ಪ್ರಧಾನ ಮಂತ್ರಿಯವರ ಕಛೇರಿ
ಇಂಡೋನೇಷ್ಯಾದ ಜಕಾರ್ತಾದ ಶ್ರೀ ಸತಾತನ ಧರ್ಮ ಆಲಯಂನಲ್ಲಿ ನಡೆದ ಮಹಾಕುಂಭಾಭಿಷೇಷಕಂ ಉದ್ದೇಶಿಸಿ ಪ್ರಧಾನಮಂತ್ರಿ ಮಾಡಿದ ಭಾಷಣದ ಕನ್ನಡ ಅನುವಾದ
Posted On:
02 FEB 2025 3:39PM by PIB Bengaluru
ವೆಟ್ರಿವೇಲ್ ಮುರುಗನುಕ್ಕು ಹರೋ ಹರ..!
ಗೌರವಾನ್ವಿತ ಅಧ್ಯಕ್ಷರಾದ ಪ್ರಬೋವೊ, ಮುರುಗನ್ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಪಾ ಹಶಿಮ್, ವ್ಯವಸ್ಥಾಪಕ ಟ್ರಸ್ಟಿ ಡಾ. ಕೋಬಲನ್, ತಮಿಳುನಾಡು ಮತ್ತು ಇಂಡೋನೇಷ್ಯಾದ ಗಣ್ಯರು, ಪುರೋಹಿತರು ಮತ್ತು ಆಚಾರ್ಯರು, ಭಾರತೀಯ ವಲಸಿಗರೇ, ಈ ಶುಭ ಸಂದರ್ಭದಲ್ಲಿ ಭಾಗವಾಗಿರುವ ಇಂಡೋನೇಷ್ಯಾ ಮತ್ತು ಇತರ ರಾಷ್ಟ್ರಗಳ ಎಲ್ಲಾ ನಾಗರಿಕರು ಮತ್ತು ಈ ದೈವಿಕ ಮತ್ತು ಭವ್ಯವಾದ ದೇವಾಲಯವನ್ನು ವಾಸ್ತವಗೊಳಿಸಿದ ಎಲ್ಲಾ ಪ್ರತಿಭಾವಂತ ಕಲಾವಿದರೇ !
ಜಕಾರ್ತಾದ ಮುರುಗನ್ ದೇವಸ್ಥಾನದ ಮಹಾ ಕುಂಭಾಭಿಷೇಕದ ಭಾಗವಾಗುವುದು ನನ್ನ ದೊಡ್ಡ ಅದೃಷ್ಟ. ನನ್ನ ಸಹೋದರ, ಅಧ್ಯಕ್ಷ ಪ್ರಬೋವೊ ಅವರು ತಮ್ಮ ಘನಉಪಸ್ಥಿತಿಯ ಮೂಲಕ ಈ ಕಾರ್ಯಕ್ರಮ ನನಗೆ ಮತ್ತಷ್ಟು ವಿಶೇಷವಾಗಿಸಿದ್ದಾರೆ. ನಾನು ಜಕಾರ್ತದಿಂದ ನೂರಾರು ಕಿಲೋಮೀಟರ್ ದೂರದಲ್ಲಿದ್ದರೂ, ನನ್ನ ಹೃದಯವು ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಂಬಂಧದಷ್ಟೇ ಈ ಕಾರ್ಯಕ್ರಮಕ್ಕೂ ಹತ್ತಿರದಲ್ಲಿದೆ ! ಕೆಲವೇ ದಿನಗಳ ಹಿಂದೆ, ಅಧ್ಯಕ್ಷ ಪ್ರಬೋವೊ 140 ಕೋಟಿ ಭಾರತೀಯರ ಪ್ರೀತಿಯನ್ನು ಹೊತ್ತುಕೊಂಡು ಭಾರತದಿಂದ ಹೊರಟುಬಂದರು.
ಅವರ ಮೂಲಕ, ನೀವೆಲ್ಲರೂ ಅಲ್ಲಿ ಭಾರತದ ಶುಭ ಹಾರೈಕೆಗಳ ಅನುಭವ ಪಡೆಯುತ್ತಿರಬೇಕು ಎಂದು ನಾನು ನಂಬಿದ್ದೇನೆ.
