ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಕೆಟಿಎಸ್ 3.0 ಕ್ಕೆ ಚಾಲನೆ ನೀಡಿದ ಶ್ರೀ ಧರ್ಮೇಂದ್ರ ಪ್ರಧಾನ್, ಯೋಗಿ ಆದಿತ್ಯನಾಥ್ ಮತ್ತು ಡಾ. ಎಲ್. ಮುರುಗನ್
ನಾವು ನಮ್ಮ ರಾಷ್ಟ್ರದ ಅವಿಚ್ಛಿನ್ನ ಸಾಂಸ್ಕೃತಿಕ ಏಕತೆಯನ್ನು ಆಚರಿಸುತ್ತೇವೆ, ಏಕ್ ಭಾರತ್ ಶ್ರೇಷ್ಠ ಭಾರತ್ ಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ - ಶ್ರೀ ಧರ್ಮೇಂದ್ರ ಪ್ರಧಾನ್
10 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ತಮಿಳುನಾಡಿನಿಂದ ಸುಮಾರು 1200 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ
ಕೆಟಿಎಸ್ 3.0ರ ವಿಷಯ ಶೀರ್ಷಿಕೆ (ಥೀಮ್) ಋಷಿ ಅಗಸ್ತ್ಯರ್
ಕೆಟಿಎಸ್ 3.0ರಲ್ಲಿ ಭಾಗವಹಿಸುವವರು ಮೊದಲ ಬಾರಿಗೆ ಮಹಾಕುಂಭವನ್ನು ಅನುಭವಿಸಲಿದ್ದಾರೆ ಮತ್ತು ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ
Posted On:
15 FEB 2025 7:24PM by PIB Bengaluru
ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್; ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್; ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗು ಸಂಸದೀಯ ವ್ಯವಹಾರಗಳ ಸಚಿವಾಲಯದ ಸಹಾಯಕ ಸಚಿವರಾದ ಡಾ. ಎಲ್. ಮುರುಗನ್ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕಾಶಿ ತಮಿಳು ಸಂಗಮದ ಮೂರನೇ ಆವೃತ್ತಿಯನ್ನು ಉದ್ಘಾಟಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಂದೇಶದಲ್ಲಿ 3ನೇ ಕಾಶಿ ತಮಿಳು ಸಂಗಮಂ ಆಯೋಜನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಯಾಗ್ ರಾಜ್ ನಲ್ಲಿ ಮಹಾಕುಂಭದ ಮಧ್ಯೆ ನಡೆಯುತ್ತಿರುವ ಈ ಕಾರ್ಯಕ್ರಮವು ಇನ್ನಷ್ಟು ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ. ತಮಿಳುನಾಡು ಮತ್ತು ಕಾಶಿ ನಡುವಿನ, ಕಾವೇರಿ ಮತ್ತು ಗಂಗಾ ನದಿಗಳ ನಡುವಿನ ಅವಿನಾಭಾವ ಸಂಬಂಧ ಸಾವಿರಾರು ವರ್ಷಗಳ ಹಿಂದಿನದು ಎಂಬುದನ್ನೂ ಪ್ರಧಾನಿ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಹಿಂದಿನ ಎರಡು ಸಂಗಮಗಳಲ್ಲಿ ಜನರ ಹೃದಯಸ್ಪರ್ಶಿ ಭಾವನೆಗಳು ಮತ್ತು ಅನುಭವಗಳು ಭಾರತದ ವೈವಿಧ್ಯಮಯ ಸಂಸ್ಕೃತಿಯ ಸೌಂದರ್ಯವನ್ನು ಮತ್ತು ಜನರ ನಡುವಿನ ಬಲವಾದ ಸಂಪರ್ಕವನ್ನು ಹೇಗೆ ಪ್ರದರ್ಶಿಸಿದವು ಎಂಬುದನ್ನು ಅವರು ಉಲ್ಲೇಖಿಸಿದರು.
