ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಅಡ್ವಾಂಟೇಜ್ ಅಸ್ಸಾಂ 2.0 ಸಮಾವೇಶದಲ್ಲಿ ಪ್ರಮುಖ ಮೂಲಸೌಕರ್ಯ ಮತ್ತು ಐ.ಟಿ. ಕ್ಷೇತ್ರದ ಉಪಕ್ರಮಗಳನ್ನು ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಅನಾವರಣಗೊಳಿಸಿದರು


(ಸೆಮಿಕಂಡಕ್ಟರ್) ತಯಾರಿಕೆ ಕ್ಷೇತ್ರದಲ್ಲಿ ಉತ್ತೇಜನ : ಅಸ್ಸಾಂಗೆ ಹೊಸ ಸ್ಥಾವರಗಳ ಘೋಷಣೆ

ಗುವಾಹಟಿ ರೈಲು ನಿಲ್ದಾಣವನ್ನು ಐ.ಟಿ. ಹಬ್ ಆಗಿ ಪರಿವರ್ತಿಸಲಾಗುವುದು; ಆರು ಹೊಸ ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ ಗಳು ಅಸ್ಸಾಂನ ರೈಲ್ವೆ ಜಾಲವನ್ನು ವರ್ಧಿಸಲಿವೆ

ದೆಹಲಿ ಮತ್ತು ಚೆನ್ನೈನೊಂದಿಗೆ ಗುವಾಹಟಿಯನ್ನು ಸಂಪರ್ಕಿಸಲು ಹೊಸ ಅಮೃತ್ ಭಾರತ ರೈಲುಗಳ ಸಂಚಾರ ಪ್ರಾರಂಭ

Posted On: 25 FEB 2025 8:14PM by PIB Bengaluru

ಇಂದು ( 25.02.2025 ) ಗುವಾಹಟಿಯಲ್ಲಿ ನಡೆದ "ಅಡ್ವಾಂಟೇಜ್ ಅಸ್ಸಾಂ 2.0 ಹೂಡಿಕೆ ಮತ್ತು ಮೂಲಸೌಕರ್ಯ ಶೃಂಗಸಭೆ"ಯಲ್ಲಿ ಕೇಂದ್ರ ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆಯ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಭಾಗವಹಿಸಿದರು. ಈ ಸಂದರ್ಭದಲ್ಲಿ, ಅವರು ಈ ಪ್ರದೇಶದಲ್ಲಿ ರೈಲ್ವೆ ಮತ್ತು ಐ.ಟಿ. ಉದ್ಯಮ ಕ್ಷೇತ್ರದ ಬೆಳವಣಿಗೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ಹಲವಾರು ಪ್ರಮುಖ ಉಪಕ್ರಮಗಳು ಮತ್ತು ಯೋಜನೆಗಳನ್ನು ಘೋಷಿಸಿದರು.

