ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಮಿಷನ್ ಪೋಷಣ್ 2.0 ಅಡಿಯಲ್ಲಿ 72.22 ಲಕ್ಷಕ್ಕೂ ಹೆಚ್ಚು ಗರ್ಭಿಣಿಯರು ಫಲಾನುಭವಿಗಳಾಗಿ ನೋಂದಾಯಿಸಿಕೊಂಡಿದ್ದಾರೆ
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಜುಲೈ 2025 ರವರೆಗೆ 4.05 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಹೆರಿಗೆ ಪ್ರಯೋಜನಗಳನ್ನು ಒದಗಿಸಲಾಗಿದೆ
Posted On:
08 AUG 2025 2:50PM by PIB Bengaluru
ಪ್ರಧಾನಮಂತ್ರಿ ಮಾತೃವಂದನಾ ಯೋಜನೆ (ಪಿಎಂಎಂವಿವೈ) ಅಡಿಯಲ್ಲಿ, ಯೋಜನೆ ಪ್ರಾರಂಭವಾದಾಗಿನಿಂದ (01.01.2017) 31.07.2025 ರವರೆಗೆ 4.05 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಹೆರಿಗೆ ಪ್ರಯೋಜನಗಳನ್ನು ಒದಗಿಸಲಾಗಿದೆ. ಅಲ್ಲದೆ, ಪೋಷಣ್ ಟ್ರ್ಯಾಕರ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಜುಲೈ 2025ರ ಹೊತ್ತಿಗೆ, 72.22 ಲಕ್ಷಕ್ಕೂ ಹೆಚ್ಚು ಗರ್ಭಿಣಿಯರು `ಮಿಷನ್ ಪೋಷಣ್ 2.0’ ಅಡಿಯಲ್ಲಿ ಫಲಾನುಭವಿಗಳಾಗಿ ನೋಂದಾಯಿಸಿಕೊಂಡಿದ್ದಾರೆ.
ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಅಡಿಯಲ್ಲಿ, ಭಾರತ ಸರ್ಕಾರವು ದೇಶಾದ್ಯಂತದ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ತಾಯಿಯ ಆರೋಗ್ಯ ಸೇವೆಗಳನ್ನು ಒದಗಿಸಲು ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ. ಇವುಗಳಲ್ಲಿ ಬುಡಕಟ್ಟು ಸಮುದಾಯದವರು ಸೇರಿದಂತೆ ತಾಯಂದಿರಲ್ಲಿ ರಕ್ತಹೀನತೆ ಮತ್ತು ಕಡಿಮೆ ತೂಕದ ಶಿಶುಗಳ ವ್ಯಾಪನೆಯನ್ನು ಕಡಿಮೆ ಮಾಡುವುದು ಸೇರಿವೆ:
- ಸುರಕ್ಷಿತ ಮಾತೃತ್ವ ಆಶ್ವಾಸನ್ (ಸುಮನ್) ಯಾವುದೇ ವೆಚ್ಚವಿಲ್ಲದೆ ಭರವಸೆಯ, ಗೌರವಯುತ, ಘನತೆ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ. ಜೊತೆಗೆ, ಎಲ್ಲಾ ತಡೆಗಟ್ಟಬಹುದಾದ ತಾಯಿ ಮತ್ತು ನವಜಾತ ಶಿಶುಗಳ ಸಾವುಗಳನ್ನು ಕೊನೆಗಾಣಿಸುವ ನಿಟ್ಟಿನಲ್ಲಿ, ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಭೇಟಿ ನೀಡುವ ಪ್ರತಿಯೊಬ್ಬ ಮಹಿಳೆ ಮತ್ತು ನವಜಾತ ಶಿಶುವಿಗೆ ಸೇವೆಗಳ ನಿರಾಕರಣೆಗೆ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ.
- ಜನನಿ ಶಿಶು ಸುರಕ್ಷಾ ಕಾರ್ಯಕ್ರಮ (ಜೆಎಸ್ಎಸ್ಕೆ): ಇದರ ಅಡಿಯಲ್ಲಿ ಪ್ರತಿ ಗರ್ಭಿಣಿ ಮಹಿಳೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಸಿಸೇರಿಯನ್ ಸೇರಿದಂತೆ ಉಚಿತ ಹೆರಿಗೆಗೆ ಅರ್ಹವಾಗಿರುತ್ತಾರೆ. ಜೊತೆಗೆ ಉಚಿತ ಸಾರಿಗೆ, ರೋಗನಿರ್ಣಯ, ಔಷಧಗಳು, ರಕ್ತ, ಇತರ ಬಳಕೆ ವಸ್ತುಗಳು ಮತ್ತು ಆಹಾರವನ್ನು ಒದಗಿಸಲಾಗುವುದು.
- ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ (ಪಿಎಂಎಸ್ಎಂಎ): ಗರ್ಭಿಣಿಯರಿಗೆ ಪ್ರತಿ ತಿಂಗಳ 9ನೇ ದಿನದಂದು ಪ್ರಸೂತಿ / ತಜ್ಞ / ವೈದ್ಯಕೀಯ ಅಧಿಕಾರಿಯಿಂದ, ಉಚಿತ ಮತ್ತು ಗುಣಮಟ್ಟದ ಪ್ರಸವಪೂರ್ವ ತಪಾಸಣೆಯನ್ನು ಒದಗಿಸುವ ಭರವಸೆ ನೀಡುತ್ತದೆ.
- ವಿಸ್ತೃತ ಪಿಎಂಎಸ್ಎಂಎ ಕಾರ್ಯತಂತ್ರ: ಗರ್ಭಿಣಿ ಮಹಿಳೆಯರಿಗೆ, ವಿಶೇಷವಾಗಿ ಹೆಚ್ಚಿನ ಅಪಾಯದ ಗರ್ಭಧಾರಣೆ (ಎಚ್ಆರ್‌ಪಿ) ಮಹಿಳೆಯರಿಗೆ ಗುಣಮಟ್ಟದ `ಗರ್ಭಿಣಿ ಆರೈಕೆ’ಯನ್ನು (ಎಎನ್‌ಸಿ)’ ಖಚಿತಪಡಿಸುತ್ತದೆ ಮತ್ತು ಗುರುತಿಸಲಾದ ಹೆಚ್ಚಿನ ಅಪಾಯದ ಗರ್ಭಿಣಿಯರಿಗೆ ಆರ್ಥಿಕ ಪ್ರೋತ್ಸಾಹದ ಮೂಲಕ ಸುರಕ್ಷಿತ ಹೆರಿಗೆಯನ್ನು ಸಾಧಿಸುವವರೆಗೆ ವೈಯಕ್ತಿಕ `ಎಚ್ಆರ್‌ಪಿ’ ನಿಗಾ ಅನ್ನು ಖಚಿತಪಡಿಸುತ್ತದೆ.
- ಪ್ರಸವಾನಂತರದ ಆರೈಕೆಯನ್ನು ಉತ್ತಮಗೊಳಿಸುವುದು: ತಾಯಂದಿರಲ್ಲಿ ಅಪಾಯದ ಚಿಹ್ನೆಗಳನ್ನು ಪತ್ತೆಹಚ್ಚಲು ಒತ್ತು ನೀಡುವ ಮೂಲಕ ಹಾಗೂ ಅಂತಹ ಹೆಚ್ಚಿನ ಅಪಾಯದ ಪ್ರಸವಾನಂತರದ ತಾಯಂದಿರ ತ್ವರಿತ ಪತ್ತೆ ಮತ್ತು ಚಿಕಿತ್ಸೆಗಾಗಿ ಆಶಾ ಕಾರ್ಯಕರ್ತರನ್ನು ಪ್ರೋತ್ಸಾಹಿಸುವ ಮೂಲಕ ಪ್ರಸವದ ನಂತರದ ಆರೈಕೆಯ ಗುಣಮಟ್ಟವನ್ನು ಬಲಪಡಿಸುವ ಗುರಿಯನ್ನು ಇದು ಹೊಂದಿದೆ.
- ಮಾಸಿಕ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕಾಂಶ ದಿನ (ವಿಎಚ್ಎಸ್ಎನ್ಡಿ): ಅಂಗನವಾಡಿ ಕೇಂದ್ರಗಳಲ್ಲಿನ ಒಂದು ಜನಸಂಪರ್ಕ ಚಟುವಟಿಕೆಯಾಗಿದ್ದು, ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ಐಸಿಡಿಎಸ್) ಸಂಯೋಜನೆಯೊಂದಿಗೆ ಪೌಷ್ಠಿಕಾಂಶ ಸೇರಿದಂತೆ ತಾಯಿ ಮತ್ತು ಶಿಶುಪಾಲನೆಯನ್ನು ಖಚಿತಪಡಿಸುತ್ತದೆ.
