ಕೃಷಿ ಸಚಿವಾಲಯ
azadi ka amrit mahotsav

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದಲ್ಲಿ ಎರಡನೇ ಹಂತದ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ' ಆರಂಭ


ಅಕ್ಟೋಬರ್ 3 ರಿಂದ 18 ರವರೆಗೆ 16 ದಿನಗಳವರಗೆ ನಡೆಯಲಿರುವ ರಬಿ ಬೆಳೆ ಅಭಿಯಾನ

'ರಾಷ್ಟ್ರೀಯ ಕೃಷಿ ಸಮ್ಮೇಳನ - ರಬಿ ಅಭಿಯಾನ 2025' ಸೆಪ್ಟೆಂಬರ್ 15 ಮತ್ತು 16 ರಂದು ದೆಹಲಿಯಲ್ಲಿ ನಡೆಯಲಿದೆ

ಕೃಷಿ ಸಚಿವರು ಮತ್ತು ರಾಜ್ಯಗಳ ಹಿರಿಯ ಅಧಿಕಾರಿಗಳು ಎರಡು ದಿನಗಳ ಈ ಸಮ್ಮೇಳನದಲ್ಲಿ ರಬಿ ಬೆಳೆಗಳ ಕುರಿತು ಚರ್ಚಿಸಲಿದ್ದಾರೆ

Posted On: 13 SEP 2025 5:41PM by PIB Bengaluru

'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ದ ಮೊದಲ ಹಂತದ ಅದ್ಭುತ ಯಶಸ್ಸಿನ ನಂತರ, ಎರಡನೇ ಹಂತದ ಅಭಿಯಾನವು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದಲ್ಲಿ ಪ್ರಾರಂಭವಾಗಲಿದೆ. ಈ ಹಿಂದೆ, ಖಾರಿಫ್ ಬೆಳೆಗಳ ಮೇಲೆ ಈ ಅಭಿಯಾನ ಕೇಂದ್ರೀಕೃತವಾಗಿತ್ತು. ಈಗ ಈ ಅಭಿಯಾನವು ರಬಿ ಬೆಳೆಗಳ ಮೇಲೆ ಕೇಂದ್ರೀಕರಿಸಿದೆ. ದೇಶಾದ್ಯಂತದ ಕೃಷಿ ವಿಜ್ಞಾನಿಗಳು ಈ ಅಭಿಯಾನದ ಮೂಲಕ ಹಳ್ಳಿಗಳಿಗೆ ಭೇಟಿ ನೀಡಿ, ಅಲ್ಲಿನ ರೈತರನ್ನು ಭೇಟಿ ಮಾಡಿ, ಅಗತ್ಯ ಮಾಹಿತಿಯನ್ನು ಒದಗಿಸುತ್ತಾರೆ. ಕೃಷಿ ವಿಜ್ಞಾನಿಗಳು ರೈತರ ಸಮಸ್ಯೆಗಳನ್ನು ಆಲಿಸಿ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರ 'ಪ್ರಯೋಗಾಲಯದಿಂದ ಭೂಮಿಗೆ' ಎಂಬ ಮಂತ್ರವನ್ನು ವಾಸ್ತವೀಕರಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ಈ ಅಭಿಯಾನದ ಸಿದ್ಧತೆಗಳ ಭಾಗವಾಗಿ, ಸೆಪ್ಟೆಂಬರ್ 15 ರಿಂದ ನವದೆಹಲಿಯ ಪುಸಾ ಕ್ಯಾಂಪಸ್‌ನಲ್ಲಿ ಎರಡು ದಿನಗಳ 'ರಾಷ್ಟ್ರೀಯ ಕೃಷಿ ಸಮ್ಮೇಳನ - ರಬಿ ಅಭಿಯಾನ 2025' ಅನ್ನು ಆಯೋಜಿಸಲಾಗುತ್ತಿದೆ.

ರಬಿ ಬೆಳೆಗಳಿಗೆ ಸಂಬಂಧಿಸಿದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವು ದೇಶಾದ್ಯಂತದ ರಾಜ್ಯ ಸರ್ಕಾರಗಳ ಕೃಷಿ ತಜ್ಞರು, ವಿಜ್ಞಾನಿಗಳು, ನೀತಿ ನಿರೂಪಕರು ಮತ್ತು ಹಿರಿಯ ಪ್ರತಿನಿಧಿಗಳಿಗೆ ಒಂದು ಸಾಮಾನ್ಯ ವೇದಿಕೆಯನ್ನು ಒದಗಿಸಲಿದ್ದು, ಈ ವೇದಿಕೆಯಲ್ಲಿ 2025-26ರ  ರಬಿ ಬಿತ್ತನೆ ಋತುವಿಗೆ ಸಂಬಂಧಿಸಿದ ಸಿದ್ಧತೆಗಳು, ಉತ್ಪಾದನಾ ಗುರಿಗಳು ಮತ್ತು ತಂತ್ರಗಳನ್ನು ಆಳವಾಗಿ ಚರ್ಚಿಸಲಾಗುವುದು. ಸಮ್ಮೇಳನದ ಅಧ್ಯಕ್ಷತೆಯನ್ನು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ, ಹಲವಾರು ರಾಜ್ಯಗಳ ಕೃಷಿ ಸಚಿವರು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಕಾರ್ಯದರ್ಶಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಹಾನಿರ್ದೇಶಕರು ಮತ್ತು ಸಂಬಂಧಿತ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯಗಳ ಇತರ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಕೇಂದ್ರ ಕೃಷಿ ಸಚಿವರ ನಿರ್ದೇಶನದ ಮೇರೆಗೆ ಮೊದಲ ಬಾರಿಗೆ ಎರಡು ದಿನಗಳ ಕಾಲ ರಬಿ ಸಮ್ಮೇಳನವು ನಡೆಯುತ್ತಿದ್ದು, ಇದರಲ್ಲಿ ರೈತರಿಗೆ ಪ್ರಯೋಜನವಾಗುವ ಮತ್ತು ಕೃಷಿ ಮತ್ತು ರಬಿ ಋತುವಿನ ಬೆಳೆಗಳಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವ ದೃಷ್ಟಿಕೋನದಿಂದ ವಿವಿಧ ವಿಷಯಗಳನ್ನು ಚರ್ಚಿಸಲಾಗುವುದು.

ಮೊದಲನೇ ದಿನವಾದ ಸೆಪ್ಟೆಂಬರ್ 15 ರಂದು, ಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ರಬಿ ಬೆಳೆಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಸೆಪ್ಟೆಂಬರ್ 16 ರಂದು, ಎಲ್ಲಾ ರಾಜ್ಯ ಕೃಷಿ ಸಚಿವರು, ಕೇಂದ್ರ ಕೃಷಿ ಸಚಿವರು ಮತ್ತು ಕೇಂದ್ರ ರಾಜ್ಯ ಸಚಿವರು ರೈತರಿಗೆ ಹೊಸ ತಂತ್ರಜ್ಞಾನಗಳು ಮತ್ತು ಬೀಜಗಳನ್ನು ಪರಿಣಾಮಕಾರಿಯಾಗಿ ಹೇಗೆ ತಲುಪಿಸುವುದು ಎಂಬುದರ ಕುರಿತು ಆಳವಾದ ವಿಮರ್ಶೆ ಮತ್ತು ಚಿಂತನೆ ಸೇರಿದಂತೆ ವಿವರವಾದ ಚರ್ಚೆಗಳನ್ನು ನಡೆಸಲಿದ್ದಾರೆ. ಎಲ್ಲಾ ರಾಜ್ಯ ಪ್ರತಿನಿಧಿಗಳು ತಮ್ಮ ತಂಡಗಳೊಂದಿಗೆ ಭಾಗವಹಿಸಲಿದ್ದು, ಮೊದಲ ಬಾರಿಗೆ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಸಹ ಈ ಸಮ್ಮೇಳನಕ್ಕೆ ಆಹ್ವಾನಿಸಲಾಗಿದ್ದು, ಅವರು ತಮ್ಮ ಪ್ರಾದೇಶಿಕ ಅನುಭವಗಳು ಮತ್ತು ಸವಾಲುಗಳನ್ನು ಹಂಚಿಕೊಂಡು ಭವಿಷ್ಯದ ತಂತ್ರಗಳನ್ನು ನಿರ್ಧರಿಸಲು ಸಹಾಯ ಮಾಡುತ್ತಾರೆ.

ಈ ಕಾರ್ಯಕ್ರಮವು ವಿವಿಧ ವಿಷಯಗಳ ಕುರಿತು ಸಮಾನಾಂತರ ತಾಂತ್ರಿಕ ಅಧಿವೇಶನಗಳನ್ನು ಕೂಡಾ ಒಳಗೊಂಡಿರುತ್ತದೆ. ತಜ್ಞರು, ವಿಜ್ಞಾನಿಗಳು ಮತ್ತು ಎಲ್ಲಾ ರಾಜ್ಯದ ಪ್ರತಿನಿಧಿಗಳು ಪ್ರಸ್ತುತಿಗಳನ್ನು ನೀಡಲಿದ್ದು, ಮುಕ್ತ ಚರ್ಚೆಗಳ ಮೂಲಕ ಪ್ರಾಯೋಗಿಕ ಪರಿಹಾರಗಳನ್ನು ಕಂಡು ಹಿಡಿಯಲಾಗುತ್ತದೆ. ಈ ಸಮ್ಮೇಳನದಲ್ಲಿ ಕೆಳಗಿನ ವಿಷಯಗಳ ಮೇಲೆ ವಿಶೇಷ ಗಮನ ಹರಿಸಲಾಗುವುದು: 

