ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಭಾರತದ ತೈಲ ಮತ್ತು ಅನಿಲ ಕಂಪನಿಗಳದ್ದು  ಕ್ರೀಡಾ ಸಂಸ್ಕೃತಿಯನ್ನು ಪೋಷಿಸುವಲ್ಲಿ ಪ್ರವರ್ತಕ ಪಾತ್ರ ವಹಿಸುತ್ತಿವೆ: ಹರ್ ದೀಪ್ ಸಿಂಗ್ ಪುರಿ

Posted On: 30 AUG 2025 12:44PM by PIB Bengaluru

ಭಾರತವು ಕ್ರೀಡೆಯನ್ನು ಉತ್ತೇಜಿಸಲು ತನ್ನ ನೀತಿ ಆದ್ಯತೆ ಮತ್ತು ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಇಂದು ಹೇಳಿದ್ದಾರೆ. "ಭಾರತದ ತೈಲ ಮತ್ತು ಅನಿಲ ಕಂಪನಿಗಳು  ಈ ದಿಕ್ಕಿನಲ್ಲಿ ಪ್ರಮುಖ ಪಾತ್ರ ವಹಿಸಿವೆ" ಎಂದು ಅವರು ಒತ್ತಿಹೇಳಿದರು.

ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲು ಪೆಟ್ರೋಲಿಯಂ ಕ್ರೀಡಾ ಪ್ರಚಾರ ಮಂಡಳಿ (ಪಿಎಸ್ ಪಿಬಿ) ದೆಹಲಿ ಸಾಕರ್ ಅಸೋಸಿಯೇಷನ್ ಮತ್ತು ಸುದೇವ ಅಕಾಡೆಮಿಯ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಸಚಿವರು ಮಾತನಾಡುತ್ತಿದ್ದರು.  ಭಾರತೀಯ ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನಾಚರಣೆಯಾಗಿರುವುದರಿಂದ ಆಗಸ್ಟ್ 29 ರಂದು ದೇಶದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ. ಪಿಎಸ್ ಪಿಬಿ ಸದಸ್ಯ ಕಾರ್ಯದರ್ಶಿ ಶ್ರೀಮತಿ ಸಬೀನಾ ಚೌಧರಿ ಮತ್ತು ಸುದೇವ ದೆಹಲಿ ಎಸ್ ಪಿ ಅಧ್ಯಕ್ಷ ಶ್ರೀ ಅನುಜ್ ಗುಪ್ತಾ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಭಾರತದ ಕ್ರೀಡಾ ವಲಯದಲ್ಲಿನ ಪರಿವರ್ತನೆಯನ್ನು ಉಲ್ಲೇಖಿಸುತ್ತಾ ಶ್ರೀ ಪುರಿ, "2014 ರ ನಂತರ, ಭಾರತವನ್ನು 'ಕ್ರೀಡಾ ರಾಷ್ಟ್ರ'ವನ್ನಾಗಿ ಮಾಡಲು ಸಂಘಟಿತ ಪ್ರಯತ್ನಗಳು ನಡೆದಿವೆ. ಈಗ ಯುವಜನತೆ  ಹಣಕಾಸಿನ ವಿಷಯದಲ್ಲಿ ಮಾತ್ರವಲ್ಲದೆ ಪೌಷ್ಟಿಕಾಂಶ, ಕ್ರೀಡಾ ವಿಜ್ಞಾನ ಮತ್ತು ತರಬೇತಿ ಸೇರಿದಂತೆ ಸಮಗ್ರ ಅಭಿವೃದ್ಧಿಯಲ್ಲಿಯೂ ಉನ್ನತ ಮಟ್ಟದ ಯಶಸ್ಸನ್ನು ಸಾಧಿಸಲು ಸಂಪೂರ್ಣ ಬೆಂಬಲವನ್ನು ಪಡೆಯುತ್ತಿದ್ದಾರೆ" ಎಂದು ಹೇಳಿದರು.

ವಾರದ ಹಿಂದೆ ಮುಕ್ತಾಯಗೊಂಡ ಸಂಸತ್ತಿನ ಕೊನೆಯ ಅಧಿವೇಶನದಲ್ಲಿ, ಕ್ರೀಡಾ ಒಕ್ಕೂಟಗಳು ಮತ್ತು ಸಂಸ್ಥೆಗಳ ಆಡಳಿತ ಚೌಕಟ್ಟನ್ನು ಕೂಲಂಕಷವಾಗಿ ಪರಿಶೀಲಿಸಲು ಐತಿಹಾಸಿಕ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ, 2025 ಅನ್ನು ಅಂಗೀಕರಿಸಲಾಯಿತು. ಇದು ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ  ಎಂದು ಸಚಿವರು ಹೇಳಿದರು.
 
"ಕಳೆದ ಹತ್ತು ವರ್ಷಗಳ ಫಲಿತಾಂಶಗಳು ಈ ಪರಿವರ್ತನಾತ್ಮಕ ನೀತಿಗಳ ಯಶಸ್ಸನ್ನು ಪ್ರತಿಬಿಂಬಿಸುತ್ತವೆ. 2023 ರ ಏಷ್ಯನ್ ಕ್ರೀಡಾಕೂಟ ಮತ್ತು 2024ರ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ, ನಾವು ಕ್ರಮವಾಗಿ 107 ಮತ್ತು 29 ಪದಕಗಳ (7 ಚಿನ್ನ, 9 ಬೆಳ್ಳಿ ಮತ್ತು 13 ಕಂಚು) ದಾಖಲೆಗಳನ್ನು ಸಾಧಿಸಿದ್ದೇವೆ" ಎಂದು ಶ್ರೀ ಪುರಿ ಹೇಳಿದರು.

