ರಾಷ್ಟ್ರಪತಿಗಳ ಕಾರ್ಯಾಲಯ
ರಾಷ್ಟ್ರಪತಿಯವರಿಂದ ಕೆ ಎಲ್ ಇ ಕ್ಯಾನ್ಸರ್ ಆಸ್ಪತ್ರೆಯ ಉದ್ಘಾಟನೆ
Posted On:
03 JAN 2025 6:00PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಜನವರಿ 3, 2025) ಕರ್ನಾಟಕದ ಬೆಳಗಾವಿಯಲ್ಲಿ ಕೆ ಎಲ್ ಇ ಕ್ಯಾನ್ಸರ್ ಆಸ್ಪತ್ರೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, ಜಾಗತಿಕ ಅಧ್ಯಯನದ ಪ್ರಕಾರ ವಿಶ್ವದಲ್ಲಿ ಕ್ಯಾನ್ಸರ್ ಸಾವಿಗೆ ಪ್ರಮುಖ ಕಾರಣವಾಗಿದೆ. 2022 ರಲ್ಲಿ, ವಿಶ್ವಾದ್ಯಂತ 20 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು 9.7 ಮಿಲಿಯನ್ ಸಾವುಗಳು ಸಂಭವಿಸಿವೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ, ಪ್ರತಿ ಒಂದು ಲಕ್ಷ ಜನರಿಗೆ ಸುಮಾರು 100 ಮಂದಿಗೆ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಐಸಿಎಂಆರ್ ನಡೆಸಿದ ಅಧ್ಯಯನದಲ್ಲಿ, ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು 2020ಕ್ಕೆ ಹೋಲಿಸಿದರೆ 2025ರಲ್ಲಿ ಸುಮಾರು 13 ಪ್ರತಿಶತದಷ್ಟು ಹೆಚ್ಚಾಗಿರುವುದನ್ನು ಅಂದಾಜಿಸಲಾಗಿದೆ ಎಂದು ಹೇಳಿದರು.
ಕ್ಯಾನ್ಸರ್ ರೋಗಿಗಳ ದೈಹಿಕ ಮತ್ತು ಮಾನಸಿಕ ಅಗತ್ಯಗಳನ್ನು ಪರಿಹರಿಸುವ ಸಮಗ್ರ ಆರೈಕೆಯನ್ನು ಒದಗಿಸುವುದು ಆರೋಗ್ಯ ವೃತ್ತಿಪರರ ಕರ್ತವ್ಯ ಎಂದು ರಾಷ್ಟ್ರಪತಿಯವರು ಒತ್ತಿ ಹೇಳಿದರು. ವೈದ್ಯರ ಪ್ರತಿಯೊಂದು ಸಹಾನುಭೂತಿಯ ಮಾತುಗಳು ರೋಗಿಯ ಜೀವನವನ್ನು ಉತ್ತಮವಾಗಿ ಬದಲಾಯಿಸುವ ಶಕ್ತಿಯನ್ನು ಹೊಂದಿವೆ ಎಂದು ಅವರು ಹೇಳಿದರು.
ಕ್ಯಾನ್ಸರ್ ಕಾರಣಗಳು, ರೋಗನಿರ್ಣಯ ಮತ್ತು ಚಿಕಿತ್ಸೆಯ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ರೋಗಿಯ ಮತ್ತು ಕುಟುಂಬದ ಅಜ್ಞಾನದಿಂದ ಅಥವಾ ಹಣಕಾಸಿನ ಅಡಚಣೆಗಳಿಂದಾಗಿ ರೋಗನಿರ್ಣಯ ಮತ್ತು ಚಿಕಿತ್ಸೆಯು ವಿಳಂಬವಾಗುವ ಅನೇಕ ಪ್ರಕರಣಗಳನ್ನು ನಾವು ನೋಡುತ್ತೇವೆ. ಕ್ಯಾನ್ಸರ್ ಸಂದರ್ಭದಲ್ಲಿ, ಇದು ಮಾರಣಾಂತಿಕವಾಗುತ್ತದೆ. ಕ್ಯಾನ್ಸರ್ ನಂತಹ ರೋಗಗಳ ವಿರುದ್ಧದ ಹೋರಾಟವು ಸಾಮೂಹಿಕ ಪ್ರಯತ್ನವಾಗಿದೆ ಎಂದು ಅವರು ಹೇಳಿದರು. ವಿಶ್ವ ದರ್ಜೆಯ ಜೊತೆಗೆ ರೋಗಿ-ಕೇಂದ್ರಿತ ಮತ್ತು ಸಮಾನವಾದ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಅವರು ಕರೆ ನೀಡಿದರು.
ಕೆಲವು ಕುಟುಂಬಗಳಲ್ಲಿ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದನ್ನು ನಾವು ನೋಡಿದ್ದೇವೆ ಎಂದು ರಾಷ್ಟ್ರಪತಿಯವರು ಹೇಳಿದರು. ಈ ವ್ಯತ್ಯಾಸವು ನಂತರ ಪುರುಷರು ಮತ್ತು ಮಹಿಳೆಯರಿಗೆ ಸಂಬಂಧಿಸಿದ ಚಿಕಿತ್ಸೆಯಲ್ಲಿ ಕಂಡುಬರುತ್ತದೆ. ಅನೇಕ ಬಾರಿ, ಕುಟುಂಬದ ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಸಕಾಲಿಕ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಪಡೆಯುವುದಿಲ್ಲ. ಅಂತಹ ಯಾವುದೇ ವಿಳಂಬ, ವಿಶೇಷವಾಗಿ ಕ್ಯಾನ್ಸರ್ ಸಂದರ್ಭದಲ್ಲಿ ತುಂಬಾ ಗಂಭೀರವಾದುದು ಎಂದು ಅವರು ಹೇಳಿದರು. ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಪ್ರತಿ ಮನೆಯವರು ಪ್ರೋತ್ಸಾಹಿಸಬೇಕು ಎಂದು ಅವರು ಒತ್ತಾಯಿಸಿದರು. ಕುಟುಂಬದ ಪ್ರತಿಯೊಬ್ಬ ಸದಸ್ಯರು ಮತ್ತು ಒಟ್ಟಾರೆಯಾಗಿ ಸಮಾಜವು ಮಹಿಳೆಯರ ಆರೋಗ್ಯವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅವರ ಆರೈಕೆಯಲ್ಲಿ ಮತ್ತು ಅವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವಲ್ಲಿ ಸಕ್ರಿಯವಾಗಿ ಕೊಡುಗೆ ನೀಡಬೇಕು ಎಂದು ರಾಷ್ಟ್ರಪತಿಯವರು ಹೇಳಿದರು.
Please Click here to see the president's Speech
*****
(Release ID: 2090043)
Visitor Counter : 44