ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಸೆಮಿಕಾನ್ ಇಂಡಿಯಾ 2025 ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಜಾಗತಿಕ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತದ ಪಾತ್ರ ಅಭಿವೃದ್ಧಿಗೊಳ್ಳುತ್ತಿರುವುದನ್ನು ತೋರಿಸಿದೆ


ಉನ್ನತ ಸೆಮಿಕಂಡಕ್ಟರ್ ಸಿಇಒಗಳು ಭಾರತದ ಅಭಿವೃದ್ಧಿಗೊಳ್ಳುತ್ತಿರುವ ಪರಿಸರ ವ್ಯವಸ್ಥೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ

“ಸೆಮಿಕಂಡಕ್ಟರ್ ಗಳ ಪ್ರಪಂಚದ ಪ್ರಮುಖ ಸಿಇಒಗಳು ಭಾರತದ ಸಾಮರ್ಥ್ಯದಲ್ಲಿ ವಿಶ್ವಾಸ ಹೊಂದಿದ್ದಾರೆ ಮತ್ತು ಅವರು ಸೆಮಿಕಂಡಕ್ಟರ್ ನಾವೀನ್ಯತೆ ಮತ್ತು ಉತ್ಪಾದನೆಗೆ ಜಾಗತಿಕ ಕೇಂದ್ರವಾಗಿ ಭಾರತದ ಮೇಲೆ ಅಪಾರ ಭರವಸೆ ಇಟ್ಟಿದ್ದಾರೆ” – ಪ್ರಧಾನಮಂತ್ರಿ

“ವಿನ್ಯಾಸ, ಉತ್ಪಾದನೆ, ಪ್ಯಾಕೇಜಿಂಗ್ ಮತ್ತು ಹೈಟೆಕ್ ಸಾಧನಗಳು, ಎಲ್ಲವೂ ಭಾರತದಲ್ಲಿಯೇ ಲಭ್ಯವಿರುವಂತೆ  ನಾವು ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ” – ಪ್ರಧಾನಮಂತ್ರಿ

Posted On: 04 SEP 2025 8:24PM by PIB Bengaluru

ಭಾರತವನ್ನು ಮುಂದಿನ ಸೆಮಿಕಂಡಕ್ಟರ್ ಶಕ್ತಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ದೇಶದ ಪಯಣದಲ್ಲಿ ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸುತ್ತಾ, ದೇಶದ ಅತಿದೊಡ್ಡ ಸೆಮಿಕಂಡಕ್ಟರ್ ಸಮ್ಮೇಳನವಾದ 'ಸೆಮಿಕಾನ್ ಇಂಡಿಯಾ 2025' ಇಂದು ನವದೆಹಲಿಯ ದ್ವಾರಕಾದಲ್ಲಿರುವ ಯಶೋಭೂಮಿಯಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. 2025ರ ಸೆಪ್ಟೆಂಬರ್ 2 ರಿಂದ 4 ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ 350ಕ್ಕೂ ಹೆಚ್ಚು ಪ್ರದರ್ಶಕ ಕಂಪನಿಗಳು ಮತ್ತು 48 ದೇಶಗಳು ಹಾಗೂ ಪ್ರದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸೆಮಿಕಂಡಕ್ಟರ್ ವಿನ್ಯಾಸ, ಫ್ಯಾಬ್ ಮತ್ತು ಡಿಸ್ಪ್ಲೇ ತಯಾರಿಕೆ, ಪ್ಯಾಕೇಜಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ (R&D), ರಾಜ್ಯ ನೀತಿಗಳು, ಪರಿಸರ ವ್ಯವಸ್ಥೆಯ ಅಭಿವೃದ್ಧಿ ಮುಂತಾದ ವಿವಿಧ ವಿಷಯಗಳನ್ನು ಒಳಗೊಂಡ 3 ದಿನಗಳ ಸಮ್ಮೇಳನದ ಜೊತೆಗೆ, ನಾಲ್ಕು ದೇಶಗಳ ಪೆವಿಲಿಯನ್‌ ಗಳು, ಆರು ದೇಶಗಳ ದುಂಡುಮೇಜಿನ ಸಭೆಗಳು ಮತ್ತು ಕಾರ್ಯಪಡೆ ಅಭಿವೃದ್ಧಿ ಪೆವಿಲಿಯನ್ ಕೂಡ ಈ ಕಾರ್ಯಕ್ರಮದ ಭಾಗವಾಗಿದ್ದವು. ಒಟ್ಟಾರೆಯಾಗಿ, ಈ ಕಾರ್ಯಕ್ರಮಕ್ಕೆ 35,000 ನೋಂದಣಿಗಳು, 30,000 ಜನರ ಭೇಟಿ ಮತ್ತು 25,000 ಆನ್‌ಲೈನ್ ವೀಕ್ಷಣೆಗಳು ದಾಖಲಾದವು.

