ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಅವರ ನಡುವಿನ ಐತಿಹಾಸಿಕ ಸಂವಾದದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಶ್ರೀ ನಾರಾಯಣ ಗುರುಗಳ ಆದರ್ಶಗಳು ಇಡೀ ಮನುಕುಲಕ್ಕೆ ಒಂದು ದೊಡ್ಡ ನಿಧಿ: ಪ್ರಧಾನಮಂತ್ರಿ
ಭಾರತಕ್ಕೆ ಸಮಾಜದಲ್ಲಿ ಪರಿವರ್ತನಾತ್ಮಕ ಬದಲಾವಣೆಗಳನ್ನು ತಂದ ಹೆಸರಾಂತ ಸಂತರು, ಋಷಿಗಳು ಮತ್ತು ಸಮಾಜ ಸುಧಾರಕರ ಆಶೀರ್ವಾದವಿದೆ: ಪ್ರಧಾನಮಂತ್ರಿ
ಶ್ರೀ ನಾರಾಯಣ ಗುರುಗಳು ಎಲ್ಲಾ ರೀತಿಯ ತಾರತಮ್ಯರಹಿತ ಸಮಾಜದ ಕನಸು ಕಂಡವರು, ಇಂದು ಪರಿಪೂರ್ಣತೆ (ಸ್ಯಾಚುರೇಶನ್) ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ, ದೇಶವು ತಾರತಮ್ಯದ ಪ್ರತಿಯೊಂದು ಸಾಧ್ಯತೆ ತೊಡೆದುಹಾಕುವ ಕಾರ್ಯ ಮಾಡುತ್ತಿದೆ: ಪ್ರಧಾನಮಂತ್ರಿ
ಸ್ಕಿಲ್ ಇಂಡಿಯಾದಂತಹ ಮಿಷನ್‌ಗಳು ಯುವಕರನ್ನು ಸಬಲೀಕರಣಗೊಳಿಸುತ್ತಿವೆ ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿವೆ: ಪ್ರಧಾನಮಂತ್ರಿ
ಭಾರತವನ್ನು ಸಬಲೀಕರಣಗೊಳಿಸಲು, ನಾವು ಆರ್ಥಿಕ, ಸಾಮಾಜಿಕ ಮತ್ತು ಮಿಲಿಟರಿ ಸೇರಿ ಪ್ರತಿಯೊಂದು ವಲಯದಲ್ಲೂ ಮುನ್ನಡೆಯಬೇಕು , ಇಂದು, ರಾಷ್ಟ್ರವು ಈ ಹಾದಿಯಲ್ಲಿ ಮುಂದುವರಿಯುತ್ತಿದೆ: ಪ್ರಧಾನಮಂತ್ರಿ
Posted On:
24 JUN 2025 1:01PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಭಾರತದ ಇಬ್ಬರು ಶ್ರೇಷ್ಠ ಆಧ್ಯಾತ್ಮಿಕ ಮತ್ತು ನೈತಿಕ ನಾಯಕರಾದ ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿಯವರ ಐತಿಹಾಸಿಕ ಸಂವಾದದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಇಂದು ಈ ಸ್ಥಳವು ರಾಷ್ಟ್ರದ ಇತಿಹಾಸದಲ್ಲಿ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ಇದು ನಮ್ಮ ಸ್ವಾತಂತ್ರ್ಯ ಚಳವಳಿಗೆ ಹೊಸ ದಿಕ್ಕನ್ನು ನೀಡಿದ, ಸ್ವಾತಂತ್ರ್ಯದ ಉದ್ದೇಶಗಳು ಮತ್ತು ಸ್ವತಂತ್ರ ಭಾರತದ ಕನಸಿಗೆ ನಿರ್ದಿಷ್ಟ ಅರ್ಥವನ್ನು ನೀಡಿದ ಐತಿಹಾಸಿಕ ಘಟನೆಯಾಗಿದೆ ಎಂದು ಅವರು ಒತ್ತಿ ಹೇಳಿದರು. "100 ವರ್ಷಗಳ ಹಿಂದೆ ನಡೆದ ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿಯವರ ಭೇಟಿಯು ಇಂದಿಗೂ ಸ್ಪೂರ್ತಿದಾಯಕ ಮತ್ತು ಪ್ರಸ್ತುತವಾಗಿದೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಸಾಮಾಜಿಕ ಸಾಮರಸ್ಯ ಮತ್ತು ಸಾಮೂಹಿಕ ಗುರಿಗಳಿಗೆ ಶಕ್ತಿಶಾಲಿ ಮೂಲವಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಪ್ರಧಾನಿ ಹೇಳಿದರು. ಈ ಐತಿಹಾಸಿಕ ಸಂದರ್ಭದಲ್ಲಿ, ಅವರು ಶ್ರೀ ನಾರಾಯಣ ಗುರುಗಳ ಪಾದಗಳಿಗೆ ನಮನ ಸಲ್ಲಿಸಿದರು ಮತ್ತು ಮಹಾತ್ಮ ಗಾಂಧಿ ಅವರಿಗೆ ಗೌರವನಮನ ಸಲ್ಲಿಸಿದರು.
