ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮೇ 26 ಮತ್ತು 27ರಂದು ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ದಾಹೋಡ್ ನಲ್ಲಿ ಸುಮಾರು 24,000 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಭುಜ್ ನಲ್ಲಿ 53,400 ಕೋಟಿ ರೂ.ಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಗುಜರಾತ್ ನಗರ ಬೆಳವಣಿಗೆಯ ಕಥೆಯ 20ನೇ ವರ್ಷಾಚರಣೆಯಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ

Posted On: 25 MAY 2025 9:14AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 26 ಮತ್ತು 27ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಅವರು ದಾಹೋಡ್ ಗೆ ಪ್ರಯಾಣ ಬೆಳೆಸಲಿದ್ದು, ಬೆಳಗ್ಗೆ 11:15 ರ ಸುಮಾರಿಗೆ ಅವರು ಲೋಕೋಮೋಟಿವ್ ಉತ್ಪಾದನಾ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಮತ್ತು ಎಲೆಕ್ಟ್ರಿಕ್ ಲೋಕೋಮೋಟಿವ್ ಗೆ ಹಸಿರು ನಿಶಾನೆ ತೋರಲಿದ್ದಾರೆ. ನಂತರ ಅವರು ದಾಹೋಡ್ ನಲ್ಲಿ ಸುಮಾರು 24,000 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಅವರು ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಸಂಜೆ 4 ಗಂಟೆಗೆ ಭುಜ್ ನಲ್ಲಿ 53,400 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಇದಲ್ಲದೆ, ಪ್ರಧಾನಮಂತ್ರಿಯವರು ಗಾಂಧಿನಗರಕ್ಕೆ ಪ್ರಯಾಣಿಸಲಿದ್ದು, ಮೇ 27ರಂದು ಬೆಳಗ್ಗೆ 11 ಗಂಟೆಗೆ ಅವರು ಗುಜರಾತ್ ನಗರ ಬೆಳವಣಿಗೆಯ ಕಥೆಯ 20 ವರ್ಷಗಳ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ನಗರಾಭಿವೃದ್ಧಿ ವರ್ಷ 2025 ಕ್ಕೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಸಂಪರ್ಕವನ್ನು ಹೆಚ್ಚಿಸುವ ಮತ್ತು ವಿಶ್ವದರ್ಜೆಯ ಪ್ರಯಾಣ ಮೂಲಸೌಕರ್ಯವನ್ನು ನಿರ್ಮಿಸುವ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ದಾಹೋಡ್ ನಲ್ಲಿ ಭಾರತೀಯ ರೈಲ್ವೆಯ ಲೋಕೋಮೋಟಿವ್ ಉತ್ಪಾದನಾ ಘಟಕವನ್ನು ಉದ್ಘಾಟಿಸಲಿದ್ದಾರೆ. ಈ ಸ್ಥಾವರವು ದೇಶೀಯ ಉದ್ದೇಶಗಳಿಗಾಗಿ ಮತ್ತು ರಫ್ತು ಮಾಡಲು 9000 ಎಚ್ಪಿಯ ವಿದ್ಯುತ್ ಲೋಕೋಮೋಟಿವ್ ಗಳನ್ನು ಉತ್ಪಾದಿಸುತ್ತದೆ. ಸ್ಥಾವರದಿಂದ ತಯಾರಿಸಿದ ಮೊದಲ ಎಲೆಕ್ಟ್ರಿಕ್ ಲೋಕೋಮೋಟಿವ್ ಗೆ ಅವರು ಹಸಿರು ನಿಶಾನೆ ತೋರಲಿದ್ದಾರೆ. ಲೋಕೋಮೋಟಿವ್ ಗಳು ಭಾರತೀಯ ರೈಲ್ವೆಯ ಸರಕು ಲೋಡ್ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಈ ಲೋಕೋಮೋಟಿವ್ ಗಳು ಪುನರುತ್ಪಾದಕ ಬ್ರೇಕಿಂಗ್ ವ್ಯವಸ್ಥೆಗಳನ್ನು ಹೊಂದಿರುತ್ತವೆ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ, ಇದು ಪರಿಸರ ಸುಸ್ಥಿರತೆಗೆ ಕೊಡುಗೆ ನೀಡುತ್ತದೆ.

ನಂತರ, ಪ್ರಧಾನಮಂತ್ರಿ ಅವರು ದಾಹೋಡ್ ನಲ್ಲಿ 24,000 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ. ಈ ಯೋಜನೆಗಳಲ್ಲಿ ರೈಲು ಯೋಜನೆಗಳು ಮತ್ತು ಗುಜರಾತ್ ಸರ್ಕಾರದ ವಿವಿಧ ಯೋಜನೆಗಳು ಸೇರಿವೆ. ವೆರಾವಲ್ ಮತ್ತು ಅಹಮದಾಬಾದ್ ನಡುವಿನ ವಂದೇ ಭಾರತ್ ಎಕ್ಸ್ ಪ್ರೆಸ್ ಮತ್ತು ವಲ್ಸಾದ್ ಮತ್ತು ದಾಹೋಡ್ ನಿಲ್ದಾಣಗಳ ನಡುವಿನ ಎಕ್ಸ್ ಪ್ರೆಸ್ ರೈಲಿಗೆ ಅವರು ಹಸಿರು ನಿಶಾನೆ ತೋರಲಿದ್ದಾರೆ. ಪ್ರಧಾನಮಂತ್ರಿ ಅವರು ಗೇಜ್ ಪರಿವರ್ತನೆಗೊಂಡ ಕಟೋಸನ್-ಕಲೋಲ್ ವಿಭಾಗವನ್ನು ಉದ್ಘಾಟಿಸಲಿದ್ದಾರೆ ಮತ್ತು ಅದರ ಮೇಲೆ ಸರಕು ಸಾಗಣೆ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.

ಪ್ರಧಾನಮಂತ್ರಿ ಅವರು ಭುಜ್ ನಲ್ಲಿ 53,400 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ. ವಿದ್ಯುತ್ ವಲಯದ ಯೋಜನೆಗಳಲ್ಲಿ ಖಾವ್ಡಾ ನವೀಕರಿಸಬಹುದಾದ ಇಂಧನ ಪಾರ್ಕ್ ನಲ್ಲಿ ಉತ್ಪತ್ತಿಯಾಗುವ ನವೀಕರಿಸಬಹುದಾದ ಶಕ್ತಿಯನ್ನು ಸ್ಥಳಾಂತರಿಸುವ ಪ್ರಸರಣ ಯೋಜನೆಗಳು, ಪ್ರಸರಣ ಜಾಲ ವಿಸ್ತರಣೆ, ತಾಪಿಯಲ್ಲಿರುವ ಅಲ್ಟ್ರಾ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಪ್ಲಾಂಟ್ ಘಟಕ ಸೇರಿವೆ. ಇದು ಕಾಂಡ್ಲಾ ಬಂದರಿನ ಯೋಜನೆಗಳು ಮತ್ತು ಗುಜರಾತ್ ಸರ್ಕಾರದ ಅನೇಕ ರಸ್ತೆ, ನೀರು ಮತ್ತು ಸೌರ ಯೋಜನೆಗಳನ್ನು ಒಳಗೊಂಡಿದೆ.

ಯೋಜಿತ ಮೂಲಸೌಕರ್ಯ, ಉತ್ತಮ ಆಡಳಿತ ಮತ್ತು ನಗರ ನಿವಾಸಿಗಳ ಸುಧಾರಿತ ಜೀವನದ ಗುಣಮಟ್ಟದ ಮೂಲಕ ಗುಜರಾತ್ ನ ನಗರ ಭೂದೃಶ್ಯವನ್ನು ಪರಿವರ್ತಿಸುವ ಉದ್ದೇಶದಿಂದ ಆಗಿನ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಪ್ರಮುಖ ಉಪಕ್ರಮವೆಂದರೆ ಗುಜರಾತ್ ನಲ್ಲಿ ನಗರಾಭಿವೃದ್ಧಿ ವರ್ಷ 2005. 2005ರ ನಗರಾಭಿವೃದ್ಧಿ ವರ್ಷದ 20ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಮಂತ್ರಿಯವರು ಗಾಂಧಿನಗರದಲ್ಲಿ ನಗರಾಭಿವೃದ್ಧಿ ವರ್ಷ 2025, ಗುಜರಾತ್ ನ ನಗರಾಭಿವೃದ್ಧಿ ಯೋಜನೆ ಮತ್ತು ರಾಜ್ಯ ಶುದ್ಧ ಗಾಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅವರು ನಗರಾಭಿವೃದ್ಧಿ, ಆರೋಗ್ಯ ಮತ್ತು ನೀರು ಸರಬರಾಜಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪಿಎಂಎವೈ ಅಡಿಯಲ್ಲಿ 22,000 ಕ್ಕೂ ಹೆಚ್ಚು ವಸತಿ ಘಟಕಗಳನ್ನು ಅವರು ಸಮರ್ಪಿಸಲಿದ್ದಾರೆ. ಸ್ವರ್ಣಿಮ್ ಜಯಂತಿ ಮುಖ್ಯಮಂತ್ರಿ ಶಹೇರಿ ವಿಕಾಸ್ ಯೋಜನೆ ಅಡಿಯಲ್ಲಿ ಗುಜರಾತ್ ನ  ನಗರ ಸ್ಥಳೀಯ ಸಂಸ್ಥೆಗಳಿಗೆ 3,300 ಕೋಟಿ ರೂ.ಗಳ ಹಣವನ್ನು ಅವರು ಬಿಡುಗಡೆ ಮಾಡಲಿದ್ದಾರೆ.

 

*****


(Release ID: 2131208)