ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು 6ನೇ ಬಿಮ್ ಸ್ಟೆಕ್‌ ಶೃಂಗಸಭೆಯಲ್ಲಿ ಭಾಗವಹಿಸಿದ ವೇಳೆ ನೀಡಿದ ಹೇಳಿಕೆಯ ಕನ್ನಡ ಅನುವಾದ

Posted On: 04 APR 2025 12:59PM by PIB Bengaluru

ಗೌರವಾನ್ವಿತರೇ,

ನಮಸ್ಕಾರ !

ಮೊದಲಿಗೆ ನಾನು ಈ ಶೃಂಗಸಭೆಯನ್ನು ಅತ್ಯುತ್ತಮವಾಗಿ ಆಯೋಜಿಸಿರುವುದಕ್ಕಾಗಿ ಪ್ರಧಾನ ಮಂತ್ರಿ ಘನತೆವೆತ್ತ ಶಿನವತ್ರಾ ಮತ್ತು ಥೈಲ್ಯಾಂಡ್ ಸರ್ಕಾರಕ್ಕೆ ನಾನು ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ.

ಗೌರವಾನ್ವಿತರೇ,

ಮೊದಲನೆಯದಾಗಿ ಭಾರತದ ಜನತೆಯ ಪರವಾಗಿ ನಾನು ಇತ್ತೀಚೆಗೆ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಜೀವಹಾನಿ ಮತ್ತು ಆಸ್ತಿ ಪಾಸ್ತಿ ನಷ್ಟಕ್ಕೆ  ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ನಾವು ಒಗ್ಗಟ್ಟಿನಿಂದ ಸಂತ್ರಸ್ತರೊಂದಿಗೆ ನಿಲ್ಲುತ್ತೇವೆ ಮತ್ತು ಗಾಯಗೊಂಡವರು ಶೀಘ್ರವಾಗಿ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇವೆ.

ಗೌರವಾನ್ವಿತರೇ,

ಕಳೆದ ಮೂರು ವರ್ಷಗಳಲ್ಲಿ ಬಿಮ್ಸ್ಟೆಕ್‌ ಅನ್ನು ಮುನ್ನಡೆಸುವಲ್ಲಿ ಅವರ ಸಮರ್ಥ ಮತ್ತು ಪರಿಣಾಮಕಾರಿ ನಾಯಕತ್ವಕ್ಕಾಗಿ ಪ್ರಧಾನಿ ಮತ್ತು ಅವರ ತಂಡದ ಕಾರ್ಯವನ್ನು ನಾನು ಶ್ಲಾಘಿಸುತ್ತೇನೆ.

ಬಿಮ್ ಸ್ಟೆಕ್‌ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ನಡುವೆ ಪ್ರಮುಖ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರಾದೇಶಿಕ ಸಂಪರ್ಕ, ಸಹಕಾರ ಮತ್ತು ಹಂಚಿಕೆಯ ಸಮೃದ್ಧಿಯನ್ನು ಮುನ್ನಡೆಸಲು ಪ್ರಬಲ ವೇದಿಕೆಯಾಗಿ ಹೊರಹೊಮ್ಮುತ್ತಿದೆ.

ಕಳೆದ ವರ್ಷ ಬಿಮ್ ಸ್ಟೆಕ್ ಚಾರ್ಟರ್ (ಒಪ್ಪಂದ) ಜಾರಿಗೆ ಬಂದಿರುವುದು ಬಹಳ ತೃಪ್ತಿಯ ವಿಷಯವಾಗಿದೆ. ನಾವು ಇಂದು ಅಳವಡಿಸಿಕೊಳ್ಳುತ್ತಿರುವ ಬ್ಯಾಂಕಾಕ್ ವಿಷನ್ (ಮುನ್ನೋಟ) 2030, ಸಮೃದ್ಧ, ಸುರಕ್ಷಿತ ಮತ್ತು ಎಲ್ಲರನ್ನೂ ಒಳಗೊಂಡ ಬಂಗಾಳ ಕೊಲ್ಲಿ ಪ್ರದೇಶವನ್ನು ನಿರ್ಮಿಸುವ ನಮ್ಮ ಸಾಮೂಹಿಕ ಬದ್ಧತೆ ಮತ್ತಷ್ಟು ಹೆಚ್ಚಿಸುತ್ತದೆಂಬ ವಿಶ್ವಾಸ ನನಗಿದೆ.  

ಗೌರವಾನ್ವಿತರೇ,

ಬಿಮ್ ಸ್ಟೆಕ್ ಅನ್ನು ಮತ್ತಷ್ಟು ಬಲವರ್ಧನೆಗೊಳಿಸಲು, ನಾವು ಅದರ ವ್ಯಾಪ್ತಿಯನ್ನು ವಿಸ್ತರಿಸುವುದನ್ನು ಮತ್ತು ಅದರ ಸಾಂಸ್ಥಿಕ ಸಾಮರ್ಥ್ಯಗಳನ್ನು ಹೆಚ್ಚಿಸುವುದನ್ನು ಮುಂದುವರಿಸಬೇಕಾಗಿದೆ.

ಗೃಹ ಸಚಿವರ ಕಾರ್ಯವಿಧಾನವನ್ನು ಸಾಂಸ್ಥಿಕಗೊಳಿಸಲಾಗುತ್ತಿದೆ ಎಂಬುದು ಉತ್ತೇಜನಕಾರಿ ಬೆಳವಣಿಯಾಗಿದೆ.  ಸೈಬರ್ ಅಪರಾಧ, ಸೈಬರ್ ಭದ್ರತಾ ಅಪಾಯಗಳು, ಭಯೋತ್ಪಾದನೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಮಾನವ ಕಳ್ಳಸಾಗಣೆ ವಿರುದ್ಧದ ಹೋರಾಟದಲ್ಲಿ ಈ ವೇದಿಕೆ ಪ್ರಮುಖ ಪಾತ್ರ ವಹಿಸಬಹುದು. ಆ ನಿಟ್ಟಿನಲ್ಲಿ ಈ ವರ್ಷದ ಕೊನೆಯಲ್ಲಿ ಭಾರತವು ಈ ಕಾರ್ಯವಿಧಾನದ ಮೊದಲ ಸಭೆ ಆಯೋಜಿಸಬೇಕೆಂದು ನಾನು ಪ್ರಸ್ತಾಪಿಸುತ್ತೇನೆ.

 

ಗೌರವಾನ್ವಿತರೇ,

ಪ್ರಾದೇಶಿಕ ಅಭಿವೃದ್ಧಿಗಾಗಿ ಭೌತಿಕ ಸಂಪರ್ಕವು ಡಿಜಿಟಲ್ ಮತ್ತು ಇಂಧನ ಸಂಪರ್ಕದೊಂದಿಗೆ ಕೈಜೋಡಿಸಬೇಕಾಗಿದೆ.

ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಬಿಮ್ ಸ್ಟೆಕ್ ಇಂಧನ ಕೇಂದ್ರವು ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂಬುದನ್ನು ತಿಳಿಸಲು ನನಗೆ ಸಂತಸವಾಗುತ್ತಿದೆ. ನಮ್ಮ ತಂಡಗಳು ಪ್ರದೇಶದಾದ್ಯಂತ ವಿದ್ಯುತ್ ಗ್ರಿಡ್ ಅಂತರ ಸಂಪರ್ಕವನ್ನು ಸಾಧಿಸುವ ಪ್ರಯತ್ನಗಳನ್ನು ವೇಗಗೊಳಿಸಬೇಕೆಂದು ನಾನು ಪ್ರಸ್ತಾಪಿಸಲು ಬಯಸುತ್ತೇನೆ.

ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಕ್ರಾಂತಿಯನ್ನುಂಟು ಮಾಡಿದೆ. ಇದು ಉತ್ತಮ ಆಡಳಿತವನ್ನು ಗಮನಾರ್ಹವಾಗಿ ಹೆಚ್ಚಿಸಿದೆ, ಪಾರದರ್ಶಕತೆಯನ್ನು ವೃದ್ಧಿಸಿದೆ ಮತ್ತು ಆರ್ಥಿಕ ಸೇರ್ಪಡೆಯನ್ನು ವೇಗಗೊಳಿಸಿದೆ. ಬಿಮ್ ಸ್ಟೆಕ್  ಸದಸ್ಯ ರಾಷ್ಟ್ರಗಳೊಂದಿಗೆ ನಮ್ಮ ಡಿಪಿಐ ಅನುಭವವನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಅದನ್ನು ಮುಂದುವರಿಸಲು ಈ ಕ್ಷೇತ್ರದಲ್ಲಿ ಬಿಮ್ ಸ್ಟೆಕ್ ರಾಷ್ಟ್ರಗಳ ನಿರ್ದಿಷ್ಟ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಒಂದು ಪ್ರಾಯೋಗಿಕ  ಅಧ್ಯಯನವನ್ನು ಕೈಗೊಳ್ಳಬಹುದು.

ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಮತ್ತು ಬಿಮ್ ಸ್ಟೆಕ್‌  ಸದಸ್ಯ ರಾಷ್ಟ್ರಗಳ ಪಾವತಿ ವ್ಯವಸ್ಥೆಗಳ ನಡುವೆ ಸಂಪರ್ಕವನ್ನು ಸ್ಥಾಪಿಸಲು ನಾನು ಪ್ರಸ್ತಾಪಿಸುತ್ತೇನೆ. ಅಂತಹ ಏಕೀಕರಣವು ವ್ಯಾಪಾರ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಾದ್ಯಂತ ಗಣನೀಯ ಪ್ರಯೋಜನಗಳನ್ನು ತರುತ್ತದೆ, ಎಲ್ಲಾ ಹಂತಗಳಲ್ಲಿ ಆರ್ಥಿಕ ಚಟುವಟಿಕೆಯನ್ನು ವೃದ್ಧಿಸುತ್ತದೆ.

ಗೌರವಾನ್ವಿತರೇ,

ನಮ್ಮ ಸಾಮೂಹಿಕ ಪ್ರಗತಿಗೆ ವ್ಯಾಪಾರ ಮತ್ತು ವಾಣಿಜ್ಯ ಸಂಪರ್ಕವು ಸಮಾನವಾಗಿ ಅತಿ ಮುಖ್ಯವಾಗಿದೆ.

ನಮ್ಮ ವ್ಯಾಪಾರ ಸಮುದಾಯಗಳ ನಡುವೆ ಸಹಯೋಗ ಮತ್ತು ಸಮನ್ವಯವನ್ನು ಬಲಪಡಿಸಲು ನಾನು ಬಿಮ್ ಸ್ಟೆಕ್ ಚೇಂಬರ್ ಆಫ್ ಕಾಮರ್ಸ್ (ವಾಣಿಜ್ಯ ಮಂಡಳಿ)ಯನ್ನು ಸ್ಥಾಪಿಸಲು ಪ್ರಸ್ತಾಪಿಸುತ್ತೇನೆ. ಹೆಚ್ಚುವರಿಯಾಗಿ ಹೆಚ್ಚಿನ ಆರ್ಥಿಕ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸಲು ವಾರ್ಷಿಕ ಬಿಮ್ ಸ್ಟೆಕ್  ವಾಣಿಜ್ಯ ಶೃಂಗಸಭೆಯನ್ನು ಆಯೋಜಿಸಲಾಗುವುದು

ಬಿಮ್ ಸ್ಟೆಕ್  ಪ್ರದೇಶದೊಳಗೆ ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರದ ಸಾಮರ್ಥ್ಯವನ್ನು ಅನ್ವೇಷಿಸಲು ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸುವಂತೆಯೂ ನಾನು ಸಲಹೆ ನೀಡುತ್ತೇನೆ.

ಗೌರವಾನ್ವಿತರೇ,

ಮುಕ್ತ, ಸ್ವತಂತ್ರ, ಸುಭದ್ರಾ ಮತ್ತು ಸುರಕ್ಷಿತ ಹಿಂದೂ ಮಹಾಸಾಗರವು ನಮ್ಮ ಹಂಚಿಕೆಯ ಆದ್ಯತೆಯಾಗಿದೆ. ಇಂದು ಮುಕ್ತಾಯಗೊಂಡ ಸಮುದ್ರ ಸಾರಿಗೆ ಒಪ್ಪಂದವು ವ್ಯಾಪಾರಿ ಹಡಗು ಸಾಗಣೆ ಮತ್ತು ಸರಕು ಸಾಗಣೆಯಲ್ಲಿ ಸಹಕಾರವನ್ನು ಬಲಪಡಿಸುತ್ತದೆ, ಇದು ಪ್ರದೇಶದಾದ್ಯಂತ ವ್ಯಾಪಾರ ವಹಿವಾಟಿಗೆ ಗಮನಾರ್ಹ ಉತ್ತೇಜನ ನೀಡುತ್ತದೆ.

ಭಾರತವು ಸುಸ್ಥಿರ ಸಮುದ್ರ ಸಾರಿಗೆ ಕೇಂದ್ರವನ್ನು ಸ್ಥಾಪಿಸಲು ಪ್ರಸ್ತಾಪಿಸುತ್ತದೆ. ಈ ಕೇಂದ್ರವು ಸಾಮರ್ಥ್ಯ ವೃದ್ಧಿ, ಸಂಶೋಧನೆ, ನಾವೀನ್ಯತೆ ಮತ್ತು ಸಮುದ್ರ ನೀತಿಯಲ್ಲಿ ಹೆಚ್ಚಿನ ಸಮನ್ವಯವನ್ನು ಬೆಳೆಸುವತ್ತ ಗಮನಹರಿಸುತ್ತದೆ.  ಇದು ಪ್ರದೇಶದಾದ್ಯಂತ ಸಾಗರ ಭದ್ರತೆಯಲ್ಲಿ ನಮ್ಮ ಸಹಕಾರವನ್ನು ಹೆಚ್ಚಿಸಲು ವೇಗವರ್ಧಕವಾಗಿಯೂ ಸಹ  ಕಾರ್ಯನಿರ್ವಹಿಸುತ್ತದೆ.

ಗೌರವಾನ್ವಿತರೇ,

ಇತ್ತೀಚಿನ ಭೂಕಂಪವು ಬಿಮ್‌ಸ್ಟೆಕ್ ಪ್ರದೇಶವು ನೈಸರ್ಗಿಕ ವಿಕೋಪಗಳಿಗೆ ಎಷ್ಟು ದುರ್ಬಲವಾಗಿದೆ ಎಂಬುದನ್ನು ಸ್ಪಷ್ಟವಾಗಿ ನೆನಪಿಸುತ್ತದೆ.

ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಭಾರತ ಸದಾ ತನ್ನ ಸ್ನೇಹಿತರ ಪರವಾಗಿ ಮೊದಲ ಪ್ರತಿಕ್ರಿಯೆ ನೀಡುವ ರಾಷ್ಟ್ರವಾಗಿದೆ. ಮ್ಯಾನ್ಮಾರ್ ಜನರಿಗೆ ಸಕಾಲಿಕ ಪರಿಹಾರವನ್ನು ತಲುಪಿಸಲು ಸಾಧ್ಯವಾಗಿರುವುದು ನಮಗೆ ಒಂದು ಸೌಭಾಗ್ಯವೆಂದು ನಾವು ಪರಿಗಣಿಸುತ್ತೇವೆ. ನೈಸರ್ಗಿಕ ವಿಕೋಪಗಳು ಅನಿವಾರ್ಯವಾಗಿದ್ದರೂ, ನಮ್ಮ ಸನ್ನದ್ಧತೆ ಮತ್ತು ತ್ವರಿತವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವು ಸದಾ ಅಚಲವಾಗಿರಬೇಕು.

ಈ ಸಂದರ್ಭದಲ್ಲಿ,  ಭಾರತದಲ್ಲಿ ವಿಪತ್ತು ನಿರ್ವಹಣೆಗಾಗಿ ಬಿಮ್‌ಸ್ಟೆಕ್ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲು ನಾನು ಪ್ರಸ್ತಾಪಿಸುತ್ತೇನೆ. ಈ ಕೇಂದ್ರವು ವಿಪತ್ತು ಸಿದ್ಧತೆ, ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳಲ್ಲಿ ಸಹಕಾರವನ್ನು ಸುಗಮಗೊಳಿಸುತ್ತದೆ. ಹೆಚ್ಚುವರಿಯಾಗಿ ಬಿಮ್‌ಸ್ಟೆಕ್ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ನಡುವಿನ ನಾಲ್ಕನೇ ಜಂಟಿ ಅಭ್ಯಾಸವು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿದೆ.

ಗೌರವಾನ್ವಿತರೇ,

ಸಾರ್ವಜನಿಕ ಆರೋಗ್ಯವು ನಮ್ಮ ಸಾಮೂಹಿಕ ಸಾಮಾಜಿಕ ಅಭಿವೃದ್ಧಿಯ ಪ್ರಮುಖ ಆಧಾರಸ್ತಂಭವಾಗಿದೆ.

ಬಿಮ್ ಸ್ಟೆಕ್ ರಾಷ್ಟ್ರಳಲ್ಲಿ ಕ್ಯಾನ್ಸರ್ ಆರೈಕೆಯಲ್ಲಿ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗೆ ಭಾರತ ಬೆಂಬಲ ನೀಡಲಿದೆ ಎಂದು ಘೋಷಿಸಲು ನನಗೆ ಸಂತಸವಾಗುತ್ತಿದೆ. ಆರೋಗ್ಯಕ್ಕೆ ನಮ್ಮ ಸಮಗ್ರ ವಿಧಾನಕ್ಕೆ ಅನುಗುಣವಾಗಿ, ಸಾಂಪ್ರದಾಯಿಕ ಔಷಧದ ಸಂಶೋಧನೆ ಮತ್ತು ಪ್ರಚಾರವನ್ನು ಉತ್ತೇಜಿಸಲು ಒಂದು ಶ್ರೇಷ್ಠತಾ ಕೇಂದ್ರವನ್ನು ಸಹ ಸ್ಥಾಪಿಸಲಾಗುವುದು.

ಅದೇ ರೀತಿ ನಮ್ಮ ರೈತರಿಗೆ ಪ್ರಯೋಜನವಾಗುವಂತೆ ಕೃಷಿ ಕ್ಷೇತ್ರದಲ್ಲಿ ಜ್ಞಾನ ಮತ್ತು ಉತ್ತಮ ಪದ್ದತಿಗಳ ವಿನಿಮಯ, ಸಂಶೋಧನಾ ಸಹಯೋಗ ಮತ್ತು ಸಾಮರ್ಥ್ಯ ವೃದ್ಧಿಯ ಮೇಲೆ ಕೇಂದ್ರೀಕರಿಸಿದ ಮತ್ತೊಂದು ಶ್ರೇಷ್ಠತಾ ಕೇಂದ್ರವನ್ನು ಭಾರತದಲ್ಲಿ ಸ್ಥಾಪಿಸಲು ನಾವು ಪ್ರಸ್ತಾಪಿಸುತ್ತೇವೆ.
 

ಗೌರವಾನ್ವಿತರೇ,

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳು ಮಾಡಿರುವ ಪ್ರಗತಿಗಳು ಜಾಗತಿಕ ದಕ್ಷಿಣದಾದ್ಯಂತದ ಯುವಕರಿಗೆ ಸ್ಫೂರ್ತಿಯ ಮೂಲವಾಗಿದೆ. ಎಲ್ಲಾ ಬಿಮ್ ಸ್ಟೆಕ್ ಸದಸ್ಯ ರಾಷ್ಟ್ರಗಳೊಂದಿಗೆ ನಮ್ಮ ಪರಿಣತಿ ಮತ್ತು ಅನುಭವವನ್ನು ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ.

ಈ ನಿಟ್ಟಿನಲ್ಲಿ ಮಾನವಶಕ್ತಿ ತರಬೇತಿ, ನ್ಯಾನೊ-ಉಪಗ್ರಹಗಳ ಅಭಿವೃದ್ಧಿ ಮತ್ತು ಉಡಾವಣೆ ಮತ್ತು ಬಿಮ್ ಸ್ಟೆಕ್‌  ರಾಷ್ಟ್ರಗಳಿಗೆ ದೂರಸಂವೇದಿ ದತ್ತಾಂಶದ ಬಳಕೆಗಾಗಿ ಗ್ರೌಂಡ್‌ ಸ್ಟೇಷನ್ ಅನ್ನು ಸ್ಥಾಪಿಸಲು ನಾನು ಪ್ರಸ್ತಾಪಿಸುತ್ತೇನೆ.

ಗೌರವಾನ್ವಿತರೇ,

ಈ ಪ್ರದೇಶದಾದ್ಯಂತ ಯುವ ಕೌಶಲ್ಯವನ್ನು ಹೆಚ್ಚಿಸಲು ನಾವು ಬೋಧಿ ಉಪಕ್ರಮವನ್ನು ಆರಂಭಿಸುತ್ತಿದ್ದೇವೆ, ಅಂದರೆ "ಮಾನವ ಸಂಪನ್ಮೂಲ ಮೂಲಸೌಕರ್ಯದ ಸಂಘಟಿತ ಅಭಿವೃದ್ಧಿಗಾಗಿ ಬಿಮ್ ಸ್ಟೆಕ್ ಉಪಕ್ರಮ’’

ಈ ಕಾರ್ಯಕ್ರಮದಡಿಯಲ್ಲಿ ಬಿಮ್ ಸ್ಟೆಕ್‌ ಸದಸ್ಯ ರಾಷ್ಟ್ರಗಳ 300 ಯುವಕರು ಪ್ರತಿ ವರ್ಷ ಭಾರತದಲ್ಲಿ ತರಬೇತಿ ಪಡೆಯುತ್ತಾರೆ.

ಭಾರತದ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ಬಿಮ್ ಸ್ಟೆಕ್  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುವುದು ಮತ್ತು ನಳಂದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿವೇತನ ಯೋಜನೆಯನ್ನು ಸಹ ವಿಸ್ತರಿಸಲಾಗುವುದು. ಹೆಚ್ಚುವರಿಯಾಗಿ ಬಿಮ್ ಸ್ಟೆಕ್  ಸದಸ್ಯ ರಾಷ್ಟ್ರಗಳ ಯುವ ರಾಯಭಾರಿಗಳಿಗೆ ವಾರ್ಷಿಕ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.

ಗೌರವಾನ್ವಿತರೇ,

ನಮ್ಮ ಹಂಚಿಕೆಯ ಸಾಂಸ್ಕೃತಿಕ ಪರಂಪರೆ ನಮ್ಮ ಶಾಶ್ವತ ಸಂಬಂಧಗಳಿಗೆ ಭದ್ರ ಬುನಾದಿಯನ್ನು ಹಾಕುತ್ತದೆ.

ಒಡಿಶಾದ 'ಬಾಲಿ ಜಾತ್ರೆ', ಬೌದ್ಧ ಮತ್ತು ಹಿಂದೂ ಸಂಪ್ರದಾಯಗಳ ನಡುವಿನ ಆಳವಾದ ಬೇರೂರಿರುವ ಐತಿಹಾಸಿಕ ಸಂಪರ್ಕಗಳು ಮತ್ತು ನಮ್ಮ ನಡುವಿನ ಭಾಷಾ ಸಂಬಂಧಗಳು - ಇವೆಲ್ಲವೂ ನಮ್ಮ ಸಾಂಸ್ಕೃತಿಕ ಸಂಬಂಧದ ಪ್ರಬಲ ಸಂಕೇತಗಳಾಗಿವೆ.

ಈ ಸಂಬಂಧಗಳನ್ನು ಆಚರಿಸಲು ಮತ್ತು ಪ್ರದರ್ಶಿಸಲು ಭಾರತವು ಈ ವರ್ಷದ ಕೊನೆಯಲ್ಲಿ ಚೊಚ್ಚಲ ಬಿಮ್ ಸ್ಟೆಕ್ ಸಾಂಪ್ರದಾಯಿಕ ಸಂಗೀತ ಉತ್ಸವವನ್ನು ಆಯೋಜಿಸುತ್ತದೆ.

ಗೌರವಾನ್ವಿತರೇ,

ನಮ್ಮ ಯುವಕರಲ್ಲಿ ಹೆಚ್ಚಿನ ವಿನಿಮಯವನ್ನು ಉತ್ತೇಜಿಸಲು ಈ ವರ್ಷದ ಕೊನೆಯಲ್ಲಿ ಬಿಮ್ ಸ್ಟೆಕ್ ಯುವ ನಾಯಕರ ಶೃಂಗಸಭೆ ನಡೆಯಲಿದೆ. ನಾವೀನ್ಯತೆ ಮತ್ತು ಸಹಯೋಗವನ್ನು ಉತ್ತೇಜಿಸಲು ನಾವು ಬಿಮ್ ಸ್ಟೆಕ್ ಹ್ಯಾಕಥಾನ್ ಮತ್ತು ಯುವ ವೃತ್ತಿಪರ ಸಂದರ್ಶಕರ ಕಾರ್ಯಕ್ರಮವನ್ನೂ ಸಹ ಆರಂಭಿಸುತ್ತೇವೆ.

ಕ್ರೀಡಾ ಕ್ಷೇತ್ರದಲ್ಲಿ ಭಾರತ ಈ ವರ್ಷ ಬಿಮ್ ಸ್ಟೆಕ್ ಅಥ್ಲೆಟಿಕ್ಸ್ ಮೀಟ್ ಅನ್ನು ಆಯೋಜಿಸಲು ಪ್ರಸ್ತಾಪಿಸಿದೆ. ಮತ್ತು 2027 ಕ್ಕೆ ಮುನ್ನ ಬಿಮ್ ಸ್ಟೆಕ್ ನ 30ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಾರತವು ಚೊಚ್ಚಲ ಬಿಮ್ ಸ್ಟೆಕ್ ಕ್ರೀಡಾಕೂಟವನ್ನು ಆಯೋಜಿಸಲಿದೆ ಎಂದು ಘೋಷಿಸಲು ನನಗೆ ಸಂತಸವಾಗುತ್ತಿದೆ.

ಗೌರವಾನ್ವಿತರೇ,

ನಮಗೆ ಬಿಮ್ ಸ್ಟೆಕ್ ಕೇವಲ ಪ್ರಾದೇಶಿಕ ಸಂಘಟನೆಯಲ್ಲ, ಅದು ಸಮಗ್ರ ಅಭಿವೃದ್ಧಿ ಮತ್ತು ಸಾಮೂಹಿಕ ಭದ್ರತೆಗೆ ಒಂದು ಮಾದರಿಯಾಗಿದೆ. ಇದು ನಮ್ಮ ಹಂಚಿಕೆಯ ಬದ್ಧತೆಗಳು ಮತ್ತು ನಮ್ಮ ಏಕತೆಯ ಬಲಕ್ಕೆ ಸಾಕ್ಷಿಯಾಗಿದೆ.

ಇದು "ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಾಯಸ್" ಎಂಬ ಮನೋಭಾವವನ್ನು ಸಾಕಾರಗೊಳಿಸುತ್ತದೆ.

ಒಟ್ಟಾರೆ ನಾವು ಒಗ್ಗಟ್ಟು, ಸಹಕಾರ ಮತ್ತು ಪರಸ್ಪರ ನಂಬಿಕೆಯ ಮನೋಭಾವ ಬಲಪಡಿಸುವುದನ್ನು ಮುಂದುವರಿಸುತ್ತೇವೆ ಮತ್ತು ಬಿಮ್ ಸ್ಟೆಕ್  ಅನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತೇವೆಂಬ ವಿಶ್ವಾಸ ನನಗಿದೆ.

ಕೊನೆಯದಾಗಿ, ಬಿಮ್ ಸ್ಟೆಕ್ ನ ನೂತನ ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಬಾಂಗ್ಲಾದೇಶಕ್ಕೆ ನಾನು ಆತ್ಮೀಯ ಸ್ವಾಗತವನ್ನು ಸಲ್ಲಿಸುತ್ತೇನೆ ಮತ್ತು ಅದರ ಯಶಸ್ವಿ ನಾಯಕತ್ವಕ್ಕಾಗಿ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ತುಂಬಾ ಧನ್ಯವಾದಗಳು

ಘೋಷಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದ, ಅವರು ಮೂಲತಃ ಹಿಂದಿಯಲ್ಲಿ ಮಾತನಾಡಿದರು.

 

*****


(Release ID: 2118881) Visitor Counter : 10