ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಗುಜರಾತಿನ ಚಿಖಾಲಿಯಲ್ಲಿ 5.4 ಗಿಗಾವ್ಯಾಟ್ ಹೈಟೆಕ್ ಘಟಕವನ್ನು ಉದ್ಘಾಟಿಸಿದರು
ಇಂದು ಗುಜರಾತ್ ಮತ್ತು ನಮ್ಮ ದೇಶಕ್ಕೆ ಸ್ಮರಣೀಯ ದಿನ: ಶ್ರೀ ಪ್ರಲ್ಹಾದ್ ಜೋಶಿ
ಕಳೆದ 10 ವರ್ಷಗಳಲ್ಲಿ, ದೇಶದಲ್ಲಿ ಸೌರಶಕ್ತಿ ಸಾಮರ್ಥ್ಯವು 2014 ರಲ್ಲಿದ್ದ 2.82 ಗಿಗಾವ್ಯಾಟ್ ನಿಂದ ಇಂದು 104 ಗಿಗಾವ್ಯಾಟ್ ಗೆ ಅಭೂತಪೂರ್ವ ಹೆಚ್ಚಳ ಕಂಡಿದೆ, ಇದು ಶೇ.3580 ರಷ್ಟು ಗಮನಾರ್ಹ ಹೆಚ್ಚಳವಾಗಿದೆ: ಶ್ರೀ ಪ್ರಲ್ಹಾದ್ ಜೋಶಿ
Posted On:
29 MAR 2025 4:46PM by PIB Bengaluru
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಗುಜರಾತಿನ ಚಿಖಾಲಿಯಲ್ಲಿ ವಾರೀ ಎನರ್ಜಿ ಕಂಪನಿಯ ಅತ್ಯಾಧುನಿಕ 5.4 ಗಿಗಾವ್ಯಾಟ್ ಸೌರ ಕೋಶ ಗಿಗಾಫ್ಯಾಕ್ಟರಿ/ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು. ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಗುಜರಾತ್ ಇಂಧನ ಮತ್ತು ಪೆಟ್ರೋಕೆಮಿಕಲ್ಸ್ ಸಚಿವರಾದ ಶ್ರೀ ಕನುಭಾಯಿ ದೇಸಾಯಿ; ಗೃಹ, ಕ್ರೀಡೆ ಮತ್ತು ಯುವ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಹರ್ಷಭಾಯಿ ಸಾಂಘ್ವಿ; ಪರಿಸರ, ಹವಾಮಾನ ಬದಲಾವಣೆ ಮತ್ತು ಜಲ ಸಂಪನ್ಮೂಲಗಳ ರಾಜ್ಯ ಸಚಿವ ಶ್ರೀ ಮುಖೇಶಭಾಯಿ ಪಟೇಲ್ ಮತ್ತು ಶ್ರೀ ಪಿ.ಪಿ. ಚೌಧರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾರತದ ಅತಿದೊಡ್ಡ ಅತ್ಯಾಧುನಿಕ ಸೌರ ಕೋಶ ಉತ್ಪಾದನಾ ಘಟಕವಾಗಿ, ಈ ಐತಿಹಾಸಿಕ ಸಾಧನೆಯು ದೇಶೀಯ ಸೌರಶಕ್ತಿ ಪೂರೈಕೆ ಸರಪಳಿಯನ್ನು ಬಲಪಡಿಸುವ ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಜಾಗತಿಕ ಸೌರಶಕ್ತಿಯ ಮೌಲ್ಯ ಸರಪಳಿಯ ನಿವ್ವಳ ರಫ್ತುದಾರನಾಗಿ ಮತ್ತು ಪೂರಕ ವ್ಯವಸ್ಥೆಯನ್ನು ಸಕ್ರಿಯಗೊಳಿಸುವಲ್ಲಿ ದೇಶವು ಮುಂಚೂಣಿಯಲ್ಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, "ಈ ಭವ್ಯ ಘಟಕವು ಭಾರತದ ಚೈತನ್ಯದ ಸಾಕಾರವಾಗಿದೆ ಮತ್ತು ಜಾಗತಿಕ ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಹೆಚ್ಚುತ್ತಿರುವ ಪರಿಣತಿಯ ರೂಪವಾಗಿದೆ. ಭಾರತವನ್ನು ಶುದ್ಧ ಇಂಧನ ತಂತ್ರಜ್ಞಾನಗಳ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಸ್ಥಾಪಿಸುವ ನಮ್ಮ ರಾಷ್ಟ್ರೀಯ ದೃಷ್ಟಿಕೋನಕ್ಕೆ ಇದು ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಈ ಘಟಕವು ಸ್ಥಳೀಯ ಅಗತ್ಯಗಳನ್ನು ಪೂರೈಸುವುದಲ್ಲದೆ, ಭಾರತವನ್ನು ಮುಂದುವರಿದ ಸೌರ ತಂತ್ರಜ್ಞಾನಗಳ ಪ್ರಮುಖ ರಫ್ತುದಾರನನ್ನಾಗಿಸುತ್ತದೆ" ಎಂದು ಹೇಳಿದರು.

ಇಂದು ವಾರೀ ಎನರ್ಜಿ ಕಂಪನಿಗೆ ಮಾತ್ರವಲ್ಲದೆ ಗುಜರಾತ್ ಮತ್ತು ನಮ್ಮ ದೇಶಕ್ಕೂ ಸ್ಮರಣೀಯ ದಿನವಾಗಿದೆ ಎಂದು ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ವೇದಗಳು, ಉಪನಿಷತ್ತುಗಳು ಸೇರಿದಂತೆ ನಮ್ಮ ಪವಿತ್ರ ಗ್ರಂಥಗಳು ಯಾವಾಗಲೂ ಮನುಕುಲ ಮತ್ತು ಪರಿಸರದ ನಡುವಿನ ಸಾಮರಸ್ಯದ ಮಹತ್ವವನ್ನು ಒತ್ತಿಹೇಳಿವೆ ಎಂದು ಅವರು ಹೇಳಿದರು.

ಗಾಯತ್ರಿ ಮಂತ್ರದ ಮಹತ್ವದ ಬಗ್ಗೆ ಮಾತನಾಡಿದ ಅವರು, ಸಾವಿರಾರು ವರ್ಷಗಳ ಹಿಂದೆ ಬರೆಯಲಾದ ಈ ಮಂತ್ರವು ಸೂರ್ಯನ ದೈವಿಕ ಶಕ್ತಿಗೆ ಸಮರ್ಪಿತವಾಗಿದೆ ಎಂದು ಹೇಳಿದರು. ಇಂದಿಗೂ ಕೋಟ್ಯಂತರ ಭಾರತೀಯರು ಈ ಪವಿತ್ರ ಮಂತ್ರದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಸೂರ್ಯ ನಮಸ್ಕಾರದ ಮೂಲಕ ದೇವರಿಗೆ ಗೌರವ ಸಲ್ಲಿಸುತ್ತಾರೆ. ಈಗ ನಾವು ಈ ಆಳವಾದ ಆಧ್ಯಾತ್ಮಿಕ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತಿದ್ದೇವೆ, 2014 ರವರೆಗೆ ಭಾರತವು ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರತೆಯ ಕ್ಷೇತ್ರಗಳಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಿರಲಿಲ್ಲ ಎಂಬುದು ಆಘಾತಕಾರಿಯಾದುದು. ಸುಸ್ಥಿರತೆಯ ಜಾಗತಿಕ ನಕ್ಷೆಯಲ್ಲಿ ನಾವು ಎಲ್ಲಿಯೂ ಕಂಡುಬರಲಿಲ್ಲ ಎಂದು ಅವರು ಹೇಳಿದರು.
2014 ರಲ್ಲಿ ಪ್ರಧಾನಿ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರವೇ ಪರಿಸರ ಸುಸ್ಥಿರತೆಯ ಕಡೆಗೆ ಭಾರತದ ದೃಷ್ಟಿಕೋನ ಬದಲಾಗಲು ಪ್ರಾರಂಭಿಸಿತು ಎಂದು ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ನಾವು ಜಾಗತಿಕ ಇಂಧನ ಕ್ರಾಂತಿಯಲ್ಲಿ ಭಾಗವಹಿಸುತ್ತಿರುವುದು ಮಾತ್ರವಲ್ಲದೆ, ಅದನ್ನು ಮುನ್ನಡೆಸುತ್ತಿದ್ದೇವೆ. ಇಂದು, ನಾವು ವಿಶ್ವದ ಮೂರನೇ ಅತಿದೊಡ್ಡ ನವೀಕರಿಸಬಹುದಾದ ಇಂಧನ ಸಾಮರ್ಥ್ಯವಾಗಿದ್ದೇವೆ. ಕಳೆದ 10 ವರ್ಷಗಳಲ್ಲಿ, ದೇಶದಲ್ಲಿ ಸೌರಶಕ್ತಿ ಸಾಮರ್ಥ್ಯದಲ್ಲಿ ಅಸಾಧಾರಣ ಬೆಳವಣಿಗೆ ಕಂಡುಬಂದಿದೆ, 2014 ರಲ್ಲಿದ್ದ 2.82 ಗಿಗಾವ್ಯಾಟ್ ನಿಂದ ಇಂದು 104 ಗಿಗಾವ್ಯಾಟ್ ಗೆ ಹೆಚ್ಚಳವಾಗಿದೆ, ಇದು ಶೇ.3580 ರಷ್ಟು ಗಮನಾರ್ಹ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ಮಾಡ್ಯೂಲ್ ಉತ್ಪಾದನೆಗೂ ಒತ್ತು ನೀಡಿದ್ದು, ಅದರ ಸಾಮರ್ಥ್ಯವು 2014 ರಲ್ಲಿದ್ದ 2 ಗಿಗಾವ್ಯಾಟ್ ನಿಂದ ಇಂದು 80 ಗಿಗಾವ್ಯಾಟ್ ಗೆ ಏರಿಕೆಯಾಗಿದೆ ಎಂದು ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. 2014 ರಲ್ಲಿ, ಸೌರ ಕೋಶಗಳು ಮತ್ತು ವೇಫರ್ ಗಳ ಉತ್ಪಾದನೆ ಇರಲಿಲ್ಲ, ಆದರೆ ಇಂದು ಭಾರತವು 25 ಗಿಗಾವ್ಯಾಟ್ ಕೋಶಗಳನ್ನು ಮತ್ತು 2 ಗಿಗಾವ್ಯಾಟ್ ವೇಫರ್ ಗಳನ್ನು ಉತ್ಪಾದಿಸುತ್ತಿದೆ. ಇದಕ್ಕೆ ಮತ್ತಷ್ಟು ಉತ್ತೇಜನ ನೀಡಲು, ಯೋಜನೆಗಳಲ್ಲಿ ಬಳಸಲಾಗುವ ಎಲ್ಲಾ ಸೌರ ಪಿವಿ ಮಾಡ್ಯೂಲ್ ಗಳು ಜೂನ್ 1, 2026 ರಿಂದ ಎ ಎಲ್ ಎಂ ಪಟ್ಟಿ-II ರಿಂದ ತಮ್ಮ ಸೌರ ಕೋಶಗಳನ್ನು ಪಡೆಯಬೇಕು ಎಂದು ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. 2030 ರ ಹೊತ್ತಿಗೆ, ಈ ಉಪಕ್ರಮವು ಭಾರತದ ನವೀಕರಿಸಬಹುದಾದ ಇಂಧನ ಪ್ರಯತ್ನಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಆ ಹೊತ್ತಿಗೆ ಸೌರ ಮಾಡ್ಯೂಲ್ ಗಳ ಉತ್ಪಾದನೆಯು ಗಗನಕ್ಕೇರುತ್ತದೆ ಮತ್ತು 150 ಗಿಗಾವ್ಯಾಟ್ ತಲುಪುವ ವಿಶ್ವಾಸವಿದೆ. ಸೌರ ಕೋಶಗಳಲ್ಲಿ ನಮ್ಮ ಸಾಮರ್ಥ್ಯವು 100 ಗಿಗಾವ್ಯಾಟ್ ಗೆ ಹೆಚ್ಚಾಗುತ್ತದೆ, ವೇಫರ್ ಉತ್ಪಾದನೆಯು 40 ಗಿಗಾವ್ಯಾಟ್ ತಲುಪುತ್ತದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಸೌರಶಕ್ತಿಯ ಜಾಗತಿಕ ಅಭಿವೃದ್ಧಿಯನ್ನು ವೇಗಗೊಳಿಸಲು ಅಂತರರಾಷ್ಟ್ರೀಯ ಸೌರ ಒಕ್ಕೂಟವನ್ನು ಸಹ-ಸ್ಥಾಪಿಸಿದೆ ಎಂದು ಅವರು ಹೇಳಿದರು. ಪ್ರಸ್ತುತ, 100 ಕ್ಕೂ ಹೆಚ್ಚು ದೇಶಗಳು ಐ ಎಸ್ ಎ ಮೂಲಕ ಹಸಿರು ಭವಿಷ್ಯಕ್ಕೆ ಬದ್ಧವಾಗಿವೆ. ಹಲವು ವರ್ಷಗಳಿಂದ, ಒಂದು ದೇಶ (ಚೀನಾ) ನವೀಕರಿಸಬಹುದಾದ ಮತ್ತು ನವಯುಗದ ಸಂಪನ್ಮೂಲಗಳ ಕ್ಷೇತ್ರದಲ್ಲಿ ಪ್ರಬಲ ಶಕ್ತಿಯಾಗಿದೆ. ಆದರೆ ಇಂದು ಭಾರತವು ಜಾಗತಿಕ ಮಿತ್ರನಾಗಿ ಹೊರಹೊಮ್ಮುತ್ತಿದೆ, ಜಾಗತಿಕ ದಕ್ಷಿಣದ ಧ್ವನಿಯಾಗುತ್ತಿದೆ ಮತ್ತು ಹೊಸ ವಿಶ್ವ ಕ್ರಮಾಂಕವನ್ನು ಮುನ್ನಡೆಸುತ್ತಿದೆ ಎಂದು ಅವರು ಹೇಳಿದರು.
ಜಗತ್ತಿನಲ್ಲಿ 195 ದೇಶಗಳಿವೆ, ಆದರೆ ಪ್ರಧಾನಿ ಮೋದಿಯವರ ದೂರದರ್ಶಿ ನಾಯಕತ್ವದಲ್ಲಿ, ಭಾರತವು ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ ಉಪಕ್ರಮವನ್ನು ಪ್ರಾರಂಭಿಸಿತು. ಇದೇ ಕಾರಣಕ್ಕೆ ಇಂದು ಯುರೋಪಿಯನ್ ಯೂನಿಯನ್ ಕಾಲೇಜ್ ಆಫ್ ಕಮಿಷನರ್ಸ್ ಯುರೋಪ್ ಖಂಡದ ಹೊರಗೆ ಮೊದಲ ಬಾರಿಗೆ ಭೇಟಿ ನೀಡಿದಾಗ ಅದು ಭಾರತಕ್ಕೆ ಆದ್ಯತೆ ನೀಡುತ್ತದೆ ಎಂದು ಅವರು ಹೇಳಿದರು.
ಇಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯಾಗಲಿ, ವಿಶ್ವ ಆರ್ಥಿಕ ವೇದಿಕೆಯಾಗಲಿ, ಐಎಂಎಫ್ ಆಗಲಿ, ವಿಶ್ವಬ್ಯಾಂಕ್ ಆಗಲಿ ಎಲ್ಲರೂ ಭಾರತವನ್ನು ನಾಯಕತ್ವದ ದಾರಿದೀಪವಾಗಿ ನೋಡುತ್ತಿವೆ ಎಂದು ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ಇದೆಲ್ಲವೂ ನಮ್ಮ ಪ್ರಧಾನಿ ಮೋದಿಯವರ ದೂರದೃಷ್ಟಿ, ವೇಗ ಮತ್ತು ಪ್ರಮಾಣದಿಂದ ಸಾಧ್ಯವಾಗಿದೆ. ಅವರು ಈ ಗುಜರಾತಿನ ನೆಲದ ಮಗ ಮತ್ತು ಈ ನೆಲ ನಮಗೆ ನೀಡಿದ ನಾಯಕತ್ವದ ಪರಂಪರೆಯನ್ನು ಮುನ್ನಡೆಸಿದ್ದಾರೆ. ಈ ನೆಲ ನಮಗೆ ಮಹಾತ್ಮಾ ಗಾಂಧಿ ಮತ್ತು ಸರ್ದಾರ್ ಪಟೇಲರನ್ನು ನೀಡಿದೆ. ಈ ನೆಲ ಭಾರತಕ್ಕೆ ತನ್ನ ಉದ್ಯಮಶೀಲತೆಯ ಗುರುತನ್ನು ನೀಡಿದೆ. ನವೀಕರಿಸಬಹುದಾದ ಇಂಧನ ಬೆಳವಣಿಗೆಯ ಕಥೆಯು ಗುಜರಾತಿನಲ್ಲಿಯೇ ಪ್ರಾರಂಭವಾಯಿತು. ಇದೆಲ್ಲವೂ ಮೋದಿಯವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಪ್ರಾರಂಭವಾಯಿತು. ಇಂದು, ಗುಜರಾತ್ ಭಾರತದಾದ್ಯಂತ ಒಂದು ಮಾದರಿಯಾಗಿದೆ, ಇದು ರಾಷ್ಟ್ರೀಯ ಮಾನದಂಡವನ್ನು ಸ್ಥಾಪಿಸಿದೆ. ಈ ಹಿನ್ನೆಲೆಯಲ್ಲಿ, ಮೋದಿಯವರ ದೃಷ್ಟಿಕೋನವನ್ನು ಮುಂದುವರೆಸುತ್ತಿರುವ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನಾಯಕತ್ವವು ಪ್ರಶಂಸೆಗೆ ಅರ್ಹವಾದುದು ಎಂದು ಅವರು ಹೇಳಿದರು. ಈ ನಿರ್ಣಾಯಕ ಕ್ಷೇತ್ರದಲ್ಲಿ ಗುಜರಾತ್ ಮುಂಚೂಣಿಯಲ್ಲಿ ಉಳಿಯುವಂತೆ ಅವರು ಖಚಿತಪಡಿಸುತ್ತಿದ್ದಾರೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಗುಜರಾತಿನ ಅಭಿವೃದ್ಧಿಯ ಮಾದರಿಯನ್ನು ಅಳವಡಿಸಿಕೊಳ್ಳಲು ನಾನು ಇತರ ರಾಜ್ಯಗಳನ್ನು ಪ್ರೋತ್ಸಾಹಿಸುತ್ತೇನೆ. ಕೈಗಾರಿಕೆಗಳಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಮತ್ತು ನವೀಕರಿಸಬಹುದಾದ ಇಂಧನದಲ್ಲಿ ಹೂಡಿಕೆ ಮಾಡುವ ಗುಜರಾತಿನ ಉದಾಹರಣೆಯಿಂದ ಇತರ ರಾಜ್ಯಗಳು ಕಲಿಯಬೇಕು ಎಂದು ಅವರು ಹೇಳಿದರು.
ವಿಶ್ವ ಆರ್ಥಿಕ ವೇದಿಕೆ ಬಿಡುಗಡೆ ಮಾಡಿದ ಫ್ಯೂಚರ್ ಆಫ್ ಜಾಬ್ಸ್ ರಿಪೋರ್ಟ್ 2025 ರ ಪ್ರಕಾರ, ಹಸಿರು ಪರಿವರ್ತನೆಯಂತಹ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಉದ್ಯೋಗಗಳನ್ನು ಸೃಷ್ಟಿಸುವುದರಿಂದ 2030ರ ವೇಳೆಗೆ 170 ಮಿಲಿಯನ್ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಕೇಂದ್ರ ಸಚಿವರು ಹೇಳಿದರು. ಈ 5.4 ಗಿಗಾವ್ಯಾಟ್ ಸೌರ ಕೋಶ ಘಟಕದಿಂದ ಉತ್ಪಾದನೆಯಾಗುವ ಗಮನಾರ್ಹ ಸಂಖ್ಯೆಯ ಉದ್ಯೋಗಗಳು ಸಹ ಇದಕ್ಕೆ ಕೊಡುಗೆ ನೀಡುತ್ತವೆ. ಈ ಘಟಕವು ಸ್ಥಳೀಯ ನಿವಾಸಿಗಳು ಮತ್ತು ವೃತ್ತಿಪರರಿಗೆ ಹಲವಾರು ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.
ಗುಜರಾತ್ ಒಟ್ಟು ಇಂಧನ ಸಾಮರ್ಥ್ಯದ ಶೇ.57 ರಷ್ಟನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುತ್ತಿದ್ದರೆ, ಉಷ್ಣ ವಿದ್ಯುತ್ ಉತ್ಪಾದನೆ ಶೇ.43 ರಷ್ಟಿದೆ ಎಂದು ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅಡಿಯಲ್ಲಿ ರಾಜ್ಯವು ತನ್ನ ಪ್ರಗತಿಯನ್ನು ಹೆಚ್ಚಿಸಲು ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಪ್ರಧಾನ ಮಂತ್ರಿ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ ಇದುವರೆಗೆ ಒಟ್ಟು 3.85 ಲಕ್ಷ ವಿದ್ಯುತ್ ಸ್ಥಾಪನೆಗಳನ್ನು ಮಾಡಲಾಗಿದೆ. ಈ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಗುಜರಾತಿನ ಉತ್ಸಾಹ ಕೇವಲ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಸೀಮಿತವಾಗಿಲ್ಲ. ಇದು ಜವಾಬ್ದಾರಿಯುತವಾಗಿ ಮತ್ತು ಸುಸ್ಥಿರವಾಗಿ ವ್ಯಾಪಾರ ಮಾಡುವ ಬಗ್ಗೆಯಾಗಿದೆ. ಈ ಘಟಕವು ತನ್ನ ಸಂಪೂರ್ಣ ಸಾಮರ್ಥ್ಯದೊಂದಿಗೆ ಭಾರತವನ್ನು ಸೌರಶಕ್ತಿ ಕ್ಷೇತ್ರದಲ್ಲಿ ಜಾಗತಿಕ ಸೂಪರ್ ಪವರ್ ಮಾಡಲು ಕೊಡುಗೆ ನೀಡುತ್ತದೆ ಎಂದು ನಾವು ಹೆಮ್ಮೆಪಡುತ್ತೇವೆ ಎಂದು ಅವರು ಹೇಳಿದರು.
*****
(Release ID: 2116656)
Visitor Counter : 49