ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಮುಂಬೈನ ಎನ್‌.ಎಫ್‌.ಡಿ.ಸಿ ಸಂಕೀರ್ಣದಲ್ಲಿ ಐ.ಐ.ಸಿ.ಟಿಯ ಮೊದಲ ಕ್ಯಾಂಪಸ್ ಉದ್ಘಾಟನೆ


ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಐ.ಐ.ಸಿ.ಟಿ ಲಾಂಛನ ಮತ್ತು ವೇವ್ಸ್ ಫಲಿತಾಂಶ ವರದಿಗಳನ್ನು ಬಿಡುಗಡೆ ಮಾಡಿದರು

ಎನ್‌.ಎಫ್‌.ಡಿ.ಸಿ - ಭಾರತೀಯ ಸಿನಿಮಾದ ರಾಷ್ಟ್ರೀಯ ವಸ್ತುಸಂಗ್ರಹಾಲಯದ ಗುಲ್ಶನ್ ಮಹಲ್‌ ನಲ್ಲಿ ವೇವ್ಸ್ ಭಾರತ್ ಪೆವಿಲಿಯನ್‌‌ ನ ಔಪಚಾರಿಕ ಉದ್ಘಾಟನೆ

ವೇವ್ಸ್ ಈಗ ಒಂದು ಆಂದೋಲನವಾಗಿ ಮಾರ್ಪಟ್ಟಿದೆ ಮತ್ತು ಈ ಕಾರ್ಯಕ್ರಮದ ಜಾಗತಿಕ ಪ್ರತಿಧ್ವನಿಯನ್ನು ನಾವು ಕೇಳುತ್ತಿದ್ದೇವೆ: ಮಹಾರಾಷ್ಟ್ರ ಮುಖ್ಯಮಂತ್ರಿ

ಎ.ವಿ.ಜಿ.ಸಿ-ಎಕ್ಸ್‌.ಆರ್‌ ವೃತ್ತಿಪರರು ಮತ್ತು ತರಬೇತುದಾರರಿಗೆ ಸುಧಾರಿತ ತರಬೇತಿಯನ್ನು ನೀಡಲು ಐ.ಐ.ಸಿ.ಟಿ ಸಂಪೂರ್ಣವಾಗಿ ಉದ್ಯಮ-ಸಮನ್ವಯ ಸುಧಾರಿತ ಕಾರ್ಯಕ್ರಮಗಳನ್ನು ನೀಡಲಿದೆ: ಅಶ್ವಿನಿ ವೈಷ್ಣವ್

Posted On: 18 JUL 2025 4:28PM by PIB Bengaluru

ಎನ್‌.ಎಫ್‌.ಡಿ.ಸಿ ಸಂಕೀರ್ಣದಲ್ಲಿರುವ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ' (ಐ.ಐ.ಸಿ.ಟಿ) ಯ ಆಡಳಿತ ಸಂಕೀರ್ಣ ಮತ್ತು ತರಗತಿ ಕೊಠಡಿಗಳನ್ನು ಒಳಗೊಂಡ ಮೊದಲ ಕ್ಯಾಂಪಸ್ ಅನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ, ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಇಂದು ಬೆಳಿಗ್ಗೆ ಮುಂಬೈನಲ್ಲಿ ಉದ್ಘಾಟಿಸಿದರು. ನಂತರ, ಎನ್‌.ಎಫ್‌.ಡಿ.ಸಿ -ನ್ಯಾಷನಲ್ ಮ್ಯೂಸಿಯಂ ಆಫ್ ಇಂಡಿಯನ್ ಸಿನಿಮಾ (ಎನ್‌.ಎಂ.ಐ.ಸಿ) ದಲ್ಲಿರುವ ಗುಲ್ಶನ್ ಮಹಲ್‌ ನಲ್ಲಿ ವೇವ್ಸ್‌ 2025 ಭಾರತ್ ಪೆವಿಲಿಯನ್ ಅನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಫಡ್ನವೀಸ್ ಮತ್ತು ಕೇಂದ್ರ ಸಚಿವ ಶ್ರೀ ವೈಷ್ಣವ್ ಅವರು ವಿಧ್ಯುಕ್ತವಾಗಿ ಉದ್ಘಾಟಿಸಿದರು. ವಿಶ್ವ ಶ್ರವ್ಯ-ದೃಶ್ಯ ಮತ್ತು ಮನರಂಜನಾ ಶೃಂಗಸಭೆಯ (ವೇವ್ಸ್ 2025) ಮೊದಲ ಆವೃತ್ತಿಯ ಫಲಿತಾಂಶ ವರದಿಗಳನ್ನು ಸಹ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಮಹಾರಾಷ್ಟ್ರ ಸರ್ಕಾರದ ಸಾಂಸ್ಕೃತಿಕ ವ್ಯವಹಾರಗಳು ಮತ್ತು ಐಟಿ ಸಚಿವ ಶ್ರೀ ಆಶಿಶ್ ಶೆಲಾರ್, ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಸಿಂಗ್ ಮೀನಾ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಐ.ಐ.ಸಿ.ಟಿ ಲಾಂಛನವನ್ನು ಬಿಡುಗಡೆ ಮಾಡಲಾಯಿತು ಮತ್ತು ಹದಿನೇಳು ಕೋರ್ಸ್‌ ಗಳನ್ನು ಸಹ ವಿಧ್ಯುಕ್ತವಾಗಿ ಪ್ರಾರಂಭಿಸಲಾಯಿತು.

ಈ ಸಂದರ್ಭದಲ್ಲಿ, ಪ್ರಸಾರ ಭಾರತಿ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವೆ ಮಹಾರಾಷ್ಟ್ರ ಚಲನಚಿತ್ರ, ರಂಗಭೂಮಿ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ನಿಗಮ ಲಿಮಿಟೆಡ್ (ಎಂ.ಫ್‌.ಎಸ್‌.ಸಿ.ಡಿ.ಸಿ.ಎಲ್‌) ಮೂಲಕ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ದೇಶದಲ್ಲಿ ಚಲನಚಿತ್ರ ಮತ್ತು ದೂರದರ್ಶನ ಕ್ಷೇತ್ರದಲ್ಲಿ ಸೃಜನಶೀಲತೆಯ ಮಹತ್ವವನ್ನು ಗುರುತಿಸಿ, ಮಾಧ್ಯಮ ವಲಯದಲ್ಲಿ ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ ಮತ್ತು ಅಂತರರಾಷ್ಟ್ರೀಯ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸಲು, ಸಮಗ್ರ ಚಲನಚಿತ್ರ ಮತ್ತು ದೂರದರ್ಶನ ಮಾಧ್ಯಮ ಕೇಂದ್ರವನ್ನು ಅಭಿವೃದ್ಧಿಪಡಿಸಲು ಈ ಒಪ್ಪಂದ ನೆರವಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಫಡ್ನವೀಸ್, ಭಾರತದ ಮನರಂಜನಾ ರಾಜಧಾನಿ ಮುಂಬೈನಲ್ಲಿ ವೇವ್ಸ್‌ ನ ಮೊದಲ ಆವೃತ್ತಿಯನ್ನು ಆಯೋಜಿಸಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ವೇವ್ಸ್‌ ನ ಮೊದಲ ಆವೃತ್ತಿಯನ್ನು ಈ ವರ್ಷ ಮೇ 1-4 ರಂದು ಮುಂಬೈನಲ್ಲಿ ನಡೆಸಲಾಯಿತು. ಸೃಜನಶೀಲ ಆರ್ಥಿಕತೆಯನ್ನು ಹೆಚ್ಚಿಸಲು ಭಾರತದಲ್ಲಿ ಜಾಗತಿಕ ಕಾರ್ಯಕ್ರಮವನ್ನು ಆಯೋಜಿಸಬೇಕೆಂಬ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ಪ್ರಕಾರ, ಕೇಂದ್ರ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರದ ಸಂಯೋಜಿತ ಪ್ರಯತ್ನಗಳ ಮೂಲಕ 'ವೇವ್ಸ್' ಅನ್ನು ಯಶಸ್ವಿಯಾಗಿ ಆಯೋಜಿಸಲಾಯಿತು ಎಂದು ಶ್ರೀ ಫಡ್ನವೀಸ್ ಹೇಳಿದರು. "ವೇವ್ಸ್ ಈಗ ಒಂದು ಆಂದೋಲನವಾಗಿ ಮಾರ್ಪಟ್ಟಿದೆ ಮತ್ತು ನಾವು ಈ ಕಾರ್ಯಕ್ರಮದ ಜಾಗತಿಕ ಪ್ರತಿಧ್ವನಿಯನ್ನು ಕೇಳುತ್ತಿದ್ದೇವೆ" ಎಂದು ಅವರು ಹೇಳಿದರು.