ವಾರ್ತಾ ಮತ್ತು ಪ್ರಸಾರ ಸಚಿವಾಲಯ
"ಜಗತ್ತಿನಾದ್ಯಂತ ಹೃದಯಗಳನ್ನು ತಟ್ಟುವ ಕಥೆಗಳು" – ವೇವ್ಸ್ 2025 ಕಥೆಗಾರಿಕೆಯ ಭವಿಷ್ಯದ ಕುರಿತು ಒಂದು ಜಾಗತಿಕ ಸಂವಾದವನ್ನು ಹುಟ್ಟುಹಾಕಿದೆ
ವೇವ್ಸ್ 2025ರಲ್ಲಿ ಸ್ಟ್ರೀಮಿಂಗ್, ಸಿನೆಮಾ ಮತ್ತು ಸಾಹಿತ್ಯದ ಅನನ್ಯ ಬೆಸುಗೆ
Posted On:
02 MAY 2025 7:40PM
|
Location:
PIB Bengaluru
ಮೊದಲ ವೇವ್ಸ್ 2025 ಶೃಂಗಸಭೆಯ ಎರಡನೇ ದಿನದಂದು " ಜಗತ್ತಿನಾದ್ಯಂತ ಹೃದಯಗಳನ್ನು ತಟ್ಟುವ ಕಥೆಗಳು " ಎಂಬ ಗೋಷ್ಠಿಯಲ್ಲಿ ಅತ್ಯುತ್ತಮ ಭಾಷಣಕಾರರ ತಂಡವು ಸೇರಿತ್ತು: ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿಯ ಮುಖ್ಯ ಕಥೆ ಹೇಳುವ ಅಧಿಕಾರಿ ಕೈಟ್ಲಿನ್ ಯಾರ್ನಾಲ್, ವಾಲ್ಟ್ ಡಿಸ್ನಿ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಕಾರ್ಪೊರೇಟ್ ಅಭಿವೃದ್ಧಿ ಮುಖ್ಯಸ್ಥ ಜಸ್ಟಿನ್ ವಾರ್ಬ್ರೂಕ್, ಅಮೆಜಾನ್ ಪ್ರೈಮ್ ವೀಡಿಯೊದ ಅಂತರರಾಷ್ಟ್ರೀಯ ವಿಭಾಗದ ಉಪಾಧ್ಯಕ್ಷ ಕೆಲ್ಲಿ ಡೇ, ಬಿಬಿಸಿ ಸ್ಟುಡಿಯೋಸ್ ಏಷ್ಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಫಿಲ್ ಹಾರ್ಡ್ಮನ್, ಭಾರತದ ಅತ್ಯಂತ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ರಾಜಕುಮಾರ್ ಹಿರಾನಿ ಭಾಗವಹಿಸಿದ್ದರು ಮತ್ತು ಅತ್ಯುತ್ತಮ ಲೇಖಕ ಮತ್ತು ರಾಜತಾಂತ್ರಿಕರಾಗಿ ಸೇವೆ ಸಲ್ಲಿಸುತ್ತಿರುವ ಅಮಿಶ್ ತ್ರಿಪಾಠಿ ಅವರು ಈ ಸಂವಾದವನ್ನು ನಿರ್ವಹಿಸಿದರು.

ಜಾಗತಿಕ ಮಾಧ್ಯಮ, ಮನರಂಜನೆ ಮತ್ತು ಸಾಹಿತ್ಯ ಲೋಕದ ದಾರ್ಶನಿಕ ನಾಯಕರು ಮತ್ತು ಕಥೆಗಾರಿಕೆಯ ಕುಶಲಕರ್ಮಿಗಳು ಈ ಗೋಷ್ಠಿಯಲ್ಲಿ ಸೇರಿದ್ದರು. ಕಥೆ ಹೇಳುವಿಕೆಯ ಪರಿವರ್ತಕ ಶಕ್ತಿಯನ್ನು ಅರಿಯುವುದು ಇದರ ಮುಖ್ಯ ಉದ್ದೇಶವಾಗಿತ್ತು. ಸ್ಟ್ರೀಮಿಂಗ್ ವೇದಿಕೆಗಳು, ಬೃಹತ್ ಪ್ರಸಾರ ಸಂಸ್ಥೆಗಳಿಂದ ಹಿಡಿದು ಸಿನೆಮಾ ಮತ್ತು ಸಾಹಿತ್ಯದವರೆಗೆ, ಆಕರ್ಷಕ ಕಥೆಗಳು ಹೇಗೆ ಭೌಗೋಳಿಕ ಗಡಿಗಳನ್ನು ದಾಟಿ, ಸಂಸ್ಕೃತಿಗಳನ್ನು ರೂಪಿಸಿ, ಜಗತ್ತಿನಾದ್ಯಂತ ಜನರನ್ನು ಒಂದುಗೂಡಿಸಬಲ್ಲವು ಎಂಬುದರ ಕುರಿತು ಗಣ್ಯರು ತಮ್ಮ ಆಳವಾದ ಅಭಿಪ್ರಾಯಗಳನ್ನು ಹಂಚಿಕೊಂಡರು. ಜಾಗತಿಕ ಕಥೆಗಾರಿಕೆಯನ್ನು ಮುನ್ನಡೆಸುವ ಕಾರ್ಯತಂತ್ರದ, ಸೃಜನಾತ್ಮಕ ಮತ್ತು ಭಾವನಾತ್ಮಕ ಅಂಶಗಳು ಮತ್ತು ಅವು ಗ್ರಹಿಕೆಗಳು, ಸಂಸ್ಕೃತಿಗಳು ಮತ್ತು ಸಾಮಾಜಿಕ ಬದಲಾವಣೆಯ ಮೇಲೆ ಬೀರುವ ಮಹತ್ವದ ಪ್ರಭಾವವನ್ನು ಈ ಚರ್ಚೆಯು ಎತ್ತಿ ತೋರಿಸಿತು.

ಕೈಟ್ಲಿನ್ ಯಾರ್ನಾಲ್ (ನ್ಯಾಷನಲ್ ಜಿಯೋಗ್ರಾಫಿಕ್) ಅವರು ವಿಜ್ಞಾನ, ಪರಿಶೋಧನೆ ಮತ್ತು ದೃಶ್ಯ ಕಥೆಗಾರಿಕೆಯನ್ನು ಒಗ್ಗೂಡಿಸಿ, ವಿಶ್ವಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸುವಂತಹ ಪ್ರಭಾವಶಾಲಿ ಕಥೆಗಳನ್ನು ರಚಿಸುವ ಕಾರ್ಯತಂತ್ರದ ನೇತೃತ್ವ ವಹಿಸಿದ್ದಾರೆ. ಈ ಚರ್ಚೆಯಲ್ಲಿ ಅವರು ಕಥೆ ಹೇಳುವಿಕೆಯಲ್ಲಿನ ನಿಖರತೆ ಮತ್ತು ಶ್ರೇಷ್ಠತೆಯ ಮಹತ್ವವನ್ನು ಒತ್ತಿ ಹೇಳಿದರು. ನಿಜವಾಗಿಯೂ ಪ್ರೇಕ್ಷಕರ ಮನಮುಟ್ಟುವ ಕಂಟೆಂಟ್ ಅನ್ನು ರಚಿಸುವಾಗ ಎದುರಾಗುವ ಸವಾಲುಗಳು ಮತ್ತು ಲಭ್ಯವಿರುವ ಅವಕಾಶಗಳ ಬಗ್ಗೆಯೂ ಅವರು ಬೆಳಕು ಚೆಲ್ಲಿದರು.
ಜಸ್ಟಿನ್ ವಾರ್ಬ್ರೂಕ್ (ವಾಲ್ಟ್ ಡಿಸ್ನಿ) ಅವರು ಭಾರತೀಯ ಮಾರುಕಟ್ಟೆಯು ತಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದು ಎಂದು ತಿಳಿಸಿದರು. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ಅತಿ ವೇಗವಾಗಿ ಬೆಳೆಯುತ್ತಿರುವ ಮಾಧ್ಯಮ ಹಾಗೂ ಮನರಂಜನಾ ಮಾರುಕಟ್ಟೆಗಳಲ್ಲಿ ಇದು ಒಂದು ಎಂದು ಅವರು ಬಣ್ಣಿಸಿದರು. ಡಿಸ್ನಿ ಸಂಸ್ಥೆಯು ಭಾರತೀಯ ಕಂಪನಿಗಳೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುತ್ತಿರುವ ಕುರಿತು ಮಾತನಾಡಿದ ಅವರು, ಇಂತಹ ಸಹಭಾಗಿತ್ವಗಳು ಸಂಸ್ಕೃತಿಗಳ ನಡುವೆ ಸೇತುವೆಯಾಗಲು ಮತ್ತು ಕಥೆಗಳ ಮೂಲಕ ಜಾಗತಿಕ ಪ್ರೇಕ್ಷಕರನ್ನು ಇನ್ನಷ್ಟು ಹತ್ತಿರ ತರಲು ಹೇಗೆ ಸಹಕಾರಿಯಾಗಿವೆ ಎಂಬುದನ್ನು ವಿವರಿಸಿದರು.
ಕೆಲ್ಲಿ ಡೇ (ಅಮೆಜಾನ್ ಪ್ರೈಮ್ ವಿಡಿಯೋ) ಅವರು ಜಾಗತಿಕ ಮಟ್ಟದಲ್ಲಿ ವಿಸ್ತರಣೆ ಮತ್ತು ಕಂಟೆಂಟ್ ನಿರ್ವಹಣಾ ತಂತ್ರವನ್ನು ಮುನ್ನಡೆಸುತ್ತಿದ್ದಾರೆ. ಬೇರೆ ಬೇರೆ ಖಂಡಗಳ ಪ್ರೇಕ್ಷಕರಿಗೆ ವೈವಿಧ್ಯಮಯ ಮತ್ತು ಸ್ಥಳೀಯ ಸಂಸ್ಕೃತಿಗೆ ಸ್ಪಂದಿಸುವ ಕಥೆಗಳನ್ನು ತಲುಪಿಸುವುದು ಅವರ ಗುರಿಯಾಗಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಯಾವ ಕಥೆಗಳು ಆರ್ಥಿಕ ಯಶಸ್ಸನ್ನು ಗಳಿಸುತ್ತವೆ ಎಂಬುದನ್ನು ಈ ವೇದಿಕೆ ಹೇಗೆ ನಿರ್ಧರಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕಾಗಿ ಯಾವುದೇ ನಿರ್ದಿಷ್ಟ ಸೂತ್ರವಿಲ್ಲ. ಬಲವಾದ ಕಥಾವಸ್ತು, ಸ್ಥಳೀಯ ಪ್ರೇಕ್ಷಕರನ್ನು ಅರ್ಥಮಾಡಿಕೊಳ್ಳುವುದು ಮತ್ತು ಸೂಕ್ತವಾದ ಸ್ವರೂಪ ಹಾಗೂ ಪ್ರಕಾರಗಳನ್ನು ಆಯ್ಕೆ ಮಾಡುವುದೇ ಯಶಸ್ಸಿನ ಮೂಲ ಎಂದರು.
ಫಿಲ್ ಹಾರ್ಡ್ಮನ್ (ಬಿಬಿಸಿ ಸ್ಟುಡಿಯೋ, ಏಷ್ಯಾ) ಅವರು ಏಷ್ಯಾದ ಪ್ರೇಕ್ಷಕರಿಗಾಗಿ ವಿಶೇಷವಾಗಿ ತಯಾರಿಸಲಾದ ಉನ್ನತ ಗುಣಮಟ್ಟದ ಬ್ರಿಟಿಷ್ ಕಂಟೆಂಟ್ ನ ವಿತರಣೆಯನ್ನು ನಿರ್ವಹಿಸುತ್ತಿದ್ದಾರೆ. ಗುಣಮಟ್ಟದ ಕಂಟೆಂಟ್ ನ ಶಾಶ್ವತವಾದ ಶಕ್ತಿಯ ಬಗ್ಗೆ ಮಾತನಾಡಿದ ಅವರು, ಶಿಕ್ಷಣ ನೀಡುವುದು ಮತ್ತು ಮಾಹಿತಿ ನೀಡುವುದು ಬಿಬಿಸಿಯ ಮುಖ್ಯ ಉದ್ದೇಶವಾಗಿದೆ ಎಂದು ಒತ್ತಿ ಹೇಳಿದರು. ಆ ಉದ್ದೇಶಕ್ಕೆ ಸರಿಹೊಂದುವ ಅರ್ಥಪೂರ್ಣ ಕಥೆಗಳನ್ನು ಹುಡುಕುವುದು ಮತ್ತು ಹಂಚಿಕೊಳ್ಳುವುದರ ಮೇಲೆ ತಮ್ಮ ಗಮನ ಸದಾ ಇರುತ್ತದೆ ಎಂದು ಅವರು ತಿಳಿಸಿದರು.
ಭಾರತದ ಅತ್ಯಂತ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ರಾಜಕುಮಾರ್ ಹಿರಾನಿ ಅವರು ಭಾವನಾತ್ಮಕವಾಗಿ ಆಳವಾದ ಮತ್ತು ಸಾಮಾಜಿಕವಾಗಿ ಮಹತ್ವದ ಚಿತ್ರಗಳನ್ನು ನಿರ್ದೇಶಿಸಿ ಭಾರತ ಮತ್ತು ಪ್ರಪಂಚದಾದ್ಯಂತದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಚರ್ಚೆಯಲ್ಲಿ ಮಾತನಾಡಿದ ಅವರು, ಕಥೆ ಹೇಳುವುದು ಸಹಜವಾಗಿಯೇ ವ್ಯಕ್ತಿನಿಷ್ಠವಾದದ್ದು, ಒಬ್ಬೊಬ್ಬ ವ್ಯಕ್ತಿಗೂ ಒಂದೊಂದು ರೀತಿಯ ಕಥೆಗಳು ಇಷ್ಟವಾಗುತ್ತವೆ ಎಂದರು. ಕೃತಕ ಬುದ್ಧಿಮತ್ತೆಯ (AI) ಸಾಮರ್ಥ್ಯದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ ಅವರು, ಚಲನಚಿತ್ರ ನಿರ್ಮಾಪಕರಿಗೆ ಸೃಜನಶೀಲತೆ ಮತ್ತು ಕಥೆ ಹೇಳುವಿಕೆಯನ್ನು ಹೆಚ್ಚಿಸಲು ಇದೊಂದು ಅಮೂಲ್ಯವಾದ ಸಾಧನ ಎಂದು ಕರೆದರು.
ಅತ್ಯುತ್ತಮ ಲೇಖಕ ಮತ್ತು ರಾಜತಾಂತ್ರಿಕರಾದ ಅಮಿಶ್ ತ್ರಿಪಾಠಿ ಅವರು ತಮ್ಮ ಕಥೆಗಳಲ್ಲಿ ಪೌರಾಣಿಕ ನಿರೂಪಣೆ ಮತ್ತು ಸಾಂಸ್ಕೃತಿಕ ಆಳವನ್ನು ಅದ್ಭುತವಾಗಿ ಬೆರೆಸುತ್ತಾರೆ. ಸಂವಾದದ ನಿರ್ವಾಹಕರಾಗಿ, ಅವರು ವಿವಿಧ ದೃಷ್ಟಿಕೋನಗಳನ್ನು ಒಗ್ಗೂಡಿಸಿ, ಗಡಿಗಳನ್ನು ಮೀರಿ ಜನರನ್ನು ಬೆಸೆಯುವ ಕಥೆಗಳ ಸಾರ್ವತ್ರಿಕ ಶಕ್ತಿಯನ್ನು ಎತ್ತಿ ತೋರಿಸುವ ಮೂಲಕ ಗೋಷ್ಠಿಯ ಚರ್ಚೆಯನ್ನು ಸಮರ್ಥವಾಗಿ ನಡೆಸಿಕೊಟ್ಟರು.
*****
Release ID:
(Release ID: 2126966)
| Visitor Counter:
16