ಪಿಎಸ್ ಪಿಬಿಯ ಕೊಡುಗೆಯನ್ನು ಶ್ಲಾಘಿಸುತ್ತಾ ಶ್ರೀ ಪುರಿ, "ಈ ರೂಪಾಂತರವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿದ ಅನೇಕ ಪಾಲುದಾರರಲ್ಲಿ, ದೇಶದ ಅತಿದೊಡ್ಡ ಕ್ರೀಡಾ ಪ್ರಚಾರ ಸಂಸ್ಥೆಗಳಲ್ಲಿ ಒಂದಾದ ಪಿಎಸ್ ಪಿಬಿಯನ್ನು ವಿಶೇಷವಾಗಿ ಉಲ್ಲೇಖಿಸಬೇಕು. ಇದು 16 ಸದಸ್ಯ ಸಂಸ್ಥೆಗಳನ್ನು ಒಳಗೊಂಡಿದೆ ಮತ್ತು 19 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಬೆಂಬಲಿಸುತ್ತದೆ ಮತ್ತು ಆಯೋಜಿಸುತ್ತದೆ" ಎಂದು ಹೇಳಿದರು.

ದಶಕಗಳಲ್ಲಿ ಪಿಎಸ್ ಪಿಬಿ ಕ್ರೀಡಾಪಟುಗಳು ನಿರಂತರವಾಗಿ ಭಾರತಕ್ಕೆ ಪ್ರಶಸ್ತಿಗಳನ್ನು ತಂದಿದ್ದಾರೆ ಎಂಬುದು ಗಮನಾರ್ಹ. 151 ರಾಷ್ಟ್ರೀಯ ಪ್ರಶಸ್ತಿ ವಿಜೇತರು ಪಿಎಸ್ ಪಿ ಬಿ ಆಟಗಾರರಾಗಿದ್ದಾರೆ. ಇವರಲ್ಲಿ 3 ಪದ್ಮಭೂಷಣ, 13 ಪದ್ಮಶ್ರೀ, 10 ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ, 1 ದ್ರೋಣಾಚಾರ್ಯ ಪ್ರಶಸ್ತಿ, 7 ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿ ಮತ್ತು 117 ಅರ್ಜುನ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ.

ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮದಡಿಯಲ್ಲಿ ಅಳವಡಿಸಿಕೊಂಡಿರುವ ಉತ್ತರ ಪ್ರದೇಶದ ಸೋನ್ಭದ್ರ ಜಿಲ್ಲೆಯಲ್ಲಿ ಕ್ರೀಡೆಗಳನ್ನು ಉತ್ತೇಜಿಸುವಲ್ಲಿ ಪಿಎಸ್ ಪಿಬಿಯ ಪಾತ್ರವನ್ನು ಸಚಿವರು ಉಲ್ಲೇಖಿಸಿದರು . "ಪಿಎಸ್ ಪಿಬಿ ಬಿಲ್ಲುಗಾರಿಕೆ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮತ್ತು ಕ್ರೀಡೆಯನ್ನು ಉತ್ತೇಜಿಸುವ ಮೂಲಕ ಜಿಲ್ಲೆಯಲ್ಲಿ ಅತ್ಯುತ್ತಮ ಕ್ರೀಡಾ ಪ್ರತಿಭೆಗಳನ್ನು ಪೋಷಿಸಿದೆ. ಮುಂದಿನ ವರ್ಷ ಸೋನ್ ಭದ್ರದಲ್ಲಿ ರೋಯಿಂಗ್ ಸ್ಪರ್ಧೆಯನ್ನು ಆಯೋಜಿಸಲು ಮತ್ತು ಜಲ ಕ್ರೀಡಾ ತರಬೇತಿ ಕೇಂದ್ರದ ನಿರ್ಮಾಣಕ್ಕೆ ಬೆಂಬಲ ನೀಡಲು ನಾವು ಯೋಜಿಸುತ್ತಿದ್ದೇವೆ. ಇವು ಭಾರತದ ಉದಯೋನ್ಮುಖ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಉಪಕ್ರಮಗಳಾಗಿವೆ" ಎಂದು ಅವರು ಹೇಳಿದರು.

ಸಂತಸವನ್ನು ವ್ಯಕ್ತಪಡಿಸುತ್ತಾ  ಶ್ರೀ ಪುರಿ, "ಪೆಟ್ರೋಲಿಯಂ ಕ್ರೀಡಾ ಪ್ರಚಾರ ಮಂಡಳಿಯು ದೆಹಲಿ ಸಾಕರ್ ಅಸೋಸಿಯೇಷನ್ ನೊಂದಿಗೆ ಆಯೋಜಿಸುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ತುಂಬಾ ಸಂತೋಷವಾಗಿದೆ" ಎಂದು ಹೇಳಿದರು.

 

*****
 


(Release ID: 2162285) Visitor Counter : 12