ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್‌ನ ನವಸಾರಿಯಲ್ಲಿ ಲಖ್ಪತಿ ದೀದಿಯರೊಂದಿಗೆ ಪ್ರಧಾನಮಂತ್ರಿ ಸಂವಾದ

Posted On: 08 MAR 2025 10:55PM by PIB Bengaluru

ಲಖ್ಪತಿ ದೀದಿ: ಇಂದು ಮಹಿಳಾ ದಿನದಂದೇ ನಮಗೆ ದೊರೆತ ಗೌರವ ಮತ್ತು ಸನ್ಮಾನವು ನಮಗೆ ತುಂಬಾ ಸಂತೋಷ ನೀಡುತ್ತಿದೆ.

ಪ್ರಧಾನಮಂತ್ರಿ: ಇಂದು ಇಡೀ ಜಗತ್ತೇ ಮಹಿಳಾ ದಿನ ಆಚರಿಸಬಹುದು, ಆದರೆ ನಮ್ಮ ಮೌಲ್ಯಗಳು ಮತ್ತು ನಮ್ಮ ದೇಶದ ಸಂಸ್ಕೃತಿಯಲ್ಲಿ, ನಾವು ಮಾತೃ ದೇವೋ ಭವದಿಂದ ಪ್ರಾರಂಭಿಸುತ್ತೇವೆ. ನಮಗೆ, ಎಲ್ಲಾ 365 ದಿನಗಳು ಮಾತೃ ದೇವೋ ಭವ - ಕೇವಲ 1 ದಿನವಲ್ಲ.

ಲಖ್ಪತಿ ದೀದಿ: ಶಿವಾನಿ ಮಹಿಳಾ ಮಂಡಲದಲ್ಲಿ, ನಾವು ನಮ್ಮ ಸೌರಾಷ್ಟ್ರ ಸಂಸ್ಕೃತಿಯ ಭಾಗವಾಗಿರುವ ವಸ್ತ್ರಗಳ ಮೇಲೆ ಮಣಿಗಳಿಂದ ಅಲಂಕಾರ ಮಾಡುವ ಕೆಲಸ ಮಾಡುತ್ತೇವೆ. ಸರ್, ನಾವು 400ಕ್ಕೂ ಹೆಚ್ಚು ಸಹೋದರಿಯರಿಗೆ ಮಣಿ ಕೆಲಸದ ತರಬೇತಿ ನೀಡಿದ್ದೇವೆ. ನಮ್ಮಲ್ಲಿ 11 ಜನರಲ್ಲಿ 3-4 ಸಹೋದರಿಯರು ಮಾರುಕಟ್ಟೆ ವ್ಯವಹಾರ ನಿರ್ವಹಿಸುತ್ತಾರೆ, ಅದರಲ್ಲಿ ಇಬ್ಬರು ಎಲ್ಲಾ ಖಾತೆಗಳನ್ನು ನಿರ್ವಹಿಸುತ್ತಾರೆ.

ಪ್ರಧಾನಮಂತ್ರಿ: ಹಾಗಾದರೆ, ಹೊರಗೆ ಮಾರುಕಟ್ಟೆ ವ್ಯವಹಾರ ಮಾಡುವವರು ಪ್ರಯಾಣ ಮಾಡುತ್ತಾರಾ?

ಲಖ್ಪತಿ ದೀದಿ: ಹೌದು, ಸರ್, ವಿವಿಧ ರಾಜ್ಯಗಳಿಗೆ ಮತ್ತು ಎಲ್ಲೆಡೆ ಹೋಗುತ್ತಿರುತ್ತಾರೆ.

ಪ್ರಧಾನಮಂತ್ರಿ: ಹಾಗಾದರೆ, ನೀವು ದೇಶಾದ್ಯಂತ ಸಂಚರಿಸುತ್ತೀರಾ?

ಲಖ್ಪತಿ ದೀದಿ: ಹೌದು, ಸರ್, ಬಹುತೇಕ ಎಲ್ಲೆಡೆ ಹೋಗುತ್ತೇವೆ. ನಾವು ಹೋಗದ ಯಾವುದೇ ನಗರಗಳಿಲ್ಲ.

ಪ್ರಧಾನಮಂತ್ರಿ:  ಹಾಗಾದರೆ ಪಾರುಲ್ ಬೆಹನ್ ಎಷ್ಟು ಸಂಪಾದಿಸುತ್ತಾರೆ?

ಲಖ್ಪತಿ ದೀದಿ: ಪಾರುಲ್ ಬೆಹನ್ 40,000 ರೂಪಾಯಿಗಿಂತ ಹೆಚ್ಚಿನ ಹಣ ಸಂಪಾದಿಸುತ್ತಾರೆ, ಸರ್.

ಪ್ರಧಾನಮಂತ್ರಿ:  ಹಾಗಾದರೆ, ನೀವು ಈಗ ಲಖ್ಪತಿ ದೀದಿಯಾಗಿದ್ದೀರಾ?