'ಸೆಮಿಕಾನ್ ಇಂಡಿಯಾ 2025' ಅನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಡಿಯಲ್ಲಿರುವ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM) ಮತ್ತು ಜಾಗತಿಕ ಸೆಮಿಕಂಡಕ್ಟರ್ ಉದ್ಯಮ ಸಂಘವಾದ 'ಸೆಮಿ' (SEMI) ಜಂಟಿಯಾಗಿ ಆಯೋಜಿಸಿದ್ದವು. ಈ ಮಹತ್ವದ ಕಾರ್ಯಕ್ರಮವು ಜಾಗತಿಕ ಉದ್ಯಮದ ನಾಯಕರು, ನೀತಿ ನಿರೂಪಕರು, ಶಿಕ್ಷಣ ತಜ್ಞರು, ಕಂಪನಿಗಳು ಮತ್ತು ಸ್ಟಾರ್ಟ್‌ ಅಪ್‌ ಗಳನ್ನು ಒಂದೆಡೆ ಸೇರಿಸಿ, ಹೂಡಿಕೆ, ಸಂವಾದ ಮತ್ತು ವ್ಯೂಹಾತ್ಮಕ ಪಾಲುದಾರಿಕೆಯನ್ನು ಉತ್ತೇಜಿಸಿತು. ಗಡಿಯಾಚೆಗಿನ ಸಹಯೋಗ, ಸಂಶೋಧನೆಯ ವಾಣಿಜ್ಯೀಕರಣ, ಕೌಶಲ್ಯ ಅಭಿವೃದ್ಧಿ, ಮತ್ತು ಜಾಗತಿಕ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ ಭಾರತದ ಏಕೀಕರಣವನ್ನು ಸಕ್ರಿಯಗೊಳಿಸುವ ಮೂಲಕ, ಈ ಸಮ್ಮೇಳನವು ದೇಶದ ಸೆಮಿಕಂಡಕ್ಟರ್ ಮಹತ್ವಾಕಾಂಕ್ಷೆಗಳನ್ನು ಮುನ್ನಡೆಸುವಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸಿತು.

ಬೆಂಗಳೂರು (2022), ಗಾಂಧಿನಗರ (2023), ಮತ್ತು ಗ್ರೇಟರ್ ನೋಯ್ಡಾ (2024) ರಲ್ಲಿ ನಡೆದ ಯಶಸ್ವಿ ಆವೃತ್ತಿಗಳ ನಂತರ, ದೆಹಲಿಯಲ್ಲಿ ನಡೆದ 2025ರ ಆವೃತ್ತಿಯು ಜಾಗತಿಕ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತದ ಪಾತ್ರವನ್ನು ಮರು ವ್ಯಾಖ್ಯಾನಿಸುವುದನ್ನು ಪ್ರದರ್ಶಿಸುವ ಮೂಲಕ ಹೊಸ ಮಾನದಂಡವನ್ನು ಸ್ಥಾಪಿಸಿತು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೊದಲ ದಿನ 'ಸೆಮಿಕಾನ್ ಇಂಡಿಯಾ 2025' ಅನ್ನು ಉದ್ಘಾಟಿಸಿದರು. ಎರಡನೇ ದಿನ, ಅವರು ಪ್ರದರ್ಶನಕ್ಕೆ ಭೇಟಿ ನೀಡಿ ಪ್ರದರ್ಶಕರೊಂದಿಗೆ ಸಂವಾದ ನಡೆಸಿದರು. ತದನಂತರ, ಜಾಗತಿಕ ದೃಷ್ಟಿಕೋನ ಮತ್ತು ಭಾರತದಲ್ಲಿ ಹೊರಹೊಮ್ಮುತ್ತಿರುವ ಸೆಮಿಕಂಡಕ್ಟರ್ ಕ್ಷೇತ್ರದ ಬಗ್ಗೆ ಜಾಗತಿಕ ಸಿಇಒ/ಸಿಎಕ್ಸ್‌ಒಗಳ ಅಭಿಪ್ರಾಯಗಳನ್ನು ತಿಳಿಯಲು ಅವರೊಂದಿಗೆ ದುಂಡುಮೇಜಿನ ಚರ್ಚೆ ನಡೆಸಿದರು.

No alternative text description for this image

ಜಾಗತಿಕ ಸೆಮಿಕಂಡಕ್ಟರ್ ಉದ್ಯಮವು ಭಾರತದತ್ತ ದೃಷ್ಟಿ ನೆಟ್ಟಿರುವ ಈ ಸಂದರ್ಭದಲ್ಲಿ, ಜಾಗತಿಕ ಚಿಪ್ ವಿನ್ಯಾಸ ಮತ್ತು ಉತ್ಪಾದನಾ ರಂಗದಲ್ಲಿ ಭಾರತವನ್ನು ಮುಂಚೂಣಿಯಲ್ಲಿ ಇರಿಸುವ ನಿಟ್ಟಿನಲ್ಲಿ 'ಸೆಮಿಕಾನ್ ಇಂಡಿಯಾ' ತನ್ನ ನಿರ್ಣಾಯಕ ಪಾತ್ರವನ್ನು ಮುಂದುವರಿಸಿದೆ.

ಸೆಮಿಕಾನ್ ಇಂಡಿಯಾ 2025ರ ಮೊದಲ ದಿನದಂದು, ಕೇಂದ್ರ ಸಚಿವರು ಚಿಪ್ ವಿನ್ಯಾಸ, ಕ್ಯಾಮೆರಾ ಮಾಡ್ಯೂಲ್‌ ಗಳು, ಮೈಕ್ರೊಫೋನ್ ಬಡ್ಸ್‌ ಗಳು, ಮಿನಿಯೇಚರ್ ಪ್ಯಾಕೇಜಿಂಗ್ ಮತ್ತು ಪ್ರತಿಭೆಗಳ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ದೇಶೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ 13 ಒಪ್ಪಂದಗಳನ್ನು  ಪ್ರಕಟಿಸಿದರು. ಇನ್ನು ಮೂರನೇ ದಿನ, ಭಾರತದ ಚಿಪ್ ವಿನ್ಯಾಸ ವ್ಯವಸ್ಥೆಯನ್ನು ವೇಗಗೊಳಿಸುವ ಕುರಿತು ಪ್ಯಾನೆಲ್ ಚರ್ಚೆಗಳು ಮತ್ತು ಪ್ರಮುಖ ಟಿಪ್ಪಣಿಗಳು ನಡೆದವು. ಈ ಕಾರ್ಯಕ್ರಮವು ವ್ಯಾಪಾರ ಮತ್ತು ತಂತ್ರಜ್ಞಾನ ನಾಯಕರು, ಸಂಶೋಧಕರು, ಉದ್ಯಮ ವಿಶ್ಲೇಷಕರು ಮತ್ತು ಮೈಕ್ರೋಎಲೆಕ್ಟ್ರಾನಿಕ್ಸ್ ಪೂರೈಕೆ ಸರಪಳಿಯಾದ್ಯಂತದ ವೃತ್ತಿಪರರು, ವಿನ್ಯಾಸ ಎಂಜಿನಿಯರ್‌ ಗಳು, ಸಲಕರಣೆಗಳ ತಯಾರಕರು, ವಿಜ್ಞಾನಿಗಳು, ತಂತ್ರಜ್ಞರು, ವಿದ್ಯಾರ್ಥಿಗಳು ಮತ್ತು ಇತರ ಅನೇಕರಿಂದ ವ್ಯಾಪಕ ಗಮನ ಸೆಳೆಯಿತು. ಸಮಾವೇಶದ ಸಮಾರೋಪ ಸಮಾರಂಭದಲ್ಲಿ, ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM) ಸಿಇಒ ಶ್ರೀ ಅಮಿತೇಶ್ ಕುಮಾರ್ ಸಿನ್ಹಾ ಮತ್ತು 'ಸೆಮಿ' (SEMI) ಅಧ್ಯಕ್ಷರಾದ ಶ್ರೀ ಅಜಿತ್ ಮನೋಚಾ ಅವರು ಜಂಟಿಯಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಇನ್ನೂ ಏಳು ಮಹತ್ವದ ಘೋಷಣೆಗಳನ್ನು ಮಾಡಲಾಯಿತು.

'ಸೆಮಿಕಾನ್ ಇಂಡಿಯಾ 2025' ಕೇವಲ ಸೆಮಿಕಂಡಕ್ಟರ್‌ಗಳಿಗೆ ಸೀಮಿತವಾದ ಸಮಾವೇಶವಾಗಿರಲಿಲ್ಲ; ಬದಲಾಗಿ, ಅದು ಆತ್ಮನಿರ್ಭರತೆ, ನಾವೀನ್ಯತೆ ಮತ್ತು ಜಾಗತಿಕ ತಂತ್ರಜ್ಞಾನ ಮಹಾಶಕ್ತಿಯಾಗಿ ಭಾರತದ ಉದಯದ ಸಂಕೇತವಾಗಿತ್ತು. "ಭಾರತದಲ್ಲೇ ವಿನ್ಯಾಸ ಮತ್ತು ತಯಾರಿಕೆ" ('Design and Make in India') ಎಂಬ ಧ್ಯೇಯದೊಂದಿಗೆ ಜಗತ್ತನ್ನು ಮುನ್ನಡೆಸುವ ಮಹತ್ವಾಕಾಂಕ್ಷೆಯನ್ನು ಈ ಸಮಾವೇಶವು ಪ್ರದರ್ಶಿಸಿತು ಮತ್ತು ಇದು ಭಾರತದ ಸೆಮಿಕಂಡಕ್ಟರ್ ಪಯಣದಲ್ಲಿ ಒಂದು ನಿರ್ಣಾಯಕ ಘಟ್ಟವನ್ನು ಗುರುತಿಸಿತು. ಸರ್ಕಾರದ ದೃಢವಾದ ಉಪಕ್ರಮಗಳು, ವ್ಯೂಹಾತ್ಮಕ ಹೂಡಿಕೆಗಳು ಮತ್ತು ಪರಿಸರ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಯ ಬಲದೊಂದಿಗೆ, ಭಾರತವು ಈ ಆಧಾರಸ್ತಂಭದಂತಹ ಉದ್ಯಮದಲ್ಲಿ ಜಾಗತಿಕ ನಾಯಕನಾಗಲು ಭದ್ರವಾದ ಅಡಿಪಾಯ ಹಾಕುತ್ತಿದೆ. ಇದು ಡಿಜಿಟಲ್ ನಾವೀನ್ಯತೆಯ ಭವಿಷ್ಯಕ್ಕೆ ಚಾಲನೆ ನೀಡಲಿದೆ.

“ಭಾರತವನ್ನು ಆತ್ಮನಿರ್ಭರ ಹಾಗೂ ಜಾಗತಿಕವಾಗಿ ಸ್ಪರ್ಧಾಶಕ್ತವನ್ನಾಗಿಸುವಂತಹ ಒಂದು ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ನಾವು ನಿರ್ಮಿಸುತ್ತಿದ್ದೇವೆ. ಭಾರತದ ಅತ್ಯಂತ ಸಣ್ಣ ಚಿಪ್, ಜಗತ್ತಿನ ಅತಿದೊಡ್ಡ ಬದಲಾವಣೆಗೆ ಚಾಲನೆ ನೀಡುವ ದಿನ ದೂರವಿಲ್ಲ. ನಮ್ಮ ಪಯಣ ತಡವಾಗಿ ಆರಂಭವಾಗಿರಬಹುದು, ಆದರೆ ನಮ್ಮನ್ನು ತಡೆಯಲು ಈಗ ಯಾವ ಶಕ್ತಿಗೂ ಸಾಧ್ಯವಿಲ್ಲ. ‘ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ’ ಎಂಬ ಮಂತ್ರವನ್ನು ಪಾಲಿಸುವ ಮೂಲಕವೇ ಭಾರತ ಇಂದು ಈ ಹಂತಕ್ಕೆ ತಲುಪಿದೆ. ಮುಂಬರುವ ದಿನಗಳಲ್ಲಿ, ನಾವು ಮುಂದಿನ ತಲೆಮಾರಿನ ಸುಧಾರಣೆಗಳ ಹೊಸ ಅಧ್ಯಾಯವನ್ನೇ ಆರಂಭಿಸಲಿದ್ದೇವೆ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್‌ ನ ಮುಂದಿನ ಹಂತದ ರೂಪುರೇಷೆಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿಯೂ ನಾವು ತೊಡಗಿದ್ದೇವೆ. ನಮ್ಮ ನೀತಿಗಳು ಕೇವಲ ಅಲ್ಪಾವಧಿಯ ಸಂಕೇತಗಳಲ್ಲ, ಬದಲಾಗಿ ಅವು ದೀರ್ಘಕಾಲೀನ ಬದ್ಧತೆಗಳಾಗಿವೆ” ಎಂದು ಸೆಮಿಕಾನ್ ಇಂಡಿಯಾ 2025ರ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು.

 

*****
 


(Release ID: 2164026) Visitor Counter : 2