“ಶ್ರೀ ನಾರಾಯಣ ಗುರುಗಳ ಆದರ್ಶಗಳು ಇಡೀ ಮನುಕುಲಕ್ಕೆ ಒಂದು ದೊಡ್ಡ ಆಸ್ತಿ" ಎಂದು ಶ್ರೀ ನರೇಂದ್ರ ಮೋದಿ ಬಣ್ಣಿಸಿದರು. ದೇಶ ಮತ್ತು ಸಮಾಜದ ಸೇವೆಗೆ ಬದ್ಧರಾಗಿರುವವರಿಗೆ ಶ್ರೀ ನಾರಾಯಣ ಗುರುಗಳು ದಾರಿದೀಪವಾಗಿ ಸೇವೆ ಸಲ್ಲಿಸುತ್ತಾರೆ ಎಂದು ಹೇಳಿದರು. ಸಮಾಜದ ತುಳಿತಕ್ಕೊಳಗಾದ, ಶೋಷಿತ ಮತ್ತು ವಂಚಿತ ವರ್ಗಗಳೊಂದಿಗೆ ಅವರು ತಮ್ಮ ದೀರ್ಘಕಾಲದ ಸಂಪರ್ಕವನ್ನು ಹಂಚಿಕೊಂಡರು. ಇಂದಿಗೂ ಸಹ ಆ ಸಮುದಾಯಗಳ ಸುಧಾರಣೆಗಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾವು ಗುರುದೇವರನ್ನು ನೆನಪಿಸಿಕೊಳ್ಳುತ್ತೇನೆ ಎಂದು ಅವರು ಒತ್ತಿ ಹೇಳಿದರು. ಶತಮಾನಗಳ ವಸಾಹತುಶಾಹಿ ಆಳ್ವಿಕೆಯ ವಿರೂಪಗಳಿಂದ ರೂಪುಗೊಂಡ ನೂರು ವರ್ಷಗಳ ಹಿಂದಿನ ಸಾಮಾಜಿಕ ಪರಿಸ್ಥಿತಿಗಳ ಮೇಲೆ ಬೆಳಕು ಚೆಲ್ಲುತ್ತಾ ಆ ಸಮಯದಲ್ಲಿ ಜನರು ಸಮಾಜವನ್ನು ಕಾಡುತ್ತಿದ್ದ ಸಾಮಾಜಿಕ ಅನಿಷ್ಟ ಪಿಡುಗುಗಳ ವಿರುದ್ಧ ಮಾತನಾಡಲು ಹೆದರುತ್ತಿದ್ದರು ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಆದರೂ ಸಹ ಶ್ರೀ ನಾರಾಯಣ ಗುರುಗಳು ವಿರೋಧದಿಂದ ವಿಚಲಿತರಾಗಲಿಲ್ಲ ಮತ್ತು ಸವಾಲುಗಳಿಗೆ ಹೆದರಲಿಲ್ಲ ಎಂದು ಪ್ರಸ್ತಾಪಿಸಿದರು. ಶ್ರೀ ನಾರಾಯಣ ಗುರುಗಳ ದೃಢಸಂಕಲ್ಪವು ಸತ್ಯ, ಸೇವೆ ಮತ್ತು ಸದ್ಭಾವನೆಯಲ್ಲಿ ದೃಢ ನಂಬಿಕೆಯೊಂದಿಗೆ ಸಾಮರಸ್ಯ ಮತ್ತು ಸಮಾನತೆಯಲ್ಲಿದೆ ಎಂದು ಪ್ರಧಾನಿ ಹೇಳಿದರು. ಈ ಸ್ಫೂರ್ತಿಯೇ ನಮಗೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಮಾರ್ಗವನ್ನು ತೋರಿಸುತ್ತದೆ ಎಂದು ದೃಢಪಡಿಸಿದ ಶ್ರೀ ನರೇಂದ್ರ ಮೋದಿ, ಸಮಾಜದ ತಳಮಟ್ಟದಲ್ಲಿರುವ ನಿಂತಿರುವ ವ್ಯಕ್ತಿ ನಮ್ಮ ಅತ್ಯುನ್ನತ ಆದ್ಯತೆಯಾಗಿರುವ ಭಾರತವನ್ನು ನಿರ್ಮಿಸುತ್ತಾರೆನ್ನುವ ನಂಬಿಕೆ ನಮಗೆ ಶಕ್ತಿಯನ್ನು ತುಂಬುತ್ತದೆ ಎಂದು ಹೇಳಿದರು.
ಶಿವಗಿರಿ ಮಠದೊಂದಿಗೆ ಸಂಬಂಧ ಹೊಂದಿರುವ ಜನರು ಮತ್ತು ಸಂತರು, ಶ್ರೀ ನಾರಾಯಣ ಗುರು ಮತ್ತು ಮಠದ ಮೇಲಿನ ತಮ್ಮ ಆಳವಾದ ಮತ್ತು ಅಚಲ ನಂಬಿಕೆಯನ್ನು ಚೆನ್ನಾಗಿ ತಿಳಿದಿದ್ದಾರೆ ಎಂದು ಒತ್ತಿ ಹೇಳಿದ ಪ್ರಧಾನಿ, ಮಠದ ಪೂಜ್ಯ ಸಂತರ ಪ್ರೀತಿಯ ಆಶೀರ್ವಾದ ತಮ್ಮ ಮೇಲಿದೆ ಎಂದರು. 2013 ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪವನ್ನು ಅವರು ನೆನಪಿಸಿಕೊಂಡರು, ಈ ಸಂದರ್ಭದಲ್ಲಿ ಶಿವಗಿರಿ ಮಠದ ಅನೇಕ ವ್ಯಕ್ತಿಗಳು ಸಿಲುಕಿಕೊಂಡಿದ್ದರು, ಸಿಕ್ಕಿಬಿದ್ದವರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಜವಾಬ್ದಾರಿಯನ್ನು ಮಠವು ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನನಗೆ ವಹಿಸಿತ್ತು ಎಂದರು. ಬಿಕ್ಕಟ್ಟಿನ ಸಮಯದಲ್ಲಿ, ಒಬ್ಬರ ಗಮನವು ಮೊದಲು ಅವರು ತಮ್ಮವರು ಎಂದು ಪರಿಗಣಿಸುವವರಡೆಗೆ ತಿರುಗುತ್ತದೆ - ಅವರು ತಮ್ಮವರೆಂದು ಭಾವಿಸುವವರ ಕಡೆಗೆ ಮತ್ತು ಅವರ ಬಗ್ಗೆ ಜವಾಬ್ದಾರಿಯನ್ನು ಅನುಭವಿಸುವವರ ಕಡೆಗೆ ತಿರುಗುತ್ತದೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. ಶಿವಗಿರಿ ಮಠದ ಸಂತರು ತೋರಿಸುವ ರಕ್ತಸಂಬಂಧ ಮತ್ತು ನಂಬಿಕೆಯ ಪ್ರಜ್ಞೆಗಿಂತ ಹೆಚ್ಚಿನ ಆಧ್ಯಾತ್ಮಿಕ ತೃಪ್ತಿ ಅವರಿಗೆ ಇನ್ನೊಂದಿಲ್ಲ ಎಂದು ಅವರು ಹೇಳಿದರು.
ಕಾಶಿಯೊಂದಿಗೆ ತಮಗೆ ಸಂಬಂಧವಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ವರ್ಕಳವನ್ನು ದಕ್ಷಿಣದ ಕಾಶಿ ಎಂದು ಬಹಳ ಹಿಂದಿನಿಂದಲೂ ಕರೆಯಲಾಗುತ್ತಿದೆ ಎಂದು ಹೇಳಿದರು. ಕಾಶಿ ಉತ್ತರದಲ್ಲಿರಲಿ ಅಥವಾ ದಕ್ಷಿಣದಲ್ಲಿರಲಿ, ಪ್ರತಿಯೊಂದು ಕಾಶಿಯೂ ನನಗೆ ನನ್ನದೇ ಎನಿಸುತ್ತದೆ ಎಂದರು.
ಭಾರತದ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಮತ್ತು ಅದರ ಋಷಿಮುನಿಗಳು ಮತ್ತು ಋಷಿಮುನಿಗಳ ಪರಂಪರೆಯನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳುವ ಮತ್ತು ಬದುಕುವ ಅದೃಷ್ಟ ತಮಗೆ ದೊರೆತಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ರಾಷ್ಟ್ರವು ಪ್ರಕ್ಷುಬ್ಧ ಸ್ಥಿತಿಯನ್ನು ಎದುರಿಸುವ ಸಂದರ್ಭಗಳಲ್ಲೆಲ್ಲಾ ದೇಶದ ಯಾವುದೋ ಮೂಲೆಯಿಂದ ಸಮಾಜಕ್ಕೆ ಹೊಸ ಮಾರ್ಗವನ್ನು ತೋರಿಸಲು ಒಬ್ಬ ಮಹಾನ್ ವ್ಯಕ್ತಿತ್ವ ಹೇಗೆ ಹೊರಹೊಮ್ಮುತ್ತಾರೆ ಎಂಬುದರಲ್ಲಿ ಭಾರತದ ವಿಶಿಷ್ಟ ಶಕ್ತಿ ಅಡಗಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಕೆಲವರು ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಕೆಲಸ ಮಾಡುತ್ತಾರೆ, ಇನ್ನು ಕೆಲವರು ಸಾಮಾಜಿಕ ಸುಧಾರಣೆಗಳನ್ನು ವೇಗಗೊಳಿಸುತ್ತಾರೆ ಎಂದು ಅವರು ಉಲ್ಲೇಖಿಸಿದರು. ಶ್ರೀ ನಾರಾಯಣ ಗುರುಗಳು ಅಂತಹ ಒಬ್ಬ ಮಹಾನ್ ಸಂತ ಎಂದು ಬಣ್ಣಿಸಿದ ಪ್ರಧಾನಿ, ಅವರ 'ನಿವೃತ್ತಿ ಪಂಚಕಂ' ಮತ್ತು 'ಆತ್ಮೋಪದೇಶ ಶತಕಂ' ನಂತಹ ಕೃತಿಗಳು ಅದ್ವೈತ ಮತ್ತು ಆಧ್ಯಾತ್ಮಿಕ ಅಧ್ಯಯನದ ಯಾವುದೇ ವಿದ್ಯಾರ್ಥಿಗೆ ಅಗತ್ಯ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತವೆ ಎಂದರು.
ಶ್ರೀ ನಾರಾಯಣ ಗುರುಗಳ ಮೂಲ ವಿಷಯಗಳು ಯೋಗ, ವೇದಾಂತ, ಆಧ್ಯಾತ್ಮಿಕ ಅಭ್ಯಾಸ ಮತ್ತು ವಿಮೋಚನೆ ಎಂದು ಹೇಳಿದ ಶ್ರೀ ನರೇಂದ್ರ ಮೋದಿ ಸಾಮಾಜಿಕ ಅನಿಷ್ಟಗಳಲ್ಲಿ ಸಿಲುಕಿರುವ ಸಮಾಜದ ಆಧ್ಯಾತ್ಮಿಕ ಐನತ್ಯವನ್ನು ಸಾಮಾಜಿಕ ಪ್ರಗತಿಯ ಮೂಲಕ ಮಾತ್ರ ಸಾಧಿಸಬಹುದು ಎಂದು ಶ್ರೀ ನಾರಾಯಣ ಗುರುಗಳು ಅರ್ಥಮಾಡಿಕೊಂಡರು ಎಂದು ಒತ್ತಿ ಹೇಳಿದರು. ಶ್ರೀ ನಾರಾಯಣ ಗುರುಗಳು ಸಾಮಾಜಿಕ ಸುಧಾರಣೆ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಆಧ್ಯಾತ್ಮಿಕತೆಯನ್ನು ಒಂದು ಮಾಧ್ಯಮವಾಗಿ ಪರಿವರ್ತಿಸಿದರು ಎಂದು ಅವರು ಪ್ರಸ್ತಾಪಿಸಿದರು. ಶ್ರೀ ನಾರಾಯಣ ಗುರುಗಳ ಪ್ರಯತ್ನಗಳಿಂದ ಗಾಂಧೀಜಿ ಕೂಡ ಸ್ಫೂರ್ತಿ ಮತ್ತು ಮಾರ್ಗದರ್ಶನ ಪಡೆದರು ಎಂದು ಅವರು ಹೇಳಿದರು. ಗುರುದೇವ್ ರವೀಂದ್ರನಾಥ ಟ್ಯಾಗೋರ್‌ರಂತಹ ವಿದ್ವಾಂಸರು ಸಹ ಶ್ರೀ ನಾರಾಯಣ ಗುರುಗಳೊಂದಿಗಿನ ಚರ್ಚೆಗಳಿಂದ ಲಾಭ ಪಡೆದರು ಎಂದು ಪ್ರಧಾನಿ ಹೇಳಿದರು.
ಶ್ರೀ ನಾರಾಯಣ ಗುರುಗಳ ಆತ್ಮೋಪದೇಶ ಶತಕವನ್ನು ರಮಣ ಮಹರ್ಷಿಗಳಿಗೆ ಯಾರೋ ಪಠಿಸಿದ ಸಮಯದ ಬಗ್ಗೆ ಒಂದು ಸಂದರ್ಭವನ್ನು ಹಂಚಿಕೊಂಡ ಪ್ರಧಾನಿ, ಅದನ್ನು ಕೇಳಿದ ನಂತರ ರಮಣ ಮಹರ್ಷಿ "ಅವರು ಎಲ್ಲವನ್ನೂ ತಿಳಿದಿದ್ದಾರೆ" ಎಂದು ಹೇಳಿದರು ಎಂದರು. ವಿದೇಶಿ ಸಿದ್ಧಾಂತಗಳು ಭಾರತದ ನಾಗರಿಕತೆ, ಸಂಸ್ಕೃತಿ ಮತ್ತು ತತ್ವಶಾಸ್ತ್ರವನ್ನು ದುರ್ಬಲಗೊಳಿಸಲು ಪ್ರಯತ್ನಿಸಿದ ಅವಧಿಯನ್ನುಉಲ್ಲೇಖಿಸಿದ ಅವರು, ಆದರೆ ಶ್ರೀ ನಾರಾಯಣ ಗುರುಗಳು ದೋಷವು ನಮ್ಮ ಮೂಲ ಸಂಪ್ರದಾಯಗಳಲ್ಲಿಲ್ಲ, ಆದರೆ ನಮ್ಮ ಆಧ್ಯಾತ್ಮಿಕತೆಯನ್ನು ನಿಜವಾಗಿಯೂ ಆಂತರ್ಗತಗೊಳಿಸಬೇಕಾಗಿದೆ ಎಂಬುದರ ಅರಿವು ಮೂಡಿಸಿದರು. ನಾವು ಪ್ರತಿಯೊಬ್ಬ ಮಾನವನಲ್ಲಿ ನಾರಾಯಣನನ್ನು ಮತ್ತು ಪ್ರತಿಯೊಂದು ಜೀವಿಯಲ್ಲೂ ಶಿವನನ್ನು ನೋಡುವ ಜನರು ಎಂದು ಅವರು ಹೇಳಿದರು. ದ್ವಂದ್ವತೆಯಲ್ಲಿ ಅದ್ವೈತ, ವೈವಿಧ್ಯತೆಯಲ್ಲಿ ಏಕತೆ ಮತ್ತು ಸ್ಪಷ್ಟ ವ್ಯತ್ಯಾಸಗಳಲ್ಲಿಯೂ ಏಕತೆಯನ್ನು ನಾವು ಗ್ರಹಿಸುತ್ತೇವೆ ಎಂದು ಅವರು ಹೇಳಿದರು.
ಶ್ರೀ ನಾರಾಯಣ ಗುರುಗಳ ಮಂತ್ರ - 'ಒರು ಜಾತಿ, ಒಂದು ಮತ, ಒಂದು ದೈವಂ, ಮನುಷ್ಯಾನುಮ್' ಅಂದರೆ 'ಒಂದು ಜಾತಿ, ಒಂದು ಧರ್ಮ, ಒಂದು ದೇವರು ಮಾನವಕುಲಕ್ಕೆ' ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಇದು ಎಲ್ಲಾ ಮಾನವೀಯತೆ ಮತ್ತು ಎಲ್ಲಾ ಜೀವಿಗಳ ಏಕತೆಯನ್ನು ಪ್ರತಿಬಿಂಬಿಸುತ್ತದೆ, ಈ ತತ್ವಶಾಸ್ತ್ರವು ಭಾರತದ ನಾಗರಿಕತೆಯ ನೀತಿಯ ಅಡಿಪಾಯವನ್ನು ರೂಪಿಸುತ್ತದೆ ಎಂದು ಬಲವಾಗಿ ಪ್ರತಿಪಾದಿಸಿದರು. ಭಾರತವು ಇಂದು ಜಾಗತಿಕ ಕಲ್ಯಾಣದ ಮನೋಭಾವದೊಂದಿಗೆ ಈ ತತ್ವಶಾಸ್ತ್ರವನ್ನು ವಿಸ್ತರಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು. ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ಈ ವರ್ಷದ ಧ್ಯೇಯವಾಕ್ಯ 'ಒಂದು ಭೂಮಿಗೆ ಯೋಗ, ಒಂದು ಆರೋಗ್ಯ', ಇದು ಒಂದು ಭೂಮಿ ಮತ್ತು ಸಾರ್ವತ್ರಿಕ ಯೋಗಕ್ಷೇಮದ ದೂರದೃಷ್ಟಿಯ ಸಂಕೇತವಾಗಿದೆ ಎಂದು ಹೇಳಿದರು. ಈ ಹಿಂದೆ, ಭಾರತವು ಮಾನವೀಯತೆಯ ಕಲ್ಯಾಣಕ್ಕಾಗಿ 'ಒಂದು ಜಗತ್ತು, ಒಂದು ಆರೋಗ್ಯ' ದಂತಹ ಜಾಗತಿಕ ಉಪಕ್ರಮಗಳನ್ನು ಆರಂಭಿಸಿತ್ತು ಎಂದು ಪ್ರಧಾನಿ ಹೇಳಿದರು. ಭಾರತವು ಈಗ 'ಒಂದು ಸೂರ್ಯ, ಒಂದು ಭೂಮಿ, ಒಂದು ಗ್ರಿಡ್' ನಂತಹ ಸುಸ್ಥಿರ ಅಭಿವೃದ್ಧಿಯ ನಿಟ್ಟಿನಲ್ಲಿ ಜಾಗತಿಕ ಅಭಿಯಾನಗಳನ್ನು ಮುನ್ನಡೆಸುತ್ತಿದೆ ಎಂದು ಅವರು ಹೇಳಿದರು. 2023 ರಲ್ಲಿ ಭಾರತ ಜಿ-20 ಶೃಂಗಸಭೆಯ ಅಧ್ಯಕ್ಷತೆಯಲ್ಲಿ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಧ್ಯೇಯವಾಕ್ಯವನ್ನು ಸ್ಮರಿಸಿಕೊಂಡ ಪ್ರಧಾನಿ, ಈ ಪ್ರಯತ್ನಗಳು 'ವಸುಧೈವ ಕುಟುಂಬಕಂ' ಎಂಬ ಮನೋಭಾವದಲ್ಲಿ ಬೇರೂರಿವೆ ಮತ್ತು ಶ್ರೀ ನಾರಾಯಣ ಗುರುಗಳಂತಹ ಸಂತರಿಂದ ಪ್ರೇರಿತವಾಗಿವೆ ಎಂದರು.
“ಶ್ರೀ ನಾರಾಯಣ ಗುರುಗಳು ತಾರತಮ್ಯರಹಿತ ಸಮಾಜವನ್ನು ಕಲ್ಪಿಸಿಕೊಂಡರು, ಇಂದು, ದೇಶವು ಪರಿಪೂರ್ಣತೆ (ಸ್ಯಾಚುರೇಶನ್ )ವಿಧಾನವನ್ನು ಅನುಸರಿಸುವ ಮೂಲಕ ತಾರತಮ್ಯದ ಪ್ರತಿಯೊಂದು ಸಾಧ್ಯತೆಯನ್ನು ನಿವಾರಿಸುತ್ತಿದೆ’’ ಎಂದು ಶ್ರೀ ನರೇಂದ್ರ ಮೋದಿ ಬಣ್ಣಿಸಿದರು. ಸ್ವಾತಂತ್ರ್ಯದ ದಶಕಗಳ ಹೊರತಾಗಿಯೂ 10-11 ವರ್ಷಗಳ ಹಿಂದಿನವರೆಗೆ ಲಕ್ಷಾಂತರ ನಾಗರಿಕರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಬದುಕುವಂತಹ ಅನಿವಾರ್ಯ ಪರಿಸ್ಥಿತಿ ಇತ್ತೆಂಬುದನ್ನು ಜನರು ನೆನಪಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು. ಲಕ್ಷಾಂತರ ಕುಟುಂಬಗಳಿಗೆ ಆಶ್ರಯದ ಕೊರತೆ, ಲೆಕ್ಕವಿಲ್ಲದಷ್ಟು ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಕೊರತೆ ಮತ್ತು ಆರೋಗ್ಯ ಸೇವೆಯ ಕೊರತೆಯಿಂದಾಗಿ ಸಣ್ಣ ಕಾಯಿಲೆಗಳಿಗೆ ಸಹ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಗಂಭೀರ ಅನಾರೋಗ್ಯದ ಸಂದರ್ಭಗಳಲ್ಲಿ ಜೀವಗಳನ್ನು ಉಳಿಸಲು ಯಾವುದೇ ಮಾರ್ಗವಿರಲಿಲ್ಲ ಎಂದು ಪ್ರಧಾನಿ ಉಲ್ಲೇಖಿಸಿದರು. ಲಕ್ಷಾಂತರ ಬಡ ಜನರು - ದಲಿತರು, ಬುಡಕಟ್ಟು ಜನಾಂಗದವರು, ಮಹಿಳೆಯರು - ಮೂಲಭೂತ ಮಾನವ ಘನತೆಯಿಂದ ವಂಚಿತರಾಗಿದ್ದರು ಎಂದು ಅವರು ಹೇಳಿದರು. ಈ ಕಷ್ಟಗಳು ತಲೆಮಾರುಗಳಿಂದ ಮುಂದುವರೆದಿದ್ದು, ಅನೇಕರು ಉತ್ತಮ ಜೀವನದ ಭರವಸೆಯನ್ನು ತ್ಯಜಿಸುವಂತೆ ಮಾಡಿದೆ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಇಷ್ಟು ದೊಡ್ಡ ಜನಸಂಖ್ಯೆ ನೋವು ಮತ್ತು ಹತಾಶೆಯಲ್ಲಿ ಬದುಕಿದಾಗ ರಾಷ್ಟ್ರ ಹೇಗೆ ಪ್ರಗತಿ ಸಾಧಿಸಬಹುದು ಎಂದು ಪ್ರಶ್ನಿಸಿದ ಅವರು, ತಮ್ಮ ಸರ್ಕಾರವು ಕರುಣೆಯನ್ನು ತನ್ನ ಚಿಂತನೆಯ ಕೇಂದ್ರ ಭಾಗವನ್ನಾಗಿ ಮಾಡಿಕೊಂಡಿದೆ ಮತ್ತು ಸೇವೆಯನ್ನು ತನ್ನ ಧ್ಯೇಯವನ್ನಾಗಿ ಪರಿವರ್ತಿಸಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಲಕ್ಷಾಂತರ ಬಡವರು, ದಲಿತರು, ಸಂಕಷ್ಟದಲ್ಲಿರುವವರು, ಶೋಷಣೆಗೊಳಗಾದವರು ಮತ್ತು ವಂಚಿತ ಕುಟುಂಬಗಳಿಗೆ ಶಾಶ್ವತ ಮನೆಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು. ಪ್ರತಿಯೊಬ್ಬ ಬಡ ನಾಗರಿಕರಿಗೂ ಸೂರನ್ನು ಖಾತ್ರಿಪಡಿಸುವುದು ಸರ್ಕಾರದ ಗುರಿಯಾಗಿದೆ ಎಂದು ಅವರು ಪುನರುಚ್ಚರಿಸಿದರು ಮತ್ತು ಈ ಮನೆಗಳು ಕೇವಲ ಇಟ್ಟಿಗೆ ಮತ್ತು ಸಿಮೆಂಟ್ ಗಳಿಂದ ನಿರ್ಮಿಸಿದವುಗಳಲ್ಲ, ಆದರೆ ಎಲ್ಲಾ ಅಗತ್ಯ ಸೌಕರ್ಯಗಳೊಂದಿಗೆ ಸುಸಜ್ಜಿತವಾದ ಮನೆಯ ಸಂಪೂರ್ಣ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತವೆ. ಅದಕ್ಕಾಗಿಯೇ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಮನೆಗಳು ಅನಿಲ, ವಿದ್ಯುತ್ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪ್ರತಿ ಮನೆಗೆ ಶುದ್ಧ ನೀರನ್ನು ತಲುಪಿಸಲಾಗುತ್ತಿರುವ ಜಲ ಜೀವನ್ ಮಿಷನ್ ಬಗ್ಗೆ ಮಾತನಾಡಿದ ಪ್ರಧಾನಿ, ಸರ್ಕಾರಿ ಸೇವೆಗಳು ಎಂದಿಗೂ ತಲುಪದ ಬುಡಕಟ್ಟು ಪ್ರದೇಶಗಳಲ್ಲಿಯೂ ಸಹ ಅಭಿವೃದ್ಧಿ ಖಾತ್ರಿಯಾಗಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. ಸಮಾಹದ ಅತ್ಯಂತ ಕೆಳ ಅಂಚಿನಲ್ಲಿರುವ ಬುಡಕಟ್ಟು ಸಮುದಾಯಗಳಿಗೆ, ಪ್ರಧಾನಮಂತ್ರಿ ಜನ್ ಮನ್ ಯೋಜನೆಯನ್ನು ಆರಂಭಿಸಲಾಯಿತು ಮತ್ತು ಆ ಉಪಕ್ರಮದಿಂದಾಗಿ ಅನೇಕ ಪ್ರದೇಶಗಳು ಪರಿವರ್ತನೆಗೆ ಸಾಕ್ಷಿಯಾಗುತ್ತಿವೆ ಎಂದು ಅವರು ಹೇಳಿದರು. ಇದರ ಪರಿಣಾಮವಾಗಿ, ಸಮಾಜದ ಅತ್ಯಂತ ತಳಮಟ್ಟದಲ್ಲಿರುವವರು ಸಹ ಹೊಸ ಭರವಸೆಯನ್ನು ಕಂಡುಕೊಂಡಿದ್ದಾರೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. "ಈ ಉಪಕ್ರಮಗಳು ಅವರ ಜೀವನವನ್ನು ಬದಲಾಯಿಸುವುದಲ್ಲದೆ, ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಸಹ ನೋಡುತ್ತಿವೆ" ಎಂದು ಅವರು ಹೇಳಿದರು.
ಶ್ರೀ ನಾರಾಯಣ ಗುರುಗಳು ಮಹಿಳಾ ಸಬಲೀಕರಣದ ಮಹತ್ವವನ್ನು ನಿರಂತರವಾಗಿ ಒತ್ತಿ ಹೇಳುತ್ತಿದ್ದರು ಮತ್ತು ಸರ್ಕಾರವು ಮಹಿಳಾ ನೇತೃತ್ವದ ಅಭಿವೃದ್ಧಿಯ ಮಂತ್ರದೊಂದಿಗೆ ಮುನ್ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸ್ವಾತಂತ್ರ್ಯದ ದಶಕಗಳ ನಂತರವೂ ಮಹಿಳೆಯರಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದ ಹಲವಾರು ಕ್ಷೇತ್ರಗಳು ಭಾರತದ್ದವು ಎಂದು ಉಲ್ಲೇಖಿಸಿದ ಅವರು, ಸರ್ಕಾರ ಈ ನಿರ್ಬಂಧಗಳನ್ನು ತೆಗೆದುಹಾಕಿದೆ, ಇದರಿಂದಾಗಿ ಮಹಿಳೆಯರು ಹೊಸ ಕ್ಷೇತ್ರಗಳಲ್ಲಿ ಹಕ್ಕುಗಳನ್ನು ಪಡೆಯಲು ಸಾಧ್ಯವಾಯಿತು ಎಂದರು. ಕ್ರೀಡೆಯಿಂದ ಬಾಹ್ಯಾಕಾಶದವರೆಗೆ, ಮಹಿಳೆಯರು ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ರಾಷ್ಟ್ರ ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ ಎಂದು ಶ್ರೀ ನರೇಂದ್ರ ಮೋದಿ ಬಲವಾಗಿ ಪ್ರತಿಪಾದಿಸಿದರು. ಸಮಾಜದ ಪ್ರತಿಯೊಂದು ವರ್ಗ ಮತ್ತು ವಿಭಾಗವು ಈಗ ನವೀಕೃತ ಆತ್ಮವಿಶ್ವಾಸದಿಂದ ಅಭಿವೃದ್ಧಿ ಹೊಂದಿದ ಭಾರತದ ಕನಸಿಗೆ ಕೊಡುಗೆ ನೀಡುತ್ತಿದೆ ಎಂದು ಹೇಳಿದ ಪ್ರಧಾನಿ, ಸ್ವಚ್ಛ ಭಾರತ ಮಿಷನ್, ಪರಿಸರ ಅಭಿಯಾನಗಳು, ಅಮೃತ ಸರೋವರಗಳ ನಿರ್ಮಾಣ ಮತ್ತು ಸಿರಿಧಾನ್ಯಗಳ ಜಾಗೃತಿ ಅಭಿಯಾನಗಳಂತಹ ಉಪಕ್ರಮಗಳನ್ನು ಉಲ್ಲೇಖಿಸಿದರು. ಈ ಪ್ರಯತ್ನಗಳು 140 ಕೋಟಿ ಭಾರತೀಯರ ಬಲದಿಂದ ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಮನೋಭಾವದ ಮೂಲಕ ಪ್ರಗತಿ ಸಾಧಿಸುತ್ತಿವೆ ಎಂದು ಅವರು ಒತ್ತಿ ಹೇಳಿದರು.
'ಶಿಕ್ಷಣದ ಮೂಲಕ ಜ್ಞಾನೋದಯ, ಸಂಘಟನೆಯ ಮೂಲಕ ಶಕ್ತಿ ಮತ್ತು ಕೈಗಾರಿಕೆಯ ಮೂಲಕ ಸಮೃದ್ಧಿ' ಎಂದು ಘೋಷಿಸಿದ ಶ್ರೀ ನಾರಾಯಣ ಗುರುಗಳ ಕಾಲಾತೀತ ದೂರದೃಷ್ಟಿಯನ್ನು ಪ್ರಮುಖವಾಗಿ ಉಲ್ಲೇಖಿಸಿದ ಶ್ರೀ ನರೇಂದ್ರ ಮೋದಿ, 'ಶ್ರೀ ನಾರಾಯಣ ಗುರುಗಳು ಈ ದೂರದೃಷ್ಟಿಯನ್ನು ಅಭಿವ್ಯಕ್ತಗೊಳಿಸಿದ್ದಲ್ಲದೆ, ಅದನ್ನು ಸಾಕಾರಗೊಳಿಸಲು ಪ್ರಮುಖ ಸಂಸ್ಥೆಗಳ ಅಡಿಪಾಯವನ್ನೂ ಹಾಕಿದರು' ಎಂದು ಹೇಳಿದರು. ಶಿವಗಿರಿಯಲ್ಲಿಯೇ ಗುರೂಜಿ ಸರಸ್ವತಿ ದೇವಿಗೆ ಮೀಸಲಾದ ಶಾರದಾ ಮಠವನ್ನು ಸ್ಥಾಪಿಸಿದರು ಎಂದು ಪ್ರಧಾನಿ ಹೇಳಿದರು. ಶಿಕ್ಷಣವು ಸಮಾಜದ ಅಂಚಿನಲ್ಲಿರುವವರಿಗೆ ಉನ್ನತಿ ಮತ್ತು ವಿಮೋಚನೆಯ ಸಾಧನವಾಗಬೇಕು ಎಂಬ ನಂಬಿಕೆಯನ್ನು ಈ ಸಂಸ್ಥೆ ಪ್ರತಿಧ್ವನಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಗುರುದೇವರು ಆರಂಭಿಸಿದ ಪ್ರಯತ್ನಗಳು ಇಂದಿಗೂ ವಿಸ್ತರಿಸುತ್ತಿವೆ, ದೇಶಾದ್ಯಂತ ಹಲವಾರು ನಗರಗಳು, ಗುರುದೇವ ಕೇಂದ್ರಗಳು ಮತ್ತು ಶ್ರೀ ನಾರಾಯಣ ಸಾಂಸ್ಕೃತಿಕ ಮಿಷನ್ ಮಾನವೀಯತೆಯ ಕಲ್ಯಾಣಕ್ಕಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಶ್ರೀ ನರೇಂದ್ರ ಮೋದಿ ತೃಪ್ತಿ ವ್ಯಕ್ತಪಡಿಸಿದರು.
