ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
'ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮಾದಕವಸ್ತು ಮುಕ್ತ ಯುವಕರು' ಎಂಬ ಧ್ಯೇಯವಾಕ್ಯದೊಂದಿಗೆ ವಾರಣಾಸಿಯ ರುದ್ರಾಕ್ಷಿ ಕನ್ವೆನ್ಷನ್ ಸೆಂಟರ್ನಲ್ಲಿ 'ಯುವ ಆಧ್ಯಾತ್ಮಿಕ ಶೃಂಗಸಭೆ' ಪ್ರಾರಂಭವಾಯಿತು; ಭಾರತದಾದ್ಯಂತ ಸುಮಾರು 122 ಆಧ್ಯಾತ್ಮಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳಿಂದ 600 ಕ್ಕೂ ಹೆಚ್ಚು ಯುವಕರು ಪಾಲ್ಗೊಂಡರು
ಯುವಕರು ಮಾದಕ ವಸ್ತು ಮತ್ತು ಮೊಬೈಲ್ ನಿಂದ ದೂರವಿದ್ದರೆ ಹಾಗೂ ವ್ಯಸನದಿಂದ ದೂರವಿದ್ದರೆ ಮಾತ್ರ ಭಾರತ ಅಭಿವೃದ್ಧಿ ಹೊಂದಲು ಸಾಧ್ಯ: ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ
ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಮಾದಕ ವಸ್ತು ವಿರೋಧಿ ಅಭಿಯಾನದ ಭಾಗವಾಗಬೇಕು: ಡಾ.ಮನ್ಸುಖ್ ಮಾಂಡವಿಯಾ
ನಮ್ಮ ಯುವಕರ ನೇತೃತ್ವದಲ್ಲಿ ನಾವು ಮಾದಕವಸ್ತು ಮುಕ್ತ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಬೇಕು: ಡಾ. ಮನ್ಸುಖ್ ಮಾಂಡವಿಯಾ
Posted On:
19 JUL 2025 2:25PM by PIB Bengaluru
ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಉತ್ತರ ಪ್ರದೇಶದ ವಾರಣಾಸಿಯಲ್ಲಿ 'ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮಾದಕವಸ್ತು ಮುಕ್ತ ಯುವಕರು' ಎಂಬ ಧ್ಯೇಯವಾಕ್ಯದೊಂದಿಗೆ 'ಯುವ ಆಧ್ಯಾತ್ಮಿಕ ಶೃಂಗಸಭೆ'ಯನ್ನು ಪ್ರಾರಂಭಿಸಿದೆ. ಈ ಶೃಂಗಸಭೆಯಲ್ಲಿ ದೇಶಾದ್ಯಂತದ 122 ಆಧ್ಯಾತ್ಮಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳನ್ನು ಪ್ರತಿನಿಧಿಸುವ 600ಕ್ಕೂ ಹೆಚ್ಚು ಯುವ ಭಾಗಿದಾರರನ್ನು ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಯುವಜನ ವ್ಯವಹಾರಗಳು, ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು, “2022ರ ಆಗಸ್ಟ್ 15 ರಂದು, ಕೆಂಪು ಕೋಟೆಯಿಂದ ಭಾರತದ 76ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಮೃತ್ ಕಾಲದ 'ಪಂಚ ಪ್ರಾಣ' ಮೂಲಕ ಮುಂದಿನ 25 ವರ್ಷಗಳ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು ಎಂದು ಹೇಳಿದರು. ದೇಶದ ಜನಸಂಖ್ಯೆಯ 65% ರಷ್ಟು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾದ್ದರಿಂದ, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವಲ್ಲಿ ಯುವಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಸಚಿವರು ಒತ್ತಿ ಹೇಳಿದರು.

ಈ ದೃಷ್ಟಿಕೋನವನ್ನು ಸಾಧಿಸಲು ಭಾರತವನ್ನು ಮಾದಕವಸ್ತು ಮುಕ್ತಗೊಳಿಸುವ ಮಹತ್ವವನ್ನು ಡಾ. ಮಾಂಡವೀಯ ಒತ್ತಿ ಹೇಳಿದರು. ನಮ್ಮ ಯುವ ಪೀಳಿಗೆಯನ್ನು ಕೇವಲ ಫಲಾನುಭವಿಗಳಾಗಿ ನೋಡದೆ ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಬದಲಾವಣೆಯ ರೂವಾರಿಗಳಾಗಿಯೂ ನೋಡಬೇಕು ಎಂದು ಅವರು ಹೇಳಿದರು. ಆದಾಗ್ಯೂ, ಮಾದಕ ದ್ರವ್ಯ ಸೇವನೆಯು ಇಂದು ಯುವಕರು ಎದುರಿಸುತ್ತಿರುವ ಅತಿದೊಡ್ಡ ಅಪಾಯಗಳಲ್ಲಿ ಒಂದಾಗಿದೆ. ವ್ಯಸನವು ಅವರನ್ನು ಜೀವನದ ನಿರ್ಣಾಯಕ ಹಂತದಲ್ಲಿ ಅಪಾಯಕ್ಕೆ ದೂಡುತ್ತದೆ ಮತ್ತು ರಾಷ್ಟ್ರೀಯ ಪ್ರಗತಿಗೆ ಗಂಭೀರ ಸವಾಲನ್ನು ಒಡ್ಡುತ್ತಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದುವಂತೆ ಮಾಡಲು, ನಾವು ನಮ್ಮ ಯುವಕರನ್ನು ಮಾದಕವಸ್ತು, ಮೊಬೈಲ್ ಫೋನ್ ಗಳು ಮತ್ತು ರೀಲ್ಸ್ ಗಳಿಂದ ದೂರವಿಡಬೇಕು ಎಂದು ಅವರು ಹೇಳಿದರು.
ವ್ಯಸನದಿಂದ ದೂರವಿರುವ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಲು ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ತಮ್ಮ ವೇದಿಕೆಗಳನ್ನು ಬಳಸಬೇಕೆಂದು ಸಚಿವರು ಒತ್ತಾಯಿಸಿದರು. ಒಂದೇ ಶಿಬಿರ ಅಥವಾ ಸೀಮಿತ ಪ್ರಯತ್ನಗಳು ಸಾಕಾಗುವುದಿಲ್ಲ - ನಮಗೆ ಸಾಮೂಹಿಕ ಆಂದೋಲನದ ಅಗತ್ಯವಿದೆ, ಅಲ್ಲಿ ಪ್ರತಿಯೊಬ್ಬ ನಾಗರಿಕರೂ ಕನಿಷ್ಠ ಐದು ಜನರನ್ನು ಮಾದಕವಸ್ತು ವಿರೋಧಿ ಅಭಿಯಾನಕ್ಕೆ ಸೇರಲು ಪ್ರೇರೇಪಿಸುವ ಸಂಕಲ್ಪ ಮಾಡಬೇಕು ಎಂದು ಅವರು ಹೇಳಿದರು.
ಎರಡು ದಿನಗಳ ಶೃಂಗಸಭೆಯು ಮೌಲ್ಯಯುತ ಚರ್ಚೆಗಳು ಮತ್ತು ಅರ್ಥಪೂರ್ಣ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂದು ಡಾ. ಮಾಂಡವೀಯ ವಿಶ್ವಾಸ ವ್ಯಕ್ತಪಡಿಸಿದರು. ಜುಲೈ 20 ರಂದು ಯುವಕರು ಮತ್ತು ಆಧ್ಯಾತ್ಮಿಕ ನಾಯಕರ ಸಾಮೂಹಿಕ ದೃಷ್ಟಿ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುವ 'ಕಾಶಿ ಘೋಷಣೆ' ಬಿಡುಗಡೆಯೊಂದಿಗೆ ಶೃಂಗಸಭೆಯು ಮುಕ್ತಾಯಗೊಳ್ಳಲಿದೆ. ಈ ಘೋಷಣೆಯು ಮಾದಕವಸ್ತು ಮುಕ್ತ ಭಾರತವನ್ನು ನಿರ್ಮಿಸಲು ವಿವರವಾದ ಕ್ರಿಯಾ ಯೋಜನೆಯನ್ನು ನೀಡುತ್ತದೆ ಮತ್ತು ನೀತಿ ನಿರೂಪಕರು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ವ್ಯಸನ ಮುಕ್ತ ಮತ್ತು ಪುನರ್ವಸತಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಯುವ ಸಮೂಹಕಕೆ ಮಾರ್ಗದರ್ಶಕವಾಗಿ ಕಾರ್ಯನಿರ್ವಹಿಸುತ್ತದೆ.

ಶೃಂಗಸಭೆಯು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದ ನಾಲ್ಕು ವಿಷಯಾಧಾರಿತ ಅಧಿವೇಶನಗಳನ್ನು ಒಳಗೊಂಡಿದೆ: ವ್ಯಸನವನ್ನು ಅರ್ಥಮಾಡಿಕೊಳ್ಳುವುದು ಮತ್ತು ಯುವಕರ ಮೇಲೆ ಅದರ ಪರಿಣಾಮ; ಮಾದಕವಸ್ತು ಕಳ್ಳಸಾಗಣೆ ಜಾಲಗಳು ಮತ್ತು ವಾಣಿಜ್ಯ ಹಿತಾಸಕ್ತಿಗಳನ್ನು ನಾಶಪಡಿಸುವುದು; ಪರಿಣಾಮಕಾರಿ ಅಭಿಯಾನಗಳು ಮತ್ತು ಜನಸಂಪರ್ಕ ತಂತ್ರಗಳನ್ನು ವಿನ್ಯಾಸಗೊಳಿಸುವುದು; ಮತ್ತು 2047ರ ವೇಳೆಗೆ ಮಾದಕವಸ್ತು ಮುಕ್ತ ಭಾರತದ ಕಡೆಗೆ ದೀರ್ಘಕಾಲೀನ ಬದ್ಧತೆಯನ್ನು ನಿರ್ಮಿಸುವುದು. ತಜ್ಞರ ಭಾಷಣಗಳು, ಪ್ಯಾನಲ್ ಚರ್ಚೆಗಳು ಮತ್ತು ಸಂವಾದಾತ್ಮಕ ವೈಟ್ ಬೋರ್ಡ್ ವೇದಿಕೆಗಳ ಮೂಲಕ ಈ ಅಧಿವೇಶನಗಳನ್ನು ನಡೆಸಲಾಗುತ್ತಿದೆ. ಪ್ರತಿಯೊಬ್ಬ ಪ್ರತಿನಿಧಿಯು ಸಮಗ್ರ ರಾಷ್ಟ್ರೀಯ ಕಾರ್ಯತಂತ್ರವನ್ನು ರೂಪಿಸುವಲ್ಲಿ ಸಕ್ರಿಯವಾಗಿ ಕೊಡುಗೆ ನೀಡುವುದನ್ನು ಖಚಿತಪಡಿಸುತ್ತದೆ.

*****
(Release ID: 2146148)