ಕೃಷಿ ಸಚಿವಾಲಯ
‘ರಾಷ್ಟ್ರೀಯ ಕೃಷಿ ಸಮ್ಮೇಳನ - ರಬಿ ಅಭಿಯಾನ್ 2025’ ಅನ್ನು ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು
“2025–26ಕ್ಕೆ 362.50 ಮಿಲಿಯನ್ ಟನ್ ಉತ್ಪಾದನಾ ಗುರಿಯನ್ನು ನಿಗದಿ” - ಶ್ರೀ ಶಿವರಾಜ್ ಸಿಂಗ್
“ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಬೇಡಿಕೆಯಂತೆ ದೇಶದಲ್ಲಿ ಸಾಕಷ್ಟು ಬೀಜಗಳ ಲಭ್ಯತೆ ಇದೆ; 25 ಮಿಲಿಯನ್ ಮೆಟ್ರಿಕ್ ಟನ್ ಬೀಜಗಳು ಲಭ್ಯವಿವೆ” - ಶ್ರೀ ಶಿವರಾಜ್ ಸಿಂಗ್
“ರಬಿ ಸಮ್ಮೇಳನವು ‘ಒಂದು ರಾಷ್ಟ್ರ – ಒಂದು ಕೃಷಿ – ಒಂದು ತಂಡ’ಕ್ಕೆ ನೈಜ ಉದಾಹರಣೆ” - ಶ್ರೀ ಶಿವರಾಜ್ ಸಿಂಗ್
“ಕೃಷಿ ಬೆಳವಣಿಗೆಗೆ ಸಂಬಂಧಿಸಿ ಆರು ಪ್ರಮುಖ ವಿಷಯಗಳ ಕುರಿತು ವಿಶೇಷ ಗುಂಪುಗಳಲ್ಲಿ ಚರ್ಚೆಗಳು ನಡೆದವು” - ಶ್ರೀ ಶಿವರಾಜ್ ಸಿಂಗ್
“ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜಗಳ ಉತ್ಪಾದಕತೆಯನ್ನು ಹೆಚ್ಚಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುವುದು” - ಶ್ರೀ ಶಿವರಾಜ್ ಸಿಂಗ್
“ಈಗ ಪ್ರತ್ಯೇಕ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮಾರ್ಗಸೂಚಿಗಳನ್ನು ಅವುಗಳಿಗೆ ಮೀಸಲಾದ ಕಾರ್ಯಾಗಾರಗಳ ಮೂಲಕ ಅಂತಿಮಗೊಳಿಸಲಾಗುವುದು” - ಶ್ರೀ ಶಿವರಾಜ್ ಸಿಂಗ್
ಪ್ರವಾಹ ಪೀಡಿತ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿರಂತರ ಬೆಂಬಲ ನೀಡುವುದಾಗಿ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಭರವಸೆ
ರಬಿ ಬೆಳೆಗಳಿಗಾಗಿ “ವಿಕಸಿತ ಕೃಷಿ ಸಂಕಲ್ಪ ಅಭಿಯನ” ಅಕ್ಟೋಬರ್ 3 ರಿಂದ ಆರಂಭವಾಗಲಿದೆ" - ಶ್ರೀ ಶಿವರಾಜ್ ಸಿಂಗ್
Posted On:
16 SEP 2025 5:47PM by PIB Bengaluru
ಕೇಂದ್ರ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ದೆಹಲಿಯಲ್ಲಿ ನಡೆದ 'ರಾಷ್ಟ್ರೀಯ ಕೃಷಿ ಸಮ್ಮೇಳನ - ರಬಿ ಅಭಿಯಾನ 2025' ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ಸರ್ಕಾರವು 2025–26ಕ್ಕೆ 362.50 ಮಿಲಿಯನ್ ಟನ್ ಉತ್ಪಾದನಾ ಗುರಿಯನ್ನು ನಿಗದಿಪಡಿಸಿದೆ ಎಂದು ಘೋಷಿಸಿದರು, ಇದು ಕಳೆದ ವರ್ಷ 341.55 ಮಿಲಿಯನ್ ಟನ್‌ಗಳಷ್ಟಿತ್ತು.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಶ್ರೀ ಚೌಹಾಣ್, 2024–25ರಲ್ಲಿ ದೇಶದ ಒಟ್ಟು ಆಹಾರ ಧಾನ್ಯ ಉತ್ಪಾದನೆಯು 353.96 ಮಿಲಿಯನ್ ಟನ್‌ಗಳನ್ನು ತಲುಪಿದೆ, ಇದು ಹಿಂದಿನ ವರ್ಷಕ್ಕಿಂತ 21.66 ಮಿಲಿಯನ್ ಟನ್‌ಗಳಷ್ಟು (6.5%) ಹೆಚ್ಚಾಗಿದೆ ಎಂದು ಹೇಳಿದರು. ದೇಶವು ಅಕ್ಕಿ, ಗೋಧಿ, ಜೋಳ, ನೆಲಗಡಲೆ ಮತ್ತು ಸೋಯಾಬೀನ್‌ನಂತಹ ಪ್ರಮುಖ ಬೆಳೆಗಳಲ್ಲಿ ದಾಖಲೆಯ ಇಳುವರಿಯನ್ನು ಸಾಧಿಸಿದೆ. ಈ ಉತ್ಪಾದನೆಯು ನಿಗದಿತ ಗುರಿಯಾದ 341.55 ಮಿಲಿಯನ್ ಟನ್‌ಗಳಿಗಿಂತ 12.41 ಮಿಲಿಯನ್ ಟನ್‌ಗಳಷ್ಟು ಹೆಚ್ಚಾಗಿದೆ ಎಂದರು.

