ಆಯುಷ್
`ಆಯುರ್ವೇದ ದಿನ-2025’ರ ಪೂರ್ವಭಾವಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಪ್ರತಾಪರಾವ್ ಜಾಧವ್
"ಜನರು ಮತ್ತು ಭೂಗ್ರಹಕ್ಕಾಗಿ ಆಯುರ್ವೇದ" ಎಂಬ ಆಯುರ್ವೇದ ದಿನ 2025ರ ಧ್ಯೇಯವಾಕ್ಯವು ಸುಸ್ಥಿರ ಆರೋಗ್ಯ ರಕ್ಷಣೆಗೆ ಭಾರತದ ಬದ್ಧತೆಯನ್ನು ಸೂಚಿಸುತ್ತದೆ
"10ನೇ ಆಯುರ್ವೇದ ದಿನವನ್ನು 2025ರ ಸೆಪ್ಟೆಂಬರ್ 23 ರಂದು ಗೋವಾದ `ಎಐಐಎ’ಯಲ್ಲಿ ಆಚರಿಸಲಾಗುವುದು, ಇದು ರಾಜ್ಯವು ಜಾಗತಿಕ ಸ್ವಾಸ್ಥ್ಯ ಕೇಂದ್ರವಾಗಿ ಹೊರಹೊಮ್ಮುತ್ತಿರುವುದನ್ನು ಎತ್ತಿ ತೋರಿಸುತ್ತದೆ": ಶ್ರೀ ಪ್ರತಾಪರಾವ್ ಜಾಧವ್
"ಆಯುರ್ವೇದವು ಮಾನವನ ಆರೋಗ್ಯ ಮತ್ತು ಪರಿಸರ ಯೋಗಕ್ಷೇಮ ಎರಡಕ್ಕೂ ಸುಸ್ಥಿರ, ಸಮಗ್ರ ಜಾಗತಿಕ ಆರೋಗ್ಯ ಪರಿಹಾರವಾಗಿದೆ": ಶ್ರೀ ಜಾಧವ್
Posted On:
19 SEP 2025 1:54PM by PIB Bengaluru
ಆಯುಷ್ ಸಚಿವಾಲಯವು ಇಂದು ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ (ಎನ್ಎಂಸಿ) `ಆಯುರ್ವೇದ ದಿನ-2025’ರ ಪೂರ್ವಭಾವಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕೇಂದ್ರ ಆಯುಷ್ ಖಾತೆ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ) ಹಾಗೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯ ಸಚಿವರಾದ ಶ್ರೀ ಪ್ರತಾಪರಾವ್ ಜಾಧವ್ ಅವರು ಈ ಸಂದರ್ಭ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. 2025ರ ಸೆಪ್ಟೆಂಬರ್ 23 ರಂದು ಗೋವಾದ `ಅಖಿಲ ಭಾರತ ಆಯುರ್ವೇದ ಸಂಸ್ಥೆ’ಯಲ್ಲಿ (ಎಐಐಎ) ಆಚರಿಸಲಿರುವ 10ನೇ `ಆಯುರ್ವೇದ ದಿನ’ಕ್ಕಾಗಿ ಯೋಜಿಸಲಾದ ಪ್ರಮುಖ ಉಪಕ್ರಮಗಳ ಬಗ್ಗೆ ಅವರು ಈ ವೇಳೆ ವಿವರ ಒದಗಿಸಿದರು.
ಸಚಿವರು ತಮ್ಮ ಭಾಷಣದಲ್ಲಿ, ಸಮಗ್ರ, ಪುರಾವೆ ಆಧಾರಿತ ಮತ್ತು ಪರಿಸರ ಸುಸ್ಥಿರ ಆರೋಗ್ಯ ವ್ಯವಸ್ಥೆಯಾಗಿ ಆಯುರ್ವೇದದ ಸಾಮರ್ಥ್ಯವನ್ನು ಒತ್ತಿ ಹೇಳಿದರು. ಆಯುರ್ವೇದವು ವೈದ್ಯಕೀಯ ವಿಜ್ಞಾನಕ್ಕಿಂತ ಮಿಗಿಲಾದುದು - ಇದು ವ್ಯಕ್ತಿಗಳನ್ನು ಅವರ ಪರಿಸರದೊಂದಿಗೆ ಸಮನ್ವಯಗೊಳಿಸುವ ಜೀವನ ವಿಧಾನವಾಗಿದೆ ಎಂದು ಅವರು ಹೇಳಿದರು. ಆಯುಷ್ ಕುರಿತ ಮೊದಲ ಅಖಿಲ ಭಾರತ `ಎನ್ಎಸ್ಎಸ್ಒ’ ಸಮೀಕ್ಷೆಯನ್ನು ಉಲ್ಲೇಖಿಸಿದ ಶ್ರೀ ಜಾಧವ್, ಗ್ರಾಮೀಣ ಮತ್ತು ನಗರ ಭಾರತದಲ್ಲಿ ಆಯುರ್ವೇದದ ವ್ಯಾಪಕ ಸ್ವೀಕಾರವನ್ನು ಒತ್ತಿ ಹೇಳಿದರು. ಈ ಪ್ರದೇಶಗಳಲ್ಲಿ ಆಯುರ್ವೇದವು ಹೆಚ್ಚು ಬಳಸುವ ಚಿಕಿತ್ಸಾ ವ್ಯವಸ್ಥೆಯಾಗಿದೆ.
