ಇಂಧನ ಸಚಿವಾಲಯ
ದಕ್ಷಿಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಾಗಿ ಪ್ರಾದೇಶಿಕ ಇಂಧನ ಸಮ್ಮೇಳನ
ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಅವರಿಂದ ಚತುರ, ಸುಸ್ಥಿರ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಾದ ಇಂದನ ವಲಯಕ್ಕಾಗಿ ಕರೆ
ರಾಜ್ಯಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ವೇಗಗೊಳಿಸಲು, ವಿತರಣೆಯನ್ನು ಬಲಪಡಿಸಲು ಮತ್ತು ಹಸಿರು ಇಂಧನ ಉಪಕ್ರಮಗಳನ್ನು ಅಳವಡಿಸಿಕೊಳ್ಳಲು ಒತ್ತಾಯ
Posted On:
23 MAY 2025 5:19PM by PIB Bengaluru
ದಕ್ಷಿಣ ವಲಯದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಾಗಿ ಪ್ರಾದೇಶಿಕ ಸಮ್ಮೇಳನವು ಮೇ 23 ರಂದು ಬೆಂಗಳೂರಿನಲ್ಲಿ ಕೇಂದ್ರ ಇಂಧನ ಹಾಗು ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಶ್ರೀ ಮನೋಹರ್ ಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕೇಂದ್ರ ಇಂಧನ ಹಾಗು ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ನಾಯಕ್, ಕರ್ನಾಟಕ ಇಂಧನ ಖಾತೆ ರಾಜ್ಯ ಸಚಿವರಾದ ಶ್ರೀ ಕೆ.ಜೆ. ಜಾರ್ಜ್, ತೆಲಂಗಾಣ ಉಪಮುಖ್ಯಮಂತ್ರಿ ಮತ್ತು ಇಂಧನ ಖಾತೆ ಸಚಿವರಾದ ಶ್ರೀ ಭಟ್ಟಿ ವಿಕ್ರಮಾರ್ಕ ಮಲ್ಲು, ತಮಿಳುನಾಡು ಇಂಧನ ಖಾತೆ ಸಚಿವರಾದ ಶ್ರೀ ಎಸ್.ಎಸ್. ಶಿವಶಂಕರ್, ತಮಿಳುನಾಡು ಇಂಧನ ಖಾತೆ ಸಚಿವ ಶ್ರೀ ಎ. ನಮಶ್ಶಿವಾಯಂ (ಪುದುಚೇರಿ ಇಂಧನ ಖಾತೆ ಸಚಿವ) ಮತ್ತು ಆಂಧ್ರಪ್ರದೇಶ ಇಂಧನ ಖಾತೆ ಸಚಿವ ಶ್ರೀ ಗೊಟ್ಟಿಪತಿ ರವಿ ಕುಮಾರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ಸಭೆಯಲ್ಲಿ ಕೇಂದ್ರ ಇಂಧನ ಕಾರ್ಯದರ್ಶಿ, ಭಾಗವಹಿಸುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳು (ವಿದ್ಯುತ್/ಇಂಧನ), ಕೇಂದ್ರ ಮತ್ತು ರಾಜ್ಯ ಇಂಧನ ಉಪಯುಕ್ತತೆಗಳ ಸಿಎಂಡಿಗಳು ಮತ್ತು ಇಂಧನ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಭವಿಷ್ಯದ ಇಂಧನ ಬೇಡಿಕೆಯನ್ನು ಪೂರೈಸಲು 2035 ರಹಣಕಾಸು ವರ್ಷದವರೆಗೆ ಅಗತ್ಯ ಇಂಧನ ಉತ್ಪಾದನಾ ಸಾಮರ್ಥ್ಯದ ಒಪ್ಪಂದಗಳನ್ನು ಖಚಿತಪಡಿಸಿಕೊಳ್ಳುವುದು ನಿರ್ಣಾಯಕವಾಗಿದೆ ಎಂದು ಭಾರತ ಸರ್ಕಾರದ ಕಾರ್ಯದರ್ಶಿ (ವಿದ್ಯುತ್) ಯವರು ಒತ್ತಿ ಹೇಳಿದರು. ಸುಂಕ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ (ಟಿ.ಬಿ.ಸಿ.ಬಿ), ನಿಯಂತ್ರಿತ ಸುಂಕ ಕಾರ್ಯವಿಧಾನ (ಆರ್.ಟಿ.ಎಂ.), ಬಜೆಟ್ ಬೆಂಬಲ ಅಥವಾ ಅಸ್ತಿತ್ವದಲ್ಲಿರುವ ಸ್ವತ್ತುಗಳ ನಗದೀಕರಣ ಸೇರಿದಂತೆ ಲಭ್ಯವಿರುವ ವಿವಿಧ ಹಣಕಾಸು ಮಾದರಿಗಳ ಮೂಲಕ ಅಂತರ ರಾಜ್ಯ ಮತ್ತು ರಾಜ್ಯದೊಳಗಿನ ಪ್ರಸರಣ ಸಾಮರ್ಥ್ಯಗಳ ಅಭಿವೃದ್ಧಿಗೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡುವುದು ಸಹ ಕಡ್ಡಾಯವಾಗಿದೆ. ಇದಲ್ಲದೆ, ಸೈಬರ್ ಭದ್ರತಾ ಸಮಸ್ಯೆಗಳ ವಿರುದ್ಧ ಪ್ರಸರಣ ಗ್ರಿಡ್ ಮತ್ತು ವಿತರಣಾ ವ್ಯವಸ್ಥೆಗಳು ಸೇರಿದಂತೆ ಇಂಧನ ವಲಯದ ಮೂಲಸೌಕರ್ಯವನ್ನು ಭದ್ರಪಡಿಸಿಕೊಳ್ಳಲು ರಾಜ್ಯಗಳು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಮತ್ತು ಅದಕ್ಕಾಗಿ ಅಗತ್ಯವಾದ ಸೈಬರ್ ಭದ್ರತಾ ಶಿಷ್ಟಾಚಾರಗಳನ್ನು ಜಾರಿಗೆ ತರಬೇಕು. ಜೊತೆಗೆ, ವಿತರಣಾ ಉಪಯುಕ್ತತೆಗಳ ಆರ್ಥಿಕ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲೂ ರಾಜ್ಯಗಳು ಕೆಲಸ ಮಾಡಬೇಕು.
ಕರ್ನಾಟಕದ ಗೌರವಾನ್ವಿತ ಇಂಧನ ಸಚಿವರು ತಮ್ಮ ಭಾಷಣದಲ್ಲಿ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ರಾಜ್ಯದಾದ್ಯಂತ ಇಂಧನ (ವಿದ್ಯುತ್) ಸರಬರಾಜಿನ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ರಾಜ್ಯವು ತೆಗೆದುಕೊಂಡ ಪ್ರಮುಖ ಕ್ರಮಗಳನ್ನು ಎತ್ತಿ ತೋರಿಸಿದರು. ದಕ್ಷಿಣ ರಾಜ್ಯಗಳ ಪ್ರಾದೇಶಿಕ ಇಂಧನ ವಲಯದ ಪರಾಮರ್ಶೆಗಾಗಿ ಅವರು ಬೆಂಗಳೂರಿಗೆ ಭೇಟಿ ನೀಡಿದ್ದಕ್ಕಾಗಿ ಮಾನ್ಯ ಕೇಂದ್ರ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ದೇಶದ ಇಂಧನ ವಲಯದಲ್ಲಿ ಸಂಪೂರ್ಣ ಸುಧಾರಣೆಗೆ ರಾಜ್ಯವು ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ ಎಂದು ಹೇಳಲಾಯಿತು. ವಿತರಣೆ ಮತ್ತು ಪ್ರಸರಣ ಮೂಲಸೌಕರ್ಯ ಕಾರ್ಯಗಳು ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರದ ಬೆಂಬಲವನ್ನು ಅವರು ಕೋರಿದರು.
ಕೇಂದ್ರ ಇಂಧನ ಹಾಗು ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರು ತಮ್ಮ ಭಾಷಣದಲ್ಲಿ, ಕಳೆದ ಕೆಲವು ವರ್ಷಗಳಲ್ಲಿ ಇಂಧನ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯು ಬಲವಾದ ಬುನಾದಿಯನ್ನು ಹಾಕಿದೆ ಎಂದು ಒತ್ತಿ ಹೇಳಿದರು, ಆದರೆ ಮುಂದುವರಿಯುತ್ತಾ, ಪ್ರಸರಣ ಜಾಲವನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಆರ್ಥಿಕ ಕಾರ್ಯಸಾಧ್ಯತೆ ಮತ್ತು ಸಾಕಷ್ಟು ಸಂಪನ್ಮೂಲದ ವಿಷಯಗಳ ಕುರಿತು ಕೆಲಸ ಮಾಡುವ ಅವಶ್ಯಕತೆಯಿದೆ. ಪಿ.ಎಂ.-ಕುಸುಮ್ ಕಾಮಗಾರಿಗಳನ್ನು ತುರ್ತಾಗಿ ಕಾರ್ಯಗತಗೊಳಿಸಲು ಮತ್ತು ಮುಂದಿನ 7 ತಿಂಗಳೊಳಗೆ ಅದಕ್ಕಾಗಿ ಪಿ.ಪಿ.ಎ. ಗಳಿಗೆ ಸಹಿ ಹಾಕಲು ಸಚಿವರು ಕೇಳಿದರು. ಇದಲ್ಲದೆ, ಈ ನಿಟ್ಟಿನಲ್ಲಿ ರಾಜ್ಯಗಳಿಂದ ಬಂದ ಸಲಹೆಗಳು ಮತ್ತು ಪ್ರತಿಕ್ರಿಯೆಗಳ ಕುರಿತು ಕೇಂದ್ರ ಸರ್ಕಾರವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್ಯಗಳಿಗೆ ಭರವಸೆ ನೀಡಿದರು.
ದೇಶದ ಬೆಳವಣಿಗೆಗೆ ಇಂಧನ ನೀಡಲು ಭವಿಷ್ಯಕ್ಕೆ ಸಿದ್ಧವಾದ, ಆಧುನಿಕ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಾದ ಇಂಧನ ಕ್ಷೇತ್ರದ ಮಹತ್ವವನ್ನು ಗೌರವಾನ್ವಿತ ಕೇಂದ್ರ ಸಚಿವ ಶ್ರೀ ಮನೋಹರ್ ಲಾಲ್ ಅವರು ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು. 2047ರ ವೇಳೆಗೆ ʼವಿಕಸಿತ ಭಾರತʼದ ಗುರಿಯನ್ನು ಸಾಧಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ನಿರಂತರ ಸಹಕಾರ ಮತ್ತು ಸಮನ್ವಯದ ಮಹತ್ವವನ್ನು ಅವರು ವಿವರಿಸಿದರು.
ಇಂತಹ ಪ್ರಾದೇಶಿಕ ಸಮ್ಮೇಳನಗಳು ನಿರ್ದಿಷ್ಟ ಸವಾಲುಗಳು ಹಾಗು ಸಂಭವನೀಯ ಪರಿಹಾರಗಳನ್ನು ಗುರುತಿಸುವಲ್ಲಿ ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು. ಇಂಧನ ಪ್ರಜ್ಞೆಯ ನಡವಳಿಕೆಯನ್ನು ಪ್ರೋತ್ಸಾಹಿಸುವ ಮತ್ತು ಇಂಧನ ಸುಸ್ಥಿರತೆಗಾಗಿ ʼಇಂಧನ ಸಮರ್ಥʼ ಉಪಕರಣಗಳನ್ನು ಬಳಸುವ ಮಹತ್ವದ ಬಗ್ಗೆ ಅವರು ಹೇಳಿದರು. ಅಲ್ಲದೆ, ಇಂಧನ ವ್ಯವಸ್ಥೆಯ ಸೈಬರ್ ಭದ್ರತಾ ವಿಷಯಗಳ ಬಗ್ಗೆ ಪ್ರಾದೇಶಿಕ ಮಟ್ಟದ ಕಾರ್ಯಾಗಾರಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸುವಂತೆ ಅವರು ರಾಜ್ಯಗಳು ಮತ್ತು ಸಚಿವಾಲಯಗಳಿಗೆ ನಿರ್ದೇಶನ ನೀಡಿದರು.
