ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಪ್ರಧಾನಮಂತ್ರಿ ಉದ್ಯೋಗ ಸೃಜನೆ ಕಾರ್ಯಕ್ರಮ (ಪಿಎಂಇಜಿಪಿ)ಯಡಿ ಪರಿಶಿಷ್ಟ ಜಾತಿ ಮತ್ತು ಗ್ರಾಮೀಣ ಫಲಾನುಭವಿಗಳಿಗೆ ಹೆಚ್ಚಿನ ಸಬ್ಸಿಡಿ ಮತ್ತು ಕಡಿಮೆ ಪಾವತಿ
ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಣ್ಣ ಉದ್ಯಮಿಗಳಿಗೆ ₹20 ಲಕ್ಷದವರೆಗೆ ಅಡಮಾನ ರಹಿತ ಸಾಲ ಸೌಲಭ್ಯ
Posted On:
21 AUG 2025 2:12PM by PIB Bengaluru
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯವು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC) ಮೂಲಕ ಪ್ರಧಾನಮಂತ್ರಿ ಉದ್ಯೋಗ ಸೃಜನೆ ಕಾರ್ಯಕ್ರಮ (PMEGP) ಅನ್ನು ಅನುಷ್ಠಾನಗೊಳಿಸುತ್ತಿದೆ. ಇದು ಕೃಷಿಯೇತರ ವಲಯದಲ್ಲಿ ಹೊಸ ಸೂಕ್ಷ್ಮ ಉದ್ಯಮಗಳನ್ನು ಸ್ಥಾಪಿಸಲು ಆಸಕ್ತ ಉದ್ಯಮಿಗಳಿಗೆ ಸಹಾಯ ಮಾಡುವ ಮೂಲಕ ಮೂಲಭೂತವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಜಿಸುವ ಕೇಂದ್ರ ವಲಯ ಯೋಜನೆಯಾಗಿದೆ. PMEGP ಅಡಿಯಲ್ಲಿ, ಗ್ರಾಮೀಣ ಪ್ರದೇಶಗಳಿಗೆ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಫಲಾನುಭವಿಗಳು ವಿಶೇಷ ವರ್ಗದ ಅಡಿಯಲ್ಲಿ ಸೇರಲಿದ್ದು, ಅವರು ಹೆಚ್ಚಿನ ಸಬ್ಸಿಡಿ ದರ ಮತ್ತು ಯೋಜನಾ ವೆಚ್ಚದಲ್ಲಿ ಕಡಿಮೆ ಮೊತ್ತದ ಪಾವತಿಗೆ ಅರ್ಹರಾಗಿರುತ್ತಾರೆ.
ಸಾರ್ವಜನಿಕ ಖರೀದಿ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉದ್ಯಮಿಗಳು ಪಾಲ್ಗೊಳ್ಳುವಿಕೆ ಸಾಮರ್ಥ್ಯ ಬಲಪಡಿಸಲು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ MSEಗಳಿಂದ ಕಡ್ಡಾಯವಾದ ಶೇಕಡ 4ರ ಖರೀದಿ ಗುರಿಯನ್ನು ಸಾಧಿಸಲು ಅತಿ ಸಣ್ಣ, ಸಣ್ಣ ಮತ್ತ ಮಧ್ಯಮ ಕೈಗಾರಿಕೆಗಳ ಸಚಿವಾಲಯವು ವಾರಂಗಲ್ ಸೇರಿದಂತೆ ದೇಶಾದ್ಯಂತ 'ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾಲ'ವನ್ನು ಅನುಷ್ಠಾನಗೊಳಿಸುತ್ತಿದೆ. ಕೌಶಲ್ಯ, ಸಾಮರ್ಥ್ಯ ವೃದ್ಧಿ, ಮಾರುಕಟ್ಟೆ ಸಂಪರ್ಕ, ಹಣಕಾಸು ಸೌಲಭ್ಯ, ಟೆಂಡರ್ ಬಿಡ್ ಭಾಗವಹಿಸುವಿಕೆ ಇತ್ಯಾದಿಗಳಲ್ಲಿ SC/ST ಉದ್ಯಮಿಗಳಿಗೆ ವೃತ್ತಿಪರ ಬೆಂಬಲವನ್ನು ನೀಡಲು ಯೋಜನೆಯಡಿಯಲ್ಲಿ ಅನೇಕ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.
ಸದಸ್ಯ ಸಾಲ ನೀಡುವ ಸಂಸ್ಥೆಗಳು (MLIs) ಅಂದರೆ ಪರಿಶಿಷ್ಟ ವಾಣಿಜ್ಯ ಬ್ಯಾಂಕುಗಳು (SCBs), ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRBs), ಬ್ಯಾಂಕೇತರ ಹಣಕಾಸು ಕಂಪನಿಗಳು (NBFCs) ಮತ್ತು ಸೂಕ್ಷ್ಮ ಹಣಕಾಸು ಸಂಸ್ಥೆಗಳ (MFIs) ಮೂಲಕ ಪ್ರಧಾನಮಂತ್ರಿ ಮುದ್ರಾ ಯೋಜನೆ (PMMY)ಯಡಿ ಆಧಾರರಹಿತವಾಗಿ ಸಾಂಸ್ಥಿಕ ಸಾಲ ನೀಡಲಾಗುತ್ತಿದೆ. ಸಾಲ ಪಡೆಯಲು ಅರ್ಹರಾಗಿರುವ ಮತ್ತು ಸಣ್ಣ ವ್ಯಾಪಾರ ಉದ್ಯಮಕ್ಕಾಗಿ ವ್ಯವಹಾರ ಯೋಜನೆಯನ್ನು ಹೊಂದಿರುವ ಯಾವುದೇ ವ್ಯಕ್ತಿ PMMY ಅಡಿಯಲ್ಲಿ ಉತ್ಪಾದನೆ, ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ಆದಾಯ ಗಳಿಸುವ ಚಟುವಟಿಕೆಗಳಿಗಾಗಿ ರೂ.20 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಈ ಯೋಜನೆಯಡಿ ನಾಲ್ಕು ಸಾಲ ವಿಭಾಗಗಳಲ್ಲಿ ಅಂದರೆ - ಶಿಶು (ರೂ. 50,000 ವರೆಗಿನ ಸಾಲ), ಕಿಶೋರ್ (ರೂ. 50,000 ಮೇಲ್ಪಟ್ಟು ರೂ. 5 ಲಕ್ಷದವರೆಗಿನ ಸಾಲ), ತರುಣ್ (ರೂ. 5 ಲಕ್ಷಕ್ಕಿಂತ ಹೆಚ್ಚಿನ ಮತ್ತು ರೂ. 10 ಲಕ್ಷದವರೆಗಿನ ಸಾಲ) ಮತ್ತು ತರುಣ್ ಪ್ಲಸ್ ('ತರುಣ್' ವರ್ಗದ ಅಡಿಯಲ್ಲಿ ಸಾಲ ಪಡೆದು ಸರಿಯಾಗಿ ಮರುಪಾವತಿ ಮಾಡಿರುವ ಉದ್ಯಮಿಗಳಿಗೆ 24.10.2024 ರಿಂದ ಅನ್ವಯವಾಗುವಂತೆ ರೂ. 10 ಲಕ್ಷ ಮೇಲ್ಟಪಟ್ಟು ರೂ. 20 ಲಕ್ಷದವರೆಗಿನ ಸಾಲ) ವರ್ಗಗಳಡಿಯಲ್ಲಿ ಸಾಲ ಪಡೆಯಬಹುದಾಗಿದೆ.
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಲೋಕಸಭೆಗೆ ಇಂದು ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
*****
(Release ID: 2159160)