ಜಕಾರ್ತಾ ದೇವಾಲಯದ ಮಹಾ ಕುಂಭಾಭಿಷೇಕದ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಮತ್ತು ಭಾರತ ಮತ್ತು ಇಂಡೋನೇಷ್ಯಾ ಸೇರಿದಂತೆ ಪ್ರಪಂಚದಾದ್ಯಂತದ ಕೋಟ್ಯಂತರ ಮುರುಗನ್ ಭಕ್ತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತಿರುಪ್ಪುಗಲ್ಲಿನ ಸ್ತೋತ್ರಗಳ ಮೂಲಕ ಮುರುಗನ್ ದೇವರನ್ನು ವೈಭವೀಕರಿಸಬೇಕೆಂದು ಮತ್ತು ಸ್ಕಂದ ಷಷ್ಠಿ ಕವಚಂನ ಮಂತ್ರವು ಎಲ್ಲಾ ಜನರನ್ನು ರಕ್ಷಿಸಬೇಕೆಂದು ನಾನು ಪ್ರಾರ್ಥಿಸುತ್ತೇನೆ. ತಮ್ಮ ಕಠಿಣ ಪರಿಶ್ರಮದ ಮೂಲಕ ದೇವಾಲಯವನ್ನು ನಿರ್ಮಿಸುವ ಕನಸನ್ನು ನನಸಾಗಿಸಿದ್ದಕ್ಕಾಗಿ ಡಾ. ಕೋಬಲನ್ ಮತ್ತು ಅವರ ತಂಡವನ್ನು ನಾನು ಅಭಿನಂದಿಸುತ್ತೇನೆ.
ಮಿತ್ರರೇ,
ಭಾರತ ಮತ್ತು ಇಂಡೋನೇಷ್ಯಾದ ಜನರಿಗೆ ನಮ್ಮ ಸಂಬಂಧವು ಭೌಗೋಳಿಕ ರಾಜಕೀಯವನ್ನು ಮೀರಿ ವಿಸ್ತರಿಸಿದೆ ಎಂಬುದು ತಿಳಿದಿದೆ. ನಾವು ಸಾವಿರಾರು ವರ್ಷಗಳ ಹಿಂದಿನ ನಾಗರಿಕತೆಯಿಂದ ಬೆಸೆಯಲ್ಪಟ್ಟಿದ್ದೇವೆ. ನಾವು ಸಹಸ್ರಮಾನಗಳ ಇತಿಹಾಸದಿಂದ ಸಂಪರ್ಕ ಹೊಂದಿದ್ದೇವೆ. ನಮ್ಮ ಬಂಧವು ಪರಂಪರೆ, ಜ್ಞಾನ ಮತ್ತು ನಂಬಿಕೆಯದ್ದಾಗಿದೆ. ನಮ್ಮ ಸಂಪರ್ಕವು ಹಂಚಿಕೆಯ ನಂಬಿಕೆ ಮತ್ತು ಆಧ್ಯಾತ್ಮಿಕತೆಯದ್ದಾಗಿದೆ. ನಮ್ಮ ಸಂಪರ್ಕವು ಭಗವಾನ್ ಮುರುಗನ್ ಮತ್ತು ಭಗವಾನ್ ಶ್ರೀರಾಮನದ್ದಾಗಿದೆ. ನಮ್ಮ ಸಂಪರ್ಕವು ಭಗವಾನ್ ಬುದ್ಧನ ಸಂಪರ್ಕವೂ ಆಗಿದೆ. ಅದಕ್ಕಾಗಿಯೇ ಸ್ನೇಹಿತರೇ, ಭಾರತದ ಯಾರಾದರೂ ಇಂಡೋನೇಷ್ಯಾದ ಪ್ರಂಬನನ್ ದೇವಸ್ಥಾನಕ್ಕೆ ಭೇಟಿ ನೀಡಿ ಕೈ ಜೋಡಿಸಿದಾಗ, ಅವರು ಕಾಶಿ ಮತ್ತು ಕೇದಾರನಾಥದಂತೆಯೇ ಆಧ್ಯಾತ್ಮಿಕ ಅನುಭೂತಿಯನ್ನು ಅನುಭವಿಸುತ್ತಾರೆ. ಭಾರತದ ಜನರು ಕಾಕವಿನ್ ಮತ್ತು ಸೆರಾತ್ ರಾಮಾಯಣದ ಬಗ್ಗೆ ಕೇಳಿದಾಗ, ಅವರು ವಾಲ್ಮೀಕಿ ರಾಮಾಯಣ, ಕಂಬ ರಾಮಾಯಣ ಮತ್ತು ರಾಮಚರಿತಮಾನಸಗಳಂತೆಯೇ ಭಾವಿಸುತ್ತಾರೆ.
ಇತ್ತೀಚಿನ ದಿನಗಳಲ್ಲಿ, ಭಾರತದ ಅಯೋಧ್ಯೆಯಲ್ಲಿಯೂ ಇಂಡೋನೇಷಿಯನ್ ರಾಮಲೀಲಾ ಪ್ರದರ್ಶನಗೊಳ್ಳುತ್ತಿದೆ. ಅದೇ ರೀತಿ, ಬಾಲಿಯಲ್ಲಿ "ಓಂ ಸ್ವಸ್ತಿ-ಅಸ್ತು" ಎಂಬ ಪದಗಳನ್ನು ಕೇಳಿದಾಗ, ಭಾರತದಲ್ಲಿ ವೇದ ವಿದ್ವಾಂಸರು ಪಠಿಸುವ ಸ್ವಸ್ತಿ ವಾಚನ ನಮಗೆ ನೆನಪಾಗುತ್ತದೆ. ಇಂಡೋನೇಷ್ಯಾದ ಬೊರೊಬುದೂರ್ ಸ್ತೂಪವು ಭಾರತದ ಸಾರನಾಥ ಮತ್ತು ಬೋದ್ ಗಯಾದಲ್ಲಿ ನಾವು ಅನುಭವಿಸುವ ಭಗವಾನ್ ಬುದ್ಧನ ಬೋಧನೆಗಳನ್ನು ಪ್ರತಿಬಿಂಬಿಸುತ್ತದೆ. ಇಂದಿಗೂ ಬಾಲಿ ಜಾತ್ರಾವನ್ನು ಒಡಿಶಾದಲ್ಲಿ ಆಚರಿಸಲಾಗುತ್ತದೆ. ಈ ಆಚರಣೆಯು ಭಾರತ ಮತ್ತು ಇಂಡೋನೇಷ್ಯಾವನ್ನು ವಾಣಿಜ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಂಪರ್ಕಿಸಿದ್ದ ಪ್ರಾಚೀನ ಸಮುದ್ರ ಪ್ರಯಾಣಗಳಿಗೆ ಸಂಬಂಧಿಸಿದೆ. ಇಂದಿಗೂ ಭಾರತದ ಜನರು ವಿಮಾನ ಪ್ರಯಾಣಕ್ಕಾಗಿ 'ಗರುಡ ಇಂಡೋನೇಷ್ಯಾ'ವನ್ನು ಹತ್ತಿದಾಗ, ಅವರು ಅದರಲ್ಲಿ ನಮ್ಮ ಸಂಸ್ಕೃತಿಯ ಹಂಚಿಕೆಯ ಪ್ರತಿಬಿಂಬಗಳನ್ನು ಕಾಣುತ್ತಾರೆ.
ಮಿತ್ರರೇ,
ನಮ್ಮ ಸಂಬಂಧವು ಹಲವು ಬಲವಾದ ಎಳೆಗಳಿಂದ ನೇಯಲ್ಪಟ್ಟಿದೆ. ಅಧ್ಯಕ್ಷ ಪ್ರಬೋವೊ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದಾಗ ನಾವಿಬ್ಬರೂ ಈ ಹಂಚಿಕೆಯ ಪರಂಪರೆಯ ಹಲವು ಅಂಶಗಳನ್ನು ಚರ್ಚಿಸಿದ್ದೇವೆ ಮತ್ತು ಪಾಲಿಸಿದ್ದೇವೆ. ಜಕಾರ್ತದಲ್ಲಿ ಇಂದು ಈ ಭವ್ಯ ಮುರುಗನ್ ದೇವಾಲಯದ ಉದ್ಘಾಟನೆಯೊಂದಿಗೆ ನಮ್ಮ ಪ್ರಾಚೀನ ಪರಂಪರೆಗೆ ಹೊಸ ಸುವರ್ಣ ಅಧ್ಯಾಯ ಸೇರ್ಪಡೆಯಾಗುತ್ತಿದೆ. ಈ ದೇವಾಲಯವು ನಮ್ಮ ನಂಬಿಕೆಯ ಕೇಂದ್ರ ಮಾತ್ರವಲ್ಲದೆ ನಮ್ಮ ಸಾಂಸ್ಕೃತಿಕ ಮೌಲ್ಯಗಳ ಕೇಂದ್ರವೂ ಆಗಿರುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.
ಮಿತ್ರರೇ,
ಈ ದೇವಾಲಯದಲ್ಲಿ ಮುರುಗನ್ ಜೊತೆಗೆ ಹಲವು ಇತರ ದೇವರು-ದೇವತೆಗಳನ್ನೂ ಸಹ ಪ್ರತಿಷ್ಠಾಪಿಸಲಾಗಿದೆ ಎಂಬ ಅಂಶ ನನಗೆ ತಿಳಿದಿದೆ. ಈ ವೈವಿಧ್ಯತೆ - ಈ ಬಹುತ್ವ - ನಮ್ಮ ಸಂಸ್ಕೃತಿಯ ಅಡಿಪಾಯ. ಇಂಡೋನೇಷ್ಯಾದಲ್ಲಿ, ಈ ತತ್ವಶಾಸ್ತ್ರವನ್ನು ಭಿನ್ನೇಕ ತುಂಗಲ್ ಇಕಾ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ನಾವು ಇದನ್ನು ವೈವಿಧ್ಯತೆಯಲ್ಲಿ ಏಕತೆ ಎಂದು ಕರೆಯುತ್ತೇವೆ. ಇಂಡೋನೇಷ್ಯಾ ಮತ್ತು ಭಾರತದಲ್ಲಿ ವಿವಿಧ ಸಮುದಾಯಗಳ ಜನರು ಸಾಮರಸ್ಯದಿಂದ ಒಟ್ಟಿಗೆ ಬದುಕಲು ಅನುವು ಮಾಡಿಕೊಡುವ ವೈವಿಧ್ಯತೆಯೊಂದಿಗಿನ ನಮ್ಮ ಸೌಹಾರ್ದತೆಯೇ ಇದಕ್ಕೆ ಕಾರಣ. ಅದಕ್ಕಾಗಿಯೇ ಇಂದಿನ ಪವಿತ್ರ ಸಂದರ್ಭವು ವೈವಿಧ್ಯತೆಯಲ್ಲಿ ಏಕತೆಗೆ ನಮಗೆ ಸ್ಫೂರ್ತಿ ನೀಡುತ್ತಿದೆ.
ಮಿತ್ರರೇ,
ನಮ್ಮ ಸಾಂಸ್ಕೃತಿಕ ಮೌಲ್ಯಗಳು, ನಮ್ಮ ಪರಂಪರೆ, ನಮ್ಮ ವೈಭವ ಇಂದು ಇಂಡೋನೇಷ್ಯಾ ಮತ್ತು ಭಾರತ ನಡುವಿನ ಜನರ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲವರ್ಧನೆಗೊಳಿಸುತ್ತಿವೆ. ಪ್ರಂಬನನ್ ದೇವಾಲಯವನ್ನು ಜಂಟಿಯಾಗಿ ಸಂರಕ್ಷಿಸಲು ನಾವು ಉಪಕ್ರಮವನ್ನು ತೆಗೆದುಕೊಂಡಿದ್ದೇವೆ. ಬೊರೊಬುದೂರ್ ಬೌದ್ಧ ದೇವಾಲಯಕ್ಕಾಗಿ ನಾವು ಹಂಚಿಕೆಯ ಬದ್ಧತೆಯನ್ನು ವ್ಯಕ್ತಪಡಿಸಿದ್ದೇವೆ. ನಾನು ಅಯೋಧ್ಯೆಯಲ್ಲಿ ಇಂಡೋನೇಷ್ಯಾದ ರಾಮಲೀಲಾ ಪ್ರದರ್ಶನಗಳನ್ನು ಉಲ್ಲೇಖಿಸಿದ್ದೇನೆ ಅಂತಹ ಕಾರ್ಯಕ್ರಮಗಳನ್ನು ನಾವು ಉತ್ತೇಜನ ನೀಡುತ್ತಿದ್ದೇವೆ. ಅಧ್ಯಕ್ಷ ಪ್ರಬೋವೊ ಅವರೊಂದಿಗೆ ನಾವು ಆ ನಿಟ್ಟಿನಲ್ಲಿ ಹೆಚ್ಚಿನ ವೇಗದಲ್ಲಿ ಮುನ್ನಡೆಯುತ್ತೇವೆ ಎಂಬ ವಿಶ್ವಾಸ ನನಗಿದೆ. ನಮ್ಮ ಭೂತಕಾಲವು ಸುವರ್ಣ ಭವಿಷ್ಯಕ್ಕೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ. ಮತ್ತೊಮ್ಮೆ, ಅಧ್ಯಕ್ಷ ಪ್ರಬೋವೊ ಅವರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ, ದೇವಾಲಯದ ಮಹಾ ಕುಂಭಾಭಿಷೇಕಕ್ಕಾಗಿ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.
ತುಂಬಾ ತುಂಬಾ ಧ್ಯನವಾದಗಳು!
ಘೋಷಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಅಂದಾಜು ಅನುವಾದವಲ್ಲ, ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.
*****
(Release ID: 2104901)
Visitor Counter : 38
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam