ಹಣಕಾಸು ಸಚಿವಾಲಯ
azadi ka amrit mahotsav

ಭವಿಷ್ಯದ ಆರ್ಥಿಕತೆಯನ್ನು ಯುವಜನರ ಮಾನಸಿಕ ಆರೋಗ್ಯ ಮುನ್ನಡೆಸಲಿದೆ: ಆರ್ಥಿಕ ಸಮೀಕ್ಷೆ 2024-25


ಜೀವನಶೈಲಿಯ ಆಯ್ಕೆಗಳು, ಕಾರ್ಯ ಸ್ಥಳದ ಸಂಸ್ಕೃತಿ ಮತ್ತು ಕೌಟುಂಬಿಕ ಸನ್ನಿವೇಶಗಳು ಉತ್ಪಾದಕತೆಗೆ ನಿರ್ಣಾಯಕ

ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ತಲ್ಲೀನರಾಗುವುದು ಅಥವಾ ವಿರಳವಾಗಿ ವ್ಯಾಯಾಮ ಮಾಡುವುದು ಅಥವಾ ಕುಟುಂಬಗಳೊಂದಿಗೆ ಸಾಕಷ್ಟು ಸಮಯ ಕಳೆಯದಿರುವುದು ಮಾನಸಿಕ ಸ್ವಾಸ್ಥ್ಯವನ್ನು ಹದಗೆಡಿಸಿದೆ

ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ನಮ್ಮ ಮೂಲಕ್ಕೆ ಮರಳಿದಲ್ಲಿ ಆಕಾಶದೆತ್ತರಕ್ಕೆ ತಲುಪಬಹುದಾಗಿದೆ : ಆರ್ಥಿಕ ಸಮೀಕ್ಷೆ

Posted On: 31 JAN 2025 1:34PM by PIB Bengaluru

ಮಾನಸಿಕ ಸೌಖ್ಯ ಎಂದರೆ ಜೀವನದ ಸವಾಲುಗಳನ್ನು ಎದುರಿಸುವ ಮತ್ತು ಫಲಪ್ರದವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ. ಮಾನಸಿಕ ಯೋಗಕ್ಷೇಮವು ನಮ್ಮ ಎಲ್ಲಾ ಮಾನಸಿಕ-ಭಾವನಾತ್ಮಕ, ಸಾಮಾಜಿಕ, ಅರಿವು ಮತ್ತು ದೈಹಿಕ ಸಾಮರ್ಥ್ಯಗಳನ್ನು ಒಳಗೊಂಡಿದೆ. ಇದನ್ನು ಮನಸ್ಸಿನ ಸಂಯೋಜಿತ ಆರೋಗ್ಯ ಎಂದೂ ಅರ್ಥೈಸಿಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 2024-25ರ ಆರ್ಥಿಕ ಸಮೀಕ್ಷೆ ತಿಳಿಸಿದೆ.

ಜೀವನಶೈಲಿ ಕಾರ್ಯ ಸಂಸ್ಕೃತಿ ಮತ್ತು ಮಾನಸಿಕ ಯೋಗಕ್ಷೇಮ
 
ಜೀವನಶೈಲಿಯ ಆಯ್ಕೆಗಳು, ಕಾರ್ಯ ಸ್ಥಳದ ಸಂಸ್ಕೃತಿ ಮತ್ತು ಕೌಟುಂಬಿಕ ಸನ್ನಿವೇಶಗಳು ಉತ್ಪಾದಕತೆಗೆ ನಿರ್ಣಾಯಕವಾಗಿವೆ ಮತ್ತು ಭಾರತದ ಆರ್ಥಿಕ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು, ಬಾಲ್ಯ/ಯೌವನದಲ್ಲಿ ಮಾಡುವ ಜೀವನಶೈಲಿಯ ಹೆಚ್ಚಿನ ಆಯ್ಕೆಗಳಿಗೆ ತಕ್ಷಣ ಗಮನ ನೀಡಬೇಕು ಎಂದು ಆರ್ಥಿಕ ಸಮೀಕ್ಷೆಯು ವಿವರಿಸುತ್ತದೆ. 

ಅಂತರ್ಜಾಲದ ಅತಿಯಾದ ಅವಲಂಬನೆ ವಿಶೇಷವಾಗಿ  ಸಾಮಾಜಿಕ ಮಾಧ್ಯಮದ ಅತಿಯಾದ ಬಳಕೆಯ ಕಾರಣದಿಂದ  ಮಕ್ಕಳು ಮತ್ತು ಹದಿಹರೆಯದವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ ಎಂದು ಆರ್ಥಿಕ ಸಮೀಕ್ಷೆಯು ತಿಳಿಸಿದೆ. ಜೊನಾಥನ್ ಹೈಡ್ಟ್ ಅವರ 'ದಿ ಆಂಕ್ಷಿಯಸ್ ಜನರೇಷನ್: ಹೌ ದಿ ಗ್ರೇಟ್ ರೀವೈರಿಂಗ್ ಆಫ್ ಚಿಲ್ಡ್ರನ್ ಈಸ್ ಕಾಸಿಂಗ್ ಆನ್ ಎಪಿಡೆಮಿಕ್ ಆಫ್ ಮೆಂಟಲ್ ಇಲ್ನೆಸ್' (ಚಿಂತಾಗ್ರಸ್ತ ಪೀಳಿಗೆ: ಮರುನಿರೂಪಣೆ ಮಕ್ಕಳ ಮಾನಸಿಕ ಆರೋಗ್ಯದ ಸಾಂಕ್ರಾಮಿಕ) ಎಂಬ ಪುಸ್ತಕವನ್ನು ಉಲ್ಲೇಖಿಸಿ ಸಮೀಕ್ಷೆಯು "ಫೋನ್ ಆಧಾರಿತ ಬಾಲ್ಯ" ದಿಂದಾಗಿ ಬೆಳೆಯುವ ಅನುಭವ ಪುನರ್ವಿನ್ಯಾಸಗೊಳಿಸುತ್ತಿದೆ ಎಂದು ಒತ್ತಿ ಹೇಳುತ್ತದೆ.

ಉತ್ತಮ ಕಾರ್ಯ ಸ್ಥಳ ಸಂಸ್ಕೃತಿಯು ಉತ್ತಮ ಮಾನಸಿಕ ಆರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಆರ್ಥಿಕ ಸಮೀಕ್ಷೆ ಒತ್ತಿಹೇಳುತ್ತದೆ. ಜೀವನಶೈಲಿಯ ಆಯ್ಕೆಗಳು ಮತ್ತು ಕೌಟುಂಬಿಕ ಸನ್ನಿವೇಶಗಳು ಸಹ ಮಾನಸಿಕ ಸೌಖ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅದು ಹೇಳುತ್ತದೆ.

 ಬಹು ಸಂಸ್ಕರಿತ ಆಹಾರ ಅಥವಾ  ಜಂಕ್ ಫುಡ್ಗಳನ್ನು ವಿರಳವಾಗಿ ಸೇವಿಸುವ ವ್ಯಕ್ತಿಗಳು ನಿಯಮಿತವಾಗಿ ಸೇವಿಸುವವರಿಗಿಂತ ಉತ್ತಮ ಮಾನಸಿಕ ಸೌಖ್ಯ ಹೊಂದಿರುತ್ತಾರೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ. ವಿರಳವಾಗಿ ವ್ಯಾಯಾಮ ಮಾಡುವವರು, ತಮ್ಮ ಬಿಡುವಿನ ವೇಳೆಯನ್ನು ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ಕಳೆಯುವವರು ಅಥವಾ ತಮ್ಮ ಕುಟುಂಬಗಳೊಂದಿಗೆ ನಿಕಟವಾಗಿಲ್ಲದವರ ಮಾನಸಿಕ ಆರೋಗ್ಯ ಹದಗೆಟ್ಟಿರುತ್ತದೆ ಮತ್ತು ಕೇವಲ ಮೇಜಿನ ಮೇಲೆಯೇ ದೀರ್ಘಕಾಲ ಕಳೆಯುವುದರಿಂದ ಅಂದರೆ ಒಂದೆಡೆಯೇ ಕುಳಿತು ಕೆಲಸ ಮಾಡುವುದು ಕೂಡ ಮಾನಸಿಕ ಯೋಗಕ್ಷೇಮಕ್ಕೆ ಅಷ್ಟೇ ಹಾನಿಕಾರಕವಾಗಿದೆ ಎಂದು ಅದು ಹೇಳುತ್ತದೆ.

ಚಿತ್ರ 2: ಮಾನಸಿಕ ಸೌಖ್ಯ ಮತ್ತು ಜೀವನಶೈಲಿ 

ಕಡಿಮೆ ಪ್ರಮಾಣದ ಮಾನಸಿಕ ಸೌಖ್ಯವು ಕಳವಳಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿ, ಈ ಪ್ರವೃತ್ತಿಗಳು ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳು ಕೂಡ ಅಷ್ಟೇ ಸಂಕಷ್ಟದಾಯಕವಾಗಿವೆ. ಅನುಕೂಲಕರವಲ್ಲದ ಕಾರ್ಯ ಸ್ಥಳದ ಸಂಸ್ಕೃತಿಗಳು ಮತ್ತು ಒಂದೇ ಕಡೆ ಕುಳಿತು ಮಾಡುವ ಅತಿಯಾದ ಕೆಲಸವು ಕೂಡ ಮಾನಸಿಕ ಯೋಗಕ್ಷೇಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಅಂತಿಮವಾಗಿ ಆರ್ಥಿಕ ಬೆಳವಣಿಗೆಯ ವೇಗಕ್ಕೆ ತಡೆಯೊಡ್ಡುತ್ತದೆ ಎಂದು ಸಮೀಕ್ಷಾ ದಾಖಲೆಯು ಎತ್ತಿ ತೋರಿಸುತ್ತದೆ.

ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಸೌಖ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಅವರನ್ನು ಅಂತರ್ಜಾಲದಿಂದ ದೂರವಿಡುತ್ತಾ, ಅವರು ಸ್ನೇಹಿತರೊಂದಿಗೆ ಬೆರೆಯಲು, ಹೊರಗೆ ಆಟವಾಡಲು, ನಿಕಟ ಕೌಟುಂಬಿಕ ಬಾಂಧವ್ಯವನ್ನು ಪೋಷಿಸಲು ಸಮಯ ನೀಡಬೇಕಾದ ತುರ್ತು ಅಗತ್ಯವಿದ್ದು ಆರೋಗ್ಯಕರ ಕಾಲಕ್ಷೇಪಗಳನ್ನು ಪ್ರೋತ್ಸಾಹಿಸಲು ಶಾಲೆ ಮತ್ತು ಕುಟುಂಬಗಳಲ್ಲಿ ಸೂಕ್ತ ವಾತಾವರಣ ರೂಪಿಸಬೇಕಿದೆ ಎಂದು ಆರ್ಥಿಕ ಸಮೀಕ್ಷೆ ಒತ್ತಿಹೇಳುತ್ತದೆ.

ನಮ್ಮ ಮೂಲಕ್ಕೆ ಮರಳುವುದರಿಂದ ನಾವು ಮಾನಸಿಕ ಆರೋಗ್ಯದಲ್ಲಿ ಉತ್ತುಂಗಕ್ಕೇರಲು ಸಾಧ್ಯವಾಗಲಿದೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ. ಮಾನವ ಕಲ್ಯಾಣ ಮತ್ತು ರಾಷ್ಟ್ರದ ಚೈತನ್ಯ ಮತ್ತು ಭಾವನೆಗೆ ನೇರ ಪರಿಣಾಮ ಬೀರುವ ಅಂಶಗಳನ್ನು ಗಮನಿಸಿದರೆ, ಮಾನಸಿಕ ಸೌಖ್ಯವು ಆರ್ಥಿಕ ಕಾರ್ಯಸೂಚಿಯ ಕೇಂದ್ರಬಿಂದುವಾಗಿರುವುದು ವಿವೇಕಯುತವಾಗಿದೆ ಮತ್ತು ಸಮಸ್ಯೆಯ ಪ್ರಮಾಣ ತೀವ್ರವಾಗಿದೆ ಎಂದು ಆರ್ಥಿಕ ಸಮೀಕ್ಷೆ 2024-25 ಉಲ್ಲೇಖಿಸಿದೆ. 

ಭಾರತದ ದುಡಿಯುವ ಜನಸಂಖ್ಯೆಯ ಪ್ರಮಾಣವು ಕೌಶಲ್ಯತೆ, ಶಿಕ್ಷಣ, ದೈಹಿಕ ಆರೋಗ್ಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದರ ಯುವಕರ ಮಾನಸಿಕ ಆರೋಗ್ಯದ ಮೇಲೆ ಅವಲಂಬಿತವಾಗಿದ್ದು, ಮಾನಸಿಕ ಸೌಖ್ಯ ಕಾಪಾಡಲು ಕಾರ್ಯಸಾಧ್ಯವಾದ, ಪರಿಣಾಮಕಾರಿ ನಿರೋಧಕ ತಂತ್ರಗಳು ಮತ್ತು ಮಧ್ಯಸ್ಥಿಕೆಗಳನ್ನು ಕಂಡುಕೊಳ್ಳುವ ಸಮಯ ಇದಾಗಿದೆ ಎಂದು ಸಮೀಕ್ಷೆ ಒತ್ತಿ ಹೇಳುತ್ತದೆ.

 

*****


(Release ID: 2098053) Visitor Counter : 16