'ಒಂದು ರಾಷ್ಟ್ರ - ಒಂದು ಕೃಷಿ - ಒಂದು ತಂಡ'ದ ದೃಷ್ಟಿಕೋನವನ್ನು ಸಾಧಿಸುವಲ್ಲಿ ರಬಿ ಸಮ್ಮೇಳನವು ಯಶಸ್ವಿ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೃಷಿ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಆಳವಾದ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಇದು ಒಂದು ವೇದಿಕೆಯನ್ನು ಒದಗಿಸುತ್ತದೆ. ಈ ಹಿಂದೆ ರಬಿ ಸಮ್ಮೇಳನವು ಒಂದು ದಿನದ ಕಾರ್ಯಕ್ರಮವಾಗಿತ್ತು, ಆದರೆ ಈ ಬಾರಿ ಹೆಚ್ಚು ವಿವರವಾದ ಚರ್ಚೆಗಳಿಗೆ ಅವಕಾಶ ನೀಡಲು ಇದನ್ನು ಎರಡು ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು. ಸಮಗ್ರ ಕೃಷಿ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯಗಳು ಜಂಟಿಯಾಗಿ ಕೆಲಸ ಮಾಡಲು ಒಟ್ಟಾಗಿವೆ ಎಂದೂ ಶ್ರೀ ಚೌಹಾಣ್ ಒತ್ತಿ ಹೇಳಿದರು.

ಸಮ್ಮೇಳನದ ಮೊದಲ ದಿನದಂದು, ಕೇಂದ್ರ ಮತ್ತು ರಾಜ್ಯಗಳ ಹಿರಿಯ ಕೃಷಿ ಅಧಿಕಾರಿಗಳು ಆರು ವಿಷಯಾಧಾರಿತ ಗುಂಪುಗಳಲ್ಲಿ ಚರ್ಚೆ ನಡೆಸಿದರು. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದಿಷ್ಟವಾದ ಮಾರ್ಗಸೂಚಿಗಳನ್ನು ಈಗ ಅವುಗಳಿಗೆ ಮೀಸಲಾದ ಕಾರ್ಯಾಗಾರಗಳ ಮೂಲಕ ಅಂತಿಮಗೊಳಿಸಲಾಗುವುದು ಎಂದು ಶ್ರೀ ಚೌಹಾಣ್ ಹೇಳಿದರು.
ಎರಡು ದಿನಗಳ ಸಮ್ಮೇಳನದಲ್ಲಿ ಚರ್ಚಿಸಲಾದ ಆರು ಪ್ರಮುಖ ವಿಷಯ ಶೀರ್ಷಿಕೆಗಳೆಂದರೆ: ಹವಾಮಾನ ಸ್ಥಿತಿಸ್ಥಾಪಕತ್ವ; ಗುಣಮಟ್ಟದ ಬೀಜಗಳು, ರಸಗೊಬ್ಬರಗಳು ಮತ್ತು ಕೀಟನಾಶಕಗಳು; ತೋಟಗಾರಿಕೆ; ನೈಸರ್ಗಿಕ ಕೃಷಿ; ಪರಿಣಾಮಕಾರಿ ವಿಸ್ತರಣಾ ಸೇವೆಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಪಾತ್ರ; ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಸಮನ್ವಯ. ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ಸಮಗ್ರ ಕೃಷಿ ವ್ಯವಸ್ಥೆಗಳ ಕುರಿತು ವಿವರವಾದ ಚರ್ಚೆಗಳು ನಡೆದವು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆಹಾರ ಧಾನ್ಯ ಉತ್ಪಾದನೆಯ ಜೊತೆಗೆ ಹಣ್ಣು ಮತ್ತು ತರಕಾರಿ ಉತ್ಪಾದನೆಯೂ ಗಣನೀಯ ಏರಿಕೆ ಕಂಡಿದೆ ಎಂದು ಕೇಂದ್ರ ಸಚಿವರು ಹೇಳಿದರು. ಕೃಷಿ ಬೆಳವಣಿಗೆ ಮತ್ತು ರೈತರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯಗಳು ತಮ್ಮ ಸಂಘಟಿತ ಪ್ರಯತ್ನಗಳನ್ನು ಮುಂದುವರಿಸುತ್ತವೆ.
ಪ್ರವಾಹ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ ಶ್ರೀ ಚೌಹಾಣ್, ಸಂತ್ರಸ್ತರಿಗೆ ಸಹಾಯ ಮಾಡಲು ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದರು. ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು, ಉತ್ತರಾಖಂಡ, ಮಹಾರಾಷ್ಟ್ರ, ಅಸ್ಸಾಂ ಮತ್ತು ಹರಿಯಾಣದ ಕೆಲವು ಭಾಗಗಳು ವಿಶೇಷವಾಗಿ ಇದರಿಂದ ತೊಂದರೆಗೆ ಒಳಗಾಗಿವೆ ಎಂದು ಅವರು ಉಲ್ಲೇಖಿಸಿದರು. ಈ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಬೆಂಬಲಿಸುವಲ್ಲಿ ಕೇಂದ್ರವು ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ ಹಾಗು ಬೆಂಬಲ ನೀಡಲು ಸರ್ವ ಪ್ರಯತ್ನಗಳನ್ನು ಮಾಡುತ್ತದೆ ಎಂದು ಸಚಿವರು ಹೇಳಿದರು, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬರುವ ರೈತರಿಗೆ ವಿಮಾ ಪ್ರಯೋಜನಗಳನ್ನು ಸಕಾಲಿಕ ಮತ್ತು ಸಮರ್ಪಕವಾಗಿ ವಿತರಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಬೀಜ ಲಭ್ಯತೆಯ ಕುರಿತು ಮಾತನಾಡಿದ ಸಚಿವರು, ರಬಿ ಬಿತ್ತನೆಗೆ 22.9 ಮಿಲಿಯನ್ ಮೆಟ್ರಿಕ್ ಟನ್ ಬೀಜ ಬೇಕಾಗುತ್ತದೆ, ಆದರೆ ಸುಮಾರು 25 ಮಿಲಿಯನ್ ಮೆಟ್ರಿಕ್ ಟನ್ ಈಗಾಗಲೇ ಲಭ್ಯವಿದೆ ಎಂದು ಹೇಳಿದರು. ರಸಗೊಬ್ಬರ ಮತ್ತು ಪೋಷಕಾಂಶಗಳ ಪೂರೈಕೆಯ ಕುರಿತು ಮಾತನಾಡಿದ ಸಚಿವರು, ಮಳೆ ಮತ್ತು ಇತರ ಅಂಶಗಳು ಹೆಚ್ಚಾಗಿ ಬೆಳೆ ಮಾದರಿಗಳಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತವೆ ಎಂದು ಹೇಳಿದರು. ಈ ವರ್ಷ, ಉತ್ತಮ ಮಳೆಯು ಬಿತ್ತನೆ ಪ್ರದೇಶ ವಿಸ್ತರಣೆ ಹೆಚ್ಚಳಕ್ಕೆ ಕಾರಣವಾಗಿದೆ, ಇದು ರಸಗೊಬ್ಬರಗಳ ಬೇಡಿಕೆಯನ್ನು ಹೆಚ್ಚಿಸಬಹುದು. ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಸಮನ್ವಯದೊಂದಿಗೆ ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರಗಳನ್ನು ಸಂಪೂರ್ಣವಾಗಿ ಪೂರೈಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕಳೆದ ವರ್ಷದಂತೆ, ರಬಿ ಬೆಳೆಗಳಿಗಾಗಿ ಅಕ್ಟೋಬರ್ 3 ರಿಂದ 'ವಿಕ್ಷಿತ್ ಕೃಷಿ ಸಂಕಲ್ಪ ಅಭಿಯಾನ'ವನ್ನು ಮತ್ತೆ ಪ್ರಾರಂಭಿಸಲಾಗುವುದು ಎಂದು ಶ್ರೀ ಚೌಹಾಣ್ ಘೋಷಿಸಿದರು. ರೈತರಿಗೆ ಸಕಾಲಿಕ ಜ್ಞಾನ ಮತ್ತು ಮಾರ್ಗದರ್ಶನ ನೀಡಲು 2,000 ಕ್ಕೂ ಹೆಚ್ಚು ವಿಜ್ಞಾನಿಗಳ ತಂಡಗಳು ಹಳ್ಳಿಗಳಿಗೆ ಭೇಟಿ ನೀಡಲಿವೆ. ಈ ತಂಡಗಳಲ್ಲಿ ಕೇಂದ್ರ ಮತ್ತು ರಾಜ್ಯ ಕೃಷಿ ಇಲಾಖೆಗಳ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು, ರೈತ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಪ್ರಗತಿಪರ ರೈತರು ಸೇರಿದ್ದಾರೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕರೆಗೆ ಸ್ಪಂದಿಸುತ್ತಾ, ಈ ಪ್ರಯತ್ನವು ಕೇಂದ್ರದ 'ಪ್ರಯೋಗಾಲಯದಿಂದ ಭೂಮಿಗೆ' ಉಪಕ್ರಮವನ್ನು ಮತ್ತೊಮ್ಮೆ ಬಲಪಡಿಸುತ್ತದೆ ಎಂದರು.
ಭಾರತದ ಅಕ್ಕಿ ಮತ್ತು ಗೋಧಿ ಉತ್ಪಾದನೆಯು ಈಗಾಗಲೇ ಜಾಗತಿಕ ಮಟ್ಟದಲ್ಲಿದ್ದರೂ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಮೇಲೆ ಹೆಚ್ಚಿನ ಗಮನ ಹರಿಸುವ ಅವಶ್ಯಕತೆಯಿದೆ ಎಂದು ಕೃಷಿ ಸಚಿವರು ಹೇಳಿದರು. ಪ್ರತಿ ಹೆಕ್ಟೇರ್ ಉತ್ಪಾದಕತೆಯ ಮೇಲೆ ವಿಶೇಷ ಒತ್ತು ನೀಡಿ ಇಳುವರಿಯನ್ನು ಹೆಚ್ಚಿಸಲು ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲಾಗುವುದು. ಬೆಳೆವಾರು ಪರಾಮರ್ಶೆಗಳನ್ನು ಸಹ ನಡೆಸಲಾಗುತ್ತಿದೆ - ಹತ್ತಿ ಮತ್ತು ಸೋಯಾಬೀನ್‌ಗಾಗಿ ಈಗಾಗಲೇ ದೊಡ್ಡ ಪ್ರಮಾಣದ ಸಭೆಗಳನ್ನು ನಡೆಸಲಾಗಿದೆ. ರಬಿ ಬೆಳೆಗಳು ಮತ್ತು ಇತರ ಪ್ರಮುಖ ಸರಕುಗಳ ಉತ್ಪಾದನೆಯನ್ನು ಹೆಚ್ಚಿಸಲು ಬಲವಾದ ಕ್ರಮಗಳನ್ನು ಅನುಸರಿಸಲಾಗುವುದು ಎಂದು ಅವರು ಹೇಳಿದರು.
ನಕಲಿ ಕೃಷಿ ಒಳಸುರಿಗಳ ವಿಷಯದ ಕುರಿತು ಪ್ರತಿಕ್ರಿಯಿಸಿದ ಶ್ರೀ ಚೌಹಾಣ್, ನಕಲಿ ಕೀಟನಾಶಕಗಳು, ಬೀಜಗಳು ಮತ್ತು ರಸಗೊಬ್ಬರಗಳ ಮಾರಾಟಗಾರರ ವಿರುದ್ಧ ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಕ್ರಮಗಳ ಬಗ್ಗೆ ಗಮನ ಸೆಳೆದರು. ಈ ಸಮಸ್ಯೆಯನ್ನು ಎದುರಿಸಲು ರಾಜಸ್ಥಾನ ಮತ್ತು ಇತರ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ದಾಳಿಗಳು ಪ್ರಮುಖ ಪರಿಣಾಮ ಬೀರಿವೆ ಎಂದು ಅವರು ಉಲ್ಲೇಖಿಸಿದರು. ಮುಂದೆ, ಅಂತಹ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೃಷಿ ಸಚಿವರು, ಕೃಷಿ ಕಾರ್ಯದರ್ಶಿ ಡಾ. ದೇವೇಶ್ ಚತುರ್ವೇದಿ ಮತ್ತು ಐ.ಸಿ.ಎ.ಆರ್ ಮಹಾನಿರ್ದೇಶಕ ಡಾ.ಎಂ.ಎಲ್. ಜಾಟ್ ಭಾಗವಹಿಸಿದ್ದರು.
****
(Release ID: 2167393)
Visitor Counter : 2