ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತದ ವಿಕಸನಗೊಳ್ಳುತ್ತಿರುವ ಪ್ರಸಾರ ನಿಯಂತ್ರಕ ಸನ್ನಿವೇಶ ಮತ್ತು ಅದರ ಭವಿಷ್ಯದ ಸವಾಲುಗಳನ್ನು ಬಿಂಬಿಸಿದ ವೇವ್ಸ್ 2025
Posted On:
01 MAY 2025 8:14PM
|
Location:
PIB Bengaluru
ಮುಂಬೈನಲ್ಲಿ ಇಂದು ಭರ್ಜರಿಯಾಗಿ ಪ್ರಾರಂಭವಾದ ಜಾಗತಿಕ ಶ್ರವ್ಯ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ, ವೇವ್ಸ್ 2025ರ ಭಾಗವಾಗಿ ಆಯೋಜಿಸಲಾದ ಬ್ರೇಕ್ ಔಟ್ ಅಧಿವೇಶನದಲ್ಲಿ ಮಾಧ್ಯಮ ಮತ್ತು ಮನರಂಜನಾ (ಎಂ&ಇ) ವಲಯದ ಬದಲಾಗುತ್ತಿರುವ ಸನ್ನಿವೇಶ ಮತ್ತು ಸಮತೋಲಿತ ನಿಯಂತ್ರಕ ಚೌಕಟ್ಟಿನ ಅಗತ್ಯವು, ಪ್ರಾಮುಖ್ಯತೆಯನ್ನು ಪಡೆದುಕೊಂಡಿತು.
ಡಿಜಿಟಲ್ ಯುಗದಲ್ಲಿ ಪ್ರಸಾರವನ್ನು ನಿಯಂತ್ರಿಸುವುದು - ಪ್ರಮುಖ ಚೌಕಟ್ಟುಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತು ನಡೆದ ಬ್ರೇಕ್ ಔಟ್ ಅಧಿವೇಶನದಲ್ಲಿ ಅಂತರರಾಷ್ಟ್ರೀಯ ಮತ್ತು ಭಾರತೀಯ ಮಾಧ್ಯಮ ನಿಯಂತ್ರಕ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು. ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ ಲಹೋಟಿ, ಏಷ್ಯಾ-ಪೆಸಿಫಿಕ್ ಇನ್ಸ್ಟಿಟ್ಯೂಟ್ ಫಾರ್ ಬ್ರಾಡ್ಕಾಸ್ಟಿಂಗ್ ಡೆವಲಪ್ಮೆಂಟ್ (ಎಐಬಿಡಿ) ನಿರ್ದೇಶಕಿ ಶ್ರೀಮತಿ ಫಿಲೋಮಿನಾ ಜ್ಞಾನಪ್ರಗಾಸಂ; ಏಷ್ಯಾ-ಪೆಸಿಫಿಕ್ ಬ್ರಾಡ್ಕಾಸ್ಟಿಂಗ್ ಯೂನಿಯನ್ (ಎಬಿಯು) ಪ್ರಧಾನ ಕಾರ್ಯದರ್ಶಿ ಶ್ರೀ ಅಹ್ಮದ್ ನದೀಮ್ ಮತ್ತು ಮೀಡಿಯಾಸೆಟ್ ನ ಅಂತರರಾಷ್ಟ್ರೀಯ ವ್ಯವಹಾರಗಳ ನಿರ್ದೇಶಕಿ ಶ್ರೀಮತಿ ಕೆರೊಲಿನಾ ಲೊರೆಂಜೊ ಅವರು ಪ್ಯಾನಲಿಸ್ಟ್ ಗಳಾಗಿ (ವಿಷಯ ತಜ್ಞ ಸದಸ್ಯರು) ಭಾಗವಹಿಸಿದ್ದರು.
1995ರ ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯ್ದೆಯಿಂದ ಕೇಬಲ್ ಟಿವಿಯ ಡಿಜಿಟಲೀಕರಣದವರೆಗೆ ಭಾರತದ ನಿಯಂತ್ರಕ ವಿಕಸನ ಮತ್ತು ಗ್ರಾಹಕರ ಆಯ್ಕೆ ಮತ್ತು ಸೇವೆಯ ಗುಣಮಟ್ಟದ ಮೇಲೆ ಟ್ರಾಯ್ ನ ಪ್ರಸ್ತುತ ಗಮನವನ್ನು ಶ್ರೀ ಲಹೋಟಿ ವಿವರಿಸಿದರು. ಸಮಾನ ಅವಕಾಶವನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಟ್ರಾಯ್ ಪ್ರಯತ್ನಗಳನ್ನು ಅವರು ಒತ್ತಿ ಹೇಳಿದರು ಮತ್ತು ಗ್ರಾಹಕರ ಹಿತಾಸಕ್ತಿಗಳಿಗೆ ಧಕ್ಕೆಯಾಗದಿರುವಲ್ಲಿ ನಿಯಂತ್ರಣ ಮುಕ್ತಗೊಳಿಸುವಿಕೆಯನ್ನು ಪ್ರತಿಪಾದಿಸಿದರು.
ಓವರ್-ದಿ-ಟಾಪ್ (ಒಟಿಟಿ) ಪ್ಲಾಟ್ ಫಾರ್ಮ್ ಗಳ ತ್ವರಿತ ಹೆಚ್ಚಳ ಮತ್ತು ಅವು ಸೃಷ್ಟಿಸುವ ಸಂಕೀರ್ಣತೆಗಳ ಕುರಿತು ಪ್ಯಾನೆಲಿಸ್ಟ್ ಗಳು (ತಜ್ಞರು) ಚರ್ಚಿಸಿದರು. ಭಾರತದ ಡಿಜಿಟಲ್ ಮಾಧ್ಯಮ ಮಾರುಕಟ್ಟೆ 2024ರಲ್ಲಿ 9.7 ಬಿಲಿಯನ್ ಡಾಲರ್ ತಲುಪಿರುವುದರಿಂದ, ಸಮತೋಲಿತ ನಿಯಂತ್ರಣದ ಅಗತ್ಯವು ಅತ್ಯಂತ ಮುಖ್ಯವಾಗಿದೆ. ಡಿಜಿಟಲ್ ರೇಡಿಯೋ, ಸರಳೀಕೃತ ನೆಟ್ವರ್ಕ್ ಆರ್ಕಿಟೆಕ್ಚರ್ ಮತ್ತು ರಾಷ್ಟ್ರೀಯ ಪ್ರಸಾರ ನೀತಿಗಾಗಿ ಟ್ರಾಯ್ ನ ಪ್ರಸ್ತಾಪಗಳನ್ನು ಶ್ರೀ ಲಹೋಟಿ ಒತ್ತಿ ಹೇಳಿದರು.
ಶ್ರೀಮತಿ ಜ್ಞಾನಪ್ರಗಾಸಂ ಅವರು ನಿಯಮಗಳ ಜೊತೆಗೆ ಮಾಧ್ಯಮ ಸಾಕ್ಷರತೆಯ ಮಹತ್ವವನ್ನು ಒತ್ತಿ ಹೇಳಿದರು. ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ನಿಯಂತ್ರಣದ ಹಂತ ಹಂತದ ಅನುಷ್ಠಾನವನ್ನು ನದೀಮ್ ಪ್ರತಿಪಾದಿಸಿದರು. ಮೀಡಿಯಾಸೆಟ್ ನ ಅಂತರರಾಷ್ಟ್ರೀಯ ವ್ಯವಹಾರಗಳ ನಿರ್ದೇಶಕಿ ಶ್ರೀಮತಿ ಕೆರೊಲಿನಾ ಲೊರೆಂಜೊ, ಪ್ಲಾಟ್ ಫಾರ್ಮ್ ಹೊಣೆಗಾರಿಕೆಯಲ್ಲಿ ಯುರೋಪಿನ ಅನುಭವದ ಬಗ್ಗೆ ಗಮನ ಸೆಳೆದರು ಮತ್ತು ಸ್ಮಾರ್ಟ್ ಟಿವಿಗಳಂತಹ ತಂತ್ರಜ್ಞಾನಗಳಲ್ಲಿ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ನಲ್ಲಿ ನೆಟ್ವರ್ಕ್ ಪರಿಣಾಮಗಳ ಉದಯೋನ್ಮುಖ ಸವಾಲುಗಳ ಮೇಲೆ ಬೆಳಕು ಚೆಲ್ಲಿದರು.
ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವಾಗ ಮತ್ತು ನಿಯಂತ್ರಕ ಸಂಕೀರ್ಣತೆಯನ್ನು ಕಡಿಮೆ ಮಾಡುವಾಗ ಸ್ಥಿರವಾದ ನಿಯಂತ್ರಣದ ಅಗತ್ಯತೆಯ ಕುರಿತು ಒಮ್ಮತದೊಂದಿಗೆ ಅಧಿವೇಶನವು ಮುಕ್ತಾಯವಾಯಿತು.
*****
Release ID:
(Release ID: 2126052)
| Visitor Counter:
18