ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಎನ್.ಡಿ.ಎಂ.ಸಿ.ಯ 'ಎಕ್ಸಾಮ್ ವಾರಿಯರ್' ಉಪಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು; ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡಲು ಸ್ಥಿರವಾದ ಹಾಗೂ ನಿರಂತರ ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು
'ಪರೀಕ್ಷಾ ಯೋಧರು (ಎಕ್ಸಾಮ್ ವಾರಿಯರ್)' ಕಾರ್ಯಕ್ರಮದಲ್ಲಿ 4,000 ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿಯವರ "ಆಗುವ ಕನಸಿನ ಬದಲಾಗಿ ಮಾಡುವ ಕನಸು" ಹೊಂದಿರುವ ವ್ಯಕ್ತಿಯಾಗಿರಿ ಎಂಬ ಸಂದೇಶದಿಂದ ಪ್ರೇರಣೆ ಲಭಿಸಿದೆ
ಪದ್ಮ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಹೆಸರಾಂತ ಕಲಾವಿದರು 'ಎಕ್ಸಾಮ್ ವಾರಿಯರ್' ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ತಮ್ಮ ಅನುಭವಗಳ ಮೂಲಕ ಪ್ರೇರೇಪಿಸಿದರು, ಪರೀಕ್ಷೆಯ ಯಶಸ್ಸಿಗೆ ಸಕಾರಾತ್ಮಕತೆ ಮತ್ತು ಆತ್ಮವಿಶ್ವಾಸವನ್ನು ಉತ್ತೇಜಿಸಿದರು
Posted On:
04 JAN 2025 6:59PM by PIB Bengaluru
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪುಸ್ತಕದಿಂದ ಪ್ರೇರಿತವಾದ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್.ಡಿ.ಎಂ.ಸಿ) ಇದರ ಪರೀಕ್ಷಾ ಯೋಧರ ಕಲಾ ಉತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ, ರೈಲ್ವೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಭಾಗವಹಿಸಿದರು. "ಈ ಉಪಕ್ರಮವು ವಿದ್ಯಾರ್ಥಿಗಳಿಗೆ ಸಕಾರಾತ್ಮಕತೆ, ಆತ್ಮವಿಶ್ವಾಸ ಮತ್ತು ಸೃಜನಶೀಲತೆಯನ್ನು ನಿರ್ಮಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಈ ಮೂಲಕ ಶಾಂತ ಮತ್ತು ಸಮತೋಲಿತ ಮನಸ್ಥಿತಿಯೊಂದಿಗೆ ಪರೀಕ್ಷೆಗಳನ್ನು ಸಮೀಪಿಸಬಹುದು." ಎಂದು ಅವರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಹೇಳಿದರು
ಸುಮಾರು 4,000 ವಿದ್ಯಾರ್ಥಿಗಳು ಪುಸ್ತಕದ ಸಂದೇಶಗಳಿಂದ ಪ್ರೇರಿತರಾಗಿ ಕಲೆಯ ಮೂಲಕ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಮಾರ್ಗದರ್ಶನ ನೀಡುವ ಶಿಕ್ಷಕರೊಂದಿಗೆ ದಿವ್ಯಾಂಗ ವಿದ್ಯಾರ್ಥಿಗಳು ಸಹ ಕಾರ್ಯಕ್ರಮದ ಉದ್ದಕ್ಕೂ ಸಕ್ರಿಯವಾಗಿ ಭಾಗವಹಿಸಿದರು.
ವಿದ್ಯಾರ್ಥಿಗಳಿಗೆ "ಆಗುವ ಕನಸಿನ ಬದಲಾಗಿ ಮಾಡುವ ಕನಸು" ಹೊಂದಲು ಭಾರತದ ಪ್ರಧಾನಮಂತ್ರಿಯವರು ಸಂದೇಶ ನೀಡಿದ್ದಾರೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಧ್ವನಿಮುದ್ರಿತ ಸಂದೇಶದಲ್ಲಿ ವಿದ್ಯಾರ್ಥಿಗಳೊಂದಿಗೆ ಅನುಭವ ಆಧಾರದ ಪ್ರಮುಖ ಒಳನೋಟವನ್ನು ಹಂಚಿಕೊಂಡರು. “ನಾವು ಏನನ್ನಾದರೂ ಆಗಬೇಕೆಂದು ಕನಸು ಕಂಡಾಗ, ಅದು ಕೆಲವೊಮ್ಮೆ ನಿರಾಶೆಗೆ ಕಾರಣವಾಗಬಹುದು; ಆದರೆ ನಾವು ಏನನ್ನಾದರೂ ಮಾಡುವ ಕನಸು ಕಂಡರೆ, ನಮ್ಮ ಅತ್ಯುತ್ತಮವಾದದ್ದನ್ನು ನೀಡಲು ನಾವು ನಮ್ಮೊಳಗೆ ನಮಗೆ ಪ್ರೇರೇಪಿಸಿಕೊಳ್ಳುತ್ತೇವೆ. ಆದ್ದರಿಂದ, ಏನನ್ನಾದರೂ ಆಗುವ ಗುರಿಯ ಮೇಲೆ ಕೇಂದ್ರೀಕರಿಸುವ ಬದಲು, ನಾವು ಮಾಡುವ ಕನಸಿನ ಮೇಲೆ ಸದಾ ಗಮನವನ್ನು ಕೇಂದ್ರೀಕರಿಸಬೇಕು, ಏಕೆಂದರೆ ನೀವು ಅದನ್ನು ಮಾಡಿದಾಗ, ನೀವು ಎಂದಿಗೂ ಪರೀಕ್ಷೆಗಳ ಒತ್ತಡವನ್ನು ಅನುಭವಿಸುವುದಿಲ್ಲ" ಎಂದು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ
ಕಲಾವಿದರು ವಿದ್ಯಾರ್ಥಿಗಳೊಂದಿಗೆ ಸೃಜನಾತ್ಮಕವಾಗಿ ತೊಡಗಿಸಿಕೊಂಡು, ಸೃಜನಶೀಲತೆ ಮತ್ತು ಒತ್ತಡ-ಮುಕ್ತ ಪರೀಕ್ಷೆಯ ತಯಾರಿಯನ್ನು ಪ್ರೋತ್ಸಾಹಿಸಿದರು
"ಎಕ್ಸಾಮ್ ವಾರಿಯರ್ಸ್" ಎಂಬ ತಮ್ಮ ಪುಸ್ತಕದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವಿದ್ಯಾರ್ಥಿಗಳು ಸದಾ ಉತ್ತಮ ಪ್ರೇರಣೆಯಿಂದ ಇರಲು ಮತ್ತು ಪರೀಕ್ಷೆಗೆ ಸಂಬಂಧಿಸಿದ ಒತ್ತಡವನ್ನು ಕಡಿಮೆ ಮಾಡಲು ನೈತಿಕ ಪ್ರೇರಕಗಳ ಮಹತ್ವವನ್ನು ವಿವರಿಸಿದ್ದಾರೆ. ಈ ಕಲ್ಪನೆಯನ್ನು ಜೀವಂತಗೊಳಿಸಲು ಅನೇಕ ಪ್ರಖ್ಯಾತ ಕಲಾವಿದರು ತಮ್ಮ ಸೃಜನಶೀಲತೆಯ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ನಾನಾ ಕಾರ್ಯಯೋಜನೆಗಳನ್ನು ಪ್ರಸ್ತುತಪಡಿಸಿದರು.
ಶ್ರೀ ಜತಿನ್ ದಾಸ್ (ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ), ಶ್ರೀ ಜೈ ಪ್ರಕಾಶ್ (ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ), ಶ್ರೀ ಕಾಂಚನ್ ಚಂದರ್, ಶ್ರೀ ಹರ್ಷವರ್ಧನ್, ಶ್ರೀ ಕಲ್ಯಾಣ್ ಜೋಶಿ, ಶ್ರೀ ಪ್ರದೋಶ್ ಸ್ವೈನ್, ಶ್ರೀ ವಿಜಯ್ ಭೋರೆ, ಶ್ರೀಮತಿ ರೀನಾ ಸಿಂಗ್, ಶ್ರೀಮತಿ ಅನಾಸ್ ಸುಲ್ತಾನ್, ಶ್ರೀ ಮನೋಜ್ ಕುಮಾರ್ ಮೊಹಂತಿ, ಶ್ರೀ ನರೇಂದ್ರ ಪಾಲ್ ಸಿಂಗ್, ಶ್ರೀಮತಿ ಕನ್ಹು ಬೆಹೆರಾ, ಅಸಿತ್ ಕುಮಾರ್ ಪಟ್ನಾಯಕ್, ಮತ್ತು ಶ್ರೀ ಅಂಕಿತ್ ಶರ್ಮಾ ಮುಂತಾದ ಹೆಸರಾಂತ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರ ಕಲಾಕೃತಿ ಮತ್ತು ವಿದ್ಯಾರ್ಥಿಗಳೊಂದಿಗಿನ ಸಂವಾದವು ವಿದ್ಯಾರ್ಥಿಗಳ ಉತ್ಸಾಹವನ್ನು ಹೆಚ್ಚಿಸಲು ಸಹಾಯ ಮಾಡಿತು ಮತ್ತು ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನಸ್ಥಿತಿಯಿಂದ ಪರೀಕ್ಷೆಗಳನ್ನು ಎದುರಿಸಲು ಅವರನ್ನು ಪ್ರೇರೇಪಿಸಿತು.
ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಯಿತು
ಕೇಂದ್ರ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ವಿದ್ಯಾರ್ಥಿಗಳ ಮನೋಬಲವನ್ನು ಹೆಚ್ಚಿಸಲು ಹೆಸರಾಂತ ಕಲಾವಿದರೊಂದಿಗೆ ಚಿತ್ರಕಲೆ ರಚಿಸುವಾಗ, ಜೊತೆ ಜೊತೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕೂಡ ನಡೆಸಿದರು ಮತ್ತು ಚಿತ್ರಕಲೆ ಚಟುವಟಿಕೆಯಲ್ಲಿ ಸಹ ತೊಡಗಿದರು. ಸಚಿವರು ತಮ್ಮ ಉತ್ಸಾಹವನ್ನು ಅನುಸರಿಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು ಮತ್ತು ಪರೀಕ್ಷೆಯ ಸಮಯದಲ್ಲಿ ಒತ್ತಡವನ್ನು ತಪ್ಪಿಸಲು ವರ್ಷವಿಡೀ ಸ್ಥಿರವಾದ ಹಾಗೂ ನಿರಂತರ ಅಧ್ಯಯನವನ್ನು ವ್ಯವಸ್ಥಿತವಾಗಿ ಕಾಪಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎನ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ಕೇಶವಚಂದ್ರ, ಉಪಾಧ್ಯಕ್ಷರಾದ ಶ್ರೀ ಕುಲ್ಜೀತ್ ಚಹಾಲ್, ಮತ್ತು ಸಂಸದೆ ಶ್ರೀಮತಿ ಬಾನ್ಸುರಿ ಸ್ವರಾಜ್ಯ ಉಪಸ್ಥಿತರಿದ್ದರು.
*****
(Release ID: 2090376)
Visitor Counter : 13