ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಬೆಂಗಳೂರಿನಲ್ಲಿ 6ಜಿ ಪ್ರಮಾಣೀಕರಣದ ಕುರಿತು ಮೊಟ್ಟಮೊದಲ ʻ3ಜಿ.ಪಿ.ಪಿ ಆರ್‌.ಎ.ಎನ್‌ʼ ಸಭೆಗಳನ್ನು ಆಯೋಜಿಸಿದ ಭಾರತ


ಜಾಗತಿಕ 6ಜಿ ವಿಶೇಷಣಗಳ ಅಡಿಪಾಯವಾದ ʻ3 ಜಿ.ಪಿ.ಪಿ ರಿಲೀಸ್‌ 20ʼ ಬಗ್ಗೆ ಚರ್ಚೆಗಳು ಪ್ರಾರಂಭವಾಗಲಿವೆ

50ಕ್ಕೂ ಹೆಚ್ಚು ದೇಶಗಳಿಂದ 1,500ಕ್ಕೂ ಹೆಚ್ಚು ಪ್ರತಿನಿಧಿಗಳೊಂದಿಗೆ ಅತ್ಯಧಿಕ ಜಾಗತಿಕ ಭಾಗವಹಿಸುವಿಕೆಗೆ ಈ ಸಭೆಗಳು ಸಾಕ್ಷಿಯಾಗಲಿವೆ

ಬೆಂಗಳೂರಿನಲ್ಲಿ ʻ3 ಜಿ.ಪಿ.ಪಿʼ ಸಭೆಗಳನ್ನು ಆಯೋಜಿಸುವುದರಿಂದ ಭಾರತೀಯ ಸಂಶೋಧಕರು ಮತ್ತು ಕಂಪನಿಗಳಿಗೆ ಭವಿಷ್ಯದ ದೂರಸಂಪರ್ಕವನ್ನು ರೂಪಿಸಲು ನೇರ ಪ್ರವೇಶ ಲಭ್ಯವಾಗಲಿದೆ

Posted On: 26 AUG 2025 12:06PM by PIB Bengaluru

ಭಾರತ ಮತ್ತು ಜಾಗತಿಕ ಟೆಲಿಕಾಂ ಸಮುದಾಯದ ಪಾಲಿಗೆ ಐತಿಹಾಸಿಕವಾದ ಹಾಗೂ ಮೊದಲ ʻ3ಜಿ.ಪಿ.ಪಿ ರೇಡಿಯೋ ಆಕ್ಸೆಸ್ ನೆಟ್ವರ್ಕ್ಸ್ʼ (ಆರ್‌.ಎ.ಎನ್‌) ಕಾರ್ಯಪಡೆ ಸಭೆಗಳಿಗೆ– (ಆರ್‌.ಎ.ಎನ್‌-1 ರಿಂದ ಆರ್‌.ಎ.ಎನ್‌-5 ರವರೆಗೆ) ಆಗಸ್ಟ್ 25 ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಚಾಲನೆ ನೀಡಲಾಯಿತು. ಸಂವಹನ ಸಚಿವಾಲಯದ ದೂರಸಂಪರ್ಕ ಇಲಾಖೆ (ಡಿ.ಒ.ಟಿ) ಬೆಂಬಲದೊಂದಿಗೆ ಮತ್ತು ಭಾರತೀಯ ಟೆಲಿಕಮ್ಯೂನಿಕೇಷನ್ಸ್ ಸ್ಟ್ಯಾಂಡರ್ಡ್ಸ್ ಡೆವಲಪ್ಮೆಂಟ್ ಸೊಸೈಟಿ (ಟಿ.ಎಸ್‌.ಡಿ.ಎಸ್.ಐ) ಆಯೋಜಿಸಿದ್ದ ಸಭೆಗಳು ‌ʻ3ಜಿ.ಪಿ.ಪಿ ರಿಲೀಸ್ 20ʼ ಅಡಿಯಲ್ಲಿ 6ಜಿ ಪ್ರಮಾಣೀಕರಣದ ಬಗ್ಗೆ ಚೊಚ್ಚಲ ಚರ್ಚೆಗಳನ್ನು ಸೂಚಿಸುತ್ತವೆ. ಸಭೆಗಳು 2025ರ ಆಗಸ್ಟ್ 29ರವರೆಗೆ ಮುಂದುವರಿಯಲಿವೆ.

ಬೆಂಗಳೂರಿನಲ್ಲಿ 3 ಜಿ.ಪಿ.ಪಿ ಆರ್‌.ಎ.ಎನ್‌ ಕಾರ್ಯಪಡೆ ಸಭೆಗಳನ್ನು ಆಯೋಜಿಸಿದ ʻಟಿ.ಎಸ್‌.ಡಿ.ಎಸ್.ಐʼ

ದೂರಸಂಪರ್ಕ ಇಲಾಖೆಯು ಕಾರ್ಯಕ್ರಮವನ್ನು ಆಯೋಜಿಸಲು ಸಂಪೂರ್ಣ ಸಾಂಸ್ಥಿಕ ಮತ್ತು ಆರ್ಥಿಕ ಬೆಂಬಲವನ್ನು ನೀಡುವ ಮೂಲಕ ಜಾಗತಿಕ ಸಂವಹನ ತಂತ್ರಜ್ಞಾನದ ಭವಿಷ್ಯವನ್ನು ರೂಪಿಸುವ ಭಾರತ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿದೆ. ʻಡಿ.ಒ.ಟಿʼ ನಿಯೋಗವು ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಇದು 6ಜಿ ದೃಷ್ಟಿಕೋನದಲ್ಲಿ ಸರ್ಕಾರದ ನಿರಂತರ ತೊಡಗಿಸಿಕೊಳ್ಳುವಿಕೆಯನ್ನು ಸೂಚಿಸುತ್ತದೆ.

ʻಟಿ.ಎಸ್‌.ಡಿ.ಎಸ್.ಐʼ - ಇದು ಭಾರತದ ಮಾನ್ಯತೆ ಪಡೆದ ಪ್ರಮಾಣೀಕರಣ ಅಭಿವೃದ್ಧಿ ಸಂಸ್ಥೆಯಾಗಿರುವುದು (ಸ್ಟ್ಯಾಂಡರ್ಡ್ಸ್ ಡೆವಲಪ್ಮೆಂಟ್ ಆರ್ಗನೈಸೇಶನ್- ಎಸ್‌.ಡಿ.ಒ) ಮಾತ್ರವಲ್ಲದೆ, 3ನೇ ತಲೆಮಾರಿನ ಪಾಲುದಾರಿಕೆ ಯೋಜನೆಯ (3 ಜಿ.ಪಿ.ಪಿ) 7 ಸಾಂಸ್ಥಿಕ ಪಾಲುದಾರರಲ್ಲಿ ಒಂದಾಗಿದೆ. ಇದು 5ಜಿ ಮತ್ತು 6ಜಿ ಸೇರಿದಂತೆ ಮೊಬೈಲ್ ಸಂವಹನ ತಂತ್ರಜ್ಞಾನಗಳಿಗೆ ವಿಶೇಷಣಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಹೊಂದಿರುವ ಜಾಗತಿಕ ಸಂಸ್ಥೆಯಾಗಿದೆ. ʻ3 ಜಿ.ಪಿ.ಪಿʼ ವಿಶೇಷಣಗಳು ಜಾಗತಿಕ ಮೊಬೈಲ್ ನೆಟ್‌ವರ್ಕ್‌ಗಳ ಅಡಿಪಾಯವನ್ನು ರೂಪಿಸುತ್ತವೆ. ಜೊತೆಗೆ ಚರ್ಚೆಗಳಲ್ಲಿ ಭಾರತದ ಸಕ್ರಿಯ ಭಾಗವಹಿಸುವಿಕೆಯು ದೂರಸಂಪರ್ಕ ತಂತ್ರಜ್ಞಾನಗಳ ಭವಿಷ್ಯವನ್ನು ರೂಪಿಸುವತ್ತ ಹೆಚ್ಚುತ್ತಿರುವ ದೇಶದ ಬಯಕೆಗೆ ಮತ್ತಷ್ಟು ಶಕ್ತಿ ತುಂಬುತ್ತದೆ.

ʻ3ಜಿ.ಪಿ.ಪಿʼ ವೈಯಕ್ತಿಕ ಸದಸ್ಯರು, ಪ್ರಮುಖ ಟೆಲಿಕಾಂ ಕಂಪನಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ತಾಂತ್ರಿಕ ತಜ್ಞರನ್ನು ಪ್ರತಿನಿಧಿಸುವ 50ಕ್ಕೂ ಹೆಚ್ಚು ದೇಶಗಳಿಂದ 1,500ಕ್ಕೂ ಅಧಿಕ ಪ್ರತಿನಿಧಿಗಳು ಬೆಂಗಳೂರಿನ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದು ಯಾವುದೇ 3 ಜಿ.ಪಿ.ಪಿ ಕಾರ್ಯಪಡೆ ಸಭೆಯಲ್ಲಿ ಇದುವರೆಗಿನ ಅತ್ಯಧಿಕ ಭಾಗವಹಿಸುವಿಕೆಯಾಗಿದೆ, ಇದು ಚರ್ಚೆಗಳ ಮಹತ್ವವನ್ನು ಪ್ರತಿಬಿಂಬಿಸುತ್ತದೆ ಮತ್ತು 5ಜಿಯಿಂದ 6ಜಿಗೆ ವಿಕಾಸವನ್ನು ರೂಪಿಸುವಲ್ಲಿ ಹೆಚ್ಚುತ್ತಿರುವ ಜಾಗತಿಕ ಆಸಕ್ತಿಯನ್ನು ಸೂಚಿಸುತ್ತದೆ.

ಬೆಂಗಳೂರಿನ ಸಭೆಗಳು ಭಾರತೀಯ ಪಾಲುದಾರರಿಗೆ ಒಂದು ಹೆಗ್ಗುರುತಿನಂತಹ ಅವಕಾಶವಾಗಿದ್ದು, ಮೊದಲ ಬಾರಿಗೆ, ಜಾಗತಿಕ 3 ಜಿ.ಪಿ.ಪಿ ಚರ್ಚೆಗಳು ಭಾರತದಲ್ಲಿ ನಡೆಯುತ್ತಿವೆ. ಇದು ದೇಶೀಯ ಸಂಶೋಧಕರು, ಕಂಪನಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಸ್ಥಳೀಯವಾಗಿ ಭಾಗವಹಿಸಲು, ನೇರ ಮಾನ್ಯತೆ ಪಡೆಯಲು ಮತ್ತು ಅಂತರರಾಷ್ಟ್ರೀಯ ಪ್ರಯಾಣದ ನಿರ್ಬಂಧಗಳಿಲ್ಲದೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ. ಈ ಎಲ್ಲರನ್ನೂ ಒಳಗೊಂಡ ವೇದಿಕೆಯು ನೈಜ ಸಮಯದಲ್ಲಿ ಜಾಗತಿಕ ಬೆಳವಣಿಗೆಗಳೊಂದಿಗೆ ಹೊಂದಿಕೊಳ್ಳಲು ಮತ್ತು 6ಜಿ ಪ್ರಮಾಣೀಕರಣ ಪ್ರಯತ್ನಗಳಿಗೆ ಕೊಡುಗೆ ನೀಡಲು ಭಾರತೀಯ ಸಂಸ್ಥೆಗಳನ್ನು ಸಶಕ್ತಗೊಳಿಸುತ್ತದೆ.

ಭಾರತಕ್ಕೆ ʻ3ಜಿ.ಪಿ.ಪಿʼಯನ್ನು ಪರಿಚಯಿಸುವುದು ಜಾಗತಿಕ ಮಾನದಂಡ-ವ್ಯವಸ್ಥೆಯಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ. ಅಲ್ಲಿ ಭಾರತದಂತಹ ಉದಯೋನ್ಮುಖ ತಂತ್ರಜ್ಞಾನ ನಾಯಕ ದೇಶಗಳು ಹೆಚ್ಚು ಪ್ರಭಾವಶಾಲಿ ಪಾತ್ರವನ್ನು ವಹಿಸಬಲ್ಲವು. ಈ ಕಾರ್ಯಕ್ರಮವು ಆಳವಾದ ಉದ್ಯಮ-ಶೈಕ್ಷಣಿಕ ಸಹಯೋಗವನ್ನು ಉತ್ತೇಜಿಸುತ್ತದೆ, ದೇಶೀಯ ನಾವೀನ್ಯತೆಯನ್ನು ಪ್ರೇರೇಪಿಸುತ್ತದೆ ಮತ್ತು ಜಾಗತಿಕ ಟೆಲಿಕಾಂ ಮಾನದಂಡಗಳ ಪರಿಸರ ವ್ಯವಸ್ಥೆಗೆ ಪ್ರಮುಖ ಕೊಡುಗೆದಾರನಾಗಿ ಭಾರತದ ಸ್ಥಾನವನ್ನು ಗಟ್ಟಿಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

 

Follow DoT Handles for more: -

X - https://x.com/DoT_India

Insta-  https://www.instagram.com/department_of_telecom?igsh=MXUxbHFjd3llZTU0YQ==

Fb - https://www.facebook.com/DoTIndia

Youtube: https://youtube.com/@departmentoftelecom?si=DALnhYkt89U5jAaa

 

 

*****


(Release ID: 2160837)