ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ ಚಲನಶೀಲತೆ ಜಾಗತಿಕ ವಸ್ತುಪ್ರದರ್ಶನ(ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ)-2025 ಉದ್ಘಾಟಿಸಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ


ವಿಕಸಿತ ಭಾರತದ ಪಯಣವು ಚಲನಶೀಲತೆ(ಸಂಚಾರ) ವಲಯದಲ್ಲಿ ಅಭೂತಪೂರ್ವ ಪರಿವರ್ತನೆಗೆ ಮತ್ತು ಗಣನೀಯ ಬೆಳವಣಿಗೆಗೆ ಕಾರಣವಾಗಲಿದೆ: ಪ್ರಧಾನಮಂತ್ರಿ

ಪ್ರಯಾಣವನ್ನು ಸುಲಭಗೊಳಿಸುವುದು ಇಂದು ಭಾರತದ ಪಾಲಿಗೆ ಪ್ರಮುಖ ಆದ್ಯತೆಯಾಗಿದೆ: ಪ್ರಧಾನಮಂತ್ರಿ

ಮೇಕ್ ಇನ್ ಇಂಡಿಯಾ ಉಪಕ್ರಮದ ಬಲವು ದೇಶದ ಆಟೋ ಉದ್ಯಮದ ಬೆಳವಣಿಗೆಯ ನಿರೀಕ್ಷೆಗಳನ್ನು ಉತ್ತೇಜಿಸುತ್ತದೆ: ಪ್ರಧಾನಮಂತ್ರಿ

ಭಾರತದ ಚಲನಶೀಲತೆ ಪರಿಹಾರದ 7 ಕಾರಣಗಳು- ಸಾಮಾನ್ಯ, ಸಂಪರ್ಕಿತ, ಅನುಕೂಲಕರ, ದಟ್ಟಣೆ-ಮುಕ್ತ, ವಿದ್ಯುತ್ ಪೂರಣ, ಸ್ವಚ್ಛ ಮತ್ತು ಅತ್ಯಾಧುನಿಕ ಆಗಿವೆ: ಪ್ರಧಾನಮಂತ್ರಿ

ಇಂದು ಭಾರತವು ಹಸಿರು ತಂತ್ರಜ್ಞಾನ, ವಿದ್ಯುಚ್ಛಾಲಿತ ವಾಹನಗಳು, ಹೈಡ್ರೋಜನ್ ಇಂಧನ ಮತ್ತು ಜೈವಿಕ ಇಂಧನಗಳ ಅಭಿವೃದ್ಧಿಯತ್ತ ಗಮನ ಹರಿಸುತ್ತಿದೆ: ಪ್ರಧಾನಮಂತ್ರಿ

ಚಲನಶೀಲತೆ ವಲಯದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಪ್ರತಿಯೊಬ್ಬ ಹೂಡಿಕೆದಾರನಿಗೆ ಭಾರತವು ಗಮ್ಯ ತಾಣವಾಗಿದೆ: ಪ್ರಧಾನಮಂತ್ರಿ

Posted On: 17 JAN 2025 1:05PM by PIB Bengaluru

ನವದೆಹಲಿಯ ಭಾರತ್ ಮಂಟಪದಲ್ಲಿಂದು ಆಯೋಜಿಸಿದ್ದ ಭಾರತದ ಚಲನಶೀಲತೆಯ ಅತಿದೊಡ್ಡ ವಸ್ತು ಪ್ರದರ್ಶನ 'ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025' ಅನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ನಂತರ ಸಭೆಯನ್ನು  ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಸರ್ಕಾರವನ್ನು ಸತತ 3ನೇ ಬಾರಿಗೆ ಆಯ್ಕೆ ಮಾಡಿದ್ದಕ್ಕಾಗಿ ಜನರಿಗೆ ಧನ್ಯವಾದ ಅರ್ಪಿಸಿದರು. ಕಳೆದ ವರ್ಷ ಜರುಗಿದ 800 ಪ್ರದರ್ಶಕರ ಸಂಖ್ಯೆ, 2.5 ಲಕ್ಷ ಪ್ರತಿನಿಧಿಗಳು ಭಾಗವಹಿಸಿದ್ದ ವಸ್ತು ಪ್ರದರ್ಶನಕ್ಕೆ ಹೋಲಿಸಿದರೆ, ಈ ವರ್ಷದ ವಸ್ತು ಪ್ರದರ್ಶನವು ರಾಷ್ಟ್ರೀಯ ರಾಜಧಾನಿ ಪ್ರದೇಶದ ಇತರೆ 2 ಸ್ಥಳಗಳಲ್ಲಿ ನಡೆಯುವುದರೊಂದಿಗೆ ಹೆಚ್ಚಿನ ವಿಸ್ತರಣೆಯಾಗಿದೆ. ಮುಂದಿನ 5 ದಿನಗಳಲ್ಲಿ, ಈ ಕಾರ್ಯಕ್ರಮಕ್ಕೆ ಸಾಕಷ್ಟು ಪ್ರತಿನಿಧಿಗಳು ಭಾಗವಹಿಸುವ ಮೂಲಕ ಅನೇಕ ಹೊಸ ವಾಹನಗಳನ್ನು ಬಿಡುಗಡೆ ಮಾಡಲಿದ್ದಾರೆ. "ಭಾರತದಲ್ಲಿ ಚಲನಶೀಲತೆಯ ಭವಿಷ್ಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ವಾತಾವರಣ ಇದೆ". ವಸ್ತು  ಪ್ರದರ್ಶನಕ್ಕೆ ತಮ್ಮ ಭೇಟಿಯನ್ನು ಉಲ್ಲೇಖಿಸಿದ ಶ್ರೀ ಮೋದಿ, "ಭಾರತದ ಆಟೋಮೋಟಿವ್ ಉದ್ಯಮವು ಅದ್ಭುತವಾಗಿದೆ ಮತ್ತು ಭವಿಷ್ಯಕ್ಕೆ ಸಿದ್ಧವಾಗಿದೆ", ಇದಕ್ಕಾಗಿ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಭಾರತೀಯ ಆಟೋಮೊಬೈಲ್ ವಲಯದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು ಶ್ರೀ ರತನ್ ಟಾಟಾ ಮತ್ತು ಶ್ರೀ ಒಸಾಮು ಸುಜುಕಿ ಅವರನ್ನು ಸ್ಮರಿಸಿದರು. ಭಾರತೀಯ ಆಟೋ ವಲಯದ ಬೆಳವಣಿಗೆಯಲ್ಲಿ ಮತ್ತು ಭಾರತದ ಮಧ್ಯಮ ವರ್ಗದ ಕುಟುಂಬಗಳ ಕನಸುಗಳನ್ನು ನನಸಾಗಿಸುವಲ್ಲಿ ಈ ಇಬ್ಬರು ದಿಗ್ಗಜರ ಕೊಡುಗೆಗಳು ಅಪಾರವಾಗಿವೆ. ಅವರ ಪರಂಪರೆ ಭಾರತದ ಸಂಪೂರ್ಣ ಚಲನಶೀಲತೆ ವಲಯಕ್ಕೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

"ಜನರ ಆಕಾಂಕ್ಷೆಗಳು ಮತ್ತು ಯುವಕರ ಶಕ್ತಿಯಿಂದ ಪ್ರೇರಿತವಾಗಿ, ಭಾರತದ ಆಟೋಮೊಬೈಲ್ ವಲಯವು ಅಭೂತಪೂರ್ವ ಪರಿವರ್ತನೆಗೆ ಸಾಕ್ಷಿಯಾಗುತ್ತಿದೆ". ಕಳೆದ ವರ್ಷದಲ್ಲಿ, ಭಾರತೀಯ ಆಟೋ ಉದ್ಯಮವು ಸುಮಾರು 12% ಬೆಳೆದಿದೆ. "ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ದಿ ವರ್ಲ್ಡ್" ಮಂತ್ರದಿಂದ ರಫ್ತು ಹೆಚ್ಚುತ್ತಿದೆ. ಭಾರತದಲ್ಲಿ ವಾರ್ಷಿಕವಾಗಿ ಮಾರಾಟವಾಗುವ ಕಾರುಗಳ ಸಂಖ್ಯೆ ಅನೇಕ ದೇಶಗಳ ಜನಸಂಖ್ಯೆಯನ್ನು ಮೀರಿಸುತ್ತಿದೆ. ಒಂದು ವರ್ಷದಲ್ಲಿ ಸುಮಾರು 2.5 ಕೋಟಿ ಕಾರುಗಳ ಮಾರಾಟವು ಭಾರತದಲ್ಲಿ ನಿರಂತರವಾಗಿ ಬೆಳೆಯುತ್ತಿರುವ ಬೇಡಿಕೆಯನ್ನು ಪ್ರದರ್ಶಿಸುತ್ತಿದೆ. ಚಲನಶೀಲತೆಯ ಭವಿಷ್ಯದ ವಿಷಯಕ್ಕೆ ಬಂದಾಗ ಭಾರತವನ್ನು ಏಕೆ ಹೆಚ್ಚಿನ ನಿರೀಕ್ಷೆಗಳೊಂದಿಗೆ ನೋಡಲಾಗುತ್ತಿದೆ ಎಂಬುದನ್ನು ಈ ಬೆಳವಣಿಗೆಯು ತೋರಿಸುತ್ತಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.

"ಭಾರತವು ಪ್ರಸ್ತುತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ಮತ್ತು 3ನೇ ಅತಿದೊಡ್ಡ ಪ್ರಯಾಣಿಕ ವಾಹನ ಮಾರುಕಟ್ಟೆಯಾಗಿದೆ". ಭಾರತವು ಜಾಗತಿಕವಾಗಿ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗುತ್ತಿದ್ದಂತೆ, ದೇಶದ ಆಟೋಮೊಬೈಲ್ ಮಾರುಕಟ್ಟೆಯು ಅಭೂತಪೂರ್ವ ಪರಿವರ್ತನೆ ಮತ್ತು ವಿಸ್ತರಣೆಗೆ ಸಾಕ್ಷಿಯಾಗಲಿದೆ. ದೇಶದ ದೊಡ್ಡ ಯುವ ಜನಸಂಖ್ಯೆ, ವಿಸ್ತರಿಸುತ್ತಿರುವ ಮಧ್ಯಮ ವರ್ಗ, ತ್ವರಿತ ನಗರೀಕರಣ, ಆಧುನಿಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮದ ಮೂಲಕ ಕೈಗೆಟುಕುವ ವಾಹನಗಳು ಸೇರಿದಂತೆ ಹಲವಾರು ಅಂಶಗಳು ಭಾರತದಲ್ಲಿ ಚಲನಶೀಲತೆಯ ಭವಿಷ್ಯವನ್ನು ಪ್ರೇರೇಪಿಸುತ್ತಿವೆ. ಈ ಅಂಶಗಳು ಒಟ್ಟಾಗಿ ಭಾರತದಲ್ಲಿ ಆಟೋ ಕ್ಷೇತ್ರದ ಬೆಳವಣಿಗೆಗೆ ಕಾರಣವಾಗುತ್ತವೆ ಎಂದು ಹೇಳಿದರು.

ಆಟೋ ಉದ್ಯಮದ ಬೆಳವಣಿಗೆಗೆ ಅಗತ್ಯ ಮತ್ತು ಆಕಾಂಕ್ಷೆಗಳ ಎರಡು ಸಹ ಇರಬೇಕು. ಆದರೆ ಭಾರತವು ಇವೆರಡನ್ನೂ ಹೊಂದಿದೆ. ಯುವಜನರೇ ದೇಶದ ಅತಿದೊಡ್ಡ ಗ್ರಾಹಕ ನೆಲೆಯಾಗಿರುವುದರಿಂದ ಭಾರತವು ಹಲವು ದಶಕಗಳವರೆಗೆ ವಿಶ್ವದ ಅತ್ಯಂತ ಚಿರಯೌವ್ವನ(ಕಿರಿಯ) ದೇಶವಾಗಿ ಉಳಿಯುತ್ತದೆ. ಈ ದೊಡ್ಡ ಯುವ ಜನಸಂಖ್ಯೆಯು ಗಮನಾರ್ಹ ಬೇಡಿಕೆಯನ್ನು ಸೃಷ್ಟಿಸುತ್ತದೆ. ಹೆಚ್ಚುವರಿಯಾಗಿ, ಮತ್ತೊಂದು ಪ್ರಮುಖ ಗ್ರಾಹಕ ನೆಲೆ ಭಾರತದ ಮಧ್ಯಮ ವರ್ಗವಾಗಿದೆ, ಕಳೆದ ದಶಕದಲ್ಲಿ 25 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ, ಇದು ತಮ್ಮ ಮೊದಲ ವಾಹನಗಳನ್ನು ಖರೀದಿಸುತ್ತಿರುವ ನವ-ಮಧ್ಯಮ ವರ್ಗವನ್ನು ರೂಪಿಸಿದೆ. ಪ್ರಗತಿ ಮುಂದುವರಿದಂತೆ, ಈ ಗುಂಪು ತಮ್ಮ ವಾಹನಗಳ ನವೀಕರಣ ಮಾಡಲಿದ್ದು, ಆಟೋ ವಲಯಕ್ಕೆ ಇನ್ನಷ್ಟು ಪ್ರಯೋಜನಗಳನ್ನು ನೀಡುತ್ತದೆ ಎಂದು ಅವರು ಹೇಳಿದರು.

ಉತ್ತಮ ಮತ್ತು ವಿಶಾಲವಾದ ರಸ್ತೆಗಳ ಕೊರತೆಯು ಭಾರತದಲ್ಲಿ ಕಾರುಗಳನ್ನು ಖರೀದಿಸದಿರಲು ಒಂದು ಕಾರಣವಾಗಿತ್ತು. ಆದರೆ ಈ ಪರಿಸ್ಥಿತಿ ಬದಲಾಗುತ್ತಿದೆ. ಪ್ರಯಾಣವನ್ನು ಸುಲಭಗೊಳಿಸುವುದು ಈಗ ಭಾರತಕ್ಕೆ ಪ್ರಮುಖ ಆದ್ಯತೆಯಾಗಿದೆ". ಕಳೆದ ವರ್ಷದ ಬಜೆಟ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 11 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣ ಮೀಸಲಿಡಲಾಗಿದೆ. ಭಾರತದಾದ್ಯಂತ ಬಹುಪಥ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲಾಗುತ್ತಿದೆ. ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಬಹುಮಾದರಿ ಸಂಪರ್ಕವನ್ನು ವೇಗಗೊಳಿಸಿದೆ ಮತ್ತು ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡಿದೆ. ರಾಷ್ಟ್ರೀಯ ಸರಕು ಸಾಗಣೆ ನೀತಿಯು ಭಾರತವನ್ನು ಜಾಗತಿಕವಾಗಿ ಅತ್ಯಂತ ಸ್ಪರ್ಧಾತ್ಮಕ ಸರಕು ಸಾಗಣೆ ವೆಚ್ಚಗಳನ್ನು ಹೊಂದಿರುವ ದೇಶವನ್ನಾಗಿ ಮಾಡುತ್ತಿದೆ. ಈ ಪ್ರಯತ್ನಗಳು ಆಟೋಮೊಬೈಲ್ ಉದ್ಯಮಕ್ಕೆ ಹಲವಾರು ಹೊಸ ಅವಕಾಶಗಳನ್ನು ತೆರೆಯುತ್ತಿವೆ, ದೇಶದಲ್ಲಿ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಇದು ಒಂದು ಮಹತ್ವದ ಕಾರಣವಾಗಿದೆ ಎಂದರು.

"ಉತ್ತಮ ಮೂಲಸೌಕರ್ಯದ ಜತೆಗೆ, ಹೊಸ ತಂತ್ರಜ್ಞಾನವನ್ನು ಸಹ ಸಂಯೋಜಿಸಲಾಗುತ್ತಿದೆ". ಫಾಸ್ಟ್‌ಟ್ಯಾಗ್ ಭಾರತದಲ್ಲಿ ಚಾಲನಾ ಅನುಭವವನ್ನು ಹೆಚ್ಚು ಸುಲಭಗೊಳಿಸಿದೆ. ಭಾರತದಲ್ಲಿ ಸುಗಮ ಪ್ರಯಾಣಕ್ಕಾಗಿ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತಿದೆ. ಸಂಪರ್ಕಿತ ವಾಹನಗಳು ಮತ್ತು ಸ್ವಾಯತ್ತ ಚಾಲನೆಯಲ್ಲಿ ತ್ವರಿತ ಪ್ರಗತಿಯೊಂದಿಗೆ ಭಾರತವು ಈಗ ಸ್ಮಾರ್ಟ್ ಮೊಬಿಲಿಟಿಯತ್ತ ಸಾಗುತ್ತಿದೆ ಎಂದರು.

ಭಾರತದ ಆಟೋಮೊಬೈಲ್ ಉದ್ಯಮದ ಬೆಳವಣಿಗೆ ಸಾಮರ್ಥ್ಯದಲ್ಲಿ ಮೇಕ್ ಇನ್ ಇಂಡಿಯಾ ಉಪಕ್ರಮದ ಮಹತ್ವದ ಪಾತ್ರವನ್ನು ಪ್ರಸ್ತಾಪಿಸಿದ ಪ್ರಧಾನಿ, ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್ಐ) ಯೋಜನೆಗಳು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಹೊಸ ಆವೇಗವನ್ನು ನೀಡಿವೆ, 2.25 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮಾರಾಟಕ್ಕೆ ಸಹಾಯ ಮಾಡಿದೆ. ಈ ಯೋಜನೆಯು ಈ ವಲಯದಲ್ಲಿ 1.5 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಿದೆ. ಆಟೋಮೊಬೈಲ್ ವಲಯದಲ್ಲಿ ಉದ್ಯೋಗ ಸೃಷ್ಟಿಯು ಇತರ ವಲಯಗಳ ಮೇಲೆ ಗುಣಾತ್ಮಕ ಪರಿಣಾಮವನ್ನು ಬೀರಿದೆ. ಎಂಎಸ್‌ಎಂಇ ವಲಯವು ಹೆಚ್ಚಿನ ಸಂಖ್ಯೆಯ ಆಟೋ ಬಿಡಿಭಾಗಗಳನ್ನು ತಯಾರಿಸುತ್ತಿದೆ. ಆಟೋ ವಲಯ ಬೆಳೆದಂತೆ, ಎಂಎಸ್‌ಎಂಇಗಳು, ಸರಕು ಸಾಗಣೆ, ಪ್ರವಾಸೋದ್ಯಮ ಮತ್ತು ಸಾರಿಗೆ ವಲಯಗಳಲ್ಲಿಯೂ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದು ಅವರು ಹೇಳಿದರು.

ಆಟೋಮೊಬೈಲ್ ವಲಯಕ್ಕೆ ಪ್ರತಿ ಹಂತದಲ್ಲೂ ಸರ್ಕಾರ ಸಮಗ್ರ ಬೆಂಬಲ ಒದಗಿಸುತ್ತಿದೆ, ಕಳೆದ ದಶಕದಲ್ಲಿ ಎಫ್‌ಡಿಐ, ತಂತ್ರಜ್ಞಾನ ವರ್ಗಾವಣೆ ಮತ್ತು ಜಾಗತಿಕ ಪಾಲುದಾರಿಕೆಗಳ ಉದ್ಯಮದಲ್ಲಿ ಹೊಸ ಮಾರ್ಗಗಳನ್ನು ಸ್ಥಾಪಿಸಲಾಗಿದ. ಕಳೆದ 4 ವರ್ಷಗಳಲ್ಲೇ ಈ ವಲಯವು 36 ಶತಕೋಟಿ ಡಾಲರ್ ಗೂ ಹೆಚ್ಚಿನ ವಿದೇಶಿ ನೇರ ಹೂಡಿಕೆ ಆಕರ್ಷಿಸಿದೆ. ಮುಂಬರುವ ವರ್ಷಗಳಲ್ಲಿ ಈ ಅಂಕಿಅಂಶವು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ಭಾರತದಲ್ಲಿ ವಾಹನ ತಯಾರಿಕೆಗೆ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಸರ್ಕಾರದ ಬದ್ಧತೆಯನ್ನು ಪ್ರಧಾನ ಮಂತ್ರಿ ಪುನರುಚ್ಚರಿಸಿದರು.

"ಚಲನಶೀಲತೆ ಪರಿಹಾರಗಳಿಗಾಗಿ 7 ಕಾರಣಗಳು ಇವಾಗಿವೆ": ಸಾಮಾನ್ಯ, ಸಂಪರ್ಕಿತ, ಅನುಕೂಲಕರ, ದಟ್ಟಣೆ-ಮುಕ್ತ, ವಿದ್ಯುತ್ ಪೂರಣ, ಸ್ವಚ್ಛ ಮತ್ತು ಅತ್ಯಾಧುನಿಕ ಎಂಬ ತಮ್ಮ ದೃಷ್ಟಿಕೋನವನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿ, ಹಸಿರು ಚಲನಶೀಲತೆಯ ಮೇಲೆ ಗಮನ ಹರಿಸುವುದು ಈ ದೃಷ್ಟಿಕೋನದ ಭಾಗವಾಗಿದೆ. ಭಾರತವು ಆರ್ಥಿಕತೆ ಮತ್ತು ಪರಿಸರ ಎರಡನ್ನೂ ಬೆಂಬಲಿಸುವ ಚಲನಶೀಲ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ, ಉರವಲು(ಫಾಸಿಲ್) ಇಂಧನಗಳ ಆಮದು ಬಿಲ್ ಕಡಿಮೆ ಮಾಡುತ್ತದೆ. ಹಸಿರು ತಂತ್ರಜ್ಞಾನ, ವಿದ್ಯುಚ್ಛಾಲಿತ ವಾಹನಗಳು, ಹೈಡ್ರೋಜನ್ ಇಂಧನ ಮತ್ತು ಜೈವಿಕ ಇಂಧನಗಳ ಅಭಿವೃದ್ಧಿಯ ಮೇಲೆ ಗಾಢವಾದ  ಗಮನ ಹರಿಸಲಾಗಿದೆ. ಈ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ವಿದ್ಯುತ್ ಚಲನಶೀಲತೆ ಮಿಷನ್ ಮತ್ತು ಹಸಿರು ಹೈಡ್ರೋಜನ್ ಮಿಷನ್‌ನಂತಹ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ವಿದ್ಯುತ್ ಚಲನಶೀಲತೆಯು ತ್ವರಿತ ಬೆಳವಣಿಗೆ ಕಂಡಿದೆ. ಕಳೆದ ದಶಕದಲ್ಲಿ ವಿದ್ಯುತ್ ವಾಹನಗಳ ಮಾರಾಟ 640 ಪಟ್ಟು ಹೆಚ್ಚಾಗಿದೆ. 10 ವರ್ಷಗಳ ಹಿಂದೆ ವಾರ್ಷಿಕವಾಗಿ ಸುಮಾರು 2,600 ವಿದ್ಯುತ್ ವಾಹನಗಳು ಮಾರಾಟವಾಗುತ್ತಿದ್ದವು, 2024ರಲ್ಲಿ 16.80 ಲಕ್ಷಕ್ಕೂ ಹೆಚ್ಚು ವಿದ್ಯುತ್ ವಾಹನಗಳು ಮಾರಾಟವಾಗಿವೆ. ಇಂದು ಒಂದೇ ದಿನದಲ್ಲಿ ಮಾರಾಟವಾಗುವ ವಿದ್ಯುತ್ ವಾಹನಗಳ ಸಂಖ್ಯೆ 1 ದಶಕದ ಹಿಂದೆ ಇಡೀ ವರ್ಷದಲ್ಲಿ ಮಾರಾಟವಾದ ಸಂಖ್ಯೆಗಿಂತ 2 ಪಟ್ಟು ಹೆಚ್ಚಾಗಿದೆ. ಈ ದಶಕದ ಅಂತ್ಯದ ವೇಳೆಗೆ ಭಾರತದಲ್ಲಿ ವಿದ್ಯುತ್ ವಾಹನಗಳ ಸಂಖ್ಯೆ 8 ಪಟ್ಟು ಹೆಚ್ಚಾಗಬಹುದು ಎಂದು ಅಂದಾಜು ವ್ಯಕ್ತಪಡಿಸಿದ ಪ್ರಧಾನ ಮಂತ್ರಿ,  ಇದು ಈ ವಿಭಾಗದಲ್ಲಿನ ಅಗಾಧ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಎಂದರು.

ದೇಶದಲ್ಲಿ ವಿದ್ಯುತ್ ಚಲನಶೀಲತೆಯ ವಿಸ್ತರಣೆಗೆ ಸರ್ಕಾರ ಒದಗಿಸಿದ ನಿರಂತರ ನೀತಿ ನಿರ್ಧಾರಗಳು ಮತ್ತು ಬೆಂಬಲವನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, 5 ವರ್ಷಗಳ ಹಿಂದೆ ಪ್ರಾರಂಭಿಸಲಾದ FAME-2 ಯೋಜನೆಯು 8,000 ಕೋಟಿ ರೂ.ಗೂ ಹೆಚ್ಚಿನ ಪ್ರೋತ್ಸಾಹ ನೀಡಿದೆ. ಈ ಮೊತ್ತವನ್ನು ವಿದ್ಯುತ್ ವಾಹನಗಳ ಖರೀದಿಗೆ ಸಬ್ಸಿಡಿ ನೀಡಲು ಮತ್ತು ಚಾರ್ಜಿಂಗ್ ಮೂಲಸೌಕರ್ಯ ನಿರ್ಮಿಸಲು ಬಳಸಲಾಗಿದೆ. 5,000ಕ್ಕೂ ಹೆಚ್ಚಿನ ವಿದ್ಯುತ್ ಬಸ್‌ಗಳು ಸೇರಿದಂತೆ 16 ಲಕ್ಷಕ್ಕೂ ಹೆಚ್ಚು ವಿದ್ಯುತ್ ವಾಹನಗಳನ್ನು ಬೆಂಬಲಿಸುತ್ತದೆ. ಕೇಂದ್ರ ಸರ್ಕಾರವು ದೆಹಲಿಯಲ್ಲಿ 1,200ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಿದೆ. 3ನೇ ಅವಧಿಯಲ್ಲಿ ಪಿಎಂ ಇ-ಡ್ರೈವ್ ಯೋಜನೆ ಪರಿಚಯಿಸಲಾಗಿದೆ. ಇದು ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಇ-ಆಂಬ್ಯುಲೆನ್ಸ್‌ಗಳು ಮತ್ತು ಇ-ಟ್ರಕ್‌ಗಳು ಸೇರಿದಂತೆ ಸುಮಾರು 28 ಲಕ್ಷ ವಿದ್ಯುಚ್ಛಾಲಿತ ವಾಹನಗಳ ಖರೀದಿಗೆ ಬೆಂಬಲ ನೀಡುತ್ತದೆ. ಸುಮಾರು 14,000 ಎಲೆಕ್ಟ್ರಿಕ್ ಬಸ್‌ಗಳನ್ನು ಸಹ ಖರೀದಿಸಲಾಗುವುದು, ವಿವಿಧ ವಾಹನಗಳಿಗೆ ದೇಶಾದ್ಯಂತ 70,000ಕ್ಕೂ ಹೆಚ್ಚು ಫಾಸ್ಟ್ ಚಾರ್ಜರ್‌ಗಳನ್ನು ಸ್ಥಾಪಿಸಲಾಗುವುದು. ದೇಶಾದ್ಯಂತ ಸಣ್ಣ ನಗರಗಳಲ್ಲಿ ಸುಮಾರು 38,000 ಇ-ಬಸ್‌ಗಳ ಕಾರ್ಯಾಚರಣೆ ಬೆಂಬಲಿಸಲು ಪಿಎಂ ಇ-ಬಸ್ ಸೇವೆಯನ್ನು 3ನೇ ಅವಧಿಯಲ್ಲಿ ಪ್ರಾರಂಭಿಸಲಾಗಿದೆ. ಇವಿ ಉತ್ಪಾದನೆಗೆ ಸರ್ಕಾರವು ನಿರಂತರ ಬೆಂಬಲ ನೀಡುತ್ತಿದೆ. ಭಾರತದಲ್ಲಿ ಇವಿ ಕಾರು ತಯಾರಿಕೆಯಲ್ಲಿ ಆಸಕ್ತಿ ಹೊಂದಿರುವ ಜಾಗತಿಕ ಹೂಡಿಕೆದಾರರಿಗೆ ಮಾರ್ಗಗಳನ್ನು ರೂಪಿಸಲಾಗಿದೆ. ಈ ಪ್ರಯತ್ನಗಳು ಗುಣಮಟ್ಟದ ಇವಿ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲು ಮತ್ತು ಭಾರತದಲ್ಲಿ ಮೌಲ್ಯ ಸರಪಳಿ ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ನಿಭಾಯಿಸಲು ಸೌರಶಕ್ತಿ ಮತ್ತು ಪರ್ಯಾಯ ಇಂಧನಗಳನ್ನು ನಿರಂತರವಾಗಿ ಉತ್ತೇಜಿಸುವ ಅಗತ್ಯವಿದೆ. ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಹಸಿರು ಭವಿಷ್ಯದ ಮೇಲೆ ಬಲವಾದ ಒತ್ತು ನೀಡಲಾಗಿತ್ತು. ಭಾರತದಲ್ಲಿ ಇವಿಗಳು ಮತ್ತು ಸೌರಶಕ್ತಿ ಎರಡರಲ್ಲೂ ಮಹತ್ವದ ಕೆಲಸಗಳು ನಡೆಯುತ್ತಿವೆ. ಪ್ರಧಾನ ಮಂತ್ರಿ ಸೂರ್ಯಗಢ - ಉಚಿತ ವಿದ್ಯುತ್ ಯೋಜನೆ ಮೇಲ್ಛಾವಣಿ ಸೌರಶಕ್ತಿಗೆ ಪ್ರಮುಖ ಧ್ಯೇಯವಾಗಿದೆ. ಈ ವಲಯದಲ್ಲಿ ಬ್ಯಾಟರಿಗಳು ಮತ್ತು ಶೇಖರಣಾ ವ್ಯವಸ್ಥೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪ್ರಧಾನಿ ಎತ್ತಿ ತೋರಿಸಿದರು. ಸುಧಾರಿತ ರಾಸಾಯನಿಕ ಕೋಶ ಬ್ಯಾಟರಿ ಸಂಗ್ರಹಣೆ ಉತ್ತೇಜಿಸಲು ಸರ್ಕಾರವು 18,000 ಕೋಟಿ ರೂ. ಪಿಎಲ್ಐ ಯೋಜನೆ ಪ್ರಾರಂಭಿಸಿದೆ. ಈ ವಲಯದಲ್ಲಿ ಗಮನಾರ್ಹ ಹೂಡಿಕೆಗಳಿಗೆ ಇದು ಸರಿಯಾದ ಸಮಯವಾಗಿದೆ. ಇಂಧನ ಸಂಗ್ರಹ ವಲಯದಲ್ಲಿ ನವೋದ್ಯಮಗಳನ್ನು ಪ್ರಾರಂಭಿಸುವಂತೆ ಅವರು ದೇಶದ ಯುವಕರನ್ನು ಒತ್ತಾಯಿಸಿದರು. ಭಾರತದಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಬ್ಯಾಟರಿಗಳು ಮತ್ತು ಶೇಖರಣಾ ವ್ಯವಸ್ಥೆಗಳನ್ನು ರಚಿಸಬಹುದಾದ ನಾವೀನ್ಯತೆಗಳ ಮೇಲೆ ಕೆಲಸ ಮಾಡುವ ಅಗತ್ಯವಿದೆ. ಈ ಕ್ಷೇತ್ರದಲ್ಲಿ ಈಗಾಗಲೇ ಗಣನೀಯ ಕೆಲಸಗಳು ನಡೆಯುತ್ತಿವೆ, ಆದರೆ ಅದನ್ನು ಕಾರ್ಯಾಚರಣೆ ಮಾದರಿ(ಮಿಷನ್ ಮೋಡ್‌)ಯಲ್ಲಿ ಮುನ್ನಡೆಸುವುದು ಅತ್ಯಗತ್ಯ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರದ ಸ್ಪಷ್ಟ ಉದ್ದೇಶ ಮತ್ತು ಬದ್ಧತೆಯನ್ನು ಪ್ರಸ್ತಾಪಿಸಿ ಶ್ರೀ ಮೋದಿ, ಹೊಸ ನೀತಿಗಳನ್ನು ರೂಪಿಸುವುದೇ ಇರಲಿ, ಸುಧಾರಣೆಗಳನ್ನು ಜಾರಿಗೆ ತರುವುದೇ ಇರಲಿ,  ಸರ್ಕಾರದ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ವಾಹನ ಸ್ಕ್ರ್ಯಾಪಿಂಗ್ ನೀತಿಯ ಲಾಭ ಪಡೆದುಕೊಳ್ಳುವಂತೆ ವಾಹನ ತಯಾರಕರನ್ನು ಒತ್ತಾಯಿಸಿದ ಅವರು, ಕಂಪನಿಗಳು ತಮ್ಮ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಹೆಚ್ಚಿನ ಜನರನ್ನು ಪ್ರೋತ್ಸಾಹಿಸಲು ತಮ್ಮದೇ ಆದ ಪ್ರೋತ್ಸಾಹಕ ಯೋಜನೆಗಳನ್ನು ಪರಿಚಯಿಸಬಹುದು ಎಂದು ಸಲಹೆ ನೀಡಿದರು. ಈ ಪ್ರೇರಣೆ ನಿರ್ಣಾಯಕವಾಗಿದೆ ಮತ್ತು ದೇಶದ ಪರಿಸರಕ್ಕೆ ಮಹತ್ವದ ಸೇವೆಯಾಗಲಿದೆ ಎಂದು ಪ್ರಧಾನಿ ತಿಳಿಸಿದರು.

ವಾಹನ ಉದ್ಯಮವು ನಾವೀನ್ಯತೆ ಮತ್ತು ತಂತ್ರಜ್ಞಾನದಿಂದ ನಡೆಸಲ್ಪಡುತ್ತದೆ. ಭವಿಷ್ಯವು ಪೂರ್ವ, ಏಷ್ಯಾ ಮತ್ತು ಭಾರತಕ್ಕೆ ಸೇರಿದೆ. ಚಲನಶೀಲತೆಯಲ್ಲಿ ತಮ್ಮ ಭವಿಷ್ಯವನ್ನು ನೋಡಲು ಬಯಸುವ ಪ್ರತಿಯೊಬ್ಬ ಹೂಡಿಕೆದಾರರಿಗೆ ಭಾರತವು ಅತ್ಯುತ್ತಮ ತಾಣವಾಗಿದೆ. ಸರ್ಕಾರವು ಸಂಪೂರ್ಣ ಬೆಂಬಲ ನೀಡುತ್ತದೆ. "ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್" ಎಂಬ ಮಂತ್ರದೊಂದಿಗೆ ಮುಂದುವರಿಯಲು ಎಲ್ಲರೂ ಪ್ರೋತ್ಸಾಹಿಸಿ, ಪ್ರಧಾನ ಮಂತ್ರಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಮನೋಹರ್ ಲಾಲ್, ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಶ್ರೀ ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್, ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ಶ್ರೀ ಜಿತನ್ ರಾಮ್ ಮಾಂಝಿ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ಜನವರಿ 17-22ರ ವರೆಗೆ 3 ಪ್ರತ್ಯೇಕ ಸ್ಥಳಗಳಲ್ಲಿ ನಡೆಯಲಿದೆ: ನವದೆಹಲಿಯ ಭಾರತ್ ಮಂಟಪಂ ಮತ್ತು ಯಶೋಭೂಮಿ ಮತ್ತು ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್ & ಮಾರ್ಟ್ ನಲ್ಲಿ ಆಯೋಜಿತವಾಗಿದೆ. ಎಕ್ಸ್‌ಪೋ 9ಕ್ಕೂ ಹೆಚ್ಚು ಏಕಕಾಲಿಕ ಪ್ರದರ್ಶನಗಳು, 20+ ಸಮ್ಮೇಳನಗಳು ಮತ್ತು ಮಂಟಪಗಳನ್ನು ಆಯೋಜಿಸುತ್ತದೆ. ಇದರ ಜೊತೆಗೆ, ಎಕ್ಸ್‌ಪೋದಲ್ಲಿ ರಾಜ್ಯಗಳ ಸಂವಾದ ಮತ್ತು ಚರ್ಚಾ ಕಲಾಪಗಳು ಸಹ ಜರುಗಲಿವೆ.

 

 

*****


(Release ID: 2094352) Visitor Counter : 13