ಗ್ರಾಮೀಣಾಭಿವೃದ್ಧಿ ಸಚಿವಾಲಯ
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ತಿರುವನಂತಪುರಂನಲ್ಲಿ ಗ್ರಾಮೀಣ ಉದ್ಯಮ ಇನ್ಕ್ಯುಬೇಟರ್ ಗಳ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿದೆ
ದೇಶಾದ್ಯಂತ 90 ಲಕ್ಷ ಸ್ವಸಹಾಯ ಗುಂಪುಗಳಲ್ಲಿ 10 ಕೋಟಿಗೂ ಹೆಚ್ಚು ಮಹಿಳೆಯರನ್ನು ಸಜ್ಜುಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಶೈಲೇಶ್ ಕುಮಾರ್ ಸಿಂಗ್ ಮಾಹಿತಿ ನೀಡಿದರು
Posted On:
11 SEP 2025 10:47AM by PIB Bengaluru
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ (ಎಂ ಒ ಆರ್ ಒ), ಕೇರಳ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ (ಕುಟುಂಬಶ್ರೀ) ಸಹಯೋಗದಲ್ಲಿ ಡಿಎವೈ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಗ್ರಾಮೀಣ ಉದ್ಯಮ ಇನ್ಕ್ಯುಬೇಟರ್ ಗಳ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಬುಧವಾರ ಕೇರಳದ ತಿರುವನಂತಪುರಂನಲ್ಲಿ ಆಯೋಜಿಸಿತ್ತು.
ಗ್ರಾಮೀಣಾ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಶೈಲೇಶ್ ಕುಮಾರ್ ಸಿಂಗ್ ಅವರು ತಮ್ಮ ವರ್ಚುವಲ್ ಉದ್ಘಾಟನಾ ಭಾಷಣದಲ್ಲಿ, ಮಹಿಳಾ ನೇತೃತ್ವದ ಗ್ರಾಮೀಣ ಉದ್ಯಮಗಳನ್ನು ಮುನ್ನಡೆಸುವಲ್ಲಿ ಇನ್ಕ್ಯುಬೇಟರ್ ಕಾರ್ಯಕ್ರಮದ ಪಾತ್ರವನ್ನು ಬಿಂಬಿಸಿದರು. ಜತೆಗೆ ಡಿಎವೈ-ಎನ್.ಆರ್.ಎಲ್.ಎಂ 10 ಕೋಟಿಗೂ ಹೆಚ್ಚು ಮಹಿಳೆಯರನ್ನು 90 ಲಕ್ಷ ಸ್ವಸಹಾಯ ಗುಂಪುಗಳಾಗಿ ಸಜ್ಜುಗೊಳಿಸಿದೆ, ಅನೇಕರು ಮೊದಲ ತಲೆಮಾರಿನ ಉದ್ಯಮಿಗಳಾಗಿದ್ದಾರೆ ಎಂದು ಹೇಳಿದರು. ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಲ್ಲಿ ಪೈಲಟ್ ಗಳ ಯಶಸ್ಸನ್ನು ಉಲ್ಲೇಖಿಸಿದ ಅವರು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಇತರ ಹಲವಾರು ರಾಜ್ಯಗಳು ಪ್ರಮುಖ ಶೈಕ್ಷಣಿಕ ಪಾಲುದಾರರೊಂದಿಗೆ ಬೆಳೆಯುತ್ತಿವೆ ಎಂದು ಮಾಹಿತಿ ಹಂಚಿಕೊಂಡರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಕೇರಳದ ಸ್ಥಳೀಯ ಸ್ವಯಂ ಆಡಳಿತ ಸಚಿವರಾದ ಶ್ರೀ ಎಂ.