ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಎಫ್‌ಎಸ್‌ಎಸ್‌ಎಐನ ವಿಶ್ವ ಆಹಾರ ಸುರಕ್ಷತಾ ದಿನ 2025 ರ ಅಂಗವಾಗಿ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ನಡೆದ 'ಸುರಕ್ಷಿತ ಮತ್ತು ಆರೋಗ್ಯಕರ ಆಹಾರ ಸೇವನೆಯಿಂದ ಬೊಜ್ಜು ತಡೆಯಿರಿ' ಎಂಬ ವಿಷಯ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ ಪಿ ನಡ್ಡಾ


ಉತ್ತಮ ಪೋಷಣೆ ಮತ್ತು ಸುಧಾರಿತ ಸಾರ್ವಜನಿಕ ಆರೋಗ್ಯಕ್ಕಾಗಿ ಜನಾಂದೋಲನವನ್ನು ರೂಪಿಸಲು ಪ್ರಯತ್ನಿಸುವ ಈಟ್ ರೈಟ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಬಹುಭಾಷಾ, ಸಂಜ್ಞಾ ಭಾಷೆಯ ಸಂಯೋಜನೆ ಮತ್ತು ಬಹು-ವೇದಿಕೆ ಮಾಧ್ಯಮ ಸಹಯೋಗದೊಂದಿಗೆ  ಬೊಜ್ಜು ತಡೆಯಲು ಎಫ್‌ಎಸ್‌ಎಸ್‌ಎಐನ ಸಮಗ್ರ ಅಭಿಯಾನಕ್ಕೆ ಚಾಲನೆ  

ಈ ವರ್ಷದ ವಿಶ್ವ ಆಹಾರ ಸುರಕ್ಷತಾ ದಿನದ ಧ್ಯೇಯವಾಕ್ಯವಾದ "ಆಹಾರ ಸುರಕ್ಷತೆ: ವಿಜ್ಞಾನದ ಕ್ರಮ" ಕ್ಕೆ ಬದ್ಧತೆಯನ್ನು ಪುನರುಚ್ಚರಿಸಿದ ಕೇಂದ್ರ ಆರೋಗ್ಯ ಸಚಿವರು.

ಬೊಜ್ಜು ತಡೆಯಲು ತೈಲ ಬಳಕೆಯ ಆಹಾರ ಸೇವನೆಯನ್ನು ಶೇ. 10 ರಷ್ಟು ಕಡಿಮೆ ಮಾಡಬೇಕು ಎಂಬ ಪ್ರಧಾನಮಂತ್ರಿಯವರ ಸ್ಪಷ್ಟ ಕರೆಯ ಪುನರುಚ್ಚಾರ

ಆರೋಗ್ಯಕರ ಆಹಾರ ಪದ್ಧತಿಯ ಅಗತ್ಯವನ್ನು ಎತ್ತಿ ತೋರಿಸಿ, ಆರೋಗ್ಯಕರ ಆಹಾರ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸಲು ಎಲ್ಲಾ ಪಾಲುದಾರರ ಭಾಗವಹಿಸುವಿಕೆಯನ್ನು ಖಾತ್ರಿಗೊಳಿಸಿ; ಸಾಂಪ್ರದಾಯಿಕ ಆಹಾರ ಪದ್ಧತಿಗಳನ್ನು ಪುನರುಜ್ಜೀವನಗೊಳಿಸಲು ಒತ್ತಾಯ

ವಿಕಸಿತ ಭಾರತಕ್ಕೆ ಆರೋಗ್ಯಕರ ಭಾರತ ಅಗತ್ಯ ಮತ್ತು ಅದನ್ನು ಸರಿಯಾದ ರೀತಿಯ ಆಹಾರ, ಆರೋಗ್ಯಕರ ಆಹಾರ ಪದ್ಧತಿ ಹಾಗು  ಜೀವನಶೈಲಿಯ ಮೂಲಕ ಖಚಿತಪಡಿಸಿಕೊಳ್ಳಬಹುದು: ಶ್ರೀ ನಡ್ಡಾ

‘ಸಮರ್ಪಕವಾದ  ಆಹಾರವನ್ನು ಸೇವಿಸಿ - ಶಾಲೆಯಲ್ಲಿ ಸರಿಯಾಗಿ ತಿನ್ನಲು ನಿಮ್ಮ ಮಾರ್ಗದರ್ಶಿ”, ಈಟ್ ರೈಟ್ ಸ್ಕೂಲ್ ಉಪಕ್ರಮದ ಅಡಿಯಲ್ಲಿ ಪ್ರಮುಖ ಸಂಪನ್ಮೂಲವನ್ನು ಸಹ ಈ