“ಶಿಕ್ಷಣ, ಸಂಘಟನೆ ಮತ್ತು ಕೈಗಾರಿಕಾ ಪ್ರಗತಿಯ ಮೂಲಕ ಸಾಮಾಜಿಕ ಕಲ್ಯಾಣದ ದೂರದೃಷ್ಟಿಯು ದೇಶದ ಸದ್ಯದ ನೀತಿಗಳು ಮತ್ತು ನಿರ್ಧಾರಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತಿವೆ" ಎಂದು ಪ್ರಧಾನಿ ಹೇಳಿದರು. ಹಲವು ದಶಕಗಳ ನಂತರ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ ಎಂದರು. ಈ ನೀತಿಯು ಶಿಕ್ಷಣವನ್ನು ಆಧುನೀಕರಿಸುತ್ತದೆ ಮತ್ತು ಹೆಚ್ಚು ಅಂತರ್ಗತಗೊಳಿಸುತ್ತದೆ ಮಾತ್ರವಲ್ಲದೆ ಮಾತೃಭಾಷೆಯಲ್ಲಿ ಕಲಿಕೆಗೆ ಇನ್ನೂ ಹೆಚ್ಚಿನ ಉತ್ತೇಜನ ನೀಡುತ್ತದೆ. ಈ ಉಪಕ್ರಮದಿಂದ ಸಮಾಜದ ಹಿಂದುಳಿದ ಮತ್ತು ಅಂಚಿನಲ್ಲಿರುವ ವರ್ಗಗಳು ಹೆಚ್ಚಿನ ಫಲಾನುಭವಿಗಳಾಗಲಿದ್ದಾರೆ ಎಂದು ಹೇಳಿದರು. ಕಳೆದ ದಶಕದಲ್ಲಿ ದೇಶಾದ್ಯಂತ ಸ್ಥಾಪಿಸಲಾದ ಹೊಸ ಐಐಟಿಗಳು, ಐಐಎಂಗಳು ಮತ್ತು ಏಮ್ಸ್‌ಗಳ ಸಂಖ್ಯೆ ಸ್ವಾತಂತ್ರ್ಯದ ನಂತರದ ಮೊದಲ 60 ವರ್ಷಗಳಲ್ಲಿ ನಿರ್ಮಿಸಲಾದವುಗಳ ಒಟ್ಟು ಮೊತ್ತವನ್ನು ಮೀರಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಅದರ ಪರಿಣಾಮವಾಗಿ ಬಡ ಮತ್ತು ಅನನುಕೂಲಕರ ಯುವಕರಿಗೆ ಉನ್ನತ ಶಿಕ್ಷಣದಲ್ಲಿ ಹೊಸ ಅವಕಾಶಗಳು ತೆರೆದುಕೊಂಡಿವೆ. ಕಳೆದ 10 ವರ್ಷಗಳಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ 400 ಕ್ಕೂಅಧಿಕ ಏಕಲವ್ಯ ವಸತಿ ಶಾಲೆಗಳನ್ನು ತೆರೆಯಲಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ತಲೆಮಾರುಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದ ಆದಿವಾಸಿ ಸಮುದಾಯಗಳ ಮಕ್ಕಳು ಈಗ ಪ್ರಗತಿ ಸಾಧಿಸುತ್ತಿದ್ದಾರೆ ಎಂದು ಅವರು ಪ್ರಸ್ತಾಪಿಸಿದರು. ಶಿಕ್ಷಣವು ಕೌಶಲ್ಯ ಮತ್ತು ಅವಕಾಶಗಳಿಗೆ ನೇರವಾಗಿ ಸಂಬಂಧಿಸಿದೆ ಎಂದು ಅವರು ಹೇಳಿದರು. ಕೌಶಲ್ಯ ಭಾರತದಂತಹ ಮಿಷನ್‌ಗಳು ಯುವಕರನ್ನು ಸ್ವಾವಲಂಬಿಗಳಾಗಲು ಸಬಲೀಕರಣಗೊಳಿಸುತ್ತಿವೆ. ದೇಶದ ಕೈಗಾರಿಕಾ ಪ್ರಗತಿಯನ್ನು ಒತ್ತಿ ಹೇಳಿದ ಶ್ರೀ ಮೋದಿ, ಖಾಸಗಿ ವಲಯದಲ್ಲಿನ ಪ್ರಮುಖ ಸುಧಾರಣೆಗಳು ಮತ್ತು ಮುದ್ರಾ ಯೋಜನೆ ಮತ್ತು ಸ್ಟ್ಯಾಂಡ್-ಅಪ್ ಇಂಡಿಯಾದಂತಹ ಯೋಜನೆಗಳು ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳಿಗೆ ಹೆಚ್ಚಿನ ಪ್ರಯೋಜನಗಳನ್ನುದೊರಕಿಸಿಕೊಡುತ್ತಿವೆ ಎಂದು ಹೇಳಿದರು.
"ಶ್ರೀ ನಾರಾಯಣ ಗುರುಗಳು ಬಲಿಷ್ಠ ಮತ್ತು ಸಬಲ ಭಾರತವನ್ನು ಕಲ್ಪಿಸಿಕೊಂಡರು, ಮತ್ತು ಆ ದೂರದೃಷ್ಟಿಯನ್ನು ಸಾಕಾರಗೊಳಿಸಲು, ಭಾರತವು ಆರ್ಥಿಕ, ಸಾಮಾಜಿಕ ಮತ್ತು ಮಿಲಿಟರಿ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಉಳಿಯಬೇಕು" ಎಂದು ಪ್ರಧಾನಿ ಹೇಳಿದರು. ದೇಶವು ಈ ಹಾದಿಯಲ್ಲಿ ಸ್ಥಿರವಾಗಿ ಸಾಗುತ್ತಿದೆ ಮತ್ತು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಮುನ್ನಡೆಯುತ್ತಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ಭಾರತದ ಶಕ್ತಿಯನ್ನು ಇಡೀ ವಿಶ್ವ ಕಂಡಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಆಪರೇಷನ್ ಸಿಂಧೂರ್ ಜಾಗತಿಕ ವೇದಿಕೆಯಲ್ಲಿ ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ಮತ್ತು ರಾಜಿಯಿಲ್ಲದ ನೀತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದೆ ಎಂದು ಉಲ್ಲೇಖಿಸಿದರು. ಭಾರತೀಯ ನಾಗರಿಕರ ರಕ್ತವನ್ನು ಚೆಲ್ಲುವ ಭಯೋತ್ಪಾದಕರಿಗೆ ಯಾವುದೇ ಆಶ್ರಯ ಸುರಕ್ಷಿತವಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು.
“ಭಾರತವು ಇಂದು ರಾಷ್ಟ್ರೀಯ ಹಿತಾಸಕ್ತಿಗೆ ಸೂಕ್ತವಾದದ್ದನ್ನು ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ" ಎಂದು ಶ್ರೀ ನರೇಂದ್ರ ಮೋದಿ ಹೇಳಿದರು, ಮಿಲಿಟರಿ ಅಗತ್ಯಗಳಿಗಾಗಿ ವಿದೇಶಿ ರಾಷ್ಟ್ರಗಳ ಮೇಲೆ ದೇಶವು ಅವಲಂಬನೆಯನ್ನು ನಿರಂತರವಾಗಿ ತಗ್ಗಿಸಲಾಗುತ್ತಿದೆ ಎಂದು ಬಲವಾಗಿ ಪ್ರಸ್ತಾಪಿಸಿದರು. ರಕ್ಷಣಾ ವಲಯದಲ್ಲಿ ಭಾರತ ಸ್ವಾವಲಂಬಿಯಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. ಆಪರೇಷನ್ ಸಿಂಧೂರ್ ಸಮಯದಲ್ಲಿ ಈ ಬದಲಾವಣೆ ಸ್ಪಷ್ಟವಾಗಿ ಕಂಡುಬಂದಿದೆ ಎಂದ ಪ್ರಧಾನಿ, ಅಲ್ಲಿ ಭಾರತೀಯ ಪಡೆಗಳು ದೇಶೀಯವಾಗಿ ತಯಾರಿಸಿದ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು 22 ನಿಮಿಷಗಳಲ್ಲಿ ಶತ್ರುವನ್ನು ಶರಣಾಗುವಂತೆ ಮಾಡಿದವು. ಮುಂಬರುವ ದಿನಗಳಲ್ಲಿ, ಭಾರತದಲ್ಲಿ ತಯಾರಾದ ಶಸ್ತ್ರಾಸ್ತ್ರಗಳು ಜಾಗತಿಕ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಷ್ಟ್ರದ ಆಶೋತ್ತರಗಳನ್ನು ಈಡೇರಿಸಲು, ಶ್ರೀ ನಾರಾಯಣ ಗುರುಗಳ ಬೋಧನೆಗಳನ್ನು ಪ್ರತಿಯೊಬ್ಬ ನಾಗರಿಕರೂ ಪಾಲನೆ ಮಾಡುವುದು ಅತ್ಯಗತ್ಯ ಎಂದು ಒತ್ತಿ ಹೇಳಿದ ಪ್ರಧಾನಿ, ಸರ್ಕಾರ ಆ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಶ್ರೀ ನಾರಾಯಣ ಗುರುಗಳ ಜೀವನಕ್ಕೆ ಸಂಬಂಧಿಸಿದ ಯಾತ್ರಾ ಸ್ಥಳಗಳನ್ನು ಸಂಪರ್ಕಿಸಲು ಶಿವಗಿರಿ ಸರ್ಕ್ಯೂಟ್‌ನ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು. ಶ್ರೀ ನಾರಾಯಣ ಗುರುಗಳ ಆಶೀರ್ವಾದ ಮತ್ತು ಬೋಧನೆಗಳು ಅಮೃತ ಕಾಲದ ಮೂಲಕ ರಾಷ್ಟ್ರದ ಪ್ರಯಾಣದಲ್ಲಿ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ ಎಂದು ಶ್ರೀ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಭಾರತದ ಜನರು ಒಗ್ಗೂಡಿ ಅಭಿವೃದ್ಧಿ ಹೊಂದಿದ ರಾಷ್ಟ್ರದ ಕನಸನ್ನು ನನಸಾಗಿಸುತ್ತಾರೆ ಎಂದು ಪುನರುಚ್ಚಸಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಪ್ರಧಾನಮಂತ್ರಿ ಅವರು ಶಿವಗಿರಿ ಮಠದ ಎಲ್ಲಾ ಸಂತರಿಗೆ ಮತ್ತೊಮ್ಮೆ ತಮ್ಮ ಗೌರವವನ್ನು ಸಮರ್ಪಿಸಿದರು. ಶ್ರೀ ನಾರಾಯಣ ಗುರುಗಳ ಆಶೀರ್ವಾದ ಎಲ್ಲರ ಮೇಲೂ ಸದಾ ಇರಲಿ ಎಂದು ಹಾರೈಸಿದರು.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಶ್ರೀ ಜಾರ್ಜ್ ಕುರಿಯನ್, ಶ್ರೀ ನಾರಾಯಣ ಧರ್ಮ ಸಂಘಂ ಟ್ರಸ್ಟ್‌ನ ಪೂಜ್ಯ ಸಂತರು ಮತ್ತು ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಭಾರತದ ಇಬ್ಬರು ಶ್ರೇಷ್ಠ ಆಧ್ಯಾತ್ಮಿಕ ಮತ್ತು ನೈತಿಕ ನಾಯಕರಾದ ಶ್ರೀ ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧಿಯವರ ನಡುವಿನ ಐತಿಹಾಸಿಕ ಸಂವಾದವು 1925ರ ಮಾರ್ಚ್ 12 ರಂದು ಶಿವಗಿರಿ ಮಠದಲ್ಲಿ ಮಹಾತ್ಮ ಗಾಂಧಿಯವರ ಭೇಟಿಯ ಸಮಯದಲ್ಲಿ ನಡೆಯಿತು ಮತ್ತು ಇದು ವೈಕಂ ಸತ್ಯಾಗ್ರಹ, ಧಾರ್ಮಿಕ ಮತಾಂತರಗಳು, ಅಹಿಂಸೆ, ಅಸ್ಪೃಶ್ಯತೆಯ ನಿರ್ಮೂಲನೆ, ಮೋಕ್ಷವನ್ನು ಸಾಧಿಸುವುದು, ದೀನದಲಿತರ ಏಳಿಗೆ ಸೇರಿದಂತೆ ಇತರ ವಿಷಯಗಳ ಸುತ್ತ ಕೇಂದ್ರೀಕೃತವಾಗಿತ್ತು.
ಶ್ರೀ ನಾರಾಯಣ ಧರ್ಮ ಸಂಘಮ್ ಟ್ರಸ್ಟ್ ಆಯೋಜಿಸಿರುವ ಈ ಆಚರಣೆಯು ಆಧ್ಯಾತ್ಮಿಕ ನಾಯಕರು ಮತ್ತು ಇತರ ಸದಸ್ಯರನ್ನು ಒಟ್ಟುಗೂಡಿಸಿ ಭಾರತದ ಸಾಮಾಜಿಕ ಮತ್ತು ನೈತಿಕ ರಚನೆಯನ್ನು ರೂಪಿಸುವಲ್ಲಿ ಮುಂದುವರಿದಿರುವ ದಾರ್ಶನಿಕ ಸಂವಾದವನ್ನು ಪ್ರತಿಬಿಂಬಿಸಲು ಮತ್ತು ಸ್ಮರಿಸಲು ಒಗ್ಗೂಡಿಸುತ್ತದೆ. ಶ್ರೀ ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧಿ ಇಬ್ಬರೂ ಪ್ರತಿಪಾದಿಸಿದ ಸಾಮಾಜಿಕ ನ್ಯಾಯ, ಏಕತೆ ಮತ್ತು ಆಧ್ಯಾತ್ಮಿಕ ಸಾಮರಸ್ಯದ ಸಮಾನಹಂಚಿಕೆಯ ದೂರದೃಷ್ಟಿಗೆ ಇದು ಗೌರವದ ದ್ಯೋತ್ಯಕವಾಗಿದೆ.
*****
(Release ID: 2139440)
Read this release in:
Odia
,
English
,
Urdu
,
Hindi
,
Marathi
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam