ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್ ನ ನವಸಾರಿಯಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಭಾಷಣ

Posted On: 08 MAR 2025 4:53PM by PIB Bengaluru

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್ ಜೀ; ನವಸಾರಿಯ ಸಂಸತ್ ಸದಸ್ಯ ಮತ್ತು ನನ್ನ ಸಂಪುಟ ಸಹೋದ್ಯೋಗಿ ಕೇಂದ್ರ ಸಚಿವ ಸಿ.ಆರ್. ಪಾಟೀಲ್; ಗೌರವಾನ್ವಿತ ಪಂಚಾಯತ್ ಸದಸ್ಯರು; ವೇದಿಕೆಯಲ್ಲಿ ಉಪಸ್ಥಿತರಿರುವ ಲಕ್ಷಾಧಿಪತಿ ದೀದಿ (ಲಖ್ಪತಿ ದೀದಿ)ಗಳು; ಇತರ ಸಾರ್ವಜನಿಕ ಪ್ರತಿನಿಧಿಗಳು; ಮತ್ತು ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆರೆದಿರುವ ಎಲ್ಲರಿಗೂ, ವಿಶೇಷವಾಗಿ ನನ್ನ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳೇ - ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು!

ಕೆಲವು ದಿನಗಳ ಹಿಂದೆ ಮಹಾಕುಂಭದಲ್ಲಿ ಗಂಗಾ ಮಾತೆಯ ಆಶೀರ್ವಾದ ಪಡೆದೆ. ಇಂದು, ಈ ಮಹಾನ್ ಮಹಿಳಾ ಸಮೂಹದ ಆಶೀರ್ವಾದಕ್ಕೆ ಪಾತ್ರನಾಗಿದ್ದೇನೆ. ಮಹಾಕುಂಭದಲ್ಲಿ ಗಂಗಾ ಮಾತೆಯ ಕೃಪೆ ಲಭಿಸಿದಂತೆ, ಇಂದು ಮಾತೃಶಕ್ತಿಯ ಈ ಮಹಾಕುಂಭದಲ್ಲಿ ನನ್ನ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದ ಪಡೆಯುತ್ತಿದ್ದೇನೆ. ಮಹಿಳಾ ದಿನಾಚರಣೆಯ ಈ ವಿಶೇಷ ಸಂದರ್ಭದಲ್ಲಿ, ನನ್ನ ಮಾತೃಭೂಮಿ ಗುಜರಾತ್ ನಲ್ಲಿ, ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಮ್ಮುಖದಲ್ಲಿ ನಿಮ್ಮ ಪ್ರೀತಿ, ವಾತ್ಸಲ್ಯ ಮತ್ತು ಆಶೀರ್ವಾದಗಳಿಗೆ ಕೃತಜ್ಞನಾಗಿ ತಲೆಬಾಗುತ್ತೇನೆ. ಗುಜರಾತ್ನ ಈ ಪವಿತ್ರ ನೆಲದಿಂದ, ನನ್ನ ದೇಶದ ಎಲ್ಲ ಸಹೋದರ ಸಹೋದರಿಯರಿಗೂ, ದೇಶಾದ್ಯಂತದ ಪ್ರತಿಯೊಬ್ಬ ತಾಯಿ ಮತ್ತು ಸಹೋದರಿಯರಿಗೂ ಹೃದಯಪೂರ್ವಕ ಮಹಿಳಾ ದಿನಾಚರಣೆಯ ಶುಭಾಶಯಗಳು.

ಇಂದು, 'ಗುಜರಾತ್ ಸಫಲ್' ಮತ್ತು 'ಗುಜರಾತ್ ಮೈತ್ರಿ' ಎಂಬ ಎರಡು ಮಹತ್ವದ ಯೋಜನೆಗಳ ಪ್ರಾರಂಭಕ್ಕೂ ಸಾಕ್ಷಿಯಾಗಿದೆ. ಜೊತೆಗೆ, ವಿವಿಧ ಯೋಜನೆಗಳ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ. ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು.

ಸ್ನೇಹಿತರೇ,

ಇಂದು ಹೆಣ್ಣುಮಕ್ಕಳಿಗೆ ಮೀಸಲಾದ ದಿನ. ಅವರಿಂದ ಪ್ರೇರಣೆ ಪಡೆಯಲು, ಅವರ ಜ್ಞಾನದಿಂದ ಕಲಿಯಲು ಒಂದು ಸುವರ್ಣಾವಕಾಶ. ಈ ಶುಭ ಸಂದರ್ಭದಲ್ಲಿ, ನನ್ನ ಹೃತ್ಪೂರ್ವಕ ಶುಭಾಶಯಗಳೊಂದಿಗೆ, ನನ್ನ ಆಳವಾದ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ. ಇಂದು, ನಾನು ಜಗತ್ತಿನಲ್ಲೇ ಅತಿ ಶ್ರೀಮಂತ ವ್ಯಕ್ತಿ ಎಂದು ಹೆಮ್ಮೆಯಿಂದ ಸಾರಬಲ್ಲೆ. ಈ ಮಾತಿಗೆ ಕೆಲವರು ಹುಬ್ಬೇರಿಸಬಹುದು, ಟ್ರೋಲ್ಗಳ ದಂಡೇ ಎದ್ದು ನಿಲ್ಲಬಹುದು, ಆದರೂ ಹೇಳುತ್ತೇನೆ - ನಾನು ಜಗತ್ತಿನ ಅತ್ಯಂತ ಶ್ರೀಮಂತ. ಕೋಟ್ಯಂತರ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಆಶೀರ್ವಾದಗಳು ನನ್ನ ಜೀವನದ ಲೆಕ್ಕದಲ್ಲಿ ಜಮೆಯಾಗಿವೆ, ಅವು ನಿರಂತರವಾಗಿ ವೃದ್ಧಿಯಾಗುತ್ತಿವೆ. ಅದಕ್ಕಾಗಿಯೇ ದೃಢವಾಗಿ ಹೇಳುತ್ತೇನೆ, ನಾನು ಜಗತ್ತಿನಲ್ಲೇ ಅತಿ ಶ್ರೀಮಂತ. ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಪ್ರೀತಿ ಮತ್ತು ಹಾರೈಕೆಗಳೇ ನನ್ನ ದೊಡ್ಡ ಸ್ಫೂರ್ತಿ, ನನ್ನ ದೊಡ್ಡ ಶಕ್ತಿ, ನನ್ನ ದೊಡ್ಡ ಆಸ್ತಿ, ನನ್ನ ರಕ್ಷಣಾತ್ಮಕ ಗುರಾಣಿ.

ಸ್ನೇಹಿತರೇ,

ನಮ್ಮ ಪವಿತ್ರ ಗ್ರಂಥಗಳು ಸ್ತ್ರೀಯರನ್ನು ನಾರಾಯಣಿಯ ಅವತಾರವೆಂದು ಸಾರುತ್ತವೆ. ಮಹಿಳೆಯರಿಗೆ ಗೌರವ ನೀಡುವುದು ಒಂದು ಪ್ರಗತಿಪರ ಸಮಾಜದ ಮತ್ತು ಸಮೃದ್ಧ ರಾಷ್ಟ್ರದ ಬುನಾದಿ. ಹಾಗಾಗಿಯೇ, ಒಂದು ಅಭಿವೃದ್ಧಿ ಹೊಂದಿದ ಭಾರತವನ್ನು ಕಟ್ಟಲು ಮತ್ತು ಅದರ ಪ್ರಗತಿಯನ್ನು ವೇಗಗೊಳಿಸಲು, ನಮ್ಮ ದೇಶವು ಸ್ತ್ರೀ-ನೇತೃತ್ವದ ಅಭಿವೃದ್ಧಿಯ ಮಾರ್ಗವನ್ನು ಆರಿಸಿಕೊಂಡಿದೆ. ನಮ್ಮ ಸರ್ಕಾರವು ಮಹಿಳೆಯರ ಘನತೆ ಮತ್ತು ಸೌಕರ್ಯಗಳೆರಡಕ್ಕೂ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಶೌಚಾಲಯಗಳನ್ನು ನಿರ್ಮಿಸುವುದರ ಮೂಲಕ, ಅವರಿಗೆ ಕೇವಲ ನೈರ್ಮಲ್ಯವನ್ನು ಮಾತ್ರವಲ್ಲ, ಗೌರವವನ್ನೂ ನೀಡಿ, ಕೋಟ್ಯಂತರ ಮಹಿಳೆಯರ ಜೀವನವನ್ನು ನಾವು ಉನ್ನತೀಕರಿಸಿದ್ದೇವೆ. ಉತ್ತರ ಪ್ರದೇಶದಲ್ಲಿ, ಕಾಶಿಯ ನನ್ನ ಸಹೋದರಿಯರು ಅವುಗಳನ್ನು ಶೌಚಾಲಯಗಳೆಂದು ಕರೆಯುವುದಿಲ್ಲ - ಅವರು ಅವುಗಳನ್ನು ಇಜ್ಜತ್ ಘರ್ (ಗೌರವದ ನಿವಾಸ) ಎಂದು ಕರೆಯುತ್ತಾರೆ. ಕೋಟ್ಯಂತರ ಮಹಿಳೆಯರಿಗೆ ಬ್ಯಾಂಕ್ ಖಾತೆಗಳನ್ನು ತೆರೆದು, ಅವರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಸೇರಿಸಿದ್ದೇವೆ. ಉಜ್ವಲ ಅನಿಲ ಸಿಲಿಂಡರ್ಗಳನ್ನು ಒದಗಿಸುವುದರ ಮೂಲಕ ಒಳಾಂಗಣದ ಧೂಮಪಾನದ ಸಮಸ್ಯೆಯಿಂದ ಅವರನ್ನು ಮುಕ್ತಗೊಳಿಸಿದ್ದೇವೆ. ಈ ಹಿಂದೆ, ದುಡಿಯುವ ಮಹಿಳೆಯರಿಗೆ ಕೇವಲ 12 ವಾರಗಳ ಹೆರಿಗೆ ರಜೆ ಮಾತ್ರ ಸಿಗುತ್ತಿತ್ತು; ನಮ್ಮ ಸರ್ಕಾರವು ಅದನ್ನು 26 ವಾರಗಳಿಗೆ ವಿಸ್ತರಿಸಿದೆ. ನಮ್ಮ ಮುಸ್ಲಿಂ ಸಹೋದರಿಯರು ಬಹಳ ಹಿಂದಿನಿಂದ ತ್ರಿವಳಿ ತಲಾಖ್ ವಿರುದ್ಧ ಕಾನೂನು ಬೇಕೆಂದು ಆಗ್ರಹಿಸುತ್ತಿದ್ದರು. ಕಠಿಣ ಕಾನೂನುಗಳನ್ನು ಜಾರಿಗೊಳಿಸುವುದರ ಮೂಲಕ, ನಮ್ಮ ಸರ್ಕಾರವು ಲಕ್ಷಾಂತರ ಮುಸ್ಲಿಂ ಮಹಿಳೆಯರ ಜೀವಗಳನ್ನು ರಕ್ಷಿಸಿದೆ. ಕಾಶ್ಮೀರದಲ್ಲಿ, 370ನೇ ವಿಧಿ ಜಾರಿಯಲ್ಲಿದ್ದಾಗ, ಮಹಿಳೆಯರು ಅನೇಕ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದರು. ಒಂದು ಮಹಿಳೆ ರಾಜ್ಯದ ಹೊರಗಿನವರನ್ನು ವಿವಾಹವಾದರೆ, ಅವಳು ಪೂರ್ವಜರ ಆಸ್ತಿಯ ಹಕ್ಕನ್ನು ಕಳೆದುಕೊಳ್ಳುತ್ತಿದ್ದಳು. 370ನೇ ವಿಧಿಯನ್ನು ರದ್ದುಗೊಳಿಸುವುದರೊಂದಿಗೆ, ಜಮ್ಮು ಮತ್ತು ಕಾಶ್ಮೀರದ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಈಗ ಭಾರತದ ಪ್ರತಿಯೊಬ್ಬ ಮಹಿಳೆಯಂತೆ ಸಮಾನ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ. ವರ್ಷಗಳಿಂದ, ದೇಶದ ಅವಿಭಾಜ್ಯ ಅಂಗವಾಗಿದ್ದರೂ, ಅವರಿಗೆ ಈ ಹಕ್ಕುಗಳನ್ನು ನಿರಾಕರಿಸಲಾಗಿತ್ತು, ಮತ್ತು ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದವರು ಮೌನಕ್ಕೆ ಶರಣಾಗಿದ್ದರು. ಮಹಿಳೆಯರ ಮೇಲಿನ ಅನ್ಯಾಯ ಅವರಿಗೆ ಕಿಂಚಿತ್ತೂ ಕಾಳಜಿಯ ವಿಷಯವಾಗಿರಲಿಲ್ಲ. 370ನೇ ವಿಧಿಯನ್ನು ರದ್ದುಗೊಳಿಸುವುದರ ಮೂಲಕ, ನಮ್ಮ ಸರ್ಕಾರವು ನಿಜವಾಗಿಯೂ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದಿದೆ ಮತ್ತು ಅವುಗಳನ್ನು ರಾಷ್ಟ್ರದ ಸೇವೆಯಲ್ಲಿ ಸಮರ್ಪಿಸಿದೆ.

ಸ್ನೇಹಿತರೇ,

ಇಂದು, ಮಹಿಳೆಯರು ಸಮಾಜದಾದ್ಯಂತ, ಸರ್ಕಾರದಲ್ಲಿ ಮತ್ತು ಪ್ರಮುಖ ಸಂಸ್ಥೆಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಿದ್ದಾರೆ. ರಾಜಕೀಯ, ಕ್ರೀಡೆ, ನ್ಯಾಯಾಂಗ ಅಥವಾ ಕಾನೂನು ಜಾರಿ ಎಲ್ಲ ಕ್ಷೇತ್ರಗಳಲ್ಲೂ, ಎಲ್ಲ ವಿಭಾಗಗಳಲ್ಲೂ, ದೇಶದ ಪ್ರತಿ ಆಯಾಮದಲ್ಲೂ ಮಹಿಳೆಯರು ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. 2014 ರಿಂದ, ಪ್ರಮುಖ ಸ್ಥಾನಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. 2014 ರ ನಂತರವೇ ಕೇಂದ್ರ ಸರ್ಕಾರದಲ್ಲಿ ಅತಿ ಹೆಚ್ಚು ಮಹಿಳೆಯರನ್ನು ಸಚಿವರನ್ನಾಗಿ ನೇಮಿಸಲಾಯಿತು. ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯವೂ ಗಣನೀಯವಾಗಿ ಹೆಚ್ಚಾಗಿದೆ. 2019 ರಲ್ಲಿ, ಮೊದಲ ಬಾರಿಗೆ, 78 ಮಹಿಳಾ ಸಂಸದರು ಸಂಸತ್ತಿಗೆ ಆಯ್ಕೆಯಾದರು. 18 ನೇ ಲೋಕಸಭೆಯಲ್ಲಿ, 74 ಮಹಿಳಾ ಸಂಸದರು ಆಯ್ಕೆಯಾಗಿದ್ದಾರೆ. ಅಂತೆಯೇ, ನಮ್ಮ ನ್ಯಾಯಾಂಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ಗಣನೀಯವಾಗಿ ಹೆಚ್ಚಾಗಿದೆ, ಜಿಲ್ಲಾ ನ್ಯಾಯಾಲಯಗಳಲ್ಲಿ ಅವರ ಉಪಸ್ಥಿತಿ 35 ಪ್ರತಿಶತವನ್ನು ಮೀರಿದೆ. ಹಲವಾರು ರಾಜ್ಯಗಳಲ್ಲಿ, ಸಿವಿಲ್ ನ್ಯಾಯಾಧೀಶರಾಗಿ ಹೊಸದಾಗಿ ನೇಮಕಗೊಂಡವರಲ್ಲಿ 50 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚು ನಮ್ಮ ದೇಶದ ಹೆಣ್ಣುಮಕ್ಕಳೇ ಆಗಿದ್ದಾರೆ.

ಇಂದು ಭಾರತವು ಜಗತ್ತಿನ ಮೂರನೇ ಅತಿದೊಡ್ಡ ನವೋದ್ಯಮ (ಸ್ಟಾರ್ಟಪ್) ಪರಿಸರ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಈ ನವೋದ್ಯಮಗಳಲ್ಲಿ ಅರ್ಧದಷ್ಟು ಸಂಸ್ಥೆಗಳ ನಿರ್ದೇಶಕ ಮಂಡಳಿಯಲ್ಲಿ ಮಹಿಳೆಯೊಬ್ಬರು ಇದ್ದಾರೆ. ಬಾಹ್ಯಾಕಾಶ ಸಂಶೋಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದೆ. ಅನೇಕ ಪ್ರಮುಖ ಯೋಜನೆಗಳನ್ನು ಮಹಿಳಾ ವಿಜ್ಞಾನಿಗಳೇ ಮುನ್ನಡೆಸುತ್ತಿದ್ದಾರೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ಮಹಿಳಾ ಪೈಲಟ್ ಗಳನ್ನು ಹೊಂದಿರುವ ಗೌರವ ಭಾರತದ್ದು. ನವಸಾರಿಯಲ್ಲಿ ನಡೆಯುತ್ತಿರುವ ಈ ಸಮಾರಂಭದಲ್ಲಿ ಮಹಿಳಾ ಶಕ್ತಿಯ ಪ್ರಭಾವ ಎದ್ದು ಕಾಣುತ್ತಿದೆ. ಈ ಕಾರ್ಯಕ್ರಮದ ಸಂಪೂರ್ಣ ಸಂಘಟನೆಯ ಜವಾಬ್ದಾರಿಯನ್ನು ಮಹಿಳೆಯರೇ ಹೊತ್ತಿದ್ದಾರೆ. ಪೇದೆಗಳಿಂದ ಹಿಡಿದು DSP ಮತ್ತು ಹಿರಿಯ ಅಧಿಕಾರಿಗಳವರೆಗೆ, ಭದ್ರತಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮಹಿಳಾ ಪೊಲೀಸ್ ಸಿಬ್ಬಂದಿಯೇ ನಿರ್ವಹಿಸುತ್ತಿದ್ದಾರೆ. ಇದು ಮಹಿಳಾ ಸಾಮರ್ಥ್ಯದ ನೈಜ ಸಾಕ್ಷಿ. ಸ್ವಲ್ಪ ಸಮಯದ ಹಿಂದೆ, ನನ್ನ ಸ್ವಸಹಾಯ ಸಂಘದ ಸಹೋದರಿಯರೊಂದಿಗೆ ಸಂವಾದ ನಡೆಸುವ ಭಾಗ್ಯ ದೊರೆಯಿತು. ಅವರ ಮಾತುಗಳು, ಉತ್ಸಾಹ ಮತ್ತು ಆತ್ಮವಿಶ್ವಾಸವು ಭಾರತದ ನಾರಿ ಶಕ್ತಿಯ ಅಗಾಧ ಸಾಮರ್ಥ್ಯವನ್ನು ಮತ್ತೊಮ್ಮೆ ದೃಢಪಡಿಸಿತು. ಈ ದೇಶದ ಪ್ರಗತಿಯ ಹೊಣೆಯನ್ನು ಮಹಿಳೆಯರೇ ಹೊತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ನಿಮ್ಮನ್ನೆಲ್ಲಾ ಭೇಟಿಯಾದಾಗ, ವಿಕಸಿತ ಭಾರತದ ಕನಸು ಖಂಡಿತವಾಗಿಯೂ ನನಸಾಗುತ್ತದೆ ಮತ್ತು ಈ ಸಂಕಲ್ಪವನ್ನು ಮಹಿಳೆಯರೇ ಮುನ್ನಡೆಸುತ್ತಾರೆ ಎಂಬ ನಂಬಿಕೆ ಮತ್ತಷ್ಟು ಬಲಗೊಳ್ಳುತ್ತದೆ.

ತಾಯಂದಿರೇ ಮತ್ತು ಸಹೋದರಿಯರೇ,

ಗುಜರಾತ್ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಅದ್ಭುತ ಉದಾಹರಣೆಯಾಗಿ ನಿಂತಿದೆ. ನಮ್ಮ ರಾಜ್ಯವು ಸಹಕಾರದ ಯಶಸ್ವಿ ಮಾದರಿಯನ್ನು ಹುಟ್ಟುಹಾಕಿತು, ಮತ್ತು ಸ್ವಸಹಾಯ ಗುಂಪುಗಳಿಗೆ ಸಂಬಂಧಿಸಿದ ನನ್ನ ಸಹೋದರಿಯರೆಲ್ಲರಿಗೂ ತಿಳಿದಿರುವಂತೆ, ಈ ಮಾದರಿಯು ಗುಜರಾತ್ ಮಹಿಳೆಯರ ಸಮರ್ಪಣೆ ಮತ್ತು ಸಾಮರ್ಥ್ಯದಿಂದಾಗಿ ಅಭಿವೃದ್ಧಿ ಹೊಂದಿದೆ. ಇಂದು, ಅಮುಲ್ ಜಗತ್ತಿನಾದ್ಯಂತ ಗುರುತಿಸಲ್ಪಟ್ಟಿದೆ ಮತ್ತು ಗುಜರಾತಿನ ಪ್ರತಿ ಗ್ರಾಮದ ಲಕ್ಷಾಂತರ ಮಹಿಳೆಯರು ಹಾಲಿನ ಉತ್ಪಾದನೆಯನ್ನು ಕ್ರಾಂತಿಕಾರಿ ಚಳುವಳಿಯನ್ನಾಗಿ ಪರಿವರ್ತಿಸಿದ್ದಾರೆ. ಗುಜರಾತಿನ ಮಹಿಳೆಯರು ಕೇವಲ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವುದರ ಜೊತೆಗೆ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಿದ್ದಾರೆ. ನೂರಾರು ಕೋಟಿ ರೂಪಾಯಿ ಮೌಲ್ಯದ ಬ್ರಾಂಡ್ ಆಗಿ ಬೆಳೆದಿರುವ ಲಿಜ್ಜತ್ ಪಾಪಡ್ ಅನ್ನು ಸ್ಥಾಪಿಸಿದವರು ಗುಜರಾತಿ ಮಹಿಳೆಯರು.

ತಾಯಂದಿರೇ ಮತ್ತು ಸಹೋದರಿಯರೇ,

ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ನಮ್ಮ ಸರ್ಕಾರವು ಮಹಿಳೆಯರು ಮತ್ತು ಹೆಣ್ಣುಮಕ್ಕಳ ಕ್ಷೇಮಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೆವು ಎಂದು ನೆನಪಿಸಿಕೊಳ್ಳುತ್ತೇನೆ. ಚಿರಂಜೀವಿ ಯೋಜನೆ, ಬೇಟಿ ಬಚಾವೋ ಅಭಿಯಾನ, ಮಮತಾ ದಿವಸ, ಕನ್ಯಾ ಕೇಲವಣಿ ರಥಯಾತ್ರೆ, ಕುನ್ವರ್ಬಾಯಿ ನು ಮಾಮೇರು, ಸಪ್ತಪದಿ ಸಮೂಹ ವಿವಾಹ ಯೋಜನೆ ಮತ್ತು ಅಭಯಂ ಸಹಾಯವಾಣಿ ಇವುಗಳಲ್ಲಿ ಪ್ರಮುಖವಾದವು. ಸರಿಯಾದ ನೀತಿಗಳಿಂದ ಮಹಿಳೆಯರನ್ನು ಹೇಗೆ ಸಬಲರನ್ನಾಗಿ ಮಾಡಬಹುದು ಎಂಬುದನ್ನು ಗುಜರಾತ್ ಇಡೀ ದೇಶಕ್ಕೆ ತೋರಿಸಿಕೊಟ್ಟಿದೆ. ನಾನು ಮೊದಲು ಉಲ್ಲೇಖಿಸಿದ ಹಾಲಿನ ಸಹಕಾರ ಸಂಘಗಳನ್ನೇ ಉದಾಹರಣೆಗೆ ತೆಗೆದುಕೊಳ್ಳಿ. ಡೈರಿ ಕೆಲಸದ ಹಣವನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ವ್ಯವಸ್ಥೆಯನ್ನು ಮೊದಲು ಮಾಡಿದ ರಾಜ್ಯ ಗುಜರಾತ್. ಈ ಮೊದಲು, ಹಣವನ್ನು ನಗದು ರೂಪದಲ್ಲಿ ನೀಡಲಾಗುತ್ತಿತ್ತು ಅಥವಾ ಹಾಲಿನವರು ಅದನ್ನು ತೆಗೆದುಕೊಂಡು ಹೋಗುತ್ತಿದ್ದರು. ನಮ್ಮ ಸಹೋದರಿಯರ ಡೈರಿ ಕೃಷಿಯ ಸಂಪಾದನೆಯನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಬೇಕು, ಇದರಿಂದ ಬೇರೆಯವರು ಒಂದು ಪೈಸೆಯನ್ನೂ ಕಸಿದುಕೊಳ್ಳಲು ಸಾಧ್ಯವಾಗಬಾರದು ಎಂದು ನಾವು ನಿರ್ಧರಿಸಿದೆವು. ಈ ಕ್ರಮವು ಇಂದು ದೇಶಾದ್ಯಂತ ಜಾರಿಯಲ್ಲಿರುವ ವಿವಿಧ ಸರ್ಕಾರಿ ಯೋಜನೆಗಳ ನೇರ ನಗದು ವರ್ಗಾವಣೆ (ಡಿಬಿಟಿ) ವ್ಯವಸ್ಥೆಗೆ ಅಡಿಪಾಯ ಹಾಕಿತು. ಇಂದು ನೇರ ನಗದು ವರ್ಗಾವಣೆ ಮೂಲಕ, ಭಾರತದಾದ್ಯಂತ ಕೋಟ್ಯಂತರ ಫಲಾನುಭವಿಗಳ ಖಾತೆಗಳಿಗೆ ಹಣ ತಲುಪುತ್ತಿದೆ, ಇದರಿಂದ ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳನ್ನು ತಡೆಗಟ್ಟಲಾಗುತ್ತಿದೆ ಮತ್ತು ಸೌಲಭ್ಯಗಳು ಬಡವರಿಗೆ ನೇರವಾಗಿ ತಲುಪುವಂತೆ ಮಾಡಲಾಗುತ್ತಿದೆ.

ಸ್ನೇಹಿತರೇ,

ಗುಜರಾತ್ ನಲ್ಲಿಯೇ, ಭೀಕರ ಭುಜ್ ಭೂಕಂಪದ ನಂತರ, ಮನೆಗಳನ್ನು ಪುನರ್ನಿರ್ಮಿಸಿದಾಗ, ನಮ್ಮ ಸರ್ಕಾರವು ಈ ಮನೆಗಳನ್ನು ಮಹಿಳೆಯರಿಗೆ ಹಂಚಿಕೆ ಮಾಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತು. ಈ ನೀತಿಯು ಸರ್ಕಾರ ನಿರ್ಮಿಸಿದ ಮನೆಗಳನ್ನು ಕೇವಲ ಸಹೋದರಿಯರ ಹೆಸರಿನಲ್ಲಿ ನೋಂದಾಯಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿತು. ಇಂದು, ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೂಲಕ ಈ ತತ್ವವನ್ನು ದೇಶಾದ್ಯಂತ ಜಾರಿಗೊಳಿಸಲಾಗಿದೆ. ಇದಲ್ಲದೆ, ಹಿಂದೆ ಮಕ್ಕಳು ಶಾಲೆಗೆ ದಾಖಲಾಗುತ್ತಿದ್ದಾಗ, ಅವರ ತಂದೆಯ ಹೆಸರನ್ನು ಮಾತ್ರ ದಾಖಲಿಸಲಾಗುತ್ತಿತ್ತು. ಮಗುವಿನ ಜೀವನದಲ್ಲಿ ತಾಯಿಯ ಸಮಾನ ಪ್ರಾಮುಖ್ಯತೆಯನ್ನು ಗುರುತಿಸಿ, ತಾಯಿಯ ಹೆಸರನ್ನು ಸಹ ಸೇರಿಸಬೇಕು ಎಂದು ನಾನು ನಿರ್ಧರಿಸಿದೆ. 2014 ರಿಂದ, ಸುಮಾರು ಮೂರು ಕೋಟಿ ಮಹಿಳೆಯರು ಮನೆ ಮಾಲೀಕರಾಗಿದ್ದಾರೆ.

ಸ್ನೇಹಿತರೇ,

ಇಂದು, ಜಲ ಜೀವನ್ ಮಿಷನ್ ಜಗತ್ತಿನಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಉಪಕ್ರಮದ ಮೂಲಕ, ದೇಶದ ಪ್ರತಿಯೊಂದು ಹಳ್ಳಿಗೂ ನೀರು ತಲುಪುತ್ತಿದೆ. ಕಳೆದ ಐದು ವರ್ಷಗಳಲ್ಲಿ, ಲಕ್ಷಾಂತರ ಹಳ್ಳಿಗಳ 15.5 ಕೋಟಿ ಮನೆಗಳಿಗೆ ಪೈಪ್ ಮೂಲಕ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ಇಂತಹ ಬೃಹತ್ ಯೋಜನೆಯ ಯಶಸ್ಸಿಗೆ, ನಾವು ಮಹಿಳಾ ಪಾಣಿ ಸಮಿತಿಗಳನ್ನು - ಮಹಿಳಾ ನೇತೃತ್ವದ ನೀರಿನ ಸಮಿತಿಗಳನ್ನು - ಗುಜರಾತ್‌ನಲ್ಲಿಯೇ ಪರಿಚಯಿಸಿದ್ದೆವು. ಈಗ, ಈ ಮಾದರಿಯನ್ನು ದೇಶಾದ್ಯಂತ ಜಾರಿಗೊಳಿಸಲಾಗುತ್ತಿದೆ. ಈ ಪಾಣಿ ಸಮಿತಿಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ ಮತ್ತು ಈ ಮಾದರಿಯನ್ನು ದೇಶಕ್ಕೆ ನೀಡಿದ್ದು ಗುಜರಾತ್. ಇಂದು, ಈ ಉಪಕ್ರಮವು ಭಾರತದಾದ್ಯಂತ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಸಹಾಯ ಮಾಡುತ್ತಿದೆ.

ಸ್ನೇಹಿತರೇ,

ನಾವು ನೀರಿನ ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚಿಸುವಾಗ, ನೀರಿನ ಲಭ್ಯತೆಯಷ್ಟೇ ಸಂರಕ್ಷಣೆಯೂ ಅಷ್ಟೇ ಮಹತ್ವದ್ದಾಗಿದೆ. "ಮಳೆ ನೀರು ಹಿಡಿಯಿರಿ!" ಎಂಬ ರಾಷ್ಟ್ರವ್ಯಾಪಿ ಅಭಿಯಾನವು ಈಗ ನಡೆಯುತ್ತಿದೆ. ಇದರ ಮುಖ್ಯ ಉದ್ದೇಶ ಪ್ರತಿ ಮಳೆ ಹನಿಯನ್ನೂ ಸಂಗ್ರಹಿಸುವುದು, ಅದು ಎಲ್ಲಿ ಬಿದ್ದರೂ ವ್ಯರ್ಥವಾಗದಂತೆ ನೋಡಿಕೊಳ್ಳುವುದು. ಇದರ ಮೂಲ ಆಶಯ ಸರಳವಾಗಿದೆ: ಗ್ರಾಮದಲ್ಲಿ ಬೀಳುವ ಮಳೆ ನೀರು ಗ್ರಾಮದಲ್ಲಿಯೇ ಉಳಿಯಬೇಕು, ಮತ್ತು ಪ್ರತಿ ಮನೆಯ ನೀರಿನನ್ನೂ ಆ ಮನೆಯಲ್ಲಿಯೇ ಸಂರಕ್ಷಿಸಬೇಕು. ನಮ್ಮ ನವಸಾರಿ ಸಂಸದರಾದ ಸಿ.ಆರ್. ಪಾಟೀಲ್ ಜೀ ಅವರ ನಾಯಕತ್ವದಲ್ಲಿ ಈ ಅಭಿಯಾನವು ದೇಶಾದ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವುದನ್ನು ಕಂಡು ನನಗೆ ಸಂತೋಷವಾಗಿದೆ. ನವಸಾರಿಯ ಮಹಿಳೆಯರು ಈ ಪ್ರಯತ್ನಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ನನಗೆ ತಿಳಿದಿದೆ. ನವಸಾರಿಯಲ್ಲಿ ಮಾತ್ರ, ಮಳೆ ನೀರನ್ನು ಸಂರಕ್ಷಿಸಲು 5,000 ಕ್ಕೂ ಹೆಚ್ಚು ರಚನೆಗಳನ್ನು - ಕೊಳಗಳು, ತಡೆ ಅಣೆಕಟ್ಟುಗಳು, ಕೊಳವೆ ಬಾವಿ ಮರುಪೂರಣ ವ್ಯವಸ್ಥೆಗಳು ಮತ್ತು ಸಮುದಾಯ ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಒಂದು ಜಿಲ್ಲೆಗೆ ಇದು ಅಸಾಧಾರಣ ಸಾಧನೆ. ಈಗಲೂ, ನವಸಾರಿಯಲ್ಲಿ ನೂರಾರು ಜಲ ಸಂರಕ್ಷಣಾ ಯೋಜನೆಗಳು ನಡೆಯುತ್ತಿವೆ. ಈಗಷ್ಟೇ, ಸಿ.ಆರ್. ಪಾಟೀಲ್ ಜೀ ಅವರು ಕಳೆದ ಎರಡು ಮೂರು ದಿನಗಳಲ್ಲಿ 1,100 ಹೆಚ್ಚುವರಿ ಯೋಜನೆಗಳು ಪೂರ್ಣಗೊಂಡಿವೆ ಎಂದು ನನಗೆ ತಿಳಿಸಿದರು. ವಾಸ್ತವವಾಗಿ, ಇಂದು ಒಂದೇ ದಿನದಲ್ಲಿ 1,000 ಇಂಗು ಗುಂಡಿಗಳನ್ನು ನಿರ್ಮಿಸಲಾಗುತ್ತಿದೆ. ಮಳೆ ನೀರು ಕೊಯ್ಲು ಮತ್ತು ಜಲ ಸಂರಕ್ಷಣೆಯಲ್ಲಿ ನವಸಾರಿ ಗುಜರಾತಿನ ಮುಂಚೂಣಿಯಲ್ಲಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ನವಸಾರಿಯ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಈ ಅದ್ಭುತ ಪ್ರಯತ್ನಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇಂದು, ಒಂದೇ ಜಿಲ್ಲೆಯ ಲಕ್ಷಾಂತರ ತಾಯಂದಿರ ಈ ಮಹಾ ಕುಂಭವನ್ನು ನೋಡುತ್ತಿರುವಾಗ, ಮಗ ಮನೆಗೆ ಬಂದಾಗ ತಾಯಿಯ ಮನದಲ್ಲಿ ಉಂಟಾಗುವ ಆನಂದ ನನಗೆ ನೆನಪಾಗುತ್ತದೆ. ಆ ಆನಂದವನ್ನು ನನ್ನೆದುರಿಗಿನ ಮುಖಗಳಲ್ಲಿ ನಾನು ಕಾಣುತ್ತಿದ್ದೇನೆ. ಮತ್ತು ಇಂದು, ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಲು ನೀವು ಆಶೀರ್ವದಿಸಿದ ಪುತ್ರನಾಗಿ ನಾನು ನಿಮ್ಮ ಮುಂದೆ ನಿಂತಿದ್ದೇನೆ. ನಿಮ್ಮ ಆಶೀರ್ವಾದದಿಂದ ಮಾತ್ರ ಇದು ಸಾಧ್ಯವಾಗಿದೆ. ಮಗನನ್ನು ನೋಡಿದಾಗ ತಾಯಿಯ ಮುಖ ಹೇಗೆ ಬೆಳಗುತ್ತದೆಯೋ, ಅದೇ ಸಂತೋಷ ಮತ್ತು ವಾತ್ಸಲ್ಯವನ್ನು ಇಂದು ಇಲ್ಲಿರುವ ಪ್ರತಿಯೊಬ್ಬ ತಾಯಿಯ ಮುಖದಲ್ಲಿ ನಾನು ಕಾಣುತ್ತಿದ್ದೇನೆ. ಈ ಪ್ರೀತಿ, ಈ ತೃಪ್ತಿ ಮತ್ತು ಈ ಆಶೀರ್ವಾದಗಳು ನಿಜವಾಗಿಯೂ ನನ್ನ ಜೀವನದ ಅತ್ಯಮೂಲ್ಯ ಉಡುಗೊರೆಗಳು.

ಸ್ನೇಹಿತರೇ,

ಗುಜರಾತಿನ ಮಹಿಳೆಯರ ಸಾಮರ್ಥ್ಯ ಮತ್ತು ಈ ರಾಜ್ಯವು ರೂಪಿಸಿದ ಮಾದರಿಗಳು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಇಲ್ಲಿ ಪಂಚಾಯತ್ ಚುನಾವಣೆಗಳಲ್ಲಿ ಶೇಕಡಾ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ನೀವು ನನ್ನನ್ನು ಪ್ರಧಾನ ಸೇವಕನಾಗಿ ದೆಹಲಿಗೆ ಕಳುಹಿಸಿದಾಗ, ಈ ಅನುಭವ ಮತ್ತು ಬದ್ಧತೆಯನ್ನು ನಾನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದೆ. ನಮ್ಮ ದೇಶವು ನೂತನ ಸಂಸತ್ತನ್ನು ಉದ್ಘಾಟಿಸಿದಾಗ, ನಾವು ಅಂಗೀಕರಿಸಿದ ಮೊದಲ ಮಸೂದೆಯೇ ನಾರಿ ಶಕ್ತಿಗೆ ಸಮರ್ಪಿತವಾಗಿತ್ತು. ಈ ನೂತನ ಸಂಸತ್ ಭವನದಲ್ಲಿ ಕೈಗೊಂಡ ಮೊದಲ ಕಾರ್ಯ ನಮ್ಮ ಸಹೋದರಿಯರಿಗಾಗಿತ್ತು, ತಾಯಂದಿರು ಮತ್ತು ಸಹೋದರಿಯರಿಗೆ ಮೋದಿ ಅವರ ಅಚಲ ಬದ್ಧತೆಗೆ ಇದು ನಿದರ್ಶನವಾಗಿದೆ. ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಇನ್ನಷ್ಟು ವಿಶೇಷವಾಗಿಸುವುದು ಏನು ಎಂದು ನಿಮಗೆ ತಿಳಿದಿದೆಯೇ? ನಮ್ಮ ರಾಷ್ಟ್ರಪತಿಗಳು , ಬಡ ಕುಟುಂಬದಿಂದ ಬಂದವರು , ಬುಡಕಟ್ಟು ಕುಟುಂಬದಿಂದ ಬಂದವರು , ಈ ಮಸೂದೆಗೆ ತಮ್ಮ ಅನುಮೋದನೆಯ ಮುದ್ರೆಯನ್ನು ನೀಡಿದ್ದಾರೆ. ಇದು ಅತೀವ ಹೆಮ್ಮೆಯ ಕ್ಷಣ. ನಿಮ್ಮಲ್ಲಿ ಒಬ್ಬರು ಇದೇ ರೀತಿಯ ವೇದಿಕೆಯಲ್ಲಿ ಸಂಸದರಾಗಿ ಅಥವಾ ಶಾಸಕರಾಗಿ ನಿಂತು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವ ದಿನ ದೂರವಿಲ್ಲ.

ಸ್ನೇಹಿತರೇ,

ಒಂದು ಕಾಲದಲ್ಲಿ ಗಾಂಧೀಜಿಯವರು ಭಾರತದ ಆತ್ಮವು ಅದರ ಗ್ರಾಮಗಳಲ್ಲಿ ನೆಲೆಸಿದೆ ಎಂದು ಹೇಳಿದ್ದರು. ಇಂದು, ನಾನು ಅದಕ್ಕೆ ಇನ್ನೊಂದನ್ನು ಸೇರಿಸಲು ಬಯಸುತ್ತೇನೆ - ಗ್ರಾಮೀಣ ಭಾರತದ ಆತ್ಮವು ಗ್ರಾಮೀಣ ಮಹಿಳೆಯರ ಸಬಲೀಕರಣದಲ್ಲಿದೆ. ಅದಕ್ಕಾಗಿಯೇ ನಮ್ಮ ಸರ್ಕಾರವು ಮಹಿಳೆಯರ ಹಕ್ಕುಗಳಿಗೆ ಮತ್ತು ಅವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದಕ್ಕೆ ಆದ್ಯತೆ ನೀಡಿದೆ. ಇಂದು, ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ, ಮತ್ತು ಈ ಪ್ರಗತಿಯು ನಿಮ್ಮಂತಹ ಕೋಟ್ಯಂತರ ಮಹಿಳೆಯರ ಕಠಿಣ ಪರಿಶ್ರಮದಿಂದ ನಿರ್ಮಾಣವಾಗಿದೆ. ಈ ಪರಿವರ್ತನೆಯಲ್ಲಿ ಗ್ರಾಮೀಣ ಆರ್ಥಿಕತೆ ಮತ್ತು ಮಹಿಳೆಯರ ನೇತೃತ್ವದ ಸ್ವಸಹಾಯ ಗುಂಪುಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ. ಪ್ರಸ್ತುತ, ದೇಶಾದ್ಯಂತ 10 ಕೋಟಿಗೂ ಹೆಚ್ಚು ಮಹಿಳೆಯರು 90 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳನ್ನು ನಿರ್ವಹಿಸುತ್ತಿದ್ದಾರೆ. ಇವುಗಳಲ್ಲಿ, 3 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳು ಗುಜರಾತ್ ನಲ್ಲಿಯೇ ಇವೆ. ಆರ್ಥಿಕ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸಲು, ಈ ಕೋಟ್ಯಂತರ ಮಹಿಳೆಯರ ಆದಾಯವನ್ನು ಹೆಚ್ಚಿಸಲು ನಾವು ಪ್ರತಿಜ್ಞೆ ಮಾಡಿದ್ದೇವೆ. ಅವರನ್ನು ಲಕ್ಷಪತಿ ದೀದಿಗಳನ್ನಾಗಿ ಮಾಡಲು ನಾವು ಸಬಲೀಕರಣಗೊಳಿಸುತ್ತಿದ್ದೇವೆ. ಈಗಾಗಲೇ, 1.5 ಕೋಟಿ ಮಹಿಳೆಯರು ಈ ಮೈಲಿಗಲ್ಲನ್ನು ಸಾಧಿಸಿದ್ದಾರೆ, ಮತ್ತು ಮುಂದಿನ ಐದು ವರ್ಷಗಳಲ್ಲಿ, 3 ಕೋಟಿ ಮಹಿಳೆಯರನ್ನು ಲಕ್ಷಪತಿ ದೀದಿಗಳನ್ನಾಗಿ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ಸಹೋದರಿಯರು ಕೆಲಸ ಮಾಡುವ ವೇಗ ಮತ್ತು ದೃಢಸಂಕಲ್ಪವನ್ನು ಗಮನಿಸಿದರೆ, ಈ ಗುರಿಯನ್ನು ಇನ್ನೂ ಬೇಗ ಸಾಧಿಸುತ್ತೇವೆ ಎಂಬ ವಿಶ್ವಾಸ ನನಗಿದೆ.

ತಾಯಂದಿರೇ ಮತ್ತು ಸಹೋದರಿಯರೇ,

ನಮ್ಮ ಸಹೋದರಿಯರಲ್ಲಿ ಒಬ್ಬರು ಲಕ್ಷಪತಿ ದೀದಿಯಾದಾಗ, ಆ ಇಡೀ ಕುಟುಂಬದ ಭವಿಷ್ಯವೇ ಉಜ್ವಲವಾಗುತ್ತದೆ. ಮಹಿಳೆಯರು ತಮ್ಮ ಗ್ರಾಮದ ಇತರ ಮಹಿಳೆಯರನ್ನೂ ಪ್ರೋತ್ಸಾಹಿಸಿ, ಹೆಚ್ಚಿನ ಸಹೋದರಿಯರನ್ನು ತಮ್ಮ ಗುಂಪಿಗೆ ಸೇರಿಸಿಕೊಳ್ಳುತ್ತಾರೆ. ನಮ್ಮ ತಾಯಂದಿರು ಮತ್ತು ಸಹೋದರಿಯರು ಕೈಗೊಳ್ಳುವ ಯಾವುದೇ ಕೆಲಸವು ಸ್ವಾಭಾವಿಕವಾಗಿ ಗೌರವ ಮತ್ತು ಮಾನ್ಯತೆಯನ್ನು ಗಳಿಸುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ. ಸಣ್ಣ ಮನೆಯಾಧಾರಿತ ಪ್ರಯತ್ನವಾಗಿ ಆರಂಭವಾಗುವ ಕೆಲಸವು ಕ್ರಮೇಣ ಆರ್ಥಿಕ ಚಳುವಳಿಯಾಗಿ ರೂಪುಗೊಳ್ಳುತ್ತದೆ.

ಸ್ವಸಹಾಯ ಗುಂಪುಗಳ ಸಾಮರ್ಥ್ಯವನ್ನು ಬೆಂಬಲಿಸುವ ಸಲುವಾಗಿ, ನಮ್ಮ ಸರ್ಕಾರವು ಕಳೆದ ಒಂದು ದಶಕದಲ್ಲಿ ಅವುಗಳ ಬಜೆಟ್ ಅನ್ನು ಐದು ಪಟ್ಟು ಹೆಚ್ಚಿಸಿದೆ. ಈ ಗುಂಪುಗಳು ಈಗ 20 ಲಕ್ಷ ರೂಪಾಯಿಗಳವರೆಗೆ ಯಾವುದೇ ಭದ್ರತೆಯಿಲ್ಲದ ಸಾಲವನ್ನು ಪಡೆಯಲು ಅರ್ಹವಾಗಿವೆ - ಯಾವುದೇ ಭರವಸೆ ನೀಡದೆ ಹಣ ಲಭ್ಯವಾಗುತ್ತದೆ. ಹೆಚ್ಚುವರಿಯಾಗಿ, ಸ್ವಸಹಾಯ ಗುಂಪುಗಳ ಸದಸ್ಯರಿಗೆ ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ತಮ್ಮ ಕೆಲಸವನ್ನು ಸುಧಾರಿಸಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ನಾವು ಅವಕಾಶಗಳನ್ನು ನೀಡುತ್ತಿದ್ದೇವೆ.

ಸ್ನೇಹಿತರೇ,

ನಮ್ಮ ದೇಶದ ಮಹಿಳೆಯರು ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿದ್ದಾರೆ, ಸಂದೇಹಗಳನ್ನು ದೂರಮಾಡಿ, ಸಂಪ್ರದಾಯಗಳನ್ನು ಮುರಿಯುತ್ತಿದ್ದಾರೆ. ನಾವು ಡ್ರೋನ್ ದೀದಿ ಯೋಜನೆಯನ್ನು ಜಾರಿಗೆ ತಂದಾಗ, ಗ್ರಾಮೀಣ ಮಹಿಳೆಯರು ಇಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ನಿರ್ವಹಿಸಬಲ್ಲರೇ ಎಂದು ಅನೇಕರು ಸಂಶಯ ವ್ಯಕ್ತಪಡಿಸಿದರು. ಹಳ್ಳಿಯ ಮಹಿಳೆಯರು ಆಧುನಿಕ ಡ್ರೋನ್ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲರೇ ಎಂದು ಅವರು ಅನುಮಾನಪಟ್ಟರು. ಆದರೆ ನನ್ನ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಪ್ರತಿಭೆ ಮತ್ತು ಬದ್ಧತೆಯ ಬಗ್ಗೆ ನನಗೆ ಅಪಾರ ನಂಬಿಕೆ ಇತ್ತು. ಇಂದು, ನಮೋ ಡ್ರೋನ್ ದೀದಿ ಅಭಿಯಾನವು ಗ್ರಾಮೀಣ ಆರ್ಥಿಕತೆ ಮತ್ತು ಕೃಷಿಯಲ್ಲಿ ಕ್ರಾಂತಿಯನ್ನು ಸೃಷ್ಟಿಸುತ್ತಿದೆ. ಈ ಉಪಕ್ರಮವನ್ನು ಮುನ್ನಡೆಸುತ್ತಿರುವ ಮಹಿಳೆಯರು ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಿದ್ದಾರೆ, ಮತ್ತು ಅವರ ಕುಟುಂಬ ಮತ್ತು ಗ್ರಾಮಗಳಲ್ಲಿ ಅವರ ಗೌರವ ಹೆಚ್ಚಾಗಿದೆ. ಈಗ, ಇಡೀ ಸಮುದಾಯವು ಪೈಲಟ್ ದೀದಿ ಮತ್ತು ಡ್ರೋನ್ ದೀದಿಯನ್ನು ಅಪಾರ ಹೆಮ್ಮೆಯಿಂದ ನೋಡುತ್ತದೆ. ಅದೇ ರೀತಿ, ಬ್ಯಾಂಕ್ ಸಖಿ ಮತ್ತು ವಿಮಾ ಸಖಿಯಂತಹ ಯೋಜನೆಗಳು ಹಳ್ಳಿಗಳಲ್ಲಿ ಮಹಿಳೆಯರಿಗೆ ಹೊಸ ಆರ್ಥಿಕ ಅವಕಾಶಗಳನ್ನು ತೆರೆದಿವೆ. ಗ್ರಾಮೀಣ ಮಹಿಳೆಯರನ್ನು ಇನ್ನಷ್ಟು ಸಬಲರನ್ನಾಗಿಸಲು, ನಾವು ಕೃಷಿ ಸಖಿ ಮತ್ತು ಪಶು ಸಖಿ ಅಭಿಯಾನಗಳನ್ನು ಆರಂಭಿಸಿದ್ದೇವೆ, ಇದು ಲಕ್ಷಾಂತರ ಮಹಿಳೆಯರು ತಮ್ಮ ಆದಾಯವನ್ನು ಹೆಚ್ಚಿಸಲು ಮತ್ತು ರಾಷ್ಟ್ರದ ಪ್ರಗತಿಗೆ ಮಹತ್ವದ ಕೊಡುಗೆ ನೀಡಲು ಸಹಕಾರಿಯಾಗಿದೆ.

ಸಹೋದರಿಯರೇ ಮತ್ತು ಹೆಣ್ಣುಮಕ್ಕಳೇ,

ಗುಜರಾತ್ ನ ಮಹಿಳೆಯರು ಈ ಸರ್ಕಾರಿ ಉಪಕ್ರಮಗಳಿಂದ ಗರಿಷ್ಠ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಗುಜರಾತ್ ಸರ್ಕಾರವು 10 ಲಕ್ಷ ಮಹಿಳೆಯರನ್ನು ಲಖ್ಪತಿ ದೀದಿಗಳಾಗಿ ಸಬಲೀಕರಣಗೊಳಿಸುವ ಅಭಿಯಾನವನ್ನು ಪ್ರಾರಂಭಿಸಿದೆ. ಈ ಶ್ಲಾಘನೀಯ ಪ್ರಯತ್ನಕ್ಕಾಗಿ ಭೂಪೇಂದ್ರ ಭಾಯ್ ಮತ್ತು ಗುಜರಾತ್ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ನಾನು ಪ್ರಧಾನಮಂತ್ರಿಯಾದ ನಂತರ ಕೆಂಪು ಕೋಟೆಯ ಕೋಟೆಯಿಂದ ಮೊದಲ ಬಾರಿಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದಾಗ, ಇಂದಿಗೂ ಪ್ರಸ್ತುತವಾಗಿರುವ ಒಂದು ಆತಂಕವನ್ನು ವ್ಯಕ್ತಪಡಿಸಿದ್ದೆ. ಹೆಣ್ಣುಮಗಳೊಬ್ಬಳು ಸಂಜೆ ತಡವಾಗಿ ಮನೆಗೆ ಮರಳಿದಾಗ, ತಂದೆ-ತಾಯಿ ಇಬ್ಬರೂ ಅವಳನ್ನು ಪದೇ ಪದೇ ಪ್ರಶ್ನಿಸುತ್ತಾರೆ - ಎಲ್ಲಿಗೆ ಹೋಗಿದ್ದೆ? ತಡವಾಗಿ ಏಕೆ ಬಂದೆ? ಯಾರ ಜೊತೆಗಿದ್ದೆ? ಹೀಗೆ ನೂರಾರು ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ನಾನು ಕೇಳಿದೆ, ಅವರ ಮಗ ತಡರಾತ್ರಿಯಲ್ಲಿ ಮನೆಗೆ ಬಂದಾಗ ಇದೇ ರೀತಿ ಪ್ರಶ್ನಿಸುತ್ತಾರೆಯೇ? ನೀನು ಎಲ್ಲಿದ್ದೆ? ಯಾರ ಜೊತೆಗಿದ್ದೆ? ಏನು ಮಾಡುತ್ತಿದ್ದೆ? ಎಂದು ಅವನನ್ನು ಎಂದಾದರೂ ಕೇಳುತ್ತಾರೆಯೇ?

ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸುವುದಕ್ಕೆ ಮತ್ತು ಹೆಚ್ಚು ಜವಾಬ್ದಾರಿಯುತ ಸಮಾಜವನ್ನು ನಿರ್ಮಿಸುವುದಕ್ಕೆ ಮನೋಭಾವದಲ್ಲಿ ಬದಲಾವಣೆಯ ಅಗತ್ಯವಿದೆ. ಕಳೆದ ದಶಕದಲ್ಲಿ, ನಾವು ಮಹಿಳೆಯರ ಭದ್ರತೆಯನ್ನು ಬಲಪಡಿಸಲು ಹೆಚ್ಚಿನ ಆದ್ಯತೆ ನೀಡಿದ್ದೇವೆ. ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಗಟ್ಟಲು ಮತ್ತು ನ್ಯಾಯವು ತ್ವರಿತವಾಗಿ ದೊರೆಯುವಂತೆ ಮಾಡಲು ನಾವು ಕಠಿಣ ಕಾನೂನುಗಳನ್ನು ಪರಿಚಯಿಸಿದ್ದೇವೆ. ಮಹಿಳೆಯರ ವಿರುದ್ಧದ ಗಂಭೀರ ಅಪರಾಧಗಳ ವಿಚಾರಣೆಯನ್ನು ತ್ವರಿತಗೊಳಿಸಲು ವೇಗದ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ, ಅಪರಾಧಿಗಳಿಗೆ ತ್ವರಿತ ಶಿಕ್ಷೆಯನ್ನು ಖಚಿತಪಡಿಸಲಾಗಿದೆ. ದೇಶಾದ್ಯಂತ ಸುಮಾರು 800 ಇಂತಹ ನ್ಯಾಯಾಲಯಗಳಿಗೆ ಅನುಮೋದನೆ ನೀಡಲಾಗಿದೆ ಮತ್ತು ಅವುಗಳಲ್ಲಿ ಹೆಚ್ಚಿನವು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಈ ನ್ಯಾಯಾಲಯಗಳು ಅತ್ಯಾಚಾರ ಮತ್ತು ಪೋಕ್ಸೊಗೆ ಸಂಬಂಧಿಸಿದ ಸುಮಾರು 3 ಲಕ್ಷ ಪ್ರಕರಣಗಳನ್ನು ತ್ವರಿತವಾಗಿ ಪರಿಹರಿಸಿದ್ದು, ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಿಕ ನ್ಯಾಯವನ್ನು ಒದಗಿಸಿವೆ. ಹೇಯ ಅಪರಾಧಗಳಲ್ಲಿ ಭಾಗಿಯಾಗಿರುವ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ - ಮರಣದಂಡನೆ - ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರವೇ ಕಾನೂನನ್ನು ತಿದ್ದುಪಡಿ ಮಾಡಿತು. ನಾವು ಮಹಿಳಾ ಸಹಾಯವಾಣಿಯನ್ನು ಬಲಪಡಿಸಿದ್ದೇವೆ, ಅದನ್ನು ದಿನದ 24 ಗಂಟೆಗಳು, ವರ್ಷದ 365 ದಿನಗಳು ಲಭ್ಯವಾಗುವಂತೆ ಮಾಡಿದ್ದೇವೆ. ಹೆಚ್ಚುವರಿಯಾಗಿ, ಸಂಕಷ್ಟದಲ್ಲಿರುವ ಮಹಿಳೆಯರಿಗೆ ತಕ್ಷಣದ ಬೆಂಬಲವನ್ನು ನೀಡಲು ದೇಶಾದ್ಯಂತ ಒನ್ ಸ್ಟಾಪ್ ಸೆಂಟರ್ಗಳನ್ನು ಪ್ರಾರಂಭಿಸಿದ್ದೇವೆ. ಸುಮಾರು 800 ಇಂತಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ಇದು 10 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಪ್ರಯೋಜನವನ್ನು ನೀಡಿದೆ.

ಸ್ನೇಹಿತರೇ,

ಬ್ರಿಟಿಷ್ ಕಾಲದ ದಬ್ಬಾಳಿಕೆಯ ಕಾನೂನುಗಳನ್ನು ಬದಲಿಸಿ, ಭಾರತೀಯ ನ್ಯಾಯ ಸಂಹಿತೆಯನ್ನು ಈಗ ದೇಶಾದ್ಯಂತ ಜಾರಿಗೊಳಿಸಲಾಗಿದೆ. ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳ ನಂತರ, ಈ ಮಹತ್ವದ ಮತ್ತು ಪವಿತ್ರ ಜವಾಬ್ದಾರಿಯನ್ನು ನಿರ್ವಹಿಸುವ ಅವಕಾಶವನ್ನು ನೀವು ನನಗೆ ನೀಡಿದ್ದೀರಿ. ಹಾಗಾದರೆ ನಾವು ಯಾವ ಬದಲಾವಣೆಗಳನ್ನು ಮಾಡಿದ್ದೇವೆ? ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ನಿಬಂಧನೆಗಳನ್ನು ಮತ್ತಷ್ಟು ಬಲಪಡಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಕುರಿತು ಒಂದು ವಿಶೇಷ ಅಧ್ಯಾಯವನ್ನು ಸೇರಿಸಲಾಗಿದೆ. ವರ್ಷಗಳಿಂದ, ಸಂತ್ರಸ್ತರು, ಅವರ ಕುಟುಂಬಗಳು ಮತ್ತು ಇಡೀ ಸಮಾಜವು ನ್ಯಾಯಕ್ಕಾಗಿ ದೀರ್ಘ ಕಾಯುವಿಕೆಯಿಂದ ಬೇಸರ ವ್ಯಕ್ತಪಡಿಸುತ್ತಿತ್ತು. ಪ್ರಕರಣಗಳು ವರ್ಷಗಟ್ಟಲೆ ಎಳೆಯಲ್ಪಡುತ್ತಿದ್ದವು, ಪದೇ ಪದೇ ವಿಳಂಬವಾಗುತ್ತಿತ್ತು. ಭಾರತೀಯ ನ್ಯಾಯ ಸಂಹಿತೆಯು ಈ ಸಮಸ್ಯೆಗೆ ನೇರವಾಗಿ ಪರಿಹಾರ ನೀಡಿದೆ. ಈಗ, ಅತ್ಯಾಚಾರದಂತಹ ಹೇಯ ಅಪರಾಧಗಳಲ್ಲಿ, 60 ದಿನಗಳ ಒಳಗೆ ಆರೋಪಪಟ್ಟಿ ಸಲ್ಲಿಸಬೇಕು ಮತ್ತು 45 ದಿನಗಳ ಒಳಗೆ ತೀರ್ಪು ನೀಡಬೇಕು. ಹಿಂದೆ, ಸಂತ್ರಸ್ತರು FIR ದಾಖಲಿಸಲು ವೈಯಕ್ತಿಕವಾಗಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಬೇಕಾಗಿತ್ತು, ಆಗಾಗ್ಗೆ ತೊಂದರೆಗಳನ್ನು ಎದುರಿಸಬೇಕಾಗುತ್ತಿತ್ತು. ಹೊಸ ಕಾನೂನುಗಳ ಅಡಿಯಲ್ಲಿ, ಎಲ್ಲಿಂದಲಾದರೂ e-FIR ದಾಖಲಿಸಬಹುದು, ಇದು ಪೊಲೀಸರು ತಕ್ಷಣದ ಕ್ರಮ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ಶೂನ್ಯ FIR ನಿಬಂಧನೆಯ ಅಡಿಯಲ್ಲಿ, ಕಿರುಕುಳ ಅಥವಾ ಹಿಂಸೆಯನ್ನು ಎದುರಿಸುವ ಯಾವುದೇ ಮಹಿಳೆ ಯಾವುದೇ ಪೊಲೀಸ್ ಠಾಣೆಯಲ್ಲಿ, ಅಧಿಕಾರ ವ್ಯಾಪ್ತಿಯನ್ನು ಲೆಕ್ಕಿಸದೆ FIR ದಾಖಲಿಸಬಹುದು. ಮತ್ತೊಂದು ಗಮನಾರ್ಹ ಬದಲಾವಣೆಯೆಂದರೆ, ಪೊಲೀಸರು ಈಗ ಅತ್ಯಾಚಾರ ಸಂತ್ರಸ್ತೆಯ ಹೇಳಿಕೆಯನ್ನು ಆಡಿಯೋ ಅಥವಾ ವೀಡಿಯೋ ಮೂಲಕ ದಾಖಲಿಸಬಹುದು, ಈ ಅಭ್ಯಾಸಕ್ಕೆ ಕಾನೂನು ಮಾನ್ಯತೆ ನೀಡಲಾಗಿದೆ. ಹಿಂದೆ, ವೈದ್ಯಕೀಯ ವರದಿಗಳು ಅತಿಯಾದ ಸಮಯ ತೆಗೆದುಕೊಳ್ಳುತ್ತಿದ್ದವು, ಇದು ಸಂತ್ರಸ್ತರಿಗೆ ಮತ್ತಷ್ಟು ಸಂಕಟವನ್ನು ಉಂಟುಮಾಡುತ್ತಿತ್ತು. ಈಗ, ವೈದ್ಯರು ಏಳು ದಿನಗಳ ಒಳಗೆ ವೈದ್ಯಕೀಯ ವರದಿಗಳನ್ನು ಸಲ್ಲಿಸಬೇಕು, ಇದು ಅಗತ್ಯವಾದ ಪರಿಹಾರವನ್ನು ಒದಗಿಸುತ್ತದೆ ಮತ್ತು ಕಾನೂನು ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

ಸ್ನೇಹಿತರೇ,

ಭಾರತೀಯ ನ್ಯಾಯ ಸಂಹಿತೆಯಡಿ ಜಾರಿಗೊಳಿಸಲಾದ ಈ ನೂತನ ನಿಯಮಗಳು ಈಗಾಗಲೇ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸೂರತ್ ಜಿಲ್ಲೆಯ ಘಟನೆ ಇದಕ್ಕೆ ಪ್ರಮುಖ ಉದಾಹರಣೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ನಡೆದ ಭೀಕರ ಸಾಮೂಹಿಕ ಅತ್ಯಾಚಾರ ಪ್ರಕರಣವು ಆ ಪ್ರದೇಶವನ್ನು ತಲ್ಲಣಗೊಳಿಸಿತು. ಅಪರಾಧದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಹೊಸ ಕ್ರಿಮಿನಲ್ ಸಂಹಿತೆಯ ಅನ್ವಯ, ಕೇವಲ 15 ದಿನಗಳೊಳಗೆ ಆರೋಪಪಟ್ಟಿ ದಾಖಲಿಸಲಾಯಿತು. ಕೆಲವೇ ವಾರಗಳ ನಂತರ, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಕೇವಲ 15 ದಿನಗಳಲ್ಲಿ, ಪೊಲೀಸರು ತನಿಖೆ ಪೂರ್ಣಗೊಳಿಸಿ, ನ್ಯಾಯಾಂಗ ಪ್ರಕ್ರಿಯೆ ಪ್ರಾರಂಭವಾಗಿ, ಶೀಘ್ರವಾಗಿ ನ್ಯಾಯ ಒದಗಿಸಲಾಯಿತು. ಭಾರತೀಯ ನ್ಯಾಯ ಸಂಹಿತೆ ಜಾರಿಗೆ ಬಂದ ನಂತರ, ಮಹಿಳೆಯರ ವಿರುದ್ಧದ ಅಪರಾಧಗಳ ವಿಚಾರಣೆಯ ವೇಗವು ದೇಶಾದ್ಯಂತ ಗಣನೀಯವಾಗಿ ಹೆಚ್ಚಾಗಿದೆ. ಉತ್ತರ ಪ್ರದೇಶದ ಅಲಿಗಢದಲ್ಲಿ, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತು - ರಾಜ್ಯದಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ ದಾಖಲಾದ ಮೊದಲ ಶಿಕ್ಷೆ ಇದು. ಗಮನಾರ್ಹವಾಗಿ, ಆರೋಪಪಟ್ಟಿ ಸಲ್ಲಿಸಿದ ಕೇವಲ 30 ದಿನಗಳೊಳಗೆ ತೀರ್ಪು ನೀಡಲಾಯಿತು. ಅದೇ ರೀತಿ, ಕೋಲ್ಕತ್ತಾ ನ್ಯಾಯಾಲಯವು ಏಳು ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ ಮರಣದಂಡನೆ ವಿಧಿಸಿತು, ಅಪರಾಧ ನಡೆದ 80 ದಿನಗಳೊಳಗೆ ಶಿಕ್ಷೆಯನ್ನು ಪ್ರಕಟಿಸಲಾಯಿತು. ವಿವಿಧ ರಾಜ್ಯಗಳ ಈ ಉದಾಹರಣೆಗಳು, ಭಾರತೀಯ ನ್ಯಾಯ ಸಂಹಿತೆ ಮತ್ತು ನಮ್ಮ ಸರ್ಕಾರ ತೆಗೆದುಕೊಂಡ ಇತರ ನಿರ್ಧಾರಗಳು ಮಹಿಳೆಯರ ಸುರಕ್ಷತೆಯನ್ನು ಬಲಪಡಿಸುವುದಲ್ಲದೆ, ಸಂತ್ರಸ್ತರಿಗೆ ತ್ವರಿತ ನ್ಯಾಯವನ್ನು ಖಚಿತಪಡಿಸಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ.

ತಾಯಂದಿರೇ ಮತ್ತು ಸಹೋದರಿಯರೇ,

ಸರ್ಕಾರದ ಮುಖ್ಯಸ್ಥನಾಗಿ ಮತ್ತು ನಿಮ್ಮ ಸೇವಕನಾಗಿ, ನಿಮ್ಮ ಕನಸುಗಳಿಗೆ ಯಾವುದೇ ಅಡ್ಡಿಯಾಗಲು ನಾನು ಬಿಡುವುದಿಲ್ಲ ಎಂದು ಭರವಸೆ ನೀಡುತ್ತೇನೆ. ಮಗನು ತನ್ನ ತಾಯಿಯ ಸೇವೆಯನ್ನು ಭಕ್ತಿಯಿಂದ  ಮಾಡುವಂತೆ, ನಾನು ಭಾರತಮಾತೆಯ ಮತ್ತು  ತಾಯಂದಿರು-ಸಹೋದರಿಯರಾದ ನಿಮ್ಮೆಲ್ಲರ ಸೇವೆಯನ್ನು ಅದೇ ನಿಷ್ಠೆಯಿಂದ  ಮಾಡುತ್ತೇನೆ. ನಮ್ಮೆಲ್ಲರ ಒಗ್ಗೂಡಿದ ಪ್ರಯತ್ನ, ಪರಿಶ್ರಮ ಮತ್ತು ನಿಮ್ಮ ಆಶೀರ್ವಾದದಿಂದ, 2047ರಲ್ಲಿ ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವಾಗ, ನಮ್ಮ ವಿಕಸಿತ ಭಾರತದ ಕನಸು ನನಸಾಗುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ. ಈ ಸಂಕಲ್ಪದೊಂದಿಗೆ, ಮಹಿಳಾ ದಿನದ ಈ ವಿಶೇಷ ಸಂದರ್ಭದಲ್ಲಿ, ದೇಶದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಮಗಳಿಗೆ ನನ್ನ ಹೃದಯಪೂರ್ವಕ ಶುಭಾಶಯಗಳನ್ನು ಮತ್ತೊಮ್ಮೆ ತಿಳಿಸುತ್ತೇನೆ. ನಿಮಗೆಲ್ಲರಿಗೂ ಅಭಿನಂದನೆಗಳು!

ಈಗ, ಎರಡೂ ಕೈಗಳನ್ನು ಎತ್ತಿ ನನ್ನೊಂದಿಗೆ ಹೇಳಿ...

ಭಾರತ ಮಾತಾ ಕೀ ಜೈ! 

ಇಂದು, ಮಹಿಳೆಯರ ಧ್ವನಿ ಇನ್ನೂ ಜೋರಾಗಿ ಕೇಳಿಸಬೇಕು. 

ಭಾರತ ಮಾತಾ ಕೀ ಜೈ! 

ಭಾರತ ಮಾತಾ ಕೀ ಜೈ! 

ಭಾರತ ಮಾತಾ ಕೀ ಜೈ! 

ವಂದೇ ಮಾತರಂ. 

ವಂದೇ ಮಾತರಂ. 

ವಂದೇ ಮಾತರಂ. 

ವಂದೇ ಮಾತರಂ. 

ವಂದೇ ಮಾತರಂ. 

ವಂದೇ ಮಾತರಂ. 

ವಂದೇ ಮಾತರಂ. 

ಇಂದು, ನಾವು ವಂದೇ ಮಾತರಂ ಎಂದು ಹೇಳಿದಾಗ, ನಾವು ಕೇವಲ ಭಾರತ ಮಾತೆಗೆ ನಮನ ಸಲ್ಲಿಸುವುದಲ್ಲದೆ, ದೇಶದ ಕೋಟಿಗಟ್ಟಲೆ ತಾಯಂದಿರಿಗೆ ಗೌರವ ಸಲ್ಲಿಸುತ್ತೇವೆ - ವಂದೇ ಮಾತರಂ, ವಂದೇ ಮಾತರಂ, ವಂದೇ ಮಾತರಂ! 

ಧನ್ಯವಾದಗಳು.


ಸೂಚನೆ: ಪ್ರಧಾನಮಂತ್ರಿಯವರ ಭಾಷಣದ ಕೆಲವು ಭಾಗಗಳು ಮೂಲತಃ ಗುಜರಾತಿಯಲ್ಲಿದ್ದವು ಮತ್ತು ಅವುಗಳ ಅರ್ಥವನ್ನು ಇಲ್ಲಿ ಅನುವಾದಿಸಲಾಗಿದೆ.

 

*****


(Release ID: 2110097) Visitor Counter : 11