ಪ್ರಧಾನ ಮಂತ್ರಿಯವರ ಕಛೇರಿ
ಘಾನಾ ಗಣರಾಜ್ಯದ ಸಂಸತ್ತನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಪಠ್ಯ
Posted On:
03 JUL 2025 5:23PM by PIB Bengaluru
ಗೌರವಾನ್ವಿತ ಸ್ಪೀಕರ್ ಅವರೇ,
ಸದನದ ನಾಯಕರೇ,
ಮಾನ್ಯ ಸಂಸತ್ ಸದಸ್ಯರೇ,
ರಾಷ್ಟ್ರ ಮಂಡಳಿಯ ಸದಸ್ಯರೇ,
ರಾಜತಾಂತ್ರಿಕ ದಳದ ಸದಸ್ಯರೇ,
ರಾಜಕೀಯ ಪಕ್ಷಗಳ ಪ್ರತಿನಿಧಿಗಳೇ,
ಗಾ ಮಾನ್ ಟಾಸ್ಸೆ,
ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳೇ,
ನಾಗರಿಕ ಸಮಾಜ ಸಂಘಟನೆಗಳೇ,
ಘಾನಾದಲ್ಲಿರುವ ಭಾರತೀಯ ಸಮುದಾಯದವರೇ,
ಮಾಚೆ!
ಶುಭೋದಯ!
ಇಂದು ಈ ಗೌರವಾನ್ವಿತ ಸದನವನ್ನು ಉದ್ದೇಶಿಸಿ ಮಾತನಾಡಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ.
ಪ್ರಜಾಪ್ರಭುತ್ವ, ಘನತೆ ಮತ್ತು ದೃಢತೆಯ ಚೈತನ್ಯವನ್ನು ಹೊರಸೂಸುವ ಘಾನಾದಲ್ಲಿ ಇರುವುದು ಒಂದು ಸೌಭಾಗ್ಯ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರತಿನಿಧಿಯಾಗಿ, ನಾನು 140 ಕೋಟಿ ಭಾರತೀಯರ ಸದ್ಭಾವನೆ ಮತ್ತು ಶುಭಾಶಯಗಳನ್ನು ನನ್ನೊಂದಿಗೆ ತಂದಿದ್ದೇನೆ.
ಘಾನಾವನ್ನು ಚಿನ್ನದ ನಾಡು ಎಂದು ಕರೆಯಲಾಗುತ್ತದೆ, ನಿಮ್ಮ ಮಣ್ಣಿನಡಿ ಇರುವ ವಸ್ತುವಿಗೆ ಮಾತ್ರವಲ್ಲ, ನಿಮ್ಮ ಹೃದಯದಲ್ಲಿನ ಆತ್ಮೀಯತೆ ಮತ್ತು ಶಕ್ತಿಗೂ ಸಹ ಇದು ಅನ್ವಯಿಸುತ್ತದೆ. ನಾವು ಘಾನಾವನ್ನು ನೋಡಿದಾಗ, ಇತಿಹಾಸವನ್ನು ಮೀರಿ ಧೈರ್ಯದಿಂದ ಹೊಳೆಯುವ ರಾಷ್ಟ್ರವನ್ನು ನಾವು ಕಾಣುತ್ತೇವೆ, ಅದು ಪ್ರತಿಯೊಂದು ಸವಾಲನ್ನು ಘನತೆ ಮತ್ತು ಅನುಗ್ರಹದಿಂದ ಎದುರಿಸುತ್ತದೆ. ಪ್ರಜಾಪ್ರಭುತ್ವದ ಆದರ್ಶಗಳು ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿಗೆ ನಿಮ್ಮ ಬದ್ಧತೆಯು ಘಾನಾವನ್ನು ನಿಜವಾಗಿಯೂ ಇಡೀ ಆಫ್ರಿಕನ್ ಖಂಡಕ್ಕೆ ಸ್ಫೂರ್ತಿಯ ದಾರಿದೀಪವನ್ನಾಗಿ ಮಾಡಿದೆ.
ಸ್ನೇಹಿತರೇ,
ನಿನ್ನೆ ಸಂಜೆ ತುಂಬಾ ಹೃದಯಸ್ಪರ್ಶಿ ಅನುಭವವಾಗಿತ್ತು. ನನ್ನ ಆತ್ಮೀಯ ಸ್ನೇಹಿತರಾದ ಅಧ್ಯಕ್ಷ ಮಹಾಮ ಅವರಿಂದ ನಿಮ್ಮ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುವುದು ಒಂದು ಗೌರವವಾಗಿದೆ. ನಾನು ಅದನ್ನು ಯಾವಾಗಲೂ ಆನಂದಿಸುತ್ತೇನೆ.
ಈ ಗೌರವಕ್ಕಾಗಿ ಘಾನಾದ ಜನರಿಗೆ 140 ಕೋಟಿ ಭಾರತೀಯರ ಪರವಾಗಿ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಭಾರತ ಮತ್ತು ಘಾನಾವನ್ನು ಬೆಸೆಯುವ ಶಾಶ್ವತ ಸ್ನೇಹ ಮತ್ತು ಸಮಾನ ಮೌಲ್ಯಗಳಿಗೆ ನಾನು ಈ ಗೌರವವನ್ನು ಅರ್ಪಿಸುತ್ತೇನೆ.
ಗೌರವಾನ್ವಿತ ಸದಸ್ಯರೇ,
ಇಂದು, ಮುತ್ಸದ್ಧಿ ರಾಜಕಾರಣಿ ಮತ್ತು ಘಾನಾದ ಪ್ರೀತಿಯ ಪುತ್ರ ಡಾ. ಕ್ವಾಮೆ ನ್ಕ್ರುಮಾ ಅವರಿಗೆ ಗೌರವ ಸಲ್ಲಿಸುವ ಭಾಗ್ಯ ನನಗೆ ದೊರೆಯುತು.
"ನಮ್ಮನ್ನು ಒಂದುಗೂಡಿಸುವ ಶಕ್ತಿಗಳು ಆಂತರಿಕವಾಗಿರುತ್ತವೆ ಮತ್ತು ನಮ್ಮನ್ನು ದೂರವಿಡುವ ಅತಿರೇಕದ ಪ್ರಭಾವಗಳಿಗಿಂತ ದೊಡ್ಡದಾಗಿರುತ್ತವೆ." ಎಂದು ಅವರು ಒಮ್ಮೆ ಹೇಳಿದ್ದರು.
ಅವರ ಮಾತುಗಳು ನಮ್ಮ ಸಹಯಾನಕ್ಕೆ ಮಾರ್ಗದರ್ಶನ ನೀಡುತ್ತಿವೆ. ಬಲವಾದ ಸಂಸ್ಥೆಗಳನ್ನು ಆಧರಿಸಿದ ಪ್ರಜಾಪ್ರಭುತ್ವ ಗಣರಾಜ್ಯ ಅವರ ಕನಸಾಗಿತ್ತು. ನಿಜವಾದ ಪ್ರಜಾಪ್ರಭುತ್ವವು ಚರ್ಚೆ ಮತ್ತು ಸಂವಾದವನ್ನು ಉತ್ತೇಜಿಸುತ್ತದೆ. ಇದು ಜನರನ್ನು ಒಂದುಗೂಡಿಸುತ್ತದೆ. ಇದು ಘನತೆಯನ್ನು ಬೆಂಬಲಿಸುತ್ತದೆ ಮತ್ತು ಮಾನವ ಹಕ್ಕುಗಳನ್ನು ಪ್ರೋತ್ಸಾಹಿಸುತ್ತದೆ. ಪ್ರಜಾಪ್ರಭುತ್ವ ಮೌಲ್ಯಗಳು ಅಭಿವೃದ್ಧಿಗೊಳ್ಳಲು ಸಮಯ ತೆಗೆದುಕೊಳ್ಳಬಹುದು. ಆದರೆ ಅವುಗಳನ್ನು ಸಂರಕ್ಷಿಸುವುದು ಮತ್ತು ಪೋಷಿಸುವುದು ನಮ್ಮ ಜವಾಬ್ದಾರಿಯಾಗಿದೆ.
ಸ್ನೇಹಿತರೇ,
ಭಾರತ ಪ್ರಜಾಪ್ರಭುತ್ವದ ತಾಯಿ.
ನಮಗೆ ಪ್ರಜಾಪ್ರಭುತ್ವ ಒಂದು ವ್ಯವಸ್ಥೆಯಲ್ಲ, ಅದೊಂದು ಸಂಸ್ಕೃತಿ.
ಸಾವಿರಾರು ವರ್ಷಗಳಿಂದ, ಪ್ರಜಾಪ್ರಭುತ್ವವು ಭಾರತೀಯ ಸಮಾಜಕ್ಕೆ ನಿರಂತರ ಆವೇಗವನ್ನು ನೀಡಿದೆ.
ನಮಗೆ, ಪ್ರಜಾಪ್ರಭುತ್ವವು ಕೇವಲ ಒಂದು ವ್ಯವಸ್ಥೆಯಲ್ಲ. ಅದು ನಮ್ಮ ಮೂಲಭೂತ ಮೌಲ್ಯಗಳ ಭಾಗವಾಗಿದೆ. ಸಾವಿರಾರು ವರ್ಷಗಳ ಹಿಂದಿನಿಂದ, ವೈಶಾಲಿಯಂತಹ ಕೇಂದ್ರಗಳ ಉದಾಹರಣೆಗಳು ನಮ್ಮಲ್ಲಿವೆ. ವಿಶ್ವದ ಅತ್ಯಂತ ಹಳೆಯ ಗ್ರಂಥಗಳಲ್ಲಿ ಒಂದಾದ ಋಗ್ವೇದವು ಹೀಗೆ ಹೇಳುತ್ತದೆ:
आनो भद्राः क्रतवो यन्तु विश्वतः
ಅಂದರೆ, ನಮಗೆ ಎಲ್ಲಾ ದಿಕ್ಕುಗಳಿಂದಲೂ ಒಳ್ಳೆಯ ಆಲೋಚನೆಗಳು ಬರಲಿ.
ಈ ಮುಕ್ತ ಚಿಂತನೆಗಳೇ ಪ್ರಜಾಪ್ರಭುತ್ವದ ಮೂಲ ತತ್ವ. ಭಾರತದಲ್ಲಿ 2500 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳಿವೆ. ನಾನು ಮತ್ತೊಮ್ಮೆ ಹೇಳುತ್ತೇನೆ, 2500 ರಾಜಕೀಯ ಪಕ್ಷಗಳು. ಇಪ್ಪತ್ತು ವಿಭಿನ್ನ ಪಕ್ಷಗಳು ವಿವಿಧ ರಾಜ್ಯಗಳನ್ನು ಆಳುತ್ತವೆ, 22 ಅಧಿಕೃತ ಭಾಷೆಗಳಿವೆ, ಸಾವಿರಾರು ಉಪಭಾಷೆಗಳಿವೆ.
ಇದೇ ಕಾರಣಕ್ಕೆ ಭಾರತಕ್ಕೆ ಭೇಟಿ ನೀಡುವ ಜನರನ್ನು ಯಾವಾಗಲೂ ಮುಕ್ತ ಹೃದಯದಿಂದ ಸ್ವಾಗತಿಸಲಾಗುತ್ತದೆ. ಈ ಭಾವನೆ ಭಾರತೀಯರು ಎಲ್ಲಿಗೆ ಹೋದರೂ ಸುಲಭವಾಗಿ ಬೆರೆಯಲು ಸಹಾಯ ಮಾಡುತ್ತದೆ. ಘಾನಾದಲ್ಲಿಯೂ ಸಹ, ಅವರು ಚಹಾದಲ್ಲಿ ಸಕ್ಕರೆಯಂತೆ ಸಮಾಜದಲ್ಲಿ ಬೆರೆತಿದ್ದಾರೆ.
ಮಾನ್ಯ ಸದಸ್ಯರೇ,
ಭಾರತ ಮತ್ತು ಘಾನಾದ ಇತಿಹಾಸವು ವಸಾಹತುಶಾಹಿ ಆಳ್ವಿಕೆಯ ಗುರುತುಗಳನ್ನು ಹೊಂದಿದೆ. ಆದರೆ ನಮ್ಮ ಚೈತನ್ಯವು ಯಾವಾಗಲೂ ಮುಕ್ತ ಮತ್ತು ನಿರ್ಭೀತವಾಗಿದೆ. ನಮ್ಮ ಶ್ರೀಮಂತ ಪರಂಪರೆಯಿಂದ ನಾವು ಶಕ್ತಿ ಮತ್ತು ಸ್ಫೂರ್ತಿಯನ್ನು ಪಡೆಯುತ್ತೇವೆ. ನಮ್ಮ ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯ ಬಗ್ಗೆ ನಮಗೆ ಹೆಮ್ಮೆ ಇದೆ.
ನಾವು ಸ್ವಾತಂತ್ರ್ಯ, ಏಕತೆ ಮತ್ತು ಘನತೆಯ ಆಧಾರದ ಮೇಲೆ ರಾಷ್ಟ್ರಗಳನ್ನು ನಿರ್ಮಿಸಿದ್ದೇವೆ. ನಮ್ಮ ಸಂಬಂಧಗಳಿಗೆ ಯಾವುದೇ ಮಿತಿಯಿಲ್ಲ ಮತ್ತು ನಿಮ್ಮ ಅನುಮತಿಯೊಂದಿಗೆ, ನಮ್ಮ ಸ್ನೇಹವು ನಿಮ್ಮ ಪ್ರಸಿದ್ಧ 'ಶುಗರ್ ಲೋಫ್' ಅನಾನಸ್ ಗಿಂತ ಸಿಹಿಯಾಗಿದೆ ಎಂದು ನಾನು ಹೇಳಬಲ್ಲೆ. ಅಧ್ಯಕ್ಷ ಮಹಾಮಾ ಅವರೊಂದಿಗೆ, ನಾವು ನಮ್ಮ ಸಂಬಂಧವನ್ನು ಸಮಗ್ರ ಪಾಲುದಾರಿಕೆಗೆ ಹೆಚ್ಚಿಸಲು ನಿರ್ಧರಿಸಿದ್ದೇವೆ.
ಸ್ನೇಹಿತರೇ,
ಎರಡನೇ ಮಹಾಯುದ್ಧದ ನಂತರ ಸೃಷ್ಟಿಯಾದ ವಿಶ್ವ ಕ್ರಮಾಂಕವು ವೇಗವಾಗಿ ಬದಲಾಗುತ್ತಿದೆ. ತಂತ್ರಜ್ಞಾನದಲ್ಲಿನ ಕ್ರಾಂತಿಗಳು, ಜಾಗತಿಕ ದಕ್ಷಿಣದ ಉದಯ ಮತ್ತು ಬದಲಾಗುತ್ತಿರುವ ಜನಸಂಖ್ಯೆ ಅದರ ವೇಗ ಮತ್ತು ಪ್ರಮಾಣಕ್ಕೆ ಕೊಡುಗೆ ನೀಡುತ್ತಿದೆ. ಹಿಂದಿನ ಶತಮಾನಗಳಲ್ಲಿ ಮಾನವೀಯತೆ ಎದುರಿಸಿದ ವಸಾಹತುಶಾಹಿ ಆಳ್ವಿಕೆಯಂತಹ ಸವಾಲುಗಳು ಇನ್ನೂ ವಿಭಿನ್ನ ರೂಪಗಳಲ್ಲಿ ಮುಂದುವರೆದಿವೆ.
ಹವಾಮಾನ ಬದಲಾವಣೆ, ಸಾಂಕ್ರಾಮಿಕ ರೋಗಗಳು, ಭಯೋತ್ಪಾದನೆ ಮತ್ತು ಸೈಬರ್ ಭದ್ರತೆಯಂತಹ ಹೊಸ ಮತ್ತು ಸಂಕೀರ್ಣ ಬಿಕ್ಕಟ್ಟುಗಳನ್ನು ಜಗತ್ತು ಎದುರಿಸುತ್ತಿದೆ. ಕಳೆದ ಶತಮಾನದಲ್ಲಿ ರಚಿಸಲಾದ ಸಂಸ್ಥೆಗಳು ಪ್ರತಿಕ್ರಿಯಿಸಲು ಹೆಣಗಾಡುತ್ತಿವೆ. ಬದಲಾಗುತ್ತಿರುವ ಸನ್ನಿವೇಶಗಳು ಜಾಗತಿಕ ಆಡಳಿತದಲ್ಲಿ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಸುಧಾರಣೆಗಳನ್ನು ಬಯಸುತ್ತವೆ.
ಜಾಗತಿಕ ದಕ್ಷಿಣ ದೇಶಗಳಿಗೆ ಧ್ವನಿ ನೀಡದೆ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ನಮಗೆ ಘೋಷಣೆಗಳಿಗಿಂತ ಹೆಚ್ಚಿನದು ಬೇಕು. ನಮಗೆ ಕ್ರಿಯೆ ಬೇಕು. ಅದಕ್ಕಾಗಿಯೇ, ಭಾರತದ ಜಿ 20 ಅಧ್ಯಕ್ಷತೆಯ ಅವಧಿಯಲ್ಲಿ, ನಾವು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ದೃಷ್ಟಿಕೋನದೊಂದಿಗೆ ಕೆಲಸ ಮಾಡಿದ್ದೇವೆ.
ಜಾಗತಿಕ ವೇದಿಕೆಯಲ್ಲಿ ಆಫ್ರಿಕಾಕ್ಕೆ ಸೂಕ್ತ ಸ್ಥಾನವನ್ನು ನಾವು ಒತ್ತಾಯಿಸುತ್ತೇವೆ. ನಮ್ಮ ಅಧ್ಯಕ್ಷತೆಯಲ್ಲಿ ಆಫ್ರಿಕನ್ ಒಕ್ಕೂಟವು ಜಿ20 ಖಾಯಂ ಸದಸ್ಯತ್ವ ಪಡೆದಿದೆ ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ.
ಸ್ನೇಹಿತರೇ,
ಭಾರತದ ತತ್ವವೆಂದರೆ – ಮಾನವೀಯತೆ ಮೊದಲು.
ನಾವು ಇದನ್ನು ನಂಬುತ್ತೇವೆ:
सर्वे भवन्तु सुखिनः
सर्वे सन्तु निरामयाः।
सर्वे भद्राणि पश्यन्तु,
मा किश्चत दुःखभाग्भवेत्॥
ಇದರ ಅರ್ಥ,
"ಎಲ್ಲರೂ ಸಂತೋಷವಾಗಿರಲಿ,
ಎಲ್ಲರೂ ಆರೋಗ್ಯದಿಂದಿರಲಿ,
ಎಲ್ಲರೂ ಶುಭವಾದದ್ದನ್ನು ನೋಡಲಿ,
ಯಾರೂ ದುಃಖದಿಂದ ಬಳಲದಿರಲಿ."
ಈ ತತ್ವವು ಭಾರತದ ವಿಶ್ವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಇದು ನಮ್ಮ ಕ್ರಮಗಳಿಗೆ ಮಾರ್ಗದರ್ಶನ ನೀಡಿತು. ಘಾನಾದ ನಮ್ಮ ಸ್ನೇಹಿತರು ಸೇರಿದಂತೆ 150 ಕ್ಕೂ ಹೆಚ್ಚು ದೇಶಗಳೊಂದಿಗೆ ನಾವು ಲಸಿಕೆಗಳು ಮತ್ತು ಔಷಧಿಗಳನ್ನು ಹಂಚಿಕೊಂಡಿದ್ದೇವೆ.
ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಸುಸ್ಥಿರ ಜೀವನವನ್ನು ಉತ್ತೇಜಿಸಲು ನಾವು ಮಿಷನ್ ಲೈಫ್ - ಲೈಫ್ ಸ್ಟೈಲ್ ಫಾರ್ ದಿ ಎನ್ವಿರಾನ್‌ಮೆಂಟ್ ಅನ್ನು ಪ್ರಾರಂಭಿಸಿದ್ದೇವೆ. ಈ ಅಂತರ್ಗತ ಮನೋಭಾವವು ನಮ್ಮ ಜಾಗತಿಕ ಉಪಕ್ರಮಗಳಿಗೆ ಶಕ್ತಿ ನೀಡುತ್ತದೆ, ಉದಾಹರಣೆಗೆ:
ಒಂದು ಜಗತ್ತು, ಒಂದು ಸೂರ್ಯ, ಒಂದು ಗ್ರಿಡ್;
ಒಂದು ಜಗತ್ತು ಒಂದು ಆರೋಗ್ಯ; ಆರೋಗ್ಯಕರ ಗ್ರಹಕ್ಕಾಗಿ;
ಅಂತರರಾಷ್ಟ್ರೀಯ ಸೌರ ಒಕ್ಕೂಟ; ಸೌರಶಕ್ತಿ ಮತ್ತು ಸುಸ್ಥಿರತೆಯನ್ನು ಉತ್ತೇಜಿಸಲು;
ಅಂತರರಾಷ್ಟ್ರೀಯ ಬಿಗ್ ಕ್ಯಾಟ್ಸ್ ಒಕ್ಕೂಟ; ವನ್ಯಜೀವಿಗಳನ್ನು ಸಂರಕ್ಷಿಸಲು;
ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟ; ಶುದ್ಧ ಜೈವಿಕ ಇಂಧನಗಳನ್ನು ಉತ್ತೇಜಿಸಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿತಗೊಳಿಸಲು.
ಸ್ಥಾಪಕ ಸದಸ್ಯ ರಾಷ್ಟ್ರವಾಗಿ ಘಾನಾ ಈ ಸೆಪ್ಟೆಂಬರ್ ನಲ್ಲಿ ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕಾಗಿ ಆಫ್ರಿಕನ್ ಪ್ರಾದೇಶಿಕ ಸಭೆಯನ್ನು ಆಯೋಜಿಸುತ್ತಿರುವುದು ನನಗೆ ಸಂತೋಷ ತಂದಿದೆ. ಇದು ಜಗತ್ತು ಒಂದು ಕುಟುಂಬ ಎಂಬ ನಮ್ಮ ಹಂಚಿಕೆಯ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.
ಗೌರವಾನ್ವಿತ ಸದಸ್ಯರೇ,
ಕಳೆದ ದಶಕದಲ್ಲಿ, ಭಾರತವು ಒಂದು ಪ್ರಮುಖ ಪರಿವರ್ತನೆಯನ್ನು ಕಂಡಿದೆ. ಭಾರತದ ಜನರು ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಯಲ್ಲಿ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ, ಅವರು ಸತತ ಮೂರನೇ ಬಾರಿಗೆ ಅದೇ ಸರ್ಕಾರವನ್ನು ಮತ್ತೆ ಆಯ್ಕೆ ಮಾಡಿದರು. ಆರು ದಶಕಗಳಿಗೂ ಹೆಚ್ಚು ಸಮಯದ ನಂತರ ಅದು ಸಂಭವಿಸಿತು.
ಇಂದು, ಭಾರತವು ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ಆರ್ಥಿಕತೆಯಾಗಿದೆ. ಸ್ಥಿರ ರಾಜಕೀಯ ಮತ್ತು ಉತ್ತಮ ಆಡಳಿತದ ಅಡಿಪಾಯದ ಮೇಲೆ, ಭಾರತವು ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ.
ಜಾಗತಿಕ ಬೆಳವಣಿಗೆಗೆ ನಾವು ಈಗಾಗಲೇ ಸುಮಾರು ಶೇ.16 ರಷ್ಟು ಕೊಡುಗೆ ನೀಡುತ್ತಿದ್ದೇವೆ. ನಮ್ಮ ಜನಸಂಖ್ಯೆಯು ಅದರ ಪ್ರಯೋಜನವನ್ನು ಪಡೆಯುತ್ತಿದೆ. ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪೂರಕ ವ್ಯವಸ್ಥೆಯನ್ನು ಹೊಂದಿದೆ. ಭಾರತವು ನಾವೀನ್ಯತೆ ಮತ್ತು ತಂತ್ರಜ್ಞಾನ ಕೇಂದ್ರವಾಗಿದ್ದು, ಅಲ್ಲಿ ಜಾಗತಿಕ ಕಂಪನಿಗಳು ಸಮ್ಮಿಲನಗೊಳ್ಳಲು ಬಯಸುತ್ತವೆ.
ನಮ್ಮನ್ನು ವಿಶ್ವದ ಔಷಧಾಲಯ ಎಂದು ಗುರುತಿಸಲಾಗಿದೆ. ಇಂದು ಭಾರತೀಯ ಮಹಿಳೆಯರು ವಿಜ್ಞಾನ, ಬಾಹ್ಯಾಕಾಶ, ವಾಯುಯಾನ ಮತ್ತು ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಭಾರತ ಚಂದ್ರನ ಮೇಲೆ ಇಳಿದಿದೆ ಮತ್ತು ಇಂದು ಒಬ್ಬ ಭಾರತೀಯ ನಮ್ಮ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಗೆ ರೆಕ್ಕೆಗಳನ್ನು ನೀಡುವ ಕಕ್ಷೆಯಲ್ಲಿದ್ದಾರೆ.
ಭಾರತದ ಹಲವು ಹೆಮ್ಮೆಯ ಕ್ಷಣಗಳೊಂದಿಗೆ ಆಫ್ರಿಕಾ ಸಂಬಂಧ ಹೊಂದಿದೆ ಎಂಬುದು ಎಂತಹ ಕಾಕತಾಳೀಯ. ಭಾರತದ ಚಂದ್ರಯಾನ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಆ ದಿನ ನಾನು ಆಫ್ರಿಕಾದಲ್ಲಿದ್ದೆ. ಮತ್ತು ಇಂದು, ಭಾರತೀಯ ಗಗನಯಾತ್ರಿಯೊಬ್ಬರು ಮಾನವೀಯತೆಯ ಉಜ್ವಲ ಭವಿಷ್ಯಕ್ಕಾಗಿ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಯೋಗಗಳನ್ನು ನಡೆಸುತ್ತಿರುವಾಗ, ನಾನು ಮತ್ತೊಮ್ಮೆ ಆಫ್ರಿಕಾದಲ್ಲಿದ್ದೇನೆ.