ಲಖ್ಪತಿ ದೀದಿ: ಹೌದು, ಸರ್, ನಾನು ಲಖ್ಪತಿ ದೀದಿಯಾಗಿದ್ದೇನೆ, ನನ್ನ ಗಳಿಕೆಯನ್ನು ಮರುಹೂಡಿಕೆ ಮಾಡಿದ್ದೇನೆ. ನನ್ನ ಜತೆಗೆ, ನಮ್ಮ ಗುಂಪಿನಲ್ಲಿರುವ 11 ಸಹೋದರಿಯರು ಸಹ ಲಖ್ಪತಿ ದೀದಿಗಳಾಗಿದ್ದಾರೆ ಎಂದು ನಾನು ಕನಸು ಕಾಣುತ್ತೇನೆ, ನಮ್ಮ ಹಳ್ಳಿಯಲ್ಲಿರುವ ಪ್ರತಿಯೊಬ್ಬ ಸಹೋದರಿಯೂ ಅದನ್ನೇ ಸಾಧಿಸಬೇಕೆಂದು ನಾನು ಬಯಸುತ್ತೇನೆ.

ಪ್ರಧಾನಮಂತ್ರಿ:  ವಾಹ್!

ಲಖ್ಪತಿ ದೀದಿ: ಎಲ್ಲರನ್ನೂ ಲಖ್ಪತಿ ದೀದಿಗಳನ್ನಾಗಿ ಮಾಡುವುದು ನನ್ನ ಗುರಿ.

ಪ್ರಧಾನಮಂತ್ರಿ: ಹಾಗಾದರೆ, 3 ಕೋಟಿ ಲಖ್ಪತಿ ದೀದಿಗಳನ್ನು ಸೃಜಿಸುವ ನನ್ನ ಕನಸು - ನೀವೆಲ್ಲರೂ ಅದನ್ನು 5 ಕೋಟಿಗೆ ಕೊಂಡೊಯ್ಯುತ್ತೀರಿ ಎಂದು ನನಗೆ ಅನಿಸುತ್ತಿದೆ!

ಲಖ್ಪತಿ ದೀದಿ: ಖಂಡಿತ, ಸರ್! ಇದು ಒಂದು ಭರವಸೆ!

ಲಖ್ಪತಿ ದೀದಿ: ನನ್ನ ತಂಡದಲ್ಲಿ 65 ಸಹೋದರಿಯರು ಇದ್ದಾರೆ - 65 ಮಹಿಳೆಯರು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ. ನಾವು 'ಮಿಶ್ರಿ'(ಕಲ್ಲುಸಕ್ಕರೆ)ಯಿಂದ ತಯಾರಿಸಿದ ವಿಶೇಷ ಸಿರಪ್ ತಯಾರಿಸುತ್ತೇವೆ. ನಮ್ಮ ವಾರ್ಷಿಕ ವಹಿವಾಟು 25-30 ಲಕ್ಷ ರೂಪಾಯಿಗಳಷ್ಟಿದೆ. ನನ್ನ ವೈಯಕ್ತಿಕ ಗಳಿಕೆ ಸುಮಾರು 2.5-3 ಲಕ್ಷ ರೂಪಾಯಿ. ನನ್ನ ಸಹೋದ್ಯೋಗಿ ದೀದಿಗಳು ಸಹ ತಲಾ 2-2.5 ಲಕ್ಷ ರೂಪಾಯಿಗಿಂತ ಹೆಚ್ಚು ಗಳಿಸುತ್ತಾರೆ. ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ನಾವು ಸ್ವಸಹಾಯ ಗುಂಪು(ಎಸ್ಎಚ್ ಜಿ)ಗಳೊಂದಿಗೆ ಸಹಕರಿಸುತ್ತೇವೆ. ಸರ್, ಈ ವೇದಿಕೆ ಪಡೆಯುವುದು ನಮ್ಮ ಮನೆಯ ಛಾವಣಿಯ ಮೇಲೆ ಬೆಂಬಲದ ಬೆಳಕು ಕಂಡುಕೊಂಡಂತಾಗಿದೆ - ನಾವು ಇಂದು ಇರುವ ಸ್ಥಳಕ್ಕೆ ತಲುಪುತ್ತೇವೆ ಎಂದು ನಾವು ಎಂದಿಗೂ ಊಹಿಸಿರಲಿಲ್ಲ. ನನ್ನೊಂದಿಗೆ ಕೆಲಸ ಮಾಡುವ ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ ಸರ್, ನಾವು ಅವರಿಗೆ ಹೊಸ ಅವಕಾಶಗಳನ್ನು ಹುಡುಕಲು ಸಹಾಯ ಮಾಡಿದ್ದೇವೆ. ನನ್ನ ತಂಡದಲ್ಲಿರುವ ಅನೇಕ ಮಹಿಳೆಯರು ಈಗ ತಮ್ಮ ಆಕ್ಟಿವಾ ಸ್ಕೂಟರ್‌ಗಳಲ್ಲಿ ಮಾರ್ಕೆಟಿಂಗ್‌ಗೆ ಹೋಗುತ್ತಾರೆ, ಕೆಲವರು ಬ್ಯಾಂಕಿಂಗ್ ಕೆಲಸ ನಿರ್ವಹಿಸುತ್ತಾರೆ ಮತ್ತು ಇತರರು ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಧಾನಮಂತ್ರಿ: ಹಾಗಾದರೆ, ನಿಮ್ಮ ಎಲ್ಲಾ ಸಹೋದರಿಯರು ಈಗ ಸ್ವಂತ ವಾಹನಗಳನ್ನು ಹೊಂದಿದ್ದಾರೆಯೇ?