- ಕಬ್ಬಿಣ ಮತ್ತು ಫೋಲಿಕ್ ಆಸಿಡ್ (ಐಎಫ್ಎ) ಪೂರಕ ಮತ್ತು ಜಂತುಹುಳು ನಿವಾರಣೆ: ಗರ್ಭಿಣಿಯರಿಗೆ 6 ತಿಂಗಳ ಅವಧಿಗೆ ಪ್ರತಿದಿನ ಒಂದು ಐಎಫ್ಎ ಮಾತ್ರೆಗಳನ್ನು ಮೊದಲ ತ್ರೈಮಾಸಿಕದ ನಂತರ ಮತ್ತು ಹೆರಿಗೆಯ ನಂತರದ ತಾಯಂದಿರಿಗೆ ನೀಡಲಾಗುತ್ತದೆ. ಜೊತೆಗೆ, ರಕ್ತಹೀನತೆಯ ಸಂಭವವನ್ನು ಕಡಿಮೆ ಮಾಡಲು ಮೊದಲ ತ್ರೈಮಾಸಿಕದ ನಂತರ ಗರ್ಭಿಣಿಯರಿಗೆ ಅಲ್ಬೆಂಡಾಜೋಲ್ ಮಾತ್ರೆಯ (400 ಮಿಗ್ರಾಂ) ಒಂದು ಡೋಸ್ ಅನ್ನು ವಿತರಿಸಲಾಗುತ್ತದೆ.
- ತಾಯಿ ಮತ್ತು ಮಕ್ಕಳ ರಕ್ಷಣೆ (ಎಂಸಿಪಿ) ಕಾರ್ಡ್ ಮತ್ತು ಸುರಕ್ಷಿತ ತಾಯ್ತನ ಕಿರುಪುಸ್ತಕ ಗರ್ಭಿಣಿಯರಿಗೆ ಆಹಾರ, ವಿಶ್ರಾಂತಿ, ಗರ್ಭಧಾರಣೆಯ ಅಪಾಯದ ಚಿಹ್ನೆಗಳು, ಪ್ರಯೋಜನ ಯೋಜನೆಗಳು ಮತ್ತು ಸಾಂಸ್ಥಿಕ ಹೆರಿಗೆಗಳ ಬಗ್ಗೆ ಶಿಕ್ಷಣ ನೀಡಲು ತಾಯಿ ಮತ್ತು ಮಕ್ಕಳ ರಕ್ಷಣೆ (ಎಂಸಿಪಿ) ಕಾರ್ಡ್ ಮತ್ತು ಸುರಕ್ಷಿತ ತಾಯ್ತನ ಕಿರುಪುಸ್ತಕಗಳನ್ನು ವಿತರಿಸಲಾಗುತ್ತದೆ.
- ರಕ್ತಹೀನತೆ ಮುಕ್ತ ಭಾರತ್ (ಎಎಂಬಿ) ಕಾರ್ಯತಂತ್ರ: ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಸೇರಿದಂತೆ ಮಕ್ಕಳು ಮತ್ತು ಮಹಿಳೆಯರಲ್ಲಿ ರಕ್ತಹೀನತೆಯ ಹರಡುವಿಕೆಯನ್ನು ಕಡಿಮೆ ಮಾಡಲು ಆರು ಮಧ್ಯಸ್ಥಿಕೆಗಳ ಅನುಷ್ಠಾನದ ಮೂಲಕ ರಕ್ತಹೀನತೆ ಮುಕ್ತ ಭಾರತ್ (ಎಎಂಬಿ) ಕಾರ್ಯತಂತ್ರ ಜಾರಿಗೆ ತರಲಾಗಿದೆ. ಈ ಮಧ್ಯಸ್ತಿಕೆಗಳಲ್ಲಿ ರೋಗನಿರೋಧಕ ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಪೂರಕ (ಐಎಫ್ಎ ಕೆಂಪು ಮಾತ್ರೆಗಳನ್ನು) (ಗರ್ಭಿಣಿಯರಿಗೆ ಪ್ರತಿದಿನ 180 ದಿನಗಳವರೆಗೆ ನೀಡಲಾಗುತ್ತದೆ), ಜಂತುಹುಳು ನಿವಾರಣೆ (ಗರ್ಭಿಣಿಯರಿಗೆ ಎರಡನೇ ತ್ರೈಮಾಸಿಕದಲ್ಲಿ ಅಲ್ಬೆಂಡಾಜೋಲ್ ಮಾತ್ರೆಯನ್ನು ನೀಡಲಾಗುತ್ತದೆ), ತೀವ್ರವಾದ ನಡವಳಿಕೆ ಬದಲಾವಣೆ ಸಂವಹನ ಅಭಿಯಾನ, ರಕ್ತಹೀನತೆ ಪರೀಕ್ಷೆ ಮತ್ತು ನಿರ್ವಹಣಾ ಪ್ರೋಟೋಕಾಲ್‌ಗಳ ಪ್ರಕಾರ ಚಿಕಿತ್ಸೆ, ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಐಎಫ್‌ಎ ಬಲವರ್ಧಿತ ಆಹಾರವನ್ನು ಕಡ್ಡಾಯವಾಗಿ ಒದಗಿಸುವುದು; ಮತ್ತು ದೃಢವಾದ ಸಾಂಸ್ಥಿಕ ಕಾರ್ಯವಿಧಾನದ ಮೂಲಕ ರಕ್ತಹೀನತೆಯ ಪೌಷ್ಠಿಕಾಂಶೇತರ ಕಾರಣಗಳನ್ನು ವಿಶೇಷವಾಗಿ ಮಲೇರಿಯಾ, ಫ್ಲೋರೋಸಿಸ್ ಮತ್ತು ಹಿಮೋಗ್ಲೋಬಿನೋಪತಿಗಳನ್ನು ಪರಿಹರಿಸುವುದು ಸೆರಿವೆ.
15ನೇ ಹಣಕಾಸು ಆಯೋಗದ ಅಡಿಯಲ್ಲಿ, ಅಪೌಷ್ಟಿಕತೆಯ ಸವಾಲನ್ನು ಎದುರಿಸಲು ಅಂಗನವಾಡಿ ಸೇವೆಗಳು, `ಪೋಷಣ್ ಅಭಿಯಾನ’ ಮತ್ತು `ಹದಿಹರೆಯದ ಬಾಲಕಿಯರ ಯೋಜನೆ’(ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಈಶಾನ್ಯ ಪ್ರದೇಶದಲ್ಲಿ 14-18 ವರ್ಷಗಳು) ಮುಂತಾದ ವಿವಿಧ ಉಪಕ್ರಮಗಳನ್ನು ವಿಸ್ತೃತ `ಮಿಷನ್ ಸಕ್ಷಮ್ ಅಂಗನವಾಡಿ’ ಮತ್ತು `ಪೋಷಣ್ 2.0’ (ಮಿಷನ್ ಪೋಷಣ್ 2.0) ಅಡಿಯಲ್ಲಿ ಸೇರಿಸಲಾಗಿದೆ. ಮಿಷನ್ ಪೋಷಣ್ 2.0 ಅಡಿಯಲ್ಲಿ, ಪೂರಕ ಪೌಷ್ಠಿಕಾಂಶವು ಅಂಗನವಾಡಿ ಕೇಂದ್ರಗಳ ವೇದಿಕೆಯ ಮೂಲಕ ಒದಗಿಸಲಾಗುವ ಆರು ಸೇವೆಗಳಲ್ಲಿ ಒಂದಾಗಿದೆ. ಜೀವನ ಚಕ್ರದ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಅಪೌಷ್ಟಿಕತೆಯ ಅಂತರ ಪೀಳಿಗೆಯ ಚಕ್ರವನ್ನು ಎದುರಿಸಲು ಮಕ್ಕಳು (6 ತಿಂಗಳಿನಿಂದ 6 ವರ್ಷ), ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಹದಿಹರೆಯದ ಹುಡುಗಿಯರಿಗೆ (ರಾಜ್ಯಗಳು ಮತ್ತು ಈಶಾನ್ಯ ಪ್ರದೇಶದ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ 14 ರಿಂದ 18 ವರ್ಷಗಳು) ವರ್ಷದಲ್ಲಿ 300 ದಿನಗಳವರೆಗೆ ಒದಗಿಸಲಾಗುತ್ತದೆ.