ಬಿ. ರಾಜೇಶ್ ಅವರು, ಕುಟುಂಬಶ್ರೀ ಮೂಲಕ ಮಹಿಳಾ ನೇತೃತ್ವದ ಉದ್ಯಮಶೀಲತೆಯನ್ನು ಉತ್ತೇಜಿಸುವ ಕೇರಳದ ಬದ್ಧತೆಯನ್ನು ಒತ್ತಿಹೇಳಿದರು. ಜತೆಗೆ ಕಾರ್ಯಾಗಾರವು ಗ್ರಾಮೀಣ ಉದ್ಯಮ ಪರಿಸರ ವ್ಯವಸ್ಥೆಗಳನ್ನು ಬಲಪಡಿಸಲು ಸಹಯೋಗ ಮತ್ತು ನಾವೀನ್ಯತೆಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮೀಣಾ ಅಭಿವೃದ್ಧಿ ಸಚಿವಾಲಯದ ಪರವಾಗಿ ಸಂದೇಶ ನೀಡಿದ ಭಾರತ ಸರ್ಕಾರದ ಗ್ರಾಮೀಣಾ ಅಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ಸ್ವಾತಿ ಶರ್ಮಾ ಅವರು, ಮಹಿಳಾ ನೇತೃತ್ವದ ಗ್ರಾಮೀಣ ಉದ್ಯಮಶೀಲತೆಗಾಗಿ ಇನ್ಕ್ಯುಬೇಟರ್ ಕಾರ್ಯಕ್ರಮವನ್ನು ರಾಷ್ಟ್ರೀಯ ವೇದಿಕೆಯಾಗಿ ಹೆಚ್ಚಿಸುವ ಸಚಿವಾಲಯದ ದೃಷ್ಟಿಕೋನವನ್ನು ಒತ್ತಿ ಹೇಳಿದರು ಮತ್ತು ಕಾರ್ಯಾಗಾರವು ಅದರ ದೀರ್ಘಕಾಲೀನ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಕ್ರಿಯಾತ್ಮಕ ಕಾರ್ಯತಂತ್ರಗಳು ಮತ್ತು ಬಲವಾದ ಪಾಲುದಾರಿಕೆಯನ್ನು ಸೃಷ್ಟಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ಕ್ಯುಬೇಟರ್ ಯೋಜನೆಗೆ ಆಯ್ಕೆಯಾದ ಉದ್ಯಮಗಳು ಬೆಳೆಯಲು ವಾತಾವರಣವನ್ನು ಸೃಷ್ಟಿಸಲು ಕಾರ್ಯಾಗಾರವು ಸಹಾಯ ಮಾಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ನಿರ್ದೇಶಕಿ (ಆರ್ ಎಲ್) ಶ್ರೀಮತಿ ರಾಜೇಶ್ವರಿ ಎಸ್.ಎಂ. ಅವರು ಡಿಎವೈ-ಎನ್ಆರ್ ಎಲ್ಎಂ ಮತ್ತು ಇನ್ಕ್ಯುಬೇಟರ್ ಕಾರ್ಯಕ್ರಮದ ಬಗ್ಗೆ ವಿವರವಾದ ಅವಲೋಕನವನ್ನು ನೀಡಿದರು. ಕುಡುಂಬಶ್ರೀ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಎಚ್. ದಿನೇಶನ್ ಅವರು ಭಾಗವಹಿಸಿದವರನ್ನು ಸ್ವಾಗತಿಸಿದರು. ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಬಿದ್ಯುತ್ ಸಿ. ದೇಖಾ ಅವರು ಅಭಿನಂದನಾ ಭಾಷಣ ಮಾಡಿದರು. ಕುಟುಂಬಶ್ರೀ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ನವೀನ್ ವಂದಿಸಿದರು.

ಕಾರ್ಯಾಗಾರವು ಮಾರ್ಗದರ್ಶನ, ಹಣಕಾಸು, ತಂತ್ರಜ್ಞಾನ, ಮಾರುಕಟ್ಟೆ ಪ್ರವೇಶ ಮತ್ತು ಸಮನ್ವಯದ ಕುರಿತು ಶೈಕ್ಷಣಿಕ, ಉದ್ಯಮ ಮತ್ತು ಸಾಮಾಜಿಕ ಉದ್ಯಮ ಜಾಲಗಳ ಪ್ರಖ್ಯಾತ ತಜ್ಞರ ಭಾಗವಹಿಸುವಿಕೆಯೊಂದಿಗೆ ಚರ್ಚೆಗಳನ್ನು ಒಳಗೊಂಡಿತ್ತು. ಅವರ ಒಳನೋಟಗಳು ಮತ್ತು ಕೊಡುಗೆಗಳು ರಾಜ್ಯಗಳಾದ್ಯಂತ ಗ್ರಾಮೀಣ ಉದ್ಯಮ ಇನ್ಕ್ಯುಬೇಷನ್ ಅನ್ನು ರೂಪಿಸಲು ಸಹಾಯ ಮಾಡುತ್ತದೆ. ಎರಡು ದಿನಗಳ ಚರ್ಚೆಗಳು ರಾಜ್ಯಗಳಾದ್ಯಂತ ಉದ್ಯಮ ಇನ್ಕ್ಯುಬೇಷನ್ ಅನ್ನು ಹೆಚ್ಚಿಸಲು ಕ್ರಿಯಾತ್ಮಕ ಕಾರ್ಯತಂತ್ರಗಳನ್ನು ಒದಗಿಸುತ್ತವೆ ಮತ್ತು ವಿಕಸಿತ ಭಾರತ @ 2047ರ ದೃಷ್ಟಿಕೋನಕ್ಕೆ ಅನುಗುಣವಾಗಿ ಡಿಎವೈ-ಎನ್.ಆರ್.ಎಲ್.ಎಂ ಅಡಿಯಲ್ಲಿ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸಲು ಕೊಡುಗೆ ನೀಡುತ್ತವೆ ಎಂದು ನಿರೀಕ್ಷಿಸಲಾಗಿದೆ.
*****
(Release ID: 2165850)
Visitor Counter : 2