ಪಂಚಾಯತ್ ರಾಜ್ ಸಚಿವಾಲಯ
ಕೇಂದ್ರ ರಾಜ್ಯ ಸಚಿವರಾದ ಪ್ರೊ. ಎಸ್.ಪಿ. ಸಿಂಗ್ ಬಘೇಲ್ ಅವರು ಇಂದು ನವದೆಹಲಿಯಲ್ಲಿ ರಾಜ್ಯಗಳಲ್ಲಿ ಪಂಚಾಯತ್‌ಗಳಿಗೆ ಅಧಿಕಾರ ವಿಕೇಂದ್ರೀಕರಣದ ಸ್ಥಿತಿಗತಿ ಕುರಿತ ವರದಿಯನ್ನು ಬಿಡುಗಡೆ ಮಾಡಿದರು
2013-14ರಿಂದ 2021-22ರ ಅವಧಿಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಶೇ.39.9ರಿಂದ ಶೇ.43.9ಕ್ಕೆ ಏರಿಕೆಯಾಗಿದೆ.
ಭ್ರಷ್ಟಾಚಾರವನ್ನು ತಡೆಗಟ್ಟಲು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆಯಾದ ಹಣವನ್ನು ಮೇಲ್ವಿಚಾರಣೆ ಮಾಡಬೇಕು: ಪ್ರೊ.ಎಸ್.ಪಿ. ಸಿಂಗ್ ಬಘೇಲ
ಉತ್ತರ ಪ್ರದೇಶವು ತನ್ನ ಉತ್ತರದಾಯಿತ್ವ ಚೌಕಟ್ಟನ್ನು ಗಮನಾರ್ಹವಾಗಿ ಸುಧಾರಿಸಿದ್ದಕ್ಕಾಗಿ ವಿಶೇಷ ಉಲ್ಲೇಖಕ್ಕೆ ಅರ್ಹವಾಗಿದೆ: ಪ್ರೊ.ಎಸ್.ಪಿ.ಸಿಂಗ್ ಬಘೇಲ್
ವಿಕೇಂದ್ರೀಕರಣ ಶ್ರೇಯಾಂಕದಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ; ಕೇರಳ ಮತ್ತು ತಮಿಳುನಾಡು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದಿವೆ. ಉತ್ತರ ಪ್ರದೇಶ 10 ಸ್ಥಾನ ಜಿಗಿದು 5ನೇ ಸ್ಥಾನಕ್ಕೇರಿದೆ
Posted On:
13 FEB 2025 8:36PM by PIB Bengaluru
ಪಂಚಾಯತ್ ರಾಜ್ ಸಚಿವಾಲಯ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರಾದ ಪ್ರೊ. ಎಸ್.ಪಿ. ಸಿಂಗ್ ಬಘೇಲ್ ಅವರು ರಾಜ್ಯಗಳಲ್ಲಿ ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರೀಕರಣದ ಸ್ಥಿತಿ - ಸೂಚಕ ಸಾಕ್ಷ್ಯಾಧಾರಿತ ಶ್ರೇಯಾಂಕ ಎಂಬ ವರದಿಯನ್ನು ಇಂದು ನವದೆಹಲಿಯಲ್ಲಿ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್, ಪಂಚಾಯತ್ ರಾಜ್ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸುಶೀಲ್ ಕುಮಾರ್ ಲೋಹಾನಿ, ನೀತಿ ಆಯೋಗದ ಸಲಹೆಗಾರ ಶ್ರೀ ರಾಜೀವ್ ಸಿಂಗ್ ಠಾಕೂರ್, ಪಂಚಾಯತ್ ರಾಜ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಅಲೋಕ್ ಪ್ರೇಮ್ ನಗರ್ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಮತ್ತು ನವದೆಹಲಿ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ (ಐಐಪಿಎ) ಬೋಧಕವರ್ಗದ ಸದಸ್ಯರು ಭಾಗವಹಿಸಿದ್ದರು.


ಐಐಪಿಎಯಲ್ಲಿ ಭಾಗವಹಿಸಿದವರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಪಂಚಾಯತ್ ರಾಜ್ ರಾಜ್ಯ ಸಚಿವ ಪ್ರೊ. ಎಸ್.ಪಿ. ಸಿಂಗ್ ಬಘೇಲ್, ಭಾರತದ ಸಮಗ್ರ, ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಗೆ ಪಂಚಾಯತ್ ವಿಕೇಂದ್ರೀಕರಣ ಸೂಚ್ಯಂಕವು ನಿರ್ಣಾಯಕವಾಗಿದೆ ಎಂದು ಹೇಳಿದರು. ಇದು ಉತ್ತಮವಾಗಿ ಕಾರ್ಯನಿರ್ವಹಿಸಿದ ರಾಜ್ಯಗಳನ್ನು ಪ್ರೇರೇಪಿಸುವುದಲ್ಲದೆ, ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಸಬಲೀಕರಣಗೊಳಿಸುವ ವಾತಾವರಣವನ್ನು ಸೃಷ್ಟಿಸಲು ರಾಜ್ಯ ಸರ್ಕಾರಗಳನ್ನು ಪ್ರೊ›ತ್ಸಾಹಿಸುತ್ತದೆ. ಹಿಂದಿನ ಸೂಚ್ಯಂಕದಲ್ಲಿ15ನೇ ಸ್ಥಾನದಿಂದ ಈಗ 5ನೇ ಸ್ಥಾನಕ್ಕೆ ಜಿಗಿದಿರುವ ಉತ್ತರ ಪ್ರದೇಶದ ಗಮನಾರ್ಹ ಪ್ರಗತಿಯನ್ನು ಬಿಂಬಿಸುತ್ತದೆ; ಉತ್ತರ ಪ್ರದೇಶ ಅಭಿವೃದ್ಧಿ ಹೊಂದಿದರೆ ದೇಶ ಪ್ರಗತಿ ಸಾಧಿಸುತ್ತದೆ ಎಂದು ಅವರು ಒತ್ತಿ ಹೇಳಿದರು.ಉತ್ತರ ಪ್ರದೇಶದ ಯಶೋಗಾಥೆ ವಿಶೇಷ ಉಲ್ಲೇಖಕ್ಕೆ ಅರ್ಹವಾಗಿದೆ ಎಂದು ಘೋಷಿಸಲು ನಾನು ವಿಶೇಷವಾಗಿ ಹೆಮ್ಮೆಪಡುತ್ತೇನೆ - ಅದು 15ನೇ ಸ್ಥಾನದಿಂದ 5 ನೇ ಸ್ಥಾನಕ್ಕೆ ಜಿಗಿದಿರುವುದು ನಿಜವಾಗಿಯೂ ಗಮನಾರ್ಹವಾಗಿದೆ. ಉತ್ತರ ಪ್ರದೇಶ ರಾಜ್ಯವು ನವೀನ ಪಾರದರ್ಶಕ ಉಪಕ್ರಮಗಳು ಮತ್ತು ದೃಢವಾದ ಭ್ರಷ್ಟಾಚಾರ ವಿರೋಧಿ ಕ್ರಮಗಳ ಮೂಲಕ ತನ್ನ ಉತ್ತರದಾಯಿತ್ವದ ಚೌಕಟ್ಟಿನಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಸಮಾಜದ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಸಕ್ರಿಯವಾಗಿ ಜಾರಿಗೆ ತರುವಂತೆ ಪ್ರೊಫೆಸರ್ ಬಾಘೇಲ್ ಎಲ್ಲಾ ರಾಜ್ಯಗಳನ್ನು ಒತ್ತಾಯಿಸಿದರು. ಸ್ಥಳೀಯ ಮಟ್ಟದಲ್ಲಿ ಸಂಘರ್ಷಗಳನ್ನು ಪರಿಹರಿಸುವಲ್ಲಿ ಪಂಚಾಯತ್ಗಳು ಯಾವಾಗಲೂ ಪ್ರಮುಖ ಪಾತ್ರವಹಿಸಿವೆ ಎಂದು ಅವರು ಗಮನಿಸಿದರು. ಆಯುಷ್ಮಾನ್ ಭಾರತ್ ಯೋಜನೆ ಮತ್ತು ಇತರ ಸಾಮಾಜಿಕ ವಲಯದ ಯೋಜನೆಗಳಂತಹ ಕೇಂದ್ರ ಸರ್ಕಾರದ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಪಂಚಾಯತ್ ಭವನಗಳು ಗ್ರಾಮೀಣ ಬೆಳವಣಿಗೆಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು. ಈ ಪಂಚಾಯತ್ ಭವನಗಳು ಹಳ್ಳಿಗಳಲ್ಲಿ ಪಿಂಚಣಿ, ಜನನ ಮತ್ತು ಮರಣ ಪ್ರಮಾಣಪತ್ರಗಳು ಮತ್ತು ಇತರ ಮೂಲಭೂತ ಸೌಲಭ್ಯಗಳಂತಹ ಅಗತ್ಯ ಸೇವೆಗಳನ್ನು ಒದಗಿಸುವ ಕೇಂದ್ರಗಳಾಗಿ ಕಾರ್ಯನಿರ್ವಹಿಸಬಹುದು ಎಂದು ಕೇಂದ್ರ ರಾಜ್ಯ ಸಚಿವ ಪ್ರೊ. ಬಘೇಲ್ ಸಲಹೆ ನೀಡಿದರು. ಯಾವುದೇ ಹಣಕಾಸಿನ ಅಕ್ರಮಗಳು ಅಥವಾ ಭ್ರಷ್ಟಾಚಾರವನ್ನು ತಡೆಗಟ್ಟಲು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆಯಾದ ನಿಧಿಯ ಬಳಕೆಯನ್ನು ಮೇಲ್ವಿಚಾರಣೆ ಮಾಡುವ ಮಹತ್ವವನ್ನು ಪ್ರೊ. ಎಸ್.ಪಿ. ಸಿಂಗ್ ಬಘೇಲ್ ಒತ್ತಿ ಹೇಳಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್, ಪಂಚಾಯತ್ಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ರಾಜ್ಯಗಳಿಗೆ ಕರೆ ನೀಡಿದರು. ಇದು ಕೇವಲ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಅಲ್ಲ; ಇದು ನಮ್ಮ ಪಂಚಾಯಿತಿಗಳನ್ನು ಗ್ರಾಮೀಣ ಪ್ರದೇಶಗಳಲ್ಲಿಸ್ಥಳೀಯ ಆಡಳಿತದ ರೋಮಾಂಚಕ ಕೇಂದ್ರಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ, ಇದು ಭಾರತದ ಸಮಗ್ರ, ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡುತ್ತದೆ. ಡಿಜಿಟಲ್ ರೂಪಾಂತರ, ಪಂಚಾಯತ್ ಮೂಲಸೌಕರ್ಯ (ಕಚೇರಿ ಕಟ್ಟಡಗಳು, ಕಂಪ್ಯೂಟರ್ಗಳು, ಇಂಟರ್ನೆಟ್ ಸಂಪರ್ಕ ಇತ್ಯಾದಿ), ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನೆ ಮತ್ತು ನಿಯಮಿತ ಪಂಚಾಯತ್ ಚುನಾವಣೆಗಳನ್ನು ನಡೆಸುವುದು ಸೇರಿದಂತೆ ಕಳೆದ ಹತ್ತು ವರ್ಷಗಳಲ್ಲಿಪಂಚಾಯತ್ ರಾಜ್ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಎಂಒಪಿಆರ್ ಕಾರ್ಯದರ್ಶಿ ಒತ್ತಿ ಹೇಳಿದರು.
ಈ ವರದಿಯು ಪಂಚಾಯತ್ ರಾಜ್ ಸಂಸ್ಥೆಗಳನ್ನು (ಪಿಆರ್ಐ) ಸಬಲೀಕರಣಗೊಳಿಸುವ ಭಾರತದ ಪ್ರಯಾಣದಲ್ಲಿಒಂದು ಮೈಲಿಗಲ್ಲಾಗಿದೆ. 73ನೇ ಸಾಂವಿಧಾನಿಕ ತಿದ್ದುಪಡಿಯಲ್ಲಿ ಪ್ರತಿಪಾದಿಸಲಾದ ‘ಸ್ಥಳೀಯ ಸರ್ಕಾರದ’ ದೃಷ್ಟಿಕೋನವನ್ನು ಸಾಕಾರಗೊಳಿಸುತ್ತದೆ ಮತ್ತು ಗ್ರಾಮ ಸ್ವರಾಜ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ್ ದೃಷ್ಟಿಕೋನವನ್ನು ಮುನ್ನಡೆಸುತ್ತದೆ - ಇದು ಮಹಾತ್ಮ ಗಾಂಧಿಯವರ ಸ್ವಾವಲಂಬಿ ಗ್ರಾಮ ಗಣರಾಜ್ಯಗಳ ಕನಸನ್ನು ಪ್ರತಿಧ್ವನಿಸುತ್ತದೆ. ಪ್ರತಿ ರಾಜ್ಯದಲ್ಲಿ ತಮ್ಮ ಸಾಂವಿಧಾನಿಕ ಪಾತ್ರಗಳನ್ನು ಪೂರೈಸಲು ಪಂಚಾಯಿತಿಗಳು ಎಷ್ಟು ಸುಸಜ್ಜಿತವಾಗಿವೆ ಎಂಬುದರ ಬಗ್ಗೆ ಆಳವಾದ ವಿಶ್ಲೇಷಣೆಯನ್ನು ವರದಿ ಒದಗಿಸುತ್ತದೆ ಮತ್ತು ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳಾಗಿ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಇನ್ನೂ ಮಾಡಬೇಕಾದ ಕೆಲಸವನ್ನು ಬಿಂಬಿಸುತ್ತದೆ. ಪಂಚಾಯತಿಗಳಿಗೆ ಅಧಿಕಾರ ಮತ್ತು ಸಂಪನ್ಮೂಲಗಳನ್ನು ಹಂಚುವಲ್ಲಿ ರಾಜ್ಯಗಳ ಒಟ್ಟಾರೆ ಕಾರ್ಯಕ್ಷಮತೆಯನ್ನು ಅಳೆಯುವ ಸೂಚ್ಯಂಕಗಳ ಜೊತೆಗೆ, ವಿವಿಧ ಆಯಾಮಗಳು ಮತ್ತು ಸೂಚಕಗಳಿಗಾಗಿ ಉಪ-ಸೂಚ್ಯಂಕಗಳನ್ನು ರಚಿಸಲಾಗಿದೆ. ಈ ಉಪ-ಸೂಚ್ಯಂಕಗಳು ಪ್ರತಿ ರಾಜ್ಯವು ವಿಕೇಂದ್ರೀಕರಣದ ವಿವಿಧ ಅಂಶಗಳಲ್ಲಿತನ್ನ ಸಾಪೇಕ್ಷ ಶ್ರೇಯಾಂಕವನ್ನು ನೋಡಲು ಅನುವು ಮಾಡಿಕೊಡುತ್ತದೆ.
ಒಟ್ಟಾರೆ ಪಂಚಾಯತ್ ವಿಕೇಂದ್ರೀಕರಣ ಸೂಚ್ಯಂಕ ಮತ್ತು ಈ ಕೆಳಗಿನ ಆರು ಆಯಾಮಗಳ ಪ್ರಕಾರ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಶ್ರೇಯಾಂಕ ನೀಡಲಾಗಿದೆ:
(1) ಚೌಕಟ್ಟು
(2) ಕಾರ್ಯಗಳು
(3) ಹಣಕಾಸು
(4) ಕಾರ್ಯಕರ್ತರು
(5) ಸಾಮರ್ಥ್ಯ ವರ್ಧನೆ
(6) ಉತ್ತರದಾಯಿತ್ವ
ವರದಿಯ ಮುಖ್ಯಾಂಶಗಳು:
1. ಐಐಪಿಎ ಸಿದ್ಧಪಡಿಸಿದ ಇತ್ತೀಚಿನ ವರದಿಯು 2013-14ರಿಂದ 2021-22 ರ ಅವಧಿಯಲ್ಲಿವಿಕೇಂದ್ರೀಕರಣವು ಶೇ.39.9ರಿಂದ ಶೇ. 43.9ಕ್ಕೆ ಏರಿದೆ ಎಂದು ಬಹಿರಂಗಪಡಿಸುತ್ತದೆ.
2. 21.4.2018ರಂದು ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ (ಆರ್ಜಿಎಸ್ಎ) ಪ್ರಾರಂಭಿಸುವುದರೊಂದಿಗೆ, ಈ ಅವಧಿಯಲ್ಲಿ ಸೂಚ್ಯಂಕದ ಸಾಮರ್ಥ್ಯ ವರ್ಧನೆ ಘಟಕವು ಶೇ.44ರಿಂದ ಶೇ.54.6ಕ್ಕೆ ಗಣನೀಯವಾಗಿ ಹೆಚ್ಚಾಗಿದೆ, ಅಂದರೆ ಶೇ.10ಕ್ಕಿಂತ ಹೆಚ್ಚಾಗಿದೆ.
3. ಈ ಅವಧಿಯಲ್ಲಿ, ಭಾರತ ಸರ್ಕಾರ ಮತ್ತು ರಾಜ್ಯಗಳು ಪಂಚಾಯತ್ ರಾಜ್ ಸಂಸ್ಥೆಗಳಿಗೆ (ಪಿಆರ್ಐ) ಭೌತಿಕ ಮೂಲಸೌಕರ್ಯಗಳನ್ನು ಒದಗಿಸುವಲ್ಲಿಅದ್ಭುತ ಪ್ರಯತ್ನಗಳನ್ನು ಮಾಡಿವೆ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ಅಧಿಕಾರಿಗಳನ್ನು ನೇಮಕ ಮಾಡಿವೆ, ಇದರ ಪರಿಣಾಮವಾಗಿ ಕಾರ್ಯಕರ್ತರಿಗೆ ಸಂಬಂಧಿಸಿದ ಸೂಚ್ಯಂಕದ ಘಟಕವು ಶೇ.10ಕ್ಕಿಂತ ಹೆಚ್ಚು (ಶೇ.39.6ರಿಂದ ಶೇ.50.9ಕ್ಕೆ) ಗಣನೀಯ ಏರಿಕೆ ಕಂಡಿದೆ.
(4) ಪಂಚಾಯತ್ ವಿಕೇಂದ್ರೀಕರಣ ಸೂಚ್ಯಂಕದಲ್ಲಿಅಗ್ರ 10 ರಾಜ್ಯಗಳು (ಡಿಐ ಸ್ಕೋರ್ 55)
1
|
ಕರ್ನಾಟಕ
|
2
|
ಕೇರಳ
|
3
|
ತಮಿಳುನಾಡು
|
4
|
ಮಹಾರಾಷ್ಟ್ರ
|
5
|
ಉತ್ತರ ಪ್ರದೇಶ
|
6
|
ಗುಜರಾತ್
|
7
|
ತ್ರಿಪುರಾ
|
8
|
ರಾಜಸ್ಥಾನ
|
9
|
ಪಶ್ಚಿಮ ಬಂಗಾಳ
|
10
|
ಛತ್ತೀಸ್ಗಢ
|
50 ರಿಂದ 55ರ ನಡುವೆ ಸ್ಕೋರ್ಗಳೊಂದಿಗೆ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಒಡಿಶಾಗಳು ‘ಮಧ್ಯಮ ಸ್ಕೋರಿಂಗ್ ರಾಜ್ಯಗಳು’ ವಿಭಾಗದಲ್ಲಿ ಬರುತ್ತವೆ, ಎಲ್ಲಾ ಉಪ-ಸೂಚಕಗಳಲ್ಲಿಪ್ರಶಂಸನೀಯ ಕಾರ್ಯಕ್ಷಮತೆಯನ್ನು ಪ್ರದರ್ಶಿಸುತ್ತವೆ.
(5) ಪರಿವರ್ತನಾತ್ಮಕ ಬದಲಾವಣೆಯನ್ನು ಪ್ರತಿಬಿಂಬಿಸುವ ಯಶೋಗಾಥೆಗಳು
15ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಉತ್ತರ ಪ್ರದೇಶದ ಗಮನಾರ್ಹ ಪ್ರಯಾಣವು ಕೇಂದ್ರೀಕೃತ ಆಡಳಿತ ಸುಧಾರಣೆಗಳ ಪರಿವರ್ತಕ ಶಕ್ತಿಗೆ ಉದಾಹರಣೆಯಾಗಿದೆ. ನವೀನ ಪಾರದರ್ಶಕ ಉಪಕ್ರಮಗಳು ಮತ್ತು ದೃಢವಾದ ಭ್ರಷ್ಟಾಚಾರ ವಿರೋಧಿ ಕ್ರಮಗಳ ಮೂಲಕ ರಾಜ್ಯವು ತನ್ನ ಉತ್ತರದಾಯಿತ್ವದ ಚೌಕಟ್ಟನ್ನು ಕ್ರಾಂತಿಗೊಳಿಸಿದೆ, ಹಣಕಾಸು ಹೊಣೆಗಾರಿಕೆ ಮತ್ತು ಲೆಕ್ಕಪರಿಶೋಧನೆ ಅನುಸರಣೆಯಲ್ಲಿ ಹೊಸ ಮಾನದಂಡಗಳನ್ನು ನಿಗದಿಪಡಿಸಿದೆ. ಅಂತೆಯೇ, ತ್ರಿಪುರಾ 13 ನೇ ಸ್ಥಾನದಿಂದ 7 ನೇ ಸ್ಥಾನಕ್ಕೆ ಜಿಗಿದಿದೆ, ವಿಶೇಷವಾಗಿ ಆದಾಯ ಉತ್ಪಾದನೆ ಮತ್ತು ಹಣಕಾಸಿನ ನಿರ್ವಹಣೆಯಲ್ಲಿ, ಸಣ್ಣ ರಾಜ್ಯಗಳು ಸ್ಥಳೀಯ ಆಡಳಿತದಲ್ಲಿಉತ್ಕೃಷ್ಟತೆಯನ್ನು ಸಾಧಿಸಲು ಹೇಗೆ ಸಮಾನವಾಗಿ ಸಮರ್ಥವಾಗಿವೆ ಎಂಬುದನ್ನು ತೋರಿಸುತ್ತದೆ.
(6) ವಿಕೇಂದ್ರೀಕರಣ ಸೂಚ್ಯಂಕ: ಒಟ್ಟಾರೆ:
ಸೂಚ್ಯಂಕವು ಗುರುತಿಸಲಾದ ಆರು ಆಯಾಮಗಳಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಒಟ್ಟಾರೆ ಅಂಕಗಳು ಮತ್ತು ಶ್ರೇಣಿಗಳನ್ನು ಪ್ರಸ್ತುತಪಡಿಸುತ್ತದೆ. ಆರು ಆಯಾಮದ ಉಪ-ಸೂಚ್ಯಂಕಗಳ ತೂಕದ ಒಟ್ಟುಗೂಡಿಸುವಿಕೆಯ ಆಧಾರದ ಮೇಲೆ, ಸಂಯೋಜಿತ ಡಿಐಅನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಲೆಕ್ಕಹಾಕಲಾಗುತ್ತದೆ ಮತ್ತು ಅದನ್ನು ಚಿತ್ರ 1 ರಂತೆ ಕೆಳಗೆ ನೀಡಲಾಗಿದೆ:
ಚಿತ್ರ 1: ಪಂಚಾಯತಿಗಳ ವಿಕೇಂದ್ರೀಕರಣ ಸೂಚ್ಯಂಕ

(7) ವಿಕೇಂದ್ರೀಕರಣ ಸೂಚ್ಯಂಕಗಳು: ಆಯಾಮ
ಆರು ಆಯಾಮಗಳಲ್ಲಿ ಪ್ರತಿಯೊಂದರಲ್ಲೂರಾಜ್ಯಗಳಿಗೆ ಶ್ರೇಯಾಂಕ ನೀಡಲಾಗಿದೆ:
ಚಿತ್ರ-2: ಚೌಕಟ್ಟು: ಕಡ್ಡಾಯ ಚೌಕಟ್ಟಿಗೆ ಸಂಬಂಧಿಸಿದ ಈ ಸೂಚಕದಲ್ಲಿ ಕೇರಳವು ಮೊದಲ ಸ್ಥಾನದಲ್ಲಿದೆ.

ಚಿತ್ರ-3: ಕಾರ್ಯಗಳು: ಕಾರ್ಯನಿರ್ವಹಣೆಯ ವಿಕೇಂದ್ರೀಕರಣದಲ್ಲಿ ತಮಿಳುನಾಡು ಮಾನದಂಡವನ್ನು ನಿಗದಿಪಡಿಸುತ್ತದೆ.

ಚಿತ್ರ-4: ಹಣಕಾಸು: ಕರ್ನಾಟಕವು ಅನುಕರಣೀಯ ಹಣಕಾಸು ನಿರ್ವಹಣಾ ಅಭ್ಯಾಸಗಳನ್ನು ಪ್ರದರ್ಶಿಸುತ್ತದೆ.

ಚಿತ್ರ-5: ಕಾರ್ಯನಿರ್ವಹಣೆ: ಸಿಬ್ಬಂದಿ ನಿರ್ವಹಣೆ ಮತ್ತು ಸಾಮರ್ಥ್ಯ ವರ್ಧನೆಯಲ್ಲಿ ಗುಜರಾತ್ ಮುಂಚೂಣಿಯಲ್ಲಿದೆ.

ಚಿತ್ರ-6: ಸಾಮರ್ಥ್ಯ ವರ್ಧನೆ: ಸಾಂಸ್ಥಿಕ ಬಲವರ್ಧನೆಗೆ ತೆಲಂಗಾಣ ದಾರಿ ತೋರಿಸುತ್ತದೆ.

ಚಿತ್ರ-7: ಉತ್ತರದಾಯಿತ್ವ: ಕರ್ನಾಟಕವು ಪಾರದರ್ಶಕತೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ.

ಮೂರು ದಶಕಗಳ ಹಿಂದೆ, 73ನೇ ತಿದ್ದುಪಡಿಯು ಪಂಚಾಯತ್ಗಳಿಗೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡಿತು. ಈ ತಿದ್ದುಪಡಿಯು ‘ಪಂಚಾಯತಿಗಳು’ ಎಂಬ ಶೀರ್ಷಿಕೆಯ ಭಾಗ 9ಅನ್ನು ಪರಿಚಯಿಸಿತು, ಇದು ವ್ಯಾಖ್ಯಾನಗಳು, ಸಂವಿಧಾನ, ಸಂಯೋಜನೆ, ಚುನಾವಣೆಗಳು, ಕಾರ್ಯನಿರ್ವಹಣೆ, ಅವಧಿ, ಸದಸ್ಯತ್ವಕ್ಕಾಗಿ ಅನರ್ಹತೆಗಳು, ದುರ್ಬಲ ವರ್ಗಗಳಿಗೆ ಮೀಸಲಾತಿ, ಜವಾಬ್ದಾರಿಗಳು, ಅಧಿಕಾರಗಳು ಮತ್ತು ಲೆಕ್ಕ ಪರಿಶೋಧನೆಯಂತಹ ವಿವಿಧ ಅಂಶಗಳನ್ನು ಉಲ್ಲೇಖಿಸುವ 16 ಅನುಚ್ಛೇದಗಳನ್ನು ಒಳಗೊಂಡಿದೆ. ಎಲ್ಲಾ ರಾಜ್ಯಗಳು ಚುನಾವಣೆಗಳು ಮತ್ತು ಮೀಸಲಾತಿಗಳಿಗೆ ಸಂಬಂಧಿಸಿದ ಕಡ್ಡಾಯ ಸಾಂವಿಧಾನಿಕ ನಿಬಂಧನೆಗಳನ್ನು ಅನುಸರಿಸುತ್ತಿದ್ದರೂ, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪಂಚಾಯತ್ಗಳಿಗೆ ಅಧಿಕಾರ ಮತ್ತು ಸಂಪನ್ಮೂಲಗಳನ್ನು ಹೇಗೆ ಹಂಚಲಾಗುತ್ತದೆ ಎಂಬುದರಲ್ಲಿಗಮನಾರ್ಹ ವ್ಯತ್ಯಾಸವಿದೆ. ಪಂಚಾಯತಿಗಳಿಗೆ ಅಧಿಕಾರ ಮತ್ತು ಜವಾಬ್ದಾರಿಗಳನ್ನು ವರ್ಗಾಯಿಸಲು ಮತ್ತು ಉತ್ತರದಾಯಿತ್ವದ ಚೌಕಟ್ಟನ್ನು ಸ್ಥಾಪಿಸಲು ರಾಜ್ಯಗಳನ್ನು ಉತ್ತೇಜಿಸಲು, ಭಾರತ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಅವುಗಳ ಕಾರ್ಯಕ್ಷ ಮತೆಯ ಆಧಾರದ ಮೇಲೆ ಶ್ರೇಣೀಕರಿಸುತ್ತದೆ, ಇದನ್ನು ಸ್ವತಂತ್ರ ಸಂಸ್ಥೆ ಲೆಕ್ಕಹಾಕಿದ ವಿಕೇಂದ್ರೀಕರಣ ಸೂಚ್ಯಂಕದಿಂದ ಅಳೆಯಲಾಗುತ್ತದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಪ್ರೇಷನ್ (ಐಐಪಿಎ) 2023-24ರ ಅಧ್ಯಯನವನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿತ್ತು ಮತ್ತು ಕಾರ್ಯಗಳು, ಹಣಕಾಸು ಮತ್ತು ಕಾರ್ಯಕರ್ತರ ವಿಕೇಂದ್ರೀಕರಣವನ್ನು ಹೋಲಿಸಿ ವರದಿಯನ್ನು ಸಿದ್ಧಪಡಿಸಿತ್ತು. ವರದಿಯು ಸಾಮರ್ಥ್ಯ ವರ್ಧನೆ ಮತ್ತು ಉತ್ತರದಾಯಿತ್ವದ ಚೌಕಟ್ಟುಗಳನ್ನು ಮೌಲ್ಯಮಾಪನ ಮಾಡಿದೆ ಮತ್ತು ಹೋಲಿಸಿದೆ.
ಐಐಪಿಎಯ ಈ ಸಮಗ್ರ ಮೌಲ್ಯಮಾಪನವು ಉತ್ತಮವಾಗಿ ಕಾರ್ಯನಿರ್ವಹಿಸುವ ರಾಜ್ಯಗಳ ಸಾಧನೆಗಳನ್ನು ಆಚರಿಸುವುದಲ್ಲದೆ, ಇತರರಿಗೆ ತಮ್ಮ ಗ್ರಾಮೀಣ ಆಡಳಿತದ ಚೌಕಟ್ಟುಗಳನ್ನು ಹೆಚ್ಚಿಸಲು ರಸ್ತೆ ನಕ್ಷೆಯನ್ನು ಒದಗಿಸುತ್ತದೆ. ಈ ಫಲಿತಾಂಶಗಳಲ್ಲಿ ಕಂಡುಬರುವ ಸ್ಪರ್ಧಾತ್ಮಕ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವವು ಭಾರತದ ತಳಮಟ್ಟದ ಆಡಳಿತ ಮತ್ತು ಗ್ರಾಮೀಣಾಭಿವೃದ್ಧಿಯ ಪ್ರಯಾಣಕ್ಕೆ ಇನ್ನೂ ಉಜ್ವಲ ಭವಿಷ್ಯವನ್ನು ನೀಡುತ್ತದೆ.
ಈ ಕೆಳಗಿನ ಲಿಂಕ್ ಗಳನ್ನು ಕೆಳಗೆ ಕ್ಲಿಕ್ ಮಾಡಿ:
1. ವಿಕೇಂದ್ರೀಕರಣ ಸೂಚ್ಯಂಕ ವರದಿ 2024ರ ಸಾರಾಂಶ
2. ವಿಕೇಂದ್ರೀಕರಣ ಸೂಚ್ಯಂಕ 2024 ವರದಿ (ಮುಖ್ಯ)
3. ವಿಕೇಂದ್ರೀಕರಣ ಸೂಚ್ಯಂಕ 2024 ವರದಿ (ಅನುಬಂಧಗಳು)
*****
(Release ID: 2103488)
Visitor Counter : 30