600 ಕ್ಯಾಲೊರಿಗಳು, 18-20 ಗ್ರಾಂ ಹೊಂದಿರುವ ಪೂರಕ ಪೌಷ್ಠಿಕಾಂಶ, ಗರ್ಭಿಣಿಯರು ಮತ್ತು ಹದಿಹರೆಯದ ಹುಡುಗಿಯರಿಗೆ ವರ್ಷದಲ್ಲಿ ಗರಿಷ್ಠ 300 ದಿನಗಳವರೆಗೆ ಪ್ರೋಟೀನ್ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು `ಟೇಕ್-ಹೋಮ್ ರೇಷನ್’ (ಟಿಎಚ್ಆರ್) ರೂಪದಲ್ಲಿ ಒದಗಿಸಲಾಗುತ್ತದೆ.
ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕಾಂಶ ವಿತರಣಾ ಬೆಂಬಲ ವ್ಯವಸ್ಥೆಗಳನ್ನು ಬಲಪಡಿಸಲು ಮತ್ತು ಪಾರದರ್ಶಕತೆಯನ್ನು ತರಲು ಐಟಿ ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗಿದೆ. 'ಪೋಷಣ್ ಟ್ರ್ಯಾಕರ್' (ಪಿಟಿ) ತಂತ್ರಾಂಶವನ್ನು 2021ರ ಮಾರ್ಚ್ 1ರಂದು ಪ್ರಮುಖ ಆಡಳಿತ ಸಾಧನವಾಗಿ ಹೊರತರಲಾಯಿತು. `ಪೋಷಣ್ ಟ್ರ್ಯಾಕರ್’ ನಿರ್ದಿಷ್ಟ ಸೂಚಕಗಳ ವಿಚಾರದಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಫಲಾನುಭವಿಗಳ ಮೇಲ್ವಿಚಾರಣೆ ಮತ್ತು ನಿಗಾ ಅನ್ನು ಸುಗಮಗೊಳಿಸುತ್ತದೆ. ಮಕ್ಕಳಲ್ಲಿ ಕುಂಠಿತ ಬೆಳವಣಿಗೆ, ಕಡಿಮೆ ತೂಕದ ಇರುವಿಕೆಯನ್ನು ಕ್ರಿಯಾತ್ಮಕವಾಗಿ ಗುರುತಿಸಲು `ಪೋಷಣ್ ಟ್ರ್ಯಾಕರ್’ ಅಡಿಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಅಂಗನವಾಡಿ ಸೇವೆಗಳಿಗೆ ದೈನಂದಿನ ಹಾಜರಾತಿ, ಇಸಿಸಿಇ, ಬಿಸಿ ಬೇಯಿಸಿದ ಊಟ (ಎಚ್‌ಸಿಎಂ) / ಟೇಕ್ ಹೋಮ್ ರೇಷನ್ (ಟಿಎಚ್ಆರ್-ಕಚ್ಚಾ ಪಡಿತರವಲ್ಲ), ಬೆಳವಣಿಗೆಯ ಮಾಪನ ಇತ್ಯಾದಿಗಳಂತಹ ನೈಜ ಸಮಯದ ದತ್ತಾಂಶ ಸಂಗ್ರಹಣೆಗೆ ಅನುಕೂಲ ಮಾಡಿಕೊಟ್ಟಿದೆ. `ಪೋಷಣ್ ಟ್ರ್ಯಾಕರ್’ನಲ್ಲಿ ಅಂಗನವಾಡಿ ಕಾರ್ಯಕರ್ತರು ನಮೂದಿಸಿದ ದತ್ತಾಂಶವನ್ನು ಉತ್ತಮ ಮೇಲ್ವಿಚಾರಣೆ ಮತ್ತು ಕಾರ್ಯಕ್ರಮದ ಹೆಚ್ಚಿನ ಪರಿಣಾಮಕಾರಿತ್ವಕ್ಕಾಗಿ ಎಲ್ಲಾ ಆಡಳಿತಾತ್ಮಕ ಹಂತಗಳಲ್ಲಿ ಡ್ಯಾಶ್ಬೋರ್ಡ್‌ನಲ್ಲಿ ತೋರಿಸಲಾಗುತ್ತದೆ. ಇದು 24 ಭಾಷೆಗಳಲ್ಲಿ ಲಭ್ಯವಿದೆ.