ಭಾರತ ಸರ್ಕಾರವು ಸೆಪ್ಟೆಂಬರ್ 23 ಅನ್ನು `ಆಯುರ್ವೇದ ದಿನ’ದ ಎಂದು ಘೋಷಿಸುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ, ಆ ಮೂಲಕ ಆಯುರ್ವೇದಕ್ಕೆ ಸಾರ್ವತ್ರಿಕ ಕ್ಯಾಲೆಂಡರ್ ಗುರುತನ್ನು ನೀಡಿದೆ ಎಂದು ಶ್ರೀ ಜಾಧವ್ ಮಾಹಿತಿ ನೀಡಿದರು. "ಜನರಿಗೆ ಮತ್ತು ಭೂಗ್ರಹಕ್ಕಾಗಿ ಆಯುರ್ವೇದ" ಎಂಬ ಈ ವರ್ಷದ ಧ್ಯೇಯವಾಕ್ಯವು ಜಾಗತಿಕ ಆರೋಗ್ಯ ಮತ್ತು ಪರಿಸರ ಯೋಗಕ್ಷೇಮಕ್ಕೆ ಸುಸ್ಥಿರ, ಸಮಗ್ರ ಪರಿಹಾರವಾಗಿ ಆಯುರ್ವೇದವನ್ನು ಮುನ್ನಡೆಸುವ ಭಾರತದ ಬದ್ಧತೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.
`ಆಯುರ್ವೇದ ದಿನ-2025’ರ ಅಂಗವಾಗಿ ಆಯುಷ್ ಸಚಿವಾಲಯದ ಜನ ಕೇಂದ್ರಿತ ಉಪಕ್ರಮಗಳ ಸರಣಿಯನ್ನು ಸಚಿವರು ಘೋಷಿಸಿದರು. ಇವುಗಳಲ್ಲಿ ವಿದ್ಯಾರ್ಥಿಗಳಿಗೆ "ಕ್ಷೇಮಕ್ಕಾಗಿ ಸಣ್ಣ ಹೆಜ್ಜೆಗಳು", ಸುಳ್ಳು ಜಾಹೀರಾತುಗಳನ್ನು ಎದುರಿಸಲು "ದಾರಿ ತಪ್ಪಿಸುವುದನ್ನು ತಪ್ಪಿಸಿ", "ಸ್ಥೂಲಕಾಯಗಾಗಿ ಆಯುರ್ವೇದ ಆಹಾರ” ಇತ್ಯಾದಿ ಜಾಗೃತಿ ಅಭಿಯಾನಗಳು ಹಾಗೂ ಸಸ್ಯ ಮತ್ತು ಪಶುವೈದ್ಯಕೀಯ ಆರೋಗ್ಯಕ್ಕಾಗಿ ಆಯುರ್ವೇದದಂತಹ ಕಾರ್ಯಕ್ರಮಗಳಂತಹ ಸೇರಿವೆ. ಜೊತೆಗೆ "ಕ್ಯಾನ್ಸರ್ ಆರೈಕೆಯ ಸಂಯೋಜನೆ", "ಆಯುರ್ವೇದದ ಡಿಜಿಟಲ್ ರೂಪಾಂತರ" ಮತ್ತು ಭೂಗ್ರಹದ ಸ್ವಾಸ್ಥ್ಯವನ್ನು ಉತ್ತೇಜಿಸುವ ಮಾಧ್ಯಮ ಸಹಭಾಗಿತ್ವವಾದ - "ಸಂಹಿತಾ ಸೆ ಸಂವಾದ್"ಗೆ ವಿಶೇಷ ಗಮನ ನೀಡಲಾಗುವುದು.