‌ ವೇವ್ಸ್ ಸೃಜನಶೀಲ ಆರ್ಥಿಕತೆಯಲ್ಲಿ ಹೊಸ ಮಂಥನವನ್ನು ಆರಂಭಿಸಿದೆ ಎಂದು ಅವರು ಹೇಳಿದರು. ವೇವ್ಸ್ ಉಪಕ್ರಮ ಮತ್ತು ಸೃಜನಶೀಲ ಆರ್ಥಿಕತೆಗೆ ಪ್ರಮುಖ ಉತ್ತೇಜನ ನೀಡಲು, ಮಹಾರಾಷ್ಟ್ರ ಸರ್ಕಾರ ₹150 ಕೋಟಿ  ಹಂಚಿಕೆ ಮಾಡಲು ನಿರ್ಧರಿಸಿದೆ ಎಂದು ಅವರು ಹೇಳಿದರು. ಫಿಲ್ಮ್ ಸಿಟಿಯಲ್ಲಿ ತಲೆ ಎತ್ತಲಿರುವ ಐ.ಐ.ಸಿ.ಟಿ ಕ್ಯಾಂಪಸ್ ವಿಶ್ವ ದರ್ಜೆಯ ಶಿಕ್ಷಣ ಸಂಸ್ಥೆಯಾಗಿ ಮಾತ್ರವಲ್ಲದೆ, ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸುವ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಹೆಗ್ಗುರುತಾಗಿಯೂ ಹೊರಹೊಮ್ಮುವ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಭರವಸೆ ವ್ಯಕ್ತಪಡಿಸಿದರು. ವೇವ್ಸ್ 2025 ರಲ್ಲಿ ಹೆಚ್ಚು ಮೆಚ್ಚುಗೆ ಪಡೆದ ಭಾರತ್ ಪೆವಿಲಿಯನ್ ಅನ್ನು ಈಗ ಎನ್‌.ಎಂ.ಐ.ಸಿ ಯ ಗುಲ್ಶನ್ ಮಹಲ್‌ ಗೆ ಸ್ಥಳಾಂತರಿಸಲಾಗಿದೆ, ಇದು ಮುಂಬೈನ ಪ್ರವಾಸೋದ್ಯಮ ಸರ್ಕ್ಯೂಟ್‌ ನಲ್ಲಿ ಹೊಸ ಸಾಂಸ್ಕೃತಿಕ ತಾಣವಾಗುತ್ತದೆ ಎಂದು ಅವರು ಹೇಳಿದರು. ವೇವ್ಸ್ ಸಮಯದಲ್ಲಿ ಘೋಷಿಸಲಾದ ಮತ್ತು ಆರಂಭದಲ್ಲಿ 42 ಕಂಪನಿಗಳನ್ನು ಒಳಗೊಂಡಿದ್ದ, ಸುಮಾರು ₹93,000 ಕೋಟಿಗಳ ಮೌಲ್ಯಮಾಪನ ಹೊಂದಿದ್ದ ವೇವ್ಸ್ ಸೂಚ್ಯಂಕವು ಅಲ್ಪಾವಧಿಯಲ್ಲಿಯೇ ₹1 ಲಕ್ಷ ಕೋಟಿಗಳನ್ನು ದಾಟಿದೆ ಎಂದು ಅವರು ಮಾಹಿತಿ ನೀಡಿದರು. ಇದು ಸೃಜನಶೀಲ ಆರ್ಥಿಕತೆಯ ತ್ವರಿತ ಬೆಳವಣಿಗೆ ಮತ್ತು ಅಪಾರ ಸಾಮರ್ಥ್ಯವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, "ಸೃಜನಶೀಲ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಐ.ಐ.ಟಿ ಮತ್ತು ಐ.ಐ.ಎಂ ಮಟ್ಟದ ಸಂಸ್ಥೆಯನ್ನು ಸ್ಥಾಪಿಸುವುದು ಪ್ರಧಾನಿ ಮೋದಿಯವರ ಕನಸಾಗಿತ್ತು ಮತ್ತು ಐ.ಐ.ಸಿ.ಟಿ ಸ್ಥಾಪನೆಯು ಈ ದಿಕ್ಕಿನಲ್ಲಿ ಒಂದು ಹೆಗ್ಗುರುತು ನಿರ್ಧಾರವಾಗಿದೆ" ಎಂದು ಹೇಳಿದರು. "ಸೃಜನಶೀಲ ಆರ್ಥಿಕತೆಯಲ್ಲಿ ಕೆಲಸ ಮಾಡುವ ಜನರಿಗೆ ಹೊಸ ಕೌಶಲ್ಯ, ತರಬೇತಿ ಮತ್ತು ಪರಿಕರಗಳನ್ನು ಒದಗಿಸುವುದು ಮತ್ತು ವಿಶ್ವದ ಅತ್ಯುತ್ತಮ ಅಭ್ಯಾಸಗಳನ್ನು ಭಾರತಕ್ಕೆ ತರುವುದು ಮುಖ್ಯವಾಗಿದೆ. ಆಗ ಮಾತ್ರ ಭಾರತದಲ್ಲಿ ಹೊಸ ಇನ್ಕ್ಯುಬೇಷನ್‌ ಗಳು, ಹೊಸ ಆಲೋಚನೆಗಳು ಮತ್ತು ಹೊಸ ತಂತ್ರಜ್ಞಾನಗಳು ಸೃಷ್ಟಿಯಾಗುತ್ತವೆ" ಎಂದು ಶ್ರೀ ವೈಷ್ಣವ್ ಹೇಳಿದರು. ಐ.