ನೀತಿ ಆಯೋಗ
ಮಾಜಿ ನಾಸಾ ಗಗನಯಾತ್ರಿ ಮೈಕ್ ಮಾಸ್ಸಿಮಿನೊ ದೆಹಲಿಯ ಮಾಡರ್ನ್ ಪಬ್ಲಿಕ್ ಸ್ಕೂಲ್ ನಲ್ಲಿರುವ ಅಟಲ್ ಟಿಂಕರಿಂಗ್ ಲ್ಯಾಬ್ ಗೆ ಭೇಟಿ ನೀಡಿದರು
Posted On:
28 FEB 2025 9:33PM by PIB Bengaluru
ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್ (ಎಐಎಂ) ಇಂದು ದೆಹಲಿಯ ಅಟಲ್ ಟಿಂಕರಿಂಗ್ ಲ್ಯಾಬ್ (ಎಟಿಎಲ್) ಗೆ ನಾಸಾದ ಮಾಜಿ ಗಗನಯಾತ್ರಿ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಮೈಕ್ ಮಾಸ್ಸಿಮಿನೊ ಅವರ ವಿಶೇಷ ಭೇಟಿಯನ್ನು ಆಯೋಜಿಸಿತ್ತು.

ಎರಡು ಬಾಹ್ಯಾಕಾಶ ನೌಕಾ ಕಾರ್ಯಾಚರಣೆಗಳ ಭಾಗವಾಗಿರುವ ಮತ್ತು ಹಬಲ್ ಬಾಹ್ಯಾಕಾಶ ದೂರದರ್ಶಕದ ಸೇವೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಅನುಭವಿ ಗಗನಯಾತ್ರಿಯೊಂದಿಗೆ ಸಂವಹನ ನಡೆಸಲು ಅವಕಾಶವನ್ನು ಒದಗಿಸುವ ಮೂಲಕ ಯುವ ಮನಸ್ಸುಗಳನ್ನು ಪ್ರೇರೇಪಿಸುವುದು ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲವನ್ನು ಉತ್ತೇಜಿಸುವುದು ಈ ಭೇಟಿಯ ಗುರಿಯಾಗಿತ್ತು.

ಗಣ್ಯ ಅತಿಥಿಗಳನ್ನು ಮಾಡರ್ನ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅಲ್ಕಾ ಕಪೂರ್ ಮತ್ತು ವಿದ್ಯಾರ್ಥಿಗಳು ಬರಮಾಡಿಕೊಂಡರು, ನಂತರ ನೀತಿ ಆಯೋಗದ ಎಐಎಂನ ಇನ್ನೋವೇಶನ್ ಲೀಡ್ ಶ್ರೀ ಶುಭಂ ಗುಪ್ತಾ ಅವರಿಂದ ಅಟಲ್ ಟಿಂಕರಿಂಗ್ ಲ್ಯಾಬ್ಸ್ ಕುರಿತು ಪ್ರಸ್ತುತಿ ನಡೆಯಿತು.

ಭೇಟಿಯ ಸಮಯದಲ್ಲಿ, ವಿದ್ಯಾರ್ಥಿಗಳು ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾದ ವಿವಿಧ ನವೀನ ಯೋಜನೆಗಳನ್ನು ಪ್ರದರ್ಶಿಸಿದರು, ಯುವ ವಿದ್ಯಾರ್ಥಿಗಳಲ್ಲಿ ಸಮಸ್ಯೆ-ಪರಿಹರಿಸುವ ಮತ್ತು ವಿಮರ್ಶಾತ್ಮಕ ಚಿಂತನೆಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಎಐಎಂನ ಪ್ರಭಾವವನ್ನು ಎತ್ತಿ ತೋರಿಸಿದರು. ಶ್ರೀ ಮೈಕ್ ಅವರು ಇಸ್ರೋ ಮತ್ತು ಸ್ಪೇಸ್ ಕಿಡ್ಜ್ ನ ಜಂಟಿ ಉಪಕ್ರಮವಾದ ಪ್ರಸಿದ್ಧ ಅಜಾದ್ ಸ್ಯಾಟ್ ಉಪಗ್ರಹ ಉಡಾವಣೆಯ ಭಾಗವಾಗಿರುವ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು. ಈ ಉಪಗ್ರಹವನ್ನು ಭಾರತದಾದ್ಯಂತ 75 ಶಾಲೆಗಳ 750 ವಿದ್ಯಾರ್ಥಿನಿಯರು ತಯಾರಿಸಿದ್ದಾರೆ. ಎಂಟು ಕೆಜಿ ತೂಕದ ಉಪಗ್ರಹವು 75 ಫೆಮ್ಟೊ ಪ್ರಯೋಗಗಳು, ತನ್ನದೇ ಆದ ಸೌರ ಫಲಕಗಳ ಚಿತ್ರಗಳನ್ನು ಕ್ಲಿಕ್ ಮಾಡಲು ಸೆಲ್ಫಿ ಕ್ಯಾಮೆರಾಗಳು ಮತ್ತು ದೀರ್ಘ-ಶ್ರೇಣಿಯ ಸಂವಹನ ಟ್ರಾನ್ಸ್‌ಪಾಂಡರ್ ಗಳನ್ನು ಹೊಂದಿದೆ. ಸ್ಪೇಸ್ ಕಿಡ್ಜ್ ನ ಸಂಸ್ಥಾಪಕಿ ಶ್ರೀಮತಿ ಕೇಸನ್ ಅವರು STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ನಲ್ಲಿ ವಿದ್ಯಾರ್ಥಿನಿಯರನ್ನು ಉತ್ತೇಜಿಸುವ ಈ ವಿಶಿಷ್ಟ ಉಪಕ್ರಮದ ಬಗ್ಗೆ ಶ್ರೀ ಮೈಕ್ ಅವರಿಗೆ ವಿವರಿಸಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮೈಕ್ ಮಾಸ್ಸಿಮಿನೊ ಅವರು, ನಾಸಾ ಗಗನಯಾತ್ರಿಯಾಗಿ ತಮ್ಮ ಅನುಭವಗಳು, ಬಾಹ್ಯಾಕಾಶ ಯಾನಗಳ ಸವಾಲುಗಳು ಮತ್ತು ಬಾಹ್ಯಾಕಾಶ ಪರಿಶೋಧನೆಯ ಭವಿಷ್ಯದ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು. ಅವರ ಸ್ಫೂರ್ತಿದಾಯಕ ಭಾಷಣವು ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಲು ಮತ್ತು STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಕ್ಷೇತ್ರಗಳನ್ನು ಉತ್ಸಾಹದಿಂದ ಅನ್ವೇಷಿಸಲು ಪ್ರೋತ್ಸಾಹಿಸಿತು.

ಅಟಲ್ ಟಿಂಕರಿಂಗ್ ಲ್ಯಾಬ್ ಗಳ ಬಗ್ಗೆ
ಅಟಲ್ ಟಿಂಕರಿಂಗ್ ಲ್ಯಾಬ್ ಗಳು (ಎಟಿಎಲ್) ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್ (ಎಐಎಂ) ಅಡಿಯಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ನವೀನ ಮನಸ್ಥಿತಿಯನ್ನು ಬೆಳೆಸಲು ವಿನ್ಯಾಸಗೊಳಿಸಲಾದ ಒಂದು ಉಪಕ್ರಮವಾಗಿದೆ. ಎಟಿಎಲ್ ಒಂದು ಕಾರ್ಯಕ್ಷೇತ್ರವಾಗಿದ್ದು, ಯುವ ಮನಸ್ಸುಗಳು ನೀವೇ ಸ್ವತಃ ಮಾಡಿ (ಡೂ ಇಟ್ ಯುವರ್ ಸೆಲ್ಫ್) ಮೂಲಕ ತಮ್ಮ ಆಲೋಚನೆಗಳಿಗೆ ಆಕಾರ ನೀಡಬಹುದು ಮತ್ತು ನಾವೀನ್ಯತೆಯ ಕೌಶಲ್ಯಗಳನ್ನು ಕಲಿಯಬಹುದು. ಚಿಕ್ಕ ಮಕ್ಕಳಿಗೆ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಉಪಕರಣಗಳು ಮತ್ತು ಸಲಕರಣೆಗಳೊಂದಿಗೆ ಕೆಲಸ ಮಾಡಲು ಅವಕಾಶ ದೊರೆಯುತ್ತದೆ. ಎಟಿಎಲ್ ಶೈಕ್ಷಣಿಕ ಮತ್ತು ಕಲಿಕೆಯ 'ನೀವೇ ಸ್ವತಃ ಮಾಡಿ' ಕಿಟ್ ಗಳು ಮತ್ತು ವಿಜ್ಞಾನ, ಎಲೆಕ್ಟ್ರಾನಿಕ್ಸ್, ರೊಬೊಟಿಕ್ಸ್, ಓಪನ್ ಸೋರ್ಸ್ ಮೈಕ್ರೋಕಂಟ್ರೋಲರ್ ಬೋರ್ಡ್ ಗಳು, ಸಂವೇದಕಗಳು ಮತ್ತು 3ಡಿ ಮುದ್ರಕಗಳು ಮತ್ತು ಕಂಪ್ಯೂಟರ್ ಗಳ ಉಪಕರಣಗಳನ್ನು ಒಳಗೊಂಡಿರುತ್ತದೆ.
ಮೈಕ್ ಮಾಸ್ಸಿಮಿನೊ ಅವರ ಬಗ್ಗೆ
ಮಾಜಿ ನಾಸಾ ಗಗನಯಾತ್ರಿ ಶ್ರೀ ಮೈಕ್ ಮಾಸ್ಸಿಮಿನೊ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಇಂಟ್ರೆಪಿಡ್ ಸೀ, ಏರ್ & ಸ್ಪೇಸ್ ಮ್ಯೂಸಿಯಂನಲ್ಲಿ ಬಾಹ್ಯಾಕಾಶ ಕಾರ್ಯಕ್ರಮಗಳ ಹಿರಿಯ ಸಲಹೆಗಾರರಾಗಿದ್ದಾರೆ. ಅವರು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಬಿಎಸ್ ಪದವಿ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮತ್ತು ನೀತಿಯಲ್ಲಿ ಎಂಎಸ್ ಪದವಿಗಳನ್ನು ಪಡೆದಿದ್ದಾರೆ, ಜೊತೆಗೆ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಐಬಿಎಂ, ನಾಸಾ ಮತ್ತು ಮೆಕ್ ಡೊನೆಲ್ ಡೌಗ್ಲಾಸ್ ಏರೋಸ್ಪೇಸ್ ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿದ ನಂತರ, ರೈಸ್ ವಿಶ್ವವಿದ್ಯಾಲಯ ಮತ್ತು ಜಾರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಶೈಕ್ಷಣಿಕ ನೇಮಕಾತಿಗಳನ್ನು ಪಡೆದರು. ಅವರನ್ನು 1996 ರಲ್ಲಿ ನಾಸಾ ಗಗನಯಾತ್ರಿಯಾಗಿ ಆಯ್ಕೆ ಮಾಡಿತು ಮತ್ತು ಎರಡು ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದಾರೆ, 2002 ಮತ್ತು 2009 ರಲ್ಲಿ ನಾಲ್ಕನೇ ಮತ್ತು ಐದನೇ ಹಬಲ್ ಬಾಹ್ಯಾಕಾಶ ದೂರದರ್ಶಕ ಸೇವಾ ಕಾರ್ಯಾಚರಣೆಗಳಲ್ಲಿ ಅವರು ಭಾಗವಹಿಸಿದ್ದಾರೆ. ಮೈಕ್ ಅವರು ಒಂದೇ ಬಾಹ್ಯಾಕಾಶ ನೌಕೆಯ ಕಾರ್ಯಾಚರಣೆಯಲ್ಲಿ ಅತ್ಯಧಿಕ ಗಂಟೆಗಳ ಕಾಲ ಬಾಹ್ಯಾಕಾಶ ನಡಿಗೆ ಮಾಡಿದ ತಂಡದ ದಾಖಲೆಯನ್ನು ಹೊಂದಿದ್ದಾರೆ ಮತ್ತು ಬಾಹ್ಯಾಕಾಶದಿಂದ ಟ್ವೀಟ್ ಮಾಡಿದ ಮೊದಲ ವ್ಯಕ್ತಿ ಕೂಡ ಆಗಿದ್ದಾರೆ. ತಮ್ಮ ನಾಸಾ ವೃತ್ತಿಜೀವನದಲ್ಲಿ ಅವರು ಎರಡು ನಾಸಾ ಬಾಹ್ಯಾಕಾಶ ಕಾರ್ಯಾಚರಣೆ ಪದಕಗಳು, ನಾಸಾ ಡಿಸ್ಟಿಂಗ್ವಿಶ್ಡ್ ಸರ್ವಿಸ್ ಮೆಡಲ್, ಅಮೇರಿಕನ್ ಆಸ್ಟ್ರೋನಾಟಿಕಲ್ ಸೊಸೈಟಿಯ ಫ್ಲೈಟ್ ಅಚೀವ್‌ಮೆಂಟ್ ಅವಾರ್ಡ್ ಮತ್ತು ಸ್ಟಾರ್ ಆಫ್ ಇಟಾಲಿಯನ್ ಸಾಲಿಡಾರಿಟಿ ಗೌರವವನ್ನು ಪಡೆದಿದ್ದಾರೆ.
ಅವರು ನ್ಯೂಯಾರ್ಕ್ ನಗರದ ಇಂಟ್ರೆಪಿಡ್ ಸೀ, ಏರ್ & ಸ್ಪೇಸ್ ಮ್ಯೂಸಿಯಂನಲ್ಲಿ ಬಾಹ್ಯಾಕಾಶ ಕಾರ್ಯಕ್ರಮಗಳ ಹಿರಿಯ ಸಲಹೆಗಾರರಾಗಿದ್ದಾರೆ. ಕೊಲಂಬಿಯಾ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಶಾಲೆಯಾದ ದಿ ಫೂ ಫೌಂಡೇಶನ್ ಸ್ಕೂಲ್ ಆಫ್ ಎಂಜಿನಿಯರಿಂಗ್ ಮತ್ತು ಅಪ್ಲೈಡ್ ಸೈನ್ಸ್ ನಲ್ಲಿ ಅವರು ಪ್ರಾಧ್ಯಾಪಕರೂ ಆಗಿದ್ದಾರೆ.
*****
(Release ID: 2107460)
Visitor Counter : 5