ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಮೇಡ್ ಇನ್ ಇಂಡಿಯಾ ಚಿಪ್ ಗಳ ಮೊದಲ ಸೆಟ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ನೀಡಲಾಯಿತು; ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಇದನ್ನು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದರು ಮತ್ತು ಪ್ರಧಾನಿಯವರ ದೃಷ್ಟಿಕೋನ, ಬಲವಾದ ಇಚ್ಛಾಶಕ್ತಿ ಮತ್ತು ನಿರ್ಣಾಯಕ ಕ್ರಮಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದರು


ಶೇ.7.8 ಜಿಡಿಪಿ ಬೆಳವಣಿಗೆಯಿಂದ ಮೊದಲ 'ಮೇಡ್ ಇನ್ ಇಂಡಿಯಾ' ಚಿಪ್ ಗಳೊಂದಿಗೆ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯವರೆಗೆ - ಭಾರತವು ಸುಸ್ಥಿರತೆಯ ದಾರಿದೀಪವಾಗಿದೆ: ಕೇಂದ್ರ ಸಚಿವರಾದ ವೈಷ್ಣವ್

ಸೆಮಿಕಾನ್ ಇಂಡಿಯಾ 2025 ರಲ್ಲಿ 12 ಒಪ್ಪಂದಗಳನ್ನು ಘೋಷಿಸಲಾಗಿದೆ: ಕ್ಯಾಮೆರಾ ಮಾಡ್ಯೂಲ್ ಗಳು, ಮೈಕ್ರೊಫೋನ್ ಬಡ್ ಗಳು, ಅತಿಸಣ್ಣ ಪ್ಯಾಕೇಜಿಂಗ್ ಮತ್ತು ಪ್ರತಿಭಾ ಅಭಿವೃದ್ಧಿ ಪರಿಸರ ವ್ಯವಸ್ಥೆಯಂತಹ ಉತ್ಪನ್ನಗಳ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಸ್ಥಳೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು ಪ್ರಮುಖ ಉದ್ದೇಶವಾಗಿದೆ

ಶುದ್ಧ ಇಂಧನ, ಕ್ವಾಂಟಮ್ ಮತ್ತು ಮುಂಚೂಣಿ ವಲಯಗಳಲ್ಲಿ ಸೆಮಿಕಂಡಕ್ಟರ್ ಕ್ರಾಂತಿಯನ್ನು ಹೆಚ್ಚಿಸಲು $1 ಬಿಲಿಯನ್ ಬದ್ಧತೆಯೊಂದಿಗೆ ಕೇಂದ್ರ ಸಚಿವರು ಡೀಪ್ ಟೆಕ್ ಅಲೈಯನ್ಸ್ ಅನ್ನು ಘೋಷಿಸಿದರು

ಮೊದಲ ಹಂತದಲ್ಲಿ ಫ್ಯಾಬ್ ಗಳು, ಒ ಎಸ್ ಎ ಟಿ, ಬಂಡವಾಳ ಉಪಕರಣಗಳು ಮತ್ತು ವಸ್ತುಗಳ ರೂಪದಲ್ಲಿ ಬಲವಾದ ಪೂರಕ ವ್ಯವಸ್ಥೆಯನ್ನು ನಿರ್ಮಿಸಿದ ನಂತರ ಭಾರತವನ್ನು ಉತ್ಪನ್ನ ರಾಷ್ಟ್ರವನ್ನಾಗಿ ಮಾಡುವತ್ತ ಐ ಎಸ್ ಎಂ 2.0 ಗಮನಹರಿಸುತ್ತದೆ

ಭಾರತದ ಸೆಮಿಕಂಡಕ್ಟರ್ ಉತ್ಪಾದನೆಯು ಈಗಾಗಲೇ ಜಾಗತಿಕವಾಗಿ ಶೇ.15-30 ರಷ್ಟು ವೆಚ್ಚ-ಸ್ಪರ್ಧಾತ್ಮಕವಾಗಿದೆ: ಕೇಂದ್ರ ಸಚಿವರಾದ ವೈಷ್ಣವ್

Posted On: 02 SEP 2025 8:02PM by PIB Bengaluru

ಭಾರತದ ಸೆಮಿಕಂಡಕ್ಟರ್ ಪ್ರಯಾಣವು ಇಂದು ಐತಿಹಾಸಿಕ ಮೈಲಿಗಲ್ಲನ್ನು ತಲುಪಿದ್ದು, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಪೈಲಟ್ ಯೋಜನೆಯಡಿಯಲ್ಲಿ ತಯಾರಿಸಿದ ಮೊದಲ ಮೇಡ್ ಇನ್ ಇಂಡಿಯಾ ಚಿಪ್ ಗಳನ್ನು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ನೀಡಲಾಯಿತು. ಡಿಸೆಂಬರ್ 2021ರಲ್ಲಿ ಪ್ರಾರಂಭವಾದ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಕೇವಲ ಮೂರೂವರೆ ವರ್ಷಗಳಲ್ಲಿ ಅನುಮೋದನೆಯಿಂದ ಉತ್ಪಾದನೆಯವರೆಗೆ ಸಾಗಿದೆ. ಕೇಂದ್ರ ಸಚಿವರು ಈ ಸಾಧನೆಯನ್ನು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದರು ಮತ್ತು ಪ್ರಧಾನ ಮಂತ್ರಿಯವರ ದೂರದೃಷ್ಟಿ, ಬಲವಾದ ಇಚ್ಛಾಶಕ್ತಿ ಮತ್ತು ನಿರ್ಣಾಯಕ ಕ್ರಮಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಕೇಂದ್ರ ಸಚಿವರಾದ ವೈಷ್ಣವ್ ಅವರು ಶೇ.7.8 ಜಿಡಿಪಿ ಬೆಳವಣಿಗೆಯಿಂದ ಮೊದಲ 'ಮೇಡ್ ಇನ್ ಇಂಡಿಯಾ' ಚಿಪ್ ಗಳೊಂದಿಗೆ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯವರೆಗೆ - ಭಾರತವು ಸುಸ್ಥಿರತೆಯ ದಾರಿದೀಪವಾಗಿ ನಿಂತಿದೆ ಎಂದು ಹೇಳಿದರು:

ಬೌದ್ಧಿಕ ಆಸ್ತಿ ಹಕ್ಕುಗಳನ್ನು ಗೌರವಿಸಲು, ಪೂರೈಕೆ ಸರಪಳಿ ಅಭಿವೃದ್ಧಿಯನ್ನು ಬೆಂಬಲಿಸಲು ಮತ್ತು ಜಾಗತಿಕ ಪಾಲುದಾರರೊಂದಿಗೆ ಸಹ-ಅಭಿವೃದ್ಧಿ ಮಾದರಿಗಳನ್ನು ಉತ್ತೇಜಿಸಲು ಭಾರತದ ಸೆಮಿಕಂಡಕ್ಟರ್ ಮಿಷನ್ ಅನ್ನು ನಂಬಿಕೆಯ ಆಧಾರದಲ್ಲಿ ನಿರ್ಮಿಸಲಾಗಿದೆ ಎಂದು ಕೇಂದ್ರ ಸಚಿವ ವೈಷ್ಣವ್ ಒತ್ತಿ ಹೇಳಿದರು. "ಭಾರತವು ಯಾವಾಗಲೂ ಪರಸ್ಪರ ಬೆಳವಣಿಗೆ ಮತ್ತು ಗೆಲುವಿನ ಸಹಯೋಗಗಳನ್ನು ಬೆಳೆಸುವ ಪಾಲುದಾರನಾಗಿ ಜಗತ್ತಿನೊಂದಿಗೆ ಸಾಗಿದೆ" ಎಂದು ಅವರು ಹೇಳಿದರು, ಈ ವಿಶ್ವಾಸಾರ್ಹ ಸ್ಥಾನವು ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತದ ಪ್ರಬಲ ಅನುಕೂಲಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಸೆಮಿಕಾನ್ ಇಂಡಿಯಾ 2025ರ ಸಂದರ್ಭದಲ್ಲಿ 12 ತಿಳುವಳಿಕೆ ಒಪ್ಪಂದಗಳನ್ನು ಘೋಷಿಸಲಾಯಿತು. ಈ ಒಪ್ಪಂದಗಳು ದೇಶದಲ್ಲಿ ಸ್ವಾವಲಂಬಿ ಮತ್ತು ಭವಿಷ್ಯಕ್ಕೆ ಸಿದ್ಧವಾದ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯೊಂದಿಗೆ ಉತ್ಪನ್ನ ಅಭಿವೃದ್ಧಿಯನ್ನು ಹೆಚ್ಚಿಸುವುದು, ಸೇವಾ ಸಾಮರ್ಥ್ಯಗಳನ್ನು ವಿಸ್ತರಿಸುವುದು ಮತ್ತು ಕೌಶಲ್ಯ ಅಭಿವೃದ್ಧಿ ವಲಯವನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸುತ್ತವೆ.

ಶ್ರೀ ವೈಷ್ಣವ್ ಅವರು ನಾವೀನ್ಯತೆಯನ್ನು ಮತ್ತಷ್ಟು ಬಲಪಡಿಸಲು ಡೀಪ್ ಟೆಕ್ ಅಲೈಯನ್ಸ್ ರಚನೆಯನ್ನು ಘೋಷಿಸಿದರು, ಸುಮಾರು ಒಂದು ಬಿಲಿಯನ್ ಡಾಲರ್ ಗಳನ್ನು ಈಗಾಗಲೇ ಬದ್ಧಗೊಳಿಸಲಾಗಿದೆ. ಆರಂಭದಲ್ಲಿ ಸೆಮಿಕಂಡಕ್ಟರ್ ಗಳ ಮೇಲೆ ಕೇಂದ್ರೀಕರಿಸುವ ಈ ಅಲೈಯನ್ಸ್, ಶುದ್ಧ ಇಂಧನ, ಜೈವಿಕ ತಂತ್ರಜ್ಞಾನ, ಕ್ವಾಂಟಮ್ ತಂತ್ರಜ್ಞಾನಗಳು ಮತ್ತು ಬಾಹ್ಯಾಕಾಶದಂತಹ ಇತರ ಮುಂಚೂಣಿ ವಲಯಗಳಿಗೆ ವಿಸ್ತರಿಸಲಿದೆ. ಇದು ಉದಯೋನ್ಮುಖ ಡೀಪ್ ಟೆಕ್ ಉದ್ಯಮಗಳಿಗೆ ಹೆಚ್ಚು ಅಗತ್ಯವಿರುವ ವೆಂಚರ್ ಬಂಡವಾಳ ಬೆಂಬಲವನ್ನು ಒದಗಿಸುತ್ತದೆ ಎಂದು ಸಚಿವರು ಹೇಳಿದರು.

ಮೊಹಾಲಿಯ ಸೆಮಿಕಂಡಕ್ಟರ್ ಪ್ರಯೋಗಾಲಯದ ಆಧುನೀಕರಣ ಕಾರ್ಯಕ್ರಮವು ಉತ್ತಮವಾಗಿ ಪ್ರಗತಿಯಲ್ಲಿದೆ ಎಂದು ಕೇಂದ್ರ ಸಚಿವರು ಹೇಳಿದರು, ಇದು ಉತ್ಪಾದನಾ ಮಟ್ಟವನ್ನು ಹೆಚ್ಚಿಸುವುದು, ಹೊಸ ಉತ್ಪನ್ನ ಟೇಪ್-ಔಟ್ ಗಳನ್ನು ಸಕ್ರಿಯಗೊಳಿಸುವುದು ಮತ್ತು ಭಾರತದ ಹೆಚ್ಚಿನ ಮೌಲ್ಯದ, ಮಧ್ಯಮ-ಪ್ರಮಾಣದ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಐ ಎಸ್ ಎಂ 1.0 ರ ಯಶಸ್ಸಿನ ಆಧಾರದಲ್ಲಿ, ಸರ್ಕಾರವು ಐ ಎಸ್ ಎಂ 2.0 ಅನ್ನು ಪ್ರಾರಂಭಿಸಲು ಸಹ ತಯಾರಿ ನಡೆಸುತ್ತಿದೆ, ಇದು ಸಂಪೂರ್ಣ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯನ್ನು ಒಳಗೊಳ್ಳಲು ಫ್ಯಾಬ್ ಗಳು, ಒ ಎಸ್ ಎ ಟಿ ಘಟಕಗಳು, ಬಂಡವಾಳ ಉಪಕರಣಗಳು ಮತ್ತು ಸಾಮಗ್ರಿಗಳಿಗೆ ಬೆಂಬಲವನ್ನು ವಿಸ್ತರಿಸುತ್ತದೆ ಎಂದು ಅವರು ಹೇಳಿದರು.