ಲಖ್ಪತಿ ದೀದಿ: ಹೌದು, ಸರ್! ನಾನೇ ಸ್ವತಃ ಒಂದು ಇಕೋ ಕಾರು ಖರೀದಿಸಿದ್ದೇನೆ!

ಪ್ರಧಾನಮಂತ್ರಿ:  ಅದು ಅದ್ಭುತ!

ಲಖ್ಪತಿ ದೀದಿ: ನಾನೇ ಕಾರು ಓಡಿಸಲು ಸಾಧ್ಯವಾಗುತ್ತಿಲ್ಲ ಸರ್, ಆದ್ದರಿಂದ ನಾನು ಪ್ರಯಾಣಿಸಬೇಕಾದಾಗಲೆಲ್ಲಾ, ನಾನು ಚಾಲಕನನ್ನು ಕರೆದುಕೊಂಡು ಹೋಗುತ್ತೇನೆ. ಸರ್ ಇಂದು, ನಮ್ಮ ಸಂತೋಷ 2 ಪಟ್ಟು ಹೆಚ್ಚಾಗಿದೆ! ನಮಗೆ ಅದು ಯಾವಾಗಲೂ ಕನಸಾಗಿತ್ತು. ನಾವು ನಿಮ್ಮನ್ನು ಟಿವಿಯಲ್ಲಿ ನೋಡುತ್ತಿದ್ದೆವು, ದೊಡ್ಡ ಜನಸಂದಣಿಯಲ್ಲಿ ನೋಡುತ್ತಿದ್ದೆವು. ನಾವು ನಿಮ್ಮನ್ನು ನೋಡಲು ಪ್ರಯತ್ನಿಸಿದ್ದೆವು. ಆದರೆ ಈಗ, ನಾವು ನಿಮ್ಮನ್ನು ಎದುರಿನಿಂದಲೇ ನೋಡುತ್ತಿದ್ದೇವೆ!

ಪ್ರಧಾನಮಂತ್ರಿ:  ನೋಡಿ, ನಾನು ನಿಮ್ಮ ಪ್ರತಿಯೊಂದು ಅಂಗಡಿಗೂ ಭೇಟಿ ನೀಡಿದ್ದೇನೆ. ನನಗೆ ಅವಕಾಶ ಸಿಕ್ಕಾಗಲೆಲ್ಲಾ  ನಾನು ಮುಖ್ಯಮಂತ್ರಿ ಆಗಿದ್ದಾಗ ಅಥವಾ ಪ್ರಧಾನಿ ಆದಾಗಲೂ - ಅದು ನನಗೆ ಯಾವುದೇ ವ್ಯತ್ಯಾಸ ಉಂಟು ಮಾಡಿಲ್ಲ. ನಾನು ಹಾಗೆಯೇ ಇದ್ದೇನೆ.

ಲಖ್ಪತಿ ದೀದಿ: ಸರ್, ನಿಮ್ಮಿಂದಾಗಿ, ನಿಮ್ಮ ಆಶೀರ್ವಾದದಿಂದ, ನಾವು ಮಹಿಳೆಯರು ಅನೇಕ ಕಷ್ಟಗಳನ್ನು ನಿವಾರಿಸಿ ಇಷ್ಟು ಉನ್ನತ ಸ್ಥಾನ ತಲುಪಲು ಸಾಧ್ಯವಾಗಿದೆ. ನಿಮ್ಮಿಂದಾಗಿ ನಾವು ಲಖ್ಪತಿ ದೀದಿಗಳಾಗಿದ್ದೇವೆ. ಇಂದು, ನನ್ನೊಂದಿಗೆ ಇರುವ  ಹೊಂದಿರುವ ಮಹಿಳೆಯರು ಸಹ...

ಪ್ರಧಾನಮಂತ್ರಿ:  ನಿಮ್ಮ ಹಳ್ಳಿಯ ಜನರಿಗೆ ನೀವು ಲಖ್ಪತಿ ದೀದಿ ಎಂದು ತಿಳಿದಿದೆಯೇ?

ಲಖ್ಪತಿ ದೀದಿ: ಹೌದು, ಸರ್! ಎಲ್ಲರಿಗೂ ತಿಳಿದಿದೆ! ನಾನು ಇಲ್ಲಿಗೆ ಬರುತ್ತಿದ್ದಾಗ, ನಮ್ಮ ಹಳ್ಳಿಯ ಬಗ್ಗೆ ನಿಮಗೆ ದೂರು ನೀಡುತ್ತೇವೆ ಎಂದು ಕೆಲವರು ಚಿಂತಿತರಾಗಿದ್ದರು. "ದೀದಿ, ನೀವು ಹೋದರೆ, ದಯವಿಟ್ಟು ಯಾವುದೇ ದೂರು ನೀಡಬೇಡಿ" ಎಂದು ಹೇಳಿದರು.

ಲಖ್ಪತಿ ದೀದಿ: 2023ರಲ್ಲಿ, ನೀವು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಘೋಷಿಸಿದಾಗ, ನಮ್ಮ ಹಳ್ಳಿಯ ಮಹಿಳೆಯರು, ಪ್ರತಿ ಕೆಜಿಗೆ 35 ರೂಪಾಯಿಗೆ ಬಾಜ್ರಾ(ಮುತ್ತು ರಾಗಿ) ಮತ್ತು ಜೋಳ ಮಾರಾಟ ಮಾಡುವ ಬದಲು, ಮೌಲ್ಯವರ್ಧನೆಯತ್ತ ಗಮನ ಹರಿಸಬೇಕು ಎಂದು ಅರಿತುಕೊಂಡೆವು. ಆ ರೀತಿ, ಜನರು ಆರೋಗ್ಯಕರವಾಗಿ ತಿನ್ನಬಹುದು ಮತ್ತು ನಾವು ವ್ಯವಹಾರವನ್ನು ಕಟ್ಟಿಕೊಳ್ಳಬಹುದು ಎಂದು. ಆದ್ದರಿಂದ, ನಾವು 3 ಉತ್ಪನ್ನಗಳೊಂದಿಗೆ ಪ್ರಾರಂಭಿಸಿದ್ದೇವೆ - ಅವುಗಳಲ್ಲಿ ಒಂದು ಕುಕೀಸ್ ಮತ್ತು ಇನ್ನೊಂದು ಖಖ್ರಾ. ಗುಜರಾತಿ ಖಖ್ರಾ ಬಗ್ಗೆ ನಿಮಗೆ ತಿಳಿದಿದೆ, ಅಲ್ಲವೇ?

ಪ್ರಧಾನಮಂತ್ರಿ:  ಖಖ್ರಾ ಈಗ ಇಡೀ ಭಾರತ ಉತ್ಪನ್ನವಾಗಿದೆ!

ಲಖ್ಪತಿ ದೀದಿ: ಹೌದು, ಸರ್! ಇದು ಭಾರತದಾದ್ಯಂತ ತಲುಪಿದೆ.

ಪ್ರಧಾನಮಂತ್ರಿ:  ಮೋದಿ ಜಿ ಲಖ್ಪತಿ ದೀದಿಗಳನ್ನು ಸೃಜಿಸಲು ಬಯಸುತ್ತಾರೆ ಎಂದು ಕೇಳಿದಾಗ, ಮಹಿಳೆಯರು ಏನು ಯೋಚಿಸಿದ್ದರು?

ಲಖ್ಪತಿ ದೀದಿ: ಸರ್, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಮೊದಲಿಗೆ ಮಹಿಳೆಯರು  ಅದು ಅಸಾಧ್ಯವೆಂದು ಭಾವಿಸಿದ್ದರು. ಲಖ್ಪತಿ ಅಂದರೆ ಗಳಿಕೆಯಲ್ಲಿ ಬಹು ಸೊನ್ನೆಗಳನ್ನು ಹೊಂದಿರುವುದು - ಪುರುಷರು ಮಾತ್ರ ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬೇಕಾದ ವಿಷಯ ಎಂದು ಅವರು ನಂಬಿದ್ದರು. ಆದರೆ ನಾನು ಅವರಿಗೆ ಹೇಳುತ್ತೇನೆ, "ಇಂದು, ನಾವು ಲಕ್ಷಾಧಿಪತಿಗಳು; ಕೆಲವು ವರ್ಷಗಳಲ್ಲಿ, ಈ ದಿನದಂದು, ನಾವು ಕೋಟ್ಯಾಧಿಪತಿ ದೀದಿಗಳಿಗಾಗಿ ನಡೆಯುವ ಕಾರ್ಯಕ್ರಮದಲ್ಲಿ ಕುಳಿತುಕೊಳ್ಳುತ್ತೇವೆ!"

ಪ್ರಧಾನಮಂತ್ರಿ:  ವಾಹ್!

ಲಖ್ಪತಿ ದೀದಿ: ನಾವು ಈ ಕನಸನ್ನು ನನಸಾಗಿಸುತ್ತೇವೆ! ನೀವು ನಮಗೆ ದಾರಿ ತೋರಿಸಿದ್ದೀರಿ ಮತ್ತು ನಾವು ಲಕ್ಷಾಧಿಪತಿಗಳಾಗಲು ಸಹಾಯ ಮಾಡಿದ್ದೀರಿ. ಈಗ, ನಾವು ಮುಂದಿನ ಹೆಜ್ಜೆ ಇಟ್ಟು ಕೋಟ್ಯಾಧಿಪತಿಗಳಾಗಿದ್ದೇವೆ ಎಂದು ನಿಮಗೆ ತೋರಿಸುತ್ತೇವೆ. ಸರ್, ಒಂದು ಬ್ಯಾನರ್ ಇರುತ್ತದೆ, ಅದೇನೆಂದರೆ - ನಾವು ಈಗ ಕೋಟ್ಯಾಧಿಪತಿ ದೀದಿಗಳು!

ಲಖ್ಪತಿ ದೀದಿ: ನಾನು ಡ್ರೋನ್ ಪೈಲಟ್ ಆಗಿದ್ದೀನಿ, ಡ್ರೋನ್ ದೀದಿ, ಈಗ ನನ್ನ ಗಳಿಕೆ 2 ಲಕ್ಷ ರೂಪಾಯಿ ತಲುಪಿದೆ.

ಪ್ರಧಾನಮಂತ್ರಿ:  ನಾನು ಒಮ್ಮೆ ಒಬ್ಬ ಸಹೋದರಿಯನ್ನು ಭೇಟಿಯಾದೆ, ಅವರು ನನಗೆ ಹೇಳಿದರು, "ನನಗೆ ಸೈಕಲ್ ಸವಾರಿ ಮಾಡುವುದು ಹೇಗೆಂದು ತಿಳಿದಿರಲಿಲ್ಲ, ಈಗ ನಾನು ಡ್ರೋನ್‌ಗಳನ್ನು ಹಾರಿಸುತ್ತೇನೆ!"

ಲಖ್ಪತಿ ದೀದಿ: ನಮಗೆ ವಿಮಾನಗಳನ್ನು ಹಾರಿಸಲು ಸಾಧ್ಯವಾಗದಿರಬಹುದು, ಆದರೆ ಡ್ರೋನ್‌ಗಳನ್ನು ಹಾರಿಸುವ ಮೂಲಕ, ನಾವು ಪೈಲಟ್‌ಗಳಾಗಿದ್ದೇವೆ!

ಪ್ರಧಾನಮಂತ್ರಿ:  ಹಾಗಾದರೆ, ನೀವು ಪೈಲಟ್ ಆಗಿದ್ದೀರಿ!

ಲಖ್ಪತಿ ದೀದಿ: ಹೌದು, ಸರ್! ನನ್ನ ಅಳಿಯ ಸಹ ಈಗ ನನ್ನನ್ನು 'ಭಾಭಿ' (ಅತ್ತಿಗೆ) ಎಂದು ಕರೆಯುವುದಿಲ್ಲ - ಅವರು ನನ್ನನ್ನು ಪೈಲಟ್ ಎಂದು ಕರೆಯುತ್ತಾರೆ!

ಪ್ರಧಾನಮಂತ್ರಿ:  ಓಹ್! ಹಾಗಾದರೆ, ಈಗ ನೀವು ಇಡೀ ಕುಟುಂಬಕ್ಕೆ ಪೈಲಟ್ ದೀದಿ?

ಲಖ್ಪತಿ ದೀದಿ: ಹೌದು, ಸರ್! ಅವರು ಮನೆಗೆ ಬಂದಾಗಲ್ಲೆಲ್ಲಾ ನನ್ನನ್ನು ಪೈಲಟ್ ಎಂದು ಸ್ವಾಗತಿಸುತ್ತಾರೆ!

ಪ್ರಧಾನಮಂತ್ರಿ:  ಗ್ರಾಮಸ್ಥರ ಬಗ್ಗೆ ಏನು? ಅವರು ನಿಮ್ಮನ್ನು ಹಾಗೆಯೇ ಕರೆಯುತ್ತಾರೆಯೇ?

ಲಖ್ಪತಿ ದೀದಿ: ಹೌದು, ಗ್ರಾಮಸ್ಥರು ಸಹ ನನ್ನನ್ನು ಹಾಗೆಯೇ ಕರೆಯುತ್ತಾರೆ!

ಪ್ರಧಾನಮಂತ್ರಿ:  ನೀವು ನಿಮ್ಮ ತರಬೇತಿಯನ್ನು ಎಲ್ಲಿಂದ ಪಡೆದುಕೊಂಡಿದ್ದೀರಿ?

ಲಖ್ಪತಿ ದೀದಿ: ಮಹಾರಾಷ್ಟ್ರದ ಪುಣೆಯಲ್ಲಿ.

ಪ್ರಧಾನಮಂತ್ರಿ:  ಹಾಗಾದರೆ, ನೀವು ತರಬೇತಿಗಾಗಿ ಪುಣೆಗೆ ಹೋಗಿದ್ದಿರಾ?

ಲಖ್ಪತಿ ದೀದಿ: ಹೌದು, ಸರ್, ಪುಣೆ!

ಪ್ರಧಾನಮಂತ್ರಿ:  ಹಾಗಾದರೆ, ನಿಮ್ಮ ಕುಟುಂಬವು ನಿಮ್ಮನ್ನು ಹೋಗಲು ಅನುಮತಿ ನೀಡಿತಾ?

ಲಖ್ಪತಿ ದೀದಿ: ಹೌದು, ಅವರು ಒಪ್ಪಿಕೊಂಡರು.

ಪ್ರಧಾನಮಂತ್ರಿ:  ಓಹ್, ಅದು ಅದ್ಭುತವಾಗಿದೆ.

ಲಖ್ಪತಿ ದೀದಿ: ಆ ಸಮಯದಲ್ಲಿ ನನ್ನ ಮಗು ತುಂಬಾ ಚಿಕ್ಕದಾಗಿತ್ತು. ನಾನು ಅವನನ್ನು ಬಿಟ್ಟು ಅಲ್ಲಿಗೆ ಹೋಗಬೇಕಾಯಿತು. ನಾನಿಲ್ಲದೆ ಅವನು ಇರುತ್ತಾನಾ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ.

ಪ್ರಧಾನಮಂತ್ರಿ:  ಆದ್ದರಿಂದ, ಒಂದು ರೀತಿಯಲ್ಲಿ ನಿಮ್ಮ ಮಗ ನಿಮ್ಮನ್ನು ಡ್ರೋನ್ ದೀದಿಯನ್ನಾಗಿ ಮಾಡಿದ!

ಲಖ್ಪತಿ ದೀದಿ: ಹೌದು! ಈಗ ಅವನಿಗೆ ಒಂದು ಕನಸು ಇದೆ - ಅವನು ನನಗೆ ಹೇಳುತ್ತಾನೆ, "ಅಮ್ಮಾ, ನೀವು ಡ್ರೋನ್ ಪೈಲಟ್ ಆಗಿದ್ದೀಯಾ, ನಾನು ವಿಮಾನ ಪೈಲಟ್ ಆಗುತ್ತೇನೆ!"

ಪ್ರಧಾನಮಂತ್ರಿ:  ವಾಹ್! ಈಗ, ದೇಶಾದ್ಯಂತದ ಹಳ್ಳಿಗಳಲ್ಲಿ ಡ್ರೋನ್ ದೀದಿಗಳು ತಮ್ಮ ಹೆಸರು ಗಳಿಸಿದ್ದಾರೆ!

ಲಖ್ಪತಿ ದೀದಿ: ಸರ್, ಇದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ ಏಕೆಂದರೆ, ನಿಮ್ಮ ಡ್ರೋನ್ ದೀದಿ ಯೋಜನೆಯಡಿ ನಾನು ಈಗ ಲಖ್ಪತಿ ದೀದಿಯಾಗಿದ್ದೇನೆ!

ಪ್ರಧಾನಮಂತ್ರಿ:  ಮನೆಯಲ್ಲಿ ನಿಮ್ಮ ಸ್ಥಾನಮಾನವೂ ಹೆಚ್ಚಿರಬೇಕು!

ಲಖ್ಪತಿ ದೀದಿ: ಹೌದು, ಸರ್!

ಲಖ್ಪತಿ ದೀದಿ: ನಾನು ಪ್ರಾರಂಭಿಸಿದಾಗ, ನನ್ನೊಂದಿಗೆ ಕೇವಲ 12 ಸಹೋದರಿಯರು ಇದ್ದರು. ಈಗ, ಆ ಸಂಖ್ಯೆ 75ಕ್ಕೆ ಬೆಳೆದಿದೆ!

ಪ್ರಧಾನಮಂತ್ರಿ:  ಅವರು ಎಷ್ಟು ಸಂಪಾದಿಸುತ್ತಾರೆ?

ಲಖ್ಪತಿ ದೀದಿ: ನಮ್ಮ ರಾಧಾಕೃಷ್ಣ ಮಂಡಲದ ಬಗ್ಗೆ ಹೇಳುವುದಾದರೆ, ಅಲ್ಲಿನ ಸಹೋದರಿಯರು ಕಸೂತಿ ಮತ್ತು ಪಶುಸಂಗೋಪನೆ ಎರಡರಲ್ಲೂ ತೊಡಗಿಸಿಕೊಂಡಿದ್ದಾರೆ. ಒಟ್ಟಾಗಿ, ಅವರು ವಾರ್ಷಿಕವಾಗಿ ಸುಮಾರು 9.5–10 ಲಕ್ಷ ರೂಪಾಯಿ ಗಳಿಸುತ್ತಾರೆ.

ಪ್ರಧಾನಮಂತ್ರಿ:  10 ಲಕ್ಷ ರೂಪಾಯಿ!

ಲಖ್ಪತಿ ದೀದಿ: ಹೌದು, ಸರ್, ನಾವು ಗಳಿಸುವುದು ಇಷ್ಟೇ.

ಲಖ್ಪತಿ ದೀದಿ: ಸರ್, 2019ರಲ್ಲಿ ಸ್ವ-ಸಹಾಯ ಗುಂಪಿಗೆ ಸೇರಿದ ನಂತರ, ನಾನು ಬರೋಡಾ ಸ್ವ-ಉದ್ಯೋಗ ಸಂಸ್ಥೆಯಿಂದ ಬ್ಯಾಂಕ್ ಸಖಿ ತರಬೇತಿ ಪಡೆದೆ.

ಪ್ರಧಾನಮಂತ್ರಿ:  ನೀವು ಒಂದು ದಿನದಲ್ಲಿ ಎಷ್ಟು ಹಣ ನಿರ್ವಹಿಸುತ್ತೀರಿ?

ಲಖ್ಪತಿ ದೀದಿ: ಸರ್, ಸರಾಸರಿ, ನಾನು ಪ್ರತಿದಿನ 1-1.5 ಲಕ್ಷ ರೂಪಾಯಿ ನಿರ್ವಹಿಸುತ್ತೇನೆ, ಹೆಚ್ಚಾಗಿ ಬ್ಯಾಂಕಿನಲ್ಲಿ, ಆದರೆ ನಾನು ಮನೆಯಿಂದಲೇ ಕೆಲವು ವಹಿವಾಟುಗಳನ್ನು ನಿರ್ವಹಿಸುತ್ತೇನೆ.

ಪ್ರಧಾನಮಂತ್ರಿ:  ಅದು ನಿಮಗೆ ಒತ್ತಡ ಉಂಟು ಮಾಡುವುದಿಲ್ಲವೇ?

ಲಖ್ಪತಿ ದೀದಿ: ಅಷ್ಟೇನೂ ಇಲ್ಲ, ಸರ್! ನಾನು ಎಲ್ಲಿಗೆ ಹೋದರೂ ನನ್ನೊಂದಿಗೆ ಒಂದು ಸಣ್ಣ ಬ್ಯಾಂಕ್ ಒಯ್ಯುತ್ತೇನೆ.

ಪ್ರಧಾನಮಂತ್ರಿ:  ಅದು ಅದ್ಭುತವಾಗಿದೆ!

ಲಖ್ಪತಿ ದೀದಿ: ಹೌದು, ಸರ್.

ಪ್ರಧಾನಮಂತ್ರಿ:  ಹಾಗಾದರೆ, ನೀವು 1 ತಿಂಗಳಲ್ಲಿ ಎಷ್ಟು ಬ್ಯಾಂಕಿಂಗ್ ವ್ಯವಹಾರ ನಿರ್ವಹಿಸುತ್ತೀರಿ?

ಲಖ್ಪತಿ ದೀದಿ: ಸರ್, ನನ್ನ ಮಾಸಿಕ ಬ್ಯಾಂಕಿಂಗ್ ವಹಿವಾಟುಗಳು ಸುಮಾರು 4-5 ಲಕ್ಷ ರೂಪಾಯಿ ತಲುಪುತ್ತವೆ.

ಪ್ರಧಾನಮಂತ್ರಿ:  ಅಂದರೆ ಜನರು ಈಗ ಬ್ಯಾಂಕನ್ನು ಹೆಚ್ಚು ನಂಬುತ್ತಿದ್ದಾರೆ ಮತ್ತು ನೀವು ಬಂದಾಗ, ಬ್ಯಾಂಕ್ ಬಂದಿದೆ ಎಂದು ಅವರು ನಂಬುತ್ತಾರೆ.

ಲಖ್ಪತಿ ದೀದಿ: ಹೌದು, ಸರ್, ಖಂಡಿತ!

ಲಖ್ಪತಿ ದೀದಿ: ಸರ್, ನಾನು ನಿಮ್ಮನ್ನು ನನ್ನ ಹೃದಯದಾಳದಿಂದ ಗುರು ಎಂದು ಪರಿಗಣಿಸಿದ್ದೇನೆ. ಇಂದು ನಾನು ಲಖ್ಪತಿ ದೀದಿಯಾಗಿದ್ದೇನೆಂದರೆ, ಅದು ನಿಮ್ಮ ಸ್ಫೂರ್ತಿಯಿಂದಾಗಿ. ನಿಮ್ಮ ಮಾರ್ಗದರ್ಶನವು ನನಗೆ ಮುಂದುವರಿಯಲು ಮತ್ತು ಈ ಹಂತ ತಲುಪಲು ಸಹಾಯ ಮಾಡಿದೆ. ನಾನು ಕನಸಿನಲ್ಲಿ ಜೀವಿಸುತ್ತಿದ್ದೇನೆ ಎಂದೆನಿಸುತ್ತದೆ, ನಾವು ನಿಜವಾಗಿಯೂ ಲಖ್ಪತಿ ದೀದಿಗಳಾಗಿ ಮಾರ್ಪಟ್ಟಿದ್ದೇವೆ! ಈಗ ನಮ್ಮ ಕನಸು ಇತರ ಮಹಿಳೆಯರು ಅದೇ ರೀತಿ ಸಾಧಿಸಲು ಸಹಾಯ ಮಾಡುತ್ತಿದೆ. ಸಖಿ ಮಂಡಲವು ನನ್ನ ಜೀವನದಲ್ಲಿ ಬಹುದೊಡ್ಡ ಬದಲಾವಣೆ ತಂದಿದೆ. ಒಂದು ದಿನ, ಮಸ್ಸೂರಿಯ ರಾಧಾ ಬೆನ್ ರಸ್ತೋಗಿ ಎಂಬುವರು ನನ್ನ ಕೌಶಲ್ಯಗಳನ್ನು ನೋಡಿ ನನ್ನನ್ನು ಅಲ್ಲಿಗೆ ಆಹ್ವಾನಿಸಿದರು. ನಾನು ತಕ್ಷಣ ಒಪ್ಪಿಕೊಂಡು ಮಸ್ಸೂರಿಗೆ ಹೋದೆ. ಅಲ್ಲಿ, ನಾನು ಸುಮಾರು 50 ಅಡುಗೆ ಸಿಬ್ಬಂದಿಗೆ ಗುಜರಾತಿ ರೋಟ್ಲಾ - ಬಜ್ರಾ (ಮುತ್ತು ರಾಗಿ) ಮತ್ತು ಜೋಳದಿಂದ ತಯಾರಿಸಿದ ರೊಟ್ಟಿಗಳ ತಯಾರಿಕೆಯ ತರಬೇತಿ ನೀಡಿದ್ದೇನೆ. ಆದರೆ ನನ್ನ ಪ್ರಯಾಣದ ಅತ್ಯಂತ ಹೃದಯಸ್ಪರ್ಶಿ ಭಾಗವೆಂದರೆ ಅಲ್ಲಿರುವ ಎಲ್ಲರೂ "ಇದು ನರೇಂದ್ರ ಮೋದಿ ಸಾಹಿಬ್ ಅವರ ನಾಡಿನ ಗುಜರಾತ್‌ನ ರೀಟಾ ಬೆನ್" ಎಂದು ಹೇಳಿ ನನ್ನನ್ನು ಪರಿಚಯಿಸುತ್ತಿದ್ದರು. ಗುಜರಾತ್‌ನ ಮಹಿಳೆಯಾಗಿರುವುದು ನನಗೆ ತುಂಬಾ ಹೆಮ್ಮೆ ತಂದಿತು. ಸರ್, ಅದು ನನಗೆ ಸಿಕ್ಕ ಅತ್ಯಂತ ದೊಡ್ಡ ಗೌರವವಾಗಿತ್ತು!

ಪ್ರಧಾನಮಂತ್ರಿ:  ಈಗ, ನೀವೆಲ್ಲರೂ ಆನ್‌ಲೈನ್ ವ್ಯವಹಾರ ಮಾದರಿಗಳ ಜಗತ್ತನ್ನು ಪ್ರವೇಶಿಸಬೇಕು. ಈ ಉಪಕ್ರಮವನ್ನು ಮೇಲ್ದರ್ಜೆಗೇರಿಸಿ ನಿಮ್ಮನ್ನು ಬೆಂಬಲಿಸುವಂತೆ ನಾನು ಸರ್ಕಾರವನ್ನು ಕೇಳುತ್ತೇನೆ. ನಾವು ಅನೇಕ ಸಹೋದರಿಯರನ್ನು ಸಂಪರ್ಕಿಸಿದ್ದೇವೆ, ಅವರೆಲ್ಸರೂ ತಳಮಟ್ಟದಲ್ಲಿ ಗಳಿಸುತ್ತಿದ್ದಾರೆ. ಭಾರತೀಯ ಮಹಿಳೆಯರು ಕೇವಲ ಮನೆಕೆಲಸಕ್ಕೆ ಸೀಮಿತವಾಗಿಲ್ಲ ಎಂದು ಜಗತ್ತು ತಿಳಿದುಕೊಳ್ಳಬೇಕು. ವಾಸ್ತವದಲ್ಲಿ, ಅವರು ಭಾರತದ ಆರ್ಥಿಕ ಶಕ್ತಿಯ ಹಿಂದಿನ ಪ್ರೇರಕ ಶಕ್ತಿ. ದೇಶದ ಆರ್ಥಿಕತೆ ರೂಪಿಸುವಲ್ಲಿ ಗ್ರಾಮೀಣ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಎರಡನೆಯದಾಗಿ, ನಮ್ಮ ಮಹಿಳೆಯರು ತಂತ್ರಜ್ಞಾನಕ್ಕೆ ಬೇಗನೆ ಹೊಂದಿಕೊಳ್ಳುವುದನ್ನು ನಾನು ಗಮನಿಸಿದ್ದೇನೆ. ಡ್ರೋನ್ ದೀದಿಗಳೊಂದಿಗಿನ ನನ್ನ ಅನುಭವವು ಇದನ್ನು ಸಾಬೀತುಪಡಿಸುತ್ತದೆ. ಡ್ರೋನ್ ಪೈಲಟ್‌ಗಳಾಗಿ ತರಬೇತಿ ಪಡೆದ ಮಹಿಳೆಯರು ಕೇವಲ 3-4 ದಿನಗಳಲ್ಲಿ ಕೌಶಲ್ಯಗಳನ್ನು ಕಲಿತರು. ಅವರು ತುಂಬಾ ಬೇಗನೆ ಕಲಿಯುತ್ತಾರೆ ಮತ್ತು ಬಹಳ ಪ್ರಾಮಾಣಿಕತೆಯಿಂದ ಅಭ್ಯಾಸ ಮಾಡುತ್ತಾರೆ. ನಮ್ಮ ದೇಶದಲ್ಲಿ, ಮಹಿಳೆಯರು ಸ್ವಾಭಾವಿಕವಾಗಿ ಹೋರಾಡುವ, ಸೃಜಿಸುವ, ಪೋಷಿಸುವ ಮತ್ತು ಸಂಪತ್ತನ್ನು ಸೃಷ್ಟಿಸುವ ಶಕ್ತಿ ಹೊಂದಿದ್ದಾರೆ. ಈ ಶಕ್ತಿ ಯಾವುದೇ ಲೆಕ್ಕಾಚಾರವನ್ನು ಮೀರಿದೆ. ಈ ಶಕ್ತಿಯು ರಾಷ್ಟ್ರಕ್ಕೆ ಅಪಾರ ಪ್ರಯೋಜನಗಳನ್ನು ತರುತ್ತದೆ ಎಂದು ನಾನು ನಂಬುತ್ತೇನೆ.

 

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಮತ್ತು ಲಖ್ಪತಿ ದೀದಿಗಳ ನಡುವಿನ ಸಂಭಾಷಣೆಯ ಕೆಲವು ಭಾಗಗಳು ಮೂಲತಃ ಗುಜರಾತಿಯಲ್ಲಿದ್ದವು ಮತ್ತು ಅವುಗಳನ್ನು ಹಿಂದಿಗೆ ಅನುವಾದಿಸಲಾಗಿದೆ.

 

*****


(Release ID: 2110128) Visitor Counter : 8