ಹೆಚ್ಚಿನ ಪಾರದರ್ಶಕತೆಗಾಗಿ ನೋಂದಣಿ ಮತ್ತು ಟಿಎಚ್ಆರ್ ವಿತರಣೆಯ ನಂತರ ಫಲಾನುಭವಿಗಳಿಗೆ `ಎಸ್ಎಂಎಸ್’ ಕಳುಹಿಸಲಾಗುತ್ತಿದೆ. ಸೇವಾ ವಿತರಣೆಯ ಕೊನೆಯ ಮೈಲಿ ಮೇಲ್ವಿಚಾರಣೆಗಾಗಿ, `ಪೋಷಣ್ ಟ್ರ್ಯಾಕರ್’ನಲ್ಲಿ ನೋಂದಾಯಿಸಲಾದ ಉದ್ದೇಶಿತ ಫಲಾನುಭವಿಗೆ ಪ್ರಯೋಜನವನ್ನು ನೀಡಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಟೇಕ್-ಹೋಮ್ ಪಡಿತರ ವಿತರಣೆಗಾಗಿ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು (ಎಫ್ಆರ್‌ಎಸ್) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಅಭಿವೃದ್ಧಿಪಡಿಸಿದೆ.
ಇದಲ್ಲದೆ, ಅಸ್ತಿತ್ವದಲ್ಲಿರುವ ಫಲಾನುಭವಿಗಳು ಫಲಾನುಭವಿ ಮಾಡ್ಯೂಲ್ ನಲ್ಲಿ ಅವರು ಪಡೆದ ಸೌಲಭ್ಯಗಳನ್ನು ಸಹ ವೀಕ್ಷಿಸಬಹುದು. ಪಿಟಿ ತಂತ್ರಾಂವು ಪ್ರಮುಖ ನಡವಳಿಕೆ ಮತ್ತು ಸೇವೆಗಳ ಬಗ್ಗೆ ಸಮಾಲೋಚನೆ ವೀಡಿಯೊಗಳನ್ನು ಸಹ ನೀಡುತ್ತದೆ, ಇದು ಜನನ ಸಿದ್ಧತೆ, ಹೆರಿಗೆ, ಪ್ರಸವದ ನಂತರದ ಆರೈಕೆ, ಸ್ತನ್ಯಪಾನ ಮತ್ತು ಪೂರಕ ಆಹಾರದ ಬಗ್ಗೆ ಸಂದೇಶಗಳನ್ನು ಪ್ರಸಾರ ಮಾಡಲು ಸಹಾಯ ಮಾಡುತ್ತದೆ.
ಪೌಷ್ಠಿಕಾಂಶದ ವಿತರಣೆಯ ಕೊನೆಯ ಮೈಲಿ ಮೇಲ್ವಿಚಾರಣೆಗಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು `ಟೇಕ್ ಹೋಮ್ ರೇಷನ್’ ವಿತರಣೆಗಾಗಿ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು (ಎಫ್ಆರ್‌ಎಸ್) ಅಭಿವೃದ್ಧಿಪಡಿಸಿದೆ. ಇದು ಪೋಷಣ್ ಟ್ರ್ಯಾಕರ್‌ನಲ್ಲಿ ನೋಂದಾಯಿಸಲಾದ ಉದ್ದೇಶಿತ ಫಲಾನುಭವಿಗೆ ಮಾತ್ರ ಪ್ರಯೋಜನಗಳು ದೊರೆಯುವುದನ್ನು ಖಚಿತಪಡಿಸುತ್ತದೆ. ಕ್ಷೇತ್ರ ಕಾರ್ಯಕರ್ತರ ಉತ್ತರದಾಯಿತ್ವವನ್ನು ಬಲಪಡಿಸಲು ಮತ್ತು ಅರ್ಹ ಫಲಾನುಭವಿಗಳು ತಮ್ಮ ಸರಿಯಾದ ಅರ್ಹತೆಗಳನ್ನು ಪಡೆಯುವುದನ್ನು ಕಾಯ್ದುಕೊಳ್ಳಲು `ಎಫ್ಆರ್‌ಎಸ್’ ಅನ್ನು ಜಾರಿಗೆ ತರಲಾಗಿದೆ. ಜುಲೈ 1, 2025 ರಿಂದ `ಟಿಎಚ್ಆರ್’ ವಿತರಣೆಗೆ ಎಫ್ಆರ್‌ಎಸ್ ಕಡ್ಡಾಯಗೊಳಿಸಲಾಗಿದೆ.
