ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳ ಉನ್ನತ ಮಟ್ಟದ ಸಭೆ
Posted On:
08 MAY 2025 2:17PM by PIB Bengaluru
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸನ್ನದ್ಧತೆ ಮತ್ತು ಅಂತರ-ಸಚಿವಾಲಯಗಳ ಸಮನ್ವಯವನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳ ಉನ್ನತ ಮಟ್ಟದ ಸಭೆ ಇಂದು ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಾಚರಣೆಯ ನಿರಂತರತೆ ಮತ್ತು ಸಾಂಸ್ಥಿಕ ದೃಢತೆಯನ್ನು ಕಾಪಾಡಿಕೊಳ್ಳಲು ಎಲ್ಲಾ ಸಚಿವಾಲಯಗಳು ಮತ್ತು ಸಂಸ್ಥೆಗಳ ನಡುವೆ ಸುಗಮ ಸಮನ್ವಯದ ಅಗತ್ಯವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು.
ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ಸಚಿವಾಲಯಗಳು ಮಾಡಿರುವ ಯೋಜನೆ ಮತ್ತು ಸಿದ್ಧತೆಗಳನ್ನು ಪ್ರಧಾನಿ ಪರಿಶೀಲಿಸಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಸಂಪೂರ್ಣ ಸರ್ಕಾರದ ದೃಷ್ಟಿಕೋನದಿಂದ ಮಾಡಲಾದ ಯೋಜನೆಯ ವಿವರಗಳನ್ನು ಕಾರ್ಯದರ್ಶಿಗಳು ಪ್ರಸ್ತುತಪಡಿಸಿದರು.
ಸಂಘರ್ಷ-ಸಂಬಂಧಿತ ಸಂದರ್ಭಗಳಲ್ಲಿ ನಿರ್ವಹಿಸಬೇಕಾದ ಕಾರ್ಯಗಳನ್ನು ಎಲ್ಲಾ ಸಚಿವಾಲಯಗಳು ಗುರುತಿಸಿವೆ ಮತ್ತು ಪ್ರಕ್ರಿಯೆಗಳನ್ನು ಬಲಪಡಿಸಲಾಗುತ್ತಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಸಚಿವಾಲಯಗಳು ಸಿದ್ಧವಾಗಿವೆ.
ಎಲ್ಲಾ ಕಾರ್ಯದರ್ಶಿಗಳು ತಮ್ಮ ಸಚಿವಾಲಯಗಳ ಕಾರ್ಯಾಚರಣೆಗಳ ಸಮಗ್ರ ಪರಿಶೀಲನೆಯನ್ನು ಕೈಗೊಳ್ಳಲು ಮತ್ತು ಅಗತ್ಯ ವ್ಯವಸ್ಥೆಗಳ ಪರಿಪೂರ್ಣ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ಸನ್ನದ್ದತೆ, ತುರ್ತು ಪ್ರತಿಕ್ರಿಯೆ ಮತ್ತು ಆಂತರಿಕ ಸಂವಹನ ಶಿಷ್ಟಾಚಾರಗಳ ಮೇಲೆ ಕೇಂದ್ರೀಕರಿಸಲು ನಿರ್ದೇಶಿಸಲಾಯಿತು.
ಸಭೆಯಲ್ಲಿ ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು. ಇವುಗಳಲ್ಲಿ ನಾಗರಿಕ ರಕ್ಷಣಾ ಕಾರ್ಯವಿಧಾನಗಳನ್ನು ಬಲಪಡಿಸುವುದು, ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ನಿಗ್ರಹಿಸುವ ಪ್ರಯತ್ನಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳ ಸುರಕ್ಷತೆಯನ್ನು ಖಚಿತಪಡಿಸುವುದು ಸೇರಿವೆ. ರಾಜ್ಯ ಸರ್ಕಾರಗಳು ಮತ್ತು ತಳಮಟ್ಟದ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯವನ್ನು ಕಾಯ್ದುಕೊಳ್ಳಲು ಸಚಿವಾಲಯಗಳಿಗೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಸಂಪುಟ ಕಾರ್ಯದರ್ಶಿ, ಪ್ರಧಾನಮಂತ್ರಿಯವರ ಕಚೇರಿಯ ಹಿರಿಯ ಅಧಿಕಾರಿಗಳು ಮತ್ತು ರಕ್ಷಣೆ, ಗೃಹ ವ್ಯವಹಾರ, ವಿದೇಶಾಂಗ ವ್ಯವಹಾರ, ವಾರ್ತಾ ಮತ್ತು ಪ್ರಸಾರ, ವಿದ್ಯುತ್, ಆರೋಗ್ಯ ಮತ್ತು ದೂರಸಂಪರ್ಕ ಸೇರಿದಂತೆ ಪ್ರಮುಖ ಸಚಿವಾಲಯಗಳ ಕಾರ್ಯದರ್ಶಿಗಳು ಭಾಗವಹಿಸಿದ್ದರು.
ದೇಶವು ಪ್ರಸ್ತುತ ಸೂಕ್ಷ್ಮ ಪರಿಸ್ಥಿತಿಯಲ್ಲಿರುವುದರಿಂದ, ನಿರಂತರ ಜಾಗರೂಕತೆ, ಸಾಂಸ್ಥಿಕ ಸಮನ್ವಯ ಮತ್ತು ಸ್ಪಷ್ಟ ಸಂವಹನಕ್ಕೆ ಪ್ರಧಾನಮಂತ್ರಿ ಕರೆ ನೀಡಿದರು. ರಾಷ್ಟ್ರೀಯ ಭದ್ರತೆ, ಕಾರ್ಯಾಚರಣೆಯ ಸನ್ನದ್ಧತೆ ಮತ್ತು ನಾಗರಿಕರ ಸುರಕ್ಷತೆಗೆ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
*****
(Release ID: 2127720)
Visitor Counter : 2
Read this release in:
Malayalam
,
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu