ರೈಲ್ವೇ ಸಚಿವಾಲಯ
azadi ka amrit mahotsav

ಲಾಜಿಸ್ಟಿಕ್ಸ್ ಬಲಿಷ್ಠವಾದರೆ, ಗಡಿಗಳು ಬಲಗೊಳ್ಳುತ್ತವೆ: ಶ್ರೀ ರಾಜನಾಥ್ ಸಿಂಗ್


ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ಯುವಕರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ರಕ್ಷಣಾ ಸಚಿವರ ಕರೆ

ಕಳೆದ 11 ವರ್ಷಗಳಲ್ಲಿ ಭಾರತೀಯ ರೈಲ್ವೆಯಲ್ಲಿ ಅಭೂತಪೂರ್ವ ರಚನಾತ್ಮಕ ಪರಿವರ್ತನೆ: ಶ್ರೀ ಅಶ್ವಿನಿ ವೈಷ್ಣವ್

ಗತಿ ಶಕ್ತಿ ವಿಶ್ವವಿದ್ಯಾಲಯದ 3ನೇ ಘಟಿಕೋತ್ಸವದಲ್ಲಿ 194 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Posted On: 27 JUL 2025 5:47PM by PIB Bengaluru

ಗತಿ ಶಕ್ತಿ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ ಇಂದು ವಡೋದರಾದಲ್ಲಿ ನಡೆಯಿತು. ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ವರ್ಚುವಲ್ ಮೂಲಕ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶ್ರೀ ರಾಜನಾಥ್ ಸಿಂಗ್, ಭಾರತವು ತನ್ನ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಅಭೂತಪೂರ್ವ ಪರಿವರ್ತನೆಗೆ ಸಾಕ್ಷಿಯಾಗಿದೆ. ಇದು ದೇಶದ ಆರ್ಥಿಕ ಅಭಿವೃದ್ಧಿಗೆ ಬಲವಾದ ಅಡಿಪಾಯವನ್ನು ಹಾಕುತ್ತಿದೆ ಎಂದು ಹೇಳಿದರು.

ಲಾಜಿಸ್ಟಿಕ್ಸ್ ಕ್ಷೇತ್ರವನ್ನು 21ನೇ ಶತಮಾನದ ಭಾರತಕ್ಕೆ ಬದಲಾವಣೆಯ ಹರಿಕಾರ ಎಂದು ವಿವರಿಸಿದ ರಕ್ಷಣಾ ಸಚಿವರು, ಇದು ಯುವಕರಿಗೆ ಅಪಾರ ಅವಕಾಶಗಳನ್ನು ಕಲ್ಪಿಸಲಿದೆ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಯುವಕರಿಗೆ ಕರೆ ನೀಡಿದರು.

ಲಾಜಿಸ್ಟಿಕ್ಸ್ ನ ಮಹತ್ವವನ್ನು ವಿವರಿಸಿದ ಅವರು, ಲಾಜಿಸ್ಟಿಕ್ಸ್ ಸೇವೆಗಳು ಬಲವಾದಷ್ಟೂ ನಮ್ಮ ಗಡಿಗಳು ಬಲವಾಗಿ ಉಳಿಯುತ್ತವೆ ಎಂದು ಅವರು ಹೇಳಿದರು. ನಾವು ದೇಶದ ಒಂದು ಭಾಗದಲ್ಲಿ ತಯಾರಿಸಿದ ರಕ್ಷಣಾ ಉತ್ಪನ್ನಗಳನ್ನು ಅಥವಾ ಸೈನಿಕರಿಗೆ ಆಹಾರ ಸರಬರಾಜನ್ನು ಸಮಯಕ್ಕೆ ಸರಿಯಾಗಿ ಗಡಿಗೆ ತಲುಪಿಸಿದಾಗ, ಗಡಿ ಕಾವಲುಗಾರರ ನೈತಿಕ ಸ್ಥೈರ್ಯವು ಬಲಗೊಳ್ಳುತ್ತದೆ ಎಂದು ಹೇಳಿದರು.

ಸರ್ಕಾರದ ಉಪಕ್ರಮಗಳನ್ನು ಬಿಂಬಿಸಿದ ಶ್ರೀ ರಾಜನಾಥ್ ಸಿಂಗ್, ಬಹು ಮಾದರಿ ಸಾರಿಗೆ ಕೇಂದ್ರಗಳನ್ನು ರಚಿಸುವುದು ಮತ್ತು ಮಿಷನ್ ಮೋಡ್ ಯೋಜನೆಗಳನ್ನು ಜಾರಿಗೆ ತರುವಂತಹ ಉಪಕ್ರಮಗಳು ಲಾಜಿಸ್ಟಿಕ್ಸ್ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಿವೆ ಮತ್ತು ಡೇಟಾ ಆಧಾರಿತ ನಿರ್ಧಾರ ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸಿವೆ ಎಂದು ಹೇಳಿದರು.

ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಮತ್ತು ಗತಿ ಶಕ್ತಿ ವಿಶ್ವವಿದ್ಯಾಲಯದ ಕುಲಪತಿ ಶ್ರೀ ಅಶ್ವಿನಿ ವೈಷ್ಣವ್ ಅವರು ಕಳೆದ 11 ವರ್ಷಗಳಲ್ಲಿ ಭಾರತೀಯ ರೈಲ್ವೆಯಲ್ಲಿ ಆಗಿರುವ ಪರಿವರ್ತನೆಯ ಬದಲಾವಣೆಗಳನ್ನು ಬಿಂಬಿಸಿದರು. ಕಳೆದ ಒಂದು ವರ್ಷದಲ್ಲಿ, ರೈಲು ಜಾಲವು 5,300 ಕಿ.ಮೀ ವಿಸ್ತರಿಸಿದೆ, ಸುರಂಗ ನಿರ್ಮಾಣವು ಒಟ್ಟು 368 ಕಿ.ಮೀ ತಲುಪಿದೆ ಎಂದು ಅವರು ಮಾಹಿತಿ ನೀಡಿದರು.

ಇತಿಹಾಸದಲ್ಲಿ ಎರಡೂವರೆ ಶತಮಾನಗಳ ಅವಧಿಯನ್ನು ಹೊರತುಪಡಿಸಿ, ಭಾರತವು ಯಾವಾಗಲೂ ವಿಶ್ವದ ಉನ್ನತ ಆರ್ಥಿಕತೆಗಳಲ್ಲಿ ಒಂದಾಗಿದೆ. ಗತಿ ಶಕ್ತಿ ವಿಶ್ವವಿದ್ಯಾಲಯದಂತಹ ಶಿಕ್ಷಣ ಸಂಸ್ಥೆಗಳ ಮೂಲಕ ಪ್ರತಿಯೊಂದು ವಲಯವನ್ನು ಕೇಂದ್ರೀಕರಿಸಿದ ಮಾನವ ಸಂಪನ್ಮೂಲವನ್ನು ನಿರ್ಮಿಸುವ ಮೂಲಕ ಭಾರತವನ್ನು ಮತ್ತೊಮ್ಮೆ ಉನ್ನತ ಆರ್ಥಿಕತೆಯನ್ನಾಗಿ ಮಾಡಲು ಅವರು ಒತ್ತಿ ಹೇಳಿದರು. ಗತಿ ಶಕ್ತಿ ವಿಶ್ವವಿದ್ಯಾಲಯವು ಸುಮಾರು 40 ವಿವಿಧ ಕೈಗಾರಿಕಾ ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ತಿಳುವಳಿಕಾ ಒಡಂಬಡಿಕೆಗಳಿಗೆ ಸಹಿ ಹಾಕಿದೆ. ಭವಿಷ್ಯದಲ್ಲಿ ಸಾಗರ ಎಂಜಿನಿಯರಿಂಗ್ ಅನ್ನು ಕೇಂದ್ರೀಕರಿಸಿ ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸಲು ಮತ್ತು ಸಾಗರ ಕೈಗಾರಿಕೆಗಳೊಂದಿಗೆ ತಿಳುವಳಿಕಾ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ಅವರು ಸಲಹೆ ನೀಡಿದರು.

ಶ್ರೀ ಅಶ್ವಿನಿ ವೈಷ್ಣವ್ ಅವರು ಪದವಿ ಪಡೆಯುವ ವಿದ್ಯಾರ್ಥಿಗಳನ್ನು ಭಾರತದ ಅಭಿವೃದ್ಧಿಯ ಪ್ರಯಾಣಕ್ಕೆ ಕೊಡುಗೆ ನೀಡುವಂತೆ ಪ್ರೋತ್ಸಾಹಿಸಿದರು ಮತ್ತು ಈ ಕ್ಷೇತ್ರದಲ್ಲಿ ನಾವೀನ್ಯತೆಯ ಮಹತ್ವವನ್ನು ಒತ್ತಿ ಹೇಳಿದರು. ಗತಿ ಶಕ್ತಿ ವಿಶ್ವವಿದ್ಯಾಲಯವನ್ನು “ಅಭಿವೃದ್ಧಿಯ ಎಂಜಿನ್” ಎಂದು ಬಣ್ಣಿಸಿದ ಅವರು, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಬೆಂಬಲಿಸುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದರು.

ಘಟಿಕೋತ್ಸವದಲ್ಲಿ ಒಟ್ಟು 194 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಪದವಿ ಪಡೆದರು. ಪ್ರತಿ ಕೋರ್ಸ್ ನಿಂದ ಒಬ್ಬ ವಿದ್ಯಾರ್ಥಿಗೆ ಅಕಾಡೆಮಿಕ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಲಾಯಿತು, ಅತ್ಯುತ್ತಮ ಪ್ರಾಜೆಕ್ಟ್ ಮತ್ತು ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಗಳನ್ನು ಸಹ ಪ್ರದಾನ ಮಾಡಲಾಯಿತು.

ಗತಿ ಶಕ್ತಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.(ಡಾ.) ಮನೋಜ್ ಚೌಧರಿ ಸ್ವಾಗತ ಭಾಷಣ ಮಾಡಿ, ಕಳೆದ ಮೂರು ವರ್ಷಗಳಲ್ಲಿ ಸಂಸ್ಥೆಯ ಸಾಧನೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಡೋದರಾ ಸಂಸದ ಡಾ. ಹೇಮಂಗ್ ಜೋಶಿ, ರಾಜಮಾತಾ ಶುಭಾಂಗಿನಿ ರಾಜೇ ಗಾಯಕ್ವಾಡ್, ಭಾರತೀಯ ಸೇನೆ ಮತ್ತು ರೈಲ್ವೆಯ ಹಿರಿಯ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಭಾಗವಹಿಸಿದ್ದರು.

ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಗತಿ ಶಕ್ತಿ ವಿಶ್ವವಿದ್ಯಾಲಯವು ಸಾರಿಗೆ ಸಂಬಂಧಿತ ಶಿಕ್ಷಣ, ಬಹುಶಿಸ್ತೀಯ ಸಂಶೋಧನೆ ಮತ್ತು ತರಬೇತಿಯ ಮೇಲೆ ಕೇಂದ್ರೀಕರಿಸಿದ ಭಾರತದ ಮೊದಲ ವಿಶ್ವವಿದ್ಯಾಲಯವಾಗಿದೆ. ಗತಿ ಶಕ್ತಿ ವಿಶ್ವವಿದ್ಯಾಲಯ (ಜಿ.ಎಸ್.ವಿ) ಗಾಗಿ ಪ್ರಧಾನಮಂತ್ರಿ ಅವರ ದೃಷ್ಟಿಕೋನವು ಪಿ.ಎಂ. ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ನ ವಿಶಾಲ ಉದ್ದೇಶಗಳೊಂದಿಗೆ ಆಳವಾಗಿ ಹೆಣೆದುಕೊಂಡಿದೆ. ಇದು ಭಾರತದ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡುವ ಗುರಿಯನ್ನು ಹೊಂದಿದೆ.

ಪಿ.ಎಂ. ಗತಿ ಶಕ್ತಿಗಾಗಿ ಪ್ರಧಾನಮಂತ್ರಿ ಅವರ ದೃಷ್ಟಿಕೋನವು ಭಾರತಕ್ಕೆ ಸಮಗ್ರ, ಸಂಯೋಜಿಸಲಾದ ಮತ್ತು ಪರಿಣಾಮಕಾರಿ ಮೂಲಸೌಕರ್ಯ ಪರಿಸರ ವ್ಯವಸ್ಥೆಯನ್ನು ರಚಿಸುವುದು, ಹಿಂದಿನ ಅಸಮರ್ಥತೆಗಳನ್ನು ಪರಿಹರಿಸುವುದು ಮತ್ತು ರಾಷ್ಟ್ರವನ್ನು ಆರ್ಥಿಕ ಬೆಳವಣಿಗೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯತ್ತ ಕೊಂಡೊಯ್ಯುವುದು. ರೈಲ್ವೆ, ರಸ್ತೆಮಾರ್ಗಗಳು, ಬಂದರುಗಳು ಮತ್ತು ಜಲಮಾರ್ಗಗಳಂತಹ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಯೋಜನೆಗಳ ಏಕೀಕೃತ ಯೋಜನೆ ಮತ್ತು ಸಿಂಕ್ರೊನೈಸ್ಡ್ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು 16 ಸಚಿವಾಲಯಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಒಟ್ಟುಗೂಡಿಸುವುದು ಪಿ.ಎಂ. ಗತಿ ಶಕ್ತಿಯ ಪ್ರಮುಖ ತತ್ವವಾಗಿದೆ.

 

*****
 


(Release ID: 2149151)
Read this release in: Odia , English , Urdu , Hindi , Tamil