ಇದಲ್ಲದೆ, `ಮಿಷನ್ ಸಕ್ಷಮ್ ಅಂಗನವಾಡಿ’ ಮತ್ತು `ಪೋಷಣ್ 2.0’, `ಪಿಎಂ ಕೇರ್ಸ್’ ಮತ್ತು `ಪಿಎಂಎಂವಿವೈ’ ಅಡಿಯಲ್ಲಿ ನಾಗರಿಕರು / ಫಲಾನುಭವಿಗಳಿಗೆ ಕುಂದುಕೊರತೆ ಪರಿಹಾರಕ್ಕೆ ಅನುಕೂಲವಾಗುವಂತೆ, ಸಚಿವಾಲಯವು ಬಹುಭಾಷಾ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 14408 ಅನ್ನು ಸ್ಥಾಪಿಸಿದೆ. ಕುಂದುಕೊರತೆಗಳ ಬಾಕಿ ಇರುವ ಸ್ಥಿತಿಯು ಜಿಲ್ಲಾ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳಿಗೆ ಪೋಷಣ್ ಟ್ರ್ಯಾಕರ್‌ನ ಆಯಾ ಲಾಗಿನ್ ನಲ್ಲಿ ಗೋಚರಿಸುತ್ತದೆ. ಪೋಷಣ್ ಸಹಾಯವಾಣಿಯಲ್ಲಿ ಸ್ವೀಕರಿಸಿದ ಕುಂದುಕೊರತೆಗಳನ್ನು ಕಾಲ್ ಸೆಂಟರ್ ಕಾರ್ಯನಿರ್ವಾಹಕರು ಪರಿಹರಿಸುತ್ತಾರೆ ಅಥವಾ ಪರಿಹಾರಕ್ಕಾಗಿ ಸಂಬಂಧಪಟ್ಟ ಅಂಗನವಾಡಿ ಕಾರ್ಯಕರ್ತೆ / ಮೇಲ್ವಿಚಾರಕ / ಸಿಡಿಪಿಒಗೆ ವರ್ಗಾಯಿಸಲಾಗುತ್ತದೆ. ಈ ಕುಂದುಕೊರತೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಪೋಷಣ್ ಟ್ರ್ಯಾಕರ್ ತಂತ್ರಾಂಶದಲ್ಲಿ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ಮೇಲ್ವಿಚಾರಕರು ಮತ್ತು ಸಿಡಿಪಿಒಗಳು ನೋಡಬಹುದು ಮತ್ತು ಪರಿಹರಿಸಬಹುದು.
ಸಚಿವಾಲಯವು `ಪೋಷಣ್ ಭಿ ಪಢಾಯಿ ಭಿ’ ಉಪಕ್ರಮದ ಅಡಿಯಲ್ಲಿ ಸಾಮರ್ಥ್ಯ ವರ್ಧನೆಯನ್ನು ಸಹ ನಡೆಸುತ್ತಿದೆ, ಇದರಲ್ಲಿ ಮಾಸ್ಟರ್ ತರಬೇತುದಾರರಿಗೆ (ಅಂದರೆ, ಜಿಲ್ಲಾ ಅಧಿಕಾರಿಗಳು, ಬ್ಲಾಕ್ ಸಂಯೋಜಕರು ಮತ್ತು ಮೇಲ್ವಿಚಾರಕರು) ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ (ಎಸ್‌ಬಿಎನ್ಐಡಬ್ಲ್ಯೂಸಿಡಿ) ಮೂಲಕ ತರಬೇತಿ ನೀಡಲಾಗುತ್ತದೆ ಮತ್ತು ಮಾಸ್ಟರ್ ತರಬೇತುದಾರರು ಕ್ಷೇತ್ರದ ಎಲ್ಲಾ ಅಂಗನವಾಡಿ ಕಾರ್ಯಕರ್ತರಿಗೆ ನೇರವಾಗಿ ತರಬೇತಿ ನೀಡುತ್ತಾರೆ. ಇದಲ್ಲದೆ, ಪೋಷಣ್ ಟ್ರ್ಯಾಕರ್ ತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ಎನ್ಇಜಿಡಿ ನಿಯಮಿತವಾಗಿ ಅಂಗನವಾಡಿ ಕಾರ್ಯಕರ್ತರಿಗೆ ನೇರವಾಗಿ ಕ್ಷೇತ್ರ ಮಟ್ಟದ ತರಬೇತಿಗಳು / ಕಾರ್ಯಾಗಾರಗಳನ್ನು ನಡೆಸುತ್ತಿದೆ. ದೇಶಾದ್ಯಂತ ವಿವಿಧ ಜಿಲ್ಲೆಗಳಲ್ಲಿ ವರ್ಚುವಲ್ ಮತ್ತು ದೈಹಿಕವಾಗಿ ಅನೇಕ ಸುತ್ತಿನ ತರಬೇತಿಯನ್ನು ನಡೆಸಲಾಗಿದೆ.
31.07.2025 ರವರೆಗೆ, 41,402 ಎಸ್ಎಲ್ಎಂಟಿಗಳು (ಸಿಡಿಪಿಒಗಳು, ಮೇಲ್ವಿಚಾರಕರು ಮತ್ತು ಹೆಚ್ಚುವರಿ ಸಂಪನ್ಮೂಲ ವ್ಯಕ್ತಿಗಳು) ಮತ್ತು 5,81,326 ಅಂಗನವಾಡಿ ಕಾರ್ಯಕರ್ತೆಯರಿಗೆ `ಪೋಷಣ್ ಭಿ ಪಢಾಯಿ ಭಿ’ ಕಾರ್ಯಕ್ರಮದಡಿ ದೇಶಾದ್ಯಂತ ತರಬೇತಿ ನೀಡಲಾಗಿದೆ.
ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಪ್ರಾರಂಭಿಸಿದ `ಪಿಎಂ ಜನಮಾನ್ ಮಿಷನ್’ 18 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಾಸಿಸುವ 75 ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿ) ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ಈ ಯೋಜನೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸೇರಿದಂತೆ 9 ಪ್ರಮುಖ ಸಚಿವಾಲಯಗಳಿಗೆ ಸಂಬಂಧಿಸಿದ 11 ನಿರ್ಣಾಯಕ ಮಧ್ಯಸ್ಥಿಕೆಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಇಲ್ಲಿಯವರೆಗೆ, ದೇಶಾದ್ಯಂತ ಒಟ್ಟು 2500 ಅಂಗನವಾಡಿ ಕೇಂದ್ರಗಳನ್ನು `ಪಿಎಂ ಜನಮಾನ್’ ಅಡಿಯಲ್ಲಿ ನಿರ್ಮಿಸಲು ಅನುಮೋದಿಸಲಾಗಿದೆ.
ಬುಡಕಟ್ಟು ವ್ಯವಹಾರಗಳ ಸಚಿವಾಲಯವು `ಧರ್ತಿ ಆಬಾ ಜಂಜಾತಿ ಗ್ರಾಮ ಉನ್ನತ್ ಅಭಿಯಾನ್’ (ಡಿಎಜೆಜಿಯುಎ) ಅನ್ನು ಪ್ರಾರಂಭಿಸಿದೆ. ಇದು ಬುಡಕಟ್ಟು ಬಹುಸಂಖ್ಯಾತ ಪ್ರದೇಶಗಳು ಮತ್ತು ಮಹತ್ವಾಕಾಂಕ್ಷೆಯ ಬ್ಲಾಕ್ ಎಸ್ಟಿ ಹಳ್ಳಿಗಳಲ್ಲಿ ಬುಡಕಟ್ಟು ಕುಟುಂಬಗಳ ಸಂತೃಪ್ತ ವ್ಯಾಪ್ತಿಯನ್ನು ಅಳವಡಿಸಿಕೊಳ್ಳುವ ಮೂಲಕ ಬುಡಕಟ್ಟು ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮಧ್ಯಪ್ರವೇಶವು 2000 ಹೊಸ `ಸಕ್ಷಮ್ ಅಂಗನವಾಡಿ’ ಕೇಂದ್ರಗಳ ಸ್ಥಾಪನೆ ಮತ್ತು ಅಸ್ತಿತ್ವದಲ್ಲಿರುವ 6000 ಅಂಗನವಾಡಿ ಕೇಂದ್ರಗಳನ್ನು 2024-25 ರಿಂದ 2028-29ರ ಹಣಕಾಸು ವರ್ಷದವರೆಗೆ ಸಕ್ಷಮ್ ಅಂಗನವಾಡಿ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವುದನ್ನು ಒಳಗೊಂಡಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ಮಾಹಿತಿಯನ್ನು ನೀಡಿದರು.
*****
(Release ID: 2154212)