ಶ್ರೀ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಭಾಷಣದಲ್ಲಿ, ಪಾಂಡ್ಯ ರಾಜ ಪರಾಕ್ರಮ ಪಾಂಡಿಯನ್ ಅವರ ತಮಿಳು ಕಾವ್ಯದ ಸಾಲನ್ನು ಉಲ್ಲೇಖಿಸಿದರು: ನೀರೆಲ್ಲಮ್ ಗಂಗೈ, ನೀಲಮೇಲಂ ಕಾಶಿ ('ತಮಿಳು'), ಇದರರ್ಥ ಎಲ್ಲಾ ನೀರು ಗಂಗಾನದಿಯಷ್ಟೇ ಪವಿತ್ರವಾಗಿದೆ, ಮತ್ತು ಭಾರತದ ಪ್ರತಿಯೊಂದು ಭೂಮಿಯನ್ನು ಕಾಶಿಯಂತೆ ಪೂಜಿಸಲಾಗುತ್ತದೆ. ವಿಶ್ವದ ಅತ್ಯಂತ ಹಳೆಯ ಜೀವಂತ ನಗರಗಳಲ್ಲಿ ಒಂದಾದ ಮತ್ತು ಭಾರತದ ಸಾಂಸ್ಕೃತಿಕ ರಾಜಧಾನಿಯಾದ ಕಾಶಿ ನಾಗರಿಕತೆಯ ಶ್ರೀಮಂತ ಪರಂಪರೆಯ ದೀಪವಾಗಿ ನಿಂತಿದೆ, ತಮಿಳು ಸಂಸ್ಕೃತಿಯ ತಿರುಳಾದ ತಮಿಳುನಾಡು ಭಾರತದ ಪ್ರಾಚೀನ ಜ್ಞಾನ ಮತ್ತು ಸಾಹಿತ್ಯ ವೈಭವದ ಹೃದಯವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು. ತಮಿಳು ಜನರು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರಪಂಚದಾದ್ಯಂತ ಹೇಗೆ ಕೊಂಡೊಯ್ದಿದ್ದಾರೆ, ಅವರು ಹೋದಲ್ಲೆಲ್ಲಾ ಜೀವನವನ್ನು ಶ್ರೀಮಂತಗೊಳಿಸಿದ್ದಾರೆ ಎಂಬುದನ್ನು ಅವರು ಒತ್ತಿ ಹೇಳಿದರು.

ಕಾಶಿ-ತಮಿಳು ಸಂಗಮದ ಕಲ್ಪನೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಈ ಕಾರ್ಯಕ್ರಮವು ಉತ್ತರ ಮತ್ತು ದಕ್ಷಿಣ ಭಾರತದ ಭವ್ಯ ಸಂಪ್ರದಾಯಗಳನ್ನು ಸಂಪರ್ಕಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ, ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಭಾರತದ ಏಕತೆಯನ್ನು ಬಲಪಡಿಸುತ್ತದೆ ಎಂದರು. ಈ ಕಾರ್ಯಕ್ರಮವು ರಾಷ್ಟ್ರದ ಅವಿಚ್ಛಿನ್ನ ಸಾಂಸ್ಕೃತಿಕ ನಿರಂತರತೆಯನ್ನು ಸಂಭ್ರಮಿಸುತ್ತದೆ, ಏಕ್ ಭಾರತ್ ಶ್ರೇಷ್ಠ ಭಾರತದ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಸಾಂಸ್ಕೃತಿಕ ಏಕತೆ ಭಾರತದ ರಾಷ್ಟ್ರೀಯ ಪುನರುತ್ಥಾನಕ್ಕೆ ಕೀಲಿ-ಕೈಯಾಗಿದೆ ಮತ್ತು ಈ ಸಂಗಮವು ಅಂತರಗಳನ್ನು ನಿವಾರಿಸುವ ಮತ್ತು ಆಳವಾದ ತಿಳುವಳಿಕೆಯನ್ನು ಬೆಳೆಸುವ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಕೆಟಿಎಸ್ ಈ ಆವೃತ್ತಿಯ ವಿಷಯ ಶೀರ್ಷಿಕೆಯು ಕಾಶಿ ಮತ್ತು ತಮಿಳುನಾಡಿನ ನಡುವಿನ ಮಹತ್ವದ ಕೊಂಡಿಯಾದ ಋಷಿ ಅಗಸ್ತ್ಯರ್, ಆಗಿದ್ದು, ಅದು ಆಧ್ಯಾತ್ಮಿಕ ಮತ್ತು ಬೌದ್ಧಿಕ ಸಂಪ್ರದಾಯಗಳಲ್ಲಿ ಪೂಜನೀಯವಾಗಿದೆ ಎಂದೂ ಸಚಿವರು ಹೇಳಿದರು.
ಯೋಗಿ ಆದಿತ್ಯನಾಥ್ ಅವರು ತಮ್ಮ ಭಾಷಣದಲ್ಲಿ, ಕೆಟಿಎಸ್ ನ ಮೂರನೇ ಆವೃತ್ತಿಯನ್ನು ವಾರಣಾಸಿಯಲ್ಲಿ ಆಯೋಜಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಸಂಗಮದ ಸಂದರ್ಭದಲ್ಲಿ ಭಾಗವಹಿಸುವ ಪ್ರತಿನಿಧಿಗಳನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಸಂಗಮವು ಮಹಾಕುಂಭದೊಂದಿಗೆ ಆಯೋಜನೆಯಾಗಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು, ಇದರಲ್ಲಿ ಈಗಾಗಲೇ ಸುಮಾರು 51 ಕೋಟಿ ಜನರು ಭಾಗವಹಿಸಿದ್ದಾರೆ ಮತ್ತು ತಮಿಳು ಪ್ರತಿನಿಧಿಗಳು ಸಹ ಈ ಭವ್ಯ ಸಭೆಯ ಭಾಗವಾಗಲಿದ್ದಾರೆ ಎಂದು ಹೇಳಿದರು. ಈ ವಿಷಯ ಶೀರ್ಷಿಕೆಯು ಸಂತ ಪರಂಪರಾ, ವಿಜ್ಞಾನಿಗಳು, ಸಮಾಜ ಸುಧಾರಕರು ಮತ್ತು ವಿದ್ಯಾರ್ಥಿಗಳ ಸುತ್ತ ಸುತ್ತುವ ಭಾರತದ ಶ್ರೀಮಂತ ಜ್ಞಾನ ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಯೋಗಿ ಆದಿತ್ಯನಾಥ್ ಅವರು ಅಗಸ್ತ್ಯ ಮುನಿ ಎಂಬುದು ವಿಷಯ ಶೀರ್ಷಿಕೆಯಾಗಿದೆ. ಮತ್ತು ಉತ್ತರ ಹಾಗು ದಕ್ಷಿಣ ಮತ್ತು ಸಂಸ್ಕೃತ ಹಾಗು ತಮಿಳು ಸಂಗಮವನ್ನು ಬಲಪಡಿಸುವಲ್ಲಿ ಆ ಋಷಿಯ ಆಳವಾದ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.



ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಲ್. ಮುರುಗನ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಏಕ್ ಭಾರತ್ ಶ್ರೇಷ್ಠ ಭಾರತದ ಚಿಂತನೆ/ದೃಷ್ಟಿಕೋನವನ್ನು ಅನುಸರಿಸಿ ಕಳೆದ ಎರಡು ವರ್ಷಗಳಿಂದ ಕಾಶಿ ತಮಿಳು ಸಂಗಮವನ್ನು ಹೇಗೆ ಆಚರಿಸಲಾಗುತ್ತಿದೆ ಎಂಬುದನ್ನು ಎತ್ತಿ ತೋರಿಸಿದರು. ತಮಿಳರು ಕಾಶಿಗೆ ಭೇಟಿ ನೀಡಲು ಬಯಸುವಂತೆಯೇ, ಕಾಶಿಯ ಜನರು ರಾಮೇಶ್ವರಂಗೆ ಭೇಟಿ ನೀಡಲು ಬಯಸುತ್ತಾರೆ ಎಂದು ಉಲ್ಲೇಖಿಸಿದ ಅವರು, ಈ ಸಾಂಸ್ಕೃತಿಕ ಸಂಪರ್ಕವು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದೆ ಎಂದು ಒತ್ತಿ ಹೇಳಿದರು. ಕಾಶಿ ಮತ್ತು ತಮಿಳುನಾಡಿನ ನಡುವಿನ ಸಂಬಂಧವು 5,000 ವರ್ಷಗಳಿಗಿಂತಲೂ ಹಳೆಯದು ಎಂದು ಡಾ.ಮುರುಗನ್ ಹೇಳಿದರು, ರಾಮಾಯಣ ಮತ್ತು ಮಹಾಭಾರತದಂತಹ ಪ್ರಾಚೀನ ಗ್ರಂಥಗಳಲ್ಲಿ ಮತ್ತು ಸಂಗಮ್ ಸಾಹಿತ್ಯದಲ್ಲಿ ಕುರುಂಜಿ ತಿನೈ, ಎಟ್ಟುತೊಗೈ ಮತ್ತು ಕಾಳಿತೋಗೈನಂತಹ ಉಲ್ಲೇಖಗಳು ಕಂಡುಬರುತ್ತವೆ ಎಂದವರು ನುಡಿದರು. ತಮಿಳು ಭಾಷೆ ಮತ್ತು ತಿರುಕ್ಕುರಲ್ ನ ಹಿರಿಮೆಯನ್ನು ವಿಶ್ವದಾದ್ಯಂತ ಉತ್ತೇಜಿಸಿದ್ದಕ್ಕಾಗಿ ಅವರು ಪ್ರಧಾನಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸಿದರು. ಇದಲ್ಲದೆ, ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು.
ಕಾಶಿ ತಮಿಳು ಸಂಗಮಂನ ಉದ್ದೇಶವು ತಮಿಳುನಾಡು ಮತ್ತು ಕಾಶಿ ನಡುವಿನ ಹಳೆಯ ಸಂಬಂಧಗಳನ್ನು ಮರುಶೋಧಿಸುವುದು, ಮರುದೃಢೀಕರಿಸುವುದು ಮತ್ತು ಆಚರಿಸುವುದಾಗಿದೆ , ಇವೆರಡು ದೇಶದ ಎರಡು ಪ್ರಮುಖ ಮತ್ತು ಪ್ರಾಚೀನ ಕಲಿಕೆಯ ಸ್ಥಾನಗಳು. ಕೆಟಿಎಸ್ ನ ಈ ಆವೃತ್ತಿಯ ಕೇಂದ್ರ ವಿಷಯ ಮಹರ್ಷಿ ಅಗಸ್ತ್ಯರ್. ಈ ಸಂದರ್ಭದಲ್ಲಿ ಪ್ರತಿನಿಧಿಗಳು ಮಹಾಕುಂಭ ಮತ್ತು ಶ್ರೀ ಅಯೋಧ್ಯೆ ಧಾಮಕ್ಕೂ ಭೇಟಿ ನೀಡಲಿದ್ದಾರೆ. ಈ ಕಾರ್ಯಕ್ರಮವು ದೈವಿಕ ಅನುಭವವನ್ನು ನೀಡುತ್ತದೆ ಮತ್ತು ತಮಿಳುನಾಡು ಹಾಗು ಕಾಶಿಯನ್ನು ಹೆಚ್ಚು ಹತ್ತಿರ ತರುತ್ತದೆ.
ಈ ವರ್ಷ, ತಮಿಳುನಾಡಿನಿಂದ ಸುಮಾರು 1000 ಪ್ರತಿನಿಧಿಗಳನ್ನು ಐದು ವರ್ಗಗಳು / ಗುಂಪುಗಳ ಅಡಿಯಲ್ಲಿ ಕರೆತರಲು ಸರ್ಕಾರ ನಿರ್ಧರಿಸಿದೆ: (i) ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬರಹಗಾರರು; (ii) ರೈತರು ಮತ್ತು ಕುಶಲಕರ್ಮಿಗಳು (ವಿಶ್ವಕರ್ಮ ವರ್ಗಗಳು); (iii) ವೃತ್ತಿಪರರು ಮತ್ತು ಸಣ್ಣ ಉದ್ಯಮಿಗಳು; (iv) ಮಹಿಳೆಯರು (ಎಸ್.ಎಚ್.ಜಿ., ಮುದ್ರಾ ಸಾಲ ಫಲಾನುಭವಿಗಳು, ಡಿ.ಬಿ.ಎಚ್.ಪಿ.ಎಸ್. ಪ್ರಚಾರಕರು); ಮತ್ತು (v) ಸ್ಟಾರ್ಟ್ ಅಪ್, ಇನ್ನೋವೇಶನ್, ಎಜು-ಟೆಕ್, ರಿಸರ್ಚ್. ಈ ವರ್ಷ, ವಿವಿಧ ಸಿಯುಗಳಲ್ಲಿ ಅಧ್ಯಯನ ಮಾಡುತ್ತಿರುವ ತಮಿಳು ಮೂಲದ ಸುಮಾರು 200 ವಿದ್ಯಾರ್ಥಿಗಳ ಹೆಚ್ಚುವರಿ ಗುಂಪು ಕಾಶಿ ಮತ್ತು ತಮಿಳುನಾಡು ನಡುವಿನ ಬಂಧವನ್ನು ಜೀವಂತಗೊಳಿಸುವ ಈ ಕಾರ್ಯಕ್ರಮದ ಭಾಗವಾಗಲಿದೆ. ಈ ವರ್ಷ ಎಲ್ಲಾ ವಿಭಾಗಗಳಲ್ಲಿ ಯುವಜನರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲಾಗುವುದು. ಪ್ರವಾಸದ ಅವಧಿ 8 ದಿನಗಳು (ಪ್ರಯಾಣಕ್ಕೆ 4, ಸ್ಥಳದಲ್ಲಿ 4). ಮೊದಲ ಬ್ಯಾಚ್ ಇಂದು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿತು. ಕೊನೆಯ ತಂಡ 2025ರ ಫೆಬ್ರವರಿ 26 ರಂದು ತಮಿಳುನಾಡಿಗೆ ಮರಳಲಿದೆ.
ಅಗಸ್ತ್ಯ ಮುನಿಯ ವಿವಿಧ ಮುಖಗಳು ಮತ್ತು ಆರೋಗ್ಯ, ತತ್ವಶಾಸ್ತ್ರ, ವಿಜ್ಞಾನ, ಭಾಷಾಶಾಸ್ತ್ರ, ಸಾಹಿತ್ಯ, ರಾಜಕೀಯ, ಸಂಸ್ಕೃತಿ, ಕಲೆ, ವಿಶೇಷವಾಗಿ ತಮಿಳು ಮತ್ತು ತಮಿಳುನಾಡಿಗೆ ಅವರ ಕೊಡುಗೆಗಳ ಬಗ್ಗೆ ಪ್ರದರ್ಶನ ಮತ್ತು ವಿಚಾರಗೋಷ್ಠಿಗಳು, ಕಾರ್ಯಾಗಾರಗಳು, ಪುಸ್ತಕ ಬಿಡುಗಡೆ ಇತ್ಯಾದಿಗಳನ್ನು ಕೆಟಿಎಸ್ 3.0 ಸಮಯದಲ್ಲಿ ಕಾಶಿಯಲ್ಲಿ ಆಯೋಜಿಸಲಾಗುವುದು.
ಕಾಶಿ ತಮಿಳು ಸಂಗಮಂ ಅನ್ನು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಸಂಸ್ಕೃತಿ, ಜವಳಿ, ರೈಲ್ವೆ, ಪ್ರವಾಸೋದ್ಯಮ, ಆಹಾರ ಸಂಸ್ಕರಣೆ, ಮಾಹಿತಿ ಮತ್ತು ಪ್ರಸಾರ ಇತ್ಯಾದಿ ಸೇರಿದಂತೆ ಇತರ ಸಚಿವಾಲಯಗಳು ಮತ್ತು ಯುಪಿ ಸರ್ಕಾರದ ಸಹಯೋಗದೊಂದಿಗೆ ಆಯೋಜಿಸುತ್ತಿದೆ. ಈ ಕಾರ್ಯಕ್ರಮವು ವಿದ್ವಾಂಸರು, ವಿದ್ಯಾರ್ಥಿಗಳು, ತತ್ವಜ್ಞಾನಿಗಳು, ವ್ಯಾಪಾರಿಗಳು, ಕುಶಲಕರ್ಮಿಗಳು, ಕಲಾವಿದರು ಮತ್ತು ಇತರ ಕ್ಷೇತ್ರಗಳ ಜನರಿಗೆ ಒಗ್ಗೂಡಲು, ತಮ್ಮ ಜ್ಞಾನ, ಸಂಸ್ಕೃತಿ ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರರ ಅನುಭವದಿಂದ ಕಲಿಯಲು ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದು ಯುವಜನರಿಗೆ ಅರಿವು ಮೂಡಿಸುವುದು ಮತ್ತು ಸಾಂಸ್ಕೃತಿಕ ಏಕತೆಯನ್ನು ಅನುಭವಿಸುವ ಉದ್ದೇಶವನ್ನು ಹೊಂದಿದೆ. ಈ ಪ್ರಯತ್ನವು ಭಾರತೀಯ ಜ್ಞಾನ ವ್ಯವಸ್ಥೆಗಳ ಸಂಪತ್ತನ್ನು ಆಧುನಿಕ ಜ್ಞಾನ ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಎನ್ಇಪಿ 2020 ರ ಆದ್ಯತೆಗೆ ಅನುಗುಣವಾಗಿದೆ. ಐಐಟಿ ಮದ್ರಾಸ್ ಮತ್ತು ಬಿಎಚ್ಯು ಈ ಕಾರ್ಯಕ್ರಮದ ಎರಡು ಅನುಷ್ಠಾನ ಸಂಸ್ಥೆಗಳಾಗಿವೆ.
ಕೆಟಿಎಸ್ 2.0 ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ರ ಡಿಸೆಂಬರ್ 17 ರಂದು ವಾರಣಾಸಿಯಲ್ಲಿ ಉದ್ಘಾಟಿಸಿದರು, ಭೇಟಿ ನೀಡುವ ತಮಿಳು ಪ್ರತಿನಿಧಿಗಳ ಅನುಕೂಲಕ್ಕಾಗಿ ಅದೇ ಮೊದಲ ಬಾರಿಗೆ ಪ್ರಧಾನಿಯವರ ಭಾಷಣದ ಒಂದು ಭಾಗವನ್ನು ತಮಿಳಿನಲ್ಲಿ ನೈಜ ಸಮಯದ, ಅಪ್ಲಿಕೇಶನ್ ಆಧಾರಿತ ಅನುವಾದದೊಂದಿಗೆ ಉದ್ಘಾಟಿಸಲಾಗಿತ್ತು.
ಶ್ರೀ ರವೀಂದ್ರ ಜೈಸ್ವಾಲ್ ಮತ್ತು ಡಾ. ದಯಾಶಂಕರ್ ಮಿಶ್ರಾ "ದಯಾಳು, ಉತ್ತರ ಪ್ರದೇಶ ಸರ್ಕಾರದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಡಾ.ವಿನೀತ್ ಜೋಶಿ, ಶ್ರೀ ಚಾಮು ಕೃಷ್ಣ ಶಾಸ್ತ್ರಿ, ಅಧ್ಯಕ್ಷರು, ಭಾರತೀಯ ಭಾಷಾ ಸಮಿತಿ ಅಧ್ಯಕ್ಷರಾದ ಶ್ರೀ ಚಾಮು ಕೃಷ್ಣ ಶಾಸ್ತ್ರಿ; ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಹಂಗಾಮಿ ಉಪಕುಲಪತಿ ಪ್ರೊ.ಸಂಜಯ್ ಕುಮಾರ್, ವಿ.ಕಾಮಕೋಟಿ, ಐಐಟಿ ಮದ್ರಾಸ್ನ ಪ್ರೊ. ವಿ.ಕಾಮಕೋಟಿ; ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಎಚ್ಯು) ನಿರ್ದೇಶಕ ಪ್ರೊ.ಅಮಿತ್ ಪಾತ್ರಾ ಮತ್ತು ಇತರ ಗಣ್ಯರು ಹಾಗು ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
*****
(Release ID: 2103702)
Visitor Counter : 24