ಮಾನ್ಯ ಸಚಿವರು ಸಂಪನ್ಮೂಲ ಸಮರ್ಪಕತೆ ಮತ್ತು ಅಗತ್ಯ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸಂಬಂಧಗಳನ್ನು ಖಚಿತಪಡಿಸಿಕೊಳ್ಳುವತ್ತ ಒತ್ತು ನೀಡಿದರು. ರಾಜ್ಯಗಳು ತಮ್ಮ ಸಂಪನ್ಮೂಲ ಸಮರ್ಪಕತೆಯ ಯೋಜನೆಯನ್ನು ಪೂರೈಸುವಾಗ, ಪರಮಾಣು ಉತ್ಪಾದನಾ ಸಾಮರ್ಥ್ಯವನ್ನು ಸೇರಿಸುವುದು ಸೇರಿದಂತೆ ಸಾಕಷ್ಟು ಇಂಧನ ಉತ್ಪಾದನಾ ಮಿಶ್ರಣವನ್ನು ಹೊಂದುವ ಬಗ್ಗೆಯೂ ಕೆಲಸ ಮಾಡಬೇಕು ಎಂದು ಹೇಳಿದರು.
ಇದಲ್ಲದೆ, ರಾಜ್ಯಗಳು ರೋ-ಡಬ್ಲ್ಯೂ ಸಮಸ್ಯೆಗಳು ಸೇರಿದಂತೆ ರಾಜ್ಯದೊಳಗಿನ ಪ್ರಸರಣ ವಲಯದ ಸವಾಲುಗಳನ್ನು ಪರಿಹರಿಸುವತ್ತ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವಂತೆ ಅವರು ರಾಜ್ಯಗಳನ್ನು ಕೇಳಿದರು. ಮೂಲಸೌಕರ್ಯ ಅಭಿವೃದ್ಧಿಗಾಗಿ 50 ವರ್ಷಗಳ ಕಾಲ ರಾಜ್ಯಗಳಿಗೆ 1.5 ಲಕ್ಷ ಕೋಟಿ ರೂ. ಬಡ್ಡಿರಹಿತ ಸಾಲದ ಯೋಜನೆ ಸೇರಿದಂತೆ, ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ರಾಜ್ಯಗಳು 2025-26ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ ಯೋಜನೆಯನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಹಸಿರು ಇಂಧನ ಕಾರಿಡಾರ್ (ಜಿ.ಇ.ಸಿ. -III) ನ ಮೂರನೇ ಹಂತಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಅವರು ಎಲ್ಲಾ ರಾಜ್ಯಗಳನ್ನು ಕೋರಿದರು. ಇಂಧನ ವಿಶ್ವಾಸಾರ್ಹತೆಯನ್ನು ಹೊಂದಲು ಮತ್ತು ಯು.ಎನ್.ಎಫ್.ಸಿ.ಸಿ.ಸಿ. ಅಡಿಯಲ್ಲಿ ಭಾರತದ ಅಂತರರಾಷ್ಟ್ರೀಯ ಹವಾಮಾನ ಬದ್ಧತೆಗಳನ್ನು ಸಾಮೂಹಿಕವಾಗಿ ಪೂರೈಸಲು ರಾಜ್ಯಗಳು ನವೀಕರಿಸಬಹುದಾದ ಇಂಧನವನ್ನು ಶೇಖರಣಾ ವ್ಯವಸ್ಥೆಗಳೊಂದಿಗೆ ಉತ್ತೇಜಿಸಬೇಕು ಎಂದು ಅವರು ಹೇಳಿದರು.
ಇಂಧನ ವಲಯದ ಮೌಲ್ಯ ಸರಪಳಿಯಲ್ಲಿ ವಿತರಣಾ ವಲಯವು ಅತ್ಯಂತ ನಿರ್ಣಾಯಕ ಕೊಂಡಿಯಾಗಿದೆ ಎಂದು ಗೌರವಾನ್ವಿತ ಸಚಿವರು ಹೇಳಿದರು. ಆದರೆ ಕಳಪೆ ಸುಂಕ ರಚನೆಗಳು, ಸಬ್-ಆಪ್ಟಿಮಲ್ ಬಿಲ್ಲಿಂಗ್ ಹಾಗು ಹಣ ಸಂಗ್ರಹಣೆ ಮತ್ತು ಸರ್ಕಾರಿ ಇಲಾಖೆ ಬಾಕಿ ಮತ್ತು ಸಬ್ಸಿಡಿಗಳ ವಿಳಂಬ ಪಾವತಿಗಳಿಂದಾಗಿ ಇದು ಸವಾಲುಗಳನ್ನು ಎದುರಿಸುತ್ತಿದೆ. ಎ.ಟಿ&ಸಿ ನಷ್ಟಗಳು ಮತ್ತು ಸರಾಸರಿ ಪೂರೈಕೆ ವೆಚ್ಚ ಮತ್ತು ಸರಾಸರಿ ಆದಾಯದ ನಡುವಿನ ಅಂತರವನ್ನು ಕಡಿಮೆ ಮಾಡುವುದು ಅತ್ಯಗತ್ಯ ಎಂದು ಹೇಳಿದರು.
ವೆಚ್ಚ ಪ್ರತಿಫಲಿತ ಸುಂಕಗಳು ಮತ್ತು ಸುಂಕ ಮತ್ತು ಟ್ರೂ-ಅಪ್ ಆದೇಶಗಳನ್ನು ಸಕಾಲಿಕವಾಗಿ ನೀಡುವುದಕ್ಕಾಗಿ ಅವರು ರಾಜ್ಯಗಳು ಇಂಧನ ನಿಯಂತ್ರಣ ಆಯೋಗಗಳೊಂದಿಗೆ (ಇ.ಆರ್. ಸಿ) ತೊಡಗಿಸಿಕೊಳ್ಳಲು ಹೇಳಿದರು. ಇಂದಿನ ಉಪಯುಕ್ತತೆಗಳ ನಷ್ಟಗಳು ನಂತರ ಗ್ರಾಹಕರಿಗೆ ವೆಚ್ಚವನ್ನು ಹೆಚ್ಚಿಸುತ್ತವೆ ಮತ್ತು ಗ್ರಾಹಕರಿಗೆ ಸೇವೆಗಳ ವಿತರಣೆಯನ್ನು ಹದಗೆಡಿಸುತ್ತದೆ ಎಂದು ಅವರು ಹೇಳಿದರು.
ಆರ್. ಡಿ ಎಸ್. ಎಸ್. ಅಡಿಯಲ್ಲಿ ಮೂಲಸೌಕರ್ಯ ಮತ್ತು ಸ್ಮಾರ್ಟ್ ಮೀಟರಿಂಗ್ ಕೆಲಸಗಳನ್ನು ತ್ವರಿತಗೊಳಿಸುವ ಮೂಲಕ ವಿತರಣಾ ಉಪಯುಕ್ತತೆಗಳು ದಕ್ಷತೆಯನ್ನು ಸುಧಾರಿಸಲು ಮತ್ತಷ್ಟು ಶ್ರಮಿಸಬೇಕು ಎಂದು ಗೌರವಾನ್ವಿತ ಸಚಿವರು ಹೇಳಿದರು. ಸರ್ಕಾರಿ ಬಾಕಿ ಮತ್ತು ಸಬ್ಸಿಡಿಗಳ ಸಕಾಲಿಕ ಪಾವತಿಯು ಒಂದು ದೊಡ್ಡ ಸಮಸ್ಯೆಯಾಗಿ ಉಳಿದಿದೆ ಎಂದು ಅವರು ಹೇಳಿದರು. ಹಣಕಾಸು ವರ್ಷ 24ರ ಬಾಕಿಗಳು ಇನ್ನೂ ಉಳಿದಿವೆ ಮತ್ತು ಹಣಕಾಸು ವರ್ಷ 25ಕ್ಕೆ ಸೇರಿಸಲ್ಪಟ್ಟಿವೆ. ಇದು ಉಪಯುಕ್ತತೆಗಳ ಆರ್ಥಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪೂರ್ವ-ಪಾವತಿಸಿದ ಸ್ಮಾರ್ಟ್ ಮೀಟರ್ಗಳು (ಪ್ರಿ ಪೇಯ್ಡ್ ಸ್ಮಾರ್ಟ್ ಮೀಟರ್) ಸರ್ಕಾರಿ ಇಲಾಖೆಯ ಬಾಕಿಗಳನ್ನು ಸಕಾಲಿಕವಾಗಿ ಬಿಡುಗಡೆ ಮಾಡುವ ಒಂದು ಮಾರ್ಗವಾಗಿದೆ ಎಂದು ಅವರು ಒತ್ತಿ ಹೇಳಿದರು. ಸರ್ಕಾರಿ ಕಾಲೊನಿಗಳು ಸೇರಿದಂತೆ ಎಲ್ಲಾ ಸರ್ಕಾರಿ ಸಂಸ್ಥೆಗಳಲ್ಲಿ ಆಗಸ್ಟ್ 2025 ರೊಳಗೆ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ಗಳ ಅಳವಡಿಕೆಯನ್ನು ಪೂರ್ಣಗೊಳಿಸಲು ಮತ್ತು ನವೆಂಬರ್ 2025 ರೊಳಗೆ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರು ಮತ್ತು ಹೆಚ್ಚಿನ ಬಳಕೆದಾರ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ಗಳ ಅಳವಡಿಕೆಯನ್ನು ಪೂರ್ಣಗೊಳಿಸಲು ಅವರು ರಾಜ್ಯಗಳನ್ನು ಕೇಳಿದರು.
ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರಿಕ ಕಲಿಕೆ (ಎಐ ಮತ್ತು ಎಂ.ಎಲ್.) ಪರಿಕರಗಳ ಆಧಾರದ ಮೇಲೆ ದತ್ತಾಂಶ ವಿಶ್ಲೇಷಣೆಯನ್ನು ಬಳಸಿಕೊಂಡು ಗ್ರಾಹಕರು ಉಪಯುಕ್ತತೆಗಳೊಂದಿಗೆ ಸಂವಹನ ನಡೆಸುವ ವಿಧಾನವನ್ನು ಪರಿವರ್ತಿಸುವಲ್ಲಿ ಸ್ಮಾರ್ಟ್ ಮೀಟರ್ ಅಗಾಧ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು. ಸ್ಮಾರ್ಟ್ ಮೀಟರ್ ಅಪ್ಲಿಕೇಶನ್ನಲ್ಲಿ ಅಂತರ್ಗತವಾಗಿರುವ ವೈಶಿಷ್ಟ್ಯಗಳನ್ನು ಬಳಸಿಕೊಂಡು ಗ್ರಾಹಕರು ಪ್ರಯೋಜನಗಳನ್ನು ಪಡೆಯಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದರು.
ಇಂಧನ ವಲಯವನ್ನು ಮತ್ತಷ್ಟು ಸದೃಢಗೊಳಿಸುವುದಕ್ಕಾಗಿ ರಾಜ್ಯಗಳಿಗೆ ಕೇಂದ್ರ ಸರ್ಕಾರದ ನಿರಂತರ ಬೆಂಬಲದ ಭರವಸೆಯನ್ನು ಗೌರವಾನ್ವಿತ ಸಚಿವರು ನೀಡಿದರು.
*****
(Release ID: 2130898)