2016ರಲ್ಲಿ ಪ್ರಾರಂಭವಾದಾಗಿನಿಂದ `ಆಯುರ್ವೇದ ದಿನ’ದ ಪ್ರಯಾಣವನ್ನು ಗುರುತಿಸಿದ ಶ್ರೀ ಜಾಧವ್ ಅವರ, 2024ರ ಆವೃತ್ತಿಯು 150ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು ಎಂದು ನೆನಪಿಸಿಕೊಂಡರು. `ಎಐಐಎ’ 2ನೇ ಹಂತದ ಉದ್ಘಾಟನೆ, ನಾಲ್ಕು ಆಯುರ್ವೇದ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ ಮತ್ತು ಗೌರವಾನ್ವಿತ ಪ್ರಧಾನ ಮಂತ್ರಿಯವರಿಂದ "ದೇಶ್ ಕಾ ಪ್ರಕೃತಿ ಪರೀಕ್ಷಣ್ ಅಭಿಯಾನ"ಕ್ಕೆ ಚಾಲನೆ ಸೇರಿದಂತೆ 9ನೇ ಆಯುರ್ವೇದ ದಿನದ ಮಹತ್ವದ ಸಾಧನೆಗಳನ್ನು ಅವರು ಎತ್ತಿ ತೋರಿದರು. 12,850 ಕೋಟಿ ರೂ.ಗಳ ಹೂಡಿಕೆಗಳು ಸಮಗ್ರ ಆರೋಗ್ಯ ರಕ್ಷಣೆಯಲ್ಲಿ ಆಯುರ್ವೇದದ ಪಾತ್ರವನ್ನು ಬಲಪಡಿಸಿವೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ `ಎಐಐಎ’ ನಿರ್ದೇಶಕ ಡಾ.ಪ್ರದೀಪ್ ಕುಮಾರ್ ಪ್ರಜಾಪತಿ ಅವರು ಮುಂಬರುವ ಆಚರಣೆಯ ವಿವರಗಳನ್ನು ಪ್ರಸ್ತುತಪಡಿಸಿದರು. 10ನೇ ಆಯುರ್ವೇದ ದಿನವು ಜಾಗೃತಿ ಕಾರ್ಯಕ್ರಮಗಳು, ಡಿಜಿಟಲ್ ಅಭಿಯಾನಗಳು, ಅಂತರ-ಸಚಿವಾಲಯ ಸಹಯೋಗಗಳು, `ರಾಷ್ಟ್ರೀಯ ಧನ್ವಂತರಿ ಆಯುರ್ವೇದ ಪ್ರಶಸ್ತಿಗಳು-2025’ ಮತ್ತು ಬೊಜ್ಜು ತಡೆಗಟ್ಟುವಿಕೆ, ಕ್ಯಾನ್ಸರ್ ಜಾಗೃತಿ, ವಿದ್ಯಾರ್ಥಿಗಳ ಸಂಪರ್ಕ, ಪ್ರಾಣಿ ಮತ್ತು ಸಸ್ಯ ಆರೋಗ್ಯ ಮತ್ತು ಡಿಜಿಟಲ್ ಏಕೀಕರಣವನ್ನು ಒಳಗೊಂಡಿರುವ ಉಪ-ವಿಷಯಗಳನ್ನು ಒಳಗೊಂಡಿರುತ್ತದೆ ಎಂದು ಅವರು ಮಾಹಿತಿ ನೀಡಿದರು. `ಮೈಗೌ’(MyGov) ಮತ್ತು ಮೈಭಾರತ್(MyGovBharat) ವೇದಿಕೆಗಳಲ್ಲಿ "ನಾನು ಆಯುರ್ವೇದವನ್ನು ಬೆಂಬಲಿಸುತ್ತೇನೆ" ನಂತಹ ಉಪಕ್ರಮಗಳ ಮೂಲಕ ಸಾರ್ವಜನಿಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲಾಗುವುದು ಎಂದು ಅವರು ತಿಳಿಸಿದರು.
ಪೂರ್ವಭಾವಿ ಕಾರ್ಯಕ್ರಮದಲ್ಲಿ ಆಯುಷ್ ಸಚಿವಾಲಯದ ಡಿಡಿಜಿ ಶ್ರೀ ಸತ್ಯಜಿತ್ ಪಾಲ್ ಸೇರಿದಂತೆ ಹಿರಿಯ ಗಣ್ಯರು ಭಾಗವಹಿಸಿದ್ದರು. ಪಿಐಬಿ ಪ್ರಧಾನ ಮಹಾನಿರ್ದೇಶಕರಾದ ಶ್ರೀ ಧೀರೇಂದ್ರ ಓಜಾ ಮತ್ತು `ಎಐಐಎ’ ನಿರ್ದೇಶಕರಾದ ಡಾ. ಪಿ.ಕೆ. ಪ್ರಜಾಪತಿ ಹಾಗೂ ಮಾಧ್ಯಮ ಮತ್ತು ಪತ್ರಿಕಾ ಪ್ರತಿನಿಧಿಗಳು ಉಪಸ್ಥಿತರಿದ್ದರು.


*****
(Release ID: 2168568)