ಕೃಷಿ ಸಚಿವಾಲಯ
ಪ್ರಧಾನಮಂತ್ರಿಯವರು 24 ಫೆಬ್ರವರಿ 2025 ರಂದು ಬಿಹಾರದ ಭಾಗಲಪುರದಲ್ಲಿ ಪಿಎಂ-ಕಿಸಾನ್ ಯೋಜನೆಯ 19ನೇ ಕಂತು ಬಿಡುಗಡೆ ಮಾಡಲಿದ್ದಾರೆ
₹22,000 ಕೋಟಿಗೂ ಅಧಿಕ ಮೌಲ್ಯದ ನೇರ ವರ್ಗಾವಣೆಯಿಂದ 9.8 ಕೋಟಿಗೂ ಹೆಚ್ಚು ರೈತರು ಪ್ರಯೋಜನ ಪಡೆಯಲಿದ್ದಾರೆ
10,000 ಎಫ್ ಪಿ ಒ ಗಳ ರಚನೆ ಮತ್ತು ಉತ್ತೇಜನಾ ಯೋಜನೆಯಡಿಯಲ್ಲಿ 10,000ನೇ ಎಫ್ ಪಿ ಒ ರಚನೆ
ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ₹33.80 ಕೋಟಿ ಹೂಡಿಕೆಯೊಂದಿಗೆ ಮೋತಿಹಾರಿಯಲ್ಲಿ ಸ್ಥಳೀಯ ತಳಿಗಳ ಪ್ರಾದೇಶಿಕ ಶ್ರೇಷ್ಠತಾ ಕೇಂದ್ರ (ಸಿಒಇ) ಉದ್ಘಾಟನೆ
ಬರೌನಿಯಲ್ಲಿ ₹113.27 ಕೋಟಿ ಬಂಡವಾಳದಲ್ಲಿ ನಿರ್ಮಿಸಿರುವ ಹಾಲು ಉತ್ಪನ್ನ ಘಟಕದ ಉದ್ಘಾಟನೆ
₹526 ಕೋಟಿ ಬಂಡವಾಳದಲ್ಲಿ ನಿರ್ಮಿಸಿರುವ ವಾರಿಸಲಿಗಂಜ್-ನವಾಡ-ತಿಲೈಯಾ ರೈಲು ವಿಭಾಗದ ಜೋಡಿ ಮಾರ್ಗ (36.45 ಕಿ.ಮೀ) ಉದ್ಘಾಟನೆ
₹47 ಕೋಟಿ ಬಂಡವಾಳದಲ್ಲಿ ನಿರ್ಮಿಸಿರುವ ಇಸ್ಮಾಯಿಲಪುರ-ರಫಿಗಂಜ್ ರಸ್ತೆ ಮೇಲ್ಸೇತುವೆ ಉದ್ಘಾಟನೆ
Posted On:
22 FEB 2025 1:19PM by PIB Bengaluru
ಪ್ರಧಾನಮಂತ್ರಿ-ಕಿಸಾನ್ ಯೋಜನೆಯಡಿ 19 ನೇ ಕಂತಿನ ಬಿಡುಗಡೆ ಕುರಿತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಶುಕ್ರವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಪಿಎಂ-ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯು 24 ಫೆಬ್ರವರಿ 2019 ರಂದು ಪ್ರಾರಂಭವಾಯಿತು, ಇದು ಕೇಂದ್ರ ವಲಯದ ಯೋಜನೆಯಾಗಿದ್ದು, ಅರ್ಹ ರೈತ ಕುಟುಂಬಗಳಿಗೆ ವಾರ್ಷಿಕ 6,000 ರೂ. ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಇದುವರೆಗೆ ದೇಶದ 11 ಕೋಟಿಗೂ ಹೆಚ್ಚು ರೈತ ಕುಟುಂಬಗಳಿಗೆ 18 ಕಂತುಗಳ ಮೂಲಕ 3.46 ಲಕ್ಷ ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ವಿತರಿಸಲಾಗಿದೆ.
ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, ರೈತರ ಕಲ್ಯಾಣವು ಮೋದಿ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಉತ್ಪಾದನೆಯನ್ನು ಹೆಚ್ಚಿಸುವುದು, ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು, ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಖಚಿತಪಡಿಸುವುದು, ಬೆಳೆ ನಷ್ಟವನ್ನು ಸರಿದೂಗಿಸುವುದು, ಕೃಷಿಯನ್ನು ವೈವಿಧ್ಯಗೊಳಿಸುವುದು ಮತ್ತು 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಪಿಎಂ ಕಿಸಾನ್ ಸಮ್ಮಾನ್ ನಿಧಿಯಂತಹ ಪ್ರಮುಖ ಯೋಜನೆಗಳ ಮೂಲಕ ವೆಚ್ಚವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು. ಪಿಎಂ ಕಿಸಾನ್ ಸಮ್ಮಾನ್ ನಿಧಿಯ 19 ನೇ ಕಂತನ್ನು ಫೆಬ್ರವರಿ 24, 2025 ರಂದು ಭಾಗಲಪುರದ ರೈತರ ಖಾತೆಗಳಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಂದೇ ಕ್ಲಿಕ್ ಮೂಲಕ ವರ್ಗಾಯಿಸುತ್ತಾರೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಈ ಬಿಡುಗಡೆಯು ಪಿಎಂ-ಕಿಸಾನ್ ಯೋಜನೆಯ ಆರು ವರ್ಷಗಳ ಯಶಸ್ವಿ ಅನುಷ್ಠಾನವನ್ನು ಸಂಕೇತಿಸುತ್ತದೆ, ದೇಶದಾದ್ಯಂತ ರೈತರ ಆರ್ಥಿಕ ಯೋಗಕ್ಷೇಮವನ್ನು ಬಲಪಡಿಸುತ್ತದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ಕೃಷಿ ಸಚಿವಾಲಯವು, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (ಎಎಚ್ & ಡಿ), ರೈಲ್ವೆ ಸಚಿವಾಲಯ ಮತ್ತು ಬಿಹಾರ ಸರ್ಕಾರಗಳ ಸಹಯೋಗದೊಂದಿಗೆ ಬಿಹಾರದ ಭಾಗಲಪುರದಲ್ಲಿ "ಕಿಸಾನ್ ಸಮ್ಮಾನ್ ಸಮಾವೇಶ" ವನ್ನು ಆಯೋಜಿಸಲಿದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ-ಕಿಸಾನ್ ಯೋಜನೆಯ 18ನೇ ಕಂತಿನ ಬಿಡುಗಡೆಯ ಸಮಯದಲ್ಲಿ, ಸುಮಾರು 9 ಕೋಟಿ 60 ಲಕ್ಷ ರೈತರಿಗೆ ಕಂತು ಬಿಡುಗಡೆ ಮಾಡಲಾಗಿತ್ತು ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಕೃಷಿ ಸಚಿವಾಲಯವು ಎಲ್ಲ ಅರ್ಹ ರೈತರನ್ನು ಸೇರಿಸಲು ಸಕ್ರಿಯವಾಗಿ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಈ ಪ್ರಯತ್ನಗಳ ಮೂಲಕ 19ನೇ ಕಂತು ಪಡೆಯುವ ರೈತರ ಸಂಖ್ಯೆ ಹೆಚ್ಚಾಗಿದೆ. ದೇಶಾದ್ಯಂತ 2.41 ಕೋಟಿ ಮಹಿಳಾ ರೈತರು ಸೇರಿದಂತೆ 9.8 ಕೋಟಿಗೂ ಹೆಚ್ಚು ರೈತರು 19ನೇ ಕಂತಿನ ಬಿಡುಗಡೆಯ ಮೂಲಕ ಪ್ರಯೋಜನ ಪಡೆಯಲಿದ್ದಾರೆ ಎಂದರು, ಯಾವುದೇ ಮಧ್ಯವರ್ತಿಗಳ ಒಳಗೊಳ್ಳುವಿಕೆ ಇಲ್ಲದೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ₹22,000 ಕೋಟಿಗಿಂತ ಹೆಚ್ಚಿನ ನೇರ ಆರ್ಥಿಕ ಸಹಾಯವನ್ನು ಪಡೆಯಲಿದ್ದಾರೆ, ಇದು ರೈತರ ಕಲ್ಯಾಣ ಮತ್ತು ಕೃಷಿ ಸಮೃದ್ಧಿಗೆ ಸರ್ಕಾರದ ಬದ್ಧತೆಯನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಹಿಂದಿನ ಕಂತುಗಳ ಮೂಲಕ ಬಿಹಾರವೊಂದೇ ₹25,497 ಕೋಟಿಗೂ ಹೆಚ್ಚು ಹಣವನ್ನು ಪಡೆದಿದ್ದು, ರಾಜ್ಯದ 86.56 ಲಕ್ಷಕ್ಕೂ ಹೆಚ್ಚು ರೈತರಿಗೆ ಇದರಿಂದ ಪ್ರಯೋಜನವಾಗಿದೆ ಎಂದು ಅವರು ಹೇಳಿದರು. 19ನೇ ಕಂತಿನಲ್ಲಿ, ಸುಮಾರು 76.37 ಲಕ್ಷ ರೈತರು ₹1,591 ಕೋಟಿಗೂ ಹೆಚ್ಚು ಹಣವನ್ನು ಪಡೆಯಲಿದ್ದಾರೆ, ಇದರಿಂದಾಗಿ ಬಿಹಾರದಲ್ಲಿ ಫಲಾನುಭವಿಗಳಿಗೆ ವರ್ಗಾವಣೆಯಾದ ಒಟ್ಟು ಪ್ರಯೋಜನದ ಮೊತ್ತ ಸುಮಾರು ₹27,088 ಕೋಟಿಗಳಿಗೆ ತಲುಪಿದೆ. ಭಾಗಲ್ಪುರದಲ್ಲೇ ಇಲ್ಲಿಯವರೆಗೆ ₹813.87 ಕೋಟಿಗೂ ಹೆಚ್ಚು ಹಣವನ್ನು ಪಿಎಂ ಕಿಸಾನ್ ಯೋಜನೆಯ 18 ಕಂತುಗಳ ಅಡಿಯಲ್ಲಿ ಸುಮಾರು 2.82 ಲಕ್ಷ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ. 19ನೇ ಕಂತಿನಲ್ಲಿ ಸುಮಾರು 2.48 ಲಕ್ಷ ಫಲಾನುಭವಿಗಳು ₹51.22 ಕೋಟಿಗೂ ಹೆಚ್ಚು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಇದರೊಂದಿಗೆ ಒಟ್ಟು ಮೊತ್ತ ಸುಮಾರು ₹865.09 ಕೋಟಿಗಳನ್ನು ತಲುಪಲಿದೆ ಎಂದು ಅವರು ಹೇಳಿದರು.
ಭಾಗಲಪುರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಬಿಹಾರದ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್, ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ಶ್ರೀ ಜಿತನ್ ರಾಮ್ ಮಾಂಝಿ, ಪಂಚಾಯತಿ ರಾಜ್ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೈರಿ ಸಚಿವ ಶ್ರೀ ಲಾಲನ್ ಸಿಂಗ್ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಶ್ರೀ ಚೌಹಾಣ್ ತಿಳಿಸಿದರು. ಈ ಕಾರ್ಯಕ್ರಮವನ್ನು ಬಿಹಾರದಲ್ಲಿ ಮಾತ್ರವಲ್ಲದೆ ಪ್ರತಿಯೊಂದು ಹಂತದಲ್ಲೂ ಆಯೋಜಿಸಲಾಗುತ್ತಿದೆ. ರಾಜ್ಯ ಸರ್ಕಾರಗಳು ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮಾನಾಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ ಎಂದು ಅವರು ಹೇಳಿದರು.
ದೇಶಾದ್ಯಂತ 731 ಕೃಷಿ ವಿಜ್ಞಾನ ಕೇಂದ್ರಗಳಲ್ಲಿ (ಕೆವಿಕೆ) ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಬಿಡುಗಡೆಯ ದಿನವನ್ನು "ಕಿಸಾನ್ ಸಮ್ಮಾನ್ ಸಮರೋಹ್" ಎಂದು ಆಚರಿಸಲಾಗುತ್ತದೆ. ರಾಜ್ಯಗಳ ಕೃಷಿ ಸಚಿವರು, ಸಂಸದರು ಮತ್ತು ಶಾಸಕರು ಆಯಾ ಪ್ರದೇಶಗಳಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಸಮಯದಲ್ಲಿ, ಗೌರವಾನ್ವಿತ ಅತಿಥಿಗಳು ಎಣ್ಣೆಬೀಜ ಮಿಷನ್, ಕೃಷಿ ಮೂಲಸೌಕರ್ಯ ನಿಧಿ (ಎಐಎಫ್), ಪ್ರತಿ ಹನಿ ಹೆಚ್ಚಿನ ಬೆಳೆ (ಪಿಡಿಎಂಸಿ) ಮತ್ತು ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ (ಪಿ ಎಂ ಎಫ್ ಬಿ ವೈ) ಅಡಿಯಲ್ಲಿ ಕೃಷಿ ಯಂತ್ರೋಪಕರಣಗಳು ಮತ್ತು ಬೀಜ ಕಿಟ್ ಗಳನ್ನು ವಿತರಿಸಲಿದ್ದಾರೆ ಎಂದು ಅವರು ಹೇಳಿದರು. ಇದರ ಜೊತೆಗೆ, ಸಹಜ ಕೃಷಿ, ಸಾವಯವ ಕೃಷಿ ಮತ್ತು ಭೌಗೋಳಿಕ ಗುರುತು (ಜಿಐ)-ಟ್ಯಾಗ್ ಮಾಡಲಾದ ಉತ್ಪನ್ನಗಳ ಮೇಲೆ ಕೇಂದ್ರೀಕರಿಸಿದ ಪ್ರದರ್ಶನಗಳನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಎಫ್ ಪಿ ಒ ಗಳು ಮತ್ತು ಕೆವಿಕೆಗಳ ನೇತೃತ್ವದಲ್ಲಿ ಆಯೋಜಿಸಲಾಗುವುದು. ಈ ಪ್ರದರ್ಶನಗಳು ನಾವೀನ್ಯತೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ ಮತ್ತು ಸುಸ್ಥಿರ ಕೃಷಿ ತಂತ್ರಜ್ಞಾನಗಳ ಅರಿವು ಮತ್ತು ಅಳವಡಿಕೆಯನ್ನು ಹೆಚ್ಚಿಸಲು ಮುಖ್ಯ ಕಾರ್ಯಕ್ರಮದ ನಂತರ 2 ರಿಂದ 3 ದಿನಗಳವರೆಗೆ ಮುಂದುವರಿಯುತ್ತದೆ ಎಂದು ಅವರು ಹೇಳಿದರು.
19ನೇ ಕಂತಿನ ಬಿಡುಗಡೆ ಕಾರ್ಯಕ್ರಮವನ್ನು ಡಿಡಿ ಕಿಸಾನ್, MyGov, ಯೂಟ್ಯೂಬ್, ಫೇಸ್ ಬುಕ್ ಮತ್ತು ದೇಶಾದ್ಯಂತ 5 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೇರ ಪ್ರಸಾರ ಮಾಡಲಾಗುವುದು̤ ಸುಮಾರು 2.5 ಕೋಟಿ ರೈತರು ನೇರವಾಗಿ ಮತ್ತು ವರ್ಚುವಲ್ ಮಾದರಿಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ರೀ ಚೌಹಾಣ್ ಸುದ್ದಿಗಾರರಿಗೆ ತಿಳಿಸಿದರು.
ಕಿಸಾನ್ ಸಮ್ಮಾನ್ ನಿಧಿ ಸಣ್ಣ ರೈತರ ಜೀವನವನ್ನು ಬದಲಾಯಿಸಿದೆ ಎಂದು ಕೇಂದ್ರ ಸಚಿವರು ಹೇಳಿದರು. ಈ ಯೋಜನೆಯಡಿಯಲ್ಲಿ, ₹6,000 ಹಣವನ್ನು ನೇರವಾಗಿ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಸುಮಾರು 3.46 ಲಕ್ಷ ಕೋಟಿಗಳನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. 19 ನೇ ಕಂತಿನ ಬಿಡುಗಡೆಯೊಂದಿಗೆ, ಒಟ್ಟು 3.68 ಲಕ್ಷ ಕೋಟಿ ರೂ.ಗಳು ರೈತರ ಖಾತೆಗಳನ್ನು ತಲುಪಲಿದೆ. ಬಿತ್ತನೆ ಸಮಯದಲ್ಲಿ ಬೀಜಗಳು ಮತ್ತು ರಸಗೊಬ್ಬರಗಳನ್ನು ಖರೀದಿಸುವಲ್ಲಿ ಸಣ್ಣ ರೈತರು ತೊಂದರೆಗಳನ್ನು ಎದುರಿಸುತ್ತಿದ್ದರು ಮತ್ತು ಅವರ ಅಗತ್ಯಗಳನ್ನು ಪೂರೈಸಲು ಬಡ್ಡಿಗೆ ಸಾಲ ತೆಗೆದುಕೊಳ್ಳಬೇಕಾಗಿತ್ತು, ಆದರೆ ಈಗ ಅವರು ಈ ಹಣದಿಂದ ಅಗತ್ಯವಾದ ಕೃಷಿ ವೆಚ್ಚಗಳನ್ನು ಪೂರೈಸಲು ಸಮರ್ಥರಾಗಿದ್ದಾರೆ ಎಂದು ಅವರು ಹೇಳಿದರು. ಪಿಎಂ-ಕಿಸಾನ್ ಬಗ್ಗೆ ಐ ಎಫ್ ಪಿ ಆರ್ ಐ ಸ್ವತಂತ್ರ ಅಧ್ಯಯನವನ್ನು ನಡೆಸಿದೆ, ಈ ಯೋಜನೆಯಡಿಯಲ್ಲಿ ಪಡೆದ ಹಣವು ರೈತರಿಗೆ ಸಾಲದ ಅಡೆತಡೆಗಳನ್ನು ನಿವಾರಿಸಲು ಮತ್ತು ಅವರ ಅಪಾಯ-ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡಿದೆ ಎಂದು ಅದು ಪತ್ತೆ ಮಾಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ನಲ್ಲಿ ರೈತರು ಗರಿಷ್ಠ 3 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದರು, ಆದರೆ ಈಗ ಆ ಮಿತಿಯನ್ನು 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಕೇಂದ್ರ ಸಚಿವರು, ಈ ಕಾರ್ಯಕ್ರಮದ ಹೊರತಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗಲಪುರದಲ್ಲಿ ಇನ್ನೂ ಕೆಲವು ಉಪಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು. ಬಿಹಾರದ ಬರೌನಿಯಲ್ಲಿ ರೂ 113.27 ಕೋಟಿ ಹೂಡಿಕೆಯೊಂದಿಗೆ ಬರೌನಿ ಡೈರಿ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಡೈರಿ ಉತ್ಪನ್ನ ಘಟಕವನ್ನು ಉದ್ಘಾಟಿಸಲಿದ್ದಾರೆ. ಇದು ಸುಮಾರು 2 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದು ಪಶುಪಾಲನೆ ಮತ್ತು ಹೈನುಗಾರಿಕೆ ಇಲಾಖೆಯ ಕಾರ್ಯಕ್ರಮವಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾನುವಾರು ಸಂತಾನೋತ್ಪತ್ತಿ ಮತ್ತು ಡೈರಿ ಉತ್ಪಾದಕತೆಯನ್ನು ಹೆಚ್ಚಿಸಲು ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ 33.80 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಮೋತಿಹಾರಿಯಲ್ಲಿ ಪ್ರಾದೇಶಿಕ ಶ್ರೇಷ್ಠತಾ ಕೇಂದ್ರವನ್ನು (ಸಿಒಇ) ಉದ್ಘಾಟಿಸಲಿದ್ದಾರೆ ಎಂದು ಅವರು ಹೇಳಿದರು.
2020ರಲ್ಲಿ ಪ್ರಾರಂಭಿಸಲಾದ ಯೋಜನೆಯಡಿಯಲ್ಲಿ ನಿಗದಿಪಡಿಸಲಾದ 10,000-ಎಫ್ ಪಿ ಒ ಗುರಿಯ ಸಾಧನೆಯನ್ನು ಗುರುತಿಸಲು ಪ್ರಧಾನಿ ಶ್ರೀ ಮೋದಿ ಅವರು ಬಿಹಾರದಲ್ಲಿ 10,000 ನೇ ರೈತ ಉತ್ಪಾದಕ ಸಂಸ್ಥೆಯನ್ನು (ಎಫ್ ಪಿ ಒ) ಉದ್ಘಾಟಿಸಲಿದ್ದಾರೆ ಎಂದು ಶ್ರೀ ಚೌಹಾಣ್ ಹೇಳಿದರು. ಈ ಮೈಲಿಗಲ್ಲು ರೈತರ ಚೌಕಾಸಿ ಶಕ್ತಿಯನ್ನು ಬಲಪಡಿಸುವ ಮತ್ತು ಮಾರುಕಟ್ಟೆ ಪ್ರವೇಶವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಉಪಕ್ರಮದ ಯಶಸ್ಸನ್ನು ಸೂಚಿಸುತ್ತದೆ. ಈ ಯೋಜನೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 29, 2020 ರಂದು 2027-28 ರವರೆಗೆ ₹6,865 ಕೋಟಿ ಬಜೆಟ್ ವೆಚ್ಚದೊಂದಿಗೆ ಪ್ರಾರಂಭಿಸಿದರು. ಈ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ, ₹254.4 ಕೋಟಿ ಈಕ್ವಿಟಿ ಅನುದಾನವನ್ನು 4,761 ಎಫ್ ಪಿ ಒ ಗಳಿಗೆ ಬಿಡುಗಡೆ ಮಾಡಲಾಗಿದೆ ಮತ್ತು ₹453 ಕೋಟಿ ಮೌಲ್ಯದ ಕ್ರೆಡಿಟ್ ಗ್ಯಾರಂಟಿ ಕವರ್ ಅನ್ನು 1,900 ಎಫ್ ಪಿ ಒ ಗಳಿಗೆ ನೀಡಲಾಗಿದೆ.
ಮೇಲಿನ ಉಪಕ್ರಮಗಳ ಜೊತೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಪ್ರದೇಶದಲ್ಲಿ ಸಂಪರ್ಕವನ್ನು ಹೆಚ್ಚಿಸುವ ಮತ್ತು ಸುಲಭ ಸಾರಿಗೆಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿರುವ ಮಹತ್ವದ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ₹526 ಕೋಟಿ ಹೂಡಿಕೆಯೊಂದಿಗೆ 36.45 ಕಿ.ಮೀ ಉದ್ದದ ವಾರಿಸಲಿಗಂಜ್-ನವಾಡ-ತಿಲೈಯಾ ರೈಲು ವಿಭಾಗದ ಜೋಡಿ ಮಾರ್ಗ ಉದ್ಘಾಟನೆಯಾಗಲಿರುವ ಯೋಜನೆಗಳಲ್ಲಿ ಒಂದಾಗಿದೆ. ಈ ವಿಸ್ತರಣೆಯು ರೈಲು ಸಾಮರ್ಥ್ಯವನ್ನು ಸುಧಾರಿಸುತ್ತದೆ, ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಕರು ಮತ್ತು ಸರಕುಗಳ ತಡೆರಹಿತ ಚಲನೆಯನ್ನು ಖಚಿತಪಡಿಸುತ್ತದೆ. ಇದು ಪ್ರಮುಖ ಪ್ರದೇಶಗಳ ಸಂಪರ್ಕವನ್ನು ಹೆಚ್ಚಿಸುತ್ತದೆ, ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿ ರೈಲು ಸೇವೆಗಳನ್ನು ಒದಗಿಸುವ ಮೂಲಕ ಸ್ಥಳೀಯ ಪ್ರಯಾಣಿಕರು, ವ್ಯಾಪಾರಿಗಳು ಮತ್ತು ವ್ಯವಹಾರಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.
ಹೆಚ್ಚುವರಿಯಾಗಿ, ₹47 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಇಸ್ಮಾಯಿಲಪುರ-ರಫಿಗಂಜ್ ರಸ್ತೆಯ ಮೇಲ್ಸೇತುವೆಯನ್ನು ಉದ್ಘಾಟಿಸಲಾಗುವುದು, ಇದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಈ ಪ್ರದೇಶದಲ್ಲಿ ರಸ್ತೆ ಸುರಕ್ಷತೆಯನ್ನು ಸುಧಾರಿಸುತ್ತದೆ. ಬಿಹಾರದಲ್ಲಿ ಮಖಾನಾ ಪ್ರಮುಖ ಬೆಳೆಯಾಗಿದೆ ಎಂದು ಶ್ರೀ ಚೌಹಾಣ್ ಸುದ್ದಿಗಾರರಿಗೆ ತಿಳಿಸಿದರು. ಮಖಾನಾ ಉತ್ಪಾದಕರನ್ನು ಪ್ರೋತ್ಸಾಹಿಸಲು ಮಖಾನಾ ಮಂಡಳಿಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ತಾವು 23ರಂದು ಬಿಹಾರಕ್ಕೆ ಆಗಮಿಸಲಿದ್ದು, ಮಖಾನಾ ಉತ್ಪಾದಕ ರೈತರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ಕುರಿತು ನೇರವಾಗಿ ಮಖಾನಾ ಉತ್ಪಾದಕರೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದರು. ಚರ್ಚೆಯು ಸಭಾಂಗಣದಲ್ಲಿ ಯಾವುದೇ ನಡೆಯುವುದಿಲ್ಲ, ಬದಲಾಗಿ ಕೆರೆಗಳ ಬಳಿ ನಡೆಯಲಿದೆ ಎಂದು ಅವರು ಹೇಳಿದರು. ಸರ್ಕಾರದ ಪ್ರಾಥಮಿಕ ಗಮನ ದೇಶದ ರೈತರ ಕಲ್ಯಾಣವಾಗಿದೆ ಎಂದು ಹೇಳಿದ ಶ್ರೀ ಚೌಹಾಣ್ ಪತ್ರಿಕಾಗೋಷ್ಠಿಯನ್ನು ಮುಕ್ತಾಯಗೊಳಿಸಿದರು.
ರೈತ ಕೇಂದ್ರಿತ ಡಿಜಿಟಲ್ ಮೂಲಸೌಕರ್ಯವು, ಮಧ್ಯವರ್ತಿಗಳ ಯಾವುದೇ ಒಳಗೊಳ್ಳುವಿಕೆ ಇಲ್ಲದೆ, ದೇಶದಾದ್ಯಂತದ ಎಲ್ಲಾ ಅರ್ಹ ರೈತರಿಗೆ ಯೋಜನೆಯ ಪ್ರಯೋಜನಗಳು ತಲುಪುವಂತೆ ಮಾಡಿದೆ. ರೈತರ ಅರ್ಹತೆಯ ಸ್ವಯಂ ಪ್ರಮಾಣೀಕರಣ ಮತ್ತು ರಾಜ್ಯ ಸರ್ಕಾರದಿಂದ ಅದರ ಪರಿಶೀಲನೆಯ ಆಧಾರದ ಮೇಲೆ ನಂಬಿಮೆ ಆಧಾರಿತ ವ್ಯವಸ್ಥೆಯಲ್ಲಿ ಈ ಯೋಜನೆ ಪ್ರಾರಂಭವಾಯಿತು. ಇದಲ್ಲದೆ, ಫಲಾನುಭವಿಗಳನ್ನು ಎಲೆಕ್ಟ್ರಾನಿಕ್ ಆಗಿ ಪರಿಶೀಲಿಸಲು ಮತ್ತು ಮೌಲ್ಯೀಕರಿಸಲು ದೇಶದಲ್ಲಿ ಲಭ್ಯವಿರುವ ಡಿಜಿಟಲ್ ವ್ಯವಸ್ಥೆಗಳ ಬಳಕೆಯು ಕೊನೆಯ ಹಂತದವರೆಗೆ ವಿತರಣೆ ಮತ್ತು ಯೋಜನೆಯ ಅನುಷ್ಠಾನದಲ್ಲಿ ಹೆಚ್ಚಿನ ದಕ್ಷತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿದೆ. ಇವುಗಳಲ್ಲಿ ಪಿ ಎಫ ಎಂ ಎಸ್ ಪೋರ್ಟಲ್, ಯುಐಡಿಎಐ ಪೋರ್ಟಲ್, ಆದಾಯ ತೆರಿಗೆ ಪೋರ್ಟಲ್ ಇತ್ಯಾದಿಗಳೊಂದಿಗೆ ಏಕೀಕರಣ ಸೇರಿವೆ. ಪಿಎಂ ಕಿಸಾನ್ ಯೋಜನೆಯ ಡೇಟಾದ ಗುಣಮಟ್ಟವನ್ನು ಸುಧಾರಿಸಲು ಪಿಎಂ ಕಿಸಾನ್ ಯೋಜನೆಯಲ್ಲಿ ಕಡ್ಡಾಯ ಪರಿಶೀಲನೆಗಳನ್ನು ಜಾರಿಗೆ ತರಲಾಗಿದೆ.
*****
(Release ID: 2105587)
Visitor Counter : 9