಂತೆ ಕಾಪಾಡುವ ಗುರಿಯನ್ನು ಆಯುಷ್ ಸಚಿವಾಲಯ ಹೊಂದಿದೆ.

M5AO.jpeg)

CGY7.jpeg)

MX4N.jpeg)
*****
(Release ID: 2170391)