ಹತ್ತು ಅನುಮೋದಿತ ಯೋಜನೆಗಳಲ್ಲಿ ರಫ್ತು ಒಂದು ಅವಿಭಾಜ್ಯ ಅಂಗವಾಗಲಿದ್ದು, ಭಾರತದಲ್ಲಿ ತಯಾರಾಗುವ ಚಿಪ್ ಗಳನ್ನು ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಬಳಸುವುದನ್ನು ಖಚಿತಪಡಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು. ಸ್ವತಂತ್ರ ಅಧ್ಯಯನಗಳು ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಯು ಈಗಾಗಲೇ ಜಾಗತಿಕ ಮಾನದಂಡಗಳಿಗಿಂತ ಶೇ.15-30 ರಷ್ಟು ವೆಚ್ಚ-ಸ್ಪರ್ಧಾತ್ಮಕವಾಗಿದೆ ಎಂದು ಸೂಚಿಸುತ್ತವೆ. ಭಾರತವು ಎಂದಿಗೂ ಯೋಜನೆಗಳನ್ನು ಅನುಮೋದಿಸಲು ಆತುರಪಡಲಿಲ್ಲ, ಬದಲಿಗೆ ಸುಸ್ಥಿರ ಪ್ರಗತಿಗಾಗಿ ವೃತ್ತಿಪರ ಮೌಲ್ಯಮಾಪನವನ್ನು ಖಚಿತಪಡಿಸಿಕೊಂಡಿದೆ ಎಂದು ಶ್ರೀ ವೈಷ್ಣವ್ ಒತ್ತಿ ಹೇಳಿದರು. ಎರಡು ಫ್ಯಾಬ್ ಗಳು ಈಗಾಗಲೇ ಜಾರಿಯಲ್ಲಿದ್ದು, ಇನ್ನೂ ಹೆಚ್ಚಿನವುಗಳು ಸಿದ್ಧವಾಗುತ್ತಿವೆ, ಇವುಗಳ ನಂತರ ಬೆಳವಣಿಗೆ ವೇಗಗೊಳ್ಳುತ್ತದೆ ಎಂದು ಅವರು ಹೇಳಿದರು.

ಸೆಮಿಕಾನ್ ಇಂಡಿಯಾ 2025 ರಲ್ಲಿ, ASML, Lam Research, Applied Materials, Merck, ಮತ್ತು Tokyo Electron ನಂತಹ ಉಪಕರಣಗಳು ಮತ್ತು ಸಾಮಗ್ರಿ ವಲಯದ ದೈತ್ಯರು ಒಳಗೊಂಡಂತೆ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯ ಪ್ರತಿಯೊಂದು ಪ್ರಮುಖ ಜಾಗತಿಕ ಪಾಲುದಾರರು ತಮ್ಮ ಉಪಸ್ಥಿತಿಯನ್ನು ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಭಾರತದ ಸೆಮಿಕಂಡಕ್ಟರ್ ಮಿಷನ್ ನಲ್ಲಿ ಜಗತ್ತು ಹೊಂದಿರುವ ಬಲವಾದ ವಿಶ್ವಾಸವು ಅವರ ಭಾಗವಹಿಸುವಿಕೆಯಲ್ಲಿ ಪ್ರತಿಬಿಂಬಿಸುತ್ತಿದೆ ಎಂದು ಶ್ರೀ ವೈಷ್ಣವ್ ಹೇಳಿದರು.

ಒಂದು ವಿಶಿಷ್ಟ ಉಪಕ್ರಮದಲ್ಲಿ, ಸೆಮಿ-ಕಂಡಕ್ಟರ್ ಲ್ಯಾಬೋರೇಟರಿಯಲ್ಲಿ (ಎಸ್ ಸಿ ಎಲ್) ಭಾರತೀಯ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿ ತಯಾರಿಸಿದ 20 ಚಿಪ್ ಗಳನ್ನು ಸಹ ಪ್ರಧಾನ ಮಂತ್ರಿಯವರಿಗೆ ಪ್ರಸ್ತುತಪಡಿಸಲಾಯಿತು. ದೇಶಾದ್ಯಂತ 78 ವಿಶ್ವವಿದ್ಯಾಲಯಗಳು ಸುಧಾರಿತ ಇಡಿಎ ಪರಿಕರಗಳನ್ನು ಬಳಸುತ್ತಿರುವುದರಿಂದ, ಭಾರತವು ಅಪಾರವಾದ ಪ್ರತಿಭಾನ್ವಿತ ಗುಂಪನ್ನು ಸೃಷ್ಟಿಸುತ್ತಿದೆ ಎಂದು ಶ್ರೀ ವೈಷ್ಣವ್ ಹೇಳಿದರು, ಇದು ಈಗಾಗಲೇ ಜಾಗತಿಕ ಸೆಮಿಕಂಡಕ್ಟರ್ ಕಾರ್ಯಪಡೆಯ ಸುಮಾರು ಶೇ.20 ರಷ್ಟಿದೆ. ಪ್ರತಿಭಾ ಅಭಿವೃದ್ಧಿ ಮತ್ತು ನಾವೀನ್ಯತೆ, ಮಿಷನ್ ನ ಕೇಂದ್ರಭಾಗದಲ್ಲಿದೆ ಎಂದು ಅವರು ಹೇಳಿದರು.

ಭಾರತವು ತನ್ನ ವಿನ್ಯಾಸ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯನ್ನು ಪೋಷಿಸುತ್ತಿದೆ, 28 ಕ್ಕೂ ಹೆಚ್ಚು ನವೋದ್ಯಮಗಳು ಒಂದು ಯೋಜನೆಯಿಂದ ಮತ್ತೊಂದು ಉತ್ಪನ್ನಕ್ಕೆ ಚಲಿಸುತ್ತಿವೆ. ಇತ್ತೀಚಿನ ಒಪ್ಪಂದಗಳು ಸಂಪೂರ್ಣ ಐಒಟಿ ಚಿಪ್ ಸೆಟ್ ಗಳು ಮತ್ತು ಕ್ಯಾಮೆರಾ ವ್ಯವಸ್ಥೆಗಳನ್ನು ಒಳಗೊಂಡಿವೆ, ಐಐಟಿ ಮದ್ರಾಸ್ ನಂತಹ ಸಂಸ್ಥೆಗಳು ಸ್ಥಳೀಯ ಮೈಕ್ರೋಕಂಟ್ರೋಲರ್ ಗಳು ಮತ್ತು ಪ್ರೊಸೆಸರ್ ಗಳನ್ನು ಬಿಡುಗಡೆ ಮಾಡಿವೆ. ವಿನ್ಯಾಸ ಆಧಾರಿತ ಪ್ರೋತ್ಸಾಹಕ (ಡಿ ಎಲ್ ಐ) ಯೋಜನೆಯು ಅಮೂಲ್ಯವಾದ ಐಪಿಗಳ ಪೋರ್ಟ್ಫೋಲಿಯೊವನ್ನು ಸೃಷ್ಟಿಸಿದೆ ಮತ್ತು ಅಭಿವೃದ್ಧಿಗಾಗಿ 25 ಆದ್ಯತೆಯ ಉತ್ಪನ್ನಗಳನ್ನು ಗುರುತಿಸಲಾಗಿದೆ.

2030 ರ ವೇಳೆಗೆ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಕೈಗಾರಿಕಾ ಪ್ರಗತಿ ಮತ್ತು ಪ್ರತಿಭೆ, ವಿಶ್ವಾಸ ಮತ್ತು ತಂತ್ರಜ್ಞಾನದಲ್ಲಿ ಭಾರತದ ಬಲವಾದ ಸ್ಥಾನದೊಂದಿಗೆ, ರಾಷ್ಟ್ರವು ಸೆಮಿಕಂಡಕ್ಟರ್ ಗಳಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲು ಸಜ್ಜಾಗಿದೆ, ಭಾರತವನ್ನು ವಿಶ್ವದ ಸೆಮಿಕಂಡಕ್ಟರ್ ಕೇಂದ್ರವನ್ನಾಗಿ ಮಾಡುವ ಪ್ರಧಾನ ಮಂತ್ರಿಯವರ ದೃಷ್ಟಿಕೋನವನ್ನು ಈಡೇರಿಸುತ್ತದೆ.

ಸೆಮಿಕಾನ್ ಇಂಡಿಯಾ 2025 ರಲ್ಲಿ ಎಂಒಯುಗಳು / ಘೋಷಣೆಗಳು

1. ಭಾರತದಲ್ಲಿ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ಸೆಮಿಕಂಡಕ್ಟರ್ ಸಾಮರ್ಥ್ಯಗಳನ್ನು ಬಲಪಡಿಸಲು ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಮರ್ಕ್ ನಡುವೆ ಒಪ್ಪಂದ
2. ದೇಶೀಯ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಐಪಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (ಸಿ-ಡಿಎಸಿ) ನಡುವೆ ಒಪ್ಪಂದ
3. ಸ್ಪರ್ಶ್-ಐಕ್ಯೂ, 3rdiTech, ಫೋಕಲಿ ಮತ್ತು ಸೆನ್ಸ್ಸೆಮಿ ಟೆಕ್ನಾಲಜೀಸ್ ಸಹಯೋಗದೊಂದಿಗೆ ಕೇನ್ಸ್ ಸೆಮಿಕಾನ್ ಬಿಡುಗಡೆ ಮಾಡಿದ ಭಾರತದ ಮೊದಲ ಸಂಪೂರ್ಣ ಸ್ಥಳೀಯ ಸ್ವಯಂಚಾಲಿತ ಕ್ಯಾಮೆರಾ ಮಾಡ್ಯೂಲ್ ನ ಜಂಟಿ ಅಭಿವೃದ್ಧಿಯನ್ನು ಪ್ರಾರಂಭಿಸುವ ಘೋಷಣೆ. 
4. ಇನ್ಫಿನಿಯಾನ್ ಸಹಯೋಗದೊಂದಿಗೆ ಕೆನ್ಸ್ ಸೆಮಿಕಾನ್ ಭಾರತದ ಮೊದಲ ಎಂಇಎಂ ಮೈಕ್ರೊಫೋನ್ ಮತ್ತು ಸುಧಾರಿತ ಸೆಮಿಕಂಡಕ್ಟರ್ ಪ್ಯಾಕೇಜ್ ನ ಘೋಷಣೆ.
5. ಐಐಟಿ ಗಾಂಧಿನಗರ ಮತ್ತು ಸಿ-ಡಿಎಸಿ ಸಹಯೋಗದೊಂದಿಗೆ ಎಲ್ & ಟಿ ಸೆಮಿಕಂಡಕ್ಟರ್ನಿಂದ ಸೆಕ್ಯುರಿಟಿ ಆರ್ಕಿಟೆಕ್ಚರ್ ನಲ್ಲಿ ನಿರ್ಮಿಸಲಾದ ಎಲೆಕ್ಟ್ರಾನಿಕ್ ಪಾಸ್ಪೋರ್ಟ್ ಗಳಂತಹ ಮುಂದಿನ ಪೀಳಿಗೆಯ ಡಿಜಿಟಲ್ ಗುರುತಿನ ಪರಿಹಾರಕ್ಕೆ ಶಕ್ತಿ ತುಂಬಲು ವಿನ್ಯಾಸಗೊಳಿಸಲಾದ ಸ್ಮಾರ್ಟ್ ಆಪರೇಟಿಂಗ್ ಸಿಸ್ಟಮ್ ನೊಂದಿಗೆ ಅಳವಡಿಸಲಾದ ಮೇಕ್-ಇನ್-ಇಂಡಿಯಾ ಸೆಕ್ಯೂರ್ ಚಿಪ್ ನ ಜಂಟಿ ಅಭಿವೃದ್ಧಿಯ ಘೋಷಣೆ.
6. ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಕ್ವಾಂಟಮ್ ನಾಯಕತ್ವಕ್ಕಾಗಿ ರಾಷ್ಟ್ರೀಯ ನಾವೀನ್ಯತೆ ಕೇಂದ್ರವನ್ನು ನಿರ್ಮಿಸಲು ಎಲ್ & ಟಿ ಸೆಮಿಕಂಡಕ್ಟರ್ ಮತ್ತು ಐ ಐ ಎಸ್ ಸಿ ಬೆಂಗಳೂರು ನಡುವೆ ಒಪ್ಪಂದ.
7.  ಗುಜರಾತಿನ ಮಹಿಳಾ ಸಹ-ನೇತೃತ್ವದ ದೇಶೀಯ ಸ್ಟಾರ್ಟ್ಅಪ್ ಆಗಿರುವ ಇಂಡಿಸೆಮಿಕ್ ನಿಂದ ಸಿ-ಡಿಎಸಿ ನಿಂದ ಬ್ಲೂಟೂತ್ ಮತ್ತು LoRa ಸಂಪರ್ಕದೊಂದಿಗೆ ಸ್ಥಳೀಯ ವೆಗಾ ಪ್ರೊಸೆಸರ್ ಅನ್ನು ಸಂಯೋಜಿಸುವ ಭಾರತದ ಮೊದಲ ಐಒಟಿ ಎವಲ್ಯೂಷನ್ ಬೋರ್ಡ್ ಅನಾವರಣ.
8. ಸೆಮಿಕಂಡಕ್ಟರ್ ತಂತ್ರಜ್ಞಾನಗಳಲ್ಲಿ ಸೆಮಿಕಂಡಕ್ಟರ್ ಕೌಶಲ್ಯ, ಉದ್ಯಮ ಶೈಕ್ಷಣಿಕ ಸಂಪರ್ಕಗಳು ಮತ್ತು ಸಾಮರ್ಥ್ಯ ವರ್ಧನೆಯನ್ನು ಉತ್ತೇಜಿಸಲು NIELIT ಮತ್ತು ಸಿಂಗಾಪುರ್ ಸೆಮಿಕಂಡಕ್ಟರ್ ಕೈಗಾರಿಕಾ ಸಂಘ (SSIA) ನಡುವೆ ಒಪ್ಪಂದ.
9. ಐ ಎಸ್ ಎಂ ನ ರಾಷ್ಟ್ರೀಯ ಮಾರ್ಗಸೂಚಿಗೆ ಅನುಗುಣವಾಗಿ ಅನ್ವಯಿಕ ಸಂಶೋಧನೆ ಮತ್ತು ನಾವೀನ್ಯತೆಯನ್ನು ಮುಂದುವರಿಸುವುದರ ಜೊತೆಗೆ, ಭಾರತದ ವೇಗವಾಗಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ಭವಿಷ್ಯಕ್ಕೆ ಸಿದ್ಧವಾಗಿರುವ ಪ್ರತಿಭಾ ಸಮೂಹವನ್ನು ನಿರ್ಮಿಸಲು ಸಹಯೋಗದ ಚೌಕಟ್ಟನ್ನು ಸ್ಥಾಪಿಸಲು ಐ ಎಸ್ ಎಂ ಮತ್ತು ನ್ಯೂ ಏಜ್ ಮೇಕರ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NAMTECH) ನಡುವೆ ತಿಳುವಳಿಕೆ ಒಪ್ಪಂದ.
10. ಅರಿಜೋನಾ ವಿಶ್ವವಿದ್ಯಾಲಯ ಮತ್ತು ಭಾರತ ಸೆಮಿಕಂಡಕ್ಟರ್ ಮಿಷನ್ (ಐ ಎಸ್ ಎಂ) ನಡುವೆ ವೈಜ್ಞಾನಿಕ ಮತ್ತು ಶೈಕ್ಷಣಿಕ ಸಹಯೋಗಕ್ಕಾಗಿ ತಿಳುವಳಿಕೆ ಒಪ್ಪಂದ.
11. ಡಿ ಎಲ್ ಐ ಯೋಜನೆಯಡಿಯಲ್ಲಿ ಅನುಮೋದಿತ ಕಂಪನಿಗಳಿಗೆ ಸಿನಾಪ್ಸಿಸ್ ಐಪಿಗಳ ಹೊಂದಿಕೊಳ್ಳುವ ಪ್ರವೇಶವನ್ನು ಒದಗಿಸಲು ಸಿ-ಡಿಎಸಿ, ಸಿನಾಪ್ಸಿಸ್ ಮತ್ತು ಐಐಟಿ ಮದ್ರಾಸ್ ಪ್ರವರ್ತಕ್ ನಡುವೆ ತಿಳುವಳಿಕೆ ಒಪ್ಪಂದ.
12.  ಡಿ ಎಲ್ ಐ ಯೋಜನೆಯಡಿಯಲ್ಲಿ ಅನುಮೋದಿತ ಕಂಪನಿಗಳಿಗೆ ವಿನ್ಯಾಸ ಮೂಲಸೌಕರ್ಯ ಬೆಂಬಲದ ಲಭ್ಯತೆಯ ಕುರಿತು ಘೋಷಣೆ, ಅದು ಈ ಕೆಳಗಿನವುಗಳನ್ನು ಒಳಗೊಂಡಿದೆ:

ಐಪಿ ಕೋರ್ ನಿಂದ

ಎ) ಐಟಿಸಿ ಕೊರಿಯಾ

ಬಿ) ಸೆಕ್ಯೂರ್ ಐಸಿ

ಸಿ) ಕ್ಯಾಡೆನ್ಸ್ ಡಿಸೈನ್ ಸಿಸ್ಟಮ್ಸ್ 

ಡಿ) ಅನಲಾಗ್ ಬಿಟ್ಸ್

ಇಡಿಎ ಪರಿಕರಗಳು

ಎ) ಸಿಮ್ ಯೋಗ್ ಟೆಕ್ನಾಲಜೀಸ್

ಬಿ) ಕೇಡರ್ ಡಿಸೈನ್ ಸಿಸ್ಟಮ್ಸ್

ಪೋಸ್ಟ್ ಸಿಲಿಕಾನ್ ವ್ಯಾಲಿಡೇಶನ್ ಸೇವೆಗಳು

ಎ) ಎಮರ್ಸನ್ ಗ್ಲೋಬಲ್

ಬಿ) ಸ್ಮಾರ್ಟ್ಸಾಕ್ ಸೊಲ್ಯೂಷನ್ಸ್

ಸಿ) ಸೈಂಟ್ ಸೆಮಿಕಂಡಕ್ಟರ್

ಸೆಮಿಕಾನ್ ಇಂಡಿಯಾ ಬಗ್ಗೆ

ಜಾಗತಿಕ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನಾ ಪರಿಸರ ವ್ಯವಸ್ಥೆಯ ಕಾರ್ಯನಿರ್ವಾಹಕರು ಮತ್ತು ಪ್ರಮುಖ ತಜ್ಞರನ್ನು ಒಟ್ಟುಗೂಡಿಸುವ, ಎಸ್ ಇ ಎಂ ಐ ವಿಶ್ವಾದ್ಯಂತ ನಡೆಸುವ ಎಂಟು ವಾರ್ಷಿಕ ಸೆಮಿಕಾನ್ ಪ್ರದರ್ಶನಗಳಲ್ಲಿ ಸೆಮಿಕಾನ್ ಇಂಡಿಯಾ ಒಂದಾಗಿದೆ. ಈ ಕಾರ್ಯಕ್ರಮವು ತಾಂತ್ರಿಕ ನಾವೀನ್ಯತೆಯ ಭವಿಷ್ಯದತ್ತ ಒಂದು ರೋಮಾಂಚಕಾರಿ ಪ್ರಯಾಣದ ಆರಂಭವನ್ನು ಗುರುತಿಸುತ್ತದೆ, ಜಾಗತಿಕ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯಾದ್ಯಂತ ಸಹಯೋಗ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುತ್ತದೆ.

ಎಸ್ ಇ ಎಂ ಐ ಬಗ್ಗೆ

ಎಸ್ ಇ ಎಂ ಐ ಎಂಬುದು ಜಾಗತಿಕ ಉದ್ಯಮ ಸಂಘವಾಗಿದ್ದು, ಇದು 3,000 ಕ್ಕೂ ಹೆಚ್ಚು ಸದಸ್ಯ ಕಂಪನಿಗಳು ಮತ್ತು ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ವಿನ್ಯಾಸ ಮತ್ತು ಉತ್ಪಾದನಾ ಪೂರೈಕೆ ಸರಪಳಿಯಲ್ಲಿ ವಿಶ್ವಾದ್ಯಂತ 1.5 ಮಿಲಿಯನ್ ಗಿಂತಲೂ ಹೆಚ್ಚು ವೃತ್ತಿಪರರನ್ನು ಸಂಪರ್ಕಿಸುತ್ತದೆ. ಇದು ವಕಾಲತ್ತು, ಕಾರ್ಯಪಡೆ ಅಭಿವೃದ್ಧಿ, ಸುಸ್ಥಿರತೆ, ಪೂರೈಕೆ ಸರಪಳಿ ನಿರ್ವಹಣೆ ಮತ್ತು ಇತರ ಕಾರ್ಯಕ್ರಮಗಳ ಮೂಲಕ ಪ್ರಮುಖ ಉದ್ಯಮ ಸವಾಲುಗಳಿಗೆ ಪರಿಹಾರಗಳ ಕುರಿತು ಸದಸ್ಯರ ಸಹಯೋಗವನ್ನು ಬೆಳೆಸುತ್ತದೆ.

ಐ ಎಸ್ ಎಂ ಬಗ್ಗೆ

ಭಾರತ ಸೆಮಿಕಂಡಕ್ಟರ್ ಮಿಷನ್ (ಐ ಎಸ್ ಎಂ) ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಸ್ವತಂತ್ರ ಸಂಸ್ಥೆಯಾಗಿದೆ. ಇದು ಭಾರತದಲ್ಲಿ ಸುಸ್ಥಿರ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಸೆಮಿಕಂಡಕ್ಟರ್ ಮತ್ತು ಪ್ರದರ್ಶನ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸೆಮಿಕಂಡಕ್ಟರ್ ಇಂಡಿಯಾ ಕಾರ್ಯಕ್ರಮದ ನೋಡಲ್ ಏಜೆನ್ಸಿಯಾಗಿದೆ. ಪ್ರಸ್ತಾವನೆಗಳನ್ನು ಮೌಲ್ಯಮಾಪನ ಮಾಡುವುದು, ತಂತ್ರಜ್ಞಾನ ಪಾಲುದಾರಿಕೆಗಳನ್ನು ಸುಗಮಗೊಳಿಸುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸುವುದು ಮತ್ತು ಆರ್ಥಿಕ ಪ್ರೋತ್ಸಾಹ ವಿತರಣೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಐ ಎಸ್ ಎಂ ಹೊಂದಿದೆ. ಆರ್ಥಿಕ ಭದ್ರತೆ ಮತ್ತು ತಾಂತ್ರಿಕ ಸ್ವಾವಲಂಬನೆಯನ್ನು ಖಚಿತಪಡಿಸಿಕೊಳ್ಳುವುದು, ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಭಾರತವನ್ನು ವಿಶ್ವಾಸಾರ್ಹ ಜಾಗತಿಕ ಕೇಂದ್ರವಾಗಿ ಸ್ಥಾಪಿಸುವುದು ಈ ಮಿಷನ್ ನ ಮುಖ್ಯ ಉದ್ದೇಶವಾಗಿದೆ.

 

*****
 


(Release ID: 2163217) Visitor Counter : 9