- ಹವಾಮಾನ ಸ್ಥಿತಿಸ್ಥಾಪಕತ್ವ, ಮಣ್ಣಿನ ಆರೋಗ್ಯ ಮತ್ತು ಸಮತೋಲಿತ ರಸಗೊಬ್ಬರಗಳ ಬಳಕೆ - ಉತ್ತಮ ಮಣ್ಣಿನ ನಿರ್ವಹಣೆ ಮತ್ತು ಸಮತೋಲಿತ ಪೋಷಣೆಗೆ ಒತ್ತು.

- ಗುಣಮಟ್ಟದ ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಉತ್ತಮ ರಬಿ ಕೃಷಿ ಬೆಳೆಯ ಪತ್ತೆಹಚ್ಚುವಿಕೆ - ನಿಖರವಾದ ಕೃಷಿ ಸಂಪನ್ನತೆ ಮತ್ತು ಡಿಜಿಟಲ್ ಮೇಲ್ವಿಚಾರಣೆ.

- ತೋಟಗಾರಿಕೆಯ ವೈವಿಧ್ಯೀಕರಣ - ಆದಾಯ ವರ್ಧನೆ ಮತ್ತು ರಫ್ತು ಸಾಮರ್ಥ್ಯದ ಮೇಲೆ ಕೇಂದ್ರೀಕರಿಸಿದ ತಂತ್ರಜ್ಞಾನಗಳು.

- ಪರಿಣಾಮಕಾರಿ ವಿಸ್ತರಣಾ ಸೇವೆ ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಪಾತ್ರ - ರೈತರಿಗೆ ಇತ್ತೀಚಿನ ತಂತ್ರಜ್ಞಾನ ಮತ್ತು ಕೃಷಿಯ ಬಗ್ಗೆ ಇತರ ಜ್ಞಾನವನ್ನು ನೀಡುವುದು.

- ಕೇಂದ್ರ ಪ್ರಾಯೋಜಿತ ಯೋಜನೆಗಳ ಸಮನ್ವಯ - ಯೋಜನೆಗಳ ಉತ್ತಮ ಅಳವಡಿಕೆ ಮತ್ತು ಆಯಾ ರಾಜ್ಯದ ಬೆಳೆ ತಂತ್ರಜ್ಞರ  ಅನುಭವಗಳ ಹಂಚಿಕೆ.

- ನೈಸರ್ಗಿಕ ಕೃಷಿ - ಕಡಿಮೆ-ವೆಚ್ಚದಲ್ಲಿ ಪರಿಸರ ಸ್ನೇಹಿ ಕೃಷಿ ಪದ್ಧತಿಗಳು.

- ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಮೇಲೆ ವಿಶೇಷ ಒತ್ತು ನೀಡುವ ಬೆಳೆ ವೈವಿಧ್ಯೀಕರಣ ಮತ್ತು ರಬಿ ಋತುವಿನಲ್ಲಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ತಂತ್ರಗಳು - ಸ್ವಾವಲಂಬನೆ ಮತ್ತು ಪೌಷ್ಟಿಕಾಂಶದ ಸುರಕ್ಷತೆಯ ಪ್ರಚಾರ.

- ರಬಿ ಬೆಳೆಗಳ ಸಮಯದಲ್ಲಿ ರಸಗೊಬ್ಬರ ಲಭ್ಯತೆಯ ಸ್ಥಿತಿ - ಸಕಾಲಿಕ ಪೂರೈಕೆ ಮತ್ತು ವಿತರಣಾ ವ್ಯವಸ್ಥೆಗಳ ವಿಮರ್ಶೆ.

- ಸಮಗ್ರ ಕೃಷಿ ವ್ಯವಸ್ಥೆಗಳು.

ಈ ಸಮ್ಮೇಳನದಲ್ಲಿ, ವಿವಿಧ ರಾಜ್ಯಗಳ ಯಶಸ್ಸು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲಾಗುವುದು, ಇದರಿಂದ ಉತ್ತಮ ಅಭ್ಯಾಸಗಳನ್ನು ಇತರ ರಾಜ್ಯಗಳಲ್ಲಿಯೂ ಜಾರಿಗೆ ತರಬಹುದಾಗಿದೆ. ಅಲ್ಲದೆ, ಹವಾಮಾನ ಮುನ್ಸೂಚನೆ, ರಸಗೊಬ್ಬರ ನಿರ್ವಹಣೆ, ಕೃಷಿ ಸಂಶೋಧನೆ ಮತ್ತು ತಾಂತ್ರಿಕ ಮಧ್ಯಸ್ಥಿಕೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ತಜ್ಞರು ತಮ್ಮ ಅಭಿಪ್ರಾಯಗಳನ್ನು ಪ್ರಸ್ತುತಪಡಿಸುತ್ತಾರೆ.

ಈ ಸಮ್ಮೇಳನವು 2025-26 ರ ರಬಿ ಋತುವಿನ ಕ್ರಿಯಾ ಯೋಜನೆ ಮತ್ತು ಉತ್ಪಾದನಾ ತಂತ್ರಗಳಿಗೆ ಮಾರ್ಗದರ್ಶನ ನೀಡುವುದಲ್ಲದೆ, ರೈತರ ಆದಾಯವನ್ನು ಹೆಚ್ಚಿಸಿ, ಸುಸ್ಥಿರ ಕೃಷಿ ವ್ಯವಸ್ಥೆಗಳು ಮತ್ತು ರಾಷ್ಟ್ರೀಯ ಆಹಾರ ಭದ್ರತೆಯನ್ನು ಖಾತ್ರಿಪಡಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.

ರೈತರ ಸಮೃದ್ಧಿಗಾಗಿ ಕೇಂದ್ರ ಸರ್ಕಾರ ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ರೈತ ಸಹೋದರ ಸಹೋದರಿಯರ ಆದಾಯವನ್ನು ಹೆಚ್ಚಿಸಲು ಈ ಸರ್ಕಾರವು ಬದ್ಧವಾಗಿದೆ. ಪ್ರಧಾನಮಂತ್ರಿಯವರ 'ಪ್ರಯೋಗಾಲಯದಿಂದ ಭೂಮಿಗೆ' ಎಂಬ ದೃಷ್ಟಿಕೋನವನ್ನು ಆಧರಿಸಿ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಅವರು ಖಾರಿಫ್ ಬೆಳೆಗಾಗಿ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ವನ್ನು ಪ್ರಾರಂಭಿಸಿದರು. ಈ ನಿಟ್ಟಿನಲ್ಲಿ ಅವರು ಮೇ 29 ರಿಂದ ಜೂನ್ 12, 2025 ರವರೆಗೆ ವಿವಿಧ ರಾಜ್ಯಗಳ ರೈತರೊಂದಿಗೆ ವೈಯಕ್ತಿಕವಾಗಿ ಸಂವಹನ ನಡೆಸಿ ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದರು. ಮೊದಲ ಹಂತದಲ್ಲಿ, 2,170 ವಿಜ್ಞಾನಿಗಳ ವಿವಿಧ ತಂಡಗಳು ಹಳ್ಳಿಗಳಿಗೆ ಭೇಟಿ ನೀಡಿದ್ದವು. ಈ ಭೇಟಿಯಲ್ಲಿ ರೈತರು ಉತ್ಸಾಹದಿಂದ ಪಾಲ್ಗೊಂಡು, ವಿಜ್ಞಾನಿಗಳೊಂದಿಗೆ ಸಂವಹನ ನಡೆಸಿ ಕೃಷಿಯ ಬಗ್ಗೆ ಅಗತ್ಯ ಜ್ಞಾನವನ್ನು ಪಡೆದುಕೊಂಡರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿಯಾನದ ಮಹತ್ವವನ್ನು ಎತ್ತಿ ಹಿಡಿದು, ಇದನ್ನು ಐತಿಹಾಸಿಕವೆಂದು ಬಣ್ಣಿಸಿದ್ದಾರೆ.

ಮೊದಲಿನಂತೆಯೇ ಈ ಬಾರಿಯೂ, ದೇಶದ ರೈತ ಸಹೋದರ ಸಹೋದರಿಯರು ಈ ಅಭಿಯಾನದ ಬಗ್ಗೆ ಅತ್ಯಂತ ಉತ್ಸಾಹ ಮತ್ತು ಭರವಸೆಯನ್ನು ಹೊಂದಿದ್ದಾರೆ. ಮತ್ತೊಮ್ಮೆ, ಈ ಅಭಿಯಾನವು ಸೈದ್ಧಾಂತಿಕವಾಗಿ ಉಳಿಯದೆ, ಅವರ ಪ್ರಾಯೋಗಿಕ ಉದ್ದೇಶಗಳನ್ನು ಪೂರೈಸುವತ್ತ ದಾಪುಗಾಲು ಹಾಕುತ್ತಿದೆ. ಈ ಅಭಿಯಾನವು ಹೆಚ್ಚಿನ ಸಂಖ್ಯೆಯ ರೈತರಿಗೆ ತಲುಪುವ ನಿರೀಕ್ಷೆಯಿದ್ದು, ಕೃಷಿಗೆ ಹೊಸ ಆಯಾಮ ನಿರ್ದೇಶನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

 

*****


(Release ID: 2166403) Visitor Counter : 2