ಭಾರತದ ಹಲವು ಹೆಮ್ಮೆಯ ಕ್ಷಣಗಳೊಂದಿಗೆ ಆಫ್ರಿಕಾ ಸಂಪರ್ಕ ಹೊಂದಿದೆ. ಭಾರತದ ಚಂದ್ರಯಾನ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಾಗ, ನಾನು ಆಫ್ರಿಕಾದಲ್ಲಿದ್ದೆ. ಮತ್ತು ಇಂದು, ಭಾರತೀಯ ಗಗನಯಾತ್ರಿಯೊಬ್ಬರು ಮನುಕುಲದ ಕಲ್ಯಾಣಕ್ಕಾಗಿ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಯೋಗಗಳನ್ನು ನಡೆಸುತ್ತಿರುವಾಗ - ನಾನು ಮತ್ತೊಮ್ಮೆ ಆಫ್ರಿಕಾದಲ್ಲಿದ್ದೇನೆ.
ಇದು ಕೇವಲ ಕಾಕತಾಳೀಯವಲ್ಲ. ಇದು ನಮ್ಮ ನಡುವಿನ ಗಾಢವಾದ ಬಂಧ, ನಮ್ಮ ಸಾಮಾನ್ಯ ಆಕಾಂಕ್ಷೆಗಳು ಮತ್ತು ನಮ್ಮ ಹಂಚಿಕೆಯ ಭವಿಷ್ಯವನ್ನು ಪ್ರತಿಬಿಂಬಿಸುತ್ತದೆ. ನಮ್ಮ ಅಭಿವೃದ್ಧಿ ಎಲ್ಲರನ್ನೂ ಒಳಗೊಳ್ಳುತ್ತದೆ. ನಮ್ಮ ಬೆಳವಣಿಗೆ ಪ್ರತಿಯೊಬ್ಬ ಭಾರತೀಯನ ಜೀವನವನ್ನು ತಲುಪುತ್ತದೆ.
2047ರ ವೇಳೆಗೆ ನಾವು ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಭಾರತದ ಜನರು ಸಂಕಲ್ಪ ಮಾಡಿದ್ದಾರೆ. ಘಾನಾ ಪ್ರಗತಿ ಮತ್ತು ಸಮೃದ್ಧಿಯ ಹಾದಿಯಲ್ಲಿ ಮುಂದುವರಿಯುತ್ತಿದ್ದಂತೆ, ಭಾರತವು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಈ ಹಾದಿಯಲ್ಲಿ ನಡೆಯುತ್ತದೆ.
ಸ್ನೇಹಿತರೇ,
ಜಾಗತಿಕ ಅನಿಶ್ಚಿತತೆಯ ಈ ಕಾಲದಲ್ಲಿ, ಭಾರತದ ಪ್ರಜಾಪ್ರಭುತ್ವ ಸ್ಥಿರತೆಯು ಭರವಸೆಯ ಕಿರಣವಾಗಿದೆ. ಭಾರತದ ತ್ವರಿತ ಪ್ರಗತಿಯು ಜಾಗತಿಕ ಬೆಳವಣಿಗೆಗೆ ವೇಗವರ್ಧಕವಾಗಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ, ಭಾರತವು ಜಗತ್ತಿಗೆ ಶಕ್ತಿಯ ಆಧಾರಸ್ತಂಭವಾಗಿದೆ. ಬಲಿಷ್ಠ ಭಾರತವು ಹೆಚ್ಚು ಸ್ಥಿರ ಮತ್ತು ಸಮೃದ್ಧ ಜಗತ್ತಿಗೆ ಕೊಡುಗೆ ನೀಡುತ್ತದೆ. ಅಷ್ಟಕ್ಕೂ, ನಮ್ಮ ಮಂತ್ರವೆಂದರೆ: ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಸಬ್ಕಾ ಪ್ರಯಾಸ್. ಇದರ ಅರ್ಥ " ಎಲ್ಲರ ಜೊತೆ, ಎಲ್ಲರ ಬೆಳವಣಿಗೆ, ಎಲ್ಲರ ನಂಬಿಕೆ, ಎಲ್ಲರ ಪ್ರಯತ್ನ."
ಆಫ್ರಿಕಾದ ಅಭಿವೃದ್ಧಿ ಪ್ರಯಾಣದಲ್ಲಿ ಭಾರತವು ಬದ್ಧ ಪಾಲುದಾರನಾಗಿ ಉಳಿದಿದೆ. ಆಫ್ರಿಕಾದ ಜನರಿಗೆ ಉಜ್ವಲ ಮತ್ತು ಸುಸ್ಥಿರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾವು ಆಫ್ರಿಕಾದ ಅಭಿವೃದ್ಧಿ ಚೌಕಟ್ಟು, ಕಾರ್ಯಸೂಚಿ 2063 ಅನ್ನು ಬೆಂಬಲಿಸುತ್ತೇವೆ.
ಆಫ್ರಿಕಾದ ಗುರಿಗಳು ನಮ್ಮ ಆದ್ಯತೆಗಳಾಗಿವೆ. ಸಮಾನ ರೀತಿಯಲ್ಲಿ ಒಟ್ಟಾಗಿ ಬೆಳೆಯುವುದು ನಮ್ಮ ವಿಧಾನವಾಗಿದೆ. ಆಫ್ರಿಕಾದೊಂದಿಗಿನ ನಮ್ಮ ಅಭಿವೃದ್ಧಿ ಪಾಲುದಾರಿಕೆ ಬೇಡಿಕೆ ಆಧಾರಿತವಾಗಿದೆ. ಇದು ಸ್ಥಳೀಯ ಸಾಮರ್ಥ್ಯಗಳನ್ನು ನಿರ್ಮಿಸುವುದು ಮತ್ತು ಸ್ಥಳೀಯ ಅವಕಾಶಗಳನ್ನು ಸೃಷ್ಟಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ನಮ್ಮ ಗುರಿ ಹೂಡಿಕೆ ಮಾಡುವುದು ಮಾತ್ರವಲ್ಲ, ಸಬಲೀಕರಣಗೊಳಿಸುವುದು. ಸ್ವಾವಲಂಬಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವುದು.
ಈ ಪಾಲುದಾರಿಕೆಗೆ ಮತ್ತಷ್ಟು ವೇಗ ನೀಡಲು ನನಗೆ ಹೆಮ್ಮೆಯಿದೆ. 2015 ರಲ್ಲಿ, ನಾವು ಭಾರತ-ಆಫ್ರಿಕಾ ಶೃಂಗಸಭೆಯನ್ನು ಆಯೋಜಿಸಿದ್ದೆವು. ಅಧ್ಯಕ್ಷ ಮಹಾಮಾ ನಮ್ಮ ಗೌರವಾನ್ವಿತ ಅತಿಥಿಗಳಲ್ಲಿ ಒಬ್ಬರಾಗಿದ್ದರು. 2017 ರಲ್ಲಿ, ಭಾರತವು ಆಫ್ರಿಕನ್ ಅಭಿವೃದ್ಧಿ ಬ್ಯಾಂಕಿನ ವಾರ್ಷಿಕ ಸಭೆಯನ್ನು ಆಯೋಜಿಸಿತ್ತು. ನಾವು ಆಫ್ರಿಕಾದಾದ್ಯಂತ 46 ದೇಶಗಳಿಗೆ ನಮ್ಮ ರಾಜತಾಂತ್ರಿಕ ಉಪಸ್ಥಿತಿಯನ್ನು ವಿಸ್ತರಿಸಿದ್ದೇವೆ.
ಖಂಡದಾದ್ಯಂತ 200 ಕ್ಕೂ ಹೆಚ್ಚು ಯೋಜನೆಗಳು ಸಂಪರ್ಕ, ಮೂಲಸೌಕರ್ಯ ಮತ್ತು ಕೈಗಾರಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಪ್ರತಿ ವರ್ಷ, ನಮ್ಮ ಭಾರತ-ಆಫ್ರಿಕಾ ವ್ಯಾಪಾರ ಸಮಾವೇಶವು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.
ಘಾನಾದಲ್ಲಿ, ನಾವು ಕಳೆದ ವರ್ಷ ತೇಮಾ - ಮಪಕಡನ್ ರೈಲು ಮಾರ್ಗವನ್ನು ಉದ್ಘಾಟಿಸಿದ್ದೇವೆ. ಇದು ಆಫ್ರಿಕನ್ ಪ್ರದೇಶದ ಈ ಭಾಗದಲ್ಲಿ ಅತಿದೊಡ್ಡ ಮೂಲಸೌಕರ್ಯ ಯೋಜನೆಯಾಗಿದೆ. ಆಫ್ರಿಕನ್ ಭೂಖಂಡದ ಮುಕ್ತ ವ್ಯಾಪಾರ ಪ್ರದೇಶದ ಅಡಿಯಲ್ಲಿ ಆರ್ಥಿಕ ಏಕೀಕರಣವನ್ನು ವೇಗಗೊಳಿಸುವ ಘಾನಾದ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ.
ಘಾನಾ ಈ ಪ್ರದೇಶದಲ್ಲಿ ಐಟಿ ಮತ್ತು ನಾವೀನ್ಯತೆ ಕೇಂದ್ರವಾಗುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಒಟ್ಟಾಗಿ, ನಾವು ಭರವಸೆ ಮತ್ತು ಪ್ರಗತಿಯಿಂದ ತುಂಬಿದ ಭವಿಷ್ಯವನ್ನು ರೂಪಿಸುತ್ತೇವೆ.
ಗೌರವಾನ್ವಿತ ಸದಸ್ಯರೇ,
ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ಯಾವುದೇ ಪ್ರಜಾಪ್ರಭುತ್ವದ ಆತ್ಮ. ನಮ್ಮ ಚುನಾವಣಾ ಆಯೋಗಗಳು ಒಟ್ಟಾಗಿ ಕೆಲಸ ಮಾಡುವುದನ್ನು ನೋಡುವುದು ಉತ್ತೇಜನಕಾರಿಯಾಗಿದೆ. ವಿಶ್ವದ ಅತಿದೊಡ್ಡ ಚುನಾವಣೆಗಳನ್ನು ಪೂರ್ಣ ವಿಶ್ವಾಸ ಮತ್ತು ಪಾರದರ್ಶಕತೆಯಿಂದ ನಡೆಸುವಲ್ಲಿನ ತನ್ನ ಅನುಭವವನ್ನು ಹಂಚಿಕೊಳ್ಳಲು ಭಾರತದ ಚುನಾವಣಾ ಆಯೋಗವು ಹೆಮ್ಮೆಪಡುತ್ತದೆ ಎಂದು ನನಗೆ ವಿಶ್ವಾಸವಿದೆ.
ನಮ್ಮ ಎರಡು ಪ್ರಜಾಪ್ರಭುತ್ವಗಳ ನಡುವಿನ ಸಂಬಂಧದ ಮೂಲಾಧಾರ ಸಂಸದೀಯ ವಿನಿಮಯಗಳು. 2023 ರಲ್ಲಿ ಅಕ್ರಾದಲ್ಲಿ ನಡೆದ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಸಭೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಇದು ಭಾರತದ ರಾಜ್ಯಗಳ ಶಾಸನ ಸಭೆಗಳು ಒಳಗೊಂಡಂತೆ ಘಾನಾಗೆ ಅತಿದೊಡ್ಡ ಭಾರತೀಯ ಸಂಸದೀಯ ನಿಯೋಗವನ್ನು ಸ್ವಾಗತಿಸಿತು. ಅಂತಹ ರೋಮಾಂಚಕ ಸಂವಾದಕ್ಕೆ ನಾವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
ನಿಮ್ಮ ಸಂಸತ್ತಿನಲ್ಲಿ ಘಾನಾ-ಭಾರತ ಸಂಸದೀಯ ಸ್ನೇಹ ಸಂಘ ಸ್ಥಾಪನೆಯನ್ನು ನಾನು ಸ್ವಾಗತಿಸುತ್ತೇನೆ. ನಮ್ಮ ಸಂಸದೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಾನು ಪ್ರಸ್ತಾಪಿಸುತ್ತೇನೆ. ಭಾರತದ ಹೊಸ ಸಂಸತ್ತಿಗೆ ಭೇಟಿ ನೀಡಲು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ. ಭಾರತೀಯ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡಲು ನಾವು ತೆಗೆದುಕೊಂಡಿರುವ ದಿಟ್ಟ ಕ್ರಮಗಳನ್ನು ನೀವು ನೋಡಲು ಸಾಧ್ಯವಾಗುತ್ತದೆ.
ಭಾರತೀಯ ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣಗಳಾದ ಚರ್ಚೆ ಮತ್ತು ಸಂವಾದಗಳನ್ನು ನೀವು ವೀಕ್ಷಿಸಬಹುದು. ನಾನು ನಿಮಗೆ ಭರವಸೆ ನೀಡುತ್ತೇನೆ, ಅವು ನಿಮ್ಮ ಪ್ರೀತಿಯ- ಬ್ಲ್ಯಾಕ್ ಸ್ಟಾರ್ ಆಟದಷ್ಟೇ ಉತ್ಸಾಹಭರಿತವಾಗಿರುತ್ತವೆ!
ಸ್ನೇಹಿತರೇ,
ಭಾರತ ಮತ್ತು ಘಾನಾ ಒಂದು ಸಾಮಾನ್ಯ ಕನಸನ್ನು ಹೊಂದಿವೆ. ಅಲ್ಲಿ ಪ್ರತಿಯೊಂದು ಮಗುವೂ ಅವಕಾಶಗಳನ್ನು ಪಡೆಯುತ್ತದೆ. ಪ್ರತಿಯೊಂದು ಧ್ವನಿಯನ್ನೂ ಆಲಿಸಲಾಗುತ್ತದೆ. ಅಲ್ಲಿ ರಾಷ್ಟ್ರಗಳು ಒಟ್ಟಾಗಿ ಬೆಳೆಯುತ್ತವೆ, ಪ್ರತ್ಯೇಕವಾಗಿ ಅಲ್ಲ.
ಡಾ. ಎನ್‌ಕ್ರುಮಾ ಅವರು ಹೇಳಿದ್ದನ್ನು ನಾನು ಇಲ್ಲಿ ಉಲ್ಲೇಖಿಸುತ್ತೇನೆ: "ನಾನು ಆಫ್ರಿಕಾದಲ್ಲಿ ಹುಟ್ಟಿದ್ದರಿಂದ ನಾನು ಆಫ್ರಿಕನ್ ಅಲ್ಲ. ಆದರೆ ಆಫ್ರಿಕಾ ನನ್ನಲ್ಲಿ ಹುಟ್ಟಿದ್ದರಿಂದ ನಾನು ಆಫ್ರಿಕನ್."
ಅದೇ ರೀತಿ, ಭಾರತವು ಆಫ್ರಿಕಾವನ್ನು ತನ್ನ ಹೃದಯದಲ್ಲಿ ಇಟ್ಟುಕೊಂಡಿದೆ. ಇಂದಿಗೆ ಮಾತ್ರವಲ್ಲ, ಮುಂದಿನ ಪೀಳಿಗೆಗಳಿಗೂ ಪಾಲುದಾರಿಕೆಯನ್ನು ನಿರ್ಮಿಸೋಣ.
ಧನ್ಯವಾದಗಳು.
ಮೇದಾ-ಮುಆಸೆ!
*****
(Release ID: 2142103)
Visitor Counter : 4
Read this release in:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam