ಪಂಚಾಯತ್ ರಾಜ್ ಸಚಿವಾಲಯ
azadi ka amrit mahotsav

ಕೆಂಪುಕೋಟೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪಂಚಾಯತ್ ಮುಖಂಡರು; ಗ್ರಾಮೀಣ ಭಾರತದ ಉತ್ಸಾಹವನ್ನು ಪ್ರದರ್ಶಿಸಿದರು


ಪಂಚಾಯತ್ ಮುಖಂಡರ ಅಭಿನಂದನಾ ಸಮಾರಂಭದಲ್ಲಿ 'ಸಭಾಸಾರ್' ಪ್ರಾರಂಭದ ಮೂಲಕ ಪಂಚಾಯಿತಿಗಳು ʻಕೃತಕ ಬುದ್ಧಿಮತ್ತೆʼ (ಎಐ) ಯುಗವನ್ನು ಪ್ರವೇಶಿಸಿವೆ

Posted On: 15 AUG 2025 5:19PM by PIB Bengaluru

"ನವ ಭಾರತ" ವಿಷಯಾಧಾರಿತವಾಗಿ ನಡೆದ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯು ತಳಮಟ್ಟದ ಪ್ರಜಾಪ್ರಭುತ್ವದ ಆಚರಣೆಯ ಹೆಗ್ಗುರುತಾಗಿ ಗಮನ ಸೆಳೆಯಿತು. ಸರ್‌ಪಂಚ್‌ಗಳು, ಮುಖಿಯಾ ಮತ್ತು ಗ್ರಾಮ ಪ್ರಧಾನ್‌ಗಳು ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ಸುಮಾರು 210 ಚುನಾಯಿತ ಪಂಚಾಯತ್ ಪ್ರತಿನಿಧಿಗಳು ಕೆಂಪು ಕೋಟೆಯಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದರು. ವೈವಿಧ್ಯಮಯ ಸಾಂಪ್ರದಾಯಿಕ ಉಡುಪನ್ನು ಧರಿಸಿದ ಅವರು ಗ್ರಾಮೀಣ ಭಾರತದ ಸಂಸ್ಕೃತಿ ಮತ್ತು ಉತ್ಸಾಹವನ್ನು ಪ್ರದರ್ಶಿಸಿದರು, ಇದು ಮೂರನೇ ಹಂತದ ಆಡಳಿತದ ಶಕ್ತಿಯನ್ನು ಸಂಕೇತಿಸಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೆಂಪು ಕೋಟೆಯ ಕೊತ್ತಲದಿಂದ ಮಾಡಿದ ಭಾಷಣದಲ್ಲಿ ಪಂಚಾಯತ್‌ ಮುಖಂಡರ ಉಪಸ್ಥಿತಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿದ ಮಹತ್ವದ ಕೊಡುಗೆಯನ್ನು ಗುರುತಿಸಿದರು.

2025ರ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು, ಈ ವಿಶೇಷ ಅತಿಥಿಗಳನ್ನು ನವದೆಹಲಿಯಲ್ಲಿ ನಡೆದ “आत्मनिर्भर पंचायत, विकसित भारत की पहचान” ವಿಶೇಷ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕೇಂದ್ರ ಪಂಚಾಯತ್ ರಾಜ್ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ (ಎಫ್‌ಎಎಚ್‌ಡಿ) ಸಚಿವ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್, ಕೇಂದ್ರ ಪಂಚಾಯತ್ ರಾಜ್ ಮತ್ತು ಎಫ್‌ಎಎಚ್‌ಡಿ ಸಹಾಯಕ ಸಚಿವ ಪ್ರೊ. ಎಸ್.ಪಿ. ಸಿಂಗ್ ಬಘೇಲ್ ಉಪಸ್ಥಿತರಿದ್ದರು. ಎಂಒಪಿಆರ್ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಮತ್ತು ದೇಶಾದ್ಯಂತ 425 ಕ್ಕೂ ಹೆಚ್ಚು ಪಂಚಾಯತ್‌ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿಶೇಷ ಅತಿಥಿಗಳು ಕೃತಕ ಬುದ್ಧಿಮತ್ತೆ (ಎಐ) ಚಾಲಿತ ಸಾಧನ 'ಸಭಾಸಾರ್' ಅನಾವರಣಕ್ಕೆ ಸಾಕ್ಷಿಯಾದರು. ʻಸಭಾಸಾರ್‌ʼ ಸಾಧನವು ಗ್ರಾಮ ಸಭೆಗಳು ಮತ್ತು ಇತರ ಪಂಚಾಯತ್ ಸಭೆಗಳ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳಿಂದ ಸ್ವಯಂಚಾಲಿತವಾಗಿ ರಚನಾತ್ಮಕವಾಗಿ ಸಭೆಯ ನಡಾವಳಿಗಳನ್ನು (ಎಂಒಎಂ) ಸೃಷ್ಟಿಸಬಲ್ಲದು. ಇದೇ ವೇಳೆ, ಪಂಚಾಯತ್ ಸಬಲೀಕರಣ, ಸ್ಥಳೀಯ ಆಡಳಿತ ಮತ್ತು  ನಾವಿನ್ಯತೆಯಲ್ಲಿ ಪ್ರಮುಖ ಒಳನೋಟಗಳು, ಯಶೋಗಾಥೆಗಳು ಹಾಗೂ ಸ್ಪೂರ್ತಿದಾಯಕ ಅನುಭವಗಳನ್ನು ಎತ್ತಿ ತೋರುವ ಇ-ಪ್ರಕಟಣೆಯಾದ ಗ್ರಾಮೋದಯ ಸಂಕಲ್ಪ ಪತ್ರಿಕೆಯ 16 ನೇ ಆವೃತ್ತಿಯ ಬಿಡುಗಡೆಗೂ ಈ ವಿಶೇಷ ಅತಿಥಿಗಳು ಸಾಕ್ಷಯಾದರು. 16ನೇ ಆವೃತ್ತಿಯು "ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಮಹಿಳಾ ಸಬಲೀಕರಣ" ಎಂಬ ವಿಷಯಾಧಾರಿತವಾಗಿದೆ.

ಈ ವಿಶೇಷ ಅತಿಥಿಗಳನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ,  ʻಹರ್ ಘರ್ ಜಲ್ʼ, ʻಪಿಎಂ ಆವಾಸ್ ಯೋಜನೆ (ಗ್ರಾಮೀಣ)ʼ, ʻಮಿಷನ್ ಇಂದ್ರಧನುಷ್ʼ, ʻಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆʼ ಮುಂತಾದ ಸರ್ಕಾರದ ಪ್ರಮುಖ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಚುನಾಯಿತ ಪಂಚಾಯತ್ ಪ್ರತಿನಿಧಿಗಳು ಮಾಡಿದ ಅನುಕರಣೀಯ ತಳಮಟ್ಟದ ಕೆಲಸ ಮತ್ತು ಕೊಡುಗೆಯನ್ನು ಶ್ಲಾಘಿಸಿದರು. ಪಂಚಾಯಿತಿಗಳಿಗೆ ಆರ್ಥಿಕ ಬೆಂಬಲದಲ್ಲಿ ಐತಿಹಾಸಿಕ ಏರಿಕೆ ಕಂಡುಬಂದಿದೆ (ಕಳೆದ ದಶಕದಲ್ಲಿ ತಲಾ ವಾರ್ಷಿಕ ಹಂಚಿಕೆಗಳು 176 ರೂ.ನಿಂದ 674 ರೂ.ಗೆ ಏರುವುದರೊಂದಿಗೆ ಸುಮಾರು ಐದು ಪಟ್ಟು). ʻರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನʼದಡಿ ಕಳೆದ ಐದು ವರ್ಷಗಳಲ್ಲಿ ಸುಮಾರು 1.76 ಕೋಟಿ ಭಾಗಿದಾರರಿಗೆ, ಅದರಲ್ಲೂ ಹೆಚ್ಚಾಗಿ ಪಂಚಾಯತ್ ಪ್ರತಿನಿಧಿಗಳಿಗೆ ತರಬೇತಿ ನೀಡಲಾಗಿದೆ ಎಂದು ಅವರು ಒತ್ತಿ ಹೇಳಿದರು. ʻಸ್ವಾಮಿತ್ವʼ ಯೋಜನೆಯ ಪರಿಣಾಮವನ್ನು ಎತ್ತಿ ತೋರಿದ ಅವರು, ದೇಶದ 3.26 ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ ಡ್ರೋನ್ ಸಮೀಕ್ಷೆಗಳು ಪೂರ್ಣಗೊಂಡಿವೆ, ಇದರ ಪರಿಣಾಮವಾಗಿ 2.63 ಕೋಟಿಗೂ ಹೆಚ್ಚು ಕಾನೂನುಬದ್ಧವಾಗಿ ಗುರುತಿಸಲ್ಪಟ್ಟ ಆಸ್ತಿ ಕಾರ್ಡ್ ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು. ಕುಟುಂಬಗಳಿಗೆ ಸಾಲ ಪಡೆಯಲು, ವಿವಾದಗಳನ್ನು ಪರಿಹರಿಸಲು ಮತ್ತು ಸ್ಥಳೀಯ ಆಡಳಿತವನ್ನು ಸುಧಾರಿಸಲು ʻಸ್ವಾಮಿತ್ವʼ ಯೋಜನೆ ಸಹಾಯ ಮಾಡಿದೆ ಎಂದು ಕೇಂದ್ರ ಸಚಿವರು ಪುನರುಚ್ಚರಿಸಿದರು. ಪ್ರಧಾನಮಂತ್ರಿಯವರ ʻವಿಕಸಿತ ಭಾರತʼ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಿರಂತರ ಸಮರ್ಪಣೆಯನ್ನು ಪ್ರದರ್ಶಿಸುವಂತೆ ಅವರು ಪಂಚಾಯತ್ ಪ್ರತಿನಿಧಿಗಳನ್ನು ಒತ್ತಾಯಿಸಿದರು.

ಕೇಂದ್ರ ಪಂಚಾಯತ್ ರಾಜ್ ಖಾತೆ ಸಹಾಯಕ ಸಚಿವರಾದ ಪ್ರೊ. ಎಸ್.ಪಿ. ಸಿಂಗ್ ಬಘೇಲ್ ಅವರು ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಗೌರವಿಸಿದರು. ಪಿಂಚಣಿಗಳು, ಪ್ರಮಾಣಪತ್ರಗಳು, ಪಿಎಂ-ಕಿಸಾನ್ ಪ್ರಯೋಜನಗಳು ಮತ್ತು ಆಯುಷ್ಮಾನ್ ಕಾರ್ಡ್‌ಗಳನ್ನು ಒದಗಿಸುವ ಸೇವಾ ವಿತರಣಾ ಕೇಂದ್ರಗಳಾಗಿ ಪಂಚಾಯತ್‌ಗಳು ವಿಕಸನಗೊಂಡಿವೆ ಎಂದು ಅವರು ಒತ್ತಿ ಹೇಳಿದರು. ಪಂಚಾಯತ್‌ ರಾಜ್‌ ಸಂಸ್ಥೆಗಳಲ್ಲಿ ಮಹಿಳೆಯರ 46% ಪ್ರಾತಿನಿಧ್ಯವನ್ನು ಶ್ಲಾಘಿಸಿದ ಸಚಿವರು ನಾರಿಯರ ಸಂಪೂರ್ಣ ಸಬಲೀಕರಣಕ್ಕೆ ಒತ್ತಾಯಿಸಿದರು. ದೆಹಲಿಯ ಪರಂಪರೆಯಿಂದ ಸ್ಫೂರ್ತಿ ಪಡೆಯಲು ಮತ್ತು ತಮ್ಮ ಪ್ರದೇಶಗಳ ಅಭಿವೃದ್ಧಿ ಕುರಿತಾಗಿ ಹೊಸ ಆಲೋಚನೆಗಳೊಂದಿಗೆ ಮರಳುವಂತೆ ಪ್ರೊಫೆಸರ್ ಬಾಘೇಲ್ ಅವರು ಪಂಚಾಯತ್ ಪ್ರತಿನಿಧಿಗಳನ್ನು ಉತ್ತೇಜಿಸಿದರು.

ಪಂಚಾಯತ್‌ ರಾಜ್‌ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಅವರು ಅತಿಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಗ್ರಾಮ ಪಂಚಾಯಿತಿಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಮತ್ತು ಸುಧಾರಿಸಲು ಸಾಧನವಾಗಿ ಇತ್ತೀಚೆಗೆ ಅಭಿವೃದ್ಧಿಪಡಿಸಲಾದ ಪಂಚಾಯತ್ ಪ್ರಗತಿ ಸೂಚ್ಯಂಕದ (ಪಿಎಐ) ಮಹತ್ವವನ್ನು ಒತ್ತಿ ಹೇಳಿದರು. ಗ್ರಾಮಸಭೆಯ ಕಾರ್ಯಕಲಾಪಗಳನ್ನು ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಮತ್ತು ಸಮಗ್ರವಾಗಿಸಲು ಸಚಿವಾಲಯದ ಹೊಸ ʻಎಐʼ ಚಾಲಿತ ಪರಿಹಾರವಾದ ʻಸಭಾಸಾರ್ʼ ಅನ್ನು ಅವರು ಪ್ರಸ್ತುತಪಡಿಸಿದರು. ಪಂಚಾಯತ್‌ ರಾಜ್‌ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸುಶೀಲ್ ಕುಮಾರ್ ಲೋಹಾನಿ ಅವರು ಸಚಿವಾಲಯದ ಪ್ರಮುಖ ಡಿಜಿಟಲ್ ಮತ್ತು ಆಡಳಿತ ಉಪಕ್ರಮಗಳ ಬಗ್ಗೆ ಮಾತನಾಡಿದರು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಬಳಸುವಂತೆ ಪಂಚಾಯಿತಿಗಳನ್ನು ಪ್ರೋತ್ಸಾಹಿಸಿದರು. ರಾಷ್ಟ್ರ ರಾಜಧಾನಿಗೆ ತಮ್ಮ ಭೇಟಿಯ ಭಾಗವಾಗಿ, ವಿಶೇಷ ಅತಿಥಿಗಳು ಪ್ರಧಾನ ಮಂತ್ರಿ ಸಂಗ್ರಾಹಾಲಯಕ್ಕೆ ಭೇಟಿ ನೀಡಿದರು. ಭಾರತದ ಹೆಮ್ಮೆಯ ಇತಿಹಾಸ ಮತ್ತು ಹೆಗ್ಗುರುತು ಸಾಧನೆಗಳ ಆಳವಾದ ನೋಟವನ್ನು ಪಡೆದರು ಮತ್ತು ʻಹರ್ ಘರ್ ತಿರಂಗಾʼ ಅಭಿಯಾನದಲ್ಲಿ ಭಾಗವಹಿಸಿದರು.

ʻಸಭಾಸಾರ್ʼ ಬಗ್ಗೆ

ಸುಧಾರಿತ ʻಎಐʼ ಮತ್ತು ʻನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್ʼ(ಎನ್ಎಲ್‌ಪಿ) ಮೂಲಕ ಚಾಲಿತವಾಗುವ 'ಸಭಾಸಾರ್' ತಂತ್ರಾಂಶವು ಗ್ರಾಮಸಭೆಗಳ ಚರ್ಚೆಗಳನ್ನು ಭಾಷಾಂತರಿಸುತ್ತದೆ, ಪ್ರಮುಖ ನಿರ್ಧಾರಗಳು ಮತ್ತು ಕ್ರಿಯಾ ಅಂಶಗಳನ್ನು ಗುರುತಿಸುತ್ತದೆ ಮತ್ತು ಸಭೆಯ ಉತ್ತಮ ನಡಾವಳಿಗಳ ಸಾರವನ್ನು ಸೃಷ್ಟಿಸುತ್ತದೆ. 'ಭಾಶಿನಿ' (ಭಾರತ ಸರ್ಕಾರದ ರಾಷ್ಟ್ರೀಯ ಭಾಷಾ ಅನುವಾದ ಮಿಷನ್ ಅಡಿಯಲ್ಲಿ) ನೆರವಿನೊಂದಿಗೆ ಸಂಯೋಜಿಸಲ್ಪಟ್ಟ ಈ ಸಾಧನವು ಪ್ರಸ್ತುತ 13 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಭಾಷೆಗಳ  ವಿಸ್ತರಣೆಗೂ ಅವಕಾಶವಿದ್ದು, ವಿವಿಧ ಭಾಷಾವಾರು ಪ್ರದೇಶಗಳಲ್ಲಿನ ಪಂಚಾಯಿತಿಗಳಿಗೆ ಒಳಗೊಳ್ಳುವಿಕೆಯನ್ನು ಖಚಿತಪಡಿಸುತ್ತದೆ. 2025ರ ಆಗಸ್ಟ್ 15ರಂದು ವಿಶೇಷ ಗ್ರಾಮ ಸಭೆಗಳನ್ನು ದಾಖಲಿಸಲು 'ಸಭಾಸಾರ್' ಅನ್ನು ಬಳಸುವಂತೆ ಪಂಚಾಯತ್‌ ರಾಜ್‌ ಸಚಿವಾಲಯವು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಕೋರಿದೆ. ಈ ನಿಟ್ಟಿನಲ್ಲಿ ತ್ರಿಪುರಾ ಮುಂಚೂಣಿಯಲ್ಲಿದ್ದು, ರಾಜ್ಯದ ಎಲ್ಲಾ 1,194 ಗ್ರಾಮ ಪಂಚಾಯಿತಿಗಳು ಮತ್ತು ಸಾಂಪ್ರದಾಯಿಕ ಸ್ಥಳೀಯ ಸಂಸ್ಥೆಗಳು ಈ ಸಂದರ್ಭದಲ್ಲಿ ಸಾಧನವನ್ನು ಅಳವಡಿಸಿಕೊಳ್ಳಲಿವೆ. ಇದು ಪಂಚಾಯಿತಿಗಳಿಗೆ ಸಹಾಯ ಮಾಡುವುದಲ್ಲದೆ, ನೈಜ ಪ್ರಪಂಚದ ಬಳಕೆಯ ಆಧಾರದ ಮೇಲೆ ವ್ಯವಸ್ಥೆಯನ್ನು ಪರಿಷ್ಕರಿಸಲು ಸಹಾಯ ಮಾಡುತ್ತದೆ. 'ಸಭಾಸಾರ್' ಅನ್ನು ಅಳವಡಿಸಿಕೊಳ್ಳುವ ಮೂಲಕ, ಪಂಚಾಯಿತಿಗಳು ಪಾರದರ್ಶಕ, ಉತ್ತರದಾಯಿತ್ವ ಮತ್ತು ತಂತ್ರಜ್ಞಾನ-ಶಕ್ತ ಸ್ಥಳೀಯ ಆಡಳಿತದತ್ತ ಮಹತ್ವದ ಹೆಜ್ಜೆ ಇಡುತ್ತಿವೆ.

 

*****


(Release ID: 2156919)