ಮೂಲಸೌಕರ್ಯ ಮತ್ತು ಕೈಗಾರಿಕೀಕರಣವನ್ನು ಹೆಚ್ಚಿಸಲು ಕೇಂದ್ರ ಸರ್ಕಾರದ ಬದ್ಧತೆಯನ್ನು ವಿವರಿಸುತ್ತಾ, ಕೇಂದ್ರ ಸಚಿವರಾದ ಶ್ರೀ ವೈಷ್ಣವ್ ಅವರು ಈಶಾನ್ಯ ಭಾರತದ ಈ ಪ್ರದೇಶವು ಭಾರತದ ಸಂಪೂರ್ಣ ಅಭಿವೃದ್ಧಿಗೆ "ನೂತನ ಎಂಜಿನ್" ಆಗಿದೆ ಎಂದು ಬಣ್ಣಿಸಿದರು. ಅವರು ಅಸ್ಸಾಂನಲ್ಲಿ ಹೊಸ ಅರೆವಾಹಕ (ಸೆಮಿಕಂಡಕ್ಟರ್) ಘಟಕದ ಯೋಜನೆಗಳನ್ನು ಅನಾವರಣಗೊಳಿಸಿದರು, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ತಯಾರಿಕೆ ಕ್ಷೇತ್ರದಲ್ಲಿ ರಾಜ್ಯದ ಬೆಳೆಯುತ್ತಿರುವ ಪಾತ್ರವನ್ನು ವಿವರಿಸಿದರು. ಹೆಚ್ಚುವರಿಯಾಗಿ, ಗುವಾಹಟಿ ರೈಲು ನಿಲ್ದಾಣವನ್ನು ಹೊಸ ಐ.ಟಿ. ಕೇಂದ್ರವಾಗಿ ಪರಿವರ್ತಿಸಲಾಗುವುದು ಎಂದು ಘೋಷಿಸಿದರು. ಈ ಮೂಲಕ, ಈ ಪ್ರದೇಶದ ಡಿಜಿಟಲ್ ಮೂಲಸೌಕರ್ಯವನ್ನು ಇದು ಮತ್ತಷ್ಟು ಬಲಪಡಿಸಲಿದೆ.

2014 ರಿಂದ ಅಸ್ಸಾಂ ಮತ್ತು ಈಶಾನ್ಯ ಭಾರತದ ಈ ಪ್ರದೇಶದಲ್ಲಿ 1,824 ಕಿಮೀ ಹೊಸ ರೈಲು ಹಳಿಗಳನ್ನು ನಿರ್ಮಿಸುವಲ್ಲಿ ಕೇಂದ್ರ ಸರ್ಕಾರದ ಯಶಸ್ಸನ್ನು ಮತ್ತು ಅಸ್ಸಾಂನ ಮೊಯಿನಾರ್‌ ಬಂಡ್ ಮತ್ತು ಸಿನ್ನಮಾರಾದಲ್ಲಿ ಎರಡು ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ ಗಳ ಕಾರ್ಯಾರಂಭ ಮಾಡಲಿವೆ ಕೇಂದ್ರ ಸಚಿವರು ವಿವರಿಸಿ ಹೇಳಿದರು.  ಚಾಯ್‌ಗಾಂವ್, ನ್ಯೂ ಬೊಂಗೈಗಾಂವ್, ಬಿಹಾರ, ಹಿಲಾರಾ, ಬೈಹತಾ ಮತ್ತು ರಂಗಜುಲಿಗಳಲ್ಲಿ ಹೆಚ್ಚುವರಿ 06 ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ ಗಳನ್ನು ಅಭಿವೃದ್ಧಿಪಡಿಸುವುದಾಗಿ ಕೇಂದ್ರ ಸಚಿವರು ಘೋಷಿಸಿದರು, ಇದು ಪ್ರದೇಶದ ರೈಲ್ವೆ ಜಾಲವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಇದಲ್ಲದೆ , ಈಗಾಗಲೇ ಈಶಾನ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಈ ಪ್ರದೇಶದ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಮೂಲಕ ಉತ್ತಮ ಸೇವೆ ನೀಡುತ್ತಿದೆ, ಹಾಗೂ ಇನ್ನೊಂದು ರೈಲು ಶೀಘ್ರದಲ್ಲೇ ಗುವಾಹಟಿ ಮತ್ತು ಅಗರ್ತಲಾವನ್ನು ಸಂಪರ್ಕಿಸಲಿದೆ ಎಂದು ಅವರು ನೂತನ ರೈಲ್ವೇ ಯೋಜನೆಯನ್ನು ಖಚಿತಪಡಿಸಿದರು. ಈ ವರ್ಷ ಕಾರ್ಯಾರಂಭ ಮಾಡಲಿರುವ ಎರಡು ಅಮೃತ್ ಭಾರತ್ ರೈಲುಗಳನ್ನು (ಗುವಾಹಟಿ-ದೆಹಲಿ ಮತ್ತು ಗುವಾಹಟಿ-ಚೆನ್ನೈ ನಡುವೆ) ಮಂಜೂರು ಮಾಡುವುದಾಗಿ ಮತ್ತು ಲುಮ್‌ ಡಿಂಗ್‌ ನಲ್ಲಿ ರೈಲ್ವೆ ಇಂಜಿನ್ ಮಿಡ್‌ ಲೈಫ್ ಮರುಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸುವುದಾಗಿ ಕೇಂದ್ರ ಸಚಿವರು ಘೋಷಿಸಿದರು.  ಬೋಡೋಲ್ಯಾಂಡ್ ಪ್ರದೇಶದ ಬಾಷ್ಬರಿಯಲ್ಲಿ 300 ಕೋಟಿ ರೂಪಾಯಿ ವೆಚ್ಚದಲ್ಲಿ ವ್ಯಾಗನ್ ವರ್ಕ್‌ಶಾಪ್ ಸ್ಥಾಪಿಸುವ ಯೋಜನೆಯನ್ನು ಕೇಂದ್ರ ಸಚಿವರು ತಿಳಿಸಿದರು.

ಶ್ರೀ ವೈಷ್ಣವ್ ಅವರು ಆರ್ಥಿಕ ಬೆಳವಣಿಗೆಗೆ ಹೊಸ ಅವಕಾಶಗಳನ್ನು ತೆರೆಯುವ ಮೂಲಕ ಅಸ್ಸಾಂ ಮತ್ತು ಭೂತಾನ್ ನಡುವಿನ ಸಂಪರ್ಕವನ್ನು ಸುಧಾರಿಸುವ ಸರ್ಕಾರದ ಯೋಜನೆಗಳನ್ನು ವಿವರಿಸಿ ಹೇಳಿದರು. ಬೋಡೋಲ್ಯಾಂಡ್ ಪ್ರದೇಶದ ಅಭಿವೃದ್ಧಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಬಶ್ಬರಿಯಲ್ಲಿ ವ್ಯಾಗನ್ ವರ್ಕ್‌ಶಾಪ್ ಸ್ಥಾಪನೆಯನ್ನು ಘೋಷಿಸುವ ಮೂಲಕ ಬೋಡೋ ಒಪ್ಪಂದದ ಅಡಿಯಲ್ಲಿ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.

ದೇಶದ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಉತ್ಪಾದನೆಯಲ್ಲಿ ಭಾರತದ ಗಮನಾರ್ಹ ಪ್ರಗತಿಯನ್ನು ವಿವರಿಸಿದ ಕೇಂದ್ರ ಸಚಿವರು, 98% ಕ್ಕಿಂತ ಹೆಚ್ಚು ಮೊಬೈಲ್ ಫೋನ್‌ ಗಳು ಈಗ ದೇಶೀಯವಾಗಿ ಉತ್ಪಾದಿಸಲ್ಪಡುತ್ತವೆ ಎಂದು ವಿವರಿಸಿದರು.  ವಲಯವನ್ನು ಮತ್ತಷ್ಟು ಬಲಪಡಿಸಲು, ಅವರು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್ ಅಡಿಯಲ್ಲಿ 120 ಕೋಟಿ ರೂಪಾಯಿ ಯೋಜನಾ ವೆಚ್ಚದಲ್ಲಿ ಬೊಂಗೋರಾ, ಕಮ್ರೂಪ್‌ ನಲ್ಲಿ ಗ್ರೀನ್‌ಫೀಲ್ಡ್ ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ (ಇಎಮ್‌ಸಿ) ಅನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದರು. ಹೆಚ್ಚುವರಿಯಾಗಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫರ್ಮೇಷನ್ ಟೆಕ್ನಾಲಜಿ (ಎನ್.ಐ.ಇ.ಎಲ್.ಐ.ಟಿ.) ಅನ್ನು ಡೀಮ್ಡ್-ಟು-ಬಿ ಯುನಿವರ್ಸಿಟಿಯಾಗಿ ಮೇಲ್ದರ್ಜೆ (ಅಪ್‌ಗ್ರೇಡ್) ಮಾಡಲಾಗಿದೆ, ಜಾಗಿರೋಡ್‌ ನಲ್ಲಿ ಕ್ಯಾಂಪಸ್ ಸ್ಥಾಪಿಸುವ ಯೋಜನೆ ಕೂಡ ಇದೆ ಎಂದು ಕೇಂದ್ರ ಸಚಿವರು ಈ ಸಂದರ್ಭದಲ್ಲಿ ಮಾಹಿತಿ ಹಂಚಿಕೊಂಡರು.


ಕೇಂದ್ರ ಸಚಿವರಾದ ಶ್ರೀ ವೈಷ್ಣವ್ ಅವರು ಈಶಾನ್ಯದಲ್ಲಿ ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಸರ್ಕಾರದ ಸಮರ್ಪಣಾ ಮನೋಭಾವವನ್ನು ಪುನರುಚ್ಚರಿಸಿದರು, ಅಸ್ಸಾಂ ಶೀಘ್ರದಲ್ಲೇ ಮಹತ್ವದ ಕೈಗಾರಿಕಾ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಅವರು ಈ ಯೋಜನೆಗಳ ಆಶಯ ಮತ್ತು ಭಾವನೆಗಳನ್ನು ವಿವರಿಸಿದರು, ರಾಜ್ಯದಲ್ಲಿ ಹೊಸ ಉಪಕ್ರಮಗಳನ್ನು ಉತ್ತೇಜಿಸುವಲ್ಲಿ ಕೇಂದ್ರ ಸರ್ಕಾರದ ನಿರಂತರ ಬೆಂಬಲವನ್ನು ಅವರು ಶ್ಲಾಘಿಸಿದರು. ಹಾಗೂ ಜಾಗತಿಕ ಅರೆವಾಹಕ ತಯಾರಿಕೆ ಪರಿಸರ ವ್ಯವಸ್ಥೆಯಲ್ಲಿ ಅಸ್ಸಾಂ ಪ್ರಮುಖ ಸ್ಥಾನ ಪಡೆಯಲಿದೆ ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದರು.

ಈ ವಿಷಯದ ಅಧಿವೇಶನದಲ್ಲಿ, ಸಿಂಗಾಪುರ್, ಮಲೇಷ್ಯಾ ಮತ್ತು ಜಪಾನ್‌ ದೇಶಗಳಾದ್ಯಂತ ಅರೆವಾಹಕ ಪರಿಸರ ಕ್ಷೇತ್ರದ 10 ಉದ್ಯಮ ತಂಡಗಳೊಂದಿಗೆ ಅಸ್ಸಾಂ ಸರ್ಕಾರವು ತಿಳುವಳಿಕೆ ಒಡಂಬಡಿಕೆ / ಒಪ್ಪಂದ (ಎಂಒಯು) ಗಳಿಗೆ ಸಹಿ ಹಾಕಿತು. ಈ ಸಂದರ್ಭದಲ್ಲಿ, ಕೇಂದ್ರ ಸಚಿವರ ಉಪಸ್ಥಿತಿಯು ರಾಜ್ಯದ ಅಂತಾರಾಷ್ಟ್ರೀಯ ಪಾಲುದಾರಿಕೆಗಳನ್ನು ಬಲಪಡಿಸುತ್ತದೆ ಮತ್ತು ಈ ಮೂಲಕ ರಾಜ್ಯದ ಬೆಳೆಯುತ್ತಿರುವ ಅರೆವಾಹಕ ಉದ್ಯಮದಲ್ಲಿ ಹೂಡಿಕೆಯನ್ನು ಉತ್ತೇಜಿಸುತ್ತದೆ.

 

*****
 


(Release ID: 2106285) Visitor Counter : 12


Read this release in: Assamese , English , Hindi