Posted On: 07 JUN 2025 5:43PM by PIB Bengaluru

2025ರ ವಿಶ್ವ ಆಹಾರ ಸುರಕ್ಷತಾ ದಿನದ ಅಂಗವಾಗಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಇಂದು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್) "ಸುರಕ್ಷಿತ ಮತ್ತು ಆರೋಗ್ಯಕರ ಆಹಾರ ಸೇವನೆಯಿಂದ ಬೊಜ್ಜು ತಡೆಯಿರಿ" ಎಂಬ ವಿಶೇಷ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್.ಎಸ್.ಎಸ್.ಎ.ಐ-FSSAI) ಆಯೋಜಿಸಿದ ಕಾರ್ಯಕ್ರಮವು ಬೊಜ್ಜಿನಂತಹ ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಗಟ್ಟುವಲ್ಲಿ ಆಹಾರ ಸುರಕ್ಷತೆ ಮತ್ತು ಪೋಷಣೆಯ ನಿರ್ಣಾಯಕ ಪಾತ್ರದ ಮೇಲೆ ಗಮನ ಕೇಂದ್ರೀಕರಿಸಿದೆ,  ಆ ಮೂಲಕ ಇದು ಸಾಂಪ್ರದಾಯಿಕ ಮತ್ತು ಸಮಗ್ರ ಆರೋಗ್ಯಕರ ಆಹಾರ ಪದ್ಧತಿಗಳ ಮೂಲಕ ಆರೋಗ್ಯವನ್ನು ಉತ್ತೇಜಿಸುವ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕರೆಯನ್ನು ಪ್ರತಿಧ್ವನಿಸಿತು.

ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಯ ಸಚಿವರಾದ ಡಾ. ಶರಣಪ್ರಕಾಶ್ ಆರ್ ಪಾಟೀಲ್, ಸಂಸತ್ ಸದಸ್ಯರಾದ, ಶ್ರೀ ಲಹರ್ ಸಿಂಗ್ ಸಿರೋಯಾ ಮತ್ತು ಶ್ರೀ ಪಿ ಸಿ ಮೋಹನ್, ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲಿಲಾ ಶ್ರೀವಾಸ್ತವ ಹಾಗು ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ತಮ್ಮ ದಿಕ್ಸೂಚಿ  ಭಾಷಣದಲ್ಲಿ ಶ್ರೀ ನಡ್ಡಾ, ಬೊಜ್ಜು ತಡೆಗಟ್ಟುವಿಕೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಬಗ್ಗೆ ಪ್ರಧಾನ ಮಂತ್ರಿಯವರ ಆದ್ಯತೆಯನ್ನು ಪುನರುಚ್ಚರಿಸಿದರು. ಹೆಚ್ಚುತ್ತಿರುವ ಬೊಜ್ಜು ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹೊರೆಯನ್ನು ಪರಿಹರಿಸುವ ತುರ್ತು ಅಗತ್ಯವನ್ನು ಒತ್ತಿ ಹೇಳಿದ ಶ್ರೀ ನಡ್ಡಾ, "ಬೊಜ್ಜು ತಡೆಯುವ ಜಾಗೃತಿ ಉಪಕ್ರಮವು ಕಳಪೆ ಆಹಾರ ಪದ್ಧತಿಗಳ ಆರೋಗ್ಯದ ಅಪಾಯಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಮತ್ತು ಸಮತೋಲಿತ, ಪೌಷ್ಟಿಕ ಆಹಾರವನ್ನು ಸ್ವೀಕರಿಸಲು ಅವರನ್ನು ಪ್ರೋತ್ಸಾಹಿಸುವ ಸಕಾಲಿಕ ಹೆಜ್ಜೆಯಾಗಿದೆ" ಎಂದು ಹೇಳಿದರು ಮತ್ತು "ವಿಕಸಿತ ಭಾರತಕ್ಕೆ, ಆರೋಗ್ಯಕರ ಭಾರತ ಅಗತ್ಯ ಮತ್ತು ಅದನ್ನು ಸರಿಯಾದ ರೀತಿಯ ಆಹಾರ, ಆರೋಗ್ಯಕರ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಖಚಿತಪಡಿಸಿಕೊಳ್ಳಬಹುದು" ಎಂದು ಒತ್ತಿ ಹೇಳಿದರು.

ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಖಚಿತಪಡಿಸಿಕೊಳ್ಳುವ ಸಮತೋಲಿತ ಆಹಾರದ ಪ್ರಯೋಜನಗಳ ಜೊತೆಗೆ ಸುರಕ್ಷಿತ, ಆರೋಗ್ಯಕರ ಮತ್ತು ಪೌಷ್ಟಿಕ ಆಹಾರದ ಮಹತ್ವವನ್ನು ಕೇಂದ್ರ ಆರೋಗ್ಯ ಸಚಿವರು ಒತ್ತಿ ಹೇಳಿದರು. ಈ ವರ್ಷದ ವಿಶ್ವ ಆಹಾರ ಸುರಕ್ಷತಾ ದಿನದ ಶೀರ್ಷಿಕೆಯಾದ  "ಆಹಾರ ಸುರಕ್ಷತೆ: ವಿಜ್ಞಾನದ ಕ್ರಮಾನುಷ್ಠಾನ” ಕ್ಕೆ ಬದ್ಧತೆಯನ್ನು ಶ್ರೀ ನಡ್ಡಾ ಪುನರುಚ್ಚರಿಸಿದರು.

ಹೆಚ್ಚುತ್ತಿರುವ ಬೊಜ್ಜಿನ ಆತಂಕಕಾರಿ ಪ್ರವೃತ್ತಿಯನ್ನು ಗುರುತಿಸುತ್ತಾ, ಐಸಿಎಂಆರ್-ಇಂಡಿಯಾ ಡಯಾಬಿಟಿಸ್ (ಇಂಡಿಯಾಬ್) ಅಧ್ಯಯನವನ್ನು ಉಲ್ಲೇಖಿಸಿ, ಶ್ರೀ ನಡ್ಡಾ ಅವರು, "2008 ರಿಂದ 2020 ರ ನಡುವೆ ಭಾರತದ ನಗರ ಪ್ರದೇಶಗಳಲ್ಲಿ ಬೊಜ್ಜು 39.6% ರಷ್ಟು ಹೆಚ್ಚಾಗಿದೆ, ಗ್ರಾಮೀಣ ಪ್ರದೇಶಗಳಲ್ಲಿ ಇದು 23.1% ರಷ್ಟು ಹೆಚ್ಚಾಗಿದೆ" ಎಂದು ಹೇಳಿದರು. 2050 ರ ವೇಳೆಗೆ ದೇಶದ 1/3 ಜನಸಂಖ್ಯೆಯು ಬೊಜ್ಜಿನ ಸಮಸ್ಯೆಯನ್ನು ಹೊಂದಿರುತ್ತದೆ ಎಂದು ಅಂದಾಜಿಸಿದ  ಮತ್ತೊಂದು ಅಧ್ಯಯನವನ್ನು ಸಹ ಅವರು ಉಲ್ಲೇಖಿಸಿದರು.

ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಅನಾರೋಗ್ಯಕರ ಆಹಾರಗಳು ಮತ್ತು ಆಹಾರ ಪದ್ಧತಿಗಳ ಸವಾಲನ್ನು, ಒತ್ತಿ ಹೇಳಿದ ಶ್ರೀ ನಡ್ಡಾ, ಮಕ್ಕಳು ಅನಾರೋಗ್ಯಕರ ಆಹಾರಗಳು ಮತ್ತು ಅವುಗಳ ಜಾಹೀರಾತುಗಳ ಕಡೆಗೆ ಆಕರ್ಷಿತರಾಗುತ್ತಾರೆ. ಇದರಿಂದಾಗಿ ಕಲಬೆರಕೆ ಆಹಾರಗಳ ವಿಷಯದಲ್ಲಿ ಸುಲಭದಲ್ಲಿ ಅಪಾಯಕ್ಕೆ ಸಿಲುಕುವ  ಗುಂಪು ಮಕ್ಕಳದು ಎಂದು ಒತ್ತಿ ಹೇಳಿದರು ಸವಾಲನ್ನು ಎದುರಿಸಲು, ಉತ್ತಮ ಪರಿಣಾಮ ಬೀರುವ ಜಾಗೃತಿಯನ್ನು ಚಿಕ್ಕ ವಯಸ್ಸಿನಲ್ಲಿಯೇ ಖಚಿತಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಅತಿಯಾಗಿ ಸಂಸ್ಕರಿಸಿದ ಆಹಾರಗಳು ಆರೋಗ್ಯದ ಮೇಲೆ ಬೀರುವ ಋಣಾತ್ಮಕ ಪರಿಣಾಮವನ್ನು ಎತ್ತಿ ತೋರಿಸಿದ ಶ್ರೀ ನಡ್ಡಾ, ಎಲ್ಲರೂ ತಮ್ಮ ಆಹಾರ ಪದ್ಧತಿಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಪೌಷ್ಟಿಕ ಆಹಾರವನ್ನು ಅನುಸರಿಸಬೇಕು ಎಂದು ಆಗ್ರಹಿಸಿದರು. ಪೌಷ್ಟಿಕ ಆಹಾರವು ವ್ಯಕ್ತಿಗಳ ಮನಸ್ಸು ಮತ್ತು ದೇಹದಲ್ಲಿ ಆರೋಗ್ಯಕರ ಬದಲಾವಣೆಗಳನ್ನು ತರುತ್ತದೆ. "ಸರಿಯಾಗಿ ತಿನ್ನುವುದು ಯಾರೇ ಆದರೂ ಅದು ಅವರ ಹಕ್ಕು. ಸರಿಯಾಗಿ ತಿನ್ನುವುದು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವುದು ಸರ್ಕಾರ, ಉದ್ಯಮ, ಶೈಕ್ಷಣಿಕ ಮತ್ತು ವ್ಯಕ್ತಿಗಳ ಸಾಮೂಹಿಕ ಜವಾಬ್ದಾರಿಯಾಗಿದೆ" ಎಂದೂ ಅವರು ಹೇಳಿದರು.

ತೈಲ ಬಳಸಿ ಮಾಡಿದ ತಿಂಡಿಗಳ ಸೇವನೆಯನ್ನು ಶೇ. 10 ರಷ್ಟು ಕಡಿಮೆ ಮಾಡಲು ಪ್ರಧಾನಮಂತ್ರಿಯವರು ನೀಡಿರುವ ಸ್ಪಷ್ಟ ಕರೆಗೆ ಸ್ಪಂದಿಸಲು ಮತ್ತು ಉಪ್ಪು ಸೇವನೆಯನ್ನು ಕಡಿಮೆ ಮಾಡಲು ಸರಿಯಾದ ಆಹಾರ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಎಲ್ಲಾ ಭಾಗೀದಾರರನ್ನು/ ಪಾಲುದಾರರನ್ನು ಶ್ರೀ ನಡ್ಡಾ ಆಗ್ರಹಿಸಿದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ಎಫ್‌ಎಸ್‌ಎಸ್‌ಎಐ ಅಭಿವೃದ್ಧಿಪಡಿಸಿರುವ ನವೀನ ನಡವಳಿಕೆ/ವರ್ತನೆ ಬದಲಾವಣೆ ತಂತ್ರವನ್ನು ಕುರಿತಂತೆ ಸಕ್ಕರೆ ಮತ್ತು ತೈಲ ಮಂಡಳಿಗಳು  ಶಾಲೆಗಳು, ಕೆಲಸದ ಸ್ಥಳಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಕೈಗೊಂಡಿರುವ ವ್ಯಾಪಕ ಪ್ರಚಾರವನ್ನು ಶ್ರೀ ನಡ್ಡಾ ಶ್ಲಾಘಿಸಿದರು. ಇವು ಪ್ರಬಲ ದೃಶ್ಯ ಸಾಕ್ಷ್ಯ ಸಾಧನಗಳಾಗಿ ಕಾರ್ಯನಿರ್ವಹಿಸುತ್ತವೆ, ದೈನಂದಿನ ಆಹಾರ ಪದಾರ್ಥಗಳಲ್ಲಿ ಅಡಗಿರುವ ಸಕ್ಕರೆ ಮತ್ತು ಕೊಬ್ಬಿನ ಬಗ್ಗೆ ಸ್ಪಷ್ಟ, ಸಂಬಂಧಿತ ಮಾಹಿತಿಯನ್ನು ಪ್ರದರ್ಶಿಸುತ್ತವೆ. ಈ ಸಂದೇಶಗಳನ್ನು ಸಾಮಾನ್ಯ ಸ್ಥಳಗಳಾದ ಕ್ಯಾಂಟೀನ್‌ಗಳು, ಕಾರಿಡಾರ್‌ಗಳು, ಸಭಾ ಕೊಠಡಿಗಳಲ್ಲಿ ಪ್ರಚುರ ಮಾಡುವ  ಮೂಲಕ, ಅವು ವ್ಯಕ್ತಿಗಳು ಆರೋಗ್ಯಕರ ಆಯ್ಕೆಗಳನ್ನು ಮಾಡಲು ಸೂಕ್ಷ್ಮವಾಗಿ ಪ್ರೇರೇಪಿಸುತ್ತವೆ. ಈ ಉಪಕ್ರಮವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು, ಸಕ್ಕರೆಯೊಂದಿಗೆ ಕ್ಯಾಲೋರಿ ಸೇವನೆಯನ್ನು ಸಹ ಹೈಲೈಟ್ ಮಾಡಬೇಕು ಮತ್ತು ಪಠ್ಯಕ್ರಮದಲ್ಲಿ ಜಾಗೃತಿಯನ್ನು ಅಳವಡಿಸಲು ಮುಂದಾಗಬೇಕು ಎಂದು ಅವರು ಸೂಚಿಸಿದರು.

ಸಾಂಪ್ರದಾಯಿಕ ಆಹಾರಗಳ ಮಹತ್ವವನ್ನು ಒತ್ತಿ ಹೇಳಿದ ಶ್ರೀ ನಡ್ಡಾ, " ಸಿರಿಧಾನ್ಯಗಳಂತಹ  ಆಹಾರಪದಾರ್ಥಗಳನ್ನು  ಒಳಗೊಂಡಿರುವ ಸಾಂಪ್ರದಾಯಿಕ ಆಹಾರಗಳಿಗೆ ಹೋಗಿ ಎಲ್ಲರಿಗೂ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ಪುನರುಜ್ಜೀವನಗೊಳಿಸಬೇಕು" ಎಂದೂ ಒತ್ತಾಯಿಸಿದರು. ಮಾಹಿತಿಯುಕ್ತ ಆಯ್ಕೆಗಳು ಮತ್ತು ಜೀವನಶೈಲಿಯ ಬದಲಾವಣೆಗಳ ಮಹತ್ವವನ್ನು ಅವರು ಮತ್ತಷ್ಟು ಎತ್ತಿ ತೋರಿಸಿದರು ಮತ್ತು ಆಹಾರ ಸುರಕ್ಷತಾ ಅಭ್ಯಾಸಗಳು ನಮ್ಮ ಜೀವನದ ಭಾಗವಾಗಬೇಕಾದ ನಿರಂತರ ಪ್ರಕ್ರಿಯೆಯಾಗಿದ್ದು, ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸುವಾಗ ಅದು  'ಸಮರ್ಪಕವಾಗಿ ತಿನ್ನುವ' ಚಳುವಳಿಯಾಗಿ ಬದಲಾಗಬೇಕು ಎಂದೂ  ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲಿಲಾ ಶ್ರೀವಾಸ್ತವ ಅವರು ತಮ್ಮ ವಿಶೇಷ ಭಾಷಣದಲ್ಲಿ, ಸುರಕ್ಷಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಸಂಸ್ಕೃತಿಯನ್ನು ನಿರ್ಮಾಣ ಮಾಡಲು ಆ ಬಗ್ಗೆ ಮುಂಚಿತವಾಗಿ  ಸಂವೇದನೆ ಮೂಡಿಸಬೇಕಾದ ಮತ್ತು ಅಂತರ-ವಲಯಗಳ ಸಹಯೋಗದ ಕ್ರಮದ ಮಹತ್ವವನ್ನು ಒತ್ತಿ ಹೇಳಿದರು.

ತಮ್ಮ ವಿಶೇಷ ಭಾಷಣದಲ್ಲಿ, ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲಿಲಾ ಶ್ರೀವಾಸ್ತವ ಅವರು ವಿಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ಪ್ರಯತ್ನಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಎಲ್ಲರಿಗೂ ಸುರಕ್ಷಿತ ಆಹಾರವನ್ನು ಖಚಿತಪಡಿಸಿಕೊಳ್ಳಲು ಕಣ್ಗಾವಲು ಮತ್ತು ಅಪಾಯದ ಮೌಲ್ಯಮಾಪನ ವ್ಯವಸ್ಥೆಗಳನ್ನು ತರುವ ಪ್ರಯತ್ನಗಳನ್ನು ಎತ್ತಿ ತೋರಿಸಿದರು. ಆರೋಗ್ಯಕರ ಆಹಾರ ಪದ್ಧತಿಗಳ ಮಹತ್ವವನ್ನು ಅವರು ಒತ್ತಿ ಹೇಳಿದರು ಮತ್ತು ಎಲ್ಲಾ ಭಾಗೀದಾರರು/ಪಾಲುದಾರರು ಆಹಾರ ಸುರಕ್ಷತೆಯ ಬಗ್ಗೆ ಜಾಗರೂಕರಾಗಿರಬೇಕು ಹಾಗು  ತಿಳಿದುಕೊಳ್ಳಬೇಕು ಮತ್ತು ಹಾನಿಕಾರಕ ಅಂಶಗಳನ್ನು ಹೊಂದಿರುವ ಆಹಾರ ಸೇವನೆಯನ್ನು ತಪ್ಪಿಸಬೇಕು ಎಂದೂ  ಆಗ್ರಹಿಸಿದರು.

"ಸ್ಥೂಲಕಾಯವನ್ನು ತಡೆಯಲು ತೈಲ ಸೇವನೆಯನ್ನು ಕಡಿಮೆ ಮಾಡುವ ಪ್ರಧಾನಮಂತ್ರಿಯವರ ಕರೆ ಕೇವಲ ಘೋಷಣೆಯಲ್ಲ, ಬದಲು ಅದು ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಒಂದು ಸ್ಪಷ್ಟ ಕರೆ" ಎಂದು ಅವರು ಒತ್ತಿ ಹೇಳಿದರು. "ಭಾರತವನ್ನು ಸಾಂಕ್ರಾಮಿಕವಲ್ಲದ ರೋಗಗಳಿಂದ (NCDs) ಮುಕ್ತಗೊಳಿಸಲು, ಸರಿಯಾಗಿ ತಿನ್ನುವುದು ಮತ್ತು ಆರೋಗ್ಯಕರವಾಗಿ ತಿನ್ನುವುದು, ಎಣ್ಣೆ ಸೇವನೆಯನ್ನು ಕಡಿಮೆ ಮಾಡುವುದು ಮತ್ತು ಎಲ್ಲಾ ಪಾಲುದಾರರ ಒಗ್ಗಟ್ಟಿನ ಪ್ರಯತ್ನಗಳ ಮೂಲಕ ಆರೋಗ್ಯಕರ ಆಹಾರ ಪದ್ಧತಿಯ ಸಂದೇಶವನ್ನು ಹರಡುವುದು ಮುಖ್ಯ. ಆರೋಗ್ಯಕರ ಆಹಾರ ಆಯ್ಕೆಯು ಕೇವಲ ವೈಯಕ್ತಿಕವಾದುದಲ್ಲ, ಅದು  ಆರೋಗ್ಯಕರ ದೇಶದ ಉದ್ದೇಶಕ್ಕೆ ನೀಡುವ ಕೊಡುಗೆಯಾಗಿದೆ." ಎಂದರು.

ಭಾರತ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್, ಸರಿಯಾಗಿ ತಿನ್ನುವ ಮತ್ತು ಸ್ಥೂಲಕಾಯವನ್ನು ತಡೆಯುವ  ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳ  ಸೇವನೆಯನ್ನು 10% ರಷ್ಟು ಕಡಿಮೆ ಮಾಡುವ ಪ್ರಧಾನಮಂತ್ರಿಯವರ ಕರೆಯನ್ನು ಅವರು ಪುನರುಚ್ಚರಿಸಿದರು ಮತ್ತು ಮಕ್ಕಳಿಗೆ ಅವರ ಆಹಾರ ಆಯ್ಕೆಗಳ ಬಗ್ಗೆ ಜಾಗೃತಿ/ಅರಿವು ಮೂಡಿಸುವ ಅಗತ್ಯವನ್ನು ಒತ್ತಿ ಹೇಳಿದರು ಹಾಗು  ಆರೋಗ್ಯಕರ ಆಹಾರ ಪದ್ಧತಿಯನ್ನು ಖಚಿತಪಡಿಸಿಕೊಳ್ಳಲು ಸಮುದಾಯದ ಭಾಗವಹಿಸುವಿಕೆಯ ಅಗತ್ಯದತ್ತಲೂ ಅವರು ಬೆಟ್ಟು ಮಾಡಿದರು. ಬುದ್ದಿ ವಿಕಾಸಕ್ಕಾಗಿ  ಉತ್ತಮ ಮತ್ತು ಸರಿಯಾದ ಆಹಾರದ ಮಹತ್ವವನ್ನು ಅವರು ಒತ್ತಿ ಹೇಳಿದರು ಮತ್ತು ಶಾಲಾ ಶಿಕ್ಷಣ ಇಲಾಖೆಯು ಊಟದಲ್ಲಿ ಶ್ರೀ ಅನ್ನ (ಸಿರಿ ಧಾನ್ಯಗಳು) ಸೇರಿಸುವ ಉಪಕ್ರಮ ಸಹಿತ, ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಖಚಿತಪಡಿಸಿಕೊಳ್ಳಲು ದೈಹಿಕ ಶಿಕ್ಷಣ ಮತ್ತು ಯೋಗಕ್ಷೇಮದ ಮೇಲೆ ಒತ್ತು ನೀಡುವಂತಹ ಉಪಕ್ರಮಗಳನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.

ಕಾರ್ಯಕ್ರಮದಲ್ಲಿ ಎಫ್.ಎಸ್.ಎಸ್.ಎ.ಐ. (FSSAI) ಯ ಪ್ರಮುಖ ಕಾರ್ಯಕ್ರಮವಾದ ಈಟ್ ರೈಟ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ, ಬೊಜ್ಜು ತಡೆಯಲು ಜಾಗೃತಿ ಉಪಕ್ರಮವನ್ನು ಪ್ರಾರಂಭಿಸಲಾಯಿತು. ದೇಶದಲ್ಲಿ ಹೆಚ್ಚುತ್ತಿರುವ ಬೊಜ್ಜು ಪ್ರಮಾಣವನ್ನು ತಡೆಗಟ್ಟುವ ಬಗ್ಗೆ ಗೌರವಾನ್ವಿತ ಪ್ರಧಾನಮಂತ್ರಿಯವರು ನಿರಂತರ ಒತ್ತು ನೀಡುತ್ತಿದ್ದು, ಇದರಿಂದ ಸ್ಫೂರ್ತಿ ಪಡೆದ ಉಪಕ್ರಮವು, ಬೊಜ್ಜು ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಸಂಬಂಧಿಸಿದ ಆರೋಗ್ಯ ಅಪಾಯಗಳ ಬಗ್ಗೆ ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಹೆಚ್ಚಿನ ಜನರ ಒಳಗೊಳ್ಳುವಿಕೆ ಮತ್ತು ವಿಸ್ತಾರವಾಗಿ ತಲುಪುವಿಕೆಯನ್ನು  ಖಚಿತಪಡಿಸಿಕೊಳ್ಳಲು, ಈ ಉಪಕ್ರಮದ ಅಡಿಯಲ್ಲಿ ಸಂವಹನ ಸಾಮಗ್ರಿಗಳನ್ನು ಸಂಕೇತ ಭಾಷೆ ಮತ್ತು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಎಫ್.ಎಂ. ರೇಡಿಯೋ, ರೈಲ್ವೆ ಆಡಿಯೋ ಪ್ರಕಟಣೆಗಳು ಮತ್ತು ಡಿಜಿಟಲ್ ವೇದಿಕೆ (ಪ್ಲಾಟ್‌ಫಾರ್ಮ್‌) ಗಳು ಸೇರಿದಂತೆ ಮಾಧ್ಯಮಗಳ ಕಾರ್ಯತಂತ್ರದ ಮಿಶ್ರಣದೊಂದಿಗೆ, ಈ ಉಪಕ್ರಮವು ಉತ್ತಮ ಪೋಷಣೆ ಮತ್ತು ಸುಧಾರಿತ ಸಾರ್ವಜನಿಕ ಆರೋಗ್ಯಕ್ಕಾಗಿ ಸಾಮೂಹಿಕ ಆಂದೋಲನವನ್ನು ರೂಪಿಸಲು ಪ್ರಯತ್ನಿಸುತ್ತದೆ. ಈ ವಿಷಯದ ಭಾಗವಾಗಿ, ಪ್ರಸಿದ್ಧ ಬಾಣಸಿಗ ರಣವೀರ್ ಬ್ರಾರ್ ಅವರು ಬೊಜ್ಜು ತಡೆಯುವ ಅಭಿಯಾನಕ್ಕೆ ಬೆಂಬಲ ನೀಡುತ್ತಿರುವ ಮತ್ತು ತೈಲದಲ್ಲಿ ಕರಿದ ಆಹಾರ ಸೇವನೆಯನ್ನು ಕಡಿಮೆ ಮಾಡಲು ಜನರನ್ನು ಒತ್ತಾಯಿಸುತ್ತಿರುವ ವೀಡಿಯೊವನ್ನು ಸಹ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ಈಟ್ ರೈಟ್ ಸ್ಕೂಲ್ ಉಪಕ್ರಮದ ಅಡಿಯಲ್ಲಿ ಪ್ರಮುಖ ಸಂಪನ್ಮೂಲವಾದ 'ಈಟ್ ರೈಟ್ ಆಕ್ಟಿವಿಟಿ ಬುಕ್ - ಯುವರ್ ಗೈಡ್ ಟು ಈಟ್ ರೈಟ್ ಅಟ್ ಸ್ಕೂಲ್' ಅನ್ನು ಸಹ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಶಾಲಾ ಮಕ್ಕಳಲ್ಲಿ ಆಹಾರ ಸುರಕ್ಷತೆ, ನೈರ್ಮಲ್ಯ ಮತ್ತು ಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸಲು ವಿನ್ಯಾಸಗೊಳಿಸಲಾದ ಪುಸ್ತಕವು ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ಹಂತಗಳಲ್ಲಿ ಆಕರ್ಷಕ, ವಯಸ್ಸಿಗೆ ಸೂಕ್ತವಾದ ಚಟುವಟಿಕೆಗಳನ್ನು ಒಳಗೊಂಡಿದೆ. ಪ್ರಮುಖ ತಜ್ಞರಿಂದ ಅಭಿವೃದ್ಧಿಪಡಿಸಲಾದ ಇದು ಪಠ್ಯಕ್ರಮ ಮತ್ತು ಪಠ್ಯೇತರ ಕಲಿಕೆಯನ್ನು ಬೆಂಬಲಿಸುತ್ತದೆ ಮತ್ತು ಮಕ್ಕಳು ತಮ್ಮ ಶಾಲೆಗಳು ಹಾಗು ಕುಟುಂಬಗಳಲ್ಲಿ ಆರೋಗ್ಯಕರ ಆಹಾರಕ್ಕಾಗಿ ಆರಂಭಿಕ ವಕ್ತಾರರಾಗಲು ಅವಕಾಶ ನೀಡುತ್ತದೆ.

ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ  (ಐ.ಸಿ.ಎಂ.ಆರ್.)   ಮಹಾನಿರ್ದೇಶಕ ಶ್ರೀ ರಾಜೀವ್ ಬಹ್ಲ್ ಮತ್ತು ಭಾರತ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆಯ (ಡಿ.ಎಚ್.ಆರ್) ಕಾರ್ಯದರ್ಶಿ; ಎಫ್.ಎಸ್.ಎಸ್.ಎ.ಐ. ಸಿಇಒ ಜಿ ಕಮಲಾ ವರ್ಧನ ರಾವ್; ಭಾರತ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್, ರೈಲ್ವೆ ಮಂಡಳಿಯ ಅಧ್ಯಕ್ಷ ಶ್ರೀ ಸತೀಶ್ ಕುಮಾರ್, ಸಿ.ಬಿ.ಎಸ್.ಇ. ಅಧ್ಯಕ್ಷ ಶ್ರೀ ರಾಹುಲ್ ಸಿಂಗ್; ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು; ಕರ್ನಾಟಕ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಚಂಡೀಗಢ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳು; ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಆಯುಕ್ತರು, ವೈಜ್ಞಾನಿಕ ಸಮಿತಿ ಮತ್ತು ವೈಜ್ಞಾನಿಕ ತಂಡಗಳ ಸದಸ್ಯರು, ಎಫ್.ಎಸ್.ಎಸ್.ಎ.ಐ., ದೇಶಾದ್ಯಂತ ಆಹಾರ ವ್ಯಾಪಾರ ನಿರ್ವಾಹಕರು, ಕೈಗಾರಿಕಾ ಸಂಘಗಳು, ಅಭಿವೃದ್ಧಿ ಪಾಲುದಾರರು, ಎಫ್.ಎಸ್.ಎಸ್.ಎ.ಐ. ಮತ್ತು ದೇಶಾದ್ಯಂತ ರಾಜ್ಯ ಎಫ್.ಡಿ.ಎ. ಗಳ ನೌಕರರು ಭಾಗವಹಿಸಿದ್ದರು.

 

*****


(Release ID: 2134913)