ಐ.ಸಿ.ಟಿಯ ಮೊದಲ ಕ್ಯಾಂಪಸ್ ಅನ್ನು ಅಲ್ಪಾವಧಿಯಲ್ಲಿಯೇ ಉದ್ಘಾಟಿಸುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಸರ್ಕಾರವು ಫಿಲ್ಮ್ ಸಿಟಿಯಲ್ಲಿ ಒದಗಿಸಿದ ಭೂಮಿಯಲ್ಲಿ ನಿರ್ಮಿಸಲಾಗುವ ಮುಂದಿನ ಕ್ಯಾಂಪಸ್ ಅನ್ನು ಸೌಂದರ್ಯ ಮತ್ತು ಪ್ರಾಕೃತಿಕ ಪರಿಸರಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಐ.ಐ.ಸಿ.ಟಿಗೆ 400 ಕೋಟಿ ರೂ.ಗಳ ಬಜೆಟ್ ಅನ್ನು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು. ಐ.ಐ.ಸಿ.ಟಿಯಲ್ಲಿ ವಿ.ಎಫ್‌.ಎಕ್ಸ್, ಪೋಸ್ಟ್-ಪ್ರೊಡಕ್ಷನ್, ಎಕ್ಸ್‌ ಆರ್, ಗೇಮಿಂಗ್ ಮತ್ತು ಅನಿಮೇಷನ್‌ ನಂತಹ ಸುಧಾರಿತ ಕಾರ್ಯಕ್ರಮಗಳು ಸಂಪೂರ್ಣವಾಗಿ ಉದ್ಯಮ ಆಧಾರಿತವಾಗಿರುತ್ತವೆ ಎಂದು ಶ್ರೀ ವೈಷ್ಣವ್ ಮಾಹಿತಿ ನೀಡಿದರು. ಉದ್ಯಮ-ಶೈಕ್ಷಣಿಕ ಸಂಯೋಜನೆಯ ಮನೋಭಾವದಲ್ಲಿ, ಐ.ಐ.ಸಿ.ಟಿ ಗೂಗಲ್, ಮೆಟಾ, ಎನ್‌ವಿಡಿಯಾ, ಮೈಕ್ರೋಸಾಫ್ಟ್, ಆಪಲ್, ಅಡೋಬ್ ಮತ್ತು ಡಬ್ಲ್ಯೂ.ಪಿ.ಪಿಯಂತಹ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಔಪಚಾರಿಕಗೊಳಿಸಿದೆ ಎಂದು ಅವರು ಹೇಳಿದರು. ಮೊದಲ ತಂಡದಲ್ಲಿ 300 ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಮತ್ತು ಎ.ವಿ.ಜಿ.ಸಿ- ಎಕ್ಸ್‌ ಆರ್‌ ಕ್ಷೇತ್ರಗಳ ವೃತ್ತಿಪರರು ಮತ್ತು ತರಬೇತುದಾರರಿಗೆ ಸುಧಾರಿತ ತರಬೇತಿಯನ್ನು ನೀಡುವುದು ಗುರಿಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ಐ.ಎಫ್‌.ಎಫ್‌.ಐ ಉತ್ಸವ ನಿರ್ದೇಶಕ ಶ್ರೀ ಶೇಖರ್ ಕಪೂರ್ ಮತ್ತು ಖ್ಯಾತ ಗೀತರಚನೆಕಾರ ಮತ್ತು ಸಿ.ಬಿ.ಎಫ್‌.ಸಿ ಅಧ್ಯಕ್ಷ ಶ್ರೀ ಪ್ರಸೂನ್ ಜೋಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿʼ(..ಸಿ.ಟಿ) ಕುರಿತು

ಭಾರತದ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಮತ್ತು ಸೃಜನಶೀಲ ಆರ್ಥಿಕತೆಯು ಕ್ರಾಂತಿಕಾರಿ ಬದಲಾವಣೆಗೆ ಸಜ್ಜಾಗಿದೆ, ಏಕೆಂದರೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ (ಐ.ಐ.ಸಿ.ಟಿ) ಈ ಆಗಸ್ಟ್‌ನಲ್ಲಿ ತನ್ನ ಮೊದಲ ತಂಡದ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಪ್ರಾರಂಭಿಸುತ್ತದೆ. ಸಂಸ್ಥೆಯು ಎ.ವಿ.ಜಿ.ಸಿ-ಎಕ್ಸ್‌.ಆರ್‌ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ) ಜಾಗದಲ್ಲಿ ಉದ್ಯಮ-ಚಾಲಿತ ಕೋರ್ಸ್‌ ಗಳ ಬಲವಾದ ಪೋರ್ಟ್‌ಫೋಲಿಯೊವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ click here.

..ಸಿ.ಟಿ-ಎನ್‌.ಎಫ್‌.ಡಿ.ಸಿ ಕ್ಯಾಂಪಸ್ ಒಂದು ತರಗತಿ ಕೊಠಡಿ

ಭಾರತ್ ಪೆವಿಲಿಯನ್ ಬಗ್ಗೆ

ಭಾರತದ ಕಾಲಾತೀತ ಕಥೆ ಹೇಳುವ ಪರಂಪರೆ ಮತ್ತು ಜಾಗತಿಕ ಕಂಟೆಂಟ್ ಸೃಷ್ಟಿಯ ಭವಿಷ್ಯದತ್ತ ಅದರ ಕ್ರಿಯಾತ್ಮಕ ಜಿಗಿತದಲ್ಲಿ, ಭಾರತ್ ಪೆವಿಲಿಯನ್ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌‌ ನಲ್ಲಿ ನಡೆದ ವಿಶ್ವ ಶ್ರವ್ಯ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) 2025 ರ ಕೇಂದ್ರಬಿಂದುವಾಗಿ ಹೊರಹೊಮ್ಮಿತು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಉದ್ಘಾಟಿಸಿದ ಈ ಪೆವಿಲಿಯನ್, ಭಾರತದ ಸಾಂಸ್ಕೃತಿಕ ಆತ್ಮ ಮತ್ತು ಕಲೆಯಿಂದ ಕೋಡ್‌ ವರೆಗಿನ ಡಿಜಿಟಲ್ ರೂಪಾಂತರಕ್ಕೆ ಗೌರವ ಸಂಕೇತವಾಗಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪರಿಕಲ್ಪನೆ ಮತ್ತು ನೇತೃತ್ವದಲ್ಲಿ, ಭಾರತ್ ಪೆವಿಲಿಯನ್ ಕ್ರಿಯೇಟಿವ್ ಸೂಪರ್ ಪವರ್ ಆಗಬೇಕೆಂಬ ದೇಶದ ಮಹಾತ್ವಾಕಾಂಕ್ಷೆಯನ್ನು ಪ್ರತಿನಿಧಿಸುತ್ತದೆ. ವಿವಿಧ ವಿಷಯಾಧಾರಿತ ಕ್ಷೇತ್ರಗಳಲ್ಲಿ ಆಯೋಜಿಸಲಾದ ಪ್ರದರ್ಶನಗಳು ತಲ್ಲೀನಗೊಳಿಸುವ ಅನುಭವವನ್ನು ನೀಡುವುದಲ್ಲದೆ, ವಿಷಯ, ಸೃಜನಶೀಲತೆ ಮತ್ತು ಸಂಸ್ಕೃತಿಯಿಂದ ನಡೆಸಲ್ಪಡುವ ಕಿತ್ತಳೆ ಆರ್ಥಿಕತೆಯನ್ನು ಉತ್ತೇಜಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಹೆಚ್ಚಿನ ಮಾಹಿತಿಗಾಗಿ click here.

ಎನ್‌.ಎಂ.ಐ.ಸಿ –ಎನ್‌.ಎಫ್‌.ಡಿ.ಸಿ ಯ ಗುಲ್ಶನ್ ಮಹಲ್ ನಲ್ಲಿರುವ ಇಂಡಿಯಾ ಪೆವಿಲಿಯನ್

ವೇವ್ಸ್ 2025 ಫಲಿತಾಂಶ ವರದಿಗಳು‌

ನಾವೀನ್ಯತೆ, ಅಳವಡಿಕೆ ಮತ್ತು ಜಾಗತಿಕ ತೊಡಗಿಸಿಕೊಳ್ಳುವಿಕೆಯ ಮೇಲೆ ಕೇಂದ್ರೀಕರಿಸಿ, ವೇವ್ಸ್‌ ಪರಿಸರ ವ್ಯವಸ್ಥೆಗೆ ಅವಿಭಾಜ್ಯವಾದ ಹಲವಾರು ವರದಿಗಳು ಮತ್ತು ಉಪಕ್ರಮಗಳನ್ನು ಔಪಚಾರಿಕವಾಗಿ ಅನಾವರಣಗೊಳಿಸಲಾಯಿತು, ಅವುಗಳೆಂದರೆ:

i. ವೇವ್ಸ್ ಫಲಿತಾಂಶ ವರದಿ

ii. ಕಾನ್ಫರೆನ್ಸ್ ಟ್ರ್ಯಾಕ್ ಕುರಿತ ವರದಿ

iii. ಜಾಗತಿಕ ಮಾಧ್ಯಮ ಸಂವಾದ: ಕಾಫಿ ಟೇಬಲ್ ಪುಸ್ತಕ

iv. ಕ್ರಿಯೇಟೋಸ್ಫಿಯರ್ ವರದಿ

v. ವೇವ್‌ಎಕ್ಸ್‌ ವರದಿ

vi. ವೇವ್ಸ್ ಬಜಾರ್ ವರದಿ

ಈ ಪ್ರಕಟಣೆಗಳು ಚಲನಚಿತ್ರ, ದೂರದರ್ಶನ, ಅನಿಮೇಷನ್, ಗೇಮಿಂಗ್, ಮಾಧ್ಯಮ, ನೇರಪ್ರಸಾರ ಕಾರ್ಯಕ್ರಮಗಳು, ಸಂಗೀತ ಮತ್ತು ಡಿಜಿಟಲ್ ವಿಷಯವನ್ನು ಒಳಗೊಂಡ ಭಾರತದ ಮಾಧ್ಯಮ ಮತ್ತು ಮನರಂಜನಾ ವಲಯದ ಅಸಾಧಾರಣ ಚೈತನ್ಯ ಮತ್ತು ವೈವಿಧ್ಯತೆಯನ್ನು ಎತ್ತಿ ತೋರಿಸುತ್ತವೆ. ವಿವರಗಳಿಗಾಗಿ click here.

 

*****


(Release ID: 2145955)