WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವೇವ್ಸ್ ನಲ್ಲಿ ಭಾರತದ ಸೃಜನಶೀಲ ಭವಿಷ್ಯದ ಕುರಿತು ಕಿರಣ್ ಮಜುಂದಾರ್ ಷಾ, ಸ್ಟಾರ್ಟ್ಅಪ್ ಗಳು ಚಲನಚಿತ್ರಗಳನ್ನು ಮೀರಿ ಜಾಗತಿಕ ಅಲೆಗಳನ್ನು ಸೃಷ್ಟಿಸುವ ಬ್ರ್ಯಾಂಡ್ ಗಳನ್ನು ನಿರ್ಮಿಸಬೇಕು ಎಂದರು


ಸಂಪ್ರದಾಯ ಮತ್ತು ತಂತ್ರಜ್ಞಾನವನ್ನು ಬೆರೆಸುವ ಹೊಸ ಕಥೆಗಳನ್ನು ಭಾರತ ರಚಿಸಬೇಕಾದ ಸಮಯ ಇದೀಗ ಬಂದಿದೆ: ಷಾ

 Posted On: 02 MAY 2025 8:17PM |   Location: PIB Bengaluru

ಜಾಗತಿಕ ಉದ್ಯಮ ನಾಯಕಿ ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಅವರು ಶುಕ್ರವಾರದಂದು ಸೃಜನಾತ್ಮಕ ವಿಷಯ ವಲಯದಲ್ಲಿ ತೊಡಗಿರುವ ಭಾರತೀಯ ಸ್ಟಾರ್ಟ್ಅಪ್ ಗಳು ಕೇವಲ ಚಲನಚಿತ್ರಗಳಿಗಿಂತಲೂ ಆಚೆಗೆ ಯೋಚಿಸಿ ಜಾಗತಿಕ ಅಲೆಗಳನ್ನು ಸೃಷ್ಟಿಸುವ ಬ್ರ್ಯಾಂಡ್ ಗಳು, ಪರಿಸರ ವ್ಯವಸ್ಥೆಗಳು ಮತ್ತು ಬೌದ್ಧಿಕ ಆಸ್ತಿಯನ್ನು ನಿರ್ಮಿಸಬೇಕು ಎಂದು ಹೇಳಿದರು.  ಅವರು ಮುಂಬೈನ ಜಿಯೋ ವರ್ಲ್ಡ್ ಸೆಂಟರ್ನಲ್ಲಿ ನಡೆದ 'ವಿಶ್ವ ಆಡಿಯೊ / ಶ್ರವ್ಯ ದೃಶ್ಯ ಮತ್ತು ಮನರಂಜನಾ ಶೃಂಗಸಭೆ' (ವೇವ್ಸ್) ಯ ಉದ್ಘಾಟನಾ ಆವೃತ್ತಿಯ ಎರಡನೇ ದಿನದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಫೋರ್ಬ್ಸ್ ನ ಸಂಪಾದಕೀಯ ನಿರ್ದೇಶಕರಾದ ಮನಿತಾ ಅಹುಜಾ ಅವರೊಂದಿಗೆ "ಭಾರತದ ನಾವೀನ್ಯತೆಯ ಪುನರುತ್ಥಾನ: ಜಾಗತಿಕ-ಮೊದಲ ಸ್ಟಾರ್ಟ್ಅಪ್ ಗಳ ಮುಂದಿನ ದಶಕ" ಎಂಬ ವಿಷಯದ ಕುರಿತು ಚರ್ಚೆಯನ್ನು ಪ್ರಾರಂಭಿಸಿದ ಮಜುಂದಾರ್ ಷಾ ಅವರು ಭಾರತೀಯ ಕಥೆಗಳ ಜಾಗತಿಕ ಸಾಮರ್ಥ್ಯದ ಬಗ್ಗೆ ಮಾತನಾಡಿದರು.  ರಾಮಾಯಣವನ್ನು ಉಲ್ಲೇಖಿಸಿದ ಅವರು, "ಸಂಪ್ರದಾಯ ಮತ್ತು ತಂತ್ರಜ್ಞಾನವನ್ನು ಬೆರೆಸುವ ಹೊಸ ಕಥೆಗಳನ್ನು ಭಾರತ ರಚಿಸುವ ಸಮಯ ಇದೀಗ ಬಂದಿದೆ.  ಜಾರ್ಜ್ ಲೂಕಾಸ್ ಅವರು ಸ್ಟಾರ್ ವಾರ್ಸ್ಗಾಗಿ ಭಾರತೀಯ ಮಹಾಕಾವ್ಯಗಳಿಂದ ಸ್ಫೂರ್ತಿ ಪಡೆದಂತೆಯೇ, ನಾವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಫ್ರಾಂಚೈಸ್ ಗಳಾಗಿ ಪರಿವರ್ತಿಸಲು ತಂತ್ರಜ್ಞಾನವನ್ನು ಬಳಸಬಹುದು" ಎಂದು ಹೇಳಿದರು. 

ಭಾರತದ ಜನಸಂಖ್ಯಾ ಮತ್ತು ಡಿಜಿಟಲ್ ಸಾಮರ್ಥ್ಯಗಳ ಬಗ್ಗೆ ಮಾತನಾಡಿದ ಅವರು, "ಒಂದು ಶತಕೋಟಿಗೂ ಹೆಚ್ಚು ಸ್ಮಾರ್ಟ್ಫೋನ್ ಬಳಕೆದಾರರು ಮತ್ತು ತಂತ್ರಜ್ಞಾನ ಪ್ರವೀಣರಾದ 'ಜನ್ ಝೆಡ್' (Gen Z) ಪೀಳಿಗೆಯೊಂದಿಗೆ, ಭಾರತವು ಜಾಗತಿಕ ನಾವೀನ್ಯತೆಗೆ ಸನ್ನದ್ಧವಾಗಿದೆ. ಆದರೆ ಯಾವುದೇ ಬ್ಲಾಕ್ ಬಸ್ಟರ್ ಚಿತ್ರದಂತೆ, ಯಶಸ್ಸು ಒಂದು ಸಣ್ಣ ಕಲ್ಪನೆ, ಸೂಕ್ತ ಕಾರ್ಯತಂತ್ರ ಮತ್ತು ನಿರಂತರ ಗಮನದಿಂದ ಆರಂಭವಾಗುತ್ತದೆ" ಎಂದು ವಿವರಿಸಿದರು. ಅವರು ಗ್ಯಾರೇಜ್ನಲ್ಲಿ ಬಯೋಕಾನ್ ಅನ್ನು ಪ್ರಾರಂಭಿಸಿ, ಅದನ್ನು ಜಾಗತಿಕ ಮಟ್ಟದ ಜೈವಿಕ ತಂತ್ರಜ್ಞಾನದ ಪ್ರಮುಖ ಶಕ್ತಿಯಾಗಿ ಬೆಳೆಸಿದ ತಮ್ಮ ಸ್ವಂತ ಪಯಣದೊಂದಿಗೆ ಇದನ್ನು ಹೋಲಿಸಿದರು.

ಭಾರತದ ಸೃಜನಾತ್ಮಕ ಆರ್ಥಿಕತೆಯ ಕುರಿತು ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಅಪಾರ ಸಾಮರ್ಥ್ಯವಿರುವ 'ಆರೆಂಜ್ ಎಕಾನಮಿ'ಯ ಬೆಳವಣಿಗೆಗೆ ಗಮನ ಕೊಡಬೇಕು ಎಂದರು. "ಇಂದು ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರವು ಜಿಡಿಪಿಗೆ 20 ಬಿಲಿಯನ್ ಡಾಲರ್ ಕೊಡುಗೆ ನೀಡುತ್ತಿದೆ. ನಾವು 2047ರ ವೇಳೆಗೆ 100 ಬಿಲಿಯನ್ ಡಾಲರ್ ಮತ್ತು ಅಂತಿಮವಾಗಿ 1 ಟ್ರಿಲಿಯನ್ ಡಾಲರ್ ಆರೆಂಜ್ ಎಕಾನಮಿಯನ್ನು ಗುರಿಯಾಗಿಸಬೇಕು. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿಗೆ ಅನುಗುಣವಾಗಿರುತ್ತದೆ" ಎಂದು ಷಾ ಹೇಳಿದರು.

ಸ್ಟಾರ್ಟ್ಅಪ್ ಗಳಿಗೆ ಮತ್ತು ಕ್ರಿಯೇಟರ್‌ ಗಳಿಗೆ ಸಬಲೀಕರಣ

ಭಾರತದ ಸೃಜನಶೀಲತೆಯ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಷಾ ಅವರು AR (ಆಗ್ಮೆಂಟೆಡ್ ರಿಯಾಲಿಟಿ), VR (ವರ್ಚುವಲ್ ರಿಯಾಲಿಟಿ) ಮತ್ತು ತಲ್ಲೀನಗೊಳಿಸುವ ಅನುಭವಗಳ ಸಂಗಮವನ್ನು ಪ್ರಮುಖ ಗಡಿಗಳೆಂದು ಎತ್ತಿ ತೋರಿಸಿದರು. "ಮುಂದಿನ ಯೂನಿಕಾರ್ನ್‌ಗಳು ಕೇವಲ ಆ್ಯಪ್ ಗಳು ಮಾತ್ರವಲ್ಲ - ಅವರು IP, ತಂತ್ರಜ್ಞಾನ ಮತ್ತು ತಲ್ಲೀನಗೊಳಿಸುವ ಕಥೆ ಹೇಳುವಿಕೆಯನ್ನು ಅರ್ಥಮಾಡಿಕೊಳ್ಳುವ ಕ್ರಿಯೇಟರ್‌ ಗಳಾಗಿರುತ್ತಾರೆ" ಎಂದು ಅವರು ಹೇಳಿಒದರು. RRR ಸಿನಿಮಾದ ನಾಟು ನಾಟು ಹಾಡಿನಂತಹ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ಭಾರತೀಯ ಸೃಜನಶೀಲತೆಯು ಕೇವಲ ಅನಿವಾಸಿ ಭಾರತೀಯರನ್ನು ಆಕರ್ಷಿಸುವುದನ್ನು ಮೀರಿ ಬೆಳೆಯಬೇಕು. "ಅದು ಜಾಗತಿಕವಾಗಿ ಮಹತ್ವ ಪಡೆಯಬೇಕು" ಎಂದು ಅವರು ಹೇಳಿದರು.

ಸ್ಟಾರ್ಟ್‌ಅಪ್ ಗಳು ಸ್ವಂತಿಕೆ ಮತ್ತು ಛಲವನ್ನು ಅಳವಡಿಸಿಕೊಳ್ಳುವಂತೆ ಅವರು ಪ್ರೇರೇಪಿಸಿದರು: "ಯಾವುದೇ ದೊಡ್ಡ ಕಲ್ಪನೆಯು ಚಿಕ್ಕದಾಗಿ ಪ್ರಾರಂಭವಾಗುತ್ತದೆ. ನೀವು ಅದನ್ನು ಎಲ್ಲಿಯವರೆಗೆ ಕೊಂಡೊಯ್ಯುತ್ತೀರಿ ಎಂಬುದು ಮುಖ್ಯ. ವೈಫಲ್ಯವು ಆ ಪಯಣದ ಒಂದು ಭಾಗ" ಎಂದು ಅವರು ಹೇಳಿದರು.

 

*****


Release ID: (Release ID: 2126963)   |   Visitor Counter: 9