ಸಂಸ್ಕೃತಿ ಸಚಿವಾಲಯ
ವಿಜ್ಞಾನ್ ಭವನದಲ್ಲಿ ಆಚಾರ್ಯ ಶ್ರೀ 108 ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವ ಆಚರಣೆಯನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ
Posted On:
27 JUN 2025 5:39PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 28, 2025 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಆಚಾರ್ಯ ಶ್ರೀ 108 ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವ ಆಚರಣೆಯನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮವು ಭಾರತದ ಅತ್ಯಂತ ಗೌರವಾನ್ವಿತ ಜೈನ ಆಧ್ಯಾತ್ಮಿಕ ನಾಯಕರು, ವಿದ್ವಾಂಸರು ಮತ್ತು ಸಾಮಾಜಿಕ ಸುಧಾರಕರಲ್ಲಿ ಒಬ್ಬರಾದ ಅವರ 100ನೇ ಜನ್ಮ ದಿನಾಚರಣೆಯ ಸ್ಮರಣಾರ್ಥವಾಗಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ದೆಹಲಿಯ ಭಗವಾನ್ ಮಹಾವೀರ್ ಅಹಿಂಸಾ ಭಾರತಿ ಟ್ರಸ್ಟ್ನ ಸಹಯೋಗದೊಂದಿಗೆ ಆಯೋಜಿಸಿರುವ ವರ್ಷವಿಡೀ ನಡೆಯುವ ರಾಷ್ಟ್ರೀಯ ಗೌರವ ಉತ್ಸವದ ಔಪಚಾರಿಕ ಆರಂಭವಾಗಿದೆ. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ರಾಷ್ಟ್ರಶಾಂತ್ ಪರಮಪರಾಧಾಚಾರ್ಯ ಶ್ರೀ 108 ಪ್ರಜ್ಞಾ ಸಾಗರ್ ಜಿ ಮುನಿರಾಜ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

ಶತಮಾನೋತ್ಸವವನ್ನು ಜೂನ್ 28, 2025 ರಿಂದ ಏಪ್ರಿಲ್ 22, 2026 ರವರೆಗೆ ಆಚರಿಸಲಾಗುವುದು. ಇದು ದೇಶಾದ್ಯಂತ ಸಾಂಸ್ಕೃತಿಕ, ಸಾಹಿತ್ಯಿಕ, ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಉಪಕ್ರಮಗಳ ಶ್ರೇಣಿಯೊಂದಿಗೆ ಆಚಾರ್ಯ ಶ್ರೀ 108 ವಿದ್ಯಾನಂದ ಜಿ ಮಹಾರಾಜರ ಜೀವನ ಮತ್ತು ಪರಂಪರೆಯನ್ನು ಆಚರಿಸುವ ಗುರಿಯನ್ನು ಹೊಂದಿದೆ.
ಆಚಾರ್ಯ ಶ್ರೀ 108 ವಿದ್ಯಾನಂದ ಜಿ ಮಹಾರಾಜರು ಏಪ್ರಿಲ್ 22, 1925 ರಂದು ಬೆಳಗಾವಿ (ಕರ್ನಾಟಕ) ದ ಶೇದ್ ಬಾಳ್ ನಲ್ಲಿ ಜನಿಸಿದರು. ಅವರು ಚಿಕ್ಕ ವಯಸ್ಸಿನಲ್ಲಿಯೇ ದೀಕ್ಷೆ ಪಡೆದುಮ 8,000 ಕ್ಕೂ ಹೆಚ್ಚು ಜೈನ ಆಗಮಿಕ ಶ್ಲೋಕಗಳನ್ನು ಕಂಠಪಾಠ ಮಾಡುವ ಮೂಲಕ ಆಧುನಿಕ ಕಾಲದ ಅತ್ಯಂತ ಸಮೃದ್ಧ ಜೈನ ವಿದ್ವಾಂಸರಲ್ಲಿ ಒಬ್ಬರಾದರು. ಅವರು ಜೈನ ದರ್ಶನ, ಅನೇಕಾಂತ್ವಾದ್ ಮತ್ತು ಮೋಕ್ಷಮಾರ್ಗ ದರ್ಶನ ಸೇರಿದಂತೆ ಜೈನ ತತ್ವಶಾಸ್ತ್ರ ಮತ್ತು ನೀತಿಶಾಸ್ತ್ರದ ಕುರಿತು 50 ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಆಚಾರ್ಯರು ಹಲವಾರು ದಶಕಗಳ ಕಾಲ ಭಾರತದ ರಾಜ್ಯಗಳಲ್ಲಿ ಬರಿಗಾಲಿನಲ್ಲಿ ಪ್ರಯಾಣ ಮಾಡಿದರು, ಕಾಯೋತ್ಸರ್ಗ ಧ್ಯಾನ, ಬ್ರಹ್ಮಚರ್ಯ ಮತ್ತು ತೀವ್ರ ಕಠಿಣತೆಯನ್ನು ಕಟ್ಟುನಿಟ್ಟಾಗಿ ಅನುಸರಿಸಿದರು.
1975 ರಲ್ಲಿ, ಭಗವಾನ್ ಮಹಾವೀರರ 2500ನೇ ನಿರ್ವಾಣ ಮಹೋತ್ಸವದ ಸಮಯದಲ್ಲಿ, ಆಚಾರ್ಯ ವಿದ್ಯಾನಂದ ಜಿ ಅವರು ಎಲ್ಲಾ ಪ್ರಮುಖ ಜೈನ ಪಂಗಡಗಳ ಒಪ್ಪಂದದೊಂದಿಗೆ ಅಧಿಕೃತ ಜೈನ ಧ್ವಜ ಮತ್ತು ಲಾಂಛನವನ್ನು ವಿನ್ಯಾಸಗೊಳಿಸುವ ಮತ್ತು ಪರಿಚಯಿಸುವಲ್ಲಿ ಐತಿಹಾಸಿಕ ಪಾತ್ರವನ್ನು ವಹಿಸಿದರು. ಐದು ಬಣ್ಣಗಳ ಧ್ವಜ ಮತ್ತು ಕೈಯಿಂದ ಕೆತ್ತಿದ ಅಹಿಂಸಾ ಚಿಹ್ನೆಯು ಅಂದಿನಿಂದ ಸಂಪ್ರದಾಯಗಳಲ್ಲಿ ಜೈನ ಸಮುದಾಯಕ್ಕೆ ಏಕೀಕರಣದ ಲಾಂಛನಗಳಾಗಿವೆ.
ದೆಹಲಿ, ವೈಶಾಲಿ, ಇಂದೋರ್ ಮತ್ತು ಶ್ರವಣಬೆಳಗೊಳ ಸೇರಿದಂತೆ ಭಾರತದಾದ್ಯಂತ ಪ್ರಾಚೀನ ಜೈನ ದೇವಾಲಯಗಳ ಪುನಃಸ್ಥಾಪನೆ ಮತ್ತು ಪುನರುಜ್ಜೀವನದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಹಾಗು ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಮತ್ತು ಭಗವಾನ್ ಮಹಾವೀರರ 2600ನೇ ಜನ್ಮ ಕಲ್ಯಾಣ ಮಹೋತ್ಸವದೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಅವರು ಬಿಹಾರದಲ್ಲಿರುವ ಕುಂದ್ಗ್ರಾಮ (ಈಗ ಬಾಸೊಕುಂಡ್) ಸ್ಥಳವನ್ನು ಭಗವಾನ್ ಮಹಾವೀರರ ಜನ್ಮಸ್ಥಳವೆಂದು ಗುರುತಿಸಿದರು, ಇದನ್ನು ನಂತರ 1956 ರಲ್ಲಿ ಭಾರತ ಸರ್ಕಾರ ಮಾನ್ಯತೆಯನ್ನು ನೀಡಿತು.
ಹಲವಾರು ಸಂಸ್ಥೆಗಳು ಮತ್ತು ಶಾಲೆಗಳ ಸ್ಥಾಪಕರಾಗಿ, ಆಚಾರ್ಯಜಿ ಪ್ರಾಕೃತ, ಜೈನ ತತ್ವಶಾಸ್ತ್ರ ಮತ್ತು ಶಾಸ್ತ್ರೀಯ ಭಾಷೆಗಳಲ್ಲಿ ಶಿಕ್ಷಣವನ್ನು, ವಿಶೇಷವಾಗಿ ಯುವ ಸನ್ಯಾಸಿಗಳು ಮತ್ತು ಮಕ್ಕಳಿಗೆ, ಉತ್ತೇಜಿಸಿದರು. ಅವರು ಸಕ್ರಿಯ ಸಂವಾದದ ಮೂಲಕ ಕ್ಷಮೆಯಾಚನೆಯ ಆಚರಣೆಗಳು, ಆಧ್ಯಾತ್ಮಿಕ ಸಮಾನತೆ ಮತ್ತು ಅಂತರ-ಪಂಗಡದ ಸಾಮರಸ್ಯವನ್ನು ಉತ್ತೇಜಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ಜೈನ ಆಚಾರ್ಯರು, ಆಧ್ಯಾತ್ಮಿಕ ನಾಯಕರು, ಸಂಸತ್ತಿನ ಸದಸ್ಯರು, ಸಾಂವಿಧಾನಿಕ ಅಧಿಕಾರಿಗಳು, ವಿದ್ವಾಂಸರು, ಯುವ ಪ್ರತಿನಿಧಿಗಳು ಮತ್ತು ದೇಶಾದ್ಯಂತದ ಇತರ ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಮತ್ತು ಸ್ಮರಣಾರ್ಥ ಕಾರ್ಯಕ್ರಮಗಳ ಸರಣಿ ಹೀಗಿದೆ:
ಉದ್ಘಾಟನಾ ಸಮಾರಂಭದ ಮುಖ್ಯಾಂಶಗಳು:
- ಅಪರೂಪದ ವಸ್ತುಗಳು, ಛಾಯಾಚಿತ್ರಗಳು, ಪ್ರಮುಖ ಘಟನೆಗಳು ಮತ್ತು ತಾತ್ವಿಕ ಕೊಡುಗೆಗಳನ್ನು ಎತ್ತಿ ತೋರಿಸುವ "ಆಚಾರ್ಯ ಶ್ರೀ 108 ವಿದ್ಯಾನಂದ ಜಿ ಮಹಾರಾಜರ ಜೀವನ ಮತ್ತು ಪರಂಪರೆ" ಎಂಬ ಶೀರ್ಷಿಕೆಯ ವಿಶೇಷವಾಗಿ ಸಂಗ್ರಹಿಸಲಾದ ಪ್ರದರ್ಶನ.
- ಅವರ ಆಧ್ಯಾತ್ಮಿಕ ಪ್ರಯಾಣ, ಸಾಮಾಜಿಕ ಕೊಡುಗೆಗಳು ಮತ್ತು ರಾಷ್ಟ್ರೀಯ ಪ್ರಜ್ಞೆಯ ಮೇಲಿನ ಪ್ರಭಾವವನ್ನು ವಿವರಿಸುವ ಕಿರು ಸಾಕ್ಷ್ಯಚಿತ್ರದ ಪ್ರದರ್ಶನ
- ಶತಮಾನೋತ್ಸವದ ಅಂಗವಾಗಿ ಸಂಸ್ಕೃತಿ ಸಚಿವಾಲಯ ಬಿಡುಗಡೆ ಮಾಡಿದ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯ
- ಆಚಾರ್ಯ ಜಿ ಅವರ ತ್ಯಾಗದ ಹಾದಿ, ಸಾಹಿತ್ಯ ಕೃತಿಗಳು, ಸಾಂಸ್ಥಿಕ ಪ್ರಯತ್ನಗಳು ಮತ್ತು ಸುಧಾರಕರಾಗಿ ಪಾತ್ರವನ್ನು ವಿವರಿಸುವ ಜೀವನಚರಿತ್ರೆಯ ಸಂಪುಟದ ಬಿಡುಗಡೆ
- ಇಂದಿನ ಜಗತ್ತಿನಲ್ಲಿ ಅವರ ಬೋಧನೆಗಳ ಪ್ರಸ್ತುತತೆಯನ್ನು ಪ್ರತಿಬಿಂಬಿಸುವ ಆಧ್ಯಾತ್ಮಿಕ ನಾಯಕರು, ವಿದ್ವಾಂಸರು ಮತ್ತು ಸಾರ್ವಜನಿಕ ವ್ಯಕ್ತಿಗಳ ಭಾಷಣಗಳು
- ಆಚಾರ್ಯ ಜಿ ಅವರ ಅಹಿಂಸೆ, ಸತ್ಯ ಮತ್ತು ಧರ್ಮದ ಪರಂಪರೆಗೆ ರಾಷ್ಟ್ರೀಯ ಗೌರವವನ್ನು ನೀಡುವ ಭಾರತದ ಪ್ರಧಾನಮಂತ್ರಿಯವರ ಮುಖ್ಯ ಭಾಷಣ
ಶತಮಾನೋತ್ಸವ ವರ್ಷವು ಸಮುದಾಯದ ಭಾಗವಹಿಸುವಿಕೆ, ಯುವಜನರ ಭಾಗವಹಿಸುವಿಕೆ, ಅಂತರ-ಧಾರ್ಮಿಕ ಸಂವಾದ, ದೇವಾಲಯ ಸಂಪರ್ಕ ಮತ್ತು ಜೈನ ಪರಂಪರೆಯ ಜಾಗೃತಿಯನ್ನು ಕೇಂದ್ರೀಕರಿಸಿದ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ, ಇದರಿಂದಾಗಿ ಆಚಾರ್ಯ ವಿದ್ಯಾನಂದಜಿಯವರ ಶಾಶ್ವತ ಸಂದೇಶವು ಭವಿಷ್ಯದ ಪೀಳಿಗೆಗೆ ತಲುಪುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬಹುದು.
ಈ ರಾಷ್ಟ್ರೀಯ ಉತ್ಸವವು ಕೇವಲ ಆಚರಣೆಯಲ್ಲ, ಬದಲಿಗೆ ಆಚಾರ್ಯ ಶ್ರೀ 108 ವಿದ್ಯಾನಂದಜಿ ಮಹಾರಾಜ್ ಅವರು ಸಾಕಾರಗೊಳಿಸಿದ ಭಾರತೀಯ ನಾಗರಿಕತೆಯ ಶಾಶ್ವತ ಮೌಲ್ಯಗಳಾದ ಸತ್ಯ, ಕರುಣೆ, ಶಿಸ್ತು ಮತ್ತು ಅಹಿಂಸೆಯನ್ನು ಪುನರುಚ್ಚರಿಸಲು ಪವಿತ್ರ ಕರೆಯಾಗಿದೆ.
*****
(Release ID: 2140636)