ಸಹಕಾರ ಸಚಿವಾಲಯ
ಸಹಕಾರಿ ಡೈರಿ ವಲಯದಲ್ಲಿ ಸುಸ್ಥಿರತೆ ಮತ್ತು ಆವರ್ತಕತೆಯ ಕುರಿತು ಹೊಸದಿಲ್ಲಿಯಲ್ಲಿ ನಡೆದ ಮಹತ್ವದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
“ಶ್ವೇತ ಕ್ರಾಂತಿ 2.0' ಅಡಿಯಲ್ಲಿ, ಸಹಕಾರಿ ಡೈರಿ ವಲಯದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ವೃತ್ತಾಕಾರದ ಆರ್ಥಿಕತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ "ಸಹಕಾರದಿಂದ ಸಮೃದ್ಧಿ" ಎಂಬ ಮಂತ್ರವನ್ನು ಮುಂದಕ್ಕೆ ಕೊಂಡೊಯ್ದು, ಸಹಕಾರಿ ಡೈರಿ ವಲಯಕ್ಕಾಗಿ ಮೂರು ಹೊಸ ಬಹು-ರಾಜ್ಯ ಸಹಕಾರಿ ಸಂಘಗಳನ್ನು ಸ್ಥಾಪಿಸಲು ನಿರ್ಧರಿಸಲಾಯಿತು
ಮೊದಲನೆಯದು 'ಪಶು ಆಹಾರ ಉತ್ಪಾದನೆ, ರೋಗ ನಿಯಂತ್ರಣ ಮತ್ತು ಕೃತಕ ಗರ್ಭಧಾರಣೆ'ಯ ಮೇಲೆ ಕೇಂದ್ರೀಕರಿಸುತ್ತದೆ, ಎರಡನೆಯದು 'ಹಸುವಿನ ಸಗಣಿ ನಿರ್ವಹಣಾ ಮಾದರಿಗಳನ್ನು ಅಭಿವೃದ್ಧಿಪಡಿಸುವುದನ್ನು' ಉತ್ತೇಜಿಸುತ್ತದೆ ಮತ್ತು ಮೂರನೆಯದು 'ಸತ್ತ ದನಗಳ ಅವಶೇಷಗಳ ವೃತ್ತಾಕಾರದ ಬಳಕೆಯನ್ನು' ಉತ್ತೇಜಿಸುತ್ತದೆ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ರೈತರಿಗೆ ಇಂಗಾಲದ ಕ್ರೆಡಿಟ್ ಮೇಲಿನ ನೇರ ಪ್ರಯೋಜನಗಳನ್ನು ಒದಗಿಸುವುದು ಮತ್ತು ಸಹಕಾರಿ ಜಾಲವನ್ನು ಬಲಪಡಿಸುವುದರ ಮೇಲೆ ಒತ್ತು ನೀಡಿದರು
Posted On:
20 MAY 2025 8:27PM by PIB Bengaluru
ಸಹಕಾರಿ ಡೈರಿ ವಲಯದಲ್ಲಿ ಸುಸ್ಥಿರತೆ ಮತ್ತು ವೃತ್ತಾಕಾರ ವ್ಯವಸ್ಥೆ ಕುರಿತು ಇಂದು ಹೊಸದಿಲ್ಲಿಯಲ್ಲಿ ನಡೆದ ಮಹತ್ವದ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ವಹಿಸಿದ್ದರು. ಸಭೆಯಲ್ಲಿ ಕೇಂದ್ರ ಸಹಕಾರ ಖಾತೆ ಸಹಾಯಕ ಸಚಿವರಾದ ಶ್ರೀ ಕ್ರಿಶನ್ ಪಾಲ್ ಗುರ್ಜರ್ ಮತ್ತು ಶ್ರೀ ಮುರಳೀಧರ್ ಮೊಹೋಲ್, ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ. ಆಶಿಶ್ ಕುಮಾರ್ ಭೂತಾನಿ, ಪಶು ಸಂಗೋಪನೆ ಮತ್ತು ಡೈರಿ ವಿಭಾಗದ ಕಾರ್ಯದರ್ಶಿ ಶ್ರೀಮತಿ ಅಲ್ಕಾ ಉಪಾಧ್ಯಾಯ, ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಅಧ್ಯಕ್ಷ ಡಾ. ಮೀನೇಶ್ ಶಾ ಮತ್ತು ನಬಾರ್ಡ್ ಅಧ್ಯಕ್ಷ ಶ್ರೀ ಶಾಜಿ ಕೆ.ವಿ. ಭಾಗವಹಿಸಿದ್ದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ "ಸಹಕಾರದಿಂದ ಸಮೃದ್ಧಿ" ಎಂಬ ಮಂತ್ರವನ್ನು ಮುಂದಿಟ್ಟುಕೊಂಡು, ಸಹಕಾರಿ ಡೈರಿ ವಲಯಕ್ಕಾಗಿ ಮೂರು ಹೊಸ ಬಹು-ರಾಜ್ಯ ಸಹಕಾರಿ ಸಂಘ (ಸೊಸೈಟಿ) ಗಳನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಮೊದಲ ಸಹಕಾರಿ ಸಂಘವು 'ಪಶು ಆಹಾರ ಉತ್ಪಾದನೆ, ರೋಗ ನಿಯಂತ್ರಣ ಮತ್ತು ಕೃತಕ ಗರ್ಭಧಾರಣೆ'ಯ ಮೇಲೆ ಗಮನ ಕೇಂದ್ರೀಕರಿಸುತ್ತದೆ, ಎರಡನೆಯದು 'ಹಸುವಿನ ಸಗಣಿ ನಿರ್ವಹಣಾ ಮಾದರಿಗಳನ್ನು ಅಭಿವೃದ್ಧಿಪಡಿಸುವುದು' ಮತ್ತು ಮೂರನೆಯದು 'ಸತ್ತ ದನಗಳ ಅವಶೇಷಗಳ ವೃತ್ತಾಕಾರದ ಬಳಕೆಯನ್ನು' ಉತ್ತೇಜಿಸುತ್ತದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ನಾವು ಶ್ವೇತ ಕ್ರಾಂತಿ 2.0 ರತ್ತ ಸಾಗುತ್ತಿರುವಾಗ, ನಮ್ಮ ಗುರಿ ಡೈರಿ ಸಹಕಾರಿಗಳನ್ನು ವಿಸ್ತರಿಸುವುದು ಮತ್ತು ಅವುಗಳನ್ನು ದಕ್ಷ ಮತ್ತು ಪರಿಣಾಮಕಾರಿಯಾಗಿ ಮಾಡುವುದು ಮಾತ್ರವಲ್ಲದೆ ಸುಸ್ಥಿರ ಮತ್ತು ವೃತ್ತಾಕಾರದ ಆರ್ಥಿಕತೆಯನ್ನು ಉತ್ತೇಜಿಸುವ ಡೈರಿಯ ಪರಿಸರ ವ್ಯವಸ್ಥೆಯನ್ನು ರಚಿಸುವುದಾಗಿದೆ ಎಂದು ಹೇಳಿದರು. ರೈತರ ಆದಾಯವನ್ನು ಹೆಚ್ಚಿಸಬೇಕಾದರೆ, ನಾವು ಸಮಗ್ರ ಸಹಕಾರಿ ಸಂಘಗಳ ಜಾಲವನ್ನು ರಚಿಸಬೇಕು, ಅಲ್ಲಿ ಹೆಚ್ಚಿನ ಕೆಲಸಗಳನ್ನು ಸಹಕಾರಿ ಸಂಸ್ಥೆಗಳ ನಡುವಿನ ಪರಸ್ಪರ ಸಹಕಾರ ಮತ್ತು ಸಹಯೋಗದ ಮೂಲಕ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಕಾರ್ಬನ್ ಕ್ರೆಡಿಟ್‌ಗಳ ನೇರ ಪ್ರಯೋಜನಗಳು ವೈಜ್ಞಾನಿಕ ಮಾದರಿಗಳ ಮೂಲಕ ರೈತರಿಗೆ ತಲುಪುವಂತೆ ನೋಡಿಕೊಳ್ಳುವ ಮಹತ್ವವನ್ನು ಶ್ರೀ ಅಮಿತ್ ಶಾ ಒತ್ತಿ ಹೇಳಿದರು. ಹಾಲು ಒಕ್ಕೂಟಗಳು ಮತ್ತು ಸಹಕಾರಿ ಸಂಘಗಳನ್ನು ಬಲಪಡಿಸುವ ಮತ್ತು ಡೈರಿ ಘಟಕಗಳಲ್ಲಿ ಆಹಾರ ಸಂಸ್ಕರಣೆಯನ್ನು ಪ್ರೋತ್ಸಾಹಿಸುವ ಅಗತ್ಯವನ್ನು ಅವರು ಎತ್ತಿ ತೋರಿಸಿದರು. ಈ ಪ್ರಯತ್ನಗಳು ರೈತರ ಆದಾಯವನ್ನು ಹೆಚ್ಚಿಸುವುದಲ್ಲದೆ, ಡೈರಿ ವಲಯವನ್ನು ಹೆಚ್ಚು ಸುಸ್ಥಿರ ಮತ್ತು ಪರಿಸರ ಸ್ನೇಹಿಯನ್ನಾಗಿ ಮಾಡುವತ್ತ ಮಹತ್ವದ ಹೆಜ್ಜೆಯಾಗಿದೆ ಎಂಬುದನ್ನೂ ಸಾಬೀತುಪಡಿಸುತ್ತದೆ ಎಂದವರು ನುಡಿದರು.
ಸಹಕಾರವು ಗ್ರಾಮೀಣ ಅಭಿವೃದ್ಧಿಯ ಪ್ರಮುಖ ಮಂತ್ರದ ತಿರುಳಾಗಿದೆ. ಮತ್ತು ಸಹಕಾರಿ ಡೈರಿ ವಲಯವು ಒಂದು ಅತ್ಯುತ್ತಮ ಉದಾಹರಣೆಯಾಗಿದೆ, ಇದು ಲಕ್ಷಾಂತರ ಗ್ರಾಮೀಣ ಕುಟುಂಬಗಳಿಗೆ ಜೀವನೋಪಾಯದ ಪ್ರಮುಖ ಮೂಲವನ್ನು ಒದಗಿಸುತ್ತದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಡೈರಿ ಸಹಕಾರಿ ಸಂಘಗಳು ಹಾಲು ಉತ್ಪಾದನೆ ಮತ್ತು ಮಾರುಕಟ್ಟೆ ಮೂಲಕ ಭಾರತೀಯ ಡೈರಿ ವಲಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಈ ಸಂಘಗಳು ಸಣ್ಣ ರೈತರಿಗೆ ಸ್ಥಿರ ಮಾರುಕಟ್ಟೆಗಳು, ಸಾಲ ಸೌಲಭ್ಯಗಳು, ಪಶುವೈದ್ಯಕೀಯ ಸೇವೆಗಳು ಮತ್ತು ಸಂತಾನೋತ್ಪತ್ತಿ ಬೆಂಬಲವನ್ನು ಒದಗಿಸುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತಿವೆ ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಮೂಲಕ ಸಬಲೀಕರಣಗೊಳಿಸುತ್ತಿವೆ ಎಂದರು.
ಸುಸ್ಥಿರತೆ'ಯಿಂದ ವೃತ್ತಾಕಾರದವರೆಗೆ ನಾವು ಒಟ್ಟಾಗಿ ಸಾಗಬೇಕು, ಇದು ಬಹು ಆಯಾಮಗಳಿಂದ ಕೂಡಿರುತ್ತದೆ ಮತ್ತು ಖಾಸಗಿ ವಲಯವು ಇಂದು ಮಾಡುತ್ತಿರುವ ಕೆಲಸವನ್ನು ರೈತರ ಸ್ವಂತ ಸಹಕಾರಿ ಸಂಸ್ಥೆಗಳೇ ಮಾಡುತ್ತವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದರಲ್ಲಿ ತಾಂತ್ರಿಕ ಸೇವೆಗಳು, ಪಶು ಆಹಾರ, ಕೃತಕ ಗರ್ಭಧಾರಣೆ, ಪಶು ರೋಗ ನಿಯಂತ್ರಣ, ಸಗಣಿ ನಿರ್ವಹಣೆ ಮತ್ತು ಡೈರಿ ಹಾಗು ಕೃಷಿ ಸಂಬಂಧಿತ ವಲಯಗಳಲ್ಲಿ ಸಂಗ್ರಹಣೆಯಿಂದ ಸಂಸ್ಕರಣೆಯವರೆಗಿನ ಚಟುವಟಿಕೆಗಳು ಸೇರಿವೆ.
ಅಮುಲ್ ನಂತಹ ಯಶಸ್ವಿ ಸಹಕಾರಿ ಮಾದರಿಗಳನ್ನು ಉಲ್ಲೇಖಿಸಿದ ಸಹಕಾರ ಸಚಿವರು, "ಸಹಕಾರದಿಂದ ಸಮೃದ್ಧಿ"ಯ ದೃಷ್ಟಿಕೋನವು ಇಂದು ಸಾಕಾರಗೊಳ್ಳುತ್ತಿದೆ ಮತ್ತು "ಸಹಕಾರಿ ಸಂಸ್ಥೆಗಳ ನಡುವಿನ ಸಹಕಾರ" ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು. ಸಹಕಾರ ಸಚಿವಾಲಯವು ವಿವಿಧ ಸಚಿವಾಲಯಗಳು ಮತ್ತು ಪಾಲುದಾರರ ಸಹಯೋಗದೊಂದಿಗೆ, ಡೈರಿ ಕ್ಷೇತ್ರದಲ್ಲಿ ಈ ಯಶಸ್ಸನ್ನು ಮುಂದಕ್ಕೆ ಕೊಂಡೊಯ್ಯುವುದಲ್ಲದೆ, ಗ್ರಾಮ ಮಟ್ಟದ ಸಹಕಾರಿ ಸಂಸ್ಥೆಗಳನ್ನು ಇತರ ಚಟುವಟಿಕೆಗಳೊಂದಿಗೆ ಸಂಪರ್ಕಿಸುವ ಮೂಲಕ ವಿಸ್ತರಿಸುತ್ತಿದೆ ಮತ್ತು ಬಲಪಡಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಮಗ್ರ ರೀತಿಯಲ್ಲಿ ಸಾಧಿಸಲು ಈ ಎಲ್ಲಾ ಪ್ರಯತ್ನಗಳು ಸಹಾಯಕವಾಗುತ್ತವೆ ಎಂದೂ ಶ್ರೀ ಶಾ ಹೇಳಿದರು.
ಸಹಕಾರ ಸಚಿವಾಲಯ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಹಾಗು ಹೈನುಗಾರಿಕೆ ಸಚಿವಾಲಯಗಳು ಎಲ್ಲಾ ಪಾಲುದಾರರನ್ನು ಒಟ್ಟುಗೂಡಿಸಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು, ಇದರಿಂದಾಗಿ ನೀತಿ ನಿರೂಪಣೆ, ಹಣಕಾಸು, ಗ್ರಾಮ ಮಟ್ಟದ ಸಹಕಾರ ಸಂಘಗಳ ರಚನೆ ಮತ್ತು ಅವುಗಳನ್ನು ಬಹುಪಯೋಗಿಯನ್ನಾಗಿ ಮಾಡುವ ಕೆಲಸವು ಈಗ ವೇಗವಾಗಿ ನಡೆಯುತ್ತಿದೆ. ಎನ್‌ಡಿಡಿಬಿ ಸುಸ್ಥಿರತೆಯ ಕ್ಷೇತ್ರದಲ್ಲಿ ಬಹಳ ಮುಖ್ಯವಾದ ಕೆಲಸವನ್ನು ಮಾಡಿದೆ ಮತ್ತು ಅದು ಅಭಿವೃದ್ಧಿಪಡಿಸಿದ ಜೈವಿಕ ಅನಿಲ ಮತ್ತು ಹಸುವಿನ ಸಗಣಿ ನಿರ್ವಹಣಾ ಕಾರ್ಯಕ್ರಮವನ್ನು ದೇಶಾದ್ಯಂತ ವಿಸ್ತರಿಸಲಾಗುತ್ತಿದೆ. ಇದನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ, ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ, ನಬಾರ್ಡ್ ಮುಂತಾದ ಸಹಕಾರ ಸಂಘಗಳ ಉನ್ನತಿಗಾಗಿ ಕೆಲಸ ಮಾಡುತ್ತಿರುವ ರಾಷ್ಟ್ರೀಯ ಸಂಸ್ಥೆಗಳನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಶ್ಲಾಘಿಸಿದರು. ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ, ಅವುಗಳ ಪರಸ್ಪರ ಸಹಕಾರವು ಖಂಡಿತವಾಗಿಯೂ ಸಹಕಾರಿ ಸಂಘಗಳನ್ನು ಬಲಪಡಿಸುತ್ತದೆ ಮತ್ತು ಭಾರತದಾದ್ಯಂತ ರೈತ ಕೇಂದ್ರಿತ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
*****
(Release ID: 2130216)