ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದ 8ನೇ ಆವೃತ್ತಿಯಲ್ಲಿ ದಾಖಲೆಯ ಭಾಗವಹಿಸುವಿಕೆ
2.7 ಕೋಟಿಗೂ ಹೆಚ್ಚು ನೋಂದಣಿಗಳು ಬಂದಿವೆ
Posted On:
09 JAN 2025 1:34PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪ್ರಮುಖ ಉಪಕ್ರಮವಾದ ಪರೀಕ್ಷಾ ಪೆ ಚರ್ಚಾ (ಪಿ.ಪಿ.ಸಿ), ಕಾರ್ಯಕ್ರಮವು ಪರೀಕ್ಷಾ ಸಂಬಂಧಿತ ಒತ್ತಡವನ್ನು ಕಲಿಕೆ ಮತ್ತು ಸಂತಸ ಆಚರಣೆಯ ಹಬ್ಬವಾಗಿ ಪರಿವರ್ತಿಸುವ ರಾಷ್ಟ್ರವ್ಯಾಪಿ ಚಳುವಳಿಯಾಗಿ ಬೆಳೆಯುತ್ತಲೇ ಇದೆ. ಪರೀಕ್ಷಾ ಪೆ ಚರ್ಚಾದ (ಪಿ.ಪಿ.ಸಿ), 8ನೇ ಆವೃತ್ತಿಯು ಭಾರತ ಮತ್ತು ವಿದೇಶಗಳಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಂದ 2.79 ಕೋಟಿಗೂ ಹೆಚ್ಚು ನೋಂದಣಿಗಳೊಂದಿಗೆ ಅಭೂತಪೂರ್ವ ಮೈಲಿಗಲ್ಲನ್ನು ಸಾಧಿಸಿದೆ. ಈ ಗಮನಾರ್ಹ ಪ್ರತಿಕ್ರಿಯೆಯು ನಿಜವಾದ ಜನ ಆಂದೋಲನವಾಗಿ ಕಾರ್ಯಕ್ರಮವು ಬೆಳೆಯುತ್ತಿರುವ ಅನುರಣನವನ್ನು ಒತ್ತಿಹೇಳುತ್ತದೆ.
“ಮೈಗೌ” ಜಾಲತಾಣದಲ್ಲಿ ಆಯೋಜಿಸಲಾದ ಪರೀಕ್ಷಾ ಪೆ ಚರ್ಚಾದ (ಪಿ.ಪಿ.ಸಿ) 2025 ಗಾಗಿ ಆನ್ ಲೈನ್ ನೋಂದಣಿಯು , 14 ಡಿಸೆಂಬರ್ 2024 ರಂದು ಪ್ರಾರಂಭವಾಯಿತು ಮತ್ತು 14 ಜನವರಿ 2025 ರವರೆಗೆ ತೆರೆದಿರುತ್ತದೆ. ಕಾರ್ಯಕ್ರಮದ ಅಪಾರ ಜನಪ್ರಿಯತೆಯು ವಿದ್ಯಾರ್ಥಿಗಳ ಮಾನಸಿಕ ಯೋಗಕ್ಷೇಮವನ್ನು ಪರಿಹರಿಸುವಲ್ಲಿ ಮತ್ತು ಪರೀಕ್ಷೆಗಳ ಕಡೆಗೆ ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸುವಲ್ಲಿ ಅದರ ಯಶಸ್ಸನ್ನು ಎತ್ತಿ ತೋರಿಸುತ್ತದೆ.
ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ವಾರ್ಷಿಕವಾಗಿ ಆಯೋಜಿಸುವ ಈ ಸಂವಾದಾತ್ಮಕ ರೂಪದ ವಿಶೇಷ ಕಾರ್ಯಕ್ರಮವು ಶಿಕ್ಷಣದ ಬಹು ನಿರೀಕ್ಷಿತ ಆಚರಣೆಯಾಗಿ ಮಾರ್ಪಟ್ಟಿದೆ. 2024ರಲ್ಲಿ ಪರೀಕ್ಷಾ ಪೆ ಚರ್ಚಾದ (ಪಿ.ಪಿ.ಸಿ)ಯ 7ನೇ ಆವೃತ್ತಿಯು ನವದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ “ಟೌನ್ ಹಾಲ್” ಸ್ವರೂಪದಲ್ಲಿ ನಡೆಯಿತು ಮತ್ತು ವ್ಯಾಪಕ ಮೆಚ್ಚುಗೆಯನ್ನು ಪಡೆಯಿತು.
ಪರೀಕ್ಷಾ ಪೆ ಚರ್ಚಾದ (ಪಿ.ಪಿ.ಸಿ)ಯ ಕಾರ್ಯಚಟುವಟಿಕೆಗಳ ಪ್ರಕಾರಕ್ಕೆ ಅನುಗುಣವಾಗಿ, ಜನವರಿ 12, 2025 (ರಾಷ್ಟ್ರೀಯ ಯುವ ದಿನ) ರಿಂದ ಜನವರಿ 23, 2025 (ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ) ವರೆಗೆ ಆಕರ್ಷಕ ಶಾಲಾ ಮಟ್ಟದ ಚಟುವಟಿಕೆಗಳ ಸರಣಿಯನ್ನು ನಿಗದಿಪಡಿಸಲಾಗಿದೆ. ಈ ಚಟುವಟಿಕೆಗಳು ಸಮಗ್ರ ಅಭಿವೃದ್ಧಿರೂಪದಲ್ಲಿ ಸಾಕಾರಗೊಳಿಸುವ ಮತ್ತು ಪರೀಕ್ಷೆಗಳನ್ನು ಉತ್ಸವವಾಗಿ ಸಂತಸಪೂರ್ವಕವಾಗಿ ಆಚರಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿವೆ. ಈ ಚಟುವಟಿಕೆಗಳಲ್ಲಿ ಇವು ಸೇರಿವೆ:
* ಸ್ಥಳೀಯ ಆಟಗಳು/ ಕ್ರೀಡೆಗಳು
* ಮ್ಯಾರಥಾನ್ ಓಟಗಳು
* ಮೀಮ್ ಸ್ಪರ್ಧೆಗಳು
* ಮೂಕಾಭಿನಯ/ನುಕ್ಕಡ್ ನಾಟಕ
* ಯೋಗ-ಮತ್ತು-ಧ್ಯಾನ ಅವಧಿಗಳು
* ಪೋಸ್ಟರ್ ತಯಾರಿಕೆ ಸ್ಪರ್ಧೆಗಳು
* ಸ್ಪೂರ್ತಿದಾಯಕ ಚಲನಚಿತ್ರ ಪ್ರದರ್ಶನಗಳು
* ಮಾನಸಿಕ ಆರೋಗ್ಯ ಕಾರ್ಯಾಗಾರಗಳು ಮತ್ತು ಸಮಾಲೋಚನೆ ಅವಧಿಗಳು
* ಕವನ / ಹಾಡು / ಚರ್ಚೆ / ಭಾಷಣ / ಕೌಶಲ್ಯ ಪ್ರದರ್ಶನಗಳು
ಈ ಚಟುವಟಿಕೆಗಳ ಮೂಲಕ, ಪರೀಕ್ಷಾ ಪೆ ಚರ್ಚಾದ (ಪಿ.ಪಿ.ಸಿ) 2025 ತನ್ನ ಸ್ಥಿತಿಸ್ಥಾಪಕತ್ವ, ಸಕಾರಾತ್ಮಕತೆ ಮತ್ತು ಕಲಿಕೆಯಲ್ಲಿ ಸಂತೋಷದ ಲವಲವಿಕೆಯ ಸಂದೇಶವನ್ನು ಬಲಪಡಿಸುತ್ತದೆ. ಶಿಕ್ಷಣವನ್ನು ಉತ್ತಮ ರೀತಿಯಲ್ಲಿ ಒತ್ತಡ ರಹಿತ, ಸ್ವಯಂಚಾಲಿತ, ಪ್ರಯಾಸ ರಹಿತ ಪ್ರಯಾಣವಾಗಿ ಆಚರಿಸುವುದನ್ನು ಖಚಿತಪಡಿಸುತ್ತದೆ.
ಹೆಚ್ಚಿನ ವಿವರಗಳಿಗಾಗಿ ಮತ್ತು ಭಾಗವಹಿಸುವಿಕೆಗಾಗಿ, www.MyGov.in ಜಾಲತಾಣಕ್ಕೆ ಭೇಟಿ ನೀಡಿ ಮತ್ತು ಈ ಪರಿವರ್ತನಾಶೀಲ ಮಹತ್ವಪೂರ್ಣ ಉಪಕ್ರಮದ ಭಾಗವಾಗಿರಿ.
*****
(Release ID: 2091614)
Visitor Counter : 15