ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಬೆಂಗಳೂರಿನ ನಿಮ್ಹಾನ್ಸ್‌ ನ ಸುವರ್ಣ ಮಹೋತ್ಸವ ಸಮಾರಂಭ ಉದ್ದೇಶಿಸಿ ಭಾರತದ ರಾಷ್ಟ್ರಪತಿ ಅವರು ಕೇಂದ್ರ ಆರೋಗ್ಯ ಸಚಿವರಾದ​​​​​​​ ಶ್ರೀ ಜೆ.ಪಿ.ನಡ್ಡಾ ಮತ್ತು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಸಮಕ್ಷಮದಲ್ಲಿ ಭಾಷಣ  


ಮಾನಸಿಕ ಆರೋಗ್ಯದ ಉದಾತ್ತ ಕಾರಣಕ್ಕಾಗಿ ನಿಮ್ಹಾನ್ಸ್‌ನ ಬೋಧಕರು, ವಿದ್ಯಾರ್ಥಿಗಳು ಮತ್ತು ಆಡಳಿತ ಪ್ರದರ್ಶಿಸಿದ ಬದ್ಧತೆಯು ನಿಮ್ಹಾನ್ಸ್ ನಮ್ಮ ಸಮಾಜದಲ್ಲಿ ಅನುಕರಣೀಯ ಪಾತ್ರ ವಹಿಸಲು ಸಹಾಯಕವಾಗಿದೆ: ಶ್ರೀಮತಿ ದ್ರೌಪದಿ ಮುರ್ಮು

“ಅಸಾಧಾರಣ ರೋಗಿಗಳ ಆರೈಕೆಯೊಂದಿಗೆ ನವೀನ ಸಂಶೋಧನೆ ಮತ್ತು ಕಠಿಣ ಶೈಕ್ಷಣಿಕ ಕಾರ್ಯಕ್ರಮಗಳು ನಿಮ್ಹಾನ್ಸ್ ಅನ್ನು ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನದಲ್ಲಿ ನಿರ್ವಿವಾದ ನಾಯಕನನ್ನಾಗಿ ಮಾಡಿದೆ’’

“ನಿಮ್ಹಾನ್ಸ್ ಮುಂಚೂಣಿಗೆ ತಂದ ಸಮುದಾಯ ಆಧಾರಿತ ಮಾನಸಿಕ ಆರೋಗ್ಯ ರಕ್ಷಣೆಯ ಬಳ್ಳಾರಿ ಮಾದರಿಯು ಮಾನಸಿಕ ಆರೋಗ್ಯ ವಿತರಣೆಯಲ್ಲಿ ಬೆಂಚ್ ಮಾರ್ಕ್ ಸ್ಥಾಪಿಸಿದೆ’’

“ದೇಶಾದ್ಯಂತ ತನ್ನ 53 ಕೇಂದ್ರಗಳನ್ನು ಹೊಂದಿರುವ ಟೆಲಿ-ಮಾನಸ್ ವೇದಿಕೆ ಕಳೆದ ಎರಡು ವರ್ಷಗಳಲ್ಲಿ ಸುಮಾರು 70 ಲಕ್ಷ ಜನರಿಗೆ ಅವರು ಆಯ್ಕೆ ಮಾಡಿದ ಭಾಷೆಗಳಲ್ಲಿ ಸೇವೆ ಒದಗಿಸಿದೆ"

“ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ನಿವಾರಿಸಲು ಯೋಗ ಮತ್ತು ಆಯುರ್ವೇದದಂತಹ ಸಾಂಪ್ರದಾಯಿಕ ವಿಧಾನಗಳೊಂದಿಗೆ ಆಧುನಿಕ ಆರೋಗ್ಯ ವ್ಯವಸ್ಥೆಗಳ ಯಶಸ್ವಿ ಸಂಯೋಜನೆಯನ್ನು ನಿಮ್ಹಾನ್ಸ್ ನಿರೂಪಿಸುತ್ತದೆ’’

ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನದಲ್ಲಿ ಅತ್ಯಾಧುನಿಕ ಆರೈಕೆಯನ್ನು ನೀಡುವ ನಿಮ್ಹಾನ್ಸ್‌ನ ಮಿಷನ್ ಭಾಗವಾಗಿ ವಿಶೇಷ ಮನೋವೈದ್ಯಕೀಯ ಬ್ಲಾಕ್, ಕೇಂದ್ರೀಯ ಪ್ರಯೋಗಾಲಯ ಸಂಕೀರ್ಣ, ಭೀಮಾ ಹಾಸ್ಟೆಲ್, ಮುಂದಿನ ತಲೆಮಾರಿನ ಜನರೇಷನ್ 3ಟಿ ಎಂಆರ್ ಐ ಸ್ಕ್ಯಾನರ್ ಮತ್ತು ಸುಧಾರಿತ ಡಿಎಸ್ ಎ ವ್ಯವಸ್ಥೆ ಸೇರಿ ಹೊಸ ಸೌಲಭ್ಯಗಳ ಉದ್ಘಾಟನೆ

ನಿಮ್ಹಾನ್ಸ್ನಲ್ಲಿನ ರೋಗಿಗಳ ಸಂಖ್ಯೆಯು ಐದು ಪಟ್ಟು ಹೆಚ್ಚು ಹೆಚ್ಚಳ, 1970 ರ ದಶಕದಲ್ಲಿ 10 ಲಕ್ಷಕ್ಕಿಂತ ಕಡಿಮೆ ಇದ್ದ ಸಂಖ್ಯೆ ಕಳೆದ ದಶಕದಲ್ಲಿ 50 ಲಕ್ಷಕ್ಕೂ ಅಧಿಕವಾಗಿದೆ. ನಿಮ್ಹಾನ್ಸ್ ತನ್ನ ಅಪಾರ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡುವ ಪ್ರಮಾಣವು ಅದನ್ನು ಭಾರತದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯಲ್ಲಿ ನಾಯಕನನ್ನಾಗಿ ಮಾಡುತ್ತದೆ: ಶ್ರೀ ಜೆ.ಪಿ.ನಡ್ಡಾ

“ಟೆಲಿಮಾನಸ್ ಯೋಜನೆಯ ಮೂಲಕ ಮಾನಸಿಕ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಮತ್ತು ನಿಮ್ಹಾನ್ಸ್ ಟೆಲಿಮಾನಸ್ನ ಉನ್ನತ ಸಮನ್ವಯ ಕೇಂದ್ರವಾಗಿದ್ದು ಆ ಪ್ರಯತ್ನದಲ್ಲಿ ಮುಂಚೂಣಿಯಲ್ಲಿದೆ’’

ನಿಮ್ಹಾನ್ಸ್‌ ತನ್ನ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ದಶಕದ ಸುದೀರ್ಘ ಪ್ರಯಾಣದಲ್ಲಿ, ಕ್ಲಿನಿಕಲ್ ಕೇರ್, ಸಂಶೋಧನೆ ಮತ್ತು ಶಿಕ್ಷಣ, ಮಾನಸಿಕ ಆರೋಗ್ಯ ನೀತಿಗಳನ್ನು ರೂಪಿಸುವುದು ಮತ್ತು ಜಗತ್ತಿನಾದ್ಯಂತ ಸ್ಫೂರ್ತಿದಾಯಕ ಅಭ್ಯಾಸಗಳನ್ನು ಉತ್ತೇಜಿಸುವುದರಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ: ಶ್ರೀ ಸಿದ್ದರಾಮಯ್ಯ

Posted On: 03 JAN 2025 2:52PM by PIB Bengaluru

ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀ ದ್ರೌಪದಿ ಮುರ್ಮು ಅವರು ಬೆಂಗಳೂರಿನಲ್ಲಿ ಇಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜೆ.ಪಿ.ನಡ್ಡಾ ಮತ್ತು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರ ಸಮಕ್ಷಮದಲ್ಲಿ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ (ನಿಮ್ಹಾನ್ಸ್‌) ನ ಸುವರ್ಣ ಮಹೋತ್ಸವವನ್ನು ಉದ್ದೇಶಿಸಿ ಭಾಷಣ ಮಾಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾರತದ ರಾಷ್ಟ್ರಪತಿ ಅವರು “ಈ ಸಂದರ್ಭ ನಿಮ್ಹಾನ್ಸ್‌ಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಸಂಭ್ರಮದ ಕ್ಷಣವಾಗಿದೆ. ಮಾನಸಿಕ ಆರೋಗ್ಯದ ಉದಾತ್ತ ಕಾರಣಕ್ಕಾಗಿ ನಿಮ್ಹಾನ್ಸ್‌ನ ಬೋಧಕರು, ವಿದ್ಯಾರ್ಥಿಗಳು ಮತ್ತು ಆಡಳಿತವು ಪ್ರದರ್ಶಿಸುತ್ತಿರುವ ಬದ್ಧತೆಯು ನಿಮ್ಹಾನ್ಸ್ ನಮ್ಮ ಸಮಾಜದಲ್ಲಿ ಅನುಕರಣೀಯ ಪಾತ್ರವನ್ನು ವಹಿಸಲು ಸಹಾಯ ಮಾಡಿದೆ’’ ಎಂದರು. ಅಲ್ಲದೆ, ಅಸಾಧಾರಣ ರೋಗಿಗಳ ಆರೈಕೆಯೊಂದಿಗೆ ನವೀನ ಸಂಶೋಧನೆ ಮತ್ತು ಕಠಿಣ ಶೈಕ್ಷಣಿಕ ಕಾರ್ಯಕ್ರಮಗಳಿಂದಾಗಿ ನಿಮ್ಹಾನ್ಸ್ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನದಲ್ಲಿ ನಿರ್ವಿವಾದ ನಾಯಕನಾಗಿ ರೂಪುಗೊಂಡಿದೆ ಎಂದು ರಾಷ್ಟ್ರಪತಿ ಹೇಳಿದರು. "ನಿಮ್ಹಾನ್ಸ್‌ನ ಇತಿಹಾಸವು ಹತ್ತೊಂಬತ್ತನೇ ಶತಮಾನದಷ್ಟು ಹಿಂದೆ ಹೋಗುತ್ತದೆ ಮತ್ತು ಹಾಗಾಗಿ ಸಂಸ್ಥೆಯ ವಿಕಾಸವು ಭಾರತದಲ್ಲಿ ಮಾನಸಿಕ ಆರೋಗ್ಯದ ವಿಕಸನದ ಮೇಲೆ ಪರಿಣಾಮ ಬೀರುತ್ತದೆ" ಎಂದು ಅವರು ಹೇಳಿದರು

ನಿಮ್ಹಾನ್ಸ್‌ ಮುಂಚೂಣಿಗೆ ತಂದ ಸಮುದಾಯ ಆಧಾರಿತ ಮಾನಸಿಕ ಆರೋಗ್ಯ ರಕ್ಷಣೆಯ ಬಳ್ಳಾರಿ ಮಾದರಿಯು ಮಾನಸಿಕ ಆರೋಗ್ಯ ವಿತರಣೆಯಲ್ಲಿ ಬೆಂಚ್ ಮಾರ್ಕ್  ಸ್ಥಾಪಿಸಿದೆ ಎಂದು ರಾಷ್ಟ್ರಪತಿ ಉಲ್ಲೇಖಿಸಿದರು. ದೇಶಾದ್ಯಂತ 53 ಕೇಂದ್ರಗಳನ್ನು ಹೊಂದಿರುವ ಟೆಲಿ-ಮಾನಸ್ ವೇದಿಕೆ ಕಳೆದೆರಡು ವರ್ಷಗಳಲ್ಲಿ ಸುಮಾರು 70 ಲಕ್ಷ ಜನರಿಗೆ ಅವರು ಆಯ್ಕೆ ಮಾಡಿದ ಭಾಷೆಗಳಲ್ಲಿ ಸೇವೆ ಸಲ್ಲಿಸಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. "ಈ ಪರಿವರ್ತಕ ಸೇವೆಯು ಪ್ರಶಂಸೆಗೆ ಅರ್ಹವಾಗಿದೆ ಮತ್ತು ಈ ಉಪಕ್ರಮಕ್ಕೆ ನಿರಂತರ ಬೆಂಬಲ ನೀಡುತ್ತಿರುವುದಕ್ಕಾಗಿ ನಾನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವನ್ನು ಶ್ಲಾಘಿಸುತ್ತೇನೆ" ಎಂದು ಅವರು ಹೇಳಿದರು.

ಆರೋಗ್ಯ ಪ್ರಚಾರಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರತಿಷ್ಠಿತ ನೆಲ್ಸನ್ ಮಂಡೇಲಾ ಪ್ರಶಸ್ತಿಯನ್ನು ಸ್ವೀಕರಿಸಿದ್ದಕ್ಕಾಗಿ ನಿಮ್ಹಾನ್ಸ್ ಅನ್ನು ಅಭಿನಂದಿಸಿದ ರಾಷ್ಟ್ರಪತಿಗಳು “ಈ ಮಾನ್ಯತೆ ಇಂದಿನ ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸಲು ಸಂಸ್ಥೆಯ ಬದ್ಧತೆಯನ್ನು ಒತ್ತಿ ಹೇಳುತ್ತದೆ" ಎಂದು ತಿಳಿಸಿದರು.

ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ ಮತ್ತು ಟೆಲಿ-ಮಾನಸ್‌ನಂತಹ ಉಪಕ್ರಮಗಳು ಸಾರ್ವಜನಿಕರಿಗೆ ಹೆಚ್ಚು ಮುಕ್ತವಾಗಿ ಸಹಾಯ ಪಡೆಯಲು ಅನುವು ಮಾಡಿಕೊಟ್ಟಿವೆ ಎಂದು ಹೇಳಿದ ರಾಷ್ಟ್ರಪತಿ, “ಮಕ್ಕಳ ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯ, ವಂಶವಾಹಿ ಸಂಶೋಧನೆ (ಜೆನೆಟಿಕ್ ರಿಸರ್ಚ್) ಮತ್ತು ನ್ಯೂರೋ ಡಿಜೆನೆರೇಟಿವ್ ಡಿಸಾರ್ಡರ್ಸ್ ಗಳಲ್ಲಿ ಸಹಯೋಗ ಸೇರಿದಂತೆ ಇಂತಹ ಆಂತಕಗಳನ್ನು ಪರಿಹರಿಸುವಲ್ಲಿ ನಿಮ್ಹಾನ್ಸ್ ಮುಂಚೂಣಿಯಲ್ಲಿದೆ" ಎಂದರು.

ಮಾನಸಿಕ ಮತ್ತು ದೈಹಿಕ ಒತ್ತಡಗಳನ್ನು ನಿವಾರಿಸಲು ಯೋಗ ಮತ್ತು ಆಯುರ್ವೇದದಂತಹ ಸಾಂಪ್ರದಾಯಿಕ ವಿಧಾನಗಳೊಂದಿಗೆ ಆಧುನಿಕ ಆರೋಗ್ಯ ವ್ಯವಸ್ಥೆಗಳ ಯಶಸ್ವಿ ಸಂಯೋಜನೆಯನ್ನು ನಿಮ್ಹಾನ್ಸ್ ನಿರೂಪಿಸುತ್ತದೆ ಎಂದು ರಾಷ್ಟ್ರಪತಿ ಪ್ರಮುಖವಾಗಿ ಉಲ್ಲೇಖಿಸಿದರು. "ನಿಮ್ಹಾನ್ಸ್‌ನಲ್ಲಿ ಶೇ. 79.7 ರಷ್ಟು ಪದವಿಪೂರ್ವ ವಿದ್ಯಾರ್ಥಿಗಳು ಮತ್ತು ಶೇ. 71.4ರಷ್ಟು ಸ್ನಾತಕೋತ್ತರ ವಿದ್ಯಾರ್ಥಿಗಳು ಮಹಿಳೆಯರಾಗಿರುವುದರಿಂದ ನಿಮ್ಹಾನ್ಸ್‌ನಲ್ಲಿ ಧನಾತ್ಮಕ ಲಿಂಗ ಅನುಪಾತವನ್ನು ಕಂಡು ನನಗೆ ಸಂತಸವಾಗಿದೆ" ಎಂದು ಅವರು ಹೇಳಿದರು.

ಸುವರ್ಣ ಮಹೋತ್ಸವ ಆಚರಣೆಯ ಭಾಗವಾಗಿ, ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನದಲ್ಲಿ ಅತ್ಯಾಧುನಿಕ ಆರೈಕೆಯನ್ನು ನೀಡುವ ನಿಮ್ಹಾನ್ಸ್‌ನ ಮಿಷನ್ ಅನ್ನು ಮತ್ತಷ್ಟು ಹೆಚ್ಚಿಸಲು ಭಾರತದ ರಾಷ್ಟ್ರಪತಿಯವರು ಇಂದು ವಿವಿಧ ಹೊಸ ಸೌಲಭ್ಯಗಳನ್ನು ಉದ್ಘಾಟಿಸಿದರು. ಅವುಗಳೆಂದರೆ:. ವಿಶೇಷ ಮನೋಶಾಸ್ತ್ರ ಬ್ಲಾಕ್, ಕೇಂದ್ರೀಯ ಪ್ರಯೋಗಾಲಯ ಸಂಕೀರ್ಣ ಉದ್ಘಾಟನೆ, ಭೀಮಾ ವಸತಿನಿಲಯ, ಸುಧಾರಿತ 3ಟಿ ಎಂಆರ್ ಐ  ಸ್ಕ್ಯಾನರ್ ಮತ್ತು ಅತ್ಯಾಧುನಿಕ ಡಿಎಸ್ಎ ಸಿಸ್ಟಮ್.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಜೆ.ಪಿ.ನಡ್ಡಾ ಅವರು ನಿಮ್ಹಾನ್ಸ್ ಅನ್ನು ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಒಂದನ್ನಾಗಿ ಮಾಡಿದ ಎಲ್ಲಾ ವಿದ್ಯಾರ್ಥಿಗಳು ಮತ್ತು  ಬೋಧಕರನ್ನು ಅಭಿನಂದಿಸಿದರು. "ಮಾನಸಿಕ ಆರೋಗ್ಯ ಸಂಸ್ಥೆಯಿಂದ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗೆ ನಿಮ್ಹಾನ್ಸ್‌ ಬೆಳವಣಿಗೆಗೆ ಕೊಡುಗೆ ನೀಡಿದ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಎಲ್ಲಾ ಸಂಬಂಧಿತ ಪಾಲುದಾರರಿಗೆ ನಾನು ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ’’ ಎಂದು ಅವರು ಹೇಳಿದರು.

“ನಿಮ್ಹಾನ್ಸ್‌ನಲ್ಲಿ ರೋಗಿಗಳ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ, 1970ರ ದಶಕದಲ್ಲಿ 10 ಲಕ್ಷಕ್ಕಿಂತ ಕಡಿಮೆ ಇದ್ದದ್ದು ಕಳೆದ ದಶಕದಲ್ಲಿ 50 ಲಕ್ಷಕ್ಕೂ ಅಧಿಕವಾಗಿದೆ’’ ಎಂದು ಕೇಂದ್ರ ಸಚಿವರು ಹೇಳಿದರು. ನಿಮ್ಹಾನ್ಸ್ ತನ್ನ ಅಪಾರ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡುವ ಪ್ರಮಾಣವು ಆ ಸಂಸ್ಥೆಯನ್ನು ಭಾರತದಲ್ಲಿ ಗುಣಮಟ್ಟದ ಆರೋಗ್ಯ ರಕ್ಷಣೆಯಲ್ಲಿ ನಾಯಕನನ್ನಾಗಿ ಮಾಡುತ್ತಿದೆ. ರಾಷ್ಟ್ರೀಯ ಪ್ರಾಮುಖ್ಯತೆಯ ಎಲ್ಲಾ ಸಂಸ್ಥೆಗಳಲ್ಲಿ ನಿಮ್ಹಾನ್ಸ್ ಎನ್ಎಬಿಎಚ್  ಮಾನ್ಯತೆ ಪಡೆದ ಮೊದಲ ಆಸ್ಪತ್ರೆ ಮತ್ತು ವಿಶ್ವದ ಅಗ್ರ 200 ಆಸ್ಪತ್ರೆಗಳಲ್ಲಿ ಸ್ಥಾನ ಪಡೆದಿದೆ. ಅದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.  

“2022 ರಿಂದ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದ ಬಗ್ಗೆ ಅವರು ಮಾಹಿತಿ ನೀಡಿದರು ಮತ್ತು ಸರ್ಕಾರವು ಮಾನಸಿಕ ಆರೋಗ್ಯವನ್ನು ಮುಖ್ಯವಾಹಿನಿಗೆ ತರಲು ಕಾರ್ಯನಿರ್ವಹಿಸುತ್ತಿದೆ’’ ಎಂದು ಶ್ರೀ ನಡ್ಡಾ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. "ಟೆಲಿಮಾನಸ್ ಯೋಜನೆಯ ಮೂಲಕ ಮಾನಸಿಕ ಆರೋಗ್ಯ ಸೇವೆಯನ್ನು ಒದಗಿಸಲು ಸರ್ಕಾರವು ಕಾರ್ಯನಿರ್ವಹಿಸುತ್ತಿದೆ ಮತ್ತು ನಿಮ್ಹಾನ್ಸ್ ಟೆಲಿಮಾನಸ್‌ನ ಉನ್ನತ ಸಮನ್ವಯ ಕೇಂದ್ರವಾಗಿದ್ದು ಆ ಪ್ರಯತ್ನದಲ್ಲಿ ಮುಂಚೂಣಿಯಲ್ಲಿದೆ" ಎಂದು ಅವರು ಹೇಳಿದರು. ಟೆಲಿಮಾನಸ್ ಮತ್ತು ಕೌನ್ಸೆಲಿಂಗ್‌ಗಾಗಿ 1000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನಿಮ್ಹಾನ್ಸ್ ತರಬೇತಿ ನೀಡುತ್ತದೆ ಎಂದು ಅವರು ಉಲ್ಲೇಖಿಸಿದರು.

ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು, "ಕಳೆದ 5 ದಶಕಗಳಿಂದ, ನಿಮ್ಹಾನ್ಸ್ ಶ್ರೇಷ್ಠತೆ ಮತ್ತು ಭರವಸೆಯ ಸಂಕೇತವಾಗಿ ಹೊರಹೊಮ್ಮಿದೆ, ಭಾರತ ಮತ್ತು ಅದರಾಚೆಯೂ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ’’ ಎಂದರು. “ರಾಷ್ಟ್ರೀಯ ಪ್ರಾಮುಖ್ಯತಾ ಸಂಸ್ಥೆಯಾಗಿ ತನ್ನ ದಶಕದ ಸುದೀರ್ಘ ಪ್ರಯಾಣದಲ್ಲಿ, ನಿಮ್ಹಾನ್ಸ್ ವೈದ್ಯಕೀಯ ಆರೈಕೆ, ಸಂಶೋಧನೆ ಮತ್ತು ಶಿಕ್ಷಣ, ಮಾನಸಿಕ ಆರೋಗ್ಯ ನೀತಿಗಳನ್ನು ರೂಪಿಸುವುದು ಮತ್ತು ವಿಶ್ವಾದ್ಯಂತ ಸ್ಫೂರ್ತಿದಾಯಕ ಅಭ್ಯಾಸಗಳನ್ನು ಉತ್ತೇಜಿಸುವುದರಲ್ಲಿ ದಲ್ಲಿ ಜಾಗತಿಕ ನಾಯಕನಾಗಿ ರೂಪುಗೊಂಡಿದೆ" ಎಂದು ಅವರು ಹೇಳಿದರು.

ಇಂದು ಉದ್ಘಾಟನೆಗೊಂಡ ಹೊಸ ಸೌಕರ್ಯಗಳ ಬಗ್ಗೆ ಒಂದು ಸಂಕ್ಷಿಪ್ತ ವಿವರಣೆ

ಈ ಕೆಳಗಿನ ಹೊಸ ಸೌಕರ್ಯಗಳನ್ನು ಇಂದು ಉದ್ಘಾಟಿಸಲಾಯಿತು:

ವಿಶೇಷ ಮನೋಶಾಸ್ತ್ರ ಬ್ಲಾಕ್: ಮನೋವೈದ್ಯಕೀಯ ಸ್ಪೆಷಾಲಿಟಿ ಬ್ಲಾಕ್ ಮಾನಸಿಕ ಆರೋಗ್ಯದ ಹಲವಾರು ವಿಶೇಷ ಕ್ಷೇತ್ರಗಳಲ್ಲಿ ಆರೈಕೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡುತ್ತದೆ. ಇದರಲ್ಲಿ, ಜೆರಿಯಾಟ್ರಿಕ್ ಸೈಕಿಯಾಟ್ರಿ ಮತ್ತು ಪೆರಿನಾಟಲ್ ಸೈಕಿಯಾಟ್ರಿಯಿಂದ ತೀವ್ರ ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಿಗೆ ಚಿಕಿತ್ಸೆ ಮತ್ತು ಆತ್ಮಹತ್ಯೆ ತಡೆ ಸೌಲಭ್ಯಗಳನ್ನು ಹೊಂದಿವೆ. ಈ ಕೇಂದ್ರವನ್ನು ಸೂಕ್ತವಾದ, ಬಹುಶಿಸ್ತೀಯ ಮತ್ತು ಸಮಗ್ರ ಆರೈಕೆಯನ್ನು ಒದಗಿಸಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ರೋಗಿಗಳ ಶೀಘ್ರ ಚೇತರಿಕೆ ಮತ್ತು ಪುನರ್ವಸತಿಯನ್ನು ಬೆಂಬಲಿಸುತ್ತದೆ ಮತ್ತು ಮಾನಸಿಕ ಆರೋಗ್ಯದ ಈ ಪ್ರಮುಖ ವಿಶೇಷ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಭಾರತದಾದ್ಯಂತ ವೃತ್ತಿಪರರ ಸಾಮರ್ಥ್ಯವೃದ್ಧಿಗೆ ನೆರವಾಗುತ್ತದೆ.

ಕೇಂದ್ರೀಯ ಪ್ರಯೋಗಾಲಯ ಸಂಕೀರ್ಣ: ಕೇಂದ್ರೀಯ ಪ್ರಯೋಗಾಲಯ ಸಂಕೀರ್ಣವು ಒಂದೇ ಸೂರಿನಡಿ ಐದು ಅಗತ್ಯ ಪ್ರಯೋಗಾಲಯ ಸೇವೆಗಳನ್ನು ಒದಗಿಸುತ್ತದೆ – ಅವುಗಳೆಂದರೆ ನ್ಯೂರೋಪಾಥಾಲಜಿ, ನ್ಯೂರೋಕೆಮಿಸ್ಟ್ರಿ, ಕ್ಲಿನಿಕಲ್ ಪಥಾಲಜಿ ಮತ್ತು ಹೆಮಟಾಲಜಿ, ನ್ಯೂರೋಮೈಕ್ರೊಬಯಾಲಜಿ ಮತ್ತು ನ್ಯೂರೋವೈರಾಲಜಿ. ಈ ಸಮಗ್ರ ಸೌಲಭ್ಯವು ದೇಶದಾದ್ಯಂತ ಸಂಕೀರ್ಣ ನರವೈಜ್ಞಾನಿಕ ಮತ್ತು ನರಶಸ್ತ್ರಚಿಕಿತ್ಸೆಯ ಪರಿಸ್ಥಿತಿ ಎದುರಿಸುತ್ತಿರುವ ರೋಗಿಗಳಿಗೆ ಉತ್ತಮ-ಗುಣಮಟ್ಟದ, ನಿಖರವಾದ ಆರೈಕೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದ್ದು, ಇದು ರೋಗಪತ್ತೆಯಲ್ಲಿ ಉತ್ಕೃಷ್ಟತೆ ಸಾಧಿಸಲು ದಾರಿ ಮಾಡಿಕೊಡುತ್ತದೆ ಮತ್ತು ಜಾಗತಿಕವಾಗಿ ಇಂತಹ ಅಸ್ವಸ್ಥತೆಗಳಿಗೆ ಚಿಕಿತ್ಸೆಗಳಲ್ಲಿ ಕ್ರಾಂತಿಯನ್ನುಂಟುಮಾಡುವ ಸಂಶೋಧನೆಗಳನ್ನು ಉತ್ತೇಜಿಸುತ್ತದೆ.

ಭೀಮಾ ಹಾಸ್ಟೆಲ್‌: ನಿಮ್ಹಾನ್ಸ್‌ನಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅವರಿಗೆ ಅನುಕೂಲಕರ ಜೀವನ ವಾತಾವರಣ ಸೃಷ್ಟಿಸುವ ರೀತಿಯಲ್ಲಿ ಭೀಮಾ ವಿದ್ಯಾರ್ಥಿ ನಿಲಯವನ್ನು ವಿನ್ಯಾಸಗೊಳಿಸಲಾಗಿದೆ. ಈ ಸೌಕರ್ಯದಲ್ಲಿ ತಳಮಹಡಿ, ನೆಲ ಮಹಡಿ ಮತ್ತು ಆರು ಮೇಲಿನ ಮಹಡಿಗಳಿದ್ದು, ಎಲ್ಲವೂ ಆಧುನಿಕ ಸೌಕರ್ಯಗಳನ್ನು ಒಳಗೊಂಡಿವೆ.

ಗೌರವಾನ್ವಿತ ರಾಷ್ಟ್ರಪತಿಗಳು ಅತ್ಯಾಧುನಿಕ ರೋಗಪತ್ತೆ ಸೌಲಭ್ಯಗಳಾದ - ಸುಧಾರಿತ 3ಟಿ ಎಂಆರ್ ಐ  ಸ್ಕ್ಯಾನರ್ ಮತ್ತು ಡಿಎಸ್ಎ ವ್ಯವಸ್ಥೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಮುಂದಿನ ತಲೆಮಾರಿನ 3ಟಿ ಎಂಆರ್ ಸ್ಕ್ಯಾನರ್‌: ಹೊಸ 3ಟಿ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂಆರ್ ಐ)ಸ್ಕ್ಯಾನರ್ ಇಮೇಜಿಂಗ್ ತಂತ್ರಜ್ಞಾನ ನಿಮ್ಹಾನ್ಸ್ ನ ತಾಂತ್ರಿಕ ಉತ್ತುಂಗವನ್ನು ಪ್ರತಿನಿಧಿಸುತ್ತದೆ. ಈ ವ್ಯವಸ್ಥೆಯು ಭಾರತದಲ್ಲಿ ಕ್ಲಿನಿಕಲ್ ಬಳಕೆಗೆ ಲಭ್ಯವಿರುವ  ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಸುಧಾರಿತ ಗ್ರೇಡಿಯಂಟ್ ಸಿಸ್ಟಮ್, ಹೆಚ್ಚಿನ ಸ್ಲಿವ್‌ ರೇಟ್ಸ್‌ ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ಪುನರ್ ನಿರ್ಮಾಣ ವೇದಿಕೆಯಂತಹ ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿರುವ ಈ ಯಂತ್ರವು ಉತ್ತಮ ಇಮೇಜಿಂಗ್ ಗುಣಮಟ್ಟವನ್ನು ಉಳಿಸಿಕೊಂಡು ವೇಗವಾಗಿ ಸ್ಕ್ಯಾನ್ ಫಲಿತಾಂಶವನ್ನು ಖಾತ್ರಿಪಡಿಸುತ್ತದೆ.

ಅತ್ಯಾಧುನಿಕ ಡಿಎಸ್ ವ್ಯವಸ್ಥೆಹೊಸದಾಗಿ ಅಳವಡಿಸಲಾದ ಬೈಪ್ಲೇನ್ ಡಿಜಿಟಲ್ ಸಬ್‌ಟ್ರಾಕ್ಷನ್ ಆಂಜಿಯೋಗ್ರಫಿ (ಡಿಎಸ್‌ಎ) ವ್ಯವಸ್ಥೆಯು ಮೆದುಳಿನ ಅಸ್ವಸ್ಥತೆಗಳ ತೀವ್ರತೆಯನ್ನು ಪತ್ತೆಹಚ್ಚಲು ಮತ್ತು ನಿರ್ವಹಿಸಲು ಅಮೂಲ್ಯ ಸಾಧನವಾಗಿದೆ. ಮೆದುಳಿಗೆ ಪೋಷಕಾಂಶಗಳನ್ನು ಪೂರೈಸುವ ರಕ್ತನಾಳಗಳ ಬಗ್ಗೆ ವಿವರವಾದ ಒಳನೋಟ ನೀಡುವ ಸಾಮರ್ಥ್ಯದ ಇದು, ಕ್ಲಿನಿಕ್‌ಗಳು ಸಂಕೀರ್ಣ ನರವೈಜ್ಞಾನಿಕ ಪರಿಸ್ಥಿತಿಗಳನ್ನು ನಿಖರತೆಯೊಂದಿಗೆ ಪರಿಹರಿಸಲು ಸಹಾಯ ಮಾಡುತ್ತದೆ. ಕೋನ್ ಬೀಮ್ ಸಿಟಿ ಮತ್ತು 3ಡಿ ರೊಟೇಶನಲ್ ಆಂಜಿಯೋಗ್ರಫಿ ಸೇರಿ ಇತ್ತೀಚಿನ ಸುಧಾರಿತ ತಂತ್ರಜ್ಞಾನಗಳ ಅಳವಡಿಸಿಕೆಯಿಂದ ಸಜ್ಜಾಗಿರುವ ಇದು ಅಸಾಧಾರಣ ದೃಶ್ಯಗಳನ್ನು ಒದಗಿಸುತ್ತದೆ. ಜತೆಗೆ ಪರಿಣಾಮಕಾರಿ ರೋಗಪತ್ತೆ ಮತ್ತು ಚಿಕಿತ್ಸೆಯ ಯೋಜನೆಗೆ ನಿರ್ಣಾಯಕವಾಗಿದೆ.

ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವ ಹಾಗೂ ನಿಮ್ಹಾನ್ಸ್‌ ನ ಉಪಾಧ್ಯಕ್ಷರಾದ ಡಾ.ಶರಣ್‌ ಪ್ರಕಾಶ್‌ ಪಾಟೀಲ್  ಮತ್ತು ಗೌರವಾನ್ವಿತ ಲೋಕಸಭಾ ಸದಸ್ಯರಾದ ಶ್ರೀ ಪಿ.ಸಿ.ಮೋಹನ್, ಶ್ರೀ ತೇಜಸ್ವಿ ಸೂರ್ಯ, ಡಾ.ಸಿ.ಎನ್‌. ಮಂಜುನಾಥ್‌ ಮತ್ತು ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌, ನಿಮ್ಹಾನ್ಸ್‌ ನ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಅವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

*****


(Release ID: 2089920) Visitor Counter : 30