ರಕ್ಷಣಾ ಸಚಿವಾಲಯ
ʻಪ್ರಳಯ್ʼ ಕ್ಷಿಪಣಿಯ ಸತತ ಎರಡು ಪರೀಕ್ಷಾರ್ಥ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ ʻಡಿಆರ್‌ಡಿಒʼ
Posted On:
29 JUL 2025 12:53PM by PIB Bengaluru
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) 2025ರ ಜುಲೈ 28 ಮತ್ತು 29 ರಂದು ಒಡಿಶಾ ಕರಾವಳಿಯ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ʻಪ್ರಳಯ್ʼ ಕ್ಷಿಪಣಿಯ ಸತತ ಎರಡು ಪರೀಕ್ಷಾರ್ಥ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿತು. ಕ್ಷಿಪಣಿ ವ್ಯವಸ್ಥೆಯ ಗರಿಷ್ಠ ಮತ್ತು ಕನಿಷ್ಠ ವ್ಯಾಪ್ತಿಯ ಸಾಮರ್ಥ್ಯವನ್ನು ಪ್ರಮಾಣಿಕರಿಸಲು ʻಬಳಕೆದಾರ ಮೌಲ್ಯಮಾಪನ ಪ್ರಯೋಗʼಗಳ ಭಾಗವಾಗಿ ಈ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು. ಕ್ಷಿಪಣಿಗಳು ನಿಖರವಾಗಿ ಉದ್ದೇಶಿತ ಪಥವನ್ನು ಅನುಸರಿಸಿದವು ಮತ್ತು ಎಲ್ಲಾ ಪರೀಕ್ಷಾ ಉದ್ದೇಶಗಳನ್ನು ಪೂರೈಸುವ ʻಪಿನ್-ಪಾಯಿಂಟ್ʼ ನಿಖರತೆಯೊಂದಿಗೆ ಗುರಿ ಬಿಂದುವನ್ನು ತಲುಪಿದವು. ಎಲ್ಲಾ ಉಪವ್ಯವಸ್ಥೆಗಳು ನಿರೀಕ್ಷೆಗಳ ಪ್ರಕಾರ ಕಾರ್ಯನಿರ್ವಹಿಸಿದವು. ಗೊತ್ತುಪಡಿಸಿದ ಪರಿಣಾಮ ಬಿಂದುವಿನ ಬಳಿ ಇರಿಸಲಾದ ಹಡಗಿನಲ್ಲಿ ನಿಯೋಜಿಸಲಾದ ಉಪಕರಣಗಳು ಸೇರಿದಂತೆ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಿಯೋಜಿಸಿದ ವಿವಿಧ ಟ್ರ್ಯಾಕಿಂಗ್ ಸಂವೇದಕಗಳಿಂದ ಸೆರೆಹಿಡಿಯಲಾದ ಪರೀಕ್ಷಾ ಡೇಟಾವನ್ನು ಬಳಸಿಕೊಂಡು ಇವುಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲಾಯಿತು.

ʻಪ್ರಳಯ್ʼ ದೇಶೀಯವಾಗಿ ಅಭಿವೃದ್ಧಿಪಡಿಸಿದ ಘನ ಪ್ರೊಪೆಲ್ಲಂಟ್ ಅರೆ-ಖಂಡಾಂತರ ಕ್ಷಿಪಣಿಯಾಗಿದ್ದು, ಹೆಚ್ಚಿನ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಅತ್ಯಾಧುನಿಕ ಪಥನಿರ್ದೇಶನ ಮತ್ತು ನ್ಯಾವಿಗೇಶನ್ ಬಳಸುತ್ತದೆ. ಈ ಕ್ಷಿಪಣಿಯು ವಿವಿಧ ಗುರಿಗಳ ವಿರುದ್ಧ ಅನೇಕ ರೀತಿಯ ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ʻಐಮಾರತ್ʼ ಸಂಶೋಧನಾ ಕೇಂದ್ರವು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ, ಸುಧಾರಿತ ವ್ಯವಸ್ಥೆಗಳ ಪ್ರಯೋಗಾಲಯ, ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ, ಡಿಫೆನ್ಸ್ ಮೆಟಲರ್ಜಿಕಲ್ ರಿಸರ್ಚ್ ಲ್ಯಾಬೊರೇಟರಿ, ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ, ರಿಸರ್ಚ್ ಅಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಎಂಜಿನಿಯರ್ಸ್) ಮತ್ತು ಐಟಿಆರ್ ಮುಂತಾದ ಡಿಆರ್‌ಡಿಒ ಪ್ರಯೋಗಾಲಯಗಳ ಸಹಯೋಗದೊಂದಿಗೆ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಉದ್ಯಮ ಪಾಲುದಾರರು - ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಇತರ ಅನೇಕ ಕೈಗಾರಿಕೆಗಳು ಮತ್ತು ಎಂಎಸ್ಎಂಇಗಳು.
ʻಡಿಆರ್‌ಡಿಒʼ ಹಿರಿಯ ವಿಜ್ಞಾನಿಗಳು, ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯ ಬಳಕೆದಾರರ ಪ್ರತಿನಿಧಿಗಳು ಮತ್ತು ಉದ್ಯಮದ ಪ್ರತಿನಿಧಿಗಳು ಈ ಹಾರಾಟ ಪರೀಕ್ಷೆಗಳಿಗೆ ಸಾಕ್ಷಿಯಾದರು.
ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ಯಶಸ್ವಿ ಹಾರಾಟ ಪರೀಕ್ಷೆಗಳಿಗಾಗಿ ಡಿಆರ್‌ಡಿಒ, ಸಶಸ್ತ್ರ ಪಡೆಗಳು ಮತ್ತು ಉದ್ಯಮವನ್ನು ಶ್ಲಾಘಿಸಿದ್ದಾರೆ. ಆಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಈ ಕ್ಷಿಪಣಿಯು ಬೆದರಿಕೆಗಳ ವಿರುದ್ಧ ಸಶಸ್ತ್ರ ಪಡೆಗಳಿಗೆ ಮತ್ತಷ್ಟು ತಾಂತ್ರಿಕ ಉತ್ತೇಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಡಿಆರ್‌ಡಿಒ ಅಧ್ಯಕ್ಷ ಡಾ.ಸಮೀರ್ ವಿ ಕಾಮತ್ ಅವರು ತಂಡಗಳನ್ನು ಅಭಿನಂದಿಸಿದರು. ಈ ಹಂತ -1 ಹಾರಾಟ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ಮುಂದಿನ ದಿನಗಳಲ್ಲಿ ಸಶಸ್ತ್ರ ಪಡೆಗಳಿಗೆ ಈ ಕ್ಷಿಪಣಿ ವ್ಯವಸ್ಥೆಯ ಸೇರ್ಪಡೆಗೆ ದಾರಿ ಮಾಡಿಕೊಡಲಿದೆ ಎಂದು ಅವರು ಹೇಳಿದರು